

ಮೃತನ ಬಗ್ಗೆ ಪೊಲೀಸರು ವಿಚಾರಿಸಿದಾಗ, ಹದಿನೇಳು ವರ್ಷದ ಯುವತಿ ಮುಂದೆ ಬಂದು, ‘ಮೃತರು ನನ್ನ ತಂದೆ ಪ್ರೊಫೆಸರ್ ಕೃಷ್ಣಸ್ವಾಮಿ. 50 ವರ್ಷ ವಯಸ್ಸಾಗಿತ್ತು. ಅವರು ಖಾಸಗಿ ಕಾಲೇಜೊಂದರಲ್ಲಿ ಗಣಿತದ ಪ್ರೊಫೆಸರ್ ಆಗಿದ್ದರು. ಅವರಿಗೆ ನಾವು ಇಬ್ಬರು ಮಕ್ಕಳು. ನಾನು ಅನುಪಮಾ ಮತ್ತು ನನ್ನ ತಮ್ಮ 10 ವರ್ಷದ ಸುಹಾಸ್’ ಎಂದಳು. ‘ನಿಮ್ಮ ತಾಯಿ ಎಲ್ಲಿ?’ ಎಂದು ಕೇಳಿದಾಗ, ‘ನನ್ನ ತಮ್ಮನ ಹೆರಿಗೆ ಸಮಯದಲ್ಲಿಯೇ ಅವರು ಅಸುನೀಗಿದರು’ ಎಂದಳು. ‘ನಿನ್ನ ತಂದೆಯ ಕೊಲೆ ಹೇಗಾಯಿತು?’ ಎಂದು ಪೊಲೀಸರು ಪ್ರಶ್ನಿಸಿದಾಗ, ಅನುಪಮಾ ಗಳಗಳನೆ ಅಳತೊಡಗಿದಳು. ಆಕೆಯನ್ನು ಹೆಚ್ಚು ಪ್ರಶ್ನಿಸದೆ ನೆರೆಯವರನ್ನು ಪೊಲೀಸರು ವಿಚಾರಿಸಿದರು. ಕೃಷ್ಣಸ್ವಾಮಿ 15 ವರ್ಷಗಳಿಂದ ಆ ಅಪಾರ್ಟ್ವೆುಂಟ್ನಲ್ಲಿ ಸ್ವಂತಮನೆಯಲ್ಲಿ ವಾಸವಾಗಿದ್ದರು. ಪತ್ನಿಯ ಮರಣದ ನಂತರ ಮರುಮದುವೆ ಮಾಡಿಕೊಳ್ಳದೆ ಮಕ್ಕಳೊಡನೆ ಜೀವಿಸುತ್ತಿದ್ದರು. ಎರಡು ವರ್ಷಗಳ ಹಿಂದೆ ನೌಕರಿಗೆ ರಾಜೀನಾಮೆಯಿತ್ತು ಮನೆಯಲ್ಲಿಯೇ ಹತ್ತು, ಹನ್ನೆರಡು ವಿದ್ಯಾರ್ಥಿಗಳಿಗೆ ಟ್ಯೂಷನ್ ಹೇಳುತ್ತಿದ್ದರು. ಸಂಗೀತದಲ್ಲಿ ಆಸಕ್ತಿಯಿದ್ದು ಮಧ್ಯರಾತ್ರಿ ನಂತರವೂ ವಯೋಲಿನ್ ವಾದ್ಯ ನುಡಿಸುತ್ತಿದ್ದರು. ‘ಇತರರ ನಿದ್ರೆ ಕೆಡಿಸಬೇಡಿ’ ಎಂದು ಅವರಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಪ್ರಯೋಜನವಾಗಲಿಲ್ಲ ಎಂದು ನೆರೆಯವರು ತಿಳಿಸಿದರು.
ಕೃಷ್ಣಸ್ವಾಮಿಯವರದ್ದು ವಿಚಿತ್ರ ಕುಟುಂಬ. ಅವರು ತಮ್ಮ ಇಬ್ಬರೂ ಮಕ್ಕಳನ್ನು ಶಾಲೆಯಿಂದ ಬಿಡಿಸಿ ಮನೆಯಲ್ಲಿಯೇ ಪಾಠ ಹೇಳಿಕೊಡುತ್ತಿದ್ದರು. ಮೂರೂ ಜನರು ಮನೆಯಿಂದ ಹೊರಬರುತ್ತಲೇ ಇರಲಿಲ್ಲ. ಹಾಗೂ ಮನೆಯೊಳಗೆ ಟ್ಯೂಷನ್ ವಿದ್ಯಾರ್ಥಿಗಳ ಹೊರತಾಗಿ ಬೇರೆ ಯಾರನ್ನೂ ಸೇರಿಸುತ್ತಿರಲಿಲ್ಲ, ಅವರ ಮನೆಗೆ ಯಾವ ಆಳುಕಾಳುಗಳೂ ಹೋಗುತ್ತಿರಲಿಲ್ಲ ಎಂದು ನೆರೆಯವರು ಹೇಳಿದರು. ಕೃಷ್ಣಸ್ವಾಮಿ ಮನೆಯಲ್ಲಿ ಅಡುಗೆ ಮಾಡುತ್ತಿರಲಿಲ್ಲವೆಂದು ತಾವು ಭಾವಿಸಿದ್ದಾಗಿ ತಿಳಿಸಿದ ನೆರೆಯವರು, ಮನೆಗೆ ಪಾಠಕ್ಕೆ ಬರುತ್ತಿದ್ದ ಹುಡುಗರ ಕೈಯಲ್ಲಿ ತಮಗೆ ಬೇಕಾದ ಊಟ, ಉಪಾಹಾರಗಳನ್ನು ತರಿಸುತ್ತಿದ್ದರು. ಮನೆಯಲ್ಲಿ ಕಾಫಿ, ಚಹಾ ಮಾತ್ರ ಮಾಡುತ್ತಿದ್ದರು. ಅವರದು ಗೌಪ್ಯಸಂಸಾರ, ಮನೆಯೊಳಗೆ ಏನಾಗುತ್ತಿದೆ ಎಂದು ನಮಗ್ಯಾರಿಗೂ ತಿಳಿಯುತ್ತಿರಲಿಲ್ಲ ಎಂದರು. ‘ಹಾಗಾದರೆ ಕೊಲೆ ನಡೆದಿದ್ದು ಹೇಗೆ ತಿಳಿಯಿತು?’ ಎಂದು ಪೊಲೀಸರು ಪ್ರಶ್ನಿಸಿದಾಗ, ‘ನಿಮಗೆ ಫೋನ್ ಮಾಡುವ ಮೊದಲು ಅನುಪಮಾ ನಮ್ಮ ಮನೆಯ ಕರೆಗಂಟೆ ಬಾರಿಸಿ ‘ತಂದೆ ಸತ್ತಿದ್ದಾರೆ’ ಎಂದಳು. ನಾವು ಒಳಗೆ ಹೋಗಿ ನೋಡಿದಾಗ ಪ್ರೊಫೆಸರ್ ರಕ್ತದ ಮಡುವಿನಲ್ಲಿ ಬಿದ್ದಿದ್ದರು’ ಎಂದ ಪಕ್ಕದ ಮನೆಯಾತ.
ಶವದ ಪಂಚನಾಮೆ ಮಾಡಿದಾಗ ಕೃಷ್ಣಸ್ವಾಮಿ ಎದೆಗೆ ಚಾಕುವಿನಿಂದ ಮೂರು ಬಾರಿ ಇರಿದಿದ್ದುದು ಕಂಡುಬಂತು. ಮನೆಯಲ್ಲಿ ಯಾವುದೇ ವಸ್ತು ಕಳುವಾಗಿರಲಿಲ್ಲ. ಸಿಸಿಟಿವಿ ಪರಿಶೀಲಿಸಿದಾಗ ಕೊಲೆಯಾದ ಸಮಯದಲ್ಲಿ ಅವರ ಮನೆಗೆ ಯಾರೂ ಬಂದು ಹೋಗದೇ ಇದ್ದದ್ದು ವಿದಿತವಾಯಿತು. ಮರಣೋತ್ತರ ಪರೀಕ್ಷೆಗಾಗಿ ಶವವನ್ನು ಆಸ್ಪತ್ರೆಗೆ ಕಳಿಸಿ ತನಿಖೆಗೆ ಬೇಕಾದ ಎಲ್ಲ ವಸ್ತುಗಳನ್ನು ವಶಪಡಿಸಿಕೊಳ್ಳಲಾಯಿತು. ‘ಕೃಷ್ಣಸ್ವಾಮಿ ಹೃದಯಕ್ಕೇ ನೇರವಾಗಿ ಇರಿತದ ಗಾಯವಾಗಿರುವ ಕಾರಣ ಅವರ ಸಾವುಂಟಾಗಿದೆ ಹಾಗೂ ಸಾಯುವ ವೇಳೆ ಅವರು ಮದ್ಯಪಾನ ಮಾಡಿದ್ದರು’ ಎಂದು ಶವಪರೀಕ್ಷೆ ಮಾಡಿದ ವೈದ್ಯರು ತಿಳಿಸಿದರು.
ಮಾರನೆಯ ಬೆಳಗ್ಗೆ ಮಹಿಳಾ ಪೊಲೀಸ್ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಗಳು ಅನುಪಮಾ ಮತ್ತು ಸುಹಾಸ್ರನ್ನು ಪ್ರಶ್ನೆ ಮಾಡಿದರು. ಆಗ ಅನುಪಮಾ, ‘ತಂದೆ ನಮ್ಮನ್ನು ಮನೆಯಿಂದ ಹೊರೆಗೆ ಹೋಗಲು ಬಿಡುತ್ತಿರಲಿಲ್ಲ. ಮನೆಯಲ್ಲಿ ಅವರೇ ಪಾಠ ಹೇಳಿಕೊಡುತ್ತಿದ್ದರು. ಮುಕ್ತಶಾಲೆಯಲ್ಲಿ 10ನೇ ತರಗತಿ ಪರೀಕ್ಷೆ ಕಟ್ಟಲು ಸೂಚಿಸಿದ್ದರು. ಕೆಲಕಾಲ ಅವರು ಮನೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳಿಕೊಡುತ್ತಿದ್ದರು, ಈಗ ಆರು ತಿಂಗಳಿಂದ ಅದನ್ನೂ ಬಿಟ್ಟರು’ ಎಂದಳು. ‘ಹಾಗಾದರೆ ಸಂಸಾರದ ಆದಾಯದ ಮೂಲವೇನಿತ್ತು?’ ಎಂದು ಪ್ರಶ್ನಿಸಿದಾಗ, ‘ತಂದೆಗೆ ಇನ್ನೊಂದು ಸ್ವಂತ ಮನೆಯಿದ್ದು, ಅದರ ಬಾಡಿಗೆ ಮೂಲಕ ನಿಭಾಯಿಸುತ್ತಿದ್ದೆವು’ ಎಂದಳು. ನಂತರ ಆಕೆ ಹೀಗೆಂದಳು: ‘ತಂದೆ ಸದಾಕಾಲ ಮನೆಯಲ್ಲಿಯೇ ಇರುತ್ತಿದ್ದು ಅವರಿಗೆ ಧೂಮಪಾನ ಮತ್ತು ಮದ್ಯಪಾನದ ಚಟವಿತ್ತು. ಅವರಿಗೆ ಮನೆ ಸ್ವಚ್ಛ ಮಾಡಲು ಇಷ್ಟವಿರಲಿಲ್ಲ. ಕೆಲವು ವೇಳೆ ನಾನು ಮತ್ತು ತಮ್ಮನೇ ಮನೆ ಸ್ವಚ್ಛ ಮಾಡುತ್ತಿದ್ದೆವು. ತಂದೆ ನಿನ್ನೆ ರಾತ್ರಿ ರೂಮಿನಲ್ಲಿ ವಯೊಲಿನ್ ನುಡಿಸುತ್ತ ಹಾಡುತ್ತಿದ್ದರು. ಮುಂಬರುವ ಪರೀಕ್ಷೆಗಾಗಿ ನಾನು ಅಭ್ಯಾಸ ಮಾಡುತ್ತಿದ್ದೆ. ಅವರ ಸಂಗೀತದಿಂದ ನನ್ನ ಅಭ್ಯಾಸಕ್ಕೆ ತೊಂದರೆಯಾಗುತ್ತಿದ್ದ ಕಾರಣ ಅಪ್ಪನ ಕೋಣೆಗೆ ಹೋಗಿ ಸಂಗೀತವನ್ನು ನಿಲ್ಲಿಸಿ, ಮಲಗಿಕೊಳ್ಳಲು ಹೇಳಿದಾಗ, ಅವರು ಕೋಪಗೊಂಡು ನನ್ನನ್ನು ಹಿಗ್ಗಾಮುಗ್ಗಾ ಬೈದರು. ನನ್ನ ರೂಮಿಗೆ ಹಿಂತಿರುಗಿದೆ. ತಮ್ಮ ನಿದ್ರೆ ಮಾಡುತ್ತಿದ್ದ.
ಮಧ್ಯರಾತ್ರಿ ವೇಳೆಗೆ ತಂದೆ ನಮ್ಮ ರೂಮಿಗೆ ಬಂದರು. ಅವರು ಅಧಿಕವಾಗಿ ಮದ್ಯಪಾನ ಮಾಡಿದ್ದರು. ಓದುತ್ತಿದ್ದ ನನ್ನನ್ನು ಕಂಡು, ‘ನನಗೆ ಹಾಡಬೇಡ ಎನ್ನಲು ನಿನಗೆಷ್ಟು ಧೈರ್ಯ?’ ಎನ್ನುತ್ತ ಹೊಡೆಯ ತೊಡಗಿದರು. ತಮ್ಮ ಎಚ್ಚರಗೊಂಡು ಅವರನ್ನು ತಡೆಯಲು ಹೋದ. ಅವನನ್ನು ನೂಕಿ ರೂಮಿನಿಂದ ಹೊರತಳ್ಳಿದರು. ಆನಂತರ ರೂಮಿನ ಬಾಗಿಲ ಅಗುಳಿಯನ್ನು ಹಾಕಿ ನನ್ನ ಮೇಲೆ ಅತ್ಯಾಚಾರ ಮಾಡಲು ಬಂದರು. ಆ ಸಮಯದಲ್ಲಿ ನನಗೆ ಏನಾಯಿತೆಂದು ತಿಳಿಯಲಿಲ್ಲ. ಟೇಬಲ್ ಮೇಲಿದ್ದ ಚಾಕುವಿನಿಂದ ಅವರಿಗೆ 2-3 ಬಾರಿ ತಿವಿದೆ. ಅವರು ಕೆಳಕ್ಕೆ ಬಿದ್ದರು. ನನಗೆ ಗಾಬರಿಯಾಯಿತು. ಮುಂದೇನು ಮಾಡಬೇಕು ಎಂದು ತಿಳಿಯಲಿಲ್ಲ. ಕೂಡಲೇ ಪಕ್ಕದ ಮನೆಗೆ ಹೋಗಿ ವಿಷಯ ತಿಳಿಸಿದೆ’.
ಕೊಲೆಗೆ ಉಪಯೋಗಿಸಲಾಗಿದ್ದ ಚಾಕುವಿನ ಮೇಲೆ ಅನುಪಮಾಳ ಬೆರಳಚ್ಚು ಗುರುತುಗಳು ಸಿಕ್ಕವು. ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಗುರಿಪಡಿಸಿದಾಗ ಆಕೆ ಕುಮಾರಿಯಾಗಿರಲಿಲ್ಲ ಎಂದು ತಿಳಿಯಿತು. ಆಕೆಯನ್ನು ಮತ್ತೊಮ್ಮೆ ವಿಚಾರಣೆ ಮಾಡಿದಾಗ ಈ ಹಿಂದೆ ಕೆಲವು ಬಾರಿ ತಂದೆ ತನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ತಿಳಿಸಿದಳು. ಕೃಷ್ಣಸ್ವಾಮಿ ಸಾವು ಪೂರ್ವನಿಯೋಜಿತ ಕೊಲೆಯಾಗಿರದೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಆ ಬಾಲಕಿ ಮಾಡಿದಂಥ ಕೃತ್ಯವಿರಬಹುದು ಎಂದು ಮೇಲ್ನೋಟಕ್ಕೆ ಊಹಿಸಬಹುದಾಗಿದ್ದರೂ ಈ ದುರ್ಘಟನೆಗೆ ಯಾರೂ ಪ್ರತ್ಯಕ್ಷದರ್ಶಿಗಳಿರದಿದ್ದ ಕಾರಣ ಪೊಲೀಸರಿಗೆ ಸತ್ಯವೇನೆಂದು ತಿಳಿಯಲು ಸಾಧ್ಯವಾಗಲಿಲ್ಲ. ಅನುಪಮಾಗೆ ತಂದೆ ಮೇಲೆ ಸಿಟ್ಟು ಮತ್ತು ಬೇಸರವಿತ್ತು. ಇದರ ಕಾರಣಗಳು ಹಲವಾರು. ಶಾಲೆ ಬಿಡಿಸಿದ್ದು, ಮನೆಯಿಂದ ಹೊರಹೋಗಲು ನಿರ್ಬಂಧ ಹೇರಿದ್ದು ಇತ್ಯಾದಿ. ಅತ್ಯಾಚಾರ ಪ್ರಯತ್ನದಿಂದ ಆತ್ಮರಕ್ಷಣೆ ಮಾಡಿಕೊಳ್ಳಲು ಹೊರಟಿದ್ದೇ ತಂದೆಯನ್ನು ಇರಿದು ಕೊಲ್ಲಲು ಕಾರಣ ಎಂದು ಅನುಪಮಾ ಹೇಳಿದರೂ ಅದೇ ಸತ್ಯವೆಂದು ಖಚಿತವಾಗಿ ಹೇಳಲಾಗುತ್ತಿರಲಿಲ್ಲ.
ತಂದೆಯನ್ನು ತಾನೇ ಇರಿದು ಕೊಂದೆ ಎಂದು ಅನುಪಮಾ ಒಪ್ಪಿಕೊಂಡಿದ್ದಲ್ಲದೆ, ಆಕೆಯ ಬೆರಳಚ್ಚು ಗುರುತು ಕೊಲೆಗೆ ಉಪಯೋಗಿಸಿದ ಚಾಕುವಿನ ಮೇಲಿತ್ತು. ಹೀಗಾಗಿ ತಂದೆಯನ್ನು ಕೊಲೆ ಮಾಡಿದ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಯಿತು. ಅಪ್ರಾಪ್ತ ವಯಸ್ಸಿನವಳಾದ ಆಕೆಯನ್ನು ರಿಮಾಂಡ್ಹೋಂನಲ್ಲಿ ಇಡಲಾಯಿತು. ಸೋದರನಿಗೆ ದೂರದ ಸಂಬಂಧಿಕರು ತಮ್ಮಮನೆಯಲ್ಲಿ ಆಶ್ರಯ ನೀಡಿದರು.
ನಂತರ ಬಾಲನ್ಯಾಯಾಲಯದಲ್ಲಿ ಕೊಲೆಯಲ್ಲದ, ಮಾನವಹತ್ಯೆ ಆರೋಪದ ಮೇಲೆ ಅನುಪಮಾಳ ವಿಚಾರಣೆ ನಡೆಯಿತು. ಅವಳ ಮೇಲಿನ ಆರೋಪ ಸಾಬೀತಾಗಿಲ್ಲ ಎಂದು ಬಾಲನ್ಯಾಯಾಲಯ ಅವಳನ್ನು ಬಿಡುಗಡೆ ಮಾಡಿತು. ಆಕೆ ಸಂಬಂಧಿಕರೊಬ್ಬರ ಮನೆಯಲ್ಲಿ ಆಶ್ರಯ ಪಡೆದಳು. ‘ಜೀವನದ ಬಗ್ಗೆ ಹೇಳುವುದಾದರೆ ನಾವು ನಮಗೆ ಅನುಕೂಲವಾಗುವಂಥ ಸುಳ್ಳನ್ನೋ, ಇಲ್ಲವೇ ಅರ್ಧಸತ್ಯಗಳನ್ನೋ ಹೇಳುತ್ತೇವೆ. ನಾವು ಎಲ್ಲಿಗೆ ಬಂದು ತಲುಪುವೆವೋ ಆ ಜಾಗ ನಾವು ಎಲ್ಲಿಗೆ ಹೋಗಬೇಕು ಎಂದು ಯೋಚಿಸಿರುತ್ತೇವೆಯೋ ಅದೇ ಜಾಗವೇ ಆಗಿರುತ್ತದೆ’ ಎನ್ನುತ್ತಾಳೆ ಅಮೆರಿಕನ್ ಕಾದಂಬರಿಗಾರ್ತಿ ಜೂಲಿಯಾ ಗ್ಲಾಸ್. ಹೀಗಾಗಿ, ಕೃಷ್ಣಸ್ವಾಮಿ ಹತ್ಯೆಯ ಕಾರಣ ಇಂದಿಗೂ ನಿಗೂಢವಾಗಿಯೇ ಇದೆ.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)