

ವರುಣ್ ಆರ್ಯ ಬಡತನದ ಹಿನ್ನೆಲೆಯಿಂದ ಬಂದವರು. ಒಂದೇ ಕೋಣೆಯ ಮನೆಯಲ್ಲಿ ತಂದೆ-ತಾಯಿ ಮತ್ತು ಐವರು ಸಹೋದರರೊಂದಿಗೆ ಬೆಳೆದರು. ಮನೆಯಲ್ಲಿ ವಿದ್ಯುತ್ ದೀಪವಿರಲಿಲ್ಲ. ಲಾಟೀನಿನ ಮಂಕುದೀಪದಲ್ಲಿ, ಮಣ್ಣ ಗೋಡೆಗಳ ನಡುವೆ ಅವರ ಬಾಲ್ಯ ಮತ್ತು ಕಿಶೋರ ಪ್ರಾಯ ಕಳೆಯಿತು. ತಂದೆ ಚಿಲ್ಲರೆ ವ್ಯಾಪಾರ ಮಾಡುತ್ತಿದ್ದರು. ತಾಯಿ ಇತರರ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ವರುಣ ಆರು ವರ್ಷದ ಪ್ರಾಯದಿಂದ ದುಡಿಯಲು ಆರಂಭಿಸಿದರು.
ಶಾಲೆ ಮುಗಿದ ಮೇಲೆ ಬಂದು ಅಂಗಡಿಗೆ ಹೋಗಿ ಕೆಲಸ ಮಾಡುತ್ತಿದ್ದರು. ಅವರ ಸಂಪಾದನೆ ಆ ತುಂಬು ಕುಟುಂಬದ ಹೊಟ್ಟೆ ತುಂಬಲು ಅಗತ್ಯವಿತ್ತು. ಶಾಲೆ ಮುಗಿಸಿ ಅಂಗಡಿಯಲ್ಲಿ ದುಡಿದು, ಆಯಾಸದಿಂದ ಬಂದ ಈ ಹುಡುಗನಿಗೆ ಒಂದೇ ಕೋಣೆಯಲ್ಲಿ ಒಟ್ಟಿಗೆ ಗುಣಗುಣಿಸಿ ಓದುತ್ತಿರುವ ಅಷ್ಟೂ ಸೋದರರ ನಡುವೆ, ಏಕಾಗ್ರತೆಯಿಂದ ಮನಸ್ಸನ್ನು ಓದಿನತ್ತ ಕೇಂದ್ರಿಕರಿಸುವುದು ಎಷ್ಟು ಕಷ್ಟವಿತ್ತು ಎಂದು ಊಹಿಸಬಹುದು. ಆದರೆ, ವರುಣ್ ಓದಿದರು.ಅದು ಬರೀ ಪಾಸು ಮಾಡಿದ ಓದಲ್ಲ. ಆ ಕಿಷ್ಕಿಂಧೆಯಲ್ಲೂ ಅದೆಂತಹ ಏಕಾಗ್ರತೆಯಲ್ಲಿ ಈ ಹುಡುಗ ಓದಿದನೆಂದರೆ 1976ರಲ್ಲಿ ದಿಲ್ಲಿಯ ಪ್ರತಿಷ್ಠಿತ ಐಐಟಿಗೆ ಪ್ರವೇಶ ಸಿಕ್ಕಿತು. ಅನಂತರ 1981ರಲ್ಲಿ ಅಹಮದಾಬಾದಿನ ಐಐಎಂ ಸೇರಿದರು. ಇಂದು ವರುಣ್ ಆರ್ಯ, ಜೋಧಪುರ ಅರವಳಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ವೆುಂಟ್ನ ನಿರ್ದೇಶಕರಾಗಿದ್ದಾರೆ. ಭಗವದ್ಗೀತೆಯಲ್ಲಿ ಈ ರೀತಿಯಾಗಿ ಹೇಳಿದೆ.
ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾರಯೇತ್
ಆತ್ಮೈವ ಹಾತ್ಮೊನೋ ಬಂಧುರಾತ್ಮೈವರಿತು ರಾತ್ಮನಃ||
‘ತನ್ನ ಪ್ರಯತ್ನದಿಂದಲೇ ತಾನು ಉದ್ದಾರವಾಗಬೇಕು. ತನ್ನನ್ನು ತಾನೇ ಕೀಳು ಮಾಡಿಕೊಳ್ಳಬಾರದು. ತನಗೆ ತಾನೇ ಬಂಧು ತನಗೆ ತಾನೇ ಶತ್ರು.’
ಸಾಧನೆ ಎಂಬುದು ಆಕಸ್ಮಿಕವಲ್ಲ. ತ್ಯಾಗ, ಕಠಿಣ ಪ್ರಯತ್ನ ಪರಿಶ್ರಮದಿಂದಲೇ ಪ್ರತಿಫಲ ದೊರೆಯುತ್ತದೆ. ಜಗತ್ತಿನ ಮಹಾನ್ ಸಾಧಕರೆಲ್ಲ ಜಗತ್ತೇ ನಿದ್ರಿಸುತ್ತಿರಲು ತಾವು ಕಂಡ ಕನಸು ನನಸು ಮಾಡುವ ಕೈಂಕರ್ಯದಲ್ಲಿ ತೊಡಗಿರುತ್ತಾರೆ. ಹಾಗೆಯೇ ಕಂಡ ಕನಸು ಒಂದು ದಿನ ನನಸಾಗುತ್ತದೆ ಎಂಬ ದೃಢ ನಂಬಿಕೆಯೊಂದಿಗೆ ಮುಂದುವರಿಯುತ್ತಾರೆ. ಅಸಾಮಾನ್ಯ ಸಾಧಕರೆಲ್ಲ, ಒಂದು ಕಾಲದಲ್ಲಿ ಸಾಮಾನ್ಯ ವ್ಯಕ್ತಿಗಳೇ ಆಗಿದ್ದರು. ಇಂಥ ಅಸಾಮಾನ್ಯ ಸಾಧಕರ ಸಾಲಿಗೆ ನಾವೂ ಏಕೆ ಸೇರಬಾರದು? ಸ್ವಾಮಿ ವಿವೇಕಾನಂದರು ಹೇಳುತ್ತಾರೆ- ‘ಸಂಪೂರ್ಣ ಜವಾಬ್ದಾರಿಯನ್ನು ನಿನ್ನ ಕೈಯಲ್ಲಿ ತೆಗೆದುಕೊ, ಏಕೆಂದರೆ ನಿನ್ನ ಏಳಿಗೆಗೆ ನೀನೇ ಶಿಲ್ಪಿ. ನೀನು ಯಶಸ್ಸನ್ನು ಪಡೆಯಲು ಬೇಕಾದ ಶಕ್ತಿ ಮತ್ತು ನೆರವು ನಿನ್ನಲ್ಲಿ ಹುದುಗಿದೆ. ಪರಿಶ್ರಮ ಮೆಟ್ಟಿಲಿನಂತೆ ಅದೃಷ್ಟ ಲಿಫ್ಟ್ನಂತೆ. ಲಿಫ್ಟ್ (ಅದೃಷ್ಟ) ಕೈಕೊಡಬಹುದು. ಆದರೆ, ಪರಿಶ್ರಮ (ಮೆಟ್ಟಿಲು) ಎಂದಿಗೂ ಕೈಕೊಡದು. ಅದೃಷ್ಟವು ನಮ್ಮೊಂದಿಗೆ ಇರುತ್ತದೆಯೋ ಇಲ್ಲವೋ ಹೇಳಲಾಗದು. ಆದರೆ, ಪರಿಶ್ರಮವು ಅದೃಷ್ಟವನ್ನು ನಮ್ಮಲ್ಲಿಗೆ ತರುತ್ತದೆ’. ಇದಕ್ಕೆ ಒಳ್ಳೆಯ ಉದಾಹರಣೆ ವರುಣ್ ಆರ್ಯ.
(ಲೇಖಕರು ನಿವೃತ್ತ ಉಪನ್ಯಾಸಕರು)