ಪರೀಕ್ಷೆ ಸಮಯದಲ್ಲೂ ನೆಮ್ಮದಿ ಹೇಗೆ!?; ಇಲ್ಲಿದೆ ಮಕ್ಕಳಿಗೆ ಸಲಹೆ-ಸೂಚನೆ

Exam Study
Published on
ಪರೀಕ್ಷೆಯ ಸಮಯದಲ್ಲಿ ಅನೇಕ ವಿದ್ಯಾರ್ಥಿಗಳು ಮತ್ತು ಪೋಷಕರು ಅಶಾಂತಿ-ಉದ್ವಿಗ್ನತೆಯನ್ನು ಅನುಭವಿಸುತ್ತಾರೆ. ವಿದ್ಯಾರ್ಥಿಗಳು ಉತ್ತಮ ಉನ್ನತ ಶಿಕ್ಷಣವನ್ನು ಪಡೆಯಲು ಉತ್ತಮ ಅಂಕಗಳು ಅಥವಾ ಶ್ರೇಣಿಗಳು ಭಾರತದ ಮಟ್ಟಿಗೆ ವಾಸ್ತವ. ಅದಕ್ಕಾಗಿ ತಡೆದುಕೊಳ್ಳಲಾಗದಷ್ಟು ಒತ್ತಡವನ್ನು ಎದುರಿಸುತ್ತಿದ್ದಾರೆ. ಇದಕ್ಕೆ ಕಾರಣಗಳು ಅಥವಾ ಸಮಸ್ಯೆಗಳು ಏನೇ ಇರಲಿ, ವಾಸ್ತವವಾಗಿ ಪರೀಕ್ಷೆಗಳು ಕೆಲವು ವಿದ್ಯಾರ್ಥಿಗಳಲ್ಲಿ ದುಃಖ ಮತ್ತು ಆತಂಕವನ್ನು ಉಂಟು ಮಾಡುವುದಂತೂ ನಿಜ. ಈ ಒತ್ತಡವನ್ನು ನಿವಾರಿಸಲು ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಇಲ್ಲಿ ಕೆಲವು ಉಪಾಯಗಳನ್ನು ನೀಡಲಾಗಿದೆ.

| ಡಾ. ವಿಜೇಂದ್ರ ಕುಮಾರ್ ಎಸ್.ಕೆ., ವಿದ್ಯಾರ್ಥಿ ಆಪ್ತ-ಸಮಾಲೋಚಕರು, ಪಿಇಎಸ್ ವಿಶ್ವವಿದ್ಯಾಲಯ, ಬೆಂಗಳೂರು

ಸಮಾಧಾನದಿಂದಿರಿ! ನೀವು ಯುದ್ಧಭೂಮಿಯಲ್ಲಿಲ್ಲ!

ಅನೇಕ ಪೋಷಕರು ತಮ್ಮ ಮಕ್ಕಳಿಗೆ ಪರೀಕ್ಷೆಗಳು ಯುದ್ಧಭೂಮಿಯಂತೆ ಮತ್ತು ಅವರು ಕಷ್ಟಪಟ್ಟು ಅಧ್ಯಯನ ಮಾಡಬೇಕು, ಅವುಗಳನ್ನು ಚೆನ್ನಾಗಿ ಮಾಡಿ ಗೆಲ್ಲಬೇಕು ಎಂದು ಹೇಳುತ್ತಾರೆ. ಅವರ ಉದ್ದೇಶ ಧನಾತ್ಮಕವಾಗಿರಬಹುದು, ಟಿವಿ ನೋಡುವ ಅಥವಾ ಆಡುವ ಬದಲು ವಿದ್ಯಾರ್ಥಿಗಳನ್ನು ಗಂಭೀರವಾಗಿ ಮತ್ತು ಅಧ್ಯಯನ ಮಾಡಲು ಬದ್ಧರಾಗುವಂತೆ ಮಾಡುವುದು ಅವರ ಉದ್ದೇಶ. ಆದರೆ ಇದು ಬಹಳಷ್ಟು ಋಣಾತ್ಮಕ ಪರಿಣಾಮಗಳನ್ನು ಉಂಟುಮಾಡುತ್ತದೆ. ಪರೀಕ್ಷೆಗಳು ಯಾವತ್ತೂ ಯುದ್ಧಗಳಿಗೆ ಸಮಾನವಲ್ಲ. ಯುದ್ಧಗಳಲ್ಲಿ, ಒಂದೋ ನೀವು ಪ್ರಯತ್ನದಿಂದ ಗೆಲ್ಲುತ್ತೀರಿ ಅಥವಾ ಸಾಯುತ್ತೀರಿ; ಹೊಂದಾಣಿಕೆಗಳು ಅಪರೂಪ. ಯಾವುದೇ ಪರೀಕ್ಷೆಗಳು ಯುದ್ಧಭೂಮಿಯಂತೆ ಅಂತಿಮವಲ್ಲ; ಅವು ವಿದ್ಯಾರ್ಥಿಗಳ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಮೌಲ್ಯಮಾಪನ ಮಾಡುವ ಒಂದು ಮಾರ್ಗವಾಗಿದೆ ಮತ್ತು ಅದನ್ನು ಪುನರಾವರ್ತಿಸಬಹುದು, ರದ್ದುಗೊಳಿಸಬಹುದು ಅಥವಾ ಬೇರೆ ಯಾವುದನ್ನಾದರೂ ಅಧ್ಯಯನ ಮಾಡಲು ಸ್ವಲ್ಪ ಯೂ ಟರ್ನ್ ತೆಗೆದುಕೊಳ್ಳಬಹುದು. ಹೆಚ್ಚೆಂದರೆ ಪದವಿ ಪಡೆಯಲು ಒಂದು ವರ್ಷ ಜಾಸ್ತಿಯಾಗಬಹುದು. ಅದಕ್ಕಾಗಿ ದೈಹಿಕ ಮತ್ತು ಮಾನಸಿಕವಾಗಿ ಒತ್ತಡವನ್ನು ಅನುಭವಿಸಿ ಅರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಿ. ಒತ್ತಡದ ಪರಿಣಾಮಗಳು ಕೆಲವೊಮ್ಮೆ ಗುಣಪಡಿಸಲಾಗದಷ್ಟು ಹೆಚ್ಚಾದರೆ ನೀವು ಅದಕ್ಕೆ ತೆರುವ ಬೆಲೆ ಒಂದೆರೆಡು ದಶಕಗಳಿಗಾಗುವಷ್ಟು ಆಗಿರುತ್ತದೆ. ಆದ್ದರಿಂದ ಹೀಗೆ ಹೇಳಿಕೊಳ್ಳಿ: ಓ.ಕೆ ಇದು ಸರಿ, ನನಗೆ ಏನು ಸಾಧ್ಯವೋ ಅದನ್ನು ಮಾಡುತ್ತೇನೆ..

ಎಂದಿಗೂ ಹೀಗೆ ಹೇಳಿಕೊಳ್ಳಬೇಡಿ

‘ನಾನು ಅತ್ಯುತ್ತಮವಾಗಿ ಮಾಡುತ್ತೇನೆ..’ ಅಂತ ಅಂದುಕೊಂಡರೆ ಇಲ್ಲಿ ನೀವು ನಿಮಗಾಗಿ ಹಳ್ಳವನ್ನು ಅಗೆಯುತ್ತಿದ್ದೀರಿ. ಯಾವುದು ಉತ್ತಮ ಎಂದು ನಿಮಗೆ ಹೇಗೆ ಗೊತ್ತು? ಯಾವುದು ಉತ್ತಮ ಎಂದು ನಮ್ಮಲ್ಲಿ ಯಾರಿಗೂ ಮೊದಲೇ ತಿಳಿದಿರುವುದಿಲ್ಲ. ನಾವು ತ್ರಿಕಾಲ ಜ್ಞಾನಿಗಳಲ್ಲ. ಸರಳವಾಗಿ ಹೇಳುವುದಾದರೆ, ಸಚಿನ್ ತೆಂಡೂಲ್ಕರ್ ಅವರು 2010ರ ಗ್ವಾಲಿಯರ್ ಪಂದ್ಯದಲ್ಲಿ 200 ರನ್ ಗಳಿಸಿದರು. ಅದು ಆ ವರೆಗಿನ ಅತ್ಯುತ್ತಮ ಸಾಧನೆ. ಆದರೆ, ಸಚಿನ್​ಗೆ ನಾನು ಇವತ್ತು ಅತ್ಯುತ್ತಮವಾಗಿ ಆಡುತ್ತೇನೆ ಎಂದು ಗೊತ್ತಿರಲಿಲ್ಲ. ಹಾಗಂತ, ಹೇಳುವುದು ಸಾಧನೆಯಾದ ಮೇಲೆ ಮತ್ತು ಅದನ್ನು ಇತರ ಸಾಧನೆಗಳೊಂದಿಗೆ ಹೋಲಿಸಿದಾಗ ಮಾತ್ರ. ಅವರು ಪ್ರತಿ ಇನ್ನಿಂಗ್ಸ್ ಕೂಡ ಪರಿಸ್ಥಿತಿಗೆ ತಕ್ಕಂತೆ ನಿರ್ವಹಣೆ ಮಾಡುತ್ತಾರೆ. ನಿಮ್ಮ ಪರಿಶ್ರಮವು ಆ ಸಮಯದಲ್ಲಿ ಎಷ್ಟು ಮಾಡಬಹುದೋ ಅಷ್ಟಿರಲಿ. ಅದರಲ್ಲಿ ಸೋಮಾರಿತನ ಅಥವಾ ಉಡಾಫೆಗೆ ಜಾಗ ಕೊಡಬೇಡಿ.

ಆತಂಕವೇ? ಅದರಲ್ಲಿ ತಪ್ಪೇನಿದೆ?

ಅನೇಕ ಪೋಷಕರು, ಶಿಕ್ಷಕರು ಮತ್ತು ಗೆಳೆಯರು ಈ ಪ್ರಮಾದವನ್ನು ಮಾಡುತ್ತಾರೆ: ಆತಂಕಪಡಬೇಡಿ ಅಥವಾ ಭಯ ಪಟ್ಟುಕೊಳ್ಳಬೇಡ ಎಂದು ಹೇಳುತ್ತಾರೆ, ಇದು ವಾಸ್ತವವಲ್ಲ. ಆತಂಕವು ಅಜ್ಞಾತ ಮತ್ತು ಅನಿಶ್ಚಿತ ಭವಿಷ್ಯದ ಘಟನೆಗಳಿಗೆ ನೈಸರ್ಗಿಕ ಪ್ರತಿಕ್ರಿಯೆಯಾಗಿದೆ. ಘಟನೆಯನ್ನು ಎದುರಿಸಲು ಆತಂಕವು ನಿಮ್ಮ ದೇಹ ಮತ್ತು ಮನಸ್ಸನ್ನು ಸಿದ್ಧಪಡಿಸುತ್ತದೆ. ನೀವು ಅದನ್ನು ನಿರಾಕರಿಸಿದರೆ, ನೀವು ಅದನ್ನು ಸ್ವೀಕರಿಸುವುದಕ್ಕಿಂತ ಹೆಚ್ಚಾಗಿ ನಿಮಗೆ ಹಾನಿಯನ್ನುಂಟು ಮಾಡುತ್ತದೆ.

ಆದ್ದರಿಂದ ಮುಂದಿನ ಬಾರಿ ನೀವು ಆತಂಕಗೊಂಡಾಗ, ಹೀಗೆ ಹೇಳಿಕೊಳ್ಳಿ: ನಾನು ಈಗ ಆತಂಕದಲ್ಲಿದ್ದೇನೆ. ಪರವಾಗಿಲ್ಲ. ಆತಂಕಕ್ಕೊಳಗಾಗವುದು ಸರಿಯಾಗಿದೆ. ನನ್ನಿಂದ ಏನು ಸಾಧ್ಯವೋ ಅದನ್ನೇ ಮಾಡುತ್ತೇನೆ ಮತ್ತು ಈ ಸಮಯದಲ್ಲಿ ನಾನು ಸರಿಯಾಗಿದ್ದೇನೆ ಎಂದು ಭಾವಿಸುತ್ತೇನೆ. ಇದು ಹೆಚ್ಚಾದ ಆತಂಕವನ್ನು ಸೂಕ್ತ ಪ್ರಮಾಣದಲ್ಲಿಡುತ್ತದೆ.

ನಿಮ್ಮ ಸಂತೋಷದ ಕ್ಷಣಗಳಲ್ಲಿ ಒಂದನ್ನು ನೆನಪಿಡಿ!

ಒತ್ತಡದ ಸಮಯದಲ್ಲಿ ನೇರವಾಗಿ ಕುಳಿತುಕೊಂಡು ನಿಮ್ಮ ಹಿಂದಿನ ಸಂತೋಷದ ಘಟನೆಗಳನ್ನು ನೀವು ನೆನಪಿಸಿಕೊಂಡಾಗ, ಅದು ಬೂಸ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮಲ್ಲಿನ ಧನಾತ್ಮಕ ಶಕ್ತಿಯನ್ನು ಸಾಕಷ್ಟು ಹೆಚ್ಚು ಮಾಡುತ್ತದೆ. ಇದರಿಂದ ನಿಮ್ಮ ಮೆದುಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆತ್ಮವಿಶ್ವಾಸ ಮತ್ತು ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.

ಸಾಕಷ್ಟು ಆಹಾರ ತೆಗೆದುಕೊಳ್ಳಿ ಮತ್ತು ಚೆನ್ನಾಗಿ ನಿದ್ರೆ ಮಾಡಿ: ಪರೀಕ್ಷೆಯ ಮೊದಲು ಹೊಟ್ಟೆ ತುಂಬಾ ಊಟ ಮಾಡದಿರುವುದು ಒಳ್ಳೆಯದು. ಖಾಲಿ ಹೊಟ್ಟೆಯಲ್ಲಿ ಎಂದೂ ಪರೀಕ್ಷೆ ಬರೆಯಲು ಹೋಗಬೇಡಿ. ಪೌಷ್ಟಿಕಾಂಶವುಳ್ಳ ಲಘು ಆಹಾರವನ್ನು 1ರಿಂದ 2 ಗಂಟೆಗಳ ಮೊದಲು ಸೇವಿಸಿ. ನಿಮ್ಮನ್ನು ಚೈತನ್ಯದಿಂದ ಇರಿಸಿಕೊಳ್ಳಲು ಪರೀಕ್ಷೆಯ ಹಿಂದಿನ ರಾತ್ರಿ ಚೆನ್ನಾಗಿ 6ರಿಂದ 7 ಘಂಟೆಗಳ ಕಾಲ ನಿದ್ದೆ ಮಾಡಿ.

ನಿಮ್ಮ ವಿಶ್ಲೇಷಣೆಯನ್ನು ಕೊನೆಯವರೆಗೂ ಇರಿಸಿಕೊಳ್ಳಿ!

ಆ ದಿನದ ಪರೀಕ್ಷೆಯನ್ನು ಬರೆದ ಮೇಲೆ ನಿಮ್ಮ ಪರೀಕ್ಷೆಯನ್ನು ಸ್ನೇಹಿತರು ಮತ್ತು ಪೋಷಕರೊಂದಿಗೆ ವಿಶ್ಲೇಷಿಸಬೇಡಿ. ಪರೀಕ್ಷೆ ಬರೆಯುತ್ತಿರುವಾಗಿನ ನಿಮ್ಮ ಅನುಭವ ಮಾತ್ರ ಹಂಚಿಕೊಳ್ಳಿ. ಒಮ್ಮೆ ನೀವು ನಿಮ್ಮ ಎಲ್ಲ ಪರೀಕ್ಷೆಗಳನ್ನು ಬರೆದು ಮುಗಿಸಿದ ಮೇಲೆ ನಿಮ್ಮ ವೈಯಕ್ತಿಕ ಪೇಪರ್ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಲು ಪ್ರಾರಂಭಿಸಿ ಮತ್ತು ನಿರೀಕ್ಷಿತ ಅಂಕಗಳು/ಗ್ರೇಡ್​ಗಳನ್ನು ಲೆಕ್ಕಾಚಾರ ಮಾಡಿ. ಈ ಮಾಹಿತಿಯನ್ನು ಮತ್ತು ನಿಮ್ಮ ಪಾಲಕರೊಂದಿಗೆ, ನೀವು ಹೇಗೆ ಭಾವಿಸುತ್ತೀರಿ ಎಂಬುದನ್ನು ಹಂಚಿಕೊಳ್ಳಿ.

ಪೋಷಕರಿಗೊಂದು ಚಿಕ್ಕ ಸಲಹೆ

ಆಲಿಸಿ, ಕೇವಲ ಕೇಳಿಸಿಕೊಳ್ಳಿ, ಪ್ರಶಂಸಿಸಿ ಮತ್ತು ನಿಮ್ಮ ಮಕ್ಕಳು ಮುಂದೆ ಮಾಡಬಹುದಾದ್ದನ್ನು ಯೋಜಿಸಲು ಸಹಾಯ ಮಾಡಿ. ದೂಷಿಸಲು ಹೋಗಬೇಡಿ. ನೀವು, ನಾನು ನಿನಗೆ ಕಷ್ಟಪಟ್ಟು ಓದಲು ಹೇಳಿದ್ದೇನೆ, ನನ್ನ ಮಾತಿಗೆ ಬೆಲೆ ಕೊಡಲಿಲ್ಲ, ಈಗ ಬಂದಿರೋ ಗ್ರೇಡ್ ನೋಡು ಎನ್ನಬೇಡಿ. ಹೀಗೆ ಮಾಡಿದರೆ ನೀವು ನಿಮ್ಮ ಮಗ ಅಥವಾ ಮಗಳನ್ನು ಸುಧಾರಿಸಲು ಎಲ್ಲಿಯೂ ಸಹಾಯ ಮಾಡುತ್ತಿಲ್ಲ, ಬದಲಾಗಿ ಅವರನ್ನು ಹಾಳು ಮಾಡುತ್ತಿದ್ದೀರಿ ಅಷ್ಟೇ. ಪಾಲಕರಾಗಿ ಈ ಸಮಯದಲ್ಲಿ ರಚನಾತ್ಮಕ ಪ್ರತಿಕ್ರಿಯೆಯನ್ನು ನೀಡಲು ಸಂವೇದನಾಶೀಲರಾಗಿರಿ. ಖಂಡಿತ ನಿಮ್ಮ ಮಗ/ಮಗಳು ಪರೀಕ್ಷೆಯ ಒತ್ತಡದಿಂದ ಹೊರಗೆ ಬರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net