

ಬೆಂಗಳೂರು: ನಾನು ಶ್ರೀರಾಮನ ಪರಮ ಭಕ್ತ, ಕಳೆದ 20 ವರ್ಷದಿಂದ ನಿತ್ಯ ರಾಮಕೋಟಿ ಬರೆಯುತ್ತಿದ್ದೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರ ಗೈರು ನಿರ್ಧಾರ ಪ್ರಕಟಗೊಂಡ ಬೆನ್ನಲ್ಲೇ ಹಿರಿಯ ನಾಯಕ ಮುನಿಯಪ್ಪ ಅವರ ಈ ಹೇಳಿಕೆ ಕುತೂಹಲ ಮೂಡಿಸಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಬಾಲ್ಯದಿಂದಲೂ ಶ್ರೀರಾಮನ ಆರಾಧಕ. ನಿತ್ಯ ಬೆಳಗ್ಗೆ ಮತ್ತು ಸಂಜೆ 108 ಬಾರಿ "ಶ್ರೀ ರಾಮ" ಎಂದು ಬರೆಯುತ್ತೇನೆ. ಸಮಯ ಸಿಕ್ಕಾಗ 1080 ಬಾರಿ ಶ್ರೀರಾಮ ಎಂದು ಬರೆಯುತ್ತೇನೆ ಎಂದು ಹೇಳಿದರು.
ಅಯೋಧ್ಯೆಯಲ್ಲಿ ರಾಮ ಮಂದಿರದ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಪ್ರಧಾನಿ ಮೋದಿ ಅವರು ರಾಜಕೀಯಗೊಳಿಸುತ್ತಿದ್ದಾರೆ. ಹೀಗಾಗಿಯೇ ದೇಶದ ಪ್ರಮುಖ ಮಠಾಧೀಶರು ಕಾರ್ಯಕ್ರಮದಲ್ಲಿ ಹಾಜರಾಗಲು ನಿರಾಕರಿಸಿದ್ದಾರೆ. ಏಕೆಂದರೆ ಧರ್ಮಶಾಸ್ತ್ರದಂತೆ ಕಾರ್ಯಕ್ರಮವನ್ನು ನಡೆಸುತ್ತಿಲ್ಲ. ದೇವಾಲಯದ ಕೆಲಸಗಳು ಇನ್ನೂ ಪೂರ್ಣಗೊಂಡಿಲ್ಲ. ದೇವಸ್ಥಾನ ಲೋಕಾರ್ಪಣೆ ಸಮಾರಂಭವನ್ನು ಬಿಜೆಪಿ ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಎಷ್ಟು ಬಾರಿ ಶ್ರೀರಾಮ ಎಂದು ಬರೆದಿದ್ದಾರೆಂಬುದನ್ನು ಲೆಕ್ಕ ಹಾಕಿಲ್ಲ. ರಾಮಕೋಟಿ ಬರೆಯಲು ಯಾವಾಗಲೂ ಪುಸ್ತಕವನ್ನು ತರುತ್ತಾರೆ. ಪ್ರಯಾಣಿಸುವ ಸಂದರ್ಭದಲ್ಲಿ ಸೂಟ್‌ಕೇಸ್‌ನಲ್ಲಿ ಪುಸ್ತಕ ಇಟ್ಟುಕೊಂಡಿರುತ್ತಾರೆ ಎಂದು ಸಚಿವರ ಪತ್ನಿ ನಾಗರತ್ನಮ್ಮ ಹೇಳಿದ್ದಾರೆ.