ಮಕ್ಕಳ ಮೊಗದಲ್ಲಿ ಸಂತೋಷ ತರೋದ್ಹೇಗೆ?

Child Care 3 Mrch 20
Published on
ನಮ್ಮ ಮಗು ಯಾವಾಗಲೂ ಬೇಸರದಲ್ಲಿ ಸಮಯ ಕಳೆಯುತ್ತಾನೆ, ಏನಾದರೂ ಕೇಳಿದರೆ ಬೋರಾಗುತ್ತಿದೆ ಎನ್ನುತ್ತಾನೆ, ಸ್ವಭಾವತಃ ಸಂತೋಷವೇ ಕಾಣುವುದಿಲ್ಲ, ಅವನಿಗಿಷ್ಟವಾದ ಆಟಿಕೆ ಸಂದರ್ಭಗಳಲ್ಲಿ ಮಾತ್ರ ಕೆಲವು ಸಮಯ ಸಂತೋಷವಾಗಿರುತ್ತಾನೆ ಎಂದು ಪೋಷಕರೊಬ್ಬರು ಮಗನನ್ನು ಕರೆದುಕೊಂಡು ಬಂದಿದ್ದರು.

ಬಹಳಷ್ಟು ಮನೆಗಳಲ್ಲಿ ಇಂತಹ ವಾತಾವರಣ ಬಹಳ ಸಾಮಾನ್ಯವಾಗಿರುತ್ತದೆ. ಮಕ್ಕಳ ಮುಖದಲ್ಲಿ ಸಂತೋಷ ನೋಡಲು ಪೋಷಕರು ಹರಸಾಹಸ ಪಡುತ್ತಾರೆ. ಮುಂದಿನ ಮಾರ್ಗ ತಿಳಿಯದೆ ಕಂಗಾಲಾಗುತ್ತಾರೆ. ಅವರ ದೃಷ್ಟಿಯಲ್ಲಿ ಪ್ರತಿದಿನವೂ ಸಂತೋಷದ ಘಟನೆಗಳನ್ನು ಅಥವಾ ಸಂತೋಷ ಕೊಡುವ ವಸ್ತುಗಳನ್ನು ಎಲ್ಲಿಂದ ತರುವುದು ಎನ್ನುವುದೇ ಪ್ರಶ್ನೆಯಾಗಿರುತ್ತದೆ.

ಆದರೆ ಇದನ್ನು ವಿಶ್ಲೇಷಿಸಿ ನೋಡಿದಾಗ ಬಹಳಷ್ಟು ಜನರಿಗೆ ಸಂತೋಷವನ್ನು ಅಳವಡಿಸಿಕೊಳ್ಳುವ ವಿಧಾನ ತಿಳಿದಿರುವುದಿಲ್ಲ.ಸಾಮಾನ್ಯವಾಗಿ ನಮ್ಮ ಸುತ್ತಲಿನ ಪರಿಸರದಲ್ಲಿ ಕಾರಣವಿದ್ದಾಗ ಮಾತ್ರ ಸಂತೋಷಪಡುವ ಪ್ರವೃತ್ತಿ ಕಂಡುಬರುತ್ತದೆ. ಉದಾಹರಣೆಗೆ ಶಾಲೆಯಲ್ಲಿ ಉತ್ತಮ ಅಂಕ ಬಂದಾಗ, ಕೆಲವು ನಿಮಿಷಗಳ ಕಾಲ ಸಂತೋಷಪಟ್ಟು ಸಂಭ್ರಮಿಸಿ, ಚಪ್ಪಾಳೆ ಹೊಡೆಯಲಾಗುತ್ತದೆ. ನಂತರ ವಾತಾವರಣ ಯಥಾಸ್ಥಿತಿಗೆ ಮರಳುತ್ತದೆ. ಇದರಿಂದ ನಿಧಾನವಾಗಿ ಮಕ್ಕಳ ಮನಸ್ಸಿನಲ್ಲಿ ಸಂತೋಷವೆಂದರೆ ಸಂದರ್ಭಕ್ಕನುಗುಣವಾಗಿ ವ್ಯಕ್ತಪಡಿಸಬೇಕಾದ ಸ್ವಭಾವ ಎಂದು ತಿಳಿದುಕೊಳ್ಳುತ್ತಾರೆ. ಅದೇ ರೀತಿ ಮನೆಯ ವಾತಾವರಣದಲ್ಲಿಯೂ ಯಾರಾದರೂ ಬಂದಾಗ ಅಥವಾ ವಿಶೇಷ ಘಟನೆಗಳು ಇದ್ದಾಗ ಮಾತ್ರ ಕೆಲವು ಕ್ಷಣ ಸಂಭ್ರಮಿಸಿ ನಂತರ ಒತ್ತಡದ ಯಾಂತ್ರಿಕ ಜೀವನಕ್ಕೆ ಮರಳುವ ಸ್ವಭಾವ ಕಾಣಬರುತ್ತದೆ.

ಇದರಿಂದ ಮಕ್ಕಳಿಗೆ ಅರ್ಥವಾಗುವುದೇನೆಂದರೆ ಒಂದು ಆಕ್ಷನ್ನಿಗೆ ಇದೊಂದು ರಿಯಾಕ್ಷನ್ ಅಷ್ಟೇ. ಮೂಲತಃ ನೋಡಿದಾಗ ಸಂತೋಷ ಎನ್ನುವುದು ಕ್ರಿಯೆಗೆ ನಡೆಯಬೇಕಾದ ಪ್ರತಿಕ್ರಿಯೆಯಲ್ಲ. ಬದಲಿಗೆ ಇದು ಮನಸ್ಸಿನಲ್ಲಿ ಬೆಳೆಸಿಕೊಳ್ಳಬೇಕಾದ ಅವಿರತ ಹವ್ಯಾಸವಾಗಿ ಇರಬೇಕು. ಅಂದರೆ ಸ್ವಭಾವತಃ ಮನುಷ್ಯ ತನ್ನೊಳಗೆ ಸಂತೋಷವನ್ನು ಹೊಂದಿ, ಸಂತೋಷದಿಂದಲೇ ತನ್ನ ಕಾರ್ಯಗಳನ್ನು ನಿರ್ವಹಿಸುತ್ತಾ,, ಸಂತೋಷದಿಂದಲೇ ದಿನವನ್ನು ಮುಕ್ತಾಯಗೊಳಿಸಬೇಕು.

ಇದು ಹೇಗೆ ಸಾಧ್ಯ?: ಬದುಕಿನ ಗುರಿಯೇ ಸಂತೋಷವಾಗಿರುವುದು ಎಂದಾದ ಮೇಲೆ ಒತ್ತಡ ಪೂರ್ವಕವಾಗಿ ಸಂತೋಷವನ್ನು ಪಡೆಯಲು ಸಾಧ್ಯವಿಲ್ಲ. ಸಂತೋಷದಿಂದ ಸಂತೋಷ ಹೆಚ್ಚುತ್ತದೆಯೇ ಹೊರತು ಬೇರೆಯ ಮೂಲದಿಂದ ಅಲ್ಲ. ಅಂದರೆ ಮನಸ್ಸಿನ ಒಳಗೆ ಸದಾ ಹಸನ್ಮುಖತೆ ಇದ್ದರೆ, ಮುಖದಲ್ಲಿ ಅದು ಪ್ರತಿಫಲನ ಗೊಳ್ಳುತ್ತದೆ. ಆಗ ಜೀವನ ಸರಾಗ ಹಾಗೂ ಸಮಾಧಾನ ಎನ್ನಿಸುತ್ತದೆ. ಯಾರಾದರೂ ಸಂತೋಷವಾಗಿದ್ದಾರೆ ಎಂದರೆ ಅವರ ಜೀವನದಲ್ಲಿ ಯಾವುದೇ ಕಷ್ಟದ ಸಂದರ್ಭಗಳಿಲ್ಲ ಎಂದು ಅರ್ಥವಲ್ಲ, ಬದಲಾಗಿ ಅವರು ಹಸನ್ಮುಖರಾಗಿ ಜೀವನದ ಕಷ್ಟಗಳನ್ನು ಎದುರಿಸಲು ಕಲಿತಿದ್ದಾರೆ ಎಂದು ಅರ್ಥ. ಮನಸ್ಸು ಹಸನ್ಮುಖವಾಗಿದ್ದಾರೆ ಕಷ್ಟಗಳನ್ನು ನಿಭಾಯಿಸುವ, ನಿರ್ವಹಿಸುವ, ದೂರಗೊಳಿಸುವ ಮಾರ್ಗ ಕಾಣುತ್ತದೆ. ಇಲ್ಲದಿದ್ದಲ್ಲಿ ಕಷ್ಟಗಳ ಪರಂಪರೆಯಲ್ಲಿ ಸಿಕ್ಕ ಮನಸ್ಸು ಗೊಂದಲದ ಗೂಡಾಗಿ ಇರುವ ಪ್ರತಿಯೊಂದು ಸಮಸ್ಯೆಯನ್ನು ಕೂಡ ಅತಿ ಹೆಚ್ಚುಗೊಳಿಸುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ. ಬದುಕೆಂದರೆ ಒತ್ತಡದಿಂದ ತುಂಬಿದೆ ಕಷ್ಟದಿಂದ ತುಂಬಿದೆ ಎಲ್ಲೆಲ್ಲೂ ನೋವೇ ತುಂಬಿದೆ ಎಲ್ಲರೂ ನನ್ನ ವಿರುದ್ಧವೇ ಇದ್ದಾರೆ ಎನ್ನುವ ಭಾವನೆಯನ್ನು ಹಿರಿಯರಾದವರು ತಾವು ತುಂಬಿಸಿಕೊಂಡು ಪದೇ ಪದೇ ಅದನ್ನು ಹೇಳುತ್ತಿದ್ದಲ್ಲಿ ಮಕ್ಕಳಿಗೆ ಅದೇ ಭಾವನೆ ಬರುತ್ತದೆ.

ಅದರ ಬದಲು ದುಃಖ ನೋವು ಒತ್ತಡ ಕಷ್ಟಗಳು ಜೀವನದ ಅವಿಭಾಜ್ಯ ಅಂಗ ಎಲ್ಲರಿಗೂ ಇಂತಹ ಭಾವನೆಗಳ ಏರಿಳಿತಗಳು ಇದ್ದೇ ಇರುತ್ತವೆ. ಇದು ಸಹಜ ಎನ್ನುವ ಪ್ರಬುದ್ಧತೆಯ ಭಾವನೆ ಇದ್ದಲ್ಲಿ ಮಕ್ಕಳು ಕೂಡ ಅದನ್ನೇ ಅಳವಡಿಸಿಕೊಳ್ಳುತ್ತಾರೆ. ಓದು-ಬರಹ ವಿದ್ಯಾಭ್ಯಾಸವನ್ನು ಸಹಜ ಪ್ರಕ್ರಿಯೆ ಎಂದು ಪರಿಗಣಿಸಿ ಸಂತೋಷವಾಗಿರಲು ಕಲಿಯುತ್ತಾರೆ.

ಸಂತೋಷವಾಗಿರಲು ಕೆಲವು ರಹಸ್ಯಗಳು
  • ಮಾಡುವ ಪ್ರತಿಯೊಂದು ಕೆಲಸವನ್ನು ಆನಂದಿಸಿ, ಹೊಸತನ ಕಲಿಯಿರಿ.
  • ತಿನ್ನುವ ಆಹಾರದಲ್ಲಿ ಕೊರತೆ ಹುಡುಕಬೇಡಿ.
  • ಸುತ್ತಲಿರುವ ಜನರಲ್ಲಿ ತಪ್ಪನ್ನೇ ಕಂಡುಹಿಡಿಯಬೇಡಿ.
  • ಬಿಸಿಲು, ಚಳಿ ಇತ್ಯಾದಿ ವಾತಾವರಣಗಳನ್ನು ಆನಂದಿಸುವುದು ಕಲಿಯಿರಿ ದೂಷಿಸಬೇಡಿ.
  • ಜೀವನದಲ್ಲಿನ ಎಲ್ಲಾ ಸಂಕಷ್ಟಗಳನ್ನು ಒಂದನ್ನೂ ಬಿಡದೆ ಪಟ್ಟಿ ಮಾಡುತ್ತಾ ಹೋಗುವುದನ್ನು ನಿಲ್ಲಿಸಿ ಹಾಗೂ ದಾಟಿ ಬಂದ ಕಷ್ಟಗಳನ್ನು ಮರೆತು ಬಿಡಿ.
  • ಕುಟುಂಬದ ಸದಸ್ಯರಲ್ಲಿ ಉತ್ತಮ ಗುಣಗಳನ್ನು ಗುರುತಿಸಿ ಪ್ರೀತಿಯಿಂದ ನಿಮ್ಮ ಜೀವನದಲ್ಲಿ ನ ಅವರ ಅಗತ್ಯವನ್ನು ಅಭಿನಂದಿಸಿ.
  • ಪ್ರತಿದಿನ ಗಿಡಮರ, ಹಕ್ಕಿ, ಪಕ್ಷಿಗಳನ್ನು ನೋಡಿ ಮುಗುಳ್ನಗೆ ಬೀರಿ, ಮೌನ ಸಂಭಾಷಣೆ ಮಾಡಿ.
  • ನಗುತಾ- ನಗುತಾ ಬಾಳುವ ಸಂಕಲ್ಪ ಮಾಡಿ ಹಾಗೂ ಅದೇ ಹವ್ಯಾಸ ಬೆಳೆಸಿಕೊಳ್ಳಿ.
  • ಜೀವನದಲ್ಲಿ ಏನೋ ಕಷ್ಟವಿದೆ ಕೊರತೆ ಇದೆ ಎನ್ನುವ ಭ್ರಮೆಯಿಂದ ಹೊರಬಂದು ಜೀವನದಲ್ಲಿರುವ ಸಂತೋಷ ಸಂತೃಪ್ತಿ ಗುರುತಿಸಲು ಪ್ರಾರಂಭಿಸಿ.
  • ಕ್ಷಮೆಯ ಸ್ವಭಾವ ಹೆಚ್ಚಿದಷ್ಟು ಸಂತೋಷ ಸುಲಭವಾಗಿ ಲಭ್ಯವಾಗುತ್ತದೆ.
  • ನಿಸ್ವಾರ್ಥ ಸೇವೆಯನ್ನು ಸಮಾಜಕ್ಕಾಗಿ ಮಾಡಿ. ಬೇರೆಯವರ ಕಷ್ಟ ಕಾರ್ಪಣ್ಯ ಅನಾರೋಗ್ಯ ನೋಡಿದಾಗ ಅವರ ಎದುರಿಗೆ ನಿಮ್ಮ ಜೀವನದಲ್ಲಿ ಎಷ್ಟೊಂದು ಸಂತೋಷವಿದೆ ಎನ್ನುವ ಅನುಭವ ದೊರೆಯುತ್ತದೆ.
  • ಯೋಗ, ಧ್ಯಾನ, ಅಧ್ಯಾತ್ಮ ಅಭ್ಯಾಸ ರೂಢಿಸಿಕೊಳ್ಳಿ.
  • ಬದುಕೆನ್ನುವುದು ಸಂತೋಷ ಆನಂದದ ಸಾಗರವೇ ಹೊರತು ಕಷ್ಟಕಾರ್ಪಣ್ಯಗಳ ಮಹಾನದಿ ಅಲ್ಲ. ಏಕೆಂದರೆ ಸಾಗರಕ್ಕೆ ಬಂದು ಕೂಡುವ ಎಲ್ಲಾ ನದಿಗಳು ಸಾಗರವಾಗು ತ್ತವೆಯೇ ಹೊರತು ನದಿಯಾಗಿ ಉಳಿಯಲು ಸಾಧ್ಯವಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net