ರಾಜ್ಯದಲ್ಲಿ ಕರಗದ ಕಬ್ಬು: ಬದುಕು ಕಸಿದರೂ ಕಬ್ಬನ್ನೇ ನೆಚ್ಚಿಕೊಂಡ ರೈತರು!

KABBU F
Published on

ಅತಿವೃಷ್ಟಿ ಹಾಗೂ ಅನಾವೃಷ್ಟಿ, ಕಬ್ಬಿನ ಬಾಕಿ ಬಿಲ್, ಕಾರ್ಖಾನೆಗಳ ತೂಕದ ವಂಚನೆ, ನೀರಿನ ಅಭಾವ, ಗೊಬ್ಬರ ದರ ಏರಿಕೆ ಹಾಗೂ ವಿವಿಧ ಬಗೆಯ ರೋಗಗಳು ಬೆಂಬಿಡದೆ ಕಾಡುತ್ತಿದ್ದರೂ ರಾಜ್ಯದ ರೈತರು ಕಬ್ಬು ಬೆಳೆಯುವುದನ್ನು ಮಾತ್ರ ಕಡಿಮೆ ಮಾಡುತ್ತಲೇ ಇಲ್ಲ.

2016-17ರಲ್ಲಿ ರಾಜ್ಯದಲ್ಲಿ ಕಬ್ಬು ಬೆಳೆಯುವ ಒಟ್ಟು ಕ್ಷೇತ್ರ 90638 ಹೆಕ್ಟೇರ್ ಇತ್ತು. ಅದು ಮಾರನೇ ವರ್ಷದಲ್ಲಿ 1.33 ಲಕ್ಷ ಹೆಕ್ಟೇರ್​ಗೆ ಏರಿತು. 2018-19ರಲ್ಲಿ ದುಪ್ಪಟ್ಟಿಗಿಂತ ಹೆಚ್ಚು, ಅಂದರೆ, 2.98 ಲಕ್ಷ ಹೆಕ್ಟೇರ್​ಗೆ ಹೆಚ್ಚಳವಾಗಿದೆ. 2019-20ರ ಅಂಕಿಅಂಶಗಳು ಇನ್ನಷ್ಟೇ ಬರಬೇಕಿದೆ.

ಈ ಪೈಕಿ, ಬೆಳಗಾವಿ ಜಿಲ್ಲೆಯಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯಲಾಗುತ್ತಿದೆ. ಮಂಡ್ಯ ಹಾಗೂ ಬಾಗಲಕೋಟ ಜಿಲ್ಲೆ ದ್ವಿತೀಯ ಹಾಗೂ ತೃತೀಯ ಸ್ಥಾನದಲ್ಲಿವೆ. 2018-19ರಲ್ಲಿ ಬೆಳಗಾವಿ ಜಿಲ್ಲೆಯೊಂದರಲ್ಲೇ ಸುಮಾರು 1.11 ಲಕ್ಷ ಹೆಕ್ಟೇರ್ ಭೂಮಿಯಲ್ಲಿ ಕಬ್ಬು ಬೆಳೆಯಲಾಗಿದೆ. ಇದು ಇಡೀ ರಾಜ್ಯದ ಕಬ್ಬು ಬೆಳೆಯ ಮೂರನೇ ಒಂದರಷ್ಟು! ಕಳೆದ ಹಲವು ವರ್ಷಗಳಿಂದ ಬೆಳಗಾವಿ ಜಿಲ್ಲೆ ಕಬ್ಬು ಬೆಳೆಯುವಲ್ಲಿ ಅಗ್ರ ಸ್ಥಾನ ಪಡೆಯುತ್ತಲೇ ಇದೆ.

ಬೆಳಗಾವಿ ಜಿಲ್ಲಾ ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಬರ ನಿಭಾಯಿಸುವ ನಿಟ್ಟಿನಲ್ಲಿ ವಾಣಿಜ್ಯ ಬೆಳೆಯಾದ ಕಬ್ಬಿಗೆ ಪರ್ಯಾಯವಾಗಿ ಅಲ್ಪಾವಧಿ ಬೆಳೆಗಳಾದ ದ್ವಿದಳ ಧಾನ್ಯ, ತರಕಾರಿ ಬೆಳೆಯುವಂತೆ ಅಭಿಯಾನ ಹಮ್ಮಿಕೊಳ್ಳುತ್ತಿದ್ದಾರೆ. ಆದರೆ, ರೈತರು ಮಾತ್ರ ಕಬ್ಬಿನಿಂದ ವಿಮುಖರಾಗುತ್ತಲೇ ಇಲ್ಲ.

ಕೈಹಿಡಿದ ಪಟ್ಟಾ ಪದ್ಧತಿ: ಜಿಲ್ಲೆಯ ಬಹುತೇಕ ರೈತರು ಇಸ್ರೇಲ್ ಮಾದರಿ ಕೃಷಿಗೆ ಮಾರುಹೋಗಿ ಪಟ್ಟಾ ಪದ್ಧತಿ ಅನುಸರಿಸಿಕೊಂಡು ಕಬ್ಬು ಬೆಳೆಯುತ್ತಿದ್ದಾರೆ. ಅಲ್ಲದೆ ಕಬ್ಬಿನಲ್ಲಿ ಅಂತರ ಬೆಳೆಯಾಗಿ ದ್ವಿದಳ ಧಾನ್ಯ ಹಾಗೂ ವಿವಿಧ ಬಗೆಯ ತರಕಾರಿ ಬೆಳೆದು ಅದರಿಂದಲೂ ಲಾಭ ಕಂಡುಕೊಳ್ಳುತ್ತಿದ್ದಾರೆ. ಅಂತರ ಬೆಳೆ ಪದ್ಧತಿ ವಾರ್ಷಿಕ ವರಮಾನ ಹೆಚ್ಚಿಸುವ ಜತೆಗೆ ಭೂಮಿಯ ಫಲವತ್ತತೆಯನ್ನೂ ಹೆಚ್ಚಿಸುತ್ತಿದ್ದುದರಿಂದ ರೈತರು ಸಹಜವಾಗಿಯೇ ಕಬ್ಬು ನಂಬಿದ್ದಾರೆ. ಪಟ್ಟಾ ಪದ್ಧತಿ ಕಡಿಮೆ ನೀರು, ಕಳೆಮುಕ್ತ ಬೆಳೆ, ಅಧಿಕ ಇಳುವರಿ, ಭೂಮಿ ಫಲವತ್ತತೆ ಹಾಗೂ ನಿಯಮಿತ ಗೊಬ್ಬರ ಬಳಕೆಗೆ ಸಹಕಾರಿಯಾಗಿದೆ ಎನ್ನುತ್ತಾರೆ ಬೆಳೆಗಾರರು.

ನಿದ್ದೆಗೆಡಿಸಿದ ರೋಗ: ಈ ಹಿಂದೆ ರೈತರು ಕಬ್ಬು ರೋಗಮುಕ್ತ ಬೆಳೆ ಅಂದುಕೊಂಡಿದ್ದರು. ಆದರೆ, ಈಗ ಕಬ್ಬಿಗೆ ಅನೇಕ ರೋಗಗಳು ಮುತ್ತಿಕೊಳ್ಳುತ್ತಿವೆ. ಸುಳಿ ಸಾಯುವಿಕೆ, ಗೆದ್ದಲು ಹುಳ (ಗೊರಲ), ಗೊಣ್ಣೆಹುಳ, ಕಾಂಡ ಕೊರಕ ಹಾಗೂ ಬಿಳಿಉಣ್ಣೆಯ ರೋಗದಿಂದ ಪ್ರತಿ ವರ್ಷ ಶೇ.10ರಷ್ಟು ಕಬ್ಬು ನಾಶವಾಗುತ್ತಿದೆ. ಈ ರೋಗಗಳು ಕಬ್ಬು ಬೆಳೆಗಾರರ ನಿದ್ದೆಗೆಡಿಸಿವೆ. ಕಬ್ಬಿಗೆ ಗೊಣ್ಣೆಹುಳ ಹಾಗೂ ಬಿಳಿಉಣ್ಣೆ ರೋಗ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಆದರೆ, ಇವುಗಳ ನಿಯಂತ್ರಣಕ್ಕೆ ರೈತರು ಏನೆಲ್ಲ ಕಸರತ್ತು ಮಾಡುತ್ತಿದ್ದರೂ ರೋಗ ನಿಯಂತ್ರಣವಾಗುತ್ತಿಲ್ಲ. ಕಬ್ಬಿಗೆ ಇಷ್ಟೆಲ್ಲ ಸಮಸ್ಯೆಗಳಿದ್ದರೂ ರೈತರು ಮಾತ್ರ ಕಬ್ಬು ಬೆಳೆಯುವುದನ್ನು ಹೆಚ್ಚಿಸುತ್ತ ಹೊರಟಿದ್ದಾರೆ.

ಕಬ್ಬಿನ ಇಳುವರಿ ಏರಿಳಿತ

ಪ್ರತಿ ವರ್ಷ ಕಬ್ಬಿನ ಇಳುವರಿ ಏರಿಳಿತವಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿ 2015-16ರಲ್ಲಿ ಪ್ರತಿ ಹೆಕ್ಟೇರ್​ಗೆ 107 ಟನ್, 2016-17ನೇ ಸಾಲಿನಲ್ಲಿ 101 ಟನ್, 2017-18ರಲ್ಲಿ 87 ಟನ್ ಹಾಗೂ 2018-19ನೇ ಸಾಲಿನಲ್ಲಿ 110 ಟನ್ ಇಳುವರಿ ಬಂದಿದೆ. ಬೆಳೆಗಾರರು ಹನಿ, ತುಂತುರು ನೀರಾವರಿ ಬಳಸಿ ಕಬ್ಬು ಬೆಳೆಯುತ್ತಿದ್ದಾರೆ. ಆದರೆ, ತೀವ್ರ ಬರಗಾಲದಿಂದ ಅಂತರ್ಜಲದ ಮಟ್ಟ ಕುಸಿದಿರುವುದು ಕಬ್ಬಿನ ಇಳುವರಿ ಏರಿಳಿತಕ್ಕೆ ಪ್ರಮುಖ ಕಾರಣ ಎನ್ನುತ್ತಾರೆ ಚಿಕ್ಕೋಡಿ ತಾಲೂಕಿನ ಕಬ್ಬೂರ ಗ್ರಾಮದ ರೈತ ಸುಭಾಷ ಬಿ. ಬಡಿಗೇರ.

| ಅಕ್ಕಪ್ಪ ಮಗದುಮ್ಮ ಬೆಳಗಾವಿ  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net