

= ಪರೀಕ್ಷೆಗಳೆಂದರೆ ಶಿಕ್ಷೆಗಳಲ್ಲ; ನಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು, ಭವಿಷ್ಯವನ್ನು ರೂಪಿಸಲು, ಹಾಗೂ ನಮ್ಮ ಪ್ರಯತ್ನ ಪರಿಶ್ರಮಗಳಿಗೆ ತಕ್ಕ ಪ್ರಶಂಸೆ ಪ್ರತಿಫಲವನ್ನು ಪಡೆಯಲು ಒದಗಿರುವ ಒಂದು ಸದವಕಾಶವೆಂಬ ಮನೋಭಾವ ವಿದ್ಯಾರ್ಥಿಗಳಲ್ಲಿ ನಿರ್ವಣವಾಗಬೇಕು.
= ಹಿಂದಿನಿಂದಲೇ ನಡೆಯದ ಸಾಕಷ್ಟು ತಯಾರಿ, ಪರೀಕ್ಷೆಯ ದಿನ ಪ್ರಕಟವಾಗಿಲ್ಲ, ಆಮೇಲೆ ಓದಿ ಕೊಂಡರಾಯಿತು ಎಂಬ ಉದಾಸೀನದಿಂದ ಕಾಲಾವಕಾಶವನ್ನು ನೀಡದೆ, ನಿಮ್ಮನ್ನು ಒತ್ತಡಕ್ಕೆ ತಳ್ಳಬಹುದು.
= ವಿಷಯಗಳನ್ನು ಕಷ್ಟಪಟ್ಟು ಓದಬಾರದು; ಇಷ್ಟಪಟ್ಟು ಪ್ರೀತಿಯಿಂದ ಓದಬೇಕು. ಆಗ ಓದಿದ್ದೆ ಲ್ಲವೂ ಬಲುಬೇಗ ಅರ್ಥವಾಗುತ್ತದೆ ಹಾಗೂ ಬಹುಕಾಲ ಮರೆಯದೆ ಜ್ಞಾಪಕದಲ್ಲಿರುತ್ತದೆ. ವಿಷಯ ಅರ್ಥವಾಗುತ್ತಿಲ್ಲವೆಂದರೆ, ತಡಮಾಡದೆ ಶಿಕ್ಷಕರ, ಹಿರಿಯ ವಿದ್ಯಾರ್ಥಿಗಳ ನೆರವನ್ನು ಪಡೆದುಕೊಳ್ಳಬೇಕು.
= ಆಗಾಗ ಮಾಡಿಕೊಳ್ಳುವ ಸ್ವಯಂ ಮೌಲ್ಯಮಾಪನ ಕ್ರಮ ವಿಷಯಗಳ ಮೇಲೆ ಪ್ರಭುತ್ವವನ್ನು ತಂದು ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಪ್ರಶಾಂತ ಮನಸ್ಸು, ಮತ್ತು ಪರಿಸರ ಹಾಗೂ ಆಕರ್ಷಣೆ ಭಾವೋದ್ವೇಗಗಳಿಗೆ ಒಳಗಾಗದ ಮನೋಸ್ಥಿತಿ ಏಕಾಗ್ರತೆಯನ್ನು ಹೆಚ್ಚಿಸುತ್ತವೆ.
= ಅಧ್ಯಯನ ಮಾಡಲು ನಿರ್ದಿಷ್ಟ ವೇಳೆ, ವಿಧಾನ, ಸ್ಥಳಗಳನ್ನು ನಿಗದಿ ಮಾಡಿಕೊಳ್ಳಿ. ಓದಿದ ವಿಷಯವನ್ನು ಮಿದುಳಿನಲ್ಲಿ ಮುದ್ರಣ ಮಾಡಿಕೊಳ್ಳಲು ಪುನರಾವರ್ತನೆ, ಸ್ಮರಣೆ, ಮನನ, ಚಿಂತನ, ಮಂಥನಗಳು ಸಹಕಾರಿ. ಪೌಷ್ಠಿಕಾಂಶಗಳನ್ನೊಳಗೊಂಡ ಆಹಾರ, ನಿಯಮಿತ ವ್ಯಾಯಾಮ ಹಾಗೂ ಭಂಗವಿಲ್ಲದ ಸುಖ ನಿದ್ರೆಯಲ್ಲಿ ಕಡಿತ ಬೇಡ.
= ನಿಮ್ಮ ಸಾಮರ್ಥ್ಯದ ಬಗ್ಗೆ ಮೇಲರಿಮೆ, ಕೀಳರಿಮೆ, ಅನುಮಾನಗಳು ಬೇಡ. ಆತ್ಮ ವಿಶ್ವಾಸಗಳಿರಲಿ. ನಕಾರಾತ್ಮಕ ಯೋಚನೆಗಳಿಗೆ ಎಡೆಕೊಡದೆ ಸಕಾರಾತ್ಮಕ ಯೋಚನೆಗಳನ್ನೇ ಬೆಳೆಸಿಕೊಳ್ಳಬೇಕು.
= ಹೆತ್ತವರ ಬಹುಮಾನದ ಆಮಿಷ ಇಲ್ಲವೇ ಶಿಕ್ಷೆ, ಅವಮಾನಗಳ ಭಯ ಬೇಡ; ಪ್ರಾಮಾಣಿಕ ಪ್ರಯತ್ನ ಮಾತ್ರ ನಿಮ್ಮ ಕೆಲಸವಾಗಲಿ. ಫಲಿತಾಂಶದ ಬಗೆಗಿನ ಯೋಚನೆಯನ್ನು ಬಿಟ್ಟುಬಿಡಿ. ಪ್ರಯತ್ನತ್ಕೆ ತಕ್ಕುದಾದ ಪ್ರತಿಫಲ ಸಿಕ್ಕೇ ಸಿಗುತ್ತದೆ.
= ಮೂಢನಂಬಿಕೆಗಳಿಂದ ದೂರವಿರಿ; ನಿಮ್ಮ ಸಾಮರ್ಥ್ಯದ ಬಗ್ಗೆ ನಿಮಗೇ ಗಾಢ ನಂಬಿಕೆಗಳಿರಲಿ.
ಹೀಗಾದರೆ ಎಲ್ಲಿಯ ಪರೀಕ್ಷಾ ಭಯ? ಜಯ ನಿಮ್ಮದೇ.