

ನವೋದ್ಯಮ ಆರಂಭಿಸುವ ಸಂದರ್ಭದಲ್ಲಿ ಹಣಕಾಸಿನ ಅವಶ್ಯಕತೆ ಪೂರೈಸುವುದಕ್ಕೆ ಲಭ್ಯವಿರುವುದೇ ಏಂಜೆಲ್ ಫಂಡ್. ಇಲ್ಲಿ ವ್ಯಾಪಾರೋದ್ಯಮದ ಚಿಂತನೆಯನ್ನು ಮೆಚ್ಚಿ, ಅದರ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ ಏಂಜೆಲ್ ಫಂಡಿಂಗ್ ಕಂಪನಿಯು ಅದರ ಮೇಲೆ ಹೂಡಿಕೆ ಮಾಡುತ್ತದೆ. ಅರ್ಬನ್ ಕಂಪನಿ, ಓಲಾ, ಸ್ನಾ್ಯಪ್ಡೀಲ್ ಮುಂತಾದ ನವೋದ್ಯಮಗಳು ಏಂಜೆಲ್ ಫಂಡಿಂಗ್ ನೆರವಿನೊಂದಿಗೆ ವ್ಯವಹಾರ ಶುರುಮಾಡಿದ್ದವು. ಏಂಜೆಲ್ ಫಂಡಿಂಗ್ ಮಾಡುವವರು ಇಂತಹ ಕಂಪನಿಗಳಲ್ಲಿ ಗರಿಷ್ಠ ಶೇಕಡ 30ರ ತನಕ ಈಕ್ವಿಟಿ ಷೇರುಗಳನ್ನು ಕೇಳುವ ಸಾಧ್ಯತೆ ಇರುತ್ತದೆ.
ಯಂತ್ರೋಪಕರಣಗಳ ಖರೀದಿ, ಪ್ರಚಾರ ಅಭಿಯಾನ ಮುಂತಾದ ಕಂಪನಿಯ ವಿಶೇಷ ಕಾರ್ಯಗಳಿಗೆ ಬಳಸುವುದಕ್ಕೆ ಹಣಕಾಸಿನ ಅವಶ್ಯಕತೆ ಬರುವುದು ಸಹಜ. ಇಂತಹ ಸಂದರ್ಭದಲ್ಲಿ ನೆರವಿಗೆ ಬರುವುದೇ ಡೆಟ್ ಫಂಡಿಂಗ್. ಇದು ಒಂದು ರೀತಿಯ ಸಾಲದ ರೂಪದಲ್ಲಿ ಬಂಡವಾಳವನ್ನು ಪಡೆದುಕೊಳ್ಳುವುದಾಗಿದೆ. ಅಪಾಯದಿಂದ ತಪ್ಪಿಸಿಕೊಳ್ಳಲು ಹೂಡಿಕೆದಾರರು ಈ ರೀತಿ ಮಾಡುವುದಿದೆ. ವೆಂಚರ್ ಕ್ಯಾಪಿಟಲ್ ಫಂಡಿಂಗ್ ಮಾಡುವವರು ಇಂತಹ ಡೆಟ್ ಫಂಡ್ ನೆರವನ್ನು ನೀಡುತ್ತಾರೆ.
ಸ್ಟಾರ್ಟಪ್ ಫಂಡಿಂಗ್ನ ವಿಚಾರದಲ್ಲಿ ಸರಿಯಾದ ಸಮಯದಲ್ಲಿ ಸರಿಯಾದ ಫಂಡಿಂಗ್ ಪಡೆದುಕೊಳ್ಳುವುದು ಅತೀಅವಶ್ಯವಾಗಿರುತ್ತದೆ. ಪ್ರಸ್ತುತ ನವೋದ್ಯಮಗಳ ವಿಸ್ತರಣೆಗಾಗಿಯೇ ವೆಂಚರ್ ಕ್ಯಾಪಿಟಲ್ ಫಂಡಿಂಗ್ ಆಯ್ಕೆ ಲಭ್ಯವಿದೆ. ಫ್ಲಿಪ್ಕಾರ್ಟ್, ಬುಕ್ ಮೈ ಶೋ ಮುಂತಾದ ನವೋದ್ಯಮಗಳು ಇಂತಹ ವೆಂಚರ್ ಕ್ಯಾಪಿಟಲ್ ಫಂಡಿಂಗ್ ನೆರವು ಪಡೆದು ತಮ್ಮ ವ್ಯವಹಾರ ವಿಸ್ತರಣೆ ಮಾಡಿಕೊಂಡಿವೆ. ಇದರಲ್ಲಿ ಗಮನಿಸಬೇಕಾದ ಅಂಶ ಎಂದರೆ, ಇಂತಹ ವೆಂಚರ್ ಕ್ಯಾಪಿಟಲ್ ಫಂಡಿಂಗ್ ಅನ್ನು ಮೂರರಿಂದ ಐದು ವರ್ಷದ ಅವಧಿಯಲ್ಲಿ ಕಂಪನಿಗಳು ಹಿಂದಕ್ಕೆ ನೀಡಬೇಕಾಗುತ್ತದೆ.
ಸ್ಟಾರ್ಟಪ್ಗಳಿಗೆ ಹಣಕಾಸಿನ ನೆರವು ಒದಗಿಸುವ ಒಂದು ಆಯ್ಕೆ ಕ್ರೌಡ್ ಫಂಡಿಂಗ್. ಕೆಟೋ, ವಿಶ್ಬೆರ್ರಿ, ಫಂಡ್ಲೈನ್ಡ್ ಮುಂತಾದ ವೇದಿಕೆಗಳು ಇದನ್ನು ಒದಗಿಸುವ ನಿಟ್ಟಿನಲ್ಲಿ ನವೋದ್ಯಮಗಳಿಗೆ ನೆರವು ನೀಡುತ್ತವೆ. ಈ ನೆರವು ಪಡೆದುಕೊಳ್ಳಲು ನವೋದ್ಯಮ ಆರಂಭಿಸುವವರು ತಮ್ಮ ಚಿಂತನೆಗಳನ್ನು ಕ್ರೌಡ್ ಫಂಡಿಂಗ್ ವೇದಿಕೆಗಳಲ್ಲಿ ನಮೂದಿಸಬೇಕು. ಹಣಕಾಸಿನ ನೆರವಿಗಾಗಿ ಮನವಿ ಮಾಡಬೇಕು. ಈ ರೀತಿ ಪಡೆದುಕೊಂಡ ಹಣವನ್ನು ಯಾವ ರೀತಿ, ಯಾವ ಉದ್ದೇಶಕ್ಕೆ ಬಳಸಲಾಗುತ್ತದೆ ಎಂಬ ವಿವರವನ್ನೂ ವೆಬ್ಸೈಟ್ನಲ್ಲಿ ನೀಡಬೇಕು. ನಿಮ್ಮ ಯೋಜನೆ ಇಷ್ಟವಾದವರು ಇದರಲ್ಲಿ ಹೂಡಿಕೆ ಮಾಡುತ್ತಾರೆ.