'ನನ್ನ ಬೆಳವಣಿಗೆ ಎಷ್ಟೆಂದು ನನಗೆ ತಿಳಿದಿದೆ': ಪ್ರಧಾನಿ ಹುದ್ದೆ ಕುರಿತು ಸ್ಟಾಲಿನ್​ ಆಸಕ್ತಿಕರ ಹೇಳಿಕೆ​

stalin
Published on

ಚೆನ್ನೈ: ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಈಗ ಎಲ್ಲರ ಗಮನ ಸರ್ಕಾರ ರಚನೆಯತ್ತ ನೆಟ್ಟಿದೆ. ಎನ್‌ಡಿಎ ಮೈತ್ರಿಕೂಟಕ್ಕೆ ಸ್ಪಷ್ಟ ಮುನ್ನಡೆ ಸಿಕ್ಕಿದ್ದರೂ, ಅನಿರೀಕ್ಷಿತ ಸಂದರ್ಭಗಳಲ್ಲಿ ಇಂಡಿಯಾ ಕೂಟ ಸರ್ಕಾರ ರಚಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಹಾಗೂ ಡಿಎಂಕೆ ನಾಯಕ ಎಂ.ಕೆ.ಸ್ಟಾಲಿನ್ ಅವರನ್ನು 'ಇಂಡಿಯಾ' ಮೈತ್ರಿಕೂಟಕ್ಕೆ ಅವಕಾಶ ಸಿಕ್ಕರೆ ನೀವು ಪ್ರಧಾನಿ ರೇಸ್‌ನಲ್ಲಿ ಇರುತ್ತೀರಾ?' ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಅವರು ಸ್ವಾರಸ್ಯಕರ ಉತ್ತರ ನೀಡಿದರು.

ಅವರ ತಂದೆ ಕರುಣಾನಿಧಿ ಹೇಳಿದ್ದ ಡೈಲಾಗ್ ಅನ್ನು ಉಲ್ಲೇಖಿಸಿ, "ನನ್ನ ಬೆಳವಣಿಗೆ ನನಗೆ ಗೊತ್ತು, ನಾನು ಈಗಾಗಲೇ ಇದನ್ನು ಹಲವು ಬಾರಿ ಹೇಳಿದ್ದೇನೆ" ಎಂದು ಹೇಳಿದರು.

ಲೋಕಸಭೆ ಚುನಾವಣೆ ಫಲಿತಾಂಶ ಕುರಿತು ಮಾತನಾಡಿದ ಅವರು, ಚುನಾವಣೆಯಲ್ಲಿ ತಮಿಳುನಾಡು ಮತ್ತು ಪುದುಚೇರಿಯಲ್ಲಿ ನಮ್ಮ ಮೈತ್ರಿಕೂಟ 39 ಸ್ಥಾನಗಳನ್ನು ಗೆದ್ದುಕೊಂಡಿದೆ. ಈ ಗೆಲುವನ್ನು ನನ್ನ ತಂದೆ ಕರುಣಾನಿಧಿಗೆ ಸಮರ್ಪಿಸುತ್ತೇನೆ. ಅನೇಕ ರಾಜ್ಯಗಳಲ್ಲಿ ಮೋದಿ ವಿರೋಧಿ ಗಾಳಿ ಬೀಸಿದೆ. ಬುಧವಾರ ಸಂಜೆ ನಡೆದ ಇಂಡಿಯಾ ಮೈತ್ರಿ ಪಕ್ಷಗಳ ಸಭೆಯಲ್ಲಿ ಭಾಗವಹಿಸುತ್ತೇನೆ ಎಂದು ತಿಳಿಸಿದರು.

ಈ ಹಿಂದೆ ಕರುಣಾನಿಧಿ ಅವರ ‘ಬೆಳವಣಿಗೆ​’ ಕಾಮೆಂಟ್‌ಗಳು ದೇಶದ ರಾಜಕೀಯದಲ್ಲಿ ಕುತೂಹಲ ಮೂಡಿಸಿದ್ದವು. ಸುದೀರ್ಘ ರಾಜಕೀಯ ಅನುಭವ ಹೊಂದಿದ್ದ ಅವರು 13 ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದರು. ಆದರೆ ಅವರು ಕೇಂದ್ರದಲ್ಲಿ ಅಧಿಕಾರ ನಡೆಸುವ ಬದಲು ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿದ್ದರು.

ಇದಕ್ಕೆ ಉದಾಹರಣೆ ಎಂದರೆ 1997ರಲ್ಲಿ ದೇವೇಗೌಡರ ಸರ್ಕಾರ ಪತನವಾದ ನಂತರ ಕರುಣಾನಿಧಿ ಅವರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸುವ ಪ್ರಸ್ತಾಪ ಬಂದಿತ್ತು. ಆ ಸಮಯದಲ್ಲಿ ನ್ಯಾಷನಲ್ ಫ್ರಂಟ್‌ನ ಕೆಲವು ನಾಯಕರು ಇದಕ್ಕಾಗಿ ಅವರನ್ನು ಸಂಪರ್ಕಿಸಿದ್ದರು. ಆದರೆ, ಕರುಣಾನಿಧಿ ‘ನನ್ನ ಯೋಗ್ಯತೆ ನನಗೆ ಗೊತ್ತು’ ಎಂದು ಆಫರ್ ತಿರಸ್ಕರಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net