

ರಾಜನೊಬ್ಬ ಮೂರು ವರ್ಷದ ಮಗನೊಡನೆ ನೌಕಾವಿಹಾರ ಮಾಡುತ್ತಿದ್ದಾಗ ಒಮ್ಮೆಲೇ ಜೋರಾದ ಗಾಳಿ ಬೀಸಿ ನೌಕೆ ಅಲ್ಲಾಡಿ ರಾಜನ ಮಗನು ಆಯ ತಪ್ಪಿ ನದಿಯಲ್ಲಿ ಬಿದ್ದು ಕಾಣೆಯಾದ. ಎಷ್ಟು ಹುಡುಕಿಸಿದರೂ ಸಿಗಲಿಲ್ಲ. ಇದೇ ಚಿಂತೆಯಲ್ಲಿ ರಾಜನು ಹಾಸಿಗೆ ಹಿಡಿದ. ಒಂದು ದಿನ ಮಂತ್ರಿ ಹಾಗೂ ಆಪ್ತ ಜನರನ್ನು ಕರೆದು, ‘ನನ್ನ ಮಗನ ಬಲಗೈ ರಟ್ಟೆಯ ಮೇಲೆ ಕಪ್ಪು ಮಚ್ಚೆ ಇದೆ. ಎಲ್ಲಿಯಾದರೂ ಅವನು ಸಿಕ್ಕರೆ ಗುರುತಿಸಿ ಕರೆತಂದು ಅವನನ್ನು ಈ ರಾಜ್ಯದ ಉತ್ತರಾಧಿಕಾರಿಯನ್ನಾಗಿಸಿ’ ಎಂದು ಹೇಳಿ ಪ್ರಾಣ ಬಿಟ್ಟ. ರಾಜನಿಷ್ಠನಾದ ಮಂತ್ರಿ ಈ ವಿಷಯವನ್ನು ಜನತೆಗೆ ತಿಳಿಸಿ ರಾಜ್ಯಭಾರ ಸಂಭಾಳಿಸುತ್ತಿದ್ದ.
ಐದು ವರ್ಷಗಳ ನಂತರ ಪ್ರಜೆಯೊಬ್ಬ ಸುದ್ದಿಯೊಂದನ್ನು ತಂದು, ನದಿಯಾಚೆಗಿರುವ ಊರಿನಲ್ಲಿ ತಾನು ಅಂಥ ಬಾಲಕನನ್ನು ನೋಡಿರುವುದಾಗಿ ಹೇಳಿದ. ಮಂತ್ರಿ ಅವನನ್ನು ಕರೆದುಕೊಂಡು ರಾಜಭಟರೊಡನೆ ಅಲ್ಲಿಗೆ ಧಾವಿಸಿದ. ಆ ಹುಡುಗ ದೊಂಬರಾಟದ ಗುಂಪಿನವರ ಜೊತೆಗೆ ರಸ್ತೆಯಲ್ಲಿ ಕಸರತ್ತು ಮಾಡುತ್ತಿದ್ದ. ಹುಡುಗನ ಮುಖಚರ್ಯು ರಾಜನನ್ನೇ ಹೋಲುತ್ತಿತ್ತು. ರಟ್ಟೆಯ ಮೇಲೆ ಕಪ್ಪು ಮಚ್ಚೆಯೂ ಕಾಣಿಸಿತು. ಮಂತ್ರಿ ಆ ಗುಂಪಿನ ಯಜಮಾನನಿಗೆ ಬಾಲಕನ ಬಗ್ಗೆ ಕೇಳಿದಾಗ ನದಿ ದಂಡೆಯ ಮೇಲೆ ಪ್ರಜ್ಞಾಹೀನನಾಗಿ ಬಿದ್ದ ಅವನನ್ನು ಕರೆತಂದು ತಮ್ಮ ಜೊತೆಯೇ ಬೆಳೆಸಿದ್ದಾರೆಂದು ತಿಳಿಯಿತು. ಮಂತ್ರಿಗೆ ಅವನೇ ರಾಜಕುಮಾರನೆಂದು ಖಚಿತವಾಗಿ ಅವನಿಗೆ ತಾವು ಬಂದ ವಿಷಯ ತಿಳಿಸಿ ಧನ್ಯವಾದ ಹೇಳಿ ಅವನ ಅನುಮತಿಯೊಂದಿಗೆ ಬಾಲಕನನ್ನು ಅರಮನೆಗೆ ಕರೆ ತಂದ.
ಒಂದು ಶುಭ ಮುಹೂರ್ತದಲ್ಲಿ ರಾಜ್ಯಾಭಿಷೇಕ ಮಾಡಲಾಯಿತು. ಹೀಗೆ ರಾಜ್ಯವಾಳುತ್ತಿರುವಾಗ ಒಂದು ದಿನ ಅವನಿಗೆ ಹಿಂದಿನಂತೆ ಒಮ್ಮೆ ರಸ್ತೆಯಲ್ಲಿ ಕಸರತ್ತು ಮಾಡಬೇಕೆಂದೆನಿಸಿತು. ಈ ಮೊದಲು ತೆಗೆದಿಟ್ಟಿದ್ದ ಹಳೆಯ ಬಟ್ಟೆಗಳನ್ನು ಹಾಕಿಕೊಂಡು ಮುಂಚಿನಂತೆ ಆಗಿ ಗುಪ್ತವಾಗಿ ಹೊರಟು ಆ ಗುಂಪನ್ನು ಸೇರಿಕೊಂಡು ಅತ್ಯುತ್ತಮ ಪ್ರದರ್ಶನ ನೀಡಿದ. ಜನರು ಮೆಚ್ಚಿ ಶಿಳ್ಳೆ ಹೊಡೆದರು. ಈ ಹುಡುಗ ಮತ್ತೆ ಬಂದನೆಂದು ಚಪ್ಪಾಳೆ ತಟ್ಟಿದರು. ಆದರೆ ಈ ಸಲ ಅವನು ಯಾರ ಹತ್ತಿರವೂ ದುಡ್ಡು ಕೇಳಲಿಲ್ಲ. ‘ನನ್ನಲ್ಲಿಯೇ ಸಾಕಷ್ಟಿರುವಾಗ ಇದರಿಂದ ನನಗೇನಾಗಬೇಕಾಗಿದೆ?’ ಎನಿಸಿತು. ಒತ್ತಾಯಪೂರ್ವಕ ಕೊಟ್ಟ ದುಡ್ಡನ್ನೂ ತನ್ನ ಗುಂಪಿನವರಿಗೆ ಹಂಚಿದ. ಸಂಸಾರ ಆರಂಭಿಸಿದ ಮೇಲೆ ದುಡಿದು ಗಳಿಸಿ ಸ್ವಾವಲಂಬನೆ ಸಾಧಿಸಬೇಕು ಎಂಬುದು ಸ್ವಾಭಾವಿಕ ಹಾಗೂ ಅವಶ್ಯ ಕೂಡ. ಆದರೆ ಒಂದು ಹಂತಕ್ಕೆ ಬಂದ ಮೇಲೆ ‘ಇನ್ನು ಸಾಕು’ ಎಂಬ ನಿರ್ಧಾರಕ್ಕೆ ಬರಬೇಕು. ಕೊಟ್ಟು ಆನಂದಿಸಬೇಕೆಂಬ ಸಂಕಲ್ಪವೇ ಬಂಧಮುಕ್ತ ಸ್ಥಿತಿ. ಡಿವಿಜಿ ‘ವಹಿಸು ಕೆಲ ಭಾರಗಳ, ಸಹಿಸು ಕೆಲ ನೋವುಗಳ... ಮಹಿಯ ನಾಟಕದಿ ನೀಂ ಮನಸಿಟ್ಟು ಕುಣಿಕುಣಿದು ವಿಹರಿಸಾತ್ಮಾಲಯದಿ ಮಂಕುತಿಮ್ಮ’ ಎಂದು ಜೀವನಸೂತ್ರವನ್ನು ಹೇಳಿದ್ದಾರೆ. ಅದರಂತೆ ಆತ್ಮಸಂತೋಷಿಗಳಾಗಲು ಯತ್ನಿಸೋಣ.
(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)