ಅರ್ಥವಾಗದ ನಡೆ, ಹೀಗಾದರೆ ಹೇಗೆ ಮುನ್ನಡೆ...

Column F
Published on
ಸದ್ಯ ಚಾಲ್ತಿಯಲ್ಲಿರುವ ಭಿನ್ನ ಬಗೆಯ ಆಡಳಿತದ ಮಾದರಿಗಳಲ್ಲಿ ಪ್ರಜಾಪ್ರಭುತ್ವ ಹೆಚ್ಚು ಉತ್ತಮ ಎಂಬುದರ ಬಗ್ಗೆ ಬಹುತೇಕರ ಸಹಮತವಿದೆ. ‘ಜನರಿಂದ ಜನರಿಗೋಸ್ಕರ ಜನರಿಂದ ನಡೆಯುವ ಪದ್ಧತಿ’ ಎಂಬುದಾಗಿ ಪ್ರಜಾತಂತ್ರವನ್ನು ಅಬ್ರಹಾಂ ಲಿಂಕನ್ ವ್ಯಾಖ್ಯಾನಿಸಿದ್ದು ಬಹುಪರಿಚಿತ. ‘ಪ್ರಜಾಪ್ರಭುತ್ವ ಉತ್ತಮವಾದದು. ಏಕೆಂದರೆ ಇತರೆಲ್ಲ ಆಡಳಿತ ಮಾದರಿಗಳು ಕೆಟ್ಟವು’ ಎಂದಿದ್ದರು ಜವಾಹರಲಾಲ್ ನೆಹರು. ಹಾಗಾದರೆ ಪ್ರಜಾಪ್ರಭುತ್ವದಲ್ಲಿ ದೋಷಗಳೇ ಇಲ್ಲವೆ? ಇದು ಪರಿಪೂರ್ಣ ವ್ಯವಸ್ಥೆಯೇ? ಹಾಗಂತ ಯಾರಾದರೂ ಹೇಳಿದರೆ ನಗೆಪಾಟಲಿಗೀಡಾಗಬೇಕಾಗುತ್ತದೆ ಅಷ್ಟೆ. ನಮ್ಮಲ್ಲಿನ ಇಂದಿನ ರಾಜಕೀಯ ವೈಖರಿ, ಆಡಳಿತದ ಮಂದಗತಿ, ಅಧಿಕಾರಶಾಹಿ ಜಡತ್ವ ಇದನ್ನೆಲ್ಲ ಕಂಡು ‘ಹಿಂದಿನ ಬ್ರಿಟಿಷ್ ಆಡಳಿತವೇ ಚೆನ್ನಾಗಿತ್ತು’ ಎಂತಲೋ ಅಥವಾ ‘ರಾಜರ ಆಳ್ವಿಕೆಯಲ್ಲಿಯೇ ಚಲೋ ಇತ್ತು’ ಎಂತಲೋ ಅಥವಾ ‘ನಮ್ಮಲ್ಲಿಯೂ ಒಂದಷ್ಟು ವರ್ಷ ಸರ್ವಾಧಿಕಾರ ಬರಬೇಕು. ಆಗ ಸ್ವಲ್ಪವಾದರೂ ಸುಧಾರಿಸಬಹುದು’ ಎಂದೋ ಕೆಲವರು ಮಾತಾಡುವುದನ್ನು ಆಗೀಗ ಕೇಳುತ್ತಿರುತ್ತೇವೆ. ಇದು ವ್ಯವಸ್ಥೆಯ ಜಡತ್ವದ ಬಗ್ಗೆ ರೋಸಿಹೋದವರ ನಿರಾಸೆಯ ಮಾತೇ ವಿನಾ ನಿಜಕ್ಕೂ ಅವರ ಹೃದಯದಲ್ಲಿ ಇಂಥದೊಂದು ಆಶಯವಿರುತ್ತದೆಯಾ ಎಂಬುದು ಅನುಮಾನವೇ. ಏಕೆಂದರೆ, ಇಂದಿಗೂ ಸರ್ವಾಧಿಕಾರದ ಆಡಳಿತ ಇರುವಲ್ಲಿ ಜನಜೀವನ ಹೇಗಿದೆ ಎಂದು ಅವಲೋಕಿಸಿದರೆ ಇದು ವೇದ್ಯವಾಗುತ್ತದೆ. ಹೀಗಿದ್ದರೂ, ಪ್ರಜಾಪ್ರಭುತ್ವದ ರೀತಿನೀತಿಗಳು, ಸರ್ಕಾರಗಳ ಕಾರ್ಯವೈಖರಿಗಳು ಕೆಲವೊಮ್ಮೆ ಜನರಿಗೆ ಅರ್ಥವೇ ಆಗುವುದಿಲ್ಲ. ಒಂದು ಜನಪರವಾದ, ಜನರಿಗೆ ಅನುಕೂಲವಾಗುತ್ತದೆ ಎಂದು ಸ್ಪಷ್ಟವಾಗಿರುವ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಕ್ಕೆ ತರಲು ಸಹ ನಮ್ಮಲ್ಲಿ ಹತ್ತೆಂಟು ಅಡೆತಡೆಗಳು, ತೊಡರುಗಳು. ಕೆಲವರು ಯೋಜನೆಯನ್ನು ಬೆಂಬಲಿಸಿದರೆ, ಇನ್ನು ಹಲವರು ಪ್ರತಿಭಟಿಸುತ್ತಾರೆ. ಇನ್ನೂ ಕೆಲವರು ಕೋರ್ಟ್ ಮೆಟ್ಟಿಲೇರುತ್ತಾರೆ. ಒಟ್ಟಿನಲ್ಲಿ ಯೋಜನೆಗೆ ಹಿಡಿದ ಗ್ರಹಣ ಸುಲಭಕ್ಕೆ ಬಿಡದು. ಇದರ ಪರಿಣಾಮವಾಗಿ ಯೋಜನೆಯ ಅಂದಾಜುವೆಚ್ಚ ಮತ್ತಷ್ಟು ಹೆಚ್ಚುತ್ತದೆ ಮತ್ತು ಆ ಯೋಜನೆಯ ಲಾಭ ಯಾರಿಗೆ ಸಿಗಬೇಕೋ ಅವರು ಅನಿರ್ದಿಷ್ಟ ಕಾಲ ಕಾಯುವಂತಾಗುತ್ತದೆ. ನಿಜ, ನಮ್ಮದು ಚೀನಾದಂತಹ ವ್ಯವಸ್ಥೆಯಲ್ಲ. ಅಲ್ಲಿ ಒಂದು ಸರ್ಕಾರಿ ಆದೇಶದ ಮೂಲಕ ಏನು ಬೇಕಾದರೂ ಮಾಡಬಹುದು. ಜನ ಕಮ್​ಕಿಮ್​ ಎನ್ನುವಂತಿಲ್ಲ. ಆದರೆ ನಮ್ಮಲ್ಲಿ ಹಾಗಲ್ಲ, ಸ್ಟೇಕ್​ಹೋಲ್ಡರ್​ಗಳು ಜಾಸ್ತಿ. ಒಂದು ಉಪಕ್ರಮವನ್ನು ಜಾರಿಗೆ ತರಬೇಕೆಂದರೆ ಹತ್ತೆಂಟು ಜನರ ಸಲಹೆ-ಅನಿಸಿಕೆಗಳಿಗೆ ಕಿವಿಗೊಡಬೇಕಾಗುತ್ತದೆ. ಹೀಗಾಗಿ ನಿಜಕ್ಕೂ ಜನಪರ ನಿಲುವಿನ ಜನಪ್ರತಿನಿಧಿ ಇದ್ದರೂ ಆತ ಅಂದುಕೊಂಡ ವೇಗದಲ್ಲಿ ಕೆಲಸ ನೆರವೇರುವುದಿಲ್ಲ. ಇದರ ನಡುವೆ ಪಕ್ಷರಾಜಕಾರಣ ಬೇರೆ. ಇದು ಎಷ್ಟರಮಟ್ಟಿಗೆಂದರೆ, ಬೆಂಗಳೂರಿನ ಒಂದು ಉದಾಹರಣೆ ಕೊಟ್ಟರೆ ಮನದಟ್ಟಾಗಬಹುದು. ಬಿಬಿಎಂಪಿಯಲ್ಲಿ ವಾರ್ಡ್​ವ್ಯವಸ್ಥೆ ಇದ್ದು, ಪ್ರತಿ ವಾರ್ಡಿಗೆ ಒಬ್ಬ ಸದಸ್ಯ ಇರುತ್ತಾರೆ. (ಈಗ ಪಾಲಿಕೆ ಆಡಳಿತಾವಧಿ ಮುಗಿದಿದ್ದು ಚುನಾವಣೆ ನಡೆಯಬೇಕಿದೆ. ಹೀಗಾಗಿ ಈಗ ಕಾಪೋರೇಟರ್​ಗಳು ಇಲ್ಲ). ಕೆಲ ಕಡೆ ಆ ಕ್ಷೇತ್ರದ ಶಾಸಕ ಒಂದು ಪಕ್ಷವಾದರೆ, ಕಾಪೋರೇಟರ್ ಬೇರೆ ಪಕ್ಷದವರಾಗಿರುತ್ತಾರೆ. ಆಗ ಕೆಲಸದ ವಿಚಾರದಲ್ಲಿ ತಾಕಲಾಟವಾಗುತ್ತಿತ್ತು. ‘ನೀವು ನಮಗೆ ವೋಟ್ ಹಾಕಿಲ್ಲ. ನಿಮ್ಮ ಏರಿಯಾದಲ್ಲಿ ಏಕೆ ಕೆಲಸ ಮಾಡಿಸಬೇಕು’ಎಂದು ಕೆಲ ಕಾಪೋರೇಟರ್​ಗಳು ಹೇಳುತ್ತಿದ್ದ ಬಗ್ಗೆ ಸಾರ್ವಜನಿಕ ವಲಯದಲ್ಲಿ ದೂರುಗಳು ವ್ಯಕ್ತವಾಗುತ್ತಿದ್ದವು. ರಾಜ್ಯದ ಇತರೆಡೆ ಸಹ ಹೀಗೆ ಪಕ್ಷ ಬೇರೆಬೇರೆಯಾದಾಗ ಕೆಲಸದ ವಿಚಾರದಲ್ಲಿ ಗದ್ದಲವಾದ ನಿದರ್ಶನಗಳಿವೆ. ಹೀಗೆ ಆಲೋಚನೆ ಮಾಡುವುದೇ ಪ್ರಜಾತಂತ್ರದ ಮೂಲ ಆಶಯ ಮತ್ತು ತತ್ತ್ವಗಳಿಗೆ ವಿರುದ್ಧವಾದುದು.

ಇನ್ನೊಂದು ನಿದರ್ಶನ ನೋಡಿ. ನಮ್ಮಲ್ಲಿ ಅನೇಕ ರಾಜ್ಯಗಳ ನಡುವೆ ಜಲವಿವಾದ, ಗಡಿವಿವಾದಗಳಿವೆ. ಮನೆಸದಸ್ಯರ ನಡುವೆಯೇ, ಇಂಥ ಜಗಳಗಳು ಆಗುವಾಗ ರಾಜ್ಯ-ರಾಜ್ಯಗಳ ನಡುವೆ ಆದಲ್ಲಿ ಅಚ್ಚರಿಯೇನಿಲ್ಲ. ಆದರೆ ಇಂಥ ವಿವಾದಗಳು ದಶಕಗಳಿಂದ ಬಗೆಹರಿಯದೆ ಇದ್ದರೆ ಇಬ್ಬರಿಗೂ ನಷ್ಟವಲ್ಲವೆ? ಒಟ್ಟಾರೆಯಾಗಿ ದೇಶಕ್ಕೆ ಹಾನಿಯಲ್ಲವೆ? ಒಕ್ಕೂಟ ವ್ಯವಸ್ಥೆಯ ಮೇಲೆ ಇದರ ಪರಿಣಾಮ ಆಗುವುದಿಲ್ಲವೆ? ದೇಶ ಭಾವನಾತ್ಮಕವಾಗಿ ಒಂದಾಗಿರಬೇಕು ಎಂದಾದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ, ರಗಳೆಗಳನ್ನು ತ್ವರಿತವಾಗಿ ಬಗೆಹರಿಸಿಕೊಳ್ಳಬೇಕಾಗುತ್ತದೆ. ಕರ್ನಾಟಕ ಮತ್ತು ತಮಿಳುನಾಡು ನಡುವಣ ಕಾವೇರಿ ವಿವಾದ ಒಂದು ರ್ತಾಕ ಅಂತ್ಯಕ್ಕೆ ಬರಲು ಎಷ್ಟು ವರ್ಷಗಳು ಹಿಡಿಯಿತೆಂಬುದು ಗೊತ್ತೇ ಇದೆ. ಈ ನಡುವೆ ಆದ ಗದ್ದಲ-ಗೊಂದಲಗಳೆಷ್ಟು? ಎರಡೂ ರಾಜ್ಯಗಳಿಗೆ ಆದ ನಷ್ಟದ ಲೆಕ್ಕವಿಟ್ಟವರಾರು? ಈಗೇನೋ ಜಲವಿವಾದ ಇತ್ಯರ್ಥಕ್ಕೆ ಕೇಂದ್ರಮಟ್ಟದಲ್ಲಿ ಏಕ ನ್ಯಾಯಾಧಿಕರಣ ಅಸ್ತಿತ್ವಕ್ಕೆ ಬಂದಿದೆ. ಫಲಿತಾಂಶವನ್ನು ಕಾದುನೋಡಬೇಕು.

‘ಪ್ರಜಾಪ್ರಭುತ್ವ ಎಂದರೆ ಸರ್ಕಾರದ ಸ್ವರೂಪವಲ್ಲ. ಇದೊಂದು ಸಾಮಾಜಿಕ ಸಂಘಟನೆಯ ಸ್ವರೂಪದ್ದು’ ಎಂದು ಹೇಳುವ ಮೂಲಕ ಬಿ.ಆರ್.ಅಂಬೇಡ್ಕರರು ಪ್ರಜಾತಂತ್ರದ ವ್ಯಾಖ್ಯಾನವನ್ನು ವಿಶಾಲಾರ್ಥಕ್ಕೆ ಹಿಗ್ಗಿಸುತ್ತಾರೆ. ‘ಸಾಮಾಜಿಕ ಸಂಘಟನೆ’ ಎಂದಾಕ್ಷಣ ಜನರ ಜವಾಬ್ದಾರಿಯೂ ಇಲ್ಲಿ ಸೇರಿಕೊಳ್ಳುತ್ತದೆ. ಬೆಂಗಳೂರಿನ ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಬಿ.ಆರ್.ರವಿಕಾಂತೇಗೌಡ ಅವರು ಫೋನ್-ಇನ್ ಕಾರ್ಯಕ್ರಮಕ್ಕಾಗಿ ಈಚೆಗೆ ವಿಜಯವಾಣಿ ಕಚೇರಿಗೆ ಬಂದಿದ್ದರು. ಆಗ ಅವರು ಪ್ರಾಸಂಗಿಕವಾಗಿ ಒಂದು ಘಟನೆಯನ್ನು ಉಲ್ಲೇಖಿಸಿದರು. ನಗರದ ಒಂದು ಕಡೆ ಫುಟ್​ಪಾತ್ ಉತ್ತಮವಾಗಿ ಸುಸ್ಥಿತಿಯಲ್ಲಿತ್ತು. ಜನರಿಗೆ ಹೋಗಲು ವಿಶಾಲ ಸ್ಥಳವೂ ಇತ್ತು. ಆ ದಿನ ಒಂದು ಕುಟುಂಬದವರು ರಸ್ತೆಯಲ್ಲಿಯೇ ನಡೆದುಹೋಗುತ್ತಿದ್ದರು. ಆಗ ರವಿಕಾಂತೇಗೌಡರು ಅದನ್ನು ಕಂಡು ಅವರನ್ನು ಕೇಳಿದರಂತೆ. ‘ಏನು ಮಾಡೋದು ಸರ್. ರೂಢಿಯಾಗಿ ಹೋಗಿದೆ’ ಎಂದು ಉತ್ತರ ಬಂತಂತೆ. ಟ್ರಾಫಿಕ್ ಕಲ್ಚರ್ ಎಂಬುದು ವಾಹನಸವಾರರು ಮತ್ತು ಜನರು ಇಬ್ಬರಲ್ಲೂ ಬರಬೇಕಾದ ಅಗತ್ಯವನ್ನು ರವಿಕಾಂತೇಗೌಡರು ಪ್ರತಿಪಾದಿಸಿದರು. ಇದು ನಿಜ ಕೂಡ. ಆದರೆ ಈ ಸಮಸ್ಯೆಗೆ ಇನ್ನೊಂದು ಮುಖವೂ ಇದೆ. ಬೆಂಗಳೂರಿನಲ್ಲಿ ಅನೇಕ ಕಡೆ ಫುಟ್​ಪಾತ್ ಎಲ್ಲಿದೆ ಎಂದು ಹುಡುಕಬೇಕಾದ ಪರಿಸ್ಥಿತಿ ಇದೆ. ಸಣ್ಣಪುಟ್ಟ ಅಂಗಡಿಗಳವರು, ತಳ್ಳುಗಾಡಿಗಳವರು, ಅಂಗಡಿಗಳ ಒತ್ತುವರಿ- ಹೀಗೆ ಎಲ್ಲವೂ ಇರುತ್ತವೆ. ಇಂಥ ಸ್ಥಿತಿಯಲ್ಲಿ ಜನರು ಹೋಗುವುದಾದರೂ ಹೇಗೆ? ಹೀಗಾಗಿ ಅನಿವಾರ್ಯವಾಗಿ ರಸ್ತೆಗೆ ಇಳಿಯುತ್ತಾರೆ. ಕ್ರಮೇಣ ಅದು ಒಂದು ರೂಢಿಯೇ ಆಗಿಹೋಗುತ್ತದೆ. ಆದ್ದರಿಂದ ಯಾವ ರಸ್ತೆಯಲ್ಲಿ ನೋಡಿದರೂ ವಾಹನಗಳ ಹಾರ್ನ್​ಗಳ ಅಬ್ಬರ. ಇನ್ನ ಕೆಲವರಂತೂ ಮಕ್ಕಳನ್ನು ರಸ್ತೆಯ ಮಧ್ಯಭಾಗದಲ್ಲಿ ನಡೆಸಿಕೊಂಡು ಹೋಗುತ್ತಿರುತ್ತಾರೆ. ಆಕಸ್ಮಾತ್ ಯಾವುದಾದರೂ ವಾಹನ ನಿಯಂತ್ರಣ ಹೆಚ್ಚುಕಡಿಮೆಯಾದಲ್ಲಿ ಮೊದಲು ಮಗುವಿಗೆ ತಾಗುತ್ತದೆ. ಬೇಕು ಅಂತ ಹೀಗೆ ಮಾಡುವುದಿಲ್ಲ. ಅದು ಗೊತ್ತಿಲ್ಲದೆ ಆಗುವ ಕ್ರಿಯೆ. ಆದರೆ ಪರಿಣಾಮ ಮಾತ್ರ ಗಂಭೀರ. ಈ ರೀತಿಯಲ್ಲಿ ನಮಗೆ ಕೆಲವು ರೂಢಿಯಾಗಿಬಿಟ್ಟಿರುತ್ತವೆ. ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು ಎಂದು ಗೊತ್ತಿದ್ದರೂ ಅಯಾಚಿತವಾಗಿ ಉಗುಳುತ್ತೇವೆ. ಇನ್ನು ಕೆಲವು ಸಲ ಅನಿವಾರ್ಯ. ಉದಾಹರಣೆಗೆ ಹೇಳುವುದಾದರೆ- ಬೆಂಗಳೂರಿನ ಗಾತ್ರ, ಜನಸಂಖ್ಯೆ ಹಾಗೂ ಪ್ರತಿನಿತ್ಯ ಹೊರಗಡೆಯಿಂದ ಇಲ್ಲಿಗೆ ಬರುವವರ ಪ್ರಮಾಣಕ್ಕೆ ಹೋಲಿಸಿದರೆ ಸಾರ್ವಜನಿಕ ಶೌಚಗೃಹಗಳ ಸಂಖ್ಯೆ ಕಡಿಮೆ ಇದೆ. ‘ಸಾರ್ವಜನಿಕ ಸ್ಥಳಗಳಲ್ಲಿ ಮೂತ್ರಮಾಡುವುದು ಅಪರಾಧ; ಇದಕ್ಕೆ ದಂಡ ವಿಧಿಸಲಾಗುತ್ತದೆ’ ಎಂದು ಬೋರ್ಡ್ ಏನೋ ಇರುತ್ತದೆ. ಆದರೆ ಆ ವ್ಯವಸ್ಥೆ ಕಲ್ಪಿಸುವುದು ಯಾರ ಹೊಣೆ? ಇನ್ನೊಂದು ಬಗೆಯ ಎಡವಟ್ಟು ನೋಡಿ. ಒಂದು ಇಲಾಖೆಯವರು ರಸ್ತೆ ಮಾಡಿ ತಿಂಗಳೂ ಆಗಿರುವುದಿಲ್ಲ. ಜಲಮಂಡಳಿಯವರೋ ಮತ್ಯಾರೋ ಬಂದು ಅಗೆಯುತ್ತಾರೆ. ಸರ್ಕಾರದ್ದೇ ವಿವಿಧ ಏಜೆನ್ಸಿಗಳು, ಇಲಾಖೆಗಳ ನಡುವೆ ಸಮನ್ವಯ ಇರದಿರುವುದರಿಂದ ಹೀಗಾಗುತ್ತದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳಾದರೂ, ನಮ್ಮವರೇ ಆಡಳಿತ ನಡೆಸತೊಡಗಿ ಏಳು ದಶಕವುರುಳಿದರೂ ಇಂತಹ ಸಣ್ಣ ಬದಲಾವಣೆಯನ್ನೂ ಮಾಡಿಕೊಳ್ಳಲು ಆಗಿಲ್ಲ ಎಂದರೆ! ಬೆಂಗಳೂರಿನಂತಹ ನಗರಗಳಲ್ಲಿ ಫುಟ್​ಪಾತ್ ಕೀಳುವುದು, ರಿಪೇರಿ ಮಾಡುವುದು, ಹೊಸದಾಗಿ ನಿರ್ವಿುಸುವುದು ಇವೆಲ್ಲ ನಿರಂತರ ಕ್ರಿಯೆಗಳು. ಹೀಗಾಗಿ ಜನರಿಗೆ ಇವೆಲ್ಲ ಅಚ್ಚರಿಯ ಜತೆಗೆ ಇದರ ಹಿಂದೆ ಏನೋ ಇದೆಯೆಂಬ ಭಾವನೆ ಉಂಟುಮಾಡುತ್ತದೆ. ಇವೆಲ್ಲ ಸಣ್ಣ ಸಣ್ಣ ವಿಷಯಗಳಂತೆ ಕಾಣಬಹುದು. ಆದರೆ ಇಂಥ ಅಪಸವ್ಯಗಳನ್ನು ನೋಡಿ ನೋಡಿ ಜನರಲ್ಲಿ ಸರ್ಕಾರಿ ವ್ಯವಸ್ಥೆಯ ಬಗ್ಗೆ, ಆಡಳಿತದ ಕಾರ್ಯವೈಖರಿಯ ಬಗ್ಗೆ ನಿರಾಸೆ, ಜುಗುಪ್ಸೆ ಬೆಳೆಯುತ್ತ ಹೋಗುತ್ತದೆ. ಜನರು ಮತ್ತು ಆಡಳಿತ ಎರಡು ವಿರುದ್ಧ ಧ್ರುವಗಳಾಗುವುದು ಯಾವುದೇ ಪ್ರಜಾಪ್ರಭುತ್ವ ದೇಶದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.

‘ಪ್ರಜಾಪ್ರಭುತ್ವ ಎಂದರೆ ಗುಂಪು ಆಳ್ವಿಕೆಯ ವಿನಾ ಬೇರೆ ಏನಲ್ಲ. ಶೇ.51 ಜನರು ಉಳಿದ ಶೇ.49 ಜನರ ಹಕ್ಕುಗಳನ್ನು ಕಿತ್ತುಕೊಳ್ಳುತ್ತಾರೆ’ ಎಂದಿದ್ದರು ಅಮೆರಿಕದ ಮಾಜಿ ಅಧ್ಯಕ್ಷ ಥಾಮಸ್ ಜೆಫರ್ಸನ್. ಪ್ರಜಾತಂತ್ರದಲ್ಲಿ ಬಹುಮತಕ್ಕೆ ಆದ್ಯತೆ. ಕೆಲವೊಮ್ಮೆ ಇದು ವಿಪರ್ಯಾಸ ಎಂಬಂಥ ಸ್ಥಿತಿಗೂ ಸಾಕ್ಷಿಯಾಗುವುದಿದೆ. ಉದಾಹರಣೆಗೆ- ವಿಧಾನಸಭಾ ಚುನಾವಣೆಯಲ್ಲಿ ಶೇ.30 ಮತ ಪಡೆದವನೂ ಶಾಸಕನಾಗಿ ಆಯ್ಕೆಯಾಗುತ್ತಾನೆ. ಚುನಾವಣಾಪೂರ್ವದಲ್ಲಿ ಹೊಂದಾಣಿಕೆ ಮಾಡಿಕೊಂಡಿರದ, ಸೈದ್ಧಾಂತಿಕವಾಗಿ ವಿರುದ್ಧ ದಿಕ್ಕಿನಲ್ಲಿರುವ ಎರಡು ಪಕ್ಷಗಳು ಫಲಿತಾಂಶದ ನಂತರ ಒಪ್ಪಂದ ಮಾಡಿಕೊಂಡು ಸರ್ಕಾರ ರಚಿಸಿದ ನಿದರ್ಶನಗಳೂ ಬೇಕಾದಷ್ಟು ಇವೆ. ವಾಸ್ತವದಲ್ಲಿ ನೋಡಿದರೆ ಆ ಎರಡೂ ಪಕ್ಷಗಳಿಗೆ ಜನರು ಸರ್ಕಾರ ರಚಿಸಲು ಅವಕಾಶ ನೀಡಿರುವುದಿಲ್ಲ. ಆದರೆ ಸರ್ಕಾರ ರಚನೆಗೆ ಅಗತ್ಯವಾದ ಸಂಖ್ಯಾಬಲವನ್ನು ಕ್ರೋಡೀಕರಿಸುವ ಮೂಲಕ ಅಧಿಕಾರದ ಗದ್ದುಗೆಯೇರಲು ಸಫಲವಾಗುತ್ತವೆ. ‘ಪ್ರಜಾಪ್ರಭುತ್ವ ಎಂದರೆ ಕೇವಲ ಚುನಾವಣೆಗಳಲ್ಲ. ಸಿರಿವಂತ ಭೂಮಾಲೀಕರು ಹಾಗೂ ವೃತ್ತಿಪರ ರಾಜಕಾರಣಿಗಳು ಇಲ್ಲಿ ಕೈಚಳಕ ತೋರಬಹುದು’ ಎಂದಿದ್ದ, ಕ್ರಾಂತಿಕಾರಿ ನಾಯಕ ಚೆ ಗುವಾರ.

ಹಾಗಾದರೆ ಬದಲಾವಣೆ ಸಾಧ್ಯವೇ ಇಲ್ಲವಾ? ಯಾಕಿಲ್ಲ. ಒಂದು ಕಾಲದಲ್ಲಿ ನಮ್ಮ ಚುನಾವಣೆಗಳು ಹೇಗೆ ನಡೆಯುತ್ತಿದ್ದವು ಎಂದು ನೆನಪಿಸಿಕೊಳ್ಳಿ. ಟಿ.ಎನ್.ಶೇಷನ್ ಎಂಬ ಅಧಿಕಾರಿ ಚುನಾವಣೆಯ ದಿಕ್ಕುದೆಸೆಗಳನ್ನೇ ಬದಲಿಸಲಿಲ್ಲವೆ? ಅದಕ್ಕೆ ಬೇಕಾದ್ದು ಬದ್ಧತೆ, ಧೈರ್ಯ, ಸಮಾಜಕ್ಕೆ ಒಳಿತು ಮಾಡಬೇಕೆನ್ನುವ ಮನೋಭಾವ. ಅಂದಹಾಗೆ ಶೇಷನ್ ಹಾಸ್ಯಪ್ರಜ್ಞೆಯವರಾಗಿದ್ದರು. ಅವರು ಚುನಾವಣಾ ಸುಧಾರಣೆಗಳನ್ನು ಕೈಗೊಂಡಾಗ ವಿಪರೀತ ವಿರೋಧ ಎದುರಿಸಬೇಕಾಯಿತು. ಆಗ ಅವರು ಒಮ್ಮೆ, ‘ಯಾರೇನು ಮಾಡಿದರೂ ನನ್ನ ಒಂದು ಕೂದಲನ್ನೂ ಅಲುಗಾಡಿಸಲು ಸಾಧ್ಯವಿಲ್ಲ. ಏಕೆಂದರೆ ನನಗೆ ತಲೆಮೇಲೆ ಕೂದಲಿಲ್ಲ’ ಎಂದು ನಕ್ಕಿದ್ದರು. ‘ಪ್ರಜಾಪ್ರಭುತ್ವ ಎಂದರೆ ಸರ್ಕಾರದ ಮಾದರಿ ಎನ್ನುವುದಕ್ಕಿಂತ ಹೆಚ್ಚಾಗಿ ನೈತಿಕ ಸಂಹಿತೆ’ ಎನ್ನುತ್ತಾರೆ, ಅಮೆರಿಕದ ಮಾಜಿ ಅಧ್ಯಕ್ಷ ವುಡ್ರೋ ವಿಲ್ಸನ್. ನಮ್ಮಲ್ಲಿ ತಂದೆತಾಯಂದಿರನ್ನು, ಗುರುಹಿರಿಯರನ್ನು ಗೌರವಿಸಬೇಕು ಎಂಬುದು ಅಲಿಖಿತ ಸಂಹಿತೆ. ಇದನ್ನು ಯಾರೂ ಲಿಖಿತವಾಗಿ ಬರೆದಿಟ್ಟಿಲ್ಲ ಅಥವಾ ಇದನ್ನು ಉಲ್ಲಂಘಿಸಿದರೆ ಶಿಕ್ಷೆಯನ್ನೇನೂ ಯಾರೂ ಕೊಡುವುದಿಲ್ಲ. ಆದರೆ, ಅದು ಕಿರಿಯರ ಕರ್ತವ್ಯ ಎಂಬ ನೆಲೆಯಲ್ಲಿಯೇ ಸಮಾಜದಲ್ಲಿ ಬೇರೂರಿದೆ. ಪ್ರಜಾತಂತ್ರದಲ್ಲಿಯೂ ಎಲ್ಲವನ್ನೂ ಕೇವಲ ಕಾನೂನಿನಿಂದ ಮಾಡುತ್ತೇವೆ ಎಂದರೆ ಆಗದು. ಜನರ ಸಹಭಾಗಿತ್ವವೂ ಅಷ್ಟೇ ಮುಖ್ಯವಾಗುತ್ತದೆ. ಇದಕ್ಕೆಂದೇ, ನಮ್ಮ ಸಂವಿಧಾನ ಜನರಿಗೆ ಹಕ್ಕುಗಳನ್ನು ನೀಡಿದ ಹಾಗೆ ಕರ್ತವ್ಯವನ್ನೂ ನೆನಪಿಸುತ್ತದೆ.

‘ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ಚಿರಂತನ ಕನಸುಗಳು’ ಎನ್ನುತ್ತಾರೆ, ಮ್ಯಾನ್ಮಾರ್​ನ ನಾಯಕಿ ಆಂಗ್ ಸಾನ್ ಸೂ ಕಿ. ಆದರೆ, ವಿಪರ್ಯಾಸ ಎಂದರೆ, ಅಲ್ಲಿನ ಸೇನಾಡಳಿತ ಈ ನಾಯಕಿಗೆ ಸ್ವಾತಂತ್ರ್ಯವನ್ನೇ ನೀಡುತ್ತಿಲ್ಲ. ಸದಾಕಾಲ ಏನಾದರೊಂದು ಕೇಸ್ ಹಾಕಿ ಜೈಲಿಗೆ ಕಳುಹಿಸುತ್ತಿರುತ್ತದೆ.

ಕೊನೇ ಮಾತು: ಪ್ರಜಾಪ್ರಭುತ್ವದ ಕುಂದುಕೊರತೆಗಳು ಬೇಕಾದಷ್ಟು ಇರಬಹುದು. ಆದರೆ, ಮಾತೇ ಆಡದಂತೆ ನಿರ್ಬಂಧಿಸುವ, ಮೂಲಭೂತ ಹಕ್ಕುಗಳನ್ನು ನಿರಾಕರಿಸುವ ಇತರ ವ್ಯವಸ್ಥೆಗಳಿಗಿಂತ ಇದು ನೂರುಪಾಲು ಮೇಲು. ಅದೇ ಸಂದರ್ಭದಲ್ಲಿ, ಪ್ರಜಾತಂತ್ರವು ನೀಡುವ ಸ್ವಾತಂತ್ರ್ಯ ಸ್ವೇಚ್ಛೆಯಾಗದಂತೆ ನೋಡಿಕೊಳ್ಳುವ ಹೊಣೆಗಾರಿಕೆಯನ್ನೂ ಮರೆಯುವಂತಿಲ್ಲ. ಈಶ ಫೌಂಡೇಷನ್​ನ ಸದ್ಗುರು ಹೇಳುತ್ತಾರೆ:‘ ಪ್ರಜಾತಂತ್ರದಲ್ಲಿ ಪ್ರತಿಭಟನೆಯ ಹಕ್ಕು ಇದೆ ಎಂಬುದು ನಿಜ. ಹಾಗಂತ ಒಬ್ಬನೇ ಒಬ್ಬ ನಾಗರಿಕನ ಜೀವನಕ್ಕೆ ತಡೆಯೊಡ್ಡುವ ಹಕ್ಕೂ ನಮಗಿಲ್ಲ.’

(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net