ಅನಿಸಿಕೆ: ಸ್ವದೇಶಿ ಆಂದೋಲನವೂ ಅಗೋಚರ ತಗ್ಗು ದಿಣ್ಣೆಗಳೂ

Edit- anisike
Published on

ಅಮೆರಿಕದ 16ನೇ ಅಧ್ಯಕ್ಷರಾಗಿದ್ದ ಅಬ್ರಹಾಂ ಲಿಂಕನ್ ಹೇಳಿದ್ದರು, ‘ದೇಶ ನಿಮಗೇನು ಮಾಡಿದೆ ಎಂದು ಕೇಳುವ ಮೊದಲು ನೀವು ದೇಶಕ್ಕೇನು ಮಾಡಿದ್ದೀರೆಂದು ನಿಮ್ಮನ್ನು ನೀವೇ ಪ್ರಶ್ನೆ ಮಾಡಿಕೊಳ್ಳಿ’. ಇಂದಿನ ಕಾಲಘಟ್ಟದಲ್ಲಿ ಪ್ರತಿಯೊಬ್ಬರಿಗೂ ಮುಖ್ಯವಾಗಿ ಭಾರತೀಯರೆಲ್ಲರಿಗೂ ಇದು ಅನ್ವಯಿಸುತ್ತದೆ. ಆದ್ದರಿಂದಲೇ ಈ ನಿಟ್ಟಿನಲ್ಲಿ ನಾವೆಲ್ಲರೂ ಆತ್ಮವಿಮರ್ಶೆ ಮಾಡಿಕೊಳ್ಳಬೇಕಾಗಿದೆ.

ಮೇಕ್ ಇನ್ ಇಂಡಿಯಾ ಚಳವಳಿ ಇತ್ತೀಚಿನ ವರ್ಷಗಳಲ್ಲಿ ವೇಗ ಪಡೆದುಕೊಂಡಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿ ಆಗದಿರಲು ಮೇಲ್ನೋಟಕ್ಕೆ ಗೋಚರಿಸದ ಕೆಲವೊಂದು ಒಳಸುಳಿಗಳಿರುವುದೂ ಅಷ್ಟೇ ಸತ್ಯ. ಇಂತಹದೊಂದು ಪರಿವರ್ತನೆ ಕಾರ್ಯರೂಪಕ್ಕೆ ಬರುವಲ್ಲಿ ಆಗಿರುವ ವಿಳಂಬಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ, ಸಂಪನ್ಮೂಲದ ಕೊರತೆ, ಸ್ವಾರ್ಥಸಾಧಕರ ಸಂಕುಚಿತ ಮನಸ್ಥಿತಿಯೋ ಅಥವಾ ಇನ್ನೇನೋ ಕಾರಣ ಇರಬಹುದು. ಆದಾಗ್ಯೂ ಒಂದು ಉತ್ತಮ ಉದ್ದೇಶದೊಂದಿಗೆ ಆರಂಭವಾದ ಈ ಚಳವಳಿ ಬೃಹತ್ ಉದ್ದಿಮೆ, ರೈಲ್ವೆ, ವೈಮಾನಿಕ, ಅಂತರಿಕ್ಷಯಾನಕ್ಕೆ ಸಂಬಂಧಿಸಿದ ಉಪಕರಣಗಳನ್ನು ದೇಶದಲ್ಲೇ ಉತ್ಪಾದಿಸಲು ಮತ್ತು ಬೃಹತ್ ಕಾಮಗಾರಿಗಳಲ್ಲಿ ಸ್ವದೇಶಿ ನಿರ್ವಣಕ್ಕೆ ಆದ್ಯತೆ ನೀಡುವಲ್ಲಿ ಯಶಸ್ಸು ಸಾಧಿಸಿದೆ. ಆದರೆ, ದೈನಂದಿನ ಅವಶ್ಯಕತೆಯ ಅಸಂಖ್ಯಾತ ಪರಿಕರಗಳ ಉತ್ಪಾದನೆಯ ನಿಟ್ಟಿನಲ್ಲಿ ಸಾಗಬೇಕಾದ ದಾರಿ ಇನ್ನೂ ಬಹಳಷ್ಟಿದೆ.

90ರ ದಶಕದಲ್ಲಿ ಅಂತಾರಾಷ್ಟ್ರೀಯ ವಾಣಿಜ್ಯ ಒಪ್ಪಂದದ ಮೂಲಕ ಸಿಕ್ಕ ಅವಕಾಶವನ್ನು ಉಪಯೋಗಿಸಿ ವಿಶ್ವ ಮಾರುಕಟ್ಟೆ ಪ್ರವೇಶಿಸಿದ ಹಲವಾರು ದೇಶಗಳಲ್ಲಿ ಚೀನಾ ಕೂಡ ಒಂದು. ಚೀನಾದ ವೈವಿಧ್ಯಮಯ ಉತ್ಪನ್ನಗಳು ಎಲ್ಲೆಡೆಯಂತೆ ಭಾರತೀಯ ಮಾರುಕಟ್ಟೆ ಪ್ರವೇಶಿಸಿದವು. ಕ್ರಮೇಣ ಚೀನಾ ಉತ್ಪನ್ನಗಳು ಬಿಟ್ಟಿರಲಾಗದಷ್ಟು ಮಟ್ಟಿಗೆ ವ್ಯವಸ್ಥೆಯೊಳಗೆ ಹಾಸುಹೊಕ್ಕಾಗಿವೆ.

ಇತ್ತೀಚೆಗೆ ಅಮೆರಿಕ ಮತ್ತು ಕೆನಡಾ ಪ್ರವಾಸದಲ್ಲಿ ನಾನು ಕೆಲವು ಶಾಪಿಂಗ್ ಮಳಿಗೆಗಳಲ್ಲಿ ಲಭ್ಯವಿದ್ದ ವಸ್ತುಗಳ ವೈವಿಧ್ಯಗಳ ಅಗಾಧತೆ ನೋಡುವಾಗ ಅಚ್ಚರಿ ಮೂಡಿತು. ಇದರಲ್ಲಿ ಸಂಖ್ಯೆಗಿಂತಲೂ ವಿಷಯವಾರು ವೈವಿಧ್ಯ, ಚಿತ್ತಾಕರ್ಷಕ ಹೊರಹೊದಿಕೆ, ಗಾಜಿನ, ಪಿಂಗಾಣಿಯ, ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ವಿದ್ಯುನ್ಮಾನ ಬಿಡಿಭಾಗಳ ಸಂಗ್ರಹ ಬೆರಗುಗೊಳಿಸುವಂತಿತ್ತು. ಒಟ್ಟು ಸಂಗ್ರಹದ ಶೇಕಡ 80ರಷ್ಟು ಚೀನಾ ತಯಾರಿಕೆಯವುಗಳು. ಚೀನಾ ಉತ್ಪನ್ನಗಳ ವೈವಿಧ್ಯ ಅಗಾಧವಿದ್ದರೂ ಹೊರನೋಟಕ್ಕೆ ಮಾತ್ರ ಆಕರ್ಷಕ. ಗುಣಮಟ್ಟ ಕಳಪೆ. ಆದರೂ ಅಮೆರಿಕದಂಥ ಬೃಹತ್ ರಾಷ್ಟ್ರದ ಮಾರುಕಟ್ಟೆಯನ್ನು ದೊಡ್ಡಮಟ್ಟಿಗೆ ಆಕ್ರಮಿಸಿಕೊಂಡಿದ್ದು, ವಿಶೇಷವೇ ಸರಿ. ಅವರದು ಬಾಹ್ಯ ಆಕರ್ಷಣೆಯಾದರೆ ಭಾರತದ ವಸ್ತುಗಳು ಸೀಮಿತ ಸಂಖ್ಯೆಯಲ್ಲಿದ್ದರೂ ಗುಣಮಟ್ಟದಲ್ಲಿ ಉತ್ತಮ. ಹೋಲಿಕೆ ಮಾಡಿದರೆ ಭಾರತದಲ್ಲಿ ತಯಾರಾದ ಗುಣಮಟ್ಟದ ಬಟ್ಟೆಬರೆಗಳು ದೇಶದೊಳಗೆ ಸಿಗುವುದಕ್ಕಿಂತ ಕಡಿಮೆ ದರದಲ್ಲಿ ಅಮೆರಿಕದಲ್ಲಿ ಸಿಗುತ್ತವೆ. ಇದು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡುವುದು ಸಹಜ; ಉತ್ತರ ಇಷ್ಟೇ: ವಿದೇಶಿ ವಸ್ತುಗಳ ಬಗ್ಗೆ ಭಾರತೀಯರಿಗೆ ಇರುವ ವ್ಯಾಮೋಹ.

ಮತ್ತೊಂದು ಮುಖ್ಯ ಅಂಶ ಗಮನಿಸಬೇಕು. ಚೀನಾ ಉತ್ಪನ್ನಗಳ ಉಪಯೋಗ, ಅದರಿಂದ ಅವರಿಗೆ ದೊರಕುವ ಆದಾಯ ಭಾರತದ ವಿರುದ್ಧ ಭಯೋತ್ಪಾದನಾ ಚಟುವಟಿಕೆಗಳಿಗೆ ಉತ್ತೇಜನ ನೀಡುವಲ್ಲಿ ವಿನಿಯೋಗಿಸಲ್ಪಡುತ್ತದೆ, ಆದರೆ ಚೀನೀ ವಸ್ತುಗಳನ್ನು ಬಹಿಷ್ಕರಿಸಬೇಕೆಂದು ಎಷ್ಟೇ ಹೇಳಿದರೂ ಈ ಆಂದೋಲನ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದಿರಲು ಬೇರೆಯೇ ಕಾರಣಗಳಿವೆ.

ಮೊದಲ ಜಾಗತಿಕ ಯುದ್ಧದಲ್ಲಿ ಅಮೆರಿಕ ತನ್ನ ರಾಷ್ಟ್ರದ ಮೇಲೆ ಪರಮಾಣು ಬಾಂಬ್ ಹಾಕಿದ್ದನ್ನು ಜಪಾನ್ ಇಂದಿಗೂ ಗಂಭೀರವಾಗಿ ಪರಿಗಣಿಸಿದ್ದು, ಅಮೆರಿಕದೊಂದಿಗೆ ಯಾವುದೇ ವ್ಯವಹಾರ ಮಾಡದಿರುವ ದೃಢನಿರ್ಧಾರ ಮಾಡಿದೆ. ಮಾತ್ರವಲ್ಲ ಪಾಲಿಸಿಕೊಂಡು ಬರುತ್ತಿದೆ. ಅಂತಹ ಬದ್ಧತೆ ನಮ್ಮಲ್ಲಿ ಬರಲು ಸಾಧ್ಯವೇ? ಸ್ವಾತಂತ್ರ್ಯ ಚಳವಳಿಯ ಅವಧಿಯಲ್ಲಿ ಯಶಸ್ವಿಯಾಗಿದ್ದ ಸ್ವದೇಶಿ ಚಳವಳಿ ಮಾದರಿಯ ಏಕತೆ ಈಗಿಲ್ಲ, ಏಕೆಂದರೆ ಆಗ ಸ್ವಾತಂತ್ರ್ಯ ಒಂದೇ ಗುರಿಯಾಗಿತ್ತು, ಬೇರೆಲ್ಲ ಗೌಣ, ಅದೇ ಈಗ? ಜಾತಿ, ರಾಜಕೀಯ ಹಗ್ಗಜಗ್ಗಾಟ ಮುಂತಾದ ಸಂಕುಚಿತ ಮನಸ್ಥಿತಿಯೇ ಇಂತಹ ಚಳವಳಿಯ ಯಶಸ್ಸಿಗೆ ಅಡ್ಡಿ.

ನಮ್ಮವರ ವಿಚಿತ್ರ ಮನಸ್ಥಿತಿ: ಚೀನಾ ನಿರ್ವಿುಸಿದ ಟಿಕ್​ಟಾಕ್ ಮತ್ತು ಝುೂಮ್ ತಂತ್ರಾಂಶಗಳು ಭಾರತದಲ್ಲಿ ಹೆಚ್ಚು ಬಳಕೆಯಾಗುತ್ತಿವೆ. ಈ ಎರಡೂ ತಂತ್ರಾಂಶಗಳಿಂದ ಚೀನಾ ದೊಡ್ಡಮೊತ್ತದ ವಿದೇಶಿ ವಿನಿಮಯ ಗಳಿಸುತ್ತಿರುವುದು ಮಾತ್ರವಲ್ಲ, ಇವೆರಡೂ ಗೂಢಚಾರಿಕೆಗೂ ಉಪಯೋಗಿಸಲ್ಪಡುತ್ತಿದೆ ಎಂದು ಎಚ್ಚರಿಸಿದರೂ ಗಂಭೀರವಾಗಿ ಪರಿಗಣಿಸಿದವರ ಸಂಖ್ಯೆ ಕಡಿಮೆಯೇ. ಕರೊನಾ ಸೋಂಕು ನಿಯಂತ್ರಣ ಪ್ರಕ್ರಿಯೆಯಲ್ಲಿ ಉಪಯೋಗಿಸಲು ಸರ್ಕಾರ ಇತ್ತೀಚೆಗೆ ಪರಿಚಯಿಸಿದ ‘ಆರೋಗ್ಯ ಸೇತು’ ತಂತ್ರಾಂಶದ ಬಗ್ಗೆ ರಾಜಕೀಯ ವಾದ-ವಿವಾದ ನಡೆಯುತ್ತಿದೆ. ಇಷ್ಟು ಸಾಲದೆಂಬಂತೆ ‘ಆರೋಗ್ಯ ಸೇತು’ ತಂತ್ರಾಂಶದ ಬಗ್ಗೆ ನ್ಯಾಯಾಲಯದ ಮೆಟ್ಟಿಲು ಹತ್ತಿದವರೂ ಇದ್ದಾರೆ.

ಜಾಗೃತರಾಗಬೇಕಿದೆ: ಭಾರತದ ಪತಂಜಲಿ ಉತ್ಪನ್ನಗಳು ಅಮೆರಿಕ ಮತ್ತು ಕೆನಡಾ ಸೇರಿ ಹಲವಾರು ದೇಶಗಳಲ್ಲಿ ದೊಡ್ಡ ಮಾರುಕಟ್ಟೆಯನ್ನು ಪಡೆದುಕೊಂಡಿವೆ, ಮೈಸೂರು ಸ್ಯಾಂಡಲ್, ಎಂಟಿಆರ್, ಹಳ್ದಿರಾಮ್ ಮುಂತಾದ ಉತ್ಪನ್ನಗಳೂ ವಿದೇಶದಲ್ಲಿ ಲಭ್ಯ, ಅದೇ ನಮಗೆ ವಿದೇಶಿ ತಯಾರಿಕೆಯ ಪಿಜ್ಜಾ, ಬರ್ಗರ್​ನ ಆಕರ್ಷಣೆ. ದೇಶದಲ್ಲಿ ಎಲ್ಲ ರೀತಿಯ ಉತ್ಪನ್ನಗಳೂ ಲಭ್ಯ ಇವೆ, ಹುಡುಕುವ ಮನಸ್ಸು ಬೇಕಷ್ಟೇ.

ಚೀನಾದ ಕುತಂತ್ರ: ಆಧುನಿಕ ಖರೀದಿ ವ್ಯವಸ್ಥೆಯಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವ ಮೊದಲು ಅವುಗಳನ್ನು ಈಗಾಗಲೇ ಖರೀದಿಸಿದವರ ಪ್ರತಿಕ್ರಿಯೆ ಪರಿಶೀಲನೆ ನಡೆಸುವ ಪದ್ಧತಿಯಿದೆ. ಅದೇ ಸ್ಟಾರ್ ರೇಟಿಂಗ್. ಇದರಲ್ಲಿ ಚೀನಾದ ತಂತ್ರ ಹೀಗಿದೆ. ಟಿಕ್ ಟಾಕ್​ಗೆ 70 ಲಕ್ಷ ಭಾರತೀಯರು ರೇಟಿಂಗ್ ಒಂದು ಅಂತ ಕೊಟ್ಟ ಕಾರಣಕ್ಕೆ ಅದರ ರೇಟಿಂಗ್ 4.5 ಇದ್ದುದು ಕೆಲವೇ ದಿನಗಳಲ್ಲಿ 1.2ಕ್ಕೆ ಇಳಿಯಿತು. ಇದನ್ನು ಗಮನಿಸಿದ ಚೀನಾ ಭಾರತೀಯರ 70 ಲಕ್ಷ ರೇಟಿಂಗ್​ನ್ನೇ ಅಳಿಸಿ ಹಾಕಿತು. ಏಕಾಏಕಿ ರೇಟಿಂಗ್ ಮತ್ತೆ 4.6ಕ್ಕೆ ಏರಿಕೆಯಾಯ್ತು.

ಕರೊನಾ ಹೊತ್ತಲ್ಲಿ ಚೀನಾದಿಂದ ಆಮದಾದ ಜ್ವರಮಾಪಕ, ಪರೀಕ್ಷಾ ಕಿಟ್, ಪಿಇಪಿ, ಮಾಸ್ಕ್ ಇನ್ನೂ ಬಹಳಷ್ಟು ಪರಿಕರಗಳು ಕಳಪೆ ಗುಣಮಟ್ಟದವುಗಳೆಂದು ಕಂಡುಬಂದಿದೆ. ಇದರಿಂದ ರೋಗ ನಿಯಂತ್ರಣವಾಗುವ ಬದಲು ಉಲ್ಬಣಕ್ಕೆ ಕಾರಣವಾದ ಉದಾಹರಣೆಗಳು ಹಸಿರಾಗಿವೆ. ಆದ್ದರಿಂದಲೇ ಭಾರತ ಸರ್ಕಾರ ಸಕಾಲದಲ್ಲಿ ಎಚ್ಚೆತ್ತುಕೊಂಡು ಪರ್ಯಾಯ ವ್ಯವಸ್ಥೆ ಮಾಡಿತು. ಸಕಾರಾತ್ಮಕ ಚಿಂತನೆ, ಗುರಿಸಾಧನೆಯ ಛಲವಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದಕ್ಕೆ ಒಂದು ಚಿಕ್ಕ ಉದಾಹರಣೆ: ಕರೊನಾ ಸಾಂಕ್ರಾಮಿಕ ದೇಶಕ್ಕೆ ಕಾಲಿಟ್ಟ ಮಾರ್ಚ್ ಮೊದಲ ವಾರದಲ್ಲಿ ಪಿಇಪಿ ಕಿಟ್, ಪರೀಕ್ಷಾ ಕಿಟ್, ಮಾಸ್ಕ್ ಮುಂತಾದವುಗಳ ಉತ್ಪಾದನೆ ನಮ್ಮಲ್ಲಿ ಇರಲಿಲ್ಲ. ಎಲ್ಲದಕ್ಕೂ ಚೀನಾ ಮತ್ತಿತರ ದೇಶಗಳನ್ನು ಅವಲಂಬಿಸಬೇಕಾಗಿತ್ತು. ಆದರೆ ಮೂರು ತಿಂಗಳಲ್ಲಿ ದಿನವೊಂದಕ್ಕೆ ಮಾಸ್ಕ್, ಕಿಟ್​ಗಳನ್ನು ಲಕ್ಷಗಟ್ಟಲೇ ಸಂಖ್ಯೆಯಲ್ಲಿ ಉತ್ಪಾದನೆ ಮಾಡುವಷ್ಟು ಶಕ್ತರಾಗಿದ್ದೇವೆ. ದೇಶದ ಉನ್ನತಿಗೆ ಇಂಥ ಮನಸ್ಥಿತಿ ಬೇಕು.

ಇಷ್ಟೆಲ್ಲದರ ನಡುವೆ ಯಾವುದು ಸ್ವದೇಶಿ, ಯಾವುದು ವಿದೇಶಿ ಎಂಬ ಬಗ್ಗೆ ಜಿಜ್ಞಾಸೆ ಸಹಜ. ಕೇವಲ ವಿದೇಶಿ ಒಡೆತನದ ಸಂಸ್ಥೆಯಾದ ಮಾತ್ರಕ್ಕೆ ಅದು ರ್ವ್ಯಜವೆಂಬ ವಾದವೂ ತಪ್ಪು. ವಿದೇಶಿ ಸಂಸ್ಥೆಗಳು ನಮ್ಮ ದೇಶದಲ್ಲಿ ಬಂಡವಾಳ ಹೂಡಿ, ಸ್ಥಳೀಯರಿಗೆ ಉದ್ಯೋಗ ಒದಗಿಸಿ, ಉದ್ದಿಮೆಗಳಲ್ಲಿ ತಯಾರಿಸಿದ ಉತ್ಪನ್ನಗಳು ಸ್ವದೇಶಿ ಆಗುತ್ತವೆ. ಒಟ್ಟಿನಲ್ಲಿ ಅವು ನಮ್ಮ ದೇಶಕ್ಕೆ ಉದ್ಯೋಗ, ತೆರಿಗೆ ರೂಪದಲ್ಲಿ ಕೊಡುಗೆ ನೀಡುವಂತಿರಬೇಕು. ಆಗ ವಿದೇಶಿ ಬಂಡವಾಳ ದೇಶಕ್ಕೆ ಹರಿದುಬರುತ್ತದೆ. ಆ ಮೂಲಕ ದೇಶದ ಆರ್ಥಿಕತೆ ಬಲಗೊಳ್ಳುತ್ತದೆ.

ಇದೆಲ್ಲವೂ ನಿರೀಕ್ಷಿತ ಫಲಿತಾಂಶ ನೀಡಬೇಕಾದರೆ ದೇಶದ ಆರ್ಥಿಕತೆಯ ಬೆನ್ನೆಲುಬಾಗಿರುವ ಕೃಷಿ ವಲಯಕ್ಕೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ಕೃಷಿಉತ್ಪನ್ನಗಳಿಗೆ ಸೂಕ್ತ ಬೆಲೆ, ಅನಿಯಂತ್ರಿತ ಮಾರುಕಟ್ಟೆ ಮುಂತಾದವುಗಳನ್ನು ಒದಗಿಸುವಲ್ಲಿ ಗರಿಷ್ಠ ಆದ್ಯತೆ ನೀಡಬೇಕು. ಪ್ರಸಕ್ತ ಚೀನಾ ಮಾತ್ರ ನಮಗೆ ಶತ್ರುವಾಗಿ ಕಾಣಬಹುದು, ಅವರ ಉತ್ಪನ್ನಗಳಿಗೆ ಬಹಿಷ್ಕಾರ ಎಂಬ ಆಂದೋಲನ ಪ್ರಸ್ತುತವಾಗಿ ಕಾಣಬಹುದು. ಆದರೆ ನಾಳೆ ಇನ್ನೊಂದು ದೇಶ ಅದೇ ರೀತಿಯ ವರ್ತನೆ ತೋರುವುದಿಲ್ಲವೆಂಬ ಖಾತರಿಯೇನು? ಆದ್ದರಿಂದ ಸ್ವಾವಲಂಬನೆ ಒಂದೇ ಪರಿಹಾರ. ಹೇಗೆ ಶಿಸ್ತು ಸಂಸ್ಕಾರದ ಅವಿಭಾಜ್ಯ ಅಂಗವೋ ಹಾಗೆಯೇ ದೇಶಪ್ರೇಮವೂ ಹುಟ್ಟಿನಿಂದಲೇ ಬರಬೇಕು. ಬದಲಾವಣೆ ನಮ್ಮ ಮನೆಯಿಂದಲೇ ಆರಂಭವಾದರೆ, ಎಲ್ಲವೂ ತನ್ನಿಂತಾನೇ ಬದಲಾಗುತ್ತದೆ.

(ಲೇಖಕರು ಹವ್ಯಾಸಿ ಬರಹಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net