ಅಣ್ವಸ್ತ್ರದಿಂದ ಇರಾನ್ ಎಷ್ಟು ದೂರದಲ್ಲಿದೆ...?

ವಿಜಯವಾಣಿ (1)
Published on

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಪಶ್ಚಿಮ ಏಷ್ಯಾದ ಮೂರು ಸಹಸ್ರಮಾನಗಳ ರಕ್ತರಂಜಿತ ಇತಿಹಾಸದ ಮತ್ತೊಂದು ಅಧ್ಯಾಯ ಈಗಷ್ಟೇ ಮುಕ್ತಾಯವಾಗಿದೆ, ಲಾಗಾಯ್ತಿನಂತೆ ಮುಂದಿನದರ ಸೂಚನೆಗಳನ್ನು ಧಾರಾಳವಾಗಿ ನೀಡಿ. ತನ್ನ ಅಣ್ವಸ್ತ್ರ ಯೋಜನೆಯನ್ನು ನಿಲ್ಲಿಸುವ ಒಪ್ಪಂದಕ್ಕೆ ಬರಲು ಇರಾನ್​ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದ ಎರಡು ತಿಂಗಳ ಗಡುವು ಮುಕ್ತಾಯವಾದ ಮರು ಬೆಳಗ್ಗೆಯೇ ಆ ಶಿಯಾ ರಾಷ್ಟ್ರದ ಅಣು ಸಂಯಂತ್ರಗಳು ಮತ್ತು ಸೇನಾ ನೆಲೆಗಳ ಮೇಲೆ ಇಸ್ರೇಲ್ ದಾಳಿ ಆರಂಭಿಸಿದ್ದು ತನ್ನ ಅನುಕೂಲಕ್ಕಾಗಿಯೇ ಟ್ರಂಪ್ ರೂಪಿಸಿದ್ದ ಕಾರ್ಯಯೋಜನೆಗೆ ಸಹಕರಿಸುವುದಕ್ಕಾಗಿ. ಕಳೆದ ಹದಿನೆಂಟು ವರ್ಷಗಳಿಂದಲೂ ಇಸ್ರೇಲ್ ಎದುರಿಸಿದ್ದುದು ಇರಾನ್​ನ ಕೈಗೊಂಬೆಗಳಾದ ಗಾಜಾದ ಹಮಾಸ್, ಲೆಬನಾನ್​ನ ಹಿಜ್ಬುಲ್ಲಾ ಮತ್ತು ಇತ್ತೀಚೆಗೆ ಯೆಮೆನ್​ನ ಹೂತಿಗಳನ್ನು. ಎಷ್ಟಾದರೂ ಅವು ಕೈಗೊಂಬೆಗಳು. ಅವುಗಳ ಭಯೋತ್ಪಾದಕ ಕೃತ್ಯಗಳು, ಸಣ್ಣಗಾತ್ರದ ಡ್ರೋನ್ ಮತ್ತು ಕ್ಷಿಪಣಿಗಳ ದಾಳಿಗಳಿಗಾಗಿ ಇಸ್ರೇಲ್ ಅವುಗಳನ್ನು ಸೂಕ್ತವಾಗಿಯೇ ಶಿಕ್ಷಿಸುತ್ತಿತ್ತು. ಆದರೆ ಕೈಗೊಂಬೆಗಳನ್ನು ಕೆಳಗಿಟ್ಟು ಕೈಯೇ ಎರಗತೊಡಗಿದಾಗ ಪರಿಸ್ಥಿತಿ ಬೇರೆಯೇ ಆಗಿಬಿಟ್ಟಿತು.

ಇಸ್ರೇಲ್​ನ ದಾಳಿಗಳಿಗೆ ಪ್ರತಿಯಾಗಿ ಇರಾನ್ ತನ್ನ ಬತ್ತಳಿಕೆಯಲ್ಲಿನ ಅಸ್ತ್ರಗಳನ್ನು ಬೇಕಾಬಿಟ್ಟಿಯಾಗಿ ಬಳಸತೊಡಗಿತು. ಇಸ್ರೇಲ್ ಉದ್ದಗಲಕ್ಕೂ ಇರಾನಿ ಕ್ಷಿಪಣಿಗಳು ಮತ್ತು ಡ್ರೋನ್​ಗಳು ಎರಗತೊಡಗಿದವು. ಒಂದೇ ಕ್ಷಿಪಣಿ ಒಂಬತ್ತು ಸ್ಪೋಟಕಗಳನ್ನು ಚೆಲ್ಲುವ ಕ್ಲಷ್ಟರ್ ಬಾಂಬ್​ಗಳನ್ನು ಇರಾನ್ ಬಳಸಿದ್ದು ಮತ್ತು ಆಸ್ಪತ್ರೆಯನ್ನೂ ತನ್ನ ದಾಳಿಗೆ ಗುರಿಯಾಗಿಸಿಕೊಂಡದ್ದು ತೆಹರಾನ್​ನ ಮೂಲಭೂತವಾದಿ ಆಡಳಿತಗಾರರು ಯುದ್ಧದ ಯಾವ ನಿಯಮವನ್ನೂ ಪಾಲಿಸುವವರಲ್ಲ ಎಂದು ಜಗತ್ತಿಗೇ ಮನವರಿಕೆ ಮಾಡಿಕೊಟ್ಟಿತು. ಆ ದಾಳಿಗಳನ್ನು ಪೂರ್ಣವಾಗಿ ತಡೆಯಲು ಇಸ್ರೇಲ್​ನ ಬಹುಪ್ರಸಿದ್ಧ ಐರನ್ ಡೋಮ್ ವಾಯುರಕ್ಷಣಾವ್ಯವಸ್ಥೆ ಶಕ್ತವಾಗಿಲ್ಲದಿರುವುದು ಗೋಚರವಾಗತೊಡಗಿದಂತೇ ಈ ನಾಟಕದ ಸೂತ್ರಧಾರ ಅಮೆರಿಕಾ ತಾನೇ ರಂಗಕ್ಕಿಳಿಯುವುದಕ್ಕೆ ಕ್ಷಣಗಣನೆಯೂ ಆರಂಭವಾಯಿತು. ಆದರೆ ಆಗ ಜಗತ್ತು ಗೊಂದಲಗೆಟ್ಟದ್ದು ಇಸ್ರೇಲ್-ಇರಾನ್ ಕದನದಲ್ಲಿ ಅಮೆರಿಕಾ ಮಧ್ಯಪ್ರವೇಶಿಸಬೇಕೇ ಬೇಡವೇ ಎನ್ನುವ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ತಮಗೆ ಎರಡು ವಾರಗಳ ಕಾಲಾವಧಿ ಅಗತ್ಯವಿದೆಯೆಂದು ಟ್ರಂಪ್ ಜೂನ್ 20ರಂದು ಹೇಳಿದಾಗ.

ಇರಾನ್​ನ ಬತ್ತಳಿಕೆಯಲ್ಲಿ 3,000 ಬ್ಯಾಲಿಸ್ಟಿಕ್ ಮಿಸೈಲ್​ಗಳಿದ್ದವು. ಸಮರ ಆರಂಭವಾದ ಮೊದಲ ನಾಲ್ಕೈದು ದಿನಗಳಲ್ಲೇ ಇಸ್ರೇಲ್​ನ ಆತಂಕವನ್ನು ಹೆಚ್ಚಿಸಿದ್ದು ಕೇವಲ ಇರಾನಿ ಮಿಸೈಲ್​ಗಳ ಸಂಖ್ಯೆಯಲ್ಲ. ಇರಾನ್ ನ್ಯಾಯಸಮ್ಮತವಲ್ಲದ ಬಗೆಯಲ್ಲಿ ಕ್ಷಿಪಣಿಗಳನ್ನು ಬಳಸುತ್ತಿದ್ದ ಬಗೆ ಇಸ್ರೇಲ್ ಅನ್ನು ಧೃತಿಗೆಡಿಸಿದ್ದು ಸಹಜ. ಅಂತಹ ಸನ್ನಿವೇಶದಲ್ಲಿ ಇಸ್ರೇಲ್ ಅನ್ನು ಯುದ್ಧಕ್ಕಟ್ಟಿದ ಟ್ರಂಪ್ ಈಗ ಎರಡು ವಾರಗಳ ಕಾಲ ಕೈಕಟ್ಟಿಕೊಂಡು ತಮಾಷೆ ನೋಡುತ್ತ ಕೂರುತ್ತಾರೆನ್ನುವುದು ಹಾಸ್ಯಾಸ್ಪದವೇ ಸರಿ. ಆದರೆ, ಸದ್ಯದಲ್ಲೆ ಏನೋ ಭಾರಿಯಾದದ್ದು ಜರುಗಲಿದೆ ಎನ್ನವುದು ನಿಶ್ಚಿತವೇ ಆಗಿತ್ತು.

ಇಸ್ರೇಲ್-ಇರಾನ್ ಸಂಘರ್ಷ ಆರಂಭವಾದ ನಾಲ್ಕನೆಯ ದಿನ ಜೂನ್ 16ರಂದು ಕೆನಡಾದಲ್ಲಿನ ಜಿ-7 ಸಮಾವೇಶವನ್ನು ತೊರೆದು ಟ್ರಂಪ್ ವಾಷಿಂಗ್​ಟನ್​ಗೆ ದೌಡಾಯಿಸಿದರು. ಆಗ ಫ್ರೆಂಚ್ ಅಧ್ಯಕ್ಷ ಇಮ್ಯಾನ್ಯುಯೇಲ್ ಮ್ಯಾಕ್ರೋ, ‘ಟ್ರಂಪ್ ಕದನವಿರಾಮ ಮಾಡಿಸಲು ಹೋಗುತ್ತಿದ್ದಾರೆ’ ಎಂದು ನಗೆಚಟಾಕಿ ಹಾರಿಸಿದ್ದರು. ಭಾರತ ಮತ್ತು ಪಾಕಿಸ್ತಾನಗಳ ನಡುವೆ ತಾನು ಕದನವಿರಾಮ ಮಾಡಿಸಿರುವುದಾಗಿ ಅಷ್ಟುಹೊತ್ತಿಗಾಗಲೇ ಟ್ರಂಪ್ 14 ಸಲ ಹೇಳಿಕೊಂಡು ನಗೆಪಾಟಲಿಗೀಡಾಗಿದ್ದರಿಂದ ಈಗ ಅವರು ಸಮಾವೇಶ ತೊರೆದು ಓಡುತ್ತಿರುವುದೂ ಪಶ್ಚಿಮ ಏಷ್ಯಾದಲ್ಲಿ ಕದನವಿರಾಮ ಸ್ಥಾಪಿಸಲಿಕ್ಕಾಗಿಯೇ ಎಂದು ಬಣ್ಣಿಸಿ ಸಂಘೀಯ ಸಮಾವೇಶದಲ್ಲಿ ಒಂದಿಷ್ಟು ನಗೆಯ ಅಲೆಗಳನ್ನೆಬ್ಬಿಸುವುದು ಮ್ಯಾಕ್ರೋ ಅವರ ಇಂಗಿತವಾಗಿತ್ತು. ಆದರೆ ಅದಕ್ಕೆ ಟ್ರಂಪ್ ಪ್ರತಿಕ್ರಿಯಿಸಿದ್ದು ಹೇಗೆ? Pot calling kettle black! ಎಂಬ ಗಾದೆಯಂತೆ ಮ್ಯಾಕ್ರೋ ಅವರನ್ನು ಟ್ರಂಪ್ ‘ಪ್ರಚಾರಪ್ರಿಯ’ ಎಂದು ತಮ್ಮ ‘ಟ್ರೂಥ್ ಸೋಷಿಯಲ್’ ಮೈಕ್ರೋ ಬ್ಲಾಗಿಂಗ್ ತಾಣದಲ್ಲಿ ಜರೆದರು! ಅವರ ಈ ವರ್ತನೆಯಿಂದ ತಿಳಿಯುವುದು ಆ ಗಳಿಗೆಯಲ್ಲಿ ಅವರು ಗೊಂದಲಕ್ಕೊಳಗಾಗಿದ್ದರು ಮತ್ತು ಲಘುಹಾಸ್ಯದ ಮಾತೊಂದನ್ನು ಹಾಗೇ ತೆಗೆದುಕೊಳ್ಳಲಾಗದಷ್ಟು ಅವರು ಉಗ್ವಿಗ್ನರಾಗಿದ್ದರು ಎಂದು. ಅವರ ಮನಸ್ಸಿನಲ್ಲಿ ಏನು ನಡೆಯುತ್ತಿದ್ದಿರಬಹುದು ಎಂಬ ಸುಳಿವು ನೀಡುವುದು ಅವರು ಬರೆದ ‘ದೊಡ್ಡದೊಂದನ್ನು ಮಾಡಲು ನಾನು ಹೋಗುತ್ತಿದ್ದೇನೆ’ ಎಂಬ ಮಾತು.

ಜತೆಗೆ, ತಾವು ವಾಷಿಂಗ್​ಟನ್ ತಲುಪುವ ಹೊತ್ತಿಗೆ ಅಧ್ಯಕ್ಷರು ಮತ್ತವರ ಪ್ರಮುಖ ಸಹಯೋಗಿಗಳು ಗಂಭೀರ ವಿಷಯಗಳನ್ನು ರ್ಚಚಿಸುವ ಮತ್ತು ಮಹತ್ವದ ತೀರ್ವನಗಳನ್ನು ತೆಗೆದುಕೊಳ್ಳುವ ಸ್ಥಳವಾದ ಶ್ವೇತಭವನದ ‘ಸಿಚ್ಯುಯೇಷನ್ ರೂಮ್​ನಲ್ಲಿ ಎಲ್ಲ ಸಿದ್ಧತೆಗಳೊಂದಿಗೆ ಉಪಾಧ್ಯಕ್ಷರು, ರಕ್ಷಣಾ ಮತ್ತು ವಿದೇಶಾಂಗ ಕಾರ್ಯದರ್ಶಿಗಳು, ರಕ್ಷಣಾ ಪಡೆಗಳ ಮುಖ್ಯಸ್ಥರು ಹಾಗೂ ಇನ್ನಿತರರು ಸಜ್ಜಾಗಿರಬೇಕೆಂದು ಅವರು ತಾಕೀತು ಮಾಡಿದ್ದೂ ಹುಬ್ಬೇರಿಸುವಂಥ ಬೆಳವಣಿಗೆ. ಟ್ರಂಪ್​ರ ಆ ನಡೆಗೆ ಕಾರಣ ಇರಾನ್​ನ ಸವೋಚ್ಚ ಧಾರ್ವಿುಕ ನಾಯಕ ಆಯತೊಲ್ಲಾ ಆಲಿ ಖಮೆನೀ ಕಳಿಸಿದ ಸಂದೇಶ. ಇನ್ನೂ ಬಹಿರಂಗವಾಗದ ಮಧ್ಯವರ್ತಿಯೊಬ್ಬರ ಮೂಲಕ ಖಮೆನೀ ಕಳುಹಿಸಿದ ಆ ಸಂದೇಶದ ಸಾರಂಶ ಇದು- ‘ಇರಾನ್ ವಿರುದ್ಧದ ಇಸ್ರೇಲಿ ದಾಳಿಗೆ ಬೆಂಬಲವಾಗಿ ನಿಲ್ಲುವ ನೀತಿಯನ್ನು ಅಮೆರಿಕಾ ತೊರೆಯದೆ ಇದ್ದರೆ ಅಮೆರಿಕಾದಲ್ಲೇ ಇರುವ ನಮ್ಮ ಸ್ಲೀಪರ್​ಸೆಲ್​ಗಳನ್ನು ಕ್ರಿಯಾಶೀಲಗೊಳಿಸುತ್ತೇವೆ. ಅವು ಅಮೆರಿಕಾದ ಉದ್ದಗಲಕ್ಕೂ ರಕ್ತಪಾತಗಳನ್ನೆಸಗುತ್ತವೆ!’

ಇಂತಹದೊಂದು ಸಂದೇಶ ಬಂದಾಗ ಅಮೆರಿಕಾದ ಇರಾನ್​ನ ವಿಧ್ವಂಸಕ ಶಕ್ತಿಯ ಬಗ್ಗೆ ಅಧ್ಯಕ್ಷರಿಗೆ ಕಳವಳವಾಗುವುದು ಸಹಜ. ಆದರೆ ಆ ಕಳವಳವನ್ನು ಅಡಗಿಸಿಟ್ಟುಕೊಳ್ಳಲಾಗದ, ಅಧ್ಯಕ್ಷರಿಗೊಪ್ಪದ ಅಸಹಜ ಮನಸ್ಥಿತಿ ಟ್ರಂಪ್​ರದು ಎನ್ನುವುದೂ ಸಹಜವೇ. ಹೀಗಾಗಿಯೇ ಜೂನ್ 16ರಂದು ಕೆನಡಾದ ಕನನಾಸ್ಕಿಸ್​ನಲ್ಲಿ ಕಂಡ ಆ ಅಸಹಜ ಪ್ರಕರಣ. ಒಟ್ಟಾರೆ ಟ್ರಂಪ್ ಮಾತ್ರವಲ್ಲ ಇಡೀ ಅಮೆರಿಕಾದ ರಕ್ಷಣಾ ವ್ಯವಸ್ಥೆಗೆ ಸವಾಲೊಡ್ಡುವ ಸಂದೇಶವನ್ನು ಖಮೆನೀ ಕಳುಹಿಸಿದ್ದರು. ಇರಾನ್​ನ ಯುದ್ಧಸಾಮರ್ಥ್ಯದ ಪ್ರಾರಂಭಿಕ ಚಿತ್ರಣ ಪಡೆದುಕೊಳ್ಳಲು ಟ್ರಂಪ್ ಅದಾಗಲೇ ಇಸ್ರೇಲ್ ಅನ್ನು ಕಣಕ್ಕಿಳಿಸಿದ್ದರು. ಅದರ ಪ್ರಾರಂಭಿಕ ಪರಿಣಾಮಗಳಿಂದಾಗಿ ಅಮೆರಿಕಾವನ್ನು ರಣರಂಗಕ್ಕಿಳಿಸುವ ನಿರ್ಧಾರವನ್ನೂ ಅವರು ತೆಗೆದುಕೊಂಡಿದ್ದರು. 9/11ರ ನೆನಪು ಟ್ರಂಪ್​ರನ್ನು ಕಾಡದಿರಲು ಸಾಧ್ಯವಿಲ್ಲ. ಹೀಗಾಗಿ ಇರಾನ್ ಅನ್ನು ಶಿಕ್ಷಿಸಲು ಈಗ ಅದರ ಅಣ್ವಸ್ತ್ರ ಯೋಜನೆ ಹಾಗೂ ಇಸ್ರೇಲ್ ಮೇಲಿನ ದಾಳಿಗಳು ಮತ್ತವುಗಳನ್ನು ತಿಂಗಳುಗಳವರೆಗೆ ಮುಂದುವರಿಸಿಕೊಂಡು ಹೋಗಬಲ್ಲ ಅದರ ಸಾಮರ್ಥ್ಯದ ಜತೆಗೆ ಅಮೆರಿಕಾಗೆ ಅದರ ಗಡಿಯೊಳಗೇ ಅನಾಹುತ ಎಸಗುವ ತೆಹರಾನ್​ನ ಇರಾದೆಯನ್ನು ಚಿವುಟಿಹಾಕಿ ಆ ದೇಶ ತನ್ನದೇ ಸುರಕ್ಷೆಯತ್ತ ಗಂಭೀರವಾಗಿ ಚಿಂತಿಸಬೇಕಾದ ಸನ್ನಿವೇಶವನ್ನೂ ಸೃಷ್ಟಿಸುವುದು ಟ್ರಂಪ್​ರ ಇರಾನ್ ನೀತಿಯ ಭಾಗವಾಯಿತು.

ಆದರೆ ವಾಷಿಂಗ್​ಟನ್ ತಲುಪಿದ ನಂತರ ಅವರು ತಮ್ಮ ಆ ಗಳಿಗೆ ಉದ್ವೇಗವನ್ನು ಶಮನಗೊಳಿಸಿಕೊಳ್ಳುವುದರಲ್ಲಿ ಸಫಲರಾದರು ಮತ್ತು ತಮ್ಮ ಲಾಗಾಯ್ತಿನ ‘ನೋಟ ಒಂದೆಡೆ, ಕೈ ಇನ್ನೊಂದೆಡೆ’ ಸ್ವಭಾವವನ್ನು ಇನ್ನಷ್ಟು ಸೊಗಸಾಗಿ ಜಗತ್ತಿನ, ಮುಖ್ಯವಾಗಿ ಇರಾನ್​ನ ಮುಂದೆ ಪ್ರದರ್ಶಿಸಲು ತೊಡಗಿದರು. ಅದರ ಪರಿಣಾಮವೇ ಕದನಪ್ರವೇಶದ ಕುರಿತಾಗಿ ಇನ್ನು ಎರಡು ವಾರಗಳಲ್ಲಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದು ಜೂನ್ 20ರಂದು ಬಂದ ಅವರ ಹೇಳಿಕೆ. ಆ ಹೇಳಿಕೆ ನೀಡುವ ಮೊದಲೇ ಅವರು ಇರಾನ್ ಮೇಲೆ ನೇರ ದಾಳಿಯೆಸಗುವ ನಿರ್ಧಾರವನ್ನು ತೆಗೆದುಕೊಂಡಿದ್ದು, ಬಿ-2 ಬಾಂಬರ್​ಗಳು ತಮ್ಮ ಹದಿನೆಂಟು ತಾಸುಗಳ ದೀರ್ಘ ಯಾನಕ್ಕೆ ತಯಾರಿಕೆ ಆರಂಭಿಸಿಯಾಗಿತ್ತು; ಇಪ್ಪತ್ತು ಮಾತ್ರವೇ ಇವೆ ಎಂದು ಹೇಳಲಾಗುವ, ‘ಬಂಕರ್ ಬಸ್ಟರ್’ ಎಂದೇ ಕುಖ್ಯಾತವಾದ, ಆರೂವರೆ ಟನ್ ಸ್ಪೋಟಕಗಳನ್ನು ಒಡಲಲ್ಲಿ ಹೊತ್ತ ಹದಿಮೂರೂವರೆ ಟನ್ ಭಾರದ ಬಿಜಿಯು-57 ಬಾಂಬ್​ಗಳು ಬಳಕೆಗೆ ತಯಾರಾಗಿ ಕೂತೂ ಆಗಿತ್ತು.

ಜೂನ್ 22ರ ಬೆಳಗ್ಗೆ ಫೋದೋ, ನತಾಂಜ್ ಮತ್ತು ಇಸ್ಪಹಾನ್​ನಲ್ಲಿರುವ ಇರಾನ್​ನ ಮುಖ್ಯ ಅಣು ಸ್ಥಾವರಗಳ ಮೇಲಾದ ದಾಳಿ ತನ್ನ ಉದ್ದೇಶಗಳನ್ನು ಸಾಧಿಸಿದೆಯೇ ಎನ್ನುವ ಪ್ರಶ್ನೆ ಜಗತ್ತನ್ನೇ ಕಾಡುತ್ತಿದೆ. ಪ್ರಶ್ನೆ ದೊಡ್ಡದಾಗಿ ಕೇಳಿಬರುತ್ತಿರುವುದು ಫೋದೋ ಬಗ್ಗೆ. ತನಗೆ ಎರಡು ವಾರಗಳ ಸಮಯ ಬೇಕಾಗುತ್ತದೆ ಎಂದು ಟ್ರಂಪ್ ಅತ್ತ ವಾಷಿಂಗ್​ಟನ್​ನಲ್ಲಿ ಹೇಳುತ್ತಿದ್ದಾಗಲೇ ಇತ್ತ ಇರಾನ್ ಅಮೆರಿಕಾದ ದಾಳಿಯನ್ನು ನಿರೀಕ್ಷಿಸಿ ಪರಿಹಾರಾತ್ಮಕ ಯೋಜನೆಗಳಿಗೆ ಮುಂದಾಗಿತ್ತು. ಉಪಗ್ರಹಗಳು ತೆಗೆದ ಚಿತ್ರಗಳಲ್ಲಿ ಜೂನ್ 20ರಂದು ಫೋದೋ ಸಂಯಂತ್ರದ ಬಳಿ ಎರಡು ಡಜನ್ ಟ್ರಕ್​ಗಳಿದ್ದುದು ಕಂಡುಬಂದಿದೆ. ಮರುದಿನ ಆ ಸಂಖ್ಯೆ 16ಕ್ಕೆ ಇಳಿದದ್ದೂ ಕಂಡುಬಂದಿದೆ. ಇದರರ್ಥ ಅಲ್ಲಿ ತಾನು ಸಂಸ್ಕರಿಸಿದ್ದ 880 ಪೌಂಡ್ ಯುರೇನಿಯಂ ಅನ್ನು ಇರಾನ್ ಬೇರೆಡೆಗೆ ಸಾಗಿಸಿದೆ ಎಂಬ ಮಾತು ಕೇಳಿಬರುತ್ತಿದೆ. ಅಲ್ಲದೆ ಫೋದೋ ಸಂಯಂತ್ರವಿರುವುದು ನೆಲಮಟ್ಟದಿಂದ 90 ಮೀಟರ್ ಕೆಳಗೆ, ಬಿಜಿಯು-57 ಬಾಂಬ್​ಗಳು ತಲುಪಬಹುದಾದ ಆಳ 61 ಮೀಟರ್ ಮಾತ್ರ, ಹೀಗಾಗಿ ಅಮೆರಿಕಾದ ದಾಳಿಯಿಂದ ಇರಾನಿ ಅಣ್ವಸ್ತ್ರ ಯೋಜನೆಗೆ ಧಕ್ಕೆಯಾಗಿಲ್ಲ ಎಂಬ ಮಾತುಗಳು ಅಮೆರಿಕಾದಲ್ಲೇ ದೊಡ್ಡದಾಗಿ ಕೇಳಿಬರುತ್ತಿವೆ. ಅದರಿಂದಾಗಿ ಟ್ರಂಪ್ ಅದೆಷ್ಟು ವ್ಯಗ್ರಗೊಂಡರೆಂದರೆ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಾರರ ಜತೆಗಿನ ಮಾತುಕಥೆಯಲ್ಲಿ ಅವರು ಸಂಯಮ ಕಳೆದುಕೊಂಡು ಅಸಭ್ಯ ಶಬ್ದಪ್ರಯೋಗವನ್ನು ಮಾಡಿದರು. ಅದಾದದ್ದು ಜೂನ್ 24ರಂದು.

ಎರಡೇ ದಿನಗಳಲ್ಲಿ ಪ್ರಕರಣ ಬೇರೊಂದು ತಿರುವು ಪಡೆದುಕೊಳ್ಳತೊಡಗಿತು. ಜೂನ್ 24ರಂದು ಎರಡು ವಿಷಯಗಳು ಜಾಗತಿಕವಾಗಿ ಸುದ್ದಿಯಾದವು. ಅಲ್ ಜಝೀರಾ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಇರಾನ್​ನ ವಿದೇಶಮಂತ್ರಿ ಅಬ್ಬಾಸ್ ಅರಾಘ್​ಚಿ ಅಮೆರಿಕಾದ ದಾಳಿಯಿಂದಾಗಿ ತಮ್ಮ ದೇಶದ ಅಣ್ವಸ್ತ್ರ ಯೋಜನೆಗೆ ಧಕ್ಕೆಯಾಗಿದೆ, ಯುರೇನಿಯಂ ಅನ್ನು ಸಂಸ್ಕರಿಸುವ ಸೆಂಟ್ರಿಫ್ಯೂಜ್​ಗಳು ಹಾನಿಗೊಳಗಾಗಿವೆ ಎಂದು ಹೇಳಿದರು. ಅದೇ ದಿನ ಇರಾನಿ ಸಂಸತ್ ‘ಮ್ಲಿಸ್’ ಅಣುಪ್ರಸರಣ ನಿಷೇಧ ಒಪ್ಪಂದದಿಂದ (ಎನ್​ಪಿಟಿ) ಇರಾನ್ ಅನ್ನು ಹೊರಗೊಯ್ಯುವ ಮಸೂದೆಯೊಂದನ್ನು ಅಂಗೀಕರಿಸಿತು. ಅದಕ್ಕೆ ದೇಶದ ಸವೋಚ್ಚ ರಕ್ಷಣಾ ಸಮಿತಿ ಸಮ್ಮತಿಸಿದರೆ ಮತ್ತು ರಾಷ್ಟ್ರಾಧ್ಯಕ್ಷರ ಸಹಿ ಬಿದ್ದರೆ ಅದು ಸರ್ಕಾರದ ಅಧಿಕೃತ ನೀತಿಯಾಗುತ್ತದೆ, ಅಲ್ಲಿಗೆ ಇರಾನ್ ಎನ್​ಪಿಟಿ ನಿಯಮಗಳಿಗೆ ಬದ್ಧವಾಗಿರುವುದಿಲ್ಲ ಎಂದರ್ಥ. ಆ ಪ್ರಕಾರ ಇನ್ನು ಮುಂದೆ ಇರಾನ್ ತನ್ನ ಅಣು ಸಂಯಂತ್ರಗಳನ್ನು ನಿಯಮಿತವಾಗಿ ಪರಿಶೀಲಿಸುವ ಪರವಾನಗಿಯನ್ನು ‘ಇಂಟರ್​ನ್ಯಾಷನಲ್ ಅಟಾಮಿಕ್ ಎನರ್ಜಿ ಏಜೆನ್ಸಿ’ ಅಂದರೆ ‘ಐಎಇಎ’ಗೆ ನೀಡುವುದಿಲ್ಲದಂತಹ ಸನ್ನಿವೇಶ!

ಇರಾನಿ ವಿದೇಶಮಂತ್ರಿಯವರ ಪ್ರಕಾರವೇ ಅಮೆರಿಕಾದ ದಾಳಿಯಿಂದ ತನ್ನ ಅಣು ಸಂಯಂತ್ರಗಳನ್ನು ಇರಾನ್ ಕಳೆದುಕೊಂಡಿರುವುದೇ ಆದರೆ ಈಗ ಅವುಗಳಿಂದ ಐಎಇಎ ಅಧಿಕಾರಿಗಳನ್ನು ಹೊರಗಿಡುವ ಕ್ರಮಕ್ಕೆ ಅರ್ಥವೇನು? ಇರಾನ್​ನ ಈ ದ್ವಂದ್ವನೀತಿಯನ್ನು ನೋಡಿದರೆ ಅದರ ಇಂಗಿತ ಗೋಚರವಾಗುತ್ತದೆ. ಅದು ಈಗಾಗಲೇ 60% ಸಂಸ್ಕರಿಸಿರುವ ಯುರೇನಿಯಂ ಅನ್ನು ಅಂದರೆ ಕಚ್ಚಾ ಯುರೇನಿಯಂನಲ್ಲಿ 0.7% ಮಾತ್ರವಿರುವ ಐಸೋಟೋಪ್-235 ಅನ್ನು ದೀರ್ಘ ಸಂಸ್ಕರಣಾವಿಧಾನದಿಂದ 60%ಗೆ ಏರಿಸಿದೆ. ಈ ಸಂಸ್ಕರಣೆ 90%ಗೇರಿದರೆ ಅಲ್ಲಿಗೆ ಇರಾನ್ ಅಣ್ವಸ್ತ್ರಗಳನ್ನು ಕೈವಶ ಮಾಡಿಕೊಂಡಂತೆ. ಆ 880 ಪೌಂಡ್ ಸಂಸ್ಕರಿತ ಯುರೇನಿಯಂನ್ನು ಅಮೆರಿಕಾದ ದಾಳಿಗೂ ಮೊದಲೇ ಇರಾನ್ ಬೇರೆಡೆ ಸಾಗಿಸಿಯಾಗಿದೆ. ಯುರೇನಿಯಂ ಐಸೋಟೋಪ್-235 ಅನ್ನು 60%ನಿಂದ 90%ಗೇರಿಸುವುದಕ್ಕೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಅಂದರೆ ಈಗ ಅಮೆರಿಕನ್ ದಾಳಿಯಿಂದ ಹಾಳಾಗಿರುವ ಸೆಂಟ್ರಿಫ್ಯೂಜ್​ಗಳನ್ನು ಬದಲಿಸಿ ಹೊಸ ಸೆಂಟ್ರಿಫ್ಯೂಜ್​ಗಳನ್ನು ಅಥವಾ ಬೇರೆಡೆ ಸುಸ್ಥಿತಿಯಲ್ಲೇ ಇರಬಹುದಾದ ಸೆಂಟ್ರಿಫ್ಯೂಜ್​ಗಳನ್ನು ಬಳಸಿ ಇರಾನ್ ತಾನು ಅಡಗಿಸಿಟ್ಟಿರುವ 60% ಸಂಸ್ಕರಿತ ಯುರೇನಿಯಂ ಅನ್ನು ರಹಸ್ಯವಾಗಿ 90% ಸಂಸ್ಕರಿಸುವ ಯೋಜನೆ ಹಾಕಿರಬಹುದು, ಅದು ಪತ್ತೆಯಾಗದೇ ಇರಲಿ ಎಂದು ಐಎಇಎ ಅಧಿಕಾರಿಗಳು ತನ್ನಲ್ಲಿಗೆ ಬರುವುದನ್ನು ತಡೆಯಲು ಹಂಚಿಕೆ ಹಾಕಿರಬಹದು! ಇದಕ್ಕೆ ಅಧ್ಯಕ್ಷ ಟ್ರಂಪ್ ಬಳಿ ಇರುವ ಉತ್ತರವೇನು?

ಇರಾನ್​ನಲ್ಲಿ ದಶಕದಿಂದಲೂ ಕಾರ್ಯನಿರ್ವಹಿಸುತ್ತಿದ್ದ 2,000 ಮೊಸಾದ್ ಬೇಹುಗಾರರಲ್ಲಿ ಸಾಕಷ್ಟು ಜನ ಇನ್ನೂ ಅಲ್ಲೇ ಸುರಕ್ಷಿತವಾಗಿದ್ದಾರೆ ಮತ್ತು ತಮ್ಮ ‘ಕೆಲಸ’ವನ್ನು ಮುಂದುವರಿಸಬಲ್ಲವರಾಗಿದ್ದಾರೆ. ಅವರು ಇರಾನ್ ಅಡಗಿಸಿಟ್ಟಿರುವ ಸಂಸ್ಕರಿತ ಯುರೇನಿಯಂ ಅನ್ನು ಪತ್ತೆಹಚ್ಚಬಲ್ಲರು. ಈ ನಡುವೆ ಇರಾನ್ ಆ ಯುರೇನಿಯಂ ಅನ್ನು ಗಡಿ ದಾಟಿಸಿ ಪಾಕಿಸ್ತಾನಕ್ಕೆ ಕಳುಹಿಸಿರಬಹುದೆಂಬ ಗುಮಾನಿ ಟ್ರಂಪ್ ಆಡಳಿತಕ್ಕೆ ತಟ್ಟಿದೆ. ವಿದೇಶಾಂಗ ಕಾರ್ಯದರ್ಶಿ ಮಾಕೋ ರೂಬಿಯೋ ಕಳೆದ ವಾರಾಂತ್ಯದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಶೆಹ್​ಬಾಜ್ ಶರೀಫ್ ಅವರಿಗೇ ನೇರವಾಗಿ ಕರೆಮಾಡಿ ಇರಾನ್​ನ ಅಣ್ವಸ್ತ್ರ ಯೋಜನೆಗೆ ಯಾವ ರೀತಿಯ ಸಹಕಾರವನ್ನೂ ನೀಡಕೂಡದು ಎಂದು ಧಮಕಿ ಹಾಕಿದ್ದಾರೆ. ಇದೆಲ್ಲದರ ಅರ್ಥ ಫೋರದೋ ಸಂಯಂತ್ರದಿಂದ ಇರಾನ್ ಸಾಗಿಸಿದ ಸಂಸ್ಕರಿತ ಯುರೇನಿಯಂ ಇರಾನ್​ಲ್ಲೇ ಅಥವಾ ಪಾಕಿಸ್ತಾನದಲ್ಲಿ ಪತ್ತೆಯಾದರೆ! ಪಶ್ಚಿಮ ಏಷ್ಯಾದ ರಕ್ತರಂಜಿತ ಇತಿಹಾಸಕ್ಕೆ ಇನ್ನೊಂದು ಅಧ್ಯಾಯ ಸೇರಿಕೊಳ್ಳುತ್ತದೆ! ಅದರಲ್ಲಿ ಪಾಕಿಸ್ತಾನದ ಪ್ರಸ್ತಾಪವೂ ದೊಡ್ಡದಾಗಿಯೇ ಆಗಬಹುದಾದ ಸಾಧ್ಯತೆಯೂ ಇದೆ!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net