

ಮನಸ್ಸಿನ ತುಂಬ ಕೋತಿಗಳೇ ತುಂಬಿವೆಯಲ್ಲವೇ? ಮನಸ್ಸು ನಮಗೇನು ಬೇಕೋ ಅದನ್ನು ಮಾಡುತ್ತಿಲ್ಲ. ‘ನನಗೆ ಕೋತಿಗಳು ಬೇಡ’ ಎಂದರೆ, ಅದು ಕೋತಿಗಳ ಬಗ್ಗೆಯಷ್ಟೇ ಯೋಚಿಸುತ್ತದೆ. ಇದು ನಮ್ಮ ಸಮಸ್ಯೆ ಮಾತ್ರವಲ್ಲ. ಪ್ರಪಂಚವೇ ಇದರಿಂದ ನರಳುತ್ತಿದೆ. ಜನರು ಯಾವಾಗ ಆಫೀಸ್ನಲ್ಲಿರುವರೋ, ಆಗ ಮನೆಗೆ ಹೋಗಬೇಕೆನಿಸುತ್ತದೆ. ಯಾವಾಗ ಮನೆಯಲ್ಲಿರುವರೋ, ಆಫೀಸಿನ ಕುರಿತು ಯೋಚಿಸುತ್ತಿರುತ್ತಾರೆ.
ಕೆಲವು ವರ್ಷಗಳ ಹಿಂದೆ, ‘ಇಂಗ್ಲಿಷ್ ಪ್ರೀಮಿಯರ್ ಲೀಗ್’ನ ಫುಟ್ಬಾಲ್ ಕ್ಲಬ್ ಒಂದರ ಜೊತೆ ಅರ್ಧ ದಿನ ಕಳೆದೆ. ಅವರ ಬಳಿ ಉತ್ತಮವಾದ ಪ್ರತಿಭೆಗಳಿದ್ದರೂ, ಕೆಲವು ವರ್ಷಗಳಿಂದ ಒಳ್ಳೆಯ ಪ್ರದರ್ಶನ ನೀಡುತ್ತಿರಲಿಲ್ಲ. ಅವರು ಹೇಗೆ ಅಭ್ಯಾಸ ಮಾಡುತ್ತಿದ್ದರು ಹಾಗೂ ಆಡುತ್ತಿದ್ದರು ಎಂಬುದನ್ನು ನೋಡುತ್ತ, ಅವರೊಂದಿಗೆ ಅರ್ಧ ದಿನ ಕಳೆದೆ. ಅವರು ಉತ್ತಮವಾಗೇ ಇದ್ದರು, ಅವರಿಗೆ ಹೇಗೆ ಫುಟ್ಬಾಲ್ ಆಡಬೇಕು ಎಂಬುದು ಗೊತ್ತಿತ್ತು, ಸಮಸ್ಯೆ ಅದಾಗಿರಲಿಲ್ಲ. ಆದರೆ ಅವರು ಎಲ್ಲ ಕಡೆ ಚೆಂಡನ್ನು ಒದೆಯುತ್ತ, ತಳಮಳದಲ್ಲಿದ್ದರು. ಚೆಂಡು ಪ್ರತೀ ಬಾರಿ ತಮಗೆಲ್ಲಿ ಬೇಕೋ ಅಲ್ಲಿ ಹೋಗದಿದ್ದಾಗ, ಪ್ರಸಿದ್ಧವಾದ ‘ಎರಡಕ್ಷರದ ಪದ’ ಎಲ್ಲೆಡೆಯಿಂದ ಬರುತ್ತಿದ್ದುದು ನನಗೆ ಕೇಳುತ್ತಿತ್ತು. ಹಾಗೂ ಮರುದಿನವೇ, ತಾವೊಬ್ಬರೇ ಆಟವನ್ನು ಮೇಲೆಕೆಳಗೆ ಮಾಡಬಲ್ಲಷ್ಟು ಸಾಮರ್ಥ್ಯವಿರುವ ಅನೇಕ ಪ್ರಸಿದ್ಧ ಆಟಗಾರರನ್ನು ಹೊಂದಿದ್ದ ಮತ್ತೊಂದು ತಂಡದ ವಿರುದ್ಧ ಅವರು ಆಡಬೇಕಿತ್ತು! ನಾನು ಅವರನ್ನು ಕೂರಿಸಿಕೊಂಡು, ಒಂದೂವರೆ ಗಂಟೆಗಳ ಕಾಲ ಅವರ ಕುರಿತು ಕೆಲವು ಸರಳ ಸಂಗತಿಗಳನ್ನು ತಿಳಿಸಿದೆ. ಅವರು ಆ ತಂಡವನ್ನು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಸೋಲಿಸಿರಲಿಲ್ಲ, ಆದರೆ ಮರುದಿನ 1-0 ಅಂತರದಲ್ಲಿ ಗೆದ್ದಿದ್ದರು.
ಆಕಸ್ಮಿಕ ಯಶಸ್ಸು: ಸಮಸ್ಯೆ ಇಷ್ಟೇ- ಮನಸ್ಸು ಯಾವುದರೊಳಗೆ ಹೋಗಬಾರದೋ ಅಲ್ಲೆಲ್ಲ ಹೋಗುತ್ತಿದೆ, ಆದರೆ ಏನು ಮಾಡಬೇಕಿತ್ತೋ ಅದನ್ನು ಮಾಡುತ್ತಿಲ್ಲ. ಮನಸ್ಸಿನೊಳಗೆ ಏನು ನಡೆಯುತ್ತದೆಯೋ ಅದು ನೂರು ಪ್ರತಿಶತ ನಮ್ಮಿಷ್ಟದಂತೆಯೇ ಆಗಬೇಕು, ಆದರೆ ನಮ್ಮೊಳಗೆ, 24 ಗಂಟೆಗಳಲ್ಲಿ ಅದೆಷ್ಟು ಅಹಿತಕರ ಕ್ಷಣಗಳು ಸಂಭವಿಸುತ್ತವೆ? ದಿನದಲ್ಲಿ ಐದು ಬಾರಿ ಕಹಿಯನ್ನು ಅನುಭವಿಸಿದರೆ, ಒಂದಲ್ಲ ಒಂದು ರೀತಿಯಲ್ಲಿ, ಅದರ ಛಾಯೆ ದಿನದುದ್ದಕ್ಕೂ ಉಳಿಯುತ್ತದೆ. ಇದು ಕೆಲಸದಲ್ಲೋ ಅಥವಾ ಸುತ್ತಲಿನ ಜನರಲ್ಲೋ, ಏನೋ ತಪ್ಪಿದೆ ಎಂಬ ಕಾರಣಕ್ಕಲ್ಲ. ಇದು ಮನಸ್ಸು ನಮ್ಮಿಂದ ಸೂಚನೆಗಳನ್ನು ಪಡೆಯಲು ನಿರಾಕರಿಸುತ್ತಿದೆ ಎಂಬ ಕಾರಣಕ್ಕಾಗಿ ಅಷ್ಟೆ.
ಮನಸ್ಸಿನಂತೆ ಮಾಡಿದರೆ?: ಮನಸ್ಸನ್ನು ಬೇಕಾದ ರೀತಿಯಲ್ಲಿ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದರೆ, ಜೀವನ ನಮಗೆ ಬೇಕಾದ ಹಾಗೆ ಆಗುವ ಸಾಧ್ಯತೆ ದೂರವೇ ಉಳಿಯಿತು. ನೀವು ಆಕಸ್ಮಿಕವಾಗಿ ಯಶಸ್ವಿಯಾಗಬಹುದಷ್ಟೇ, ಉದ್ದೇಶಪೂರ್ವಕವಾಗಿ ಅಲ್ಲ. ಆಕಸ್ಮಿಕವಾಗಿ ಯಶಸ್ವಿಯಾದಾಗ, ಭಯದಲ್ಲಿ ಬದುಕುತ್ತೀರಿ. ಅನೇಕರು ಕೇವಲ ಆಕಸ್ಮಿಕವಾಗಿ ಸ್ಥಾನಮಾನಗಳನ್ನು ಗಳಿಸಿದ್ದಾರೆ, ಹಾಗೂ ಅವರು ಯಾವಾಗಲೂ ಆತಂಕದಲ್ಲಿರುತ್ತಾರೆ- ಏಕೆಂದರೆ ಅವರು ಆಕಸ್ಮಿಕವಾಗಿ ಯಶಸ್ವಿಯಾಗಿರುವವರು; ಸ್ವಂತ ಪ್ರಜ್ಞೆ ಮೂಲಕ ಅಲ್ಲಿ ತಲುಪಿದ್ದಲ್ಲ. ಅವರು ಹೇಗೋ ಅಲ್ಲಿ ತಲುಪಿದರು ಹಾಗೂ ಈಗ ಪ್ರತಿದಿನವೂ ಭಯಭೀತರಾಗಿದ್ದಾರೆ. ಆದರೆ ಯಾವಾಗ ಉದ್ದೇಶಪೂರ್ವಕವಾಗಿ ಯಶಸ್ವಿಯಾಗುವಿರೋ, ನೀವು ಸಾಧಿಸಬಲ್ಲಿರಿ ಎಂಬುದು ನಿಮಗೆ ಗೊತ್ತು. ನಾಳೆ ಎಲ್ಲವೂ ಸಂಪೂರ್ಣವಾಗಿ ಕೊಚ್ಚಿಕೊಂಡು ಹೋದರೂ, ಅದನ್ನು ಮತ್ತೆ ಕಟ್ಟುವಿರಿ.ಏನನ್ನಾದರೂ ಆಕಸ್ಮಿಕವಾಗಿ ಮಾಡಿದಾಗ, ಆ ಕೆಲಸದಲ್ಲಿ ಖಂಡಿತವಾಗಿ ನರಳುತ್ತೀರಿ.
ಕಾರನ್ನು ಹೇಗೆ ಚಲಾಯಿಸುವುದೆಂದು ಚೆನ್ನಾಗಿ ತಿಳಿದಿದ್ದರೆ, ಅದು ಮುದ ನೀಡುವ ಕೆಲಸವಾಗಬಹುದು. ಆಕಸ್ಮಿಕವಾಗಿ ಕಾರು ಚಲಾಯಿಸುತ್ತಿದ್ದರೆ, ಭಯ ಆವರಿಸಿಕೊಳ್ಳುತ್ತದೆ. ಹೀಗೆ ಆಕಸ್ಮಿಕ ವಾಗಿ ಮಾಡುತ್ತಿದ್ದರೆ, ಜೀವನದ ಪ್ರತಿಯೊಂದು ಪ್ರಕ್ರಿಯೆಯೂ ದೊಡ್ಡ ತೊಳಲಾಟವಾಗಬಹುದು. ಜನರು ಆಕಸ್ಮಿಕವಾಗಿ ಯಶಸ್ವಿಯಾಗಿದ್ದಾರೆ. ಆದ್ದರಿಂದ ಅವರು ತಮ್ಮ ಯಶಸ್ಸಿನಲ್ಲೂ ನರಳುತ್ತಿದ್ದಾರೆ.
ಸ್ವ-ನಿರ್ವಿುತ ನರಳಾಟ: ‘ಯಶಸ್ವಿಯಾದವರು’ ಎಂದು ಕರೆಯಲ್ಪಡುವ ಜನರಲ್ಲಿ ಅಪಾರ ನರಳಾಟವಿದೆ. ಏಕೆಂದರೆ ಅವರು ದೊಡ್ಡ ಕಾರ್ಖಾನೆ ಮತ್ತು ಮಹಾನಿಗಮಗಳನ್ನು ನಿರ್ವಹಿಸುತ್ತಾರೆ, ಆದರೆ ಸ್ವಂತ ಮನಸ್ಸನ್ನು ಹೇಗೆ ನಿಭಾಯಿಸಬೇಕೆಂದು ಅವರಿಗೆ ತಿಳಿದಿಲ್ಲ. ಅಂದರೆ ಅವರ ನಿರ್ವಹಣೆ ಆಕಸ್ಮಿಕವಾದದ್ದು, ಉದ್ದೇಶಪೂರ್ವಕವಾದದ್ದಲ್ಲ. ಒಂದು ಕಾರ್ಖಾನೆ ಅಥವಾ ನಿಗಮವನ್ನು ನಿರ್ವಹಿಸುವುದು ಎಂದರೆ ಹತ್ತು ಸಾವಿರ ಮನಸ್ಸುಗಳನ್ನು ನಿರ್ವಹಿಸಬೇಕು ಎಂದರ್ಥ. ಆದರೆ, ನಮಗೆ ಸ್ವಂತ ಮನಸ್ಸನ್ನು ನಿರ್ವಹಿಸುವುದು ಹೇಗೆ ಎಂಬುದು ತಿಳಿದಿರದಿದ್ದರೆ, ಹೊರಗಿನ ಸನ್ನಿವೇಶವನ್ನು ಹೇಗೆ ನಿರ್ವಹಿಸಲು ಸಾಧ್ಯ?
ನಿಮಗೆ ನೀವೇ ಸಂಕಟ, ನರಳಾಟ, ತೊಳಲಾಟವನ್ನು ಉಂಟುಮಾಡಿಕೊಳ್ಳುತ್ತಿದ್ದೀರಾ ಎಂದರೆ, ಸಹಜವಾಗಿಯೇ ಮನಸ್ಸನ್ನು ನಿರ್ವಹಿಸುವುದು ಹೇಗೆ ಎಂಬುದು ತಿಳಿದಿಲ್ಲ. ಜನರು ನಿಮ್ಮ ಎದುರು ವಿವಿಧ ರೀತಿಯ ಸನ್ನಿವೇಶಗಳನ್ನು ಸೃಷ್ಟಿಸುತ್ತಾರೆ, ಆದರೆ ತೊಳಲಾಟ ಉಂಟುಮಾಡಿಕೊಂಡಿದ್ದು ನೀವೇ. ಉದಾಹರಣೆಗೆ, ನಾನು ನಿಮ್ಮನ್ನು ‘ಈಡಿಯಟ್’ ಎಂದು ಕರೆದರೆ, ನೀವು ನಿಮಗೇ ನರಳಾಟ ಉಂಟುಮಾಡಿಕೊಳ್ಳುವಿರಿ. ‘ಈಡಿಯಟ್’ ಎಂಬ ಶಬ್ದ ತೊಳಲಾಟ ಉಂಟುಮಾಡುವುದಿಲ್ಲ. ಇಂಗ್ಲಿಷ್ ತಿಳಿದಿರದಿದ್ದರೆ, ಯಾರೋ ನಿಮ್ಮನ್ನು ಈಡಿಯಟ್ ಎಂದು ಕರೆದರೆ, ನೀವು ಆತ ‘ಗುಡ್ ಮಾರ್ನಿಂಗ್’ ಎನ್ನುತ್ತಿದ್ದಾನೆ ಎಂದುಕೊಳ್ಳಬಹುದು. ಆದ್ದರಿಂದ ನೀವೇ ನರಳಾಟ ಉಂಟುಮಾಡಿಕೊಳ್ಳುತ್ತಿರುವಿರಿ ಎಂದಾದರೆ, ನಿಮ್ಮೊಳಗಿನ ಮೂಲಭೂತ ಸಂಗತಿಗಳು ನಿಯಂತ್ರಣ ತಪ್ಪಿವೆ ಎಂದರ್ಥ.
ಜೀವನದಲ್ಲಿ ಯಾವುದೇ ಉಪಕರಣ ಉಪಯೋಗಕ್ಕೆ ಬರುವುದು ಅವುಗಳು ನಿಮ್ಮ ಸೂಚನೆಗಳನ್ನು ತೆಗೆದುಕೊಂಡರೆ ಹಾಗೂ ನೀವೇ ನಿರ್ವಹಿಸುತ್ತಿದ್ದರೆ ಮಾತ್ರ. ಮನಸ್ಸಿನ ಸ್ಥಿತಿ ಹೇಗಿದೆಯೆಂದರೆ ಅದು ತನ್ನದೇ ಸಂಗತಿಗಳನ್ನು ಹೇಳುತ್ತದೆ, ನಮ್ಮ ಮಾತನ್ನು ಕೇಳುವುದಿಲ್ಲ. ಮನಸ್ಸು ನೀವು ಹೇಳಿದ್ದನ್ನು ಮಾಡುತ್ತಿಲ್ಲ, ನೀವು ಮನಸ್ಸು ಹೇಳಿದ್ದನ್ನೆಲ್ಲ ಮಾಡುತ್ತಿರುವಿರಿ. ಹಾಗಾದರೆ, ನೀವೊಬ್ಬ ಕೆಟ್ಟ ನಿರ್ವಾಹಕ. ನೀವು ಹೀಗಿದ್ದರೆ, ಹೊರಗಿನ ಸನ್ನಿವೇಶಗಳನ್ನು ಕೇವಲ ಆಕಸ್ಮಿಕವಾಗಿ ನಿರ್ವಹಿಸುವಿರಷ್ಟೆ.
ವ್ಯವಸ್ಥಿತ ಮನಸ್ಸು: ಯೋಗದಲ್ಲಿ, ಸರಿಯಾಗಿ ಸ್ಥಾಪಿತವಾದ ಮನಸ್ಸನ್ನು ಕಲ್ಪವೃಕ್ಷ ಎಂದು ಕರೆಯುತ್ತಾರೆ. ಮನಸ್ಸನ್ನು ಒಂದು ಹಂತದ ವ್ಯವಸ್ಥೆಗೆ ತಂದರೆ, ಅದು ತನ್ಮೂಲಕ ಇತರ ಮೂರು ಆಯಾಮಗಳಾದ ದೇಹ, ಭಾವನೆ ಮತ್ತು ಪ್ರಾಣಶಕ್ತಿಗಳನ್ನು ವ್ಯವಸ್ಥಿತಗೊಳಿಸುತ್ತದೆ. ಮನಸ್ಸನ್ನು ಒಂದು ದಿಕ್ಕಿನಲ್ಲಿ ವ್ಯವಸ್ಥಿತಗೊಳಿಸಿ, ಆ ಮೂಲಕ ಇಡೀ ಶರೀರ ವ್ಯವಸ್ಥೆಯನ್ನು ಆ ದಿಕ್ಕಿನಲ್ಲಿ ನಿರ್ವಹಿಸಿದರೆ, ಬದಲಾವಣೆ ಖಂಡಿತ. ಈ ನಾಲ್ಕು ಆಯಾಮಗಳನ್ನು ಒಂದು ದಿಕ್ಕಿನಲ್ಲಿ ವ್ಯವಸ್ಥಿತಗೊಳಿಸಿ, ಒಂದು ನಿರ್ದಿಷ್ಟ ಸಮಯದವರೆಗೆ ಅಚಲವಾಗಿ ಇಟ್ಟರೆ, ಬಯಸಿದ್ದೆಲ್ಲ ಸಂಭವಿಸುತ್ತದೆ.
ಮನಸ್ಸಿನೊಂದಿಗೆ ಸದ್ಯಕ್ಕಿರುವ ಸಮಸ್ಯೆಯೆಂದರೆ ಅದು ಪ್ರತಿಕ್ಷಣವೂ ದಿಕ್ಕು ಬದಲಿಸುತ್ತಿರುತ್ತದೆ. ಎಲ್ಲಿಗೋ ನಡೆದು ಹೋಗುತ್ತಿರುವಿರಿ ಹಾಗೂ ಪ್ರತಿ ಎರಡು ಹೆಜ್ಜೆಗೆ ದಿಕ್ಕು ಬದಲಿಸುತ್ತಿರುವಿರಿ ಎಂದರೆ, ಗುರಿಯನ್ನು ತಲುಪುವ ಸಾಧ್ಯತೆಗಳು ಅತಿ ವಿರಳ. ಮನಸ್ಸನ್ನು ಒಂದು ದಿಕ್ಕಿನಲ್ಲಿ ವ್ಯವಸ್ಥಿತಗೊಳಿಸಿ, ಆ ಮೂಲಕ ಶರೀರ ವ್ಯವಸ್ಥೆಯನ್ನು ಆ ದಿಕ್ಕಿನಲ್ಲಿ ನಿರ್ವಹಿಸಿದರೆ, ಬಯಸಿದ್ದೆಲ್ಲ ಸಂಭವಿಸುತ್ತದೆ.
(ಸದ್ಗುರು ಅವರು ಯೋಗಿ, ದಾರ್ಶನಿಕ, ಆಧ್ಯಾತ್ಮಿಕ ನಾಯಕ. www.isha.sadhguru.org)