

ಒಂದು ಹಳ್ಳಿಯ ರೈತದಂಪತಿಗೆ ಒಬ್ಬನೇ ಮಗನಿದ್ದ. ಮಗನ ವಯಸ್ಸು ಬಾಲ್ಯದಿಂದ ಪ್ರೌಢಾವಸ್ಥೆಗೆ ತಿರುಗಿದರೂ ಆತ ಯಾವೊಂದು ವೃತ್ತಿನೈಪುಣ್ಯದಲ್ಲಿ ಆಸಕ್ತಿ ತೋರದೆ, ಮನೆಗೆಲಸದ ಕಡೆಗೂ ಮನಸ್ಸು ಮಾಡದೇ ವ್ಯರ್ಥವಾಗಿ ಊರೂರು ಅಲೆಯುತ್ತಿದ್ದ. ಸಮಯ ಹಾಳು ಮಾಡುತ್ತಿದ್ದ. ಮಗನಿಗೆ ವಯೋಮಾನಕ್ಕೆ ತಕ್ಕುದಾದ ಜವಾಬ್ದಾರಿ ಬಂದಿಲ್ಲ ಎಂಬ ಕೊರಗು ರೈತನ ಮನದಲ್ಲಿ ಕಾಡತೊಡಗಿತು. ಹೇಗಾದರೂ ಮಾಡಿ ಮಗನನ್ನು ಹಂತಹಂತವಾಗಿ ಸರಿದಾರಿಗೆ ತರಬೇಕೆಂದು ಬಯಸಿ, ಉಪಾಯಗಳನ್ನು ಹುಡುಕತೊಡಗಿದ.
ಆತ ಒಂದು ದಿನ ಮಗನನ್ನು ತೋಟದ ಬಳಿ ಕರೆದುಕೊಂಡು ಹೋದ. ತೋಟದ ಪಕ್ಕದಲ್ಲಿ ಸಣ್ಣ ಝುರಿ ಹರಿದು ಹೋಗುತ್ತಿತ್ತು. ರೈತನು ಆ ಝುರಿಯ ಮಾರ್ಗವನ್ನು ಬದಲಿಸಿ, ನೀರು ತೋಟದ ತುಂಬೆಲ್ಲ ಹರಿಯುವಂತೆ ವ್ಯವಸ್ಥೆ ಮಾಡಿದ್ದ. ಮಗನಿಗೆ ಅದನ್ನು ತೋರಿಸುತ್ತ, ‘ನೋಡು ನಾನು ಈ ಝುರಿಯ ಹರಿವಿನ ಮಾರ್ಗ ಬದಲಿಸಿದ್ದರಿಂದ ನೀರು ನಮ್ಮ ತೋಟದ ಬೆಳೆಗೆ ನೀರುಣಿಸಿ ಮುಂದೆ ಹರಿಯುತ್ತಿದೆ. ಇಲ್ಲಿ ನೀರಿನ ಹರಿವಿನ ಪಥ ಬದಲಿಸಿ, ಆ ನೀರನ್ನು ತೋಟದ ಬೆಳೆ ಬೆಳೆಯಲು ಹೇಗೆ ಉಪಯೋಗಿಸಿಕೊಂಡೆನೋ ಹಾಗೆ ಚಂಚಲವಾದ ನಿನ್ನ ಮನಸ್ಸಿಗೂ ಕಡಿವಾಣವಿರಿಸಿ ಸೂಕ್ತ ಸಾಧನೆಯೆಡೆಗೆ ಅದನ್ನು ತಿರುಗಿಸಿ ಜವಾಬ್ದಾರಿಯ ದಾರಿಯಲ್ಲಿ ನಡೆಸಬೇಕು. ಆಗ ನಿನ್ನ ಬದುಕು ಹಸಿರಾಗಿರುವ ತೋಟದಂತೆ ಚೈತನ್ಯದಾಯಕವಾಗಿ ಇರುತ್ತದೆ, ಸಾರ್ಥಕತೆಯತ್ತ ಸಾಗುತ್ತದೆ’ ಎಂದು ಹೇಳಿದ. ಅಪ್ಪನ ಈ ಪ್ರಾತ್ಯಕ್ಷಿಕೆ ಮತ್ತು ಬುದ್ಧಿಮಾತಿನಿಂದ ಪ್ರಭಾವಿತನಾದ ಮಗ ಬದಲಾದ. ಜೀವನದಲ್ಲಿ ಏನಾದರೂ ಸಾಧಿಸಬೇಕು ಎಂಬತ್ತ ಮನಮಾಡಿದ. ಇತ್ತ ತಂದೆಗೂ ಇದರಿಂದ ನೆಮ್ಮದಿಯಾಯಿತು.
‘ಮನವು ಮರ್ಕಟದಂತೆ’ ಎಂದು ಹಿರಿಯರು ಹೇಳಿದ್ದಾರೆ. ಕಡಿವಾಣವಿಲ್ಲದ ಮನವು ಎಲ್ಲೆಲ್ಲೋ ಅಲೆದಲೆದು, ಕೊನೆಗೆ ಎಲ್ಲಿಯೂ ಸರಿಯಾದ ಆಶ್ರಯ ಸಿಗದೇ ಬಲಿಯಾಗುತ್ತದೆ. ಅಂಕೆಯಿಲ್ಲದ ನಮ್ಮ ವಿಚಾರಗಳು, ನಡೆಗಳು ಎಂದಿಗೂ ಸುಖಮಯ ಅಂತ್ಯ ಕಾಣಲಾರವು. ಮನವನ್ನು ನಿರ್ದಿಷ್ಟವಾದ ಕಾಯಕದತ್ತ ಕೇಂದ್ರೀಕರಿಸಿ ಸಾಧಿಸುವುದು ಕಷ್ಟಸಾಧ್ಯವೇನು ಅಲ್ಲ. ನಮ್ಮ ಮನಸ್ಸು ಶುದ್ಧನೀರಿನಂತೆ. ನೀರು ಕೆಸರಿನ ಮೇಲೆ ಹರಿದರೆ ಕೆಸರಾಗುತ್ತದೆ. ಮರಳಲ್ಲಿ ಬಿದ್ದರೆ ಬರಿದೆ ಆವಿಯಾಗುತ್ತದೆ. ಗಿಡದ ಬುಡದಲಿ ಹರಿದರೆ ಬೇರಿನ ದಾಹ ಇಂಗಿಸುತ್ತದೆ. ಹಾಗೆ ಮನವನ್ನು ಎಲ್ಲೆಂದರಲ್ಲಿ ಹರಿಬಿಡುವಾಗ ಈ ಜಾಗ್ರತೆ ನಮ್ಮೊಳಗೆ ಇರಬೇಕು. ನಮ್ಮ ಮನಸ್ಸನ್ನು ನಮ್ಮದೇ ಸುಂದರ ಚೌಕಟ್ಟಿನ ರಕ್ಷೆಯಲ್ಲಿಟ್ಟು ಅರಳಿಸೋಣ.
ಇರಲಿ ಅಂಕೆ ನಮ್ಮ ಮನದ ನಡೆಗೆ
ಬೇಡ ಶಂಕೆ ಇಲ್ಲಿ ಗೆಲುವಿದೆ ಕೊನೆಗೆ
ಮಣಿಯಲೇಕೆ ತೂಕವಿರದ ಕರೆಗೆ
ಅಣಿಯಾಗಲಿ ಮನವು ನಮ್ಮ ಗುರಿಗೆ
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)