ಬೇಸಿಗೆಯಲ್ಲಿ ಹೇಗಿರಬೇಕು ಆಹಾರ ಸೇವನೆ?

Summer
Published on
ಬಿಸಿಲ ಝುಳ ಶುರುವಾಗಿದೆ. ಸುಡುವ ಬಿಸಿಲಿನಿಂದಾಗಿ ಸುಸ್ತು, ನಿದ್ದೆ ಬಾರದಿರುವುದು ಮೊದಲಾದ ಲಕ್ಷಣಗಳು ಕಾಡತೊಡಗುತ್ತವೆ. ಅದಕ್ಕಾಗಿ ಭಯ ಬೇಡ. ಈ ಕಾಲಕ್ಕಾಗಿ ನಮ್ಮ ಆಹಾರದಲ್ಲಿ ಕೆಲಮಟ್ಟಿನ ಬದಲಾವಣೆ ಮಾಡಿಕೊಂಡರೆ ಬೇಸಿಗೆಯನ್ನು ಕಿರಿಕಿರಿಯಿಲ್ಲದೇ ಕಳೆಯಬಹುದು. ಕಾಲಕ್ಕೆ ತಕ್ಕಂತೆ ಆಹಾರ ಸೇವಿಸಿದರೆ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ. ಆ ಕಾಲದ ಪ್ರಭಾವದಿಂದ ಉಂಟಾಗುವ ದೈಹಿಕ ಏರುಪೇರುಗಳು ಹತೋಟಿಗೆ ಬರುತ್ತವೆ. ಈ ಕಾರಣದಿಂದಾಗಿ ಇಂದು ನಾವು ಬೇಸಿಗೆಯಲ್ಲಿ ಹೆಚ್ಚಾಗಿ ಸೇವಿಸಬಹುದಾದ ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.

ಇಲ್ಲಿ ಸೂಚಿಸಿದ ಆಹಾರಗಳನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ಬರುವ ಸಮಸ್ಯೆಗಳು, ಸುಸ್ತು, ನಿದ್ರಾಹೀನತೆ, ಉಷ್ಣತೆ ಮುಂತಾದ ತೊಂದರೆಗಳು ಉಂಟಾಗುವುದನ್ನು ತಪ್ಪಿಸಬಹುದು. ಆಯುರ್ವೆದದ ಗ್ರಂಥಗಳ ಪ್ರಕಾರ ಬೇಸಿಗೆಯಲ್ಲಿ ಸಿಹಿ ಪ್ರಧಾನವಾಗಿರುವ ಆಹಾರವನ್ನು ಬಳಸಬೇಕು, ಸುಲಭವಾಗಿ ಜೀರ್ಣವಾಗುವಂತಹ, ಕೊಬ್ಬನ್ನು ಹೊಂದಿರುವ, ತಂಪು ಗುಣ ಹೊಂದಿರುವ ಮತ್ತು ದ್ರವ ಪ್ರಧಾನವಾಗಿರುವ ಆಹಾರವನ್ನು ಸೇವಿಸಬೇಕು. ತುಂಬಾ ಹುಳಿ, ಉಪ್ಪು, ಖಾರ ಇರುವ, ಉಷ್ಣ ಗುಣಹೊಂದಿರುವ ಮತ್ತು ಜೀರ್ಣಕ್ಕೆ ಕಷ್ಟಕರವಾದ ಆಹಾರವನ್ನು ಸೇವಿಸಬಾರದು. ಹೆಚ್ಚಾಗಿ ಸೇವಿಸಬೇಕಾದ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳೋಣ.

ಹಾಲು: ದೇಸಿ ತಳಿಯ, ಹುಲ್ಲನ್ನು ಮೆಂದ ಆಕಳಿನ ಹಾಲನ್ನು ಬೇಸಿಗೆಯಲ್ಲಿ ಸೇವಿಸುವುದರಿಂದ ದೇಹದ ಶಕ್ತಿಯಲ್ಲಿ ವೃದ್ಧಿಯಾಗುವುದಲ್ಲದೆ, ಮಾನಸಿಕ ಬಲವೂ ವೃದ್ಧಿಯಾಗಿ ಸುಸ್ತು, ನಿದ್ರಾಹೀನತೆಯಂತಹ ಸಮಸ್ಯೆಗಳು ಹತೋಟಿಗೆ ಬರುತ್ತವೆ. ಉಷ್ಣತೆಯು ಕಡಿಮೆಯಾಗುತ್ತದೆ.

ಬೆಣ್ಣೆ: ಹಾಲಿನ ಕುರಿತು ಹೇಳಿರುವ ಬಹುತೇಕ ಎಲ್ಲ ಗುಣಗಳನ್ನು ಹೊಂದಿರುವುದು ಬೆಣ್ಣೆ. ಹಾಗಾಗಿ ಇದನ್ನು ಸೇವಿಸುವುದರಿಂದ ಬೇಸಿಗೆಯಲ್ಲಿ ತುಂಬಾ ಅನುಕೂಲವಾಗುತ್ತದೆ. ಜೊತೆಗೆ ಇದರ ಸೇವನೆಯಿಂದ ಚರ್ಮ, ಮೂಳೆ ಮತ್ತು ಹೊಟ್ಟೆಯ ಆರೋಗ್ಯದಲ್ಲಿ ಸುಧಾರಣೆ ಉಂಟಾಗುತ್ತದೆ. ಆದರೆ ಇದು ಜೀರ್ಣಕ್ಕೆ ಸ್ವಲ್ಪ ಕಷ್ಟಕರವಾದ್ದರಿಂದ ಇದನ್ನು ರಾತ್ರಿಯ ಸಮಯದಲ್ಲಿ ಸೇವನೆ ಮಾಡುವುದು ಬೇಡ.

ಮಜ್ಜಿಗೆ: ಬೆಣ್ಣೆ ತೆಗೆದ ಮಜ್ಜಿಗೆಗೆ ನಿಜವಾದ-ಸಾವಯವ ಸಕ್ಕರೆಯನ್ನು ಹಾಕಿ ಸೇವಿಸುವು ದರಿಂದ ಬೇಸಿಗೆಯಲ್ಲಿ ಉಂಟಾಗುವ ಬಹುತೇಕ ಎಲ್ಲ ಸಮಸ್ಯೆಗಳನ್ನು ಹತೋಟಿಯಲ್ಲಿ ಇಟ್ಟುಕೊಳ್ಳಬಹುದು. ವಿಶೇಷವಾಗಿ ಆಮಶಂಕೆ, ಹೊಟ್ಟೆ ನೋವು, ಹೊಟ್ಟೆ ಉರಿ, ತಲೆನೋವುಗಳಲ್ಲಿ ಅನುಕೂಲವಾಗುತ್ತದೆ. ಆದರೆ ಮಜ್ಜಿಗೆ ಸ್ವಲ್ಪವೂ ಹುಳಿಯಾಗಿರ ಬಾರದು. ಆಗಷ್ಟೇ ಕಡೆದ ತಾಜಾ ಮಜ್ಜಿಗೆಯಾಗಿರಬೇಕು.

ಪಾನಕ: ಖರ್ಜೂರ, ದ್ರಾಕ್ಷಿ, ಪರುಷಕ (ಪಾಲಸ ಹಣ್ಣು)ಗಳನ್ನು ಸಮಪ್ರಮಾಣದಲ್ಲಿ ಸೇರಿಸಿ ನೀರಿನಲ್ಲಿ ಕಲಸಿ ಜ್ಯೂಸ್​ನಂತೆ ಮಾಡಿಕೊಂಡು ಅದಕ್ಕೆ ಸ್ವಲ್ಪ ಏಲಕ್ಕಿ ಪುಡಿ ಮತ್ತು ಚಕ್ಕೆ ಪುಡಿಗಳನ್ನು ಹಾಕಿ ಸೇವಿಸಲು ಆಯುರ್ವೇದ ಹೇಳುತ್ತದೆ. ಇದರಿಂದ ಬೇಸಿಗೆಯಲ್ಲಿನ ಉಷ್ಣತೆಯಿಂದ ಉಂಟಾಗುವ ರಕ್ತಸ್ರಾವ, ಕಣ್ಣುರಿ, ಸುಸ್ತು, ಚರ್ಮದಲ್ಲಾಗುವ ಉರಿ - ತುರಿಕೆಗಳು ಉಂಟಾಗುವುದಿಲ್ಲ, ಉಂಟಾಗಿದ್ದರೂ ಗುಣವಾಗುತ್ತವೆ.

ಮಾವಿನ ಹಣ್ಣು: ಚೆನ್ನಾಗಿ ಬಲಿತ ಹುಳಿಯಿಲ್ಲದ ಮಾವಿನಹಣ್ಣನ್ನು ಸೇವಿಸುವುದರಿಂದ ಶಕ್ತಿ ವೃದ್ಧಿಯ ಜೊತೆಗೆ ಬೇಸಿಗೆಯಲ್ಲಿ ಉಂಟಾಗುವ ವಾತ-ಪಿತ್ತ ಸಮಸ್ಯೆಗಳು ಹತೋಟಿಗೆ ಬರುತ್ತವೆ. ಬೂದುಗುಂಬಳ ತಂಪು ಗುಣವನ್ನು ಹೊಂದಿರುವ, ದ್ರವ ಗುಣ ಪ್ರಧಾನವಾಗಿರುವ, ದೇಹಕ್ಕೆ ಮತ್ತು ಮಿದುಳಿಗೆ ಶಕ್ತಿಯನ್ನು ಹೆಚ್ಚಿಸುವ ಬೂದುಗುಂಬಳವನ್ನು ಬೇಸಿಗೆಯಲ್ಲಿ ಹೆಚ್ಚಾಗಿ ಬಳಸುವುದರಿಂದ ಉರಿಮೂತ್ರ, ಚರ್ಮರೋಗಗಳು, ಅಸಿಡಿಟಿ ಯಂತಹ ಸಮಸ್ಯೆಗಳು ಉಂಟಾಗುವುದಿಲ್ಲ. ನಿದ್ರೆಯು ಚೆನ್ನಾಗಿ ಬಂದು ಲವಲವಿಕೆಯಿಂದ ಇರಲು ಸಹಾಯವಾಗುತ್ತದೆ.

ನೀರು: ಲಾವಂಚ ಹಾಕಿ ಕುದಿಸಿದ ನೀರಿಗೆ ಸ್ವಲ್ಪ ಸೊಗದೇ ಬೇರಿನ ಪುಡಿ ಮತ್ತು ತೇಯ್ದ ಶುದ್ಧ ಶ್ರೀಗಂಧದ ಪೇಸ್ಟ್ ಹಾಕಿ ಮಡಿಕೆಯಲ್ಲಿ ಇಟ್ಟ ತಣ್ಣನೆಯ ನೀರನ್ನು ಬೇಸಿಗೆಯಲ್ಲಿ ಕುಡಿಯಬೇಕು ಮತ್ತು ಬೇರೆ ಕಾಲಗಳಲ್ಲಿ ಸೇವಿಸುವುದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬೇಸಿಗೆಯಲ್ಲಿ ನೀರನ್ನು ಸೇವಿಸಲೇಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net