ಸಾಹಿತಿಗಳ ಕಾಲಕ್ಷೇಪ: ಕರೊನಾ ಲಾಕ್​ಡೌನ್​ನಲ್ಲಿ ಓದು-ಬರಹ ಭರಪೂರ

Vihara
Published on

ಸಂಘಜೀವಿಯಾದ ಮನುಷ್ಯನನ್ನು ಕರೊನಾ ಒಂದೆಡೆ ಬಂಧಿಸಿಟ್ಟಿದೆ. ದಿನಬೆಳಗಾದರೆ ಸ್ನೇಹಿತರು, ಕಾರ್ಯಕ್ರಮ, ಉಪನ್ಯಾಸ ಎಂದು ತೊಡಗಿಸಿಕೊಂಡಿರುತ್ತಿದ್ದ ಸಾಹಿತಿ, ಲೇಖಕರು, ಕಾದಂಬರಿಕಾರರಿಗೂ ಇದು ಹೊರತಲ್ಲ. ಕರೊನಾ ಸಂದರ್ಭದಲ್ಲಿ ಸೃಜನಶೀಲ ಮನಸ್ಸುಗಳಲ್ಲಿ ನಡೆಯುತ್ತಿರುವ ಚಿಂತನೆಗಳು, ತೊಳಲಾಟಗಳೇನು, ಅವರ ಈಗಿನ ದಿನಚರಿ ಹೇಗಿದೆ?

| ರಮೇಶ ದೊಡ್ಡಪುರ

ಪ್ರವಾಸ ಇಲ್ಲದೆ ಏನನ್ನೂ ಬರೆಯೋದು ಕಷ್ಟ...

| ಎಸ್.ಎಲ್. ಭೈರಪ್ಪ ಹಿರಿಯ ಕಾದಂಬರಿಕಾರ

ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಇದ್ದೀವಿ. ಪ್ರಾರಂಭದಲ್ಲಿ ಇದೊಂದು ರೀತಿ ಚೆನ್ನಾಗೇ ಇತ್ತು. ಆದರೆ ಈಗ ಒಂದು ವರ್ಷದ ಮೇಲೆ ಮೂರು ತಿಂಗಳು ಕಳೆದಿದೆ. ಅದೇಕೊ ಲೈಫೇ ಬೋರ್ ಆಗುತ್ತಿದೆ. ಎಷ್ಟು ದಿವಸ ಮನೆಯಲ್ಲೇ ಇರುವುದು? ಯಾರೂ ನಮ್ಮ ಮನೆಗೂ ಬರೊಲ್ಲ, ನಾವೂ ಎಲ್ಲೂ ಹೋಗೊಲ್ಲ. ‘ಬೇಕಾದಷ್ಟು ಸಮಯ ಇದೆ. ಏನು ಬೇಕಾದರೂ ಓದಬಹುದು, ಎಷ್ಟು ಬೇಕಾದರೂ ಬರೆಯಬಹುದು ಅಲ್ವ’ ಅಂತ ಅನ್ನಿಸುತ್ತದೆ. ಆದರೆ ಸಾಹಿತ್ಯ ಆ ರೀತಿ ಹುಟ್ಟೊಲ್ಲ. ಮುಖ್ಯವಾಗಿ ಪ್ರವಾಸ ಇಲ್ಲದೆ ಆಗಲ್ಲ. ‘ಒಂದೇ ಕಡೆ ಇದ್ದೀವಿ, ಸಮಯ ಇದೆ’ ಎಂದ ತಕ್ಷಣ ಹೊಸದಾಗಿ ಒಂದು ಕಾದಂಬರಿ ಬರೆದುಬಿಡ್ತೀನಿ ಅಂದರೆ ಸಾಧ್ಯ ಇಲ್ಲ. ಹಾಗಾಗಿ ಈ ಹಿಂದೆ ಓದಿದ್ದ, ಓದಬೇಕಿದ್ದ ಕೆಲವು ಮುಖ್ಯ ಪುಸ್ತಕಗಳನ್ನ ತಿರುವಿ ಹಾಕ್ತಾ ಇದ್ದೀನಿ. ಮುಖ್ಯವಾಗಿ ಸಾವರ್ಕರ್, ಸರ್ದಾರ್ ವಲ್ಲಭಭಾಯಿ ಪಟೇಲರ ಕುರಿತು ಪುಸ್ತಕಗಳನ್ನು ಓದಿದೆ. ಆರ್.ಸಿ. ಮಜುಂದಾರ್ ಬರೆದಿರುವ, 3 ಸಂಪುಟಗಳಲ್ಲಿರುವ ‘ಹಿಸ್ಟರಿ ಆಫ್ ದಿ ಫ್ರೀಡಂ ಮೂವ್​ವೆುಂಟ್ ಇನ್ ಇಂಡಿಯಾ’ ಓದುತ್ತಿದ್ದೇನೆ. ಒಂದೆಡೆ ಕಲಾವಿದರು, ಜನರು ಸೇರುವುದೇ ಬೇಡ ಎನ್ನುವಾಗ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲೂ ಸಾಧ್ಯವಾಗದು. ಆನ್​ಲೈನ್ ತರಗತಿಗಳು ನಡೆಯುತ್ತವೆ. ವಿದ್ಯಾವಂತ ಪೋಷಕರು ಮಕ್ಕಳ ಪುಸ್ತಕವನ್ನು ತಾವೇ ಓದಿಕೊಂಡು ಪಾಠ ಮಾಡಬಹುದು. ವಿದ್ಯಾವಂತ ಯುವಕರು ಗ್ರಾಮದಲ್ಲಿ ಮಕ್ಕಳಿಗೆ ಕಂಪ್ಯೂಟರ್ ಹೇಳಿಕೊಡಬಹುದು. ನಾವೆಲ್ಲರೂ ಸರ್ಕಾರದ ನಿಯಮ ಪಾಲನೆ ಮಾಡಬೇಕು. ನಮ್ಮ ಜನರಲ್ಲಿ ಸ್ವಲ್ಪ ಶಿಸ್ತು ಕಡಿಮೆ. ಒಂದು ದಿನ ಸಡಿಲ ಬಿಟ್ಟರೆ ಸಾಕು ಗುಂಪುಗುಂಪಾಗಿ ರಸ್ತೆಗೆ ಇಳಿದುಬಿಡುತ್ತಾರೆ. ಮನೆಯಲ್ಲೇ ಇದ್ದು ಅವರವರಿಗೆ ತೋಚಿದ ರೀತಿಯಲ್ಲಿ ಸಮಯ ಕಳೆಯುವುದನ್ನು ರೂಢಿಸಿಕೊಳ್ಳಬೇಕು.

ಇನ್ನೂರು ಹೊಸ ಮುಕ್ತಕಗಳನ್ನು ರಚಿಸಿದೆ...

| ಎಚ್.ಎಸ್. ವೆಂಕಟೇಶಮೂರ್ತಿ ಹಿರಿಯ ಕವಿ

ಕರೊನಾ ಸೋಂಕು ಕಾಣಿಸಿಕೊಂಡು, ವಿಕ್ಟೋರಿಯಾದಲ್ಲಿ 10 ದಿನ ಚಿಕಿತ್ಸೆ ಪಡೆದು ಮನೆಗೆ ಬಂದೆ. ಕ್ವಾರಂಟೈನ್ ಅವಧಿಯನ್ನೂ ಮುಗಿಸಿ ಈಗ ಆರಾಮಿದ್ದೀನಿ. ಹೊರಗೆಲ್ಲೂ ಹೋಗುತ್ತಿಲ್ಲ. ಆಸ್ಪತ್ರೆಯಿಂದ ಬಂದ ನಂತರ ಮುಕ್ತಕಗಳನ್ನು ರಚಿಸಿದೆ. ಇದು ಸಂಸ್ಕೃತದಲ್ಲಿ ಹೆಚ್ಚು ಪ್ರಸಿದ್ಧವಾಗಿರುವ ಕಾವ್ಯ ಮಾಧ್ಯಮ. 200 ಮುಕ್ತಕಗಳನ್ನು ಬರೆದಿದ್ದೇನೆ, ಲಾಕ್​ಡೌನ್ ನಂತರ ಕೃತಿ ಹೊರಬರಲಿದೆ. ಈ ಕೆಲಸದಿಂದ ನನ್ನ ಮನಸ್ಸಿಗೆ ಸಮಾಧಾನ ಆಗುತ್ತದೆ; ಓದಿದವರೂ ಸಂತೋಷ, ಸಮಾಧಾನಪಡುತ್ತಾರೆ. ಈ ಸಂದರ್ಭವನ್ನು ಸವಾಲಾಗಿ ಸ್ವೀಕರಿಸಿ, ಸಕಾರಾತ್ಮಕ ಚಿಂತನೆಯಲ್ಲಿ ತೊಡಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. ಇದೇ ಸಂದರ್ಭದಲ್ಲಿ ಅನೇಕ ಪುಸ್ತಕಗಳನ್ನು ಓದಿದೆ. ವಸುಧೇಂದ್ರ ಅವರ ಕೃತಿ, ರಾಘವೇಂದ್ರ ಪಾಟೀಲರ ಕಾದಂಬರಿ, ಗಜಾನನ ಶರ್ಮ ಅವರ ಚೆನ್ನಭೈರಾದೇವಿ ಕೃತಿ, ರಜನಿ ನರಹಳ್ಳಿ ಬಾಲಸುಬ್ರಹ್ಮಣ್ಯ ಬರೆದ ಮಕ್ಕಳ ಕೃತಿ ಓದಿದೆ. ಎಂದಿನಂತೆ ಬೆಳಗ್ಗೆ 4ರಿಂದ 6ರವರೆಗೆ ನನ್ನ ಸ್ವಂತ ಬರವಣಿಗೆ ಮುಂದುವರಿದಿದೆ. ಮನೆಯ ತಾರಸಿ ಮೇಲೆ ನಡಿಗೆ, ಪ್ರಾಣಾಯಾಮ. ಸ್ನೇಹಿತರೊಂದಿಗೆ ದೂರವಾಣಿಯಲ್ಲಿ ಮಾತು. ಪರಸ್ಪರ ಧೈರ್ಯ, ಸಾಂತ್ವನವೇ ಈಗ ಅವಶ್ಯಕ. ಸುಮ್ಮನೆ ಕುಳಿತರೆ ಮನಸ್ಸು ಹಾಳಾಗುತ್ತದೆ. ಭಯ ಬೇಡವೇ ಬೇಡ. ಲಸಿಕೆ ತೆಗೆದುಕೊಂಡು, ಸರ್ಕಾರ ಹೇಳುತ್ತಿ ರುವಂತೆ ಮನೆಯಲ್ಲೆ ಇರುವುದು ಉತ್ತಮ.

ಓದು ಬರಹಕ್ಕೆ ಸಾಕಷ್ಟು ಟೈಮ್ ಸಿಗ್ತಿದೆ

| ಡಾ. ಹನುಮಾಕ್ಷಿ ಗೋಗಿ ಲೇಖಕಿ-ಸಂಶೋಧಕಿ

ಅರವತ್ತು ದಾಟಿದ ನಮ್ಮಂಥವರಿಗೆ ಡಿಜಿಟಲ್ ಮಾಧ್ಯಮ ಎಂಬುದು ದೂರವೇ ಇತ್ತು. ಕರೊನಾ ಬಂದ ನಂತರ ಈ ನಿಟ್ಟಿನಲ್ಲಿ ಸಾಕಷ್ಟು ಕಲಿತಿದ್ದೇನೆ. ಇದಕ್ಕೆಲ್ಲ ನಮ್ಮ ಮಕ್ಕಳು, ಮೊಮ್ಮಕ್ಕಳೇ ಗುರುಗಳು! ಇನ್ನೊಂದು ಅನುಕೂಲವೆಂದರೆ ಕಂಪ್ಯೂಟರ್​ನಲ್ಲಿ ಟೈಪ್ ಮಾಡಿಸುವ ಸಮಸ್ಯೆ ಪರಿಹಾರವಾಗಿದೆ. ಹಿಂದೆಲ್ಲ ಕೈಬರಹದ ಕರಡನ್ನು ಕಂಪ್ಯೂಟರ್​ನವರಿಗೆ ಕೊಟ್ಟು, ಅವರು ಟೈಪ್ ಮಾಡಿದ್ದನ್ನು ಪ್ರೂಫ್ ನೋಡಬೇಕಿತ್ತು. ಅದರಲ್ಲೂ ಹಳಗನ್ನಡವಿದ್ದರೆ ಫಜೀತಿ. ನಾವು ಸರಿಪಡಿಸಿದ ಪದಗಳನ್ನು ಬಿಟ್ಟು ಬೇರೆಯವನ್ನು ತಿದ್ದಿ, ಮತ್ತಷ್ಟು ಕೆಲಸ ಕೊಡುತ್ತಿದ್ದರು. ಈಗ ನಿಧಾನವಾಗಿ ನಾವೇ ಟೈಪ್ ಮಾಡಿಕೊಂಡು ಹೋಗುತ್ತಿದ್ದೇವೆ. ಕರೊನಾ ಇಲ್ಲದಿದ್ದಾಗ ಅನೇಕ ಕಾರ್ಯಕ್ರಮಗಳಿಗೆ ಹೋಗಬೇಕಾಗುತ್ತಿತ್ತು. ಈಗ ಮನೆಯಲ್ಲೆ ಇರುತ್ತೀವಿ. ಆನ್​ಲೈನ್​ನಲ್ಲೇ ಕಾರ್ಯಕ್ರಮಗಳು ನಡೆಯುತ್ತಿವೆ. ಈ ಹಿಂದೆ ಸಮಯದ ಅಭಾವದಿಂದ ಓದಲು ಆಗದಿದ್ದ ಇಷ್ಟದ ಕಥೆ, ಪ್ರಬಂಧ, ವಿಮರ್ಶಾ ಕೃತಿಗಳನ್ನು ಈಗ ಓದುತ್ತಿದ್ದೇನೆ. ಜಗತ್ತೇ ಅಂಗೈಲಿದೆ. ಉತ್ತಮ ಕೃತಿಗಳನ್ನು ಜಗತ್ತಿನ ಯಾವುದೇ ಮೂಲೆಯಿಂದ ಡೌನ್​ಲೋಡ್ ಮಾಡಿಕೊಂಡು ಓದಲು ಅವಕಾಶವಿದೆ. ಡಾ. ಎಂ.ಎಂ. ಕಲ್ಬುರ್ಗಿ ಅವರ ಮಾರ್ಗ 4ರವರೆಗೆ ಓದಿದ್ದೆ. ಮಾರ್ಗ 7-8, ಅವರ ನಿಧನ ನಂತರ ಪ್ರಕಟವಾಗಿದೆ. ಷ. ಶೆಟ್ಟರ್ ಅವರ ಲಿಪಿ, ಲಿಪಿಕಾರ, ಲಿಪಿ ವ್ಯವಸಾಯ ಸೇರಿ ಅನೇಕ ಕೃತಿಗಳನ್ನು ಆಗಾಗ, ಅವಶ್ಯಕತೆಗೆ ತಕ್ಕಷ್ಟು ಓದಿಕೊಂಡಿದ್ದೆ. ಜತೆಗೆ ಕುವೆಂಪು ಅವರ ನೆನಪಿನ ದೋಣಿ. ಎಲ್ಲವನ್ನೂ ಈಗ ಪೂರ್ಣ ಓದಲು ಸಾಧ್ಯವಾಗಿದೆ. ಬರೆಯು ವುದಕ್ಕೂ ಸಮಯ ಸಿಗುತ್ತಿದೆ. ಸಂಶೋಧಕರಿಗೆ ಹಾಗೂ ಪ್ರವಾಸ ಕಥನ ಬರೆಯುವವರಿಗೆ ಒಂದು ಸಮಸ್ಯೆ ಎಂದರೆ ಕ್ಷೇತ್ರಕಾರ್ಯ, ಪ್ರವಾಸ ಮಾಡಲು ಆಗುವುದಿಲ್ಲ. ಈಗಾಗಲೆ ಪ್ರವಾಸ ಮಾಡಿ ಬಂದಿದ್ದರೆ ಅದರ ಬಗ್ಗೆ ಬರೆಯಬಹುದು. ಈ ಹಿಂದೆ ನಡೆಸಿದ ಕ್ಷೇತ್ರಕಾರ್ಯಗಳಲ್ಲಿ ಸಂಗ್ರಹಿಸಿದ ಮಾಹಿತಿ ಗಳನ್ನು ಒಟ್ಟುಗೂಡಿಸಿ ಸಂಶೋಧನಾ ಪ್ರಬಂಧ, ವಿಮರ್ಶೆ ರಚಿಸಬಹುದು.

ಎರಡು ಕಾದಂಬರಿ, 30 ಕವನ ಬರೆದೆ!

| ಡಾ. ನಾ. ಮೊಗಸಾಲೆ ಹಿರಿಯ ಕವಿ-ಕಥೆಗಾರ

ಕಳೆದ ವರ್ಷದ ಕಳೆದ ಲಾಕ್​ಡೌನ್​ನಲ್ಲಿ ಎರಡು ಕಾದಂಬರಿ ಬರೆದಿದ್ದೇನೆ. ಧರ್ಮಯುದ್ಧ ಎಂಬ ಕಾದಂಬರಿ 250 ಪುಟಗಳಷ್ಟಿದ್ದು, ಧಾರವಾಡದ ಮನೋಹರ ಗ್ರಂಥಮಾಲೆಯಿಂದ ಆಗಸ್ಟ್ 15ರಂದು ಲೋಕಾರ್ಪಣೆ ಆಗುತ್ತಿದೆ. ಇದ್ದೂ ಇಲ್ಲದ್ದು ಎಂಬ ಮತ್ತೊಂದು ಕಾದಂಬರಿ ತುಸು ದೊಡ್ಡದಿದೆ. ಅದನ್ನು ಸಾಹಿತ್ಯ ಭಂಡಾರ ಪ್ರಕಟಿಸುತ್ತಿದೆ. ಕರೊನಾ ಸಮಯದಲ್ಲೆ ಇಲ್ಲಿವರೆಗೆ 30 ಕವನಗಳನ್ನು ಬರೆದಿದ್ದೇನೆ. ಇನ್ನಷ್ಟು ಕವನಗಳು ಇದಕ್ಕೆ ಸೇರ್ಪಡೆಯಾಗಲಿದ್ದು, ಮೂರನೇ ಕಣ್ಣು ಎಂಬ ಹೆಸರಿನಲ್ಲಿ ಮುಂದಿನ ವರ್ಷ ಬಿಡುಗಡೆಗೆ ಚಿಂತನೆ ನಡೆಸಿದ್ದೇನೆ. ಕವನಗಳ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದೇನೆ. ಅವು ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿವೆ. ಓದಿನ ವಿಷಯಕ್ಕೆ ಬಂದರೆ, ಸುಬ್ರಾಯ ಚೊಕ್ಕಾಡಿ ಅವರ ಕಾಲದ ಒಂದೊಂದು ಹನಿ ಓದಿದೆ. ಜಯಂತ ಕಾಯ್ಕಿಣಿ ಅವರ ಕೃತಿ ಬಂದಿದೆ, ಇನ್ನಷ್ಟೇ ಓದಬೇಕು. ನಾನು ಸ್ಥಾಪಿಸಿದ ಅಲ್ಲಮಪ್ರಭು ಪೀಠ, ಕಾಂತಾವರ ಕನ್ನಡ ಸಂಘ, ವರ್ಧಮಾನ ಪ್ರಶಸ್ತಿ ಪೀಠಗಳಿಂದ ಸಂಪೂರ್ಣ ಹೊರಬಂದು, ಬೇರೆಯವರಿಗೆ ವಹಿಸಲಾಗಿದೆ. ಎಲ್ಲಿಯೂ ಹೊರಗೆ ಹೋಗುತ್ತಿಲ್ಲ. ಈ ನಡುವೆ ಎರಡನೇ ಅಲೆಯಲ್ಲಿ ಜರಗನಹಳ್ಳಿ ಶಿವಶಂಕರ್, ಕೋ.ವೆಂ. ರಾಮಕೃಷ್ಣೇಗೌಡರು, ಮಹದೇವ ಪ್ರಕಾಶ್ ಅಂಥವರ ಸಾವು ಬೇಸರ ತಂದಿದೆ. ಜನರು ಉದಾಸೀನ ಮಾಡದಿದ್ದರೆ ಬಹುಶಃ ಎರಡನೇ ಅಲೆ ಇಷ್ಟು ಗಂಭೀರ ಆಗುತ್ತಿರಲಿಲ್ಲ. ಎಲ್ಲರೂ ಸರ್ಕಾರದ ನಿಯಮ ಪಾಲಿಸಿ, ಸೋಂಕು ಲಕ್ಷಣ ಕಾಣಿಸಿಕೊಂಡ ಕೂಡಲೇ ಚಿಕಿತ್ಸೆಗೆ ಮುಂದಾದರೆ ಅಪಾಯವನ್ನು ತಡೆಯಬಹುದು.
ಸುತ್ತ ಮುತ್ತ, ಸಮಾಜದಲ್ಲಿ ಅನಾರೋಗ್ಯ, ಸಾವು ನೋವುಗಳನ್ನು ಕಂಡು ಬೇಸರವಾಗುತ್ತಿದೆ. ನಾವೊಬ್ಬರು ಆರೋಗ್ಯದಿಂದ ಇದ್ದರೆ ಸಾಲದು, ಎಲ್ಲರೂ ಆರೋಗ್ಯವಾಗಿ ಇರಬೇಕು ಅಲ್ವೇ? ಸಾಧ್ಯವಾದಷ್ಟೂ ಇತರರಿಗೆ ಸಹಾಯ ಮಾಡೋಣ ಎಂದರೂ ಅನೇಕ ಆತಂಕ, ಸವಾಲುಗಳಿವೆ. ಬೇಸರ, ದುಃಖ, ಅಸಹಾಯಕ ಸ್ಥಿತಿಯಿದೆ. ಎಲ್ಲರೂ ಮುನ್ನೆಚ್ಚರಿಕೆ ವಹಿಸಿ, ಅವಕಾಶ ಸಿಕ್ಕ ಕೂಡಲೆ ವ್ಯಾಕ್ಸಿನ್ ಹಾಕಿಸಿಕೊಳ್ಳಿ ಎಂದಷ್ಟೇ ಜನರಿಗೆ ಹೇಳಬಹುದು.

| ವಸುಧೇಂದ್ರ ಕಥೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net