ಹೊನ್ನೂರಿನ ನಿಸರ್ಗ ಕೃಷಿ, ವಿದೇಶಿಯರಿಗೆ ಖುಷಿ; ಅಮೆರಿಕ, ದಕ್ಷಿಣ ಆಫ್ರಿಕಾದಿಂದ ಹೊನ್ನೂರಿಗೆ ಬಂದ ತಂಡ

CHN
Published on

‘ಬೇಸಾಯ ಎಂದರೆ ನಾ ಸಾಯ, ನೀ ಸಾಯ, ಮನೆ ಮಂದಿಯೆಲ್ಲ ಸಾಯ’ ಎನ್ನುವಂತಾಗಿರುವ ಈ ದಿನಗಳಲ್ಲಿ ಜಿಲ್ಲೆಯ ರೈತರ ತಂಡವೊಂದು ವಿದೇಶಿಗರೇ ತಮ್ಮತ್ತ ತಿರುಗಿ ನೋಡುವಂತೆ ಕೃಷಿಯಲ್ಲಿ ಯಶಸ್ಸಿನ ಮುನ್ನುಡಿ ಬರೆದಿದೆ.

ಅಮೆರಿಕ, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಇಟಲಿ ಸೇರಿ 20ಕ್ಕೂ ಹೆಚ್ಚು ದೇಶಗಳಿಂದ ಯಳಂದೂರು ತಾಲೂಕಿನ ಹೊನ್ನೂರಿಗೆ ಆಗಮಿಸಿದ್ದ ವಿದೇಶಿಗರು, ಗ್ರಾಮದಲ್ಲಿ ರೈತಸಂಘ ಮತ್ತು ಮೈಸೂರಿನ ನಿಸರ್ಗ

ಟ್ರಸ್ಟ್​ನ ಅಂಗ ಸಂಸ್ಥೆಯಾದ ನಿಸರ್ಗ ನೈಸರ್ಗಿಕ ಸಾವಯವ ಕೃಷಿಕರ ಸಂಘದ ಸದಸ್ಯರಿಂದ ನಡೆಯುತ್ತಿರುವ ಸಾಮೂಹಿಕ ಬೇಸಾಯ ಮತ್ತು ಮೌಲ್ಯವರ್ಧನೆಯನ್ನು ವೀಕ್ಷಿಸಿ ನಿಬ್ಬೆರಗಾಗಿದ್ದು, ಕೃಷಿ ಪಾಠವನ್ನೂ ಹೇಳಿಸಿಕೊಂಡಿದ್ದಾರೆ.

ಕೃಷಿ ವೈವಿಧ್ಯ: ಹೊನ್ನೂರಿಗೆ ಫೆ.1ರಂದು ಭೇಟಿ ನೀಡಿದ್ದ 10ಕ್ಕೂ ಹೆಚ್ಚು ವಿದೇಶಿ ಜನರ ತಂಡ, ನಿಸರ್ಗ ನೈಸರ್ಗಿಕ ಸಾವಯವ ಕೃಷಿಕರ ಸಂಘದ ಸದಸ್ಯರೊಂದಿಗೆ ಸಂವಾದ ನಡೆಸಿದೆ. ರೈತ ನಾಯಕಿ ಚುಕ್ಕಿ ನಂಜುಂಡಸ್ವಾಮಿ ಅವರು ಸಂವಹನಕಾರರಾಗಿ ಪ್ರತಿಯೊಂದು ವಿಚಾರವನ್ನು ಮನವರಿಕೆ ಮಾಡಿಕೊಟ್ಟಿದ್ದು ವಿಶೇಷ.

ಇಲ್ಲಿನ ರೈತರು ಸಾವಯವ ಕೃಷಿ ಪದ್ಧತಿ ಮೂಲಕ ಸಾಮೂಹಿಕವಾಗಿ ಬೆಳೆದಿರುವ 7 ಸೊಪ್ಪುಗಳು, 25 ರೀತಿಯ ತರಕಾರಿ ಬೆಳೆಗಳನ್ನು ವೀಕ್ಷಿಸಿ ವಿದೇಶಿಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮಾರುಕಟ್ಟೆ ಆಧಾರಿತ ಕೃಷಿಯಲ್ಲಿ ತೊಡಗಿರುವ ರೈತರು ಅನುಸರಿಸುತ್ತಿರುವ ಕ್ರಮಗಳು, ನಿಲುವುಗಳು, ಈ ಹಿಂದೆ ಹಳೆ ಪದ್ಧತಿಗೆ ಜೋತು ಬಿದ್ದು ಉಂಟಾದ ನಷ್ಟ, ಪ್ರಸ್ತುತ ಸಮಗ್ರ ಕೃಷಿ ನೀಡುತ್ತಿರುವ ಆರ್ಥಿಕ ಲಾಭವನ್ನು ಲೆಕ್ಕಾಚಾರ ಹಾಕಿದ್ದಾರೆ. ಭಾರತದ ವೈವಿಧ್ಯ ಕೃಷಿ ಪದ್ಧತಿಯ ಅಧ್ಯಯನದಲ್ಲಿ ತೊಡಗಿರುವ ವಿದೇಶಿಗರ ತಂಡ, ಕ್ಷೇತ್ರ ಭೇಟಿ ಮೂಲಕ ಇಲ್ಲಿನ ವ್ಯವಸಾಯ ಕ್ರಮಗಳ ಮಾಹಿತಿ ಕಲೆ ಹಾಕಿದೆ.

ನಿಬ್ಬೆರಗಾದ ವಿದೇಶಿಗರು: ಕೃಷಿ ಕೂಲಿಕಾರರ ಕೊರತೆ ಹಾಗೂ ವಲಸೆ ತಪ್ಪಿಸಲು ಒಗ್ಗೂಡಿ ದುಡಿಯಲು ನಿರ್ಧರಿಸಿದ ರೈತರು, ನಿಸರ್ಗ ಸಾವಯವ ಕೃಷಿಕರ ಸಂಘ ಸ್ಥಾಪಿಸಿ ಕಳೆದ ಏಳೆಂಟು ತಿಂಗಳಿಂದ 5 ಎಕರೆ ಭೂಮಿಯಲ್ಲಿ ವಿವಿಧ ಬೆಳೆ ಬೆಳೆದು ಮೌಲ್ಯವರ್ಧನೆ ಮಾಡಿ ಮಾರಾಟ ಮಾಡುತ್ತಿದ್ದಾರೆ.

ಸಂಘದಲ್ಲಿ 15 ಜನರಿದ್ದು, ಇವರಲ್ಲಿ 8 ಜನ ಮಹಿಳೆಯರು ಇರುವುದನ್ನು ಭೇಟಿ ವೇಳೆ ತಿಳಿದ ವಿದೇಶಿಗರು, ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಸಂಘದ ಸದಸ್ಯರೆಲ್ಲ ಹಸುಗಳನ್ನು ಸಾಕುವ ಮೂಲಕ ಹೈನುಗಾರಿಕೆಯಲ್ಲಿ ತೊಡಗಿರುವುದು ಗಮನ ಸೆಳೆದಿದೆ. ರೈತರು ಬೆಳೆದ ಬೆಳೆಗಳಿಂದ ತಯಾರಿಸಿದ ಚಿಪ್ಸ್, ಸಿರಿಧಾನ್ಯ ಪುಡಿ, ಸಾಂಬಾರು ಪುಡಿ, ಎಣ್ಣೆ, ರಾಗಿ ಮಾಲ್ಟ್ ಪದಾರ್ಥಗಳು ಮತ್ತು ಗೋಮೂತ್ರದಿಂದ ತಯಾರಿಸಿದ ಸೋಪು, ಶಾಂಪೂ ಬಗ್ಗೆ ವಿದೇಶಿಗರು ಆಸಕ್ತಿಯಿಂದ ತಿಳಿದುಕೊಂಡರು.

ಮಾರುಕಟ್ಟೆ ವ್ಯವಸ್ಥೆ ಬಗ್ಗೆ ಚರ್ಚೆ

ಕೃಷಿ ಕ್ಷೇತ್ರದಲ್ಲಿ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಸವಾಲಾಗಿ ಪರಿಣಿಸಿರುವ ಪ್ರಸ್ತುತ ದಿನಗಳಲ್ಲಿ ಇವರು ಬೆಳೆದ ಬೆಳೆಗಳಿಂದ ತಯಾರಿಸಿದ ಉತ್ಪನ್ನಗಳ ಮಾರಾಟವನ್ನು ಹೇಗೆ ಮಾಡಲಾಗುತ್ತಿದ್ದಾರೆ ಎನ್ನುವುದರ ಕುರಿತು ವಿದೇಶಿಗರ ತಂಡ ತಿಳಿದುಕೊಂಡಿದೆ. ನೈಸರ್ಗಿಕ ಸಾವಯವ ಕೃಷಿಕರ ಸಂಘವು ಉತ್ಪನ್ನಗಳನ್ನು ಮೈಸೂರಿನ ನಿಸರ್ಗ ಟ್ರಸ್ಟ್ ಮೂಲಕ ಮಾರಾಟ ಮಾಡುತ್ತಿದ್ದು, ಬೆಂಗಳೂರು, ಮಂಡ್ಯ ಮತ್ತಿತರೆಡೆಗಳಿಗೂ ಸರಬರಾಜು ಮಾಡುತ್ತಿದೆ. ವಾಟ್ಸ್​ಆಪ್ ಗ್ರೂಪ್ ಮಾಡಿ ಅದರ ಮೂಲಕವೂ ಉತ್ಪನ್ನಗಳ ಪ್ರಚಾರ ಮಾಡುವ ಕಾರ್ಯದಲ್ಲಿ ಸಂಘ ತೊಡಗಿರುವುದರ ಬಗ್ಗೆ ವಿದೇಶಿಗರು ಮಾಹಿತಿ ಪಡೆದಿದ್ದಾರೆ.

ಸಾವಯವ ಸಾಮೂಹಿಕ ಬೇಸಾಯವನ್ನು ವಿದೇಶಿಗರು ಕಂಡು ಸಂತಸಪಟ್ಟರು. ಬಾಳೆಕಾಯಿಯಿಂದ ತಯಾರಿಸಿದ ಚಿಪ್ಸ್ 25 ಕೆ.ಜಿ ಖರೀದಿಸಲು ಮುಂದಾದರು. ತಮ್ಮ ದೇಶಗಳಿಗೂ ಉತ್ಪನ್ನಗಳನ್ನು ರಫ್ತು ಮಾಡುವುದಾದರೆ ಮುಂದಿನ ದಿನಗಳಲ್ಲಿ ಸಂರ್ಪಸುವುದಾಗಿ ಭರವಸೆ ನೀಡಿದರು. ಕೆಲವು ದೇಸಿ ತಳಿ ತರಕಾರಿ ಬೀಜಗಳನ್ನು ಕೇಳಿ ಪಡೆದುಕೊಂಡರು. ಎಲ್ಲ ವರ್ಗದ ಜನರೂ ಒಗ್ಗೂಡಿ ಕೃಷಿಯಲ್ಲಿ ತೊಡಗಿರುವುದು ಮತ್ತು ನಮ್ಮ ಬೇಸಾಯ ಕ್ರಮ ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. | ಹೊನ್ನೂರು ಪ್ರಕಾಶ್ ಅಧ್ಯಕ್ಷ, ನಿಸರ್ಗ ನೈಸರ್ಗಿಕ ಸಾವಯವ ಕೃಷಿಕರ ಸಂಘ, ಯಳಂದೂರು

| ಕಿರಣ್ ಮಾದರಹಳ್ಳಿ ಚಾಮರಾಜನಗರ 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net