

ದೆಹಲಿಯಲ್ಲಿ ವಾಸವಾಗಿರುವ ನನ್ನ ಗೆಳತಿಯೊಬ್ಬಳಿಗೆ ಕಳೆದ ವಾರ ಫೋನ್ ಮಾಡಿ ದೀಪಾವಳಿ ಶುಭಾಶಯ ಹೇಳಿದೆ. ಬಳಿಕ ರೂಢಿಯಂತೆ, ‘ಹೇಗಿದ್ದೀಯ?’ ಅಂತ ಕೇಳಿದೆ. ಅವಳು ನಿರಾಶೆಯ ಸ್ವರದಲ್ಲಿ, ‘ನೋಡು, ಇನ್ನೂ ಬದುಕಿದ್ದೀನಿ, ದಿನಕ್ಕೆ 25-30 ಸಿಗರೇಟ್ ಸೇದಿಕೊಂಡು’ ಅಂದಳು. ನನಗೆ ಆಘಾತವಾಯಿತು. ಇದೇನು, ಬೆಂಗಳೂರಿನಲ್ಲಿ ಇದ್ದಾಗ ಚೆನ್ನಾಗೇ ಇದ್ದಳಲ್ಲ, ದೆಹಲಿಗೆ ಹೋಗಿ ಧೂಮಪಾನದ ಚಟ ಅಂಟಿಸಿಕೊಂಡಳೆ ಅಥವಾ ಕೋವಿಡ್-19 ಆತಂಕದಿಂದ ಈ ಚಟಕ್ಕೆ ದಾಸಳಾದಳೇ ಎಂಬ ಅನುಮಾನ ಬಂತು. ಆಗ, ‘ಸ್ವಲ್ಪ ಬಿಡಿಸಿ ಹೇಳು, ಹೀಗೆ ಒಗಟಾಗಿ ಹೇಳಿದರೆ ಏನೂ ಅರ್ಥವಾಗಲ್ಲ’ ಎಂದೆ.
‘ನಿನಗೆ ಗೊತ್ತೇ ಇದೆ, ಕೆಲವು ವರ್ಷಗಳಿಂದ ವಾಯುಮಾಲಿನ್ಯದ ಪರಿಣಾಮ ದೆಹಲಿಯ ಸ್ಥಿತಿ ಹೇಗಾಗಿದೆ ಎಂಬುದು. ದೀಪಾವಳಿ ಸಂದರ್ಭದಲ್ಲಂತೂ ಸಿಕ್ಕಾಪಟ್ಟೆ ಪಟಾಕಿ ಹೊಡೆಯುತ್ತಾರೆ. ಅದರಿಂದ ಎಷ್ಟು ವಾಯುಮಾಲಿನ್ಯ ಆಗುತ್ತದೆ ಎಂದರೆ ವಾಯು ಗುಣಮಟ್ಟ ಸೂಚ್ಯಂಕ (Air Quality Index-AQI) ಅಪಾಯದ ಮಟ್ಟ ಮೀರುತ್ತದೆ. ಹಾಗಾಗಿ, ಕೆಲ ವರ್ಷಗಳಿಂದ ದೀಪಾವಳಿಗೆ ನನ್ನ ಊರಿಗೆ ಹೋಗುತ್ತಿದ್ದೆ. ಸ್ಮಾಗ್ (ಮಂಜು ಮತ್ತು ಹೊಗೆ) ಸ್ವಲ್ಪ ಕಡಿಮೆಯಾದ ಬಳಿಕ ಮರಳುತ್ತಿದ್ದೆ. ಈ ವರ್ಷ ಕೋವಿಡ್-19 ಪರಿಣಾಮ ಎಲ್ಲೂ ಹೋಗಲಾಗಿಲ್ಲ. ಆದರೆ, ದೀಪಾವಳಿ ಆರಂಭದ ಮುನ್ನವೇ ಎಕ್ಯುಐ 300 ದಾಟಿ ಹೋಗಿದೆ’ ಎಂದು ಆಕೆ ವಿವರಿಸಿದಳು.
ವಾಯುಮಾಲಿನ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತ, ಗಂಭೀರ ಸಮಸ್ಯೆಯಾಗಿ ಬೆಳೆದಿದೆ. ನಾವು ಉಸಿರಾಡುವ ಗಾಳಿಯಲ್ಲಿ ಗಂಧಕದ ಡೈಆಕ್ಸೈಡ್ (Sulfur dioxide), ಸಾರಜನಕ ಡೈಆಕ್ಸೈಡ್ (Nitrogen dioxide) ಇಂಗಾಲದ ಮೊನಾಕ್ಸೈಡ್ (ಇದಂತೂ ಭಾರಿ ವಿಷಕಾರಕ) ಸೀಸ, ಜತೆಗೆ ಕ್ಲೋರೋಫೋರಾ ಕಾರ್ಬನ್ (ಇದು ಓಜೋನ್ ಪದರಕ್ಕೆ ಹಾನಿಮಾಡುತ್ತದೆ) ಸೇರಿಕೊಂಡಿವೆ. ಪಿ-2.5 ಎಂಬುದು 22 ಮೈಕ್ರಾನ್ ಪರ್ ಮೀಟರ್ ಕ್ಯೂಬ್ ಇದ್ದರೆ 1 ಸಿಗರೇಟ್ ಸೇದಿದಂತೆ. ಎಕ್ಯುಐ 300 ಇದ್ದರೆ 14 ಸಿಗರೇಟ್ ಸೇದಿದಂತೆ. ಈ ಪ್ರಮಾಣ ದೆಹಲಿಯಲ್ಲಿ 900 ಆಗಿದ್ದೂ ಇದೆ. ಅಂದರೆ 40 ಸಿಗರೇಟು ಸೇದಿದಂತೆ. ಇದೇ ಅರ್ಥದಲ್ಲಿ ನನ್ನ ಗೆಳತಿ ದಿನಕ್ಕೆ 25-30 ಸಿಗರೇಟ್ ಸೇದುತ್ತಿರುವುದು ಎಂದು ಹೇಳಿದ್ದು.
2018ರ ಆಗಸ್ಟ್ ಕೊನೆಯ ವಾರ. ಅನಂತಕುಮಾರ್ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಶ್ವಾಸಕೋಶದ ಕ್ಯಾನ್ಸರ್ಗೆ ಇಲ್ಲಿ ಹೆಚ್ಚಿನ ಚಿಕಿತ್ಸೆ ಇಲ್ಲ ಎಂದಾಗ ನಾವು ಅಮೆರಿಕಕ್ಕೆ ಹೋದೆವು. ಅಲ್ಲಿ ಎಲ್ಲ ವೈದ್ಯರು ಕೇಳಿದ ಮೊದಲ ಪ್ರಶ್ನೆ, ‘ಧೂಮಪಾನ ಮಾಡುತ್ತಿದ್ರಾ’ ಅಂತ. ಈ ಪ್ರಶ್ನೆ ಭಾರಿ ಮುಜುಗರ ತರುತ್ತಿತ್ತು. ಏಕೆಂದರೆ, ಅನಂತಕುಮಾರ್ ಒಮ್ಮೆಯೂ ಧೂಮಪಾನ ಮಾಡಿದವರಲ್ಲ. ಭಾರತದಲ್ಲಿ ಯಾರೂ ಈ ಪ್ರಶ್ನೆ ಕೇಳುತ್ತಿರಲಿಲ್ಲ, ಏಕೆಂದರೆ ಅನಂತಕುಮಾರ್ ವ್ಯಕ್ತಿತ್ವದ ಪರಿಚಯ ಬಹುತೇಕರಿಗೆ ಇತ್ತು. ಆದರೆ, ಈ ಶ್ವಾಸಕೋಶದ ಕ್ಯಾನ್ಸರ್ ಅವರಿಗೆ ಏಕೆ ಬಂತು ಎಂಬ ಪ್ರಶ್ನೆ ಕೊರೆಯುತ್ತಲೇ ಇದೆ.
ವಾಯು ಗುಣಮಟ್ಟ ಸೂಚ್ಯಂಕವನ್ನು ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿ, ಅಳತೆಗೋಲನ್ನು ನಿಗದಿ ಪಡಿಸಿದೆ ( P-2.5 P-10). ಪಿ.2.5 ಇದು 50ಕ್ಕಿಂತ ಹೆಚ್ಚಿದ್ದರೆ ಅಪಾಯಕಾರಿ. ಪಿ.2.5 ಎಂದರೆ ಒಂದು ಘನಮೀಟರ್ನಲ್ಲಿ 2.5 ಮೈಕ್ರೋಮೀಟರ್ಗಿಂತ ಕಡಿಮೆ ಗಾತ್ರದ ಧೂಳು ಕಣಗಳು ಎಷ್ಟು ಎಂಬುದರ ಲೆಕ್ಕ. 25ಕ್ಕಿಂತ ಒಳಗಿದ್ದರೆ ಸಾಮಾನ್ಯ, 50ಕ್ಕಿಂತ ಹೆಚ್ಚಿದ್ದರೆ ಅಪಾಯ. 10 ಮೈಕ್ರಾನ್ನ ಒಳಗಡೆ ಎಷ್ಟು ಧೂಳುಕಣಗಳಿವೆ ಎಂಬುದರ ಲೆಕ್ಕಾಚಾರ ಮಾಡುವ ಸೂಚ್ಯಂಕವೇ ಪಿ-10. ಜಗತ್ತಿನ ಎಲ್ಲ ಪ್ರಮುಖ ಸ್ಥಳಗಳಲ್ಲಿ ಎಕ್ಯುಐ ಕೇಂದ್ರಗಳಿವೆ. ಬೆಂಗಳೂರಿನಲ್ಲೇ ಏಳೆಂಟು ಕಡೆಗಳಲ್ಲಿ ಇಂಥ ಕೇಂದ್ರಗಳಿವೆ.
ವಾಯುಮಾಲಿನ್ಯದಿಂದ ಚಿಕ್ಕಮಕ್ಕಳ, ಹಸೂಗೂಸುಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಆಗುತ್ತಿದೆ. ಉತ್ತರ ಭಾರತದ ನಗರಗಳಲ್ಲಂತೂ ಪರಿಸ್ಥಿತಿ ಶೋಚನೀಯವಾಗಿದೆ. ಎಕ್ಯುಐ 300, 400, 500ರ ಗಡಿ ದಾಟಿದೆ. ದೆಹಲಿಯ ಅರ್ಧ ಮಕ್ಕಳಿಗೆ ಅಸ್ತಮಾ ಸಮಸ್ಯೆ ಬಾಧಿಸುತ್ತಿದೆ. ಅಲ್ಲಿ ಹೆಚ್ಚಿನ ವಾಯುಮಾಲಿನ್ಯ ಪಟಾಕಿಯಿಂದ ಆಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ, ಪಟಾಕಿಯ ಹೊರತಾಗಿಯೂ ಈ ಬಾರಿ ದೆಹಲಿಯ ಸ್ಥಿತಿ ಶೋಚನೀಯವಾಗಿದೆ ಎಂದರೆ ಬೇರೆ ಕಾರಣಗಳನ್ನು ನಿರ್ಲಕ್ಷಿಸುವಂತಿಲ್ಲ.
ವಾಯುಮಾಲಿನ್ಯಕ್ಕೆ ಪ್ರಮುಖ ಕಾರಣಗಳು: ಕೈಗಾರಿಕೆಗಳಿಂದ ಬರುವ ಕಲುಷಿತ ಹೊಗೆಯಿಂದ ಶೇಕಡ 50, ವಾಹನಗಳಿಂದ ಬರುವ ಹೊಗೆಯಿಂದ ಶೇ.25, ಬೆಳೆಯ ಕಳೆ ಸುಡುವುದರಿಂದ ಶೇಕಡ 15, ಕಸ ಸುಡುವುದರಿಂದ ಶೇ.15ರಷ್ಟು ವಾಯುಮಾಲಿನ್ಯವಾಗುತ್ತಿದೆ ಎಂಬುದು ಒಂದು ಅಂದಾಜು. ಅದರಲ್ಲೂ, ನವೆಂಬರ್-ಡಿಸೆಂಬರ್ ತಿಂಗಳಲ್ಲಿ ದೇಶದ ರಾಜಧಾನಿಯಲ್ಲಿ ಬದುಕಲು ಸಾಧ್ಯವಿಲ್ಲ ಎನ್ನುವಂತಾಗುವ ವಾಯುಮಾಲಿನ್ಯ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಂಡಿವೆ. ಆ ಪೈಕಿ ಮುಖ್ಯವಾದುದು ಗುಜರಾತಿನಿಂದ ದೆಹಲಿಯವರೆಗಿನ ಅರಾವಳಿ ಬೆಟ್ಟಗಳ 155 ಕಿ.ಮೀ. ವ್ಯಾಪ್ತಿಯಲ್ಲಿ 150 ಕೋಟಿ ಗಿಡಗಳನ್ನು ನೆಡುವ ಬೃಹತ್ ಯೋಜನೆ. ಎಕ್ಯುಐ ಅಪಾಯಕಾರಿ ಇರುವ ದೆಹಲಿಯ ರಸ್ತೆಗಳನ್ನು ಗಿಡ ಸಮೇತ ನೀರಿನಿಂದ ತೊಳೆಯಲಾಗುತ್ತಿದೆ.
ಸಮ ಮತ್ತು ಬೆಸ ವಾಹನಗಳ ಸಂಚಾರದ ಪ್ರಯೋಗವೂ ನಡೆದಿದೆ. ಪಟಾಕಿ ನಿಷೇಧ ಮಾಡಲಾಗಿದೆ. ಕೆಲ ದೊಡ್ಡ ಕೈಗಾರಿಕೆಗಳನ್ನು ಸರ್ಕಾರ ಮುಚ್ಚಿಸಿದೆ. ಸಿಎನ್ಜಿ ಇಂಧನ ಬಳಕೆಗೂ ಆದ್ಯತೆ ನೀಡಲಾಗಿದೆ. ಆದರೆ, ಜನಸಂಖ್ಯೆ, ವಾಹನಗಳ ಸಂಖ್ಯೆ, ಕೈಗಾರಿಕೆಗಳ ಸಂಖ್ಯೆ ಹೆಚ್ಚುತ್ತಲೇ ಸಾಗಿರುವುದರಿಂದ ಸಮಸ್ಯೆಯ ತೀವ್ರತೆಯೂ ಹೆಚ್ಚುತ್ತಿದೆ. ಜನಸಾಮಾನ್ಯರಿಂದ ನಿಯಮಗಳ ಪಾಲನೆ ಸರಿಯಾಗಿ ಆಗುತ್ತಿಲ್ಲ. ಚಳಿಯಲ್ಲಿ ಫಾಗ್ ಜತೆಗೆ ಸ್ಮಾಗ್ ಕಾಣಿಸಿಕೊಂಡು (ಮಂಜಿನ ಜತೆ ಸೇರಿಕೊಳ್ಳುವ ಮಾಲಿನ್ಯ) ಪ್ರಾಣಘಾತಕವಾಗಿ ಪರಿಣಮಿಸಿದೆ. ಇಷ್ಟೇ ಅಲ್ಲ, ದೇವರ ಮುಂದೆ ಹಚ್ಚುವ ಅಗರಬತ್ತಿಯಿಂದ ಹಿಡಿದು ಕಲ್ಲಿದ್ದಲು ಮತ್ತು ಅಣುಸ್ಥಾವರ ಮಾಲಿನ್ಯ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಎಚ್ಚರಿಕೆ ಗಂಟೆ ಮೊಳಗಿ ಎಷ್ಟೋ ಸಮಯವಾಗಿದೆ. ಸರ್ಕಾರ ಸ್ವಲ್ಪ ಎಚ್ಚೆತ್ತುಕೊಂಡಿದ್ದರೂ, ಜನಸಾಮಾನ್ಯರು ಎಚ್ಚೆತ್ತುಕೊಳ್ಳುವವರೆಗೂ ಹೆಚ್ಚಿನ ಬದಲಾವಣೆ ನಿರೀಕ್ಷಿಸಲಾಗದು.
1. ಕೈಗಾರಿಕೆಗಳಿಗೆ ಸರ್ಕಾರ ನಿಯಮಗಳನ್ನು ರೂಪಿಸಿದ್ದು, ಅವನ್ನು ಕಾರ್ಖಾನೆಗಳು ಅಥವಾ ಇತರ ಕೈಗಾರಿಕೆಗಳು ಸರಿಯಾಗಿ ಪಾಲನೆ ಮಾಡುತ್ತಿವೆಯೇ ಎಂಬುದನ್ನು ಸ್ಥಳೀಯರು ಗಮನಿಸಬೇಕು. ನಿಯಮ ಉಲ್ಲಂಘಿಸುತ್ತಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು.
2. ವಾಹನಗಳ ಸಮಸ್ಯೆ. ಇವತ್ತು ಒಂದೊಂದು ಮನೆಗೂ ಎಷ್ಟೊಂದು ವಾಹನಗಳಾಗಿವೆ! ವಾಹನಗಳ ಸಂಖ್ಯೆ ಕಡಿಮೆ ಮಾಡಲೇಬೇಕು. ಸಾರ್ವಜನಿಕ ಸಾರಿಗೆ ಬಳಸಬೇಕು. ಅನಂತಕುಮಾರ್ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದಾಗ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಆದ್ಯತೆ ನೀಡಿ, 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ ಪ್ರತೀ ನಗರಕ್ಕೂ ಮೆಟ್ರೋ ಅಗತ್ಯ ಎಂದು ಪ್ರತಿಪಾದಿಸಿದರು. ಅದಕ್ಕೆ ತಕ್ಕಂತೆ ಯೋಜನೆಯನ್ನು ರೂಪಿಸಿದರು. ದೆಹಲಿ ವಿಮಾನನಿಲ್ದಾಣದಿಂದ ಸಂಸತ್ ಭವನಕ್ಕೆ ಅವರು ಮೆಟ್ರೋವನ್ನೇ ಬಳಸುತ್ತಿದ್ದರು. ಪ್ರಸಕ್ತ ದೇಶದ 14 ನಗರಗಳಲ್ಲಿ ಮೆಟ್ರೋ ಸಂಚಾರ ಆರಂಭವಾಗಿದ್ದು, ತಕ್ಕಮಟ್ಟಿಗೆ ವಾಹನ ದಟ್ಟಣೆ ತಗ್ಗಿದೆ. ನಮಗೆ ಹೊಸಬಗೆಯ ‘ಬಿಎಂಡಬ್ಲ್ಯು’ ಬೇಕಾಗಿದೆ ಎಂದು ಅನಂತಕುಮಾರ್ ಭಾಷಣಗಳಲ್ಲಿ ಹೇಳುತ್ತ, ಜನರ ಜೀವನಶೈಲಿ ಬದಲಿಸಲು ಪ್ರಯತ್ನಿಸುತ್ತಿದ್ದರು. ಬಿಎಂಡಬ್ಲ್ಯು ಎಂದಾಕ್ಷಣ ಆ ಬ್ರಾ್ಯಂಡ್ನ ಕಾರು ಎಂದಲ್ಲ. BMW ಎಂದರೆ Bicycle, Metro, Walking ಎಂದು ಅವರು ಹೇಳುತ್ತಿದ್ದರು. ಇದರಿಂದ ಆರೋಗ್ಯಕ್ಕೂ ಪೂರಕವಲ್ಲದೆ ಪರಿಸರದ ಸ್ವಾಸ್ಥ್ಯಕ್ಕೂ ಹಿತಕಾರಿ.
3. ಎಲೆಕ್ಟಿಕ್ ವಾಹನಗಳ ಬಳಕೆ ಹೆಚ್ಚಬೇಕಿದೆ. ಪಳೆಯುಳಿಕೆ ಇಂಧನ ಸೃಷ್ಟಿಸುವ ಮಾಲಿನ್ಯದ ಪ್ರಮಾಣ ನೋಡಿದರೆ ಇದರ ಬಳಕೆ ಉತ್ತಮ ಪರಿಹಾರ. ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳು ಬಂದು ಹಲವು ವರ್ಷಗಳಾಗಿದ್ದರೂ ಜನರು ಹೆಚ್ಚಾಗಿ ಬಳಸುತ್ತಿಲ್ಲ. ಕರ್ನಾಟಕದ ‘ರೇವಾ’ ಸಂಸ್ಥೆ ದೇಶದಲ್ಲೇ ಮೊದಲ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ದಿ.ಅನಂತಕುಮಾರ್ ಈ ಕಾರನ್ನು ಖರೀದಿಸಿದ್ದರು. ನಾನು ಕೂಡ 2004ರಿಂದಲೇ ಎಲೆಕ್ಟ್ರಿಕ್ ಕಾರನ್ನು ಉಪಯೋಗಿಸುತ್ತಿದ್ದೇನೆ. ಪಳೆಯುಳಿಕೆ ಇಂಧನದಿಂದ ಬರುವಂಥ ವಿಷಪೂರಿತ ರಾಸಾಯನಿಕಗಳನ್ನು ನಿಯಂತ್ರಿಸುವುದು ಕಷ್ಟ ಮತ್ತು ಸಾಮಾನ್ಯ ಜನರು ನೇರವಾಗಿ ಅದರ ಸಂಪರ್ಕಕ್ಕೆ ಬರುತ್ತಾರೆ.
4. ರೈತರಲ್ಲಿ ಅರಿವು ಮೂಡಿಸುವುದು. ಪಂಜಾಬ್, ಹರಿಯಾಣ ರಾಜ್ಯಗಳ ರೈತರು ಬೆಳೆಗಳ ಕಳೆಯನ್ನು ದಹಿಸುವುದುಂಟು. ಕೃಷಿತ್ಯಾಜ್ಯದಿಂದ ಬ್ರಿಕೆಡ್ಸ್, ಬಯೋಗ್ಯಾಸ್, ಮೆಥನಾಲ್ ತಯಾರಿಸಬಹುದು. ಇಂಥ ಸಾಧ್ಯತೆಗಳ ಬಗ್ಗೆ ರೈತರಲ್ಲಿ ಹೆಚ್ಚಿನ ಅರಿವು ಮೂಡಿಸಿದರೆ ಪರಿಸ್ಥಿತಿ ಕೊಂಚ ಬದಲಾಗಬಹುದು. ನಗರಗಳಲ್ಲಿ ಕಸವನ್ನು ಸುಡುವ ಕೆಟ್ಟ ಪದ್ಧತಿ ಇದೆ. ಕಸವನ್ನು ಸುಡಬಾರದು. ಏಕೆಂದರೆ, ಸುಟ್ಟಾಗ ಬಹಳಷ್ಟು ವಿಷಾನಿಲಗಳು ಹೊರಬರುತ್ತವೆ. ಕಸದಿಂದ ಗೊಬ್ಬರವನ್ನು ಸುಲಭವಾಗಿ ತಯಾರಿಸಬಹುದು.
5. ಜನರ ಸಹಭಾಗಿತ್ವ. ವಾಯುಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರ ಎಷ್ಟೇ ಪ್ರಯತ್ನ ಮಾಡಿದರೂ, ಜನರ ಸಹಕಾರ ಸಿಗುವವರೆಗೆ, ಜನರು ಜೀವನಶೈಲಿಯಲ್ಲಿ ಸಕಾರಾತ್ಮಕ ಬದಲಾವಣೆ ಮಾಡಿಕೊಳ್ಳುವವರೆಗೆ ದೊಡ್ಡ ಬದಲಾವಣೆ ನಿರೀಕ್ಷಿಸಲು ಸಾಧ್ಯವಿಲ್ಲ. ವಾಯುಮಾಲಿನ್ಯ ಸಮಸ್ಯೆ ಮತ್ತಷ್ಟು ವಿಕೋಪಕ್ಕೆ ಹೋಗುವ ಮುನ್ನ ಎಚ್ಚೆತ್ತುಕೊಳ್ಳೋಣ, ಉಸಿರಾಟಕ್ಕೆ ಪೂರಕವಾದ ಪರಿಸರವನ್ನು ನಮ್ಮದಾಗಿಸಿಕೊಳ್ಳೋಣ.
(ಲೇಖಕರು ಅದಮ್ಯ ಚೇತನ ಸಂಸ್ಥೆಯ ಮುಖ್ಯಸ್ಥರು)