

ಈಗ ಎಲ್ಲೆಲ್ಲೂ ಪರಿಸರಸ್ನೇಹಿಯದ್ದೇ ಮಾತು. ಕಲುಷಿತಗೊಂಡಿರುವ ವಾತಾವರಣವನ್ನು ಸರಿದೂಗಿಸಲು ಎಲ್ಲ ತಂತ್ರಜ್ಞಾನಗಳಲ್ಲಿಯೂ ಪರಿಸರಸ್ನೇಹಿಯ ಹುಡುಕಾಟ ಜೋರಾಗಿ ನಡೆದಿದೆ. ಇವುಗಳಲ್ಲಿ ಒಂದು ಮಣ್ಣಿನ ಮನೆ.
‘ಮಣ್ಣಿನ ಮನೆ’ ಭಾರತದಲ್ಲಿ ಹೊಸತೇನೂ ಅಲ್ಲ. ನಮ್ಮ ತಾತ- ಮುತ್ತಾತರ ಕಾಲದಲ್ಲಿ ಮಣ್ಣು ಎನ್ನುವುದೇ ಪ್ರತಿಯೊಬ್ಬರ ಸೂರಿಗೆ ಆಧಾರವಾಗಿತ್ತು. ಶತಮಾನಗಳೇ ಕಳೆದರೂ ಗಟ್ಟಿಮುಟ್ಟಿಯಾಗಿರುತ್ತಿದ್ದ ಮಣ್ಣಿನ ಮನೆಗಳು ಈಗ ಇತಿಹಾಸ ಸೇರಿಹೋಗಿವೆ. ಆದರೆ ‘ಓಲ್ಡ್ ಈಸ್ ಗೋಲ್ಡ್’ ಎನ್ನುವಂತೆ ಮಣ್ಣಿನ ಮನೆಯ ಪರಿಕಲ್ಪನೆ ಮತ್ತೆ ಮುನ್ನೆಲೆಗೆ ಬಂದಿದೆ. ಮಣ್ಣಿನ ಮನೆಗಳ ನಿರ್ವಣದ ಹೊಸ ಟ್ರೆಂಡ್ ಹುಟ್ಟಿಕೊಂಡಿದೆ.
ಪ್ರತಿ ವಸ್ತು ರಾಸಾಯನಿಕ, ಪ್ರತಿಯೊಂದು ಪರಿಸರ ಮಾರಕ ಎಂಬ ಸ್ಥಿತಿಯಲ್ಲಿರುವಾಗ ಪರಿಸರ ಸ್ನೇಹಿಯಾಗಿ ಮನೆ ನಿರ್ಮಾಣ ಮಾಡಿದರೆ ಹೇಗೆ ಎಂಬ ಯೋಚನೆಗೆ ಪರಿಸರ ಸ್ನೇಹಿಯಾದ ಮಣ್ಣನ್ನು ಬಳಸುವುದೇ ಸೂಕ್ತ ಎಂಬ ಉತ್ತರ ದೊರಕಿದೆ.
ಮಣ್ಣಿನ ಮನೆ ನಿರ್ಮಾಣ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಪರಿಸರಕ್ಕೆ ಪೂರಕವಾಗಿರುತ್ತದೆ. ಸಿಮೆಂಟ್ ನಿರ್ಮಾಣ ಕಾರ್ಖಾನೆಗಳು ಅಪಾರ ಪ್ರಮಾಣದ ಹೊಗೆ, ತ್ಯಾಜ್ಯ ಸೃಷ್ಟಿಗೆ ಕಾರಣವಾಗುತ್ತವೆ. ಮಣ್ಣಿನ ಮನೆ ನಿರ್ವಣದಿಂದ ಈ ಪ್ರಮಾಣವನ್ನು ತಗ್ಗಿಸಬಹುದು. ಜತೆಗೆ ಮಣ್ಣಿನ ಇಟ್ಟಿಗೆ ಮುಂತಾದವುಗಳಿಗೆ ಬೇಡಿಕೆ ಹೆಚ್ಚುವುದರಿಂದ ಸ್ಥಳೀಯವಾಗಿ ಉದ್ಯೋಗಾವಕಾಶಗಳೂ ಹೆಚ್ಚುತ್ತವೆ ಎನ್ನುವುದು ತಜ್ಞರ ಅಭಿಮತ. ಅದೇ ರೀತಿ, ಆಧುನಿಕ ತಂತ್ರಜ್ಞಾನದ ಸಹಾಯದೊಂದಿಗೆ ನಿರ್ವಿುಸುವುದರಿಂದ ದೃಢವಾಗಿಯೂ ಇರುತ್ತದೆ. ಹಿಂದಿನ ಕಾಲದಂತೆ ಒಂದೆರಡು ಮಳೆಗೆ ಗೋಡೆ ಕರಗುವುದಿಲ್ಲ. ದುರಸ್ತಿ ಮಾಡುವವರೆಗೆ ನೀರಿನ ಹೊಡೆತ ತಡೆಯಬಲ್ಲದು ಎನ್ನುವುದು ಅವರ ನಿಲುವು.
ವಿದೇಶಗಳಲ್ಲೂ ಬೇಡಿಕೆ
ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲೂ ಪಾರಂಪರಿಕ ಹಾಗೂ ಆಧುನಿಕ ಮಣ್ಣಿನ ಕಟ್ಟಡಗಳ ನಿರ್ವಣಕ್ಕೆ ಬೇಡಿಕೆ ಕಂಡುಬರುತ್ತಿದೆ. ಜಾಗತಿಕ ಹವಾಮಾನ ವೈಪರೀತ್ಯ ಕುರಿತ ತಂಡವೊಂದು ಇಂಥ ಮನೆಗಳ ಕುರಿತ ವೈಜ್ಞಾನಿಕ ಅಧ್ಯಯನಕ್ಕೆ ಮುಂದಾಗುವಂತೆ ಕರೆ ನೀಡಿದೆ. ಮನೆಗಳ ಕೊರತೆ ಹಾಗೂ ಸ್ಥಳೀಯವಾಗಿ ದೊರೆಯುವ ಸಾಮಗ್ರಿಗಳ ಬಳಕೆಯಿಂದ ಮಣ್ಣಿನ ಮನೆ ನಿರ್ಮಾಣ ಮಾಡುವಂತೆ ಪ್ರೇರೇಪಿಸುತ್ತಿದೆ. ಪರಿಣಾಮವಾಗಿ ಪ್ರಪಂಚಾದ್ಯಂತ ಮಣ್ಣಿನ ವಾಸನೆ ಬಗ್ಗೆ ಜನರಲ್ಲಿ ಒಲವು ಹೆಚ್ಚುತ್ತಿದೆ.
ಇತಿಹಾಸದಲ್ಲಿ ಮಣ್ಣಿನ ಮನೆ
ಮಣ್ಣಿನ ಕಟ್ಟಡಗಳ ನಿರ್ಮಾಣಕ್ಕೆ ತನ್ನದೇ ಇತಿಹಾಸವಿದೆ. ಐತಿಹಾಸಿಕ ಪರಂಪರೆ ಇದೆ. ಮುಖ್ಯವಾಗಿ ಸ್ಥಳೀಯ ಮೂಲ ಸಾಮಗ್ರಿಗಳ ಬಳಕೆ, ಕನಿಷ್ಠ ಪ್ರಮಾಣದ ಮಾಲಿನ್ಯ, ಉತ್ತಮ ಆರೋಗ್ಯ, ತಾಪವನ್ನು ಕಡಿಮೆಗೊಳಿಸುವಿಕೆ ಸೇರಿ ಹಲವು ಉಪಯೋಗಗಳನ್ನು ಕಂಡುಕೊಂಡಿದ್ದ ಆಗಿನ ಜನತೆ ಮಣ್ಣಿನ ಮನೆಗಳಿಗೆ ಪ್ರಾಶಸ್ಱ ನೀಡಿದ್ದರು. ಇಡೀ ಕಟ್ಟಡವನ್ನು ಪರಿಸರ ಸ್ನೇಹಿಯಾಗಿ ನಿರ್ವಿುಸುವುದರಿಂದ ಪರಿಸರಕ್ಕೆ ನಮ್ಮ ಕೊಡುಗೆ ನೀಡಬಹುದು ಎಂಬ ಟ್ರೆಂಡ್ ಶುರುವಾಗಿದ್ದು, ಮಣ್ಣಿನ ಮನೆ ನಿರ್ವಣದ ಕಡೆಗೆ ಈಗ ಎಲ್ಲರ ಚಿತ್ತ ಹರಿದಿದೆ.
ಸಾಮಾನ್ಯವಾಗಿ ಬೇಸಗೆಯಲ್ಲಿ ತಾರಸಿ ಮನೆಗಳಲ್ಲಿ ಸೆಕೆ ಹೆಚ್ಚು. ಅಲ್ಲದೆ ಪ್ರಸ್ತುತ ವಾತಾವರಣದ ಉಷ್ಣಾಂಶ ಹೆಚ್ಚಳವಾಗು ತ್ತಿದೆ. ಉಷ್ಣಾಂಶವನ್ನು ತಾರಸಿ ಮನೆಯಷ್ಟು ಒಳಗೆ ಬಿಡದೇ ಇರುವುದರಿಂದ ವಾತಾವರಣ ತಂಪಾಗಿರುತ್ತದೆ. ಅಲ್ಲದೆ ಸರಿಯಾದ ಯೋಜನೆ ಹಾಕಿಕೊಂಡರೆ ಎರಡು ಮಹಡಿವರೆಗೂ ಮನೆ ಕಟ್ಟಬಹುದಾಗಿದೆ. ಜಗಲಿ, ಅಂಗಳದಲ್ಲಿ ಮಣ್ಣಿನ ನೆಲವನ್ನೇ ಉಳಿಸಬಹುದು.