ಮಕ್ಕಳನ್ನ ಹೇಗೆ ನೋಡ್ಕೊಳ್ಲಿ? ಇದು ನಿಮ್ಮೊಬ್ಬರ ಪ್ರಶ್ನೆಯಲ್ಲ

children
Published on

ಮೃದು ಕೂದಲು, ನಿಷ್ಪಾಪಿ ಕಣ್ಣುಗಳು, ಉಬ್ಬುಗಲ್ಲ, ಹಾಲುಮೈಯಿ, ಗುಲಾಬಿ ವರ್ಣದ ಅಂಗೈ ಅಂಗಾಲು ಒಮ್ಮೆ ನೋಡಿದರೆ ಮತ್ತೊಮ್ಮೆ, ಮಗುದೊಮ್ಮೆ ನೋಡಬೇಕೆನಿಸುವ ಚೆಲುವು, ಹೂಮನದ ಮಕ್ಕಳದು. ಎಳೆಯ ಮಕ್ಕಳ ಅಮ್ಮಂದಿರು ಅದರಲ್ಲೂ ಮಹಾನಗರವಾಸಿ ಉದ್ಯೋಗಸ್ಥರು ಈಗ ಚಿಂತಾಕ್ರಾಂತರಾಗಿದ್ದಾರೆ.

ಕರೊನಾ ಭೀತಿಯಿಂದಾಗಿ ಹಲವಾರು ಡೇ ಕೇರ್ ಸೆಂಟರ್​ಗಳು ಮುಚ್ಚಿವೆ. ಪ್ರೆಸ್ಟೀಜ್, ದುಡ್ಡು ಅಥವಾ ಅನಿವಾರ್ಯತೆಯಿಂದಾಗಿ ಎಷ್ಟೋ ಅಮ್ಮಂದಿರಿಗೆ ಕೆಲಸ ಮಾಡಬೇಕಾದ ಅನಿವಾರ್ಯತೆ. ಅವರ ಮಕ್ಕಳಿಗೆ ಡೇಕೇರ್​ಗಳೇ ಮನೆ. ಇಂಥ ಅಮ್ಮಂದಿರಿಗೀಗ ಬರಸಿಡಿಲು ಬಡಿದಂತಾಗಿದೆ. ಕೂಡು ಕುಟುಂಬಗಳ ಮಹತ್ವದ ಅರಿವು ಈಗಾಗುತ್ತಿದ್ದರೂ ಕಾಲ ಮಿಂಚಿದೆ!

ಎಷ್ಟೆಲ್ಲ ಖರ್ಚುವೆಚ್ಚಗಳನ್ನು ಭರಿಸಿ ಶ್ರಮಪಟ್ಟು ಓದಿದ್ದೇನೆ. ನಮ್ಮ ಅರ್ಹತೆಗೆ ಯೋಗ್ಯ ಕೆಲಸ ಹಿಡಿದಿದ್ದೇನೆೆ. ಈಗ ಇದೇನಾಗಿ ಹೋಗಿದೆ. ಏನು ಮಾಡುವುದು ಎನ್ನುವ ಆತಂಕ, ಗೊಂದಲಗಳಲ್ಲಿ ಅವರು ಮುಳುಗಿಹೋಗಿದ್ದಾರೆ. ಹೆಚ್ಚಿನವರ ಬುದ್ಧಿ ಉದ್ಯೋಗ, ಮಹತ್ವಾಕಾಂಕ್ಷೆ, ಕರಿಯರ್ ಹಿಂದೆ ಬಿದ್ದಿದೆ. ಅವರ ದಾಂಪತ್ಯದ ಕುರುಹಾಗಿ ಹುಟ್ಟಿ ಮಡಿಲು ತುಂಬಿ ಬೆಳೆಯುತ್ತಿರುವ ಅವರದೇ ಸಂತಾನವನ್ನು ಹಾಗೂ ಗಳಿಸಿದ ಉದ್ಯೋಗವನ್ನು ಸುರಕ್ಷಿತವಾಗಿ ಉಳಿಸಿಕೊಳ್ಳುವುದು ಹೇಗೆ ಎಂಬ ಈ ತಾಯಂದಿರ ಚಿಂತೆಗೆ ಕಾರಣವೇನೆಂದರೆ ಬೇಬಿ ಕೇರ್, ಡೇ ಕೇರ್, ನರ್ಸರಿಗಳೆಲ್ಲವುಗಳು ಸರಕಾರದ ಆದೇಶದ ಮೇರೆಗೆ ಅನಿರ್ದಿಷ್ಟ ಅವಧಿಯವರೆಗೆ ಬಾಗಿಲು ಮುಚ್ಚಿವೆ. ಎಲ್ಲೆಲ್ಲೂ ಕರೊನಾ ಭೀತಿ!

ಜಾಗತಿಕ ಆರೋಗ್ಯ ಸಂಸ್ಥೆ, ಕೋವಿಡ್ 19 ರೋಗವನ್ನು ಗ್ಲೋಬಲ್ ಪ್ಯಾಂಡೆಮಿಕ್ ( ಜಾಗತಿಕ ಆಪತ್ತು) ಎಂದು ಘೊಷಿಸಿದೆ. ಮಣು, ನೀರು, ಗಾಳಿ, ಅರಣ್ಯ ನಾಶಕ್ಕೆ ಬಹು ದೊಡ್ಡ ಕೊಡುಗೆ ನೀಡಿರುವ ಮನುಷ್ಯರು ತಮ್ಮ ತಪ್ಪಿಗೆ ಬಹುದೊಡ್ಡ ಬೆಲೆ ತೆರಬೇಕಾದ ಸಂಕಷ್ಟ ಕಾಲ. ಮನುಷ್ಯ ಸಂಬಂಧಗಳ ಮಹತ್ವವನ್ನು ಮರುಪರಿಶೀಲನೆ ಮಾಡುವ ಸಂದರ್ಭವನ್ನು ಈ ರೋಗ ನಮಗೆ ತಂದಿತ್ತಿದೆ.

ಹೇಗಿತ್ತು ಹಿಂದೆ?: ಬದುಕನ್ನು ಜೀವ ಕೇಂದ್ರಿತ ನೆಲೆಯಲ್ಲಿ ನೋಡಿದರೆ ಭೂಮಿಯ ಮೇಲೆ ಸಕಲ ಜೀವಿಗಳಿಗೂ ನಮ್ಮಷ್ಟೇ ಬದುಕುವ ಹಕ್ಕಿದೆ. ಸರ್ವೆ ಜನಾಃ ಸುಖಿನೋ ಭವಂತು ಇಂತಹ ಮಾತನ್ನು ಹೇಳುತ್ತಲೇ ಮೊಮ್ಮಕ್ಕಳನ್ನು ಬೆಳೆಸುತ್ತಿದ್ದ ಹಿರಿಯರೊಡಗೂಡಿಯೇ ಸಂಸಾರವಿರುತ್ತಿತ್ತು. ಕೆಲವು ಮನೆಯಲ್ಲಿ ಹತ್ತಾರು ಜನ, ಹಲವು ಕುಟುಂಬಗಳಲ್ಲಿ ನೂರಾರು ಜನರು ಸೇರಿ ಬಾಳುತ್ತಿದ್ದರು. ಕಳೆದ ನಾಲ್ಕು ದಶಕಗಳಿಂದೀಚೆಗೆ ಬಹುತೇಕ ಅವಿಭಕ್ತ ಕುಟುಂಬಗಳೆಲ್ಲ ವಿಭಕ್ತ ಕುಟುಂಬಗಳಾದವು. ವಿದ್ಯಾವಂತರ ಎಗ್ಗಿಲ್ಲದ ನಗರವಲಸೆ ಇದಕ್ಕೆ ಬಹು ಮುಖ್ಯ ಕಾರಣ. ವಿಭಕ್ತ ಕುಟುಂಭದಲ್ಲಿ ಹೆಚ್ಚು ಕಷ್ಟ ಅನುಭವಿಸಿದವರು ಮಕ್ಕಳು. ಅವರು ಆಡಿ ಬೆಳೆಯಲು ಸ್ವಚ್ಛ, ಶುದ್ಧ, ವಿಶಾಲವಾದ ಹಳ್ಳಿಯ ಪರಿಸರವೂ ದೊರೆಯಲಿಲ್ಲ. ಕತೆ ಹೇಳುವ ಅಜ್ಜ ಅಜ್ಜಿಯರ ಮಡಿಲು, ಊರಿಡಿ ಸುತ್ತಿಸಿ ಮೆರೆಸುವ ಚಿಕ್ಕಪ್ಪ, ದೊಡ್ಡಪ್ಪಂದಿರ ಹೆಗಲು, ಅಮ್ಮನ ಮಮತೆಯಷ್ಟೇ ಹಿತವೆನಿಸುವ ಅತ್ತೆ ಚಿಕ್ಕಮ್ಮಂದಿರ ಬಗಲು.. ಹೀಗೆ ಎಲ್ಲವುಗಳಿಂದ ಬಹು ದೂರದಲ್ಲಿ ಬೆಳೆಯುತ್ತಿರುವ ನಗರವಾಸಿ ಮಕ್ಕಳಿಗೆ ಪೆಟ್ಟಿಗೆಯಂತಹ ಮನೆಯಲ್ಲಿ ಅಪ್ಪ ಅಮ್ಮನೇ ಎಲ್ಲವೂ ಆಗಬೇಕಾದ ಅನಿವಾರ್ಯತೆ. ಅನೇಕರಿಗೆ ಏಕ ಸಂತಾನ. ಈ ಸ್ಥಿತಿ ನಮ್ಮದೇ ಸೃಷ್ಟಿ! ದುಡ್ಡಿದ್ದರೆ ಸಾಕು. ಬದುಕಿಗೆ ಬೇಕಾದ ಎಲ್ಲ ಸುಖ ಸೌಲಭ್ಯವನ್ನೂ ನಾವು ಸೂರೆ ಮಾಡಬಲ್ಲೆವು ಎಂಬ ಭಾವವನ್ನು ನಿಕಷಕ್ಕೊಡ್ಡುವ ಪರಿಸ್ಥಿತಿ ಈಗ ಬಂದಿದೆ.

ಅಪ್ಪ ಅಮ್ಮ ಇಬ್ಬರೂ ದುಡಿಯಲೇ ಬೇಕಾಗಿದ್ದು ಕೆಲವು ಕುಟುಂಬಗಳಲ್ಲಿ ಅನಿವಾರ್ಯ. ಕೆಲವರು ಐಷಾರಾಮಿ ಜೀವನದ ಸಾಕ್ಷಾತ್ಕಾರಕ್ಕಾಗಿ ದುಡಿಯುತ್ತಿದ್ದಾರೆ. ಇನ್ನೂ ಹಲವರು ಮಹತ್ವಾಕಾಂಕ್ಷೆಗೆ ದುಡಿಯುತ್ತಿದ್ದಾರೆ. ಮಕ್ಕಳಿಗೆ ಸಮಯ ಕೊಡಲು ಇವರಿಗೆ ಬಿಡುವಿಲ್ಲ. ಆದರೆ ಅವರಿಗೆ ವ್ಯವಸ್ಥೆ ಮಾಡಲು ಹಣವಿದೆ. ಅಂಥವರ ಅನಿವಾರ್ಯತೆಗಳನ್ನು ಗಮನಿಸಿಯೇ ಕಳೆದೆರಡು ದಶಕಗಳಲ್ಲಿ ಹೊಸ ಉದ್ಯೋಗಗಳು ಸೃಷ್ಟಿಯಾಗಿವೆ. ಅದು ಡೇ ಕೇರ್, ಬೇಬಿ ಸಿಟ್ಟಿಂಗ್.. ರೂಪದಲ್ಲಿ. ‘ತಿಂಗಳಿಗೆ ನೀವಿಷ್ಟು ಹಣ ಕೊಡಿ, ನಿಮ್ಮ ಮಕ್ಕಳನ್ನು ಇಲ್ಲಿ ತಂದು ಬಿಡಿ. ನಾವಿದ್ದೇವೆ ಅವರನ್ನು ಬೆಳೆಸಲು’ ಎನ್ನುವ ಈ ಉದ್ಯಮದಲ್ಲಿ ಕೆಲವರು ಮಾತ್ರ ನೈಜ ಕಾಳಜಿಯವರು. ಇನ್ನು ಅನೇಕರು ಮಕ್ಕಳನ್ನು ನಿಷ್ಕಾಳಜಿಯಿಂದ ನೋಡುವುದು, ತಂಟೆ ಮಾಡುವ ಹುಡುಗರಿಗೆ ಮತ್ತು ಬರುವ ಮಾತ್ರೆ ನುಂಗಿಸಿ ಮಲಗಿಸುವುದು.. ಇಂತಹ ಕೃತ್ಯವೆಸಗುತ್ತಾರೆ. ತಮ್ಮ ಕಷ್ಟವನ್ನು ಸರಿಯಾಗಿ ಹೇಳಲೂ ಬಾರದ ಮಕ್ಕಳ ಪರಿಸ್ಥಿತಿಯನ್ನು ನಾವು ಊಹೆ ಮಾಡಿ ತಿಳಿಯಬೇಕಷ್ಟೇ.

ನಿಮ್ಮ ಮಗುವನ್ನು ಹೇಗೆ ಜೋಪಾನ ಮಾಡುತ್ತಿದ್ದೀರಿ? ಸಾಫ್ಟ್​ವೇರ್ ಉದ್ಯೋಗಿ ದಿವ್ಯಾ ವಿಶಾಲ್ ಅವರನ್ನು ವಿಚಾರಿಸಿದಾಗ, ಅವರು ‘ಈ ಸಮಸ್ಯೆ ಶುರುವಾದ ಆರಂಭದಲ್ಲಿ ಗಂಡ ಹೆಂಡತಿ ಇಬ್ಬರಲ್ಲಿ ಒಬ್ಬರು ರಜೆ ಹಾಕಿಕೊಂಡು ನಮ್ಮ ಮೂರು ವರ್ಷದ ಮಗನನ್ನು ನೋಡಿಕೊಂಡೆವು. ನಂತರ ವರ್ಕ್ ಫ್ರಾಂ ಹೋಮ್ ಎಂದು ಮನೆಯಲ್ಲೇ ಕಂಪನಿಯ ಕೆಲಸ ಮಾಡಿದೆವು...ನಮ್ಮ ಅತ್ತೆ ಮಾವ, ಅಪ್ಪ ಅಮ್ಮನೂ ನಮಗೆ ಬೆಂಬಲ ನೀಡುತ್ತಿದ್ದಾರೆ. ಮಕ್ಕಳ ಕಾಳಜಿಗೆ ಮೊದಲ ಆದ್ಯತೆ. ನಂತರ ಉಳಿದಿದ್ದು. ಪಾಪ ಅವರು ಅವರ ರಕ್ಷಣೆ ಮಾಡಿಕೊಳ್ಳಲಾರದ ಅಸಹಾಯಕರು’ ಎಂದರು.

ಇನ್ನೊಬ್ಬ, ಸಾಫ್ಟವೇರ್ ಕಂಪನಿಯ ಉದ್ಯೋಗಿ ಕಿರಣ್ ಭಟ್ಟ ‘ಸಮಸ್ಯೆ ಆಗಿದೆ ನಿಜ. ಆದರೆ ಎಲ್ಲ ಅಪ್ಪ ಅಮ್ಮಂದಿರೂ ನೆನಪಿಡಬೇಕು. ಮಕ್ಕಳು ನಾವೇ ಈ ಭೂಮಿಗೆ ಕರೆದು ತಂದ ಅತಿಥಿಗಳು. ಅವರನ್ನು ಕಾಳಜಿ ಮಾಡುವುದು ನಮ್ಮದೇ ಹೊಣೆ. ಕಂಪನಿಯ ಕೆಲಸವನ್ನು ಮನೆಯಲ್ಲಿ ಮಾಡಿಕೊಂಡು ಮಕ್ಕಳ ಕಾಳಜಿಯನ್ನೂ ಮಾಡಬೇಕು. ಇದು ಇನ್ನೂ ಮುಂದುವರೆದರೆ ಕರೊನಾಕ್ಕೆ ಲಸಿಕೆ ಬರುವವರೆಗೆ ವೇತನರಹಿತವಾದ ರಜೆ ತೆಗೆದುಕೊಂಡಾದರೂ ಮಕ್ಕಳನ್ನು ನೋಡಿಕೊಳ್ಳಲೇಬೇಕು. ಬದುಕಿದ್ದರೆ ತಾನೇ ಉಳಿದ ಸಂಗತಿಗಳು ಬೇಕಾಗುವುದು. ಬದುಕಿನ ಆದ್ಯತೆಯಾವುದಕ್ಕೆ ಎಂಬುದನ್ನು ನಿರ್ಣಯಿಸಬೇಕು ಎಂದರು. ಇದು ನಿಜ ತಾನೆ?

ಹೀಗೆ ಮಾಡಿ: ಕರೊನಾ ತಂದ ಈ ಬಿಕ್ಕಟ್ಟು ಮಕ್ಕಳೊಂದಿಗೆ ಇರುವ ಅವಕಾಶವನ್ನು ಕಲ್ಪಿಸಿದೆ ಎಂದುಕೊಳ್ಳಬೇಕು. ಮಕ್ಕಳಿಗೆ ಹೆಚ್ಚು ಪೋಷಕಾಂಶಯುಕ್ತ ಆಹಾರವನ್ನು ತಿನ್ನಿಸಬೇಕು. ಮನೆಯಲ್ಲಿಯೇ ಮಾಡಿದ ಅಡುಗೆ, ಪಾನೀಯಗಳು ಆರೋಗ್ಯಕ್ಕೆ ಹಿತ ಎನ್ನುವುದನ್ನು ಮಕ್ಕಳಿಗೆ ಮನವರಿಕೆ ಮಾಡಬೇಕು. ಮೂರ್ನಾಲ್ಕು ವರ್ಷ ಮೇಲ್ಪಟ್ಟ ಮಕ್ಕಳಿಗೆ ರೋಗದ ಅನಾಹುತದ ಬಗ್ಗೆ ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿಕೊಡಬೇಕು. ಮಕ್ಕಳೊಂದಿಗೆ ಒಳಾಂಗಣ ಕ್ರೀಡೆ, ಪೇಂಟಿಂಗ್, ಹಾಡು, ಕುಣಿತ.. ಹೀಗೆ ಮಕ್ಕಳ ಆಸಕ್ತಿಗೆ ಪೂರಕವಾದ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಹಿರಿಯರ ಜತೆ ಮನಸ್ತಾಪಗಳಿದ್ದರೆ ಅದನ್ನು ಮರೆತು ಫೋನ್ ಮೂಲಕವಾದರೂ ಮತ್ತೆ ಬಾಂಧವ್ಯ ವೃದ್ಧಿಸಿ ಕೊಳ್ಳಬೇಕು. ತಾವು ಸಮಾನ ಮನಸ್ಕ ಸ್ನೇಹಿತೆಯರಿದ್ದರೆ, ಪರಿಚಿತರಿದ್ದರೆ, ಫೋನಲ್ಲಿ ಆಗಾಗ ಮಾತಾಡಿಸುತ್ತಿರಬೇಕು. ಸುನಾಮಿ ನೆರೆಹಾವಳಿ.. ಹೀಗೆ ಸಾವಿನ ಆತಂಕ ಹೆಚ್ಚಾದಾಗಲೆಲ್ಲ ಮನುಷ್ಯತ್ವ ಮುನ್ನೆಲೆಗೆ ಬಂದಿದೆ. ಈಗಲೂ ಹಾಗಾಗಬೇಕು. ಅಮ್ಮಂದಿರೇ, ಕರೊನಾ ಆತಂಕವನ್ನು ಎಚ್ಚರಿಕೆಯಿಂದ ಎದುರಿಸಿ. ಮಳೆಗಾಲದಲ್ಲಿ ಬಗ್ಗಡವಾದ ನೀರು ನಿಧಾನವಾಗಿ ತಿಳಿಯಾಗುತ್ತದೆ. ಪರಿಸ್ಥಿತಿ ನಿರಾತಂಕವಾಗುವವರೆಗೂ ಸಂಯಮದಿಂದಿದ್ದು ಮಕ್ಕಳನ್ನು ಈ ಮಹಾಮಾರಿಯಿಂದ ಬಚಾವ್ ಮಾಡಿ.

ಪರಿಸ್ಥಿತಿಯನ್ನು ನಿಭಾಯಿಸುವುದು ಹೇಗೆ?: ಡೇ ಕೇರ್, ಬೇಬಿ ಸಿಟ್ಟಿಂಗ್​ಗಳ ಮೇಲಿನ ನಿಷೇಧವನ್ನು ತೆಗೆಸಿ ಪುನಃ ಆರಂಭಿಸಲು ಒತ್ತಾಯಿಸಬೇಕೆಂಬ ಅನೇಕ ಅಮ್ಮಂದಿರ ವಿಚಾರ ಮಾಡುತ್ತಿದ್ದಾರೆ ಎಂಬುದು ಆಘಾತಕಾರಿ. ಕರೊನಾ ವೈರಸ್ಸು ಹಬ್ಬುತ್ತಿರುವ ವೇಗವನ್ನೂ ಸರಿಯಾದ ಚಿಕಿತ್ಸೆ ಇಲ್ಲದೆ ಸಾಯುತ್ತಿರುವವರ ಸಂಖ್ಯೆಯನ್ನೂ ಇವರು ಗಮನಿಸುವುದು ಒಳಿತು. ಆ ರೋಗ ಬಾರದಂತೆ ವಹಿಸುವ ಎಚ್ಚರಿಕೆಯನ್ನು ಎಳೆಯ ಮಕ್ಕಳು ಸ್ವತಂತ್ರವಾಗಿ ನಿರ್ವಹಿಸಲಾರರು. ಒಂದು ಮಗುವಿಗೆ ಆ ಸೋಂಕು ತಗುಲಿದರೆ ಉಳಿದ ಮಕ್ಕಳಿಗೂ ಅದು ಸುಲಭವಾಗಿ ಬರುವ ಸಾಧ್ಯತೆ ಇದೆ. ಮಕ್ಕಳಿಗೆ ಬಂದ ಮೇಲೆ ಅವರ ಪಾಲಕರಿಗೆ, ಅವರಿಂದ ಇತರರಿಗೆ.

ರಾಹು- ಕೇತು?: ಮಕ್ಕಳನ್ನು ತಮ್ಮ ಗೈರು ಹಾಜರಿಯಲ್ಲಿ ಅತ್ತೆಯ ಕೈಗೋ, ಅಮ್ಮನ ಕೈಗೋ ಒಪ್ಪಿಸಿ ಹೋಗುವ ಅನುಕೂಲ ಎಲ್ಲ ಪಾಲಕರಿಗೂ ಇದೆಯೇ ಎಂದು ವಿಚಾರ ಮಾಡಿದರೆ ಅದೂ ಇಲ್ಲ. ಕೆಲವು ಹುಡುಗಿಯರು ರಾಹು ಕೇತು(ಅತ್ತೆ ಮಾವ) ಇರುವ ಕುಟುಂಬಕ್ಕೆ ತಮ್ಮನ್ನು ಕೊಡಬೇಡಿ ಎಂದು ಮದುವೆಯಾಗುವಾಗಲೇ ಷರತ್ತು ವಿಧಿಸಿರುತ್ತಾರೆ! ಮಕ್ಕಳನ್ನು ಬೆಳೆಸಲು ತಮ್ಮ ಪಾಲಕರನ್ನು ಅವಲಂಬಿಸಿದರೆ ಮುಂದೆ ಅವರ ವೃದ್ಧಾಪ್ಯದಲ್ಲಿ ತಾವೇ ಹೊಣೆ ಹೊರಬೇಕಾಗಿ ಬಂದೀತು ಎಂಬ ಲೆಕ್ಕಾಚಾರ ಕೆಲವರಿಗೆ. ಮೊಮ್ಮಕ್ಕಳನ್ನು ನೋಡಿಕೊಳ್ಳುವಾಗ ಆಗುವ ಚಿಕ್ಕ ಪುಟ್ಟ ತಪ್ಪುಗಳೂ ದೊಡ್ಡ ಮನಸ್ತಾಪಗಳಾಗಿ ಮನಸ್ಸು ಕೆಡಿಸಿಕೊಂಡವರು ಅನೇಕರು. ಅನೇಕ ಅಜ್ಜ ಅಜ್ಜಿಯಂದಿರಿಗೆ ಹಳ್ಳಿ ಮನೆಯನ್ನು ಬಿಟ್ಟು ಬರಲಾರದ ಅನಿವಾರ್ಯತೆ. ಮತ್ತೆ ಕೆಲವರಿಗೆ ಇಷ್ಟು ವರ್ಷ ಮಕ್ಕಳನ್ನು ಬೆಳೆಸುವ ಜಂಜಾಟ ಕಂಡಿದ್ದಾಯ್ತು, ವೃದ್ಧಾಪ್ಯದಲ್ಲಿಯಾದರೂ ದೇವರ ಧ್ಯಾನವನ್ನು ಮಾಡುತ್ತ ನೆಮ್ಮದಿಯಿಂದ ಕಾಲ ಹಾಕಿದರಾಯ್ತು ಎನ್ನುವ ಧೋರಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net