ಕೃಷಿಯನ್ನು ಮುಂದಿನ ದಿನಗಳಲ್ಲಿ ಲಾಭದಾಯಕ ಉದ್ಯಮವಾಗಿ ಮಾಡಲು ಕೆಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮುಖ್ಯವಾಗಿ, ಹನಿ ನೀರಾವರಿ, ಸಂರಕ್ಷಿತ ಕೃಷಿ ಕ್ಷೇತ್ರ ಹೆಚ್ಚಿಸುವುದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಕೃಷಿಸಾಲ ನೀಡಿಕೆ ಕ್ರಮಗಳನ್ನು ಸರಳೀಕರಣಗೊಳಿಸುವುದು, ಆಹಾರ ಸಂಸ್ಕರಣೆಗೆ ಒತ್ತು ನೀಡುವುದು ಇತ್ಯಾದಿ.
ಕೃಷಿ ಕ್ಷೇತ್ರವು ರಾಜ್ಯದ ಜಿಡಿಪಿಗೆ ಶೇಕಡ 17 ಕೊಡುಗೆ ನೀಡುವುದಲ್ಲದೆ, ಈ ಕ್ಷೇತ್ರದ ಮೇಲೆ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಅವಲಂಬಿತರಾಗಿರುವ ಶೇಕಡ 50 ಮಂದಿಗೆ ಉದ್ಯೋಗ ಒದಗಿಸಿದೆ ಎಂದು ಹಸಿರುಕ್ರಾಂತಿ ಹರಿಕಾರ ಡಾ.ಎಂ.ಎಸ್. ಸ್ವಾಮಿನಾಥನ್ ವರದಿಯಲ್ಲಿಯೂ ನಮೂದಿಸಲಾಗಿದೆ. ಕೈಗಾರಿಕೆಗಳು ಬಹುತೇಕ ಕಚ್ಚಾ ವಸ್ತುಗಳಿಗೆ ಕೃಷಿಯನ್ನೇ ಅವಲಂಬಿಸಿರುತ್ತವೆ. ಕರ್ನಾಟಕವು ರಾಜಸ್ಥಾನದ ನಂತರ ಅತೀ ಹೆಚ್ಚು ಒಣಭೂಮಿ ಹೊಂದಿದೆ. ಪದೇಪದೆ ಮರುಕಳಿಸುತ್ತಿರುವ ಬರಗಾಲಕ್ಕೆ ರಾಜ್ಯವು ತುತ್ತಾಗುತ್ತಿದೆ. 2020-21 ಹಾಗೂ 2021-22ರಲ್ಲಿ ಉತ್ತಮ ಬೆಳೆ ಬಂದಿದ್ದರೂ ಅತೀ ಹೆಚ್ಚು ಅಕಾಲಿಕ ಮಳೆಯಿಂದ ಬೆಳೆಯನ್ನು ಕಟಾವು ಮಾಡಲಾಗದೆ ರೈತರು ನಷ್ಟ ಅನುಭವಿಸಿದ್ದಾರೆ ಎಂಬ ವಾಸ್ತವವನ್ನು ಕಡೆಗಣಿಸುವಂತಿಲ್ಲ. ಹೀಗೆ ಪ್ರತೀ ವರ್ಷ ಕೃಷಿ ಕ್ಷೇತ್ರವು ವಿಭಿನ್ನ ಸವಾಲು ಎದುರಿಸುತ್ತಿದ್ದು, ಪರಿಹಾರದ ಹೊಸ ಮಾರ್ಗಗಳನ್ನೂ ಶೋಧಿಸಬೇಕಿದೆ.
ಎರಡು ವರ್ಷದಿಂದ ಕೋವಿಡ್ ಭಯಕ್ಕೆ ಅನೇಕ ವಿದ್ಯಾವಂತ ಯುವಕರು ಪಟ್ಟಣಗಳಿಂದ ಹಳ್ಳಿಗಳಿಗೆ ಹೋಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ವೈಜ್ಞಾನಿಕ ತಂತ್ರಜ್ಞಾನ ಅಳವಡಿಸಿ ಸಮಗ್ರ ಕೃಷಿ, ನಿಖರ ಕೃಷಿ ಹಾಗೂ ಸಂರಕ್ಷಿತ ಕೃಷಿ ಎಂಬ ವಿವಿಧ ಬೇಸಾಯ ಪದ್ಧತಿಯಲ್ಲಿ ಹಾಗೂ ಸೂಕ್ಷ್ಮ ನೀರಾವರಿ ಪದ್ಧತಿಯಲ್ಲಿ ಗರಿಷ್ಠ ಉತ್ಪನ್ನ ಪಡೆಯುತ್ತಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ 2020-21ರಲ್ಲಿ ರಾಜ್ಯದಲ್ಲಿ ಅತ್ಯಧಿಕ ಅಂದರೆ, 155 ಲಕ್ಷ ಟನ್ ಆಹಾರ ಉತ್ಪಾದನೆಯಾಗಿದೆ. ಇದು 2019-20ನೇ ಸಾಲಿಗಿಂತ ಶೇಕಡ 10 ಹೆಚ್ಚು. ಆದರೆ, ಅಕಾಲಿಕ ಮಳೆಯಿಂದಾದ ಅನಾಹುತಕ್ಕೆ ಪರಿಹಾರ ಒದಗಿಸಲು ರಾಜ್ಯ ಸರ್ಕಾರವು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖಾ ಸಿಬ್ಬಂದಿ ಮೂಲಕ ಸಮೀಕ್ಷೆ ಮಾಡಿಸಿದೆ. ಬೆಳೆಹಾನಿ ಅಂದಾಜಿಸಿ ರೈತರ ಬೆಳೆವಾರು ಕ್ಷೇತ್ರವನ್ನು ಫೂ›ಟ್ಸ್ ಆಪ್ನಲ್ಲಿ ನಮೂದಾದ ಪ್ರಕಾರ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ನಿಯಮಾವಳಿಯಂತೆ ಪರಿಹಾರ ಮೊತ್ತವನ್ನು ರೈತರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗುತ್ತಿದೆ. ಪ್ರಸ್ತುತ ಪರಿಹಾರ ಮೊತ್ತವು ರೈತರು ಬೆಳೆದ ಬೆಳೆಗಳ ಸಂಪೂರ್ಣ ಹಾನಿ ಭರಿಸದ ಕಾರಣಕ್ಕೆ ಸರ್ಕಾರ ಇನ್ನೂ ಹೆಚ್ಚಿನ ಪರಿಹಾರ ಒದಗಿಸಲು ನೂತನ ಮಾರ್ಗಗಳನ್ನು ಹುಡುಕಬೇಕಾಗಿದೆ. ಈ ಸಂಬಂಧ ರಾಜ್ಯ ಮಟ್ಟದಲ್ಲಿ ‘ಕೃಷಿ ವಿಕೋಪ ನಿರ್ವಹಣಾ ನಿಧಿ’ (Agriculture Disaster Management Fund) ಸ್ಥಾಪಿಸಬಹುದಾಗಿದೆ.
ಸರ್ಕಾರದ ಮುಂದಿರುವ ಗುರಿ: ಕೃಷಿಯನ್ನು ಮುಂದಿನ ದಿನಗಳಲ್ಲಿ ಲಾಭದಾಯಕ ಉದ್ಯಮವಾಗಿ ಮಾಡಲು ಕೆಲ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಿದೆ. ಮುಖ್ಯವಾಗಿ, ಮಣ್ಣಿನಲ್ಲಿ ಸಾವಯವ ಇಂಗಾಲದ ಮಟ್ಟ ಹೆಚ್ಚಿಸುವುದು, ಹನಿ ನೀರಾವರಿ, ಸಂರಕ್ಷಿತ ಕೃಷಿ ಕ್ಷೇತ್ರ ಹೆಚ್ಚಿಸುವುದು, ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಕೃಷಿಸಾಲ ನೀಡಿಕೆ ಕ್ರಮಗಳನ್ನು ಸರಳೀಕರಣಗೊಳಿಸುವುದು, ಆಹಾರ ಸಂಸ್ಕರಣೆಗೆ ಒತ್ತು ನೀಡುವುದು, ಕೃಷಿ ಉತ್ಪನ್ನಗಳ ರಫ್ತಿಗೆ ಉತ್ತೇಜನ ನೀಡುವುದು, ಬರಡಾದ ಹಾಗೂ ಸವಳು-ಜವಳು ಭೂಮಿಯನ್ನು ಸುಧಾರಣೆ ಮಾಡುವುದು, ಕೃಷಿ, ಅರಣ್ಯ, ತೋಟಗಾರಿಕೆ, ಹೈನುಗಾರಿಕೆ ಹಾಗೂ ರೇಷ್ಮೆ ಕೃಷಿಗೆ ಉತ್ತೇಜನ ನೀಡುವುದು, ಗ್ರಾಮೀಣ ಭಾಗದಲ್ಲಿ ಕೃಷಿಸಂತೆಗಾಗಿ ಕೃಷಿ ಮಾರುಕಟ್ಟೆ ಪ್ರಾಂಗಣ ಕಟ್ಟಿಸುವುದು, ಸಂಗ್ರಹಣಾ ಗೋದಾಮುಗಳನ್ನು ನಿರ್ಮಾಣ ಮಾಡುವುದು, ಕೃಷಿಯಲ್ಲಿ ಆಧುನಿಕ ಯಂತ್ರಗಳನ್ನು ಸಣ್ಣ ರೈತರಿಗಾಗಿ ಅಭಿವೃದ್ಧಿ ಪಡಿಸಿ ಬಳಸುವುದು, ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳನ್ನು ಬಲವರ್ಧನೆಗೊಳಿಸುವುದು ಹಾಗೂ ಕೃಷಿ ನವೋದ್ಯಮಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಿ ಕೃಷಿಯನ್ನು ಲಾಭದಾಯಕವಾಗುವಂತೆ ಮಾಡಿ ಕೃಷಿಕರ ಆದಾಯ ಹೆಚ್ಚಿಸುವುದು ಸರ್ಕಾರದ ಮುಖ್ಯ ಗುರಿಯಾಗಿದೆ.
ಕೃಷಿ ಬಲವರ್ಧನೆ, ಕೃಷಿಕರ ಆದಾಯ ಹೆಚ್ಚಳಕ್ಕೆ ರಾಜ್ಯ ಸರ್ಕಾರ 2022-23ರ ಆಯವ್ಯಯದಲ್ಲಿ ಈ ಕೆಳಗಿನ ಕಾರ್ಯಕ್ರಮಗಳನ್ನು ರೂಪಿಸಿ ಹೆಚ್ಚಿನ ಹಣಕಾಸಿನ ನೆರವು ಒದಗಿಸುವುದು ಸಮಯೋಚಿತ ಹಾಗೂ ಅನಿವಾರ್ಯವಾಗಿರುವುದೆಂದು ಕಂಡುಬರುತ್ತದೆ.
- ರಾಜ್ಯದಲ್ಲಿ ಈಗಾಗಲೇ 55 ಲಕ್ಷ ಹೆಕ್ಟೇರ್ ಭೂಮಿಯನ್ನು ಜಲಾನಯನ ಅಭಿವೃದ್ಧಿ ತಂತ್ರಜ್ಞಾನಗಳಿಗೆ ಒಳಪಡಿಸಲಾಗಿದೆ. ಇನ್ನುಳಿದ 50 ಲಕ್ಷ ಹೆಕ್ಟೇರ್ ಭೂಮಿಗೆ ಜಲಾನಯನ ಅಭಿವೃದ್ಧಿ ತಂತ್ರಜ್ಞಾನದಿಂದ ಅಂತರ್ಜಲ ಹೆಚ್ಚಿಸಲು ನೂತನ ಕಾರ್ಯಕ್ರಮ ರೂಪಿಸಿ ಹೆಚ್ಚಿನ ಅನುದಾನ ನೀಡಬೇಕು.
- 2020ರಲ್ಲಿ ಘೊಷಿಸಿದ ರಾಜ್ಯದ ಪ್ರವಾಸೋದ್ಯಮ ನೀತಿ ಅನ್ವಯ ರಾಜ್ಯದಾದ್ಯಂತ ಎಲ್ಲ್ಲ ಜಿಲ್ಲೆಗಳಲ್ಲಿ ಲಭ್ಯವಿರುವ ಕೃಷಿ, ತೋಟಗಾರಿಕೆ ಕ್ಷೇತ್ರಗಳು ಹಾಗೂ ಕೃಷಿ ಸಂಶೋಧನಾ ಕೇಂದ್ರಗಳಲ್ಲಿ ‘ಅಗ್ರಿ ಟೂರಿಸಂ ಕೇಂದ್ರ’ಗಳನ್ನು ಸ್ಥಾಪಿಸಬೇಕು. ಈ ಕೇಂದ್ರಗಳ ನಿರ್ವಹಣೆ ಮಾಡಲು ಹೊರಗುತ್ತಿಗೆ ಆಧಾರದ ಮೇಲೆ ನಿರುದ್ಯೋಗಿ ಕೃಷಿ ಪದವೀಧರರಿಗೆ ಅಥವಾ ಖಾಸಗಿ ಸಂಸ್ಥೆಗಳಿಗೆ ಪಿಪಿಪಿ ಮಾದರಿಯಲ್ಲಿ ನಿರ್ದಿಷ್ಟ ಅವಧಿಗೆ ಕಾರ್ಯನಿರ್ವಹಿಸುವಂತೆ ಕಾರ್ಯಕ್ರಮ ರೂಪಿಸಬಹುದು.
- ರಾಜ್ಯದ 6 ಕೃಷಿ ವಿಶ್ವವಿದ್ಯಾಲಯಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಶೇಕಡ 50 ಹುದ್ದೆಗಳನ್ನು ತುಂಬಲು ಸರ್ಕಾರ ಅನುಮತಿ ನೀಡಿ ಭರ್ತಿ ಮಾಡಿದಲ್ಲಿ, ಮಾನವ ಸಂಪನ್ಮೂಲ ಕೊರತೆಯನ್ನು ತಕ್ಕಮಟ್ಟಿಗೆ ನಿವಾರಿಸಿದರೆ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣೆ ಗುಣಮಟ್ಟ ಹೆಚ್ಚಿಸಲು ಪೂರಕವಾಗುತ್ತದೆ.
- ರಾಜ್ಯದಲ್ಲಿ ಸುಮಾರು 6000 ಗ್ರಾಮ ಪಂಚಾಯಿತಿಗಳಿದ್ದು, ಪ್ರತಿ 2 ಗ್ರಾಪಂಗೆ ಒಬ್ಬರಂತೆ ಕೃಷಿ ಸಹಾಯಕರಾಗಿ ಕೆಲಸ ಮಾಡಲು ಅಂದಾಜು 3000 ರೈತಮಿತ್ರ/ಕೃಷಿಮಿತ್ರರೆಂದು ನೂತನವಾಗಿ ಇಲಾಖೆಯ ವೃಂದ ಮತ್ತು ನೇಮಕಾತಿಯಲ್ಲಿ ಹುದ್ದೆಗಳನ್ನು ಸೃಜಿಸಿ ಕೃಷಿ ಪದವಿ ಅಥವಾ ಕೃಷಿ ಡಿಪ್ಲೋಮಾ ಪದವೀಧರರನ್ನು ನೇಮಕ ಮಾಡಬೇಕು.
- ಪ್ರಸ್ತುತ ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಸಹಾಯಕ ಕೃಷಿ ಅಧಿಕಾರಿ, ಕೃಷಿ ಅಧಿಕಾರಿ ಮತ್ತು ಸಹಾಯಕ ಕೃಷಿ ನಿರ್ದೇಶಕರ ಹುದ್ದೆಗಳನ್ನು ಭರ್ತಿ ಮಾಡಲು ಸರ್ಕಾರವು ಅನುಮತಿಸಿದಲ್ಲಿ ಸರ್ಕಾರದ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಕಾರ್ಯಗತಗೊಳಿಸಲು ಸಾಧ್ಯವಾಗುವುದು.
- ಅಂತಾರಾಷ್ಟ್ರೀಯ ಸಾವಯವ ಹಾಗೂ ಸಿರಿಧಾನ್ಯಗಳ ಮೇಳ ಆಯೋಜಿಸು ವುದು, ರಾಜ್ಯದಲ್ಲಿ ರೈತರು ಬೆಳೆದ ಸಿರಿಧಾನ್ಯಗಳನ್ನು ಯೋಗ್ಯ ಬೆಲೆಯಲ್ಲಿ ಖರೀದಿಸಿ, ಶೇಖರಿಸಿ ಸಂಸ್ಕರಿಸಲು ಪ್ರಾಂತೀಯ ಸಾವಯವ ಒಕ್ಕೂಟಗಳಿಗೆ ಹಣಕಾಸಿನ ನೆರವು ನೀಡಬೇಕು. ಇದರ ಮೂಲಕ ರಾಜ್ಯದ ವಿವಿಧ ಒಕ್ಕೂಟಗಳು ಖರೀದಿಸಿದ ಸಿರಿಧಾನ್ಯಗಳನ್ನು ಆಧುನಿಕ ಯಂತ್ರ ಬಳಸಿ ಸಂಸ್ಕರಿಸಿ ಬ್ರಾ್ಯಂಡ್ ಮಾಡಿ ರಫ್ತು ಮಾಡಲು ಕಾರ್ಯಕ್ರಮ ರೂಪಿಸಬೇಕು.
- ಕೃಷಿ ನವೋದ್ಯಮ ನೀತಿಯನ್ನು ಜಾರಿಗೆ ತಂದಲ್ಲಿ ಕೃಷಿ, ತೋಟಗಾರಿಕೆ, ಪಶುಸಂಗೋಪನೆ, ಕೃಷಿ ವಿಶ್ವವಿದ್ಯಾಲಯ ಮತ್ತು ಸರ್ಕಾರದಿಂದ ಅನುದಾನ ಪಡೆದ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಗ್ರಿ ಇನ್ಕ್ಯೂಬೇಷನ್ ಕೇಂದ್ರಗಳನ್ನು ಪ್ರಾರಂಭಿಸಿ ಕೃಷಿ ನವೋದ್ಯಮಗಳನ್ನು ಪ್ರಾರಂಭಿಸುವವರಿಗೆ ಅನುಭವ ಒದಗಿಸಬಹುದಾಗಿದೆ. ಕೃಷಿ ನವೋದ್ಯಮಗಳನ್ನು ಪೋ›ತ್ಸಾಹಿಸಲು ಅಗ್ರಿ ಎಲಿವೇಟ್ ಕಾರ್ಯಕ್ರಮ ಪ್ರಾರಂಭಿಸಿ ಅರ್ಹ ಅರ್ಜಿದಾರರಿಗೆ ಪ್ರೋತ್ಸಾಹಧನ ನೀಡಲು ಅಗ್ರಿ ಇನ್ನೊವೇಷನ್ ಫಂಡ್ ಅಥವಾ ಅಗ್ರಿ ಸ್ಟಾರ್ಟ್ಪ್ ಫಂಡ್ ಎಂದು ಆಯವ್ಯಯದಲ್ಲಿ ಹೆಚ್ಚಿನ ಅನುದಾನ ಹಂಚಿಕೆ ಮಾಡಬಹುದು.
- 2022ನೇ ಸಾಲಿನಲ್ಲಿ ಕೃಷಿ ಇಲಾಖೆಯು ಐಟಿ-ಬಿಟಿ ಇಲಾಖೆ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕೃಷಿ ನವೋದ್ಯಮಗಳ ಕಾರ್ಯಾಗಾರ ಹಾಗೂ ನವೋದ್ಯಮಗಳ ಪ್ರದರ್ಶನವನ್ನು ಸೂಕ್ತ ಅನುದಾನ ಒದಗಿಸಿ ಆಯೋಜಿಸಬಹುದು.
- ನ್ಯಾಷನಲ್ ಮಿಷನ್ ಆನ್ ಸಸ್ಟೆನೇಬಲ್ ಅಗ್ರಿಕಲ್ಚರ್ ಯೋಜನೆಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಲು ಈಗಿರುವ ಕೇಂದ್ರ ಸರ್ಕಾರದ ಶೇ.50 ಅನುದಾನದೊಂದಿಗೆ ರಾಜ್ಯ ಸರ್ಕಾರವು ಶೇ.30 ಹೆಚ್ಚುವರಿ ಅನುದಾನ ನೀಡಿ ರಿಯಾಯಿತಿ ದರದಲ್ಲಿ ರೈತರಿಂದ ಬೇಡಿಕೆ ಇರುವ ಪರಿಕರಗಳಿಗೆ ಮಾತ್ರ ಸಹಾಯಧನ ನೀಡಿದಲ್ಲಿ ಹಾಗೂ ಫಲಾನುಭವಿಗಳಿಗೆ ಕನಿಷ್ಠ 2 ಲಕ್ಷ ರೂ. ಪೋ›ತ್ಸಾಹಧನ ಲಭ್ಯವಾಗುವಂತೆ ಪ್ರತಿ ತಾಲ್ಲೂಕಿಗೆ 150 ರಿಂದ 200 ಸಮಗ್ರ ಕೃಷಿ ಪದ್ಧತಿ ತಾಕುಗಳನ್ನು ಅಳವಡಿಸುವಂತೆ ಕಾರ್ಯಕ್ರಮ ಹಾಕಿಕೊಳ್ಳಬೇಕು.
- ಜಲಾನಯನ ಅಭಿವೃದ್ಧಿ ಇಲಾಖೆ ಮೂಲಕ ಸಾಮೂಹಿಕವಾಗಿ ಬಸಿಗಾಲುವೆ ತೆಗೆಯುವ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸವಳು-ಜವಳು ಭೂಮಿಯನ್ನು ಮರಳಿ ಸಾಮಾನ್ಯ ಫಲವತ್ತಾದ ಮಣ್ಣಿಗೆ ಪರಿವರ್ತಿಸಲು ರಾಜ್ಯದ ತುಂಗಭದ್ರಾ, ಕೃಷ್ಣಾ, ಕಾವೇರಿ ಅಚ್ಚುಕಟ್ಟು ಪ್ರದೇಶಗಳಲ್ಲಿ ವಿಶೇಷ ಯೋಜನೆ.
- ರಾಜ್ಯದಲ್ಲಿ ವಿಶೇಷವಾಗಿ ಆಹಾರ ಸಂಸ್ಕರಣಾ ನಿರ್ದೇಶನಾಲಯ ಸ್ಥಾಪಿಸಿ ಈ ಮೂಲಕ ಆಹಾರ ಪಾರ್ಕ್ಗಳನ್ನು ಬಲವರ್ಧನೆಗೊಳಿಸಿ ಆಹಾರ ಸಾಗಾಣಿಕೆಗೆ ಸೂಕ್ತ ಲಾಜಿಸ್ಟಿಕ್ ಒದಗಿಸುವ ವಿಶೇಷ ಯೋಜನೆ.
- ಕೇಂದ್ರ ಸರ್ಕಾರವು ಸ್ಮಾರ್ಟ್ ಸಿಟಿ ರೂಪಿಸಿದ ಮಾದರಿಯಲ್ಲಿ ರಾಜ್ಯದಲ್ಲಿ ಆಯ್ಕೆ ಮಾಡಿದ ಗ್ರಾಮಗಳನ್ನು ಸ್ಮಾರ್ಟ್ ವಿಲೇಜ್ಗಳಾಗಿಸಬೇಕು. ಈ ಮೂಲಕ ಗ್ರಾಮಗಳಲ್ಲಿ ಬೆಳೆದ ಉತ್ಪನ್ನಗಳ ಶೇಖರಣೆ, ಸಂಸ್ಕರಣೆ, ರೈತಸಂತೆ ನಡೆಸಲು ಗ್ರಾಮೀಣ ಮಾರುಕಟ್ಟೆ ಪ್ರಾಂಗಣ ಕಟ್ಟುವುದು, ಕೃಷಿ ಮಾಹಿತಿ ಕೇಂದ್ರ, ಗ್ರಾಮಗಳಲ್ಲಿ ಸೌರವಿದ್ಯುತ್ ಉತ್ಪಾದನಾ ಕೇಂದ್ರ, ಸೌರಶಕ್ತಿ ಬಳಸಿ ನೀರನ್ನು ಎತ್ತುವ ಪಂಪ್ಸೆಟ್ಗಳು, ಇ-ಮಾರುಕಟ್ಟೆ ವ್ಯವಸ್ಥೆ ಹಾಗೂ ಒಂದು ಗ್ರಾಮ ಒಂದು ಕೆರೆ ಕಟ್ಟಿಸುವುದು, ಸಾಮೂಹಿಕ ಧಾನ್ಯ ಒಣಗಿಸುವ ಕಟ್ಟೆ ಮುಂತಾದ ಆಧುನಿಕ ಸೌಲಭ್ಯಗಳು ಗ್ರಾಮಗಳಲ್ಲಿಯೇ ದೊರೆಯುವಂತೆ ಮಾಡಬೇಕು.
- ರಾಜ್ಯದ ಕೃಷಿ ಅಭಿವೃದ್ಧಿಗೆ ಕೃಷಿ ಪರಿಕರಗಳ ಪೂರೈಕೆ, ಆಹಾರ ಉತ್ಪಾದನೆ, ಆಹಾರ ಸಂಸ್ಕರಣೆ, ಆಹಾರ ರಫ್ತು, ಸುಲಭ ಬಡ್ಡಿ ದರದಲ್ಲಿ ಕೃಷಿ ಸಾಲ, ಇ-ಮಾರುಕಟ್ಟೆ, ಭೂಮಿ ಫಲವತ್ತತೆ ಹಾಗೂ ಉತ್ಪಾದಕತೆಯನ್ನು ವೃದ್ಧಿಸುವ ಯೋಜನೆಗಳನ್ನು ರೂಪಿಸಿ ಯಶಸ್ವಿಯಾಗಿ ಹಾಗೂ ಪಾರದರ್ಶಕವಾಗಿ ಅನುಷ್ಠಾನಗೊಳಿಸಬೇಕು.
(ಲೇಖಕರು ಕೃಷಿ ತಜ್ಞರು)
https://www.vijayavani.net/puneeth-rajkumar-birthday-and-james-festival-at-veeresh-theater/
https://www.vijayavani.net/man-buys-scooter-with-a-sack-full-of-savings-in-coins/