

ಆದರೆ ಕರೊನಾ ರೋಗಿಗಳಿಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ವೆಂಟಿಲೇಟರ್ಗಳ ತೀವ್ರ ಕೊರತೆ ಇದೆ, ಶಾಲೆಯಲ್ಲಿ ಒಬ್ಬ ವಿದ್ಯಾರ್ಥಿಗೆ ಕರೊನಾ ಬಂದರೆ ಆ ಕ್ಲಾಸಿನಲ್ಲಿರುವ ಎಲ್ಲ ಮಕ್ಕಳಿಗೆ ಹಬ್ಬಿ, ಆ ಮಕ್ಕಳಿಂದ ಅವರ ಮನೆಯವರಿಗೆಲ್ಲ ಹಬ್ಬುವ ಸಾಧ್ಯತೆ ಇದೆ. ಇಂತಹ ಅಪಾಯ ಇರುವುದರಿಂದ ಶಾಲೆಗಳನ್ನು ತೆರೆಯದೆ ಆನ್ಲೈನ್ನಲ್ಲೇ ಮುಂದುವರಿಸಬೇಕೆಂದು ಖಾಸಗಿ ಶಾಲೆಗಳು ಮತ್ತು ಕೆಲವು ಪಾಲಕರು ವಾದ ಮಾಡುತ್ತಿದ್ದಾರೆ. ಇದೇ ಸಂದಿಗ್ಧ ಪರಿಸ್ಥಿತಿ ಅಮೆರಿಕದ ಶಾಲೆಗಳಿಗೂ ಬಂದಿತ್ತು. ಈಗ ಅಮೆರಿಕದ ಶಾಲೆಗಳು ಕೋವಿಡ್-19ನ್ನು ಯಶಸ್ವಿಯಾಗಿ ನಿರ್ವಹಿಸುತ್ತಿರುವ ರೀತಿಯನ್ನು ಅವಲೋಕನ ಮಾಡೋಣ. ಅದರಿಂದ ನಾವು ಕಲಿಯಬಹುದಾದ ಪಾಠಗಳನ್ನು ನೋಡೋಣ.
ಅಮೆರಿಕದ ನ್ಯೂಯಾರ್ಕ್ ರಾಜ್ಯ ಮಾರ್ಚ್ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಕರೊನಾದ ಹಾಟ್ಸ್ಪಾಟ್ ಆಗಿ ಲಕ್ಷಾಂತರ ಜನರು ಸೋಂಕಿತರಾಗಿ, ಇಪ್ಪತ್ತು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಾಗ, ಗವರ್ನರ್ ಆಂಡ್ರೂ ಕೋಮೊ ಲಾಕ್ಡೌನ್ ಘೊಷಿಸಿ, ಎಲ್ಲ ಸರ್ಕಾರಿ ಕಚೇರಿ, ಎಲ್ಲ ಬಿಸಿನೆಸ್ಗಳನ್ನು, ಜೊತೆಗೆ ಶಾಲೆಗಳನ್ನು ಸಹ ಮುಚ್ಚುವಂತೆ ಆದೇಶ ಮಾಡಿದರು. ಈ ರೀತಿಯಾಗಿ ದಿಢೀರಾಗಿ ಅನಿರ್ದಿಷ್ಟ ಕಾಲದವರೆಗೆ ಹಿಂದೆಂದೂ ಅಮೆರಿಕದಲ್ಲಿ ಶಾಲೆಗಳನ್ನು ಮುಚ್ಚಿರಲಿಲ್ಲ. ಇಲ್ಲಿಯ ಸರ್ಕಾರಿ ಪ್ರಾಥಮಿಕ ಶಾಲೆ ಮತ್ತು ಹೈಸ್ಕೂಲ್ಗಳಿಗೆ ಆನ್ಲೈನ್ ಮೂಲಕ ಶಿಕ್ಷಣ ನೀಡುವ ಯಾವ ಅನುಭವವೂ ಇರಲಿಲ್ಲ.
ಮೊದಲ ಒಂದೆರಡು ವಾರ ಶಾಲೆ ಇಲ್ಲವೆಂದು ಖುಷಿಪಟ್ಟ ವಿದ್ಯಾರ್ಥಿಗಳು ಲಾಕ್ಡೌನ್ನಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಶಾಲೆಗಳು ಮತ್ತೆ ತೆರೆದರೆ ಸಾಕಪ್ಪಾ ಎನ್ನುವ ಸ್ಥಿತಿಗೆ ತಲುಪಿದ್ದರು. ಕೆಲವು ವಾರಗಳ ಲಾಕ್ಡೌನ್ ನಂತರ ನಮ್ಮ ಊರಿನ ಶಾಲೆಗಳನ್ನು ನೆಪಮಾತ್ರಕ್ಕೆ ಆನ್ಲೈನ್ ಮೂಲಕ ಪ್ರಾರಂಭಿಸಲಾಯಿತು. ಅಂದರೆ ದಿನಕ್ಕೆ ಒಂದು ಗಂಟೆ ಮಾತ್ರ. ಅದೂ ಸಹ ವಿದ್ಯಾರ್ಥಿಗಳಿಗೆ ಏನಾದರೂ ಪ್ರಶ್ನೆಗಳಿದ್ದರೆ, ಹೋಂವರ್ಕ್ ಮಾಡಲು ಸಹಾಯ ಬೇಕಿದ್ದರೆ ಟೀಚರ್ಸ್ಗಳೊಂದಿಗೆ ಹಂಚಿಕೊಳ್ಳಲು ಮಾಡಿಕೊಟ್ಟ ಪುಟ್ಟ ಅವಕಾಶ. ಆನ್ಲೈನ್ನಲ್ಲಿ ಪಾಠ ಮಾಡಲಿಲ್ಲ. ಏನಿದ್ದರೂ ಬರೀ ಹೋಮ್ರ್ಕ್ ಮತ್ತು ಅಸೈನ್ಮೆಂಟ್ ದಾಖಲು ಮಾಡಬೇಕು.
ನಾನು ಮತ್ತು ಕೆಲವು ಏಷ್ಯನ್ ಪಾಲಕರು, ‘ನಿಮಗೆ ಆನ್ಲೈನ್ನಲ್ಲಿ ಪಾಠಮಾಡಲು ಏನು ಅಡ್ಡಿ? ಚೀನಾ, ಭಾರತ ಮತ್ತು ಮುಂತಾದ ಏಷ್ಯಾದ ದೇಶಗಳಲ್ಲಿ ಈ ವ್ಯವಸ್ಥೆ ಅಳವಡಿಸಿಕೊಂಡಿರುವಾಗ ಇಲ್ಲೇನು ಸಮಸ್ಯೆ?’ ಎಂದು ಪ್ರಶ್ನಿಸಿದಾಗ, ಹೈಸ್ಕೂಲ್ ಪ್ರಿನ್ಸಿಪಾಲ್ ಮತ್ತು ಸ್ಕೂಲ್ ಬೋರ್ಡ್ ಸದಸ್ಯರು ನೀಡಿದ ಉತ್ತರ ನನ್ನನ್ನು ಅಚ್ಚರಿಗೊಳಿಸಿತು. ‘ನಮ್ಮ ಶಿಕ್ಷಕರಿಗೆ ಆನ್ಲೈನ್ ಶಿಕ್ಷಣದ ಬಗ್ಗೆ ತರಬೇತಿ ಕೊಟ್ಟಿಲ್ಲ. ನಮ್ಮೂರಿನ ಶೇಕಡ 5 ಜನರಿಗೆ ಇನ್ನು ವೈ-ಫೈ, ಇಂಟರ್ನೆಟ್ ಸಂಪರ್ಕ ಇಲ್ಲ. ಶೇ.10 ವಿದ್ಯಾರ್ಥಿಗಳ ಹತ್ತಿರ ಲ್ಯಾಪ್ಟಾಪ್/ಕ್ರೋಮ್ಬುಕ್ ಇಲ್ಲ. ಹೀಗಾಗಿ ಈ ವರ್ಷ ಮುಗಿಯುವರೆಗೂ ಅಂದರೆ ಜೂನ್ ಕೊನೆಯವರೆಗೂ ಆನ್ಲೈನ್ ಶಿಕ್ಷಣ ಕೊಡಲು ಸಾಧ್ಯವಿಲ್ಲ. ಇದು ‘ಟೀಚರ್ಸ್ ಯೂನಿಯನ್’ ನಿರ್ಧಾರ ಸಹ ಆಗಿದೆ’.
ಅಂದಹಾಗೆ ಅಮೆರಿಕದಲ್ಲಿ ಸರ್ಕಾರಿ ಶಾಲೆಗಳನ್ನು ‘ಪಬ್ಲಿಕ್ -ಸ್ಕೂಲ್’ ಎಂದು ಕರೆಯುತ್ತಾರೆ. ಇಲ್ಲಿಯ ‘ಟೀಚರ್ಸ್ ಯೂನಿಯನ್’ ತುಂಬ ಪ್ರಭಾವಶಾಲಿ ಯಾಗಿದ್ದು ಕಳಪೆ ಶಿಕ್ಷಕರನ್ನೂ ಕೆಲಸದಿಂದ ಸುಲಭವಾಗಿ ತೆಗೆದುಹಾಕಲು ಬಿಡುವುದಿಲ್ಲ. ಶಾಲೆ ಬಜೆಟ್ ಕಡಿತವಾದಾಗ ಮಾತ್ರ ಶಿಕ್ಷಕರನ್ನು ಕೆಲಸದಿಂದ ತೆಗೆಯಬಹುದು. ಇಲ್ಲಿಯ ಪಬ್ಲಿಕ್ ಸ್ಕೂಲ್ಗಳಿಗೆ ಸ್ವಲ್ಪ ಅನುದಾನ ಫೆಡರಲ್ (ಕೇಂದ್ರ) ಸರ್ಕಾರದಿಂದ, ಸ್ವಲ್ಪ ಅನುದಾನ ರಾಜ್ಯ (ಸ್ಟೇಟ್) ಸರ್ಕಾರದಿಂದ ಮತ್ತು ಉಳಿದ ಬಹಳಷ್ಟು ಹಣ ಆ ಊರಿನ ಸ್ಥಳೀಯರು ನೀಡುವ ಶಾಲೆ- ತೆರಿಗೆಯಿಂದ (ಸ್ಕೂಲ್ ಟ್ಯಾಕ್ಸ್ನಿಂದ) ಬರುತ್ತದೆ. ಇಲ್ಲಿಯ ಸ್ಥಳೀಯ ಪಬ್ಲಿಕ್ ಸ್ಕೂಲ್ ಬೋರ್ಡ್ (ಶಾಲೆಯ ಆಡಳಿತ ಮಂಡಳಿ) ಗಳಿಗೆ ಚುನಾವಣೆ ಮೂಲಕ ಪಾಲಕರನ್ನು ಆರಿಸಲಾಗುತ್ತದೆ.
ಇಲ್ಲಿಯ ಶೈಕ್ಷಣಿಕ ವರ್ಷ ಸೆಪ್ಟೆಂಬರ್ನಿಂದ ಜೂನ್ ತಿಂಗಳವರೆಗೆ. ಹಾಗಾಗಿ ಬೇಸಿಗೆ ರಜೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ. ಕರೊನಾದಿಂದ ಶಾಲೆಗಳು ಮಾರ್ಚ್ ತಿಂಗಳಿನಲ್ಲಿ ಮುಚ್ಚಿದವು. ನಾವು ನೆಲೆಸಿರುವ ನ್ಯೂಯಾರ್ಕ್ ರಾಜ್ಯದ ನಿಸ್ಕಯೂನ ಊರಿನ ಪಬ್ಲಿಕ್ ಸ್ಕೂಲ್ ಡಿಸ್ಟ್ರಿಕ್ಟ್ನಲ್ಲಿ ಶಿಕ್ಷಕರ, ವಿದ್ಯಾರ್ಥಿಗಳ ಮತ್ತು ಪಾಲಕರ ಜಂಟಿ ಸಭೆಗಳನ್ನು ಕರೆದು, ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಯಿತು. ಸ್ಕೂಲನ್ನು ಹೇಗೆ ತೆರೆಯಬೇಕೆಂಬ ಬಗ್ಗೆ ಅಧ್ಯಯನ ಮಾಡಿ ಶಿಫಾರಸು ಕೊಡುವಂತೆ ಸ್ವಯಂ-ಸೇವಕರಾಗಿ ಕೆಲಸ ಮಾಡಲು ಮುಂದೆ ಬಂದ ಕೆಲವು ಪಾಲಕರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಲಾಯಿತು.
ಆ ಸಮಿತಿಯ ಶಿಫಾರಸ್ಸಿನಂತೆ ಎಲ್ಲ ಪಾಲಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಂದು ಸಮೀಕ್ಷೆಯನ್ನು ಕಳಿಸಲಾಯಿತು. ಅದರಲ್ಲಿ ಸಂಪೂರ್ಣ ಆನ್ಲೈನ್ ಅಥವಾ ಹೈಬ್ರಿಡ್ ವ್ಯವಸ್ಥೆ, ಇವುಗಳಲ್ಲಿ ಒಂದನ್ನು ಮಾತ್ರ ಆಯ್ಕೆಮಾಡಲು ತಿಳಿಸಲಾಯಿತು. ಸರ್ವೆ ಫಲಿತಾಂಶದ ಪ್ರಕಾರ ನಮ್ಮೂರಿನ ಶೇ.85 ಪಾಲಕರು ಹೈಬ್ರಿಡ್ ವ್ಯವಸ್ಥೆಯನ್ನು ಮತ್ತು ಶೇ.15ರಷ್ಟು ಪಾಲಕರು ಸಂಪೂರ್ಣ ಆನ್ಲೈನ್ ಶಿಕ್ಷಣವನ್ನು ಆಯ್ಕೆ ಮಾಡಿದರು. ನಮ್ಮ ಪಕ್ಕದ ಊರಿನಲ್ಲಿರುವ ಸ್ಕೂಲ್ ಡಿಸ್ಟ್ರಿಕ್ಟ್ನಲ್ಲಿ ಶೇ.90 ಜನರು ‘ಆನ್ಲೈನ್ ಓನ್ಲಿ’ ಕೇಳಿದ್ದರಿಂದ ಅಲ್ಲಿ ಆನ್ಲೈನ್ ಮಾತ್ರ ಇದೆ. ಹೈಬ್ರಿಡ್ ವ್ಯವಸ್ಥೆ ಎಂದರೆ ವಿದ್ಯಾರ್ಥಿಗಳನ್ನು ಎರಡು ತಂಡಗಳಾಗಿ ವಿಭಾಗಿಸಿ ದಿನಬಿಟ್ಟು ದಿನ ತರಗತಿ ತೆಗೆದುಕೊಳ್ಳಬೇಕು. ಅಂದರೆ ಮಕ್ಕಳು ಒಂದು ದಿವಸ ಶಾಲೆಯಲ್ಲಿಯೂ ಮತ್ತು ಮರುದಿವಸ ಆನ್ಲೈನ್ ಮೂಲಕ ಮನೆಯಲ್ಲಿಯೂ ಶಿಕ್ಷಣ ಪಡೆಯುವುದು.
ಸುರಕ್ಷಿತ ಅಂತರ ಪಾಲಿಸಬೇಕಾಗಿರುವುದರಿಂದ ಶಾಲೆ, ಸ್ಕೂಲ್ ಬಸ್ಸುಗಳಲ್ಲಿ ಅರ್ಧದಷ್ಟು ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ. ಒಂದು ಸೀಟು ಖಾಲಿ ಬಿಟ್ಟು ಇನ್ನೊಂದು ಸೀಟಿನಲ್ಲಿ ಕುಳಿತು ಕೊಳ್ಳಬೇಕು. ನನ್ನ ಮಕ್ಕಳು ಹೈಬ್ರಿಡ್ ವ್ಯವಸ್ಥೆ ಆಯ್ಕೆ ಮಾಡಿಕೊಂಡರು. ಕರೊನಾಕ್ಕೆ ಅತೀ ಭಯಭೀತರಾಗಿರುವ ಪಾಲಕರು ಸಂಪೂರ್ಣ ಆನ್ಲೈನ್ ವ್ಯವಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಬೇಸಿಗೆ ರಜೆಯಿದ್ದ ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಶಿಕ್ಷಕರಿಗೆ ಬದಲಾದ ಪರಿಸ್ಥಿತಿಯಲ್ಲಿ ಹೇಗೆ ಪಾಠ ಮಾಡಬೇಕು ಎಂಬುದರ ಬಗ್ಗೆ ತರಬೇತಿ ಕೊಡಲಾಯಿತು. ಶಿಕ್ಷಕರು ಕ್ಲಾಸ್ರೂಮಿನಲ್ಲಿ ಕುಳಿತ ಅರ್ಧ ವಿದ್ಯಾರ್ಥಿಗಳಿಗೆ ಮತ್ತು ಆನ್ಲೈನ್ ಮೂಲಕ ವಿಡಿಯೋ ಕಾನ್ಫರೆನ್ಸ್ನಲ್ಲಿರುವ ಉಳಿದ ಅರ್ಧ ವಿದ್ಯಾರ್ಥಿಗಳಿಗೆ ಒಟ್ಟಿಗೆ ಪಾಠ ಮಾಡುತ್ತಾರೆ. ಕ್ಲಾಸ್ರೂಮಿನಲ್ಲಿ ವಿವಿಧ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತಮ್ಮ ಮುಂದೆ ಕುಳಿತ ವಿದ್ಯಾರ್ಥಿಗಳನ್ನು ಮತ್ತು ಮುಂದಿನ ಸ್ಕ್ರೀನ್ ಮೇಲೆ ಕಾಣುವ ಆನ್ಲೈನ್ ವಿದ್ಯಾರ್ಥಿಗಳನ್ನು ಒಟ್ಟಿಗೆ ನಿಭಾಯಿಸುವುದು ಕಷ್ಟದ ಕೆಲಸ. ಇಬ್ಬರಿಗೂ ಅರ್ಥವಾಗುವಂತೆ ಪಾಠ ಮಾಡುವುದು ಒಂದು ಕಲೆ. ಇದನ್ನು ಇಲ್ಲಿನ ಶಿಕ್ಷಕರು ಸಮರ್ಥವಾಗಿ ಮಾಡುತ್ತಿದ್ದಾರೆ.
ಅಮೆರಿಕದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗೆ ಮಹತ್ವ ಕೊಡುತ್ತಾರೆ. ಚಿಕ್ಕ ಮಕ್ಕಳಿಗೆ ಅಂದರೆ, ಒಂದನೇ ಕ್ಲಾಸಿನಿಂದ ಐದನೇ ಕ್ಲಾಸಿನ ಮಕ್ಕಳಿಗೆ, ಆನ್ಲೈನ್ ಶಿಕ್ಷಣ ಒಳ್ಳೆಯದಲ್ಲ ಬದಲಿಗೆ ಆಟ, ಹಾಡುಗಳ ಮೂಲಕ, ಮುಖಾಮುಖಿ ಮಾಡುವ ಶಿಕ್ಷಣವೇ ಒಳ್ಳೆಯದೆಂದು ಅರಿತು ಅವರಿಗೆ ಪ್ರತಿ ದಿನವೂ ಶಾಲೆಗೆ ಬರುವ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೆ, ಸ್ವಲ್ಪ ದೊಡ್ಡ ವಿದ್ಯಾರ್ಥಿಗಳಾದ 6ನೇ ಕ್ಲಾಸಿನಿಂದ 12ನೇ ಕ್ಲಾಸಿನ ವಿದ್ಯಾರ್ಥಿಗಳಿಗೆ ಹೈಬ್ರಿಡ್, ಅಂದರೆ ಒಂದು ದಿನ ಶಾಲೆಯಲ್ಲಿ, ಒಂದು ದಿನ ಮನೆಯಿಂದ ಆನ್ಲೈನ್ ಶಿಕ್ಷಣ ಪಡೆಯುವ ಅವಕಾಶ ಕೊಟ್ಟಿದ್ದಾರೆ. ಕರ್ನಾಟಕದಲ್ಲಿ ಇದಕ್ಕೆ ಸಂಪೂರ್ಣ ವಿರುದ್ಧವಾಗಿ ಚಿಕ್ಕ ಮಕ್ಕಳಿಗೆ ಆನ್ಲೈನ್ ಶಿಕ್ಷಣ, ದೊಡ್ಡ ಮಕ್ಕಳಿಗೆ ಶಾಲೆಯಲ್ಲಿ ಶಿಕ್ಷಣ ಕೊಡುವ ಬಗ್ಗೆ ಚರ್ಚೆಯಾಗುತ್ತಿದೆ.
ಇಲ್ಲಿ ಪ್ರತಿದಿನ ಮಕ್ಕಳು ಶಾಲೆಗೆ ಹೋಗುವ ಮುನ್ನ ಪಾಲಕರು ತಮ್ಮ ಪ್ರತೀಮಗುವಿಗೂ ಆನ್ಲೈನ್ ಹೆಲ್ತ್ ಸ್ಕ್ರೀನ್ ಮಾಡಬೇಕು. ಅದರಲ್ಲಿ 4 ಪ್ರಶ್ನೆಗಳಿವೆ. ‘ನಿಮ್ಮ ಮಗುವಿಗೆ 100 ಡಿಗ್ರಿಗಿಂತ ಹೆಚ್ಚು ಜ್ವರ ಇದೆಯೇ? ನೆಗಡಿ, ಕೆಮ್ಮು, ಶೀತ, ಚಳಿಜ್ವರ, ರುಚಿಹೀನತೆ, ವಾಸನೆಹೀನತೆ ಇದೆಯೇ? ಹೊರರಾಜ್ಯಕ್ಕೆನಾದರೂ ಪ್ರವಾಸಮಾಡಿ ಬಂದಿದ್ದೀರಾ? ಕರೊನಾ ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದಿದ್ದೀರಾ?’ ಒಂದು ವೇಳೆ ಪಾಲಕರು ಮರೆತರೆ ಬಸ್ಸಿನಿಂದ ಇಳಿದ ತಕ್ಷಣ ಶಾಲೆಯಲ್ಲಿ ನರ್ಸ್ ಬಂದು ದೇಹದ ಉಷ್ಣಾಂಷ ಪರಿಶೀಲಿಸಿ, ನೂರು ಡಿಗ್ರಿಗಿಂತ ಕಡಿಮೆ ಇದ್ದರೆ ಮಾತ್ರ ಶಾಲೆ ಒಳಗೆ ಸೇರಿಸುತ್ತಾರೆ. ಶಾಲೆಯಲ್ಲಿ ಮಕ್ಕಳು ಮತ್ತು ಶಿಕ್ಷಕರು ಲಂಚ್ ಮಾಡುವ ವೇಳೆಯೊಂದನ್ನು ಬಿಟ್ಟು ಎಲ್ಲ ಸಮಯವೂ ಮಾಸ್ಕ್ ಹಾಕಿಕೊಂಡು ಇರಲೇಬೇಕು.
ಈ ಕರೊನಾ ಮಧ್ಯೆಯೂ ಶಾಲೆಗಳಲ್ಲಿ ಟೆನಿಸ್, ಕ್ರಾಸ್-ಕಂಟ್ರಿ ರನ್ನಿಂಗ್, ಸಾಕರ್ (ಫುಟ್ಬಾಲ್), ಹಾಕಿ, ವಾಲಿಬಾಲ್ ಮುಂತಾದ ಕ್ರೀಡೆಗಳು ಪ್ರಾರಂಭವಾಗಿವೆ. ಮುಂಬರುವ ದಿನಗಳಲ್ಲಿ, ದೇವರ ದಯೆಯಿಂದ, ಲಸಿಕೆ ಬೇಗನೆ ಬರಲಿ, ಕರೊನಾ ದೂರವಾಗಿ, ಶಾಲೆಗಳು ಪುನರಾರಂಭವಾಗಲಿ.
(ಲೇಖಕರು ಅಮೆರಿಕದ ನ್ಯೂಯಾರ್ಕ್ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರು, ಹವ್ಯಾಸಿ ಬರಹಗಾರರು)