

ಜೇನುತುಪ್ಪ ಸವಿಯಲು ಬಲುರುಚಿ. ಆದರೆ ಅದೇ ಜೇನು ಒಮ್ಮೆ ಕಚ್ಚಿತೆಂದರೆ ಹರಹರ ಎನ್ನುವ ಸ್ಥಿತಿ. ಇನ್ನೇನಾದರೂ ಮನೆಯ ಬಳಿ ಜೇನುಹುಗಳು ಗೂಡು ಕಟ್ಟಿತ್ತೆಂದರೆ ಯಾವತ್ತಿಗೂ ಅದು ಡೇಂಜರೇ.
ನೀರಿನ ಟ್ಯಾಂಕ್ನಲ್ಲಿ ನೀರು ಸೋರುತ್ತಿದ್ದರೆ ಅಥವಾ ತೆರೆದಿರುವ ಕಾರಂಜಿ, ಜೇನನ್ನು ಆಕರ್ಷಿಸುವ ಹೂವು, ಹಣ್ಣು, ತರಕಾರಿ ಇವುಗಳ ಮನೆಯ ಸುತ್ತ ಇದ್ದರೂ ಹೆಚ್ಚಾಗಿ ಅವುಗಳಿಂದ ಆಕರ್ಷಿತವಾಗಿ ಜೇನುಗಳು ಒಂದೊಂದಾಗಿ ಬಂದು ಅಲ್ಲಿಯೇ ಗೂಡು ಕಟ್ಟಿಕೊಳ್ಳುವುದು ಸಾಮಾನ್ಯ. ಒಂದೇ ಒಂದು ಹುಳು ನಿಮ್ಮ ಮನೆಯ ಬಳಿ ಹಾರಾಡುತ್ತಿದೆ ಎಂದರೆ ಅಲ್ಲಿ ಹತ್ತಿರದಲ್ಲಿಯೇ ಎಲ್ಲಿಯೋ ಗೂಡು ಇದೆ ಎಂದೇ ಅರ್ಥ. ಹಾಗೆಂದು ಬೆಂಕಿ ಹಾಕಿ ಗೂಡನ್ನು ಸುಡುವಂಥ ಹೇಯ ಕೃತ್ಯಕ್ಕೆ ಕೈ ಹಾಕುವುದು ಸರಿಯಲ್ಲ.
ಜೇನುಹುಳುಗಳನ್ನು ಓಡಿಸಲು ಅತಿ ಸುಲಭದ ಉಪಾಯ ಎಂದರೆ ಜೇನುತುಪ್ಪವನ್ನು ಸಂಗ್ರಹಿಸುವಾಗ ಮಾಡುವ ವಿಧಾನ ಬಳಸುವುದು. ಅದೆಂದರೆ ಗೂಡಿಗೆ ಧೂಪ ಹಾಕುವುದು. ಜೇನುಹುಳುಗಳೆಲ್ಲಾ ಹೋದ ಮೇಲೆ ಗೂಡನ್ನು ತೆಗೆದರೆ ಅದು ಪುನಃ ಬರುವುದಿಲ್ಲ. ಒಂದು ವೇಳೆ ಗೂಡು ಅಲ್ಲಿಯೇ ಇದ್ದರೆ ಅವು ಪುನಃ ಗೂಡಿಗೆ ಮರಳುತ್ತವೆ.
ಆದ್ದರಿಂದ ಜೇನುಹುಳುಗಳೆಲ್ಲಾ ಖಾಲಿಯಾಗಿದೆ ಎಂಬುದನ್ನು ಖಾತರಿ ಪಡಿಸಿಕೊಂಡು ಗೂಡನ್ನು ಅಲ್ಲಿಂದ ತೆಗೆಯಿರಿ. ಹಾಗೆನೇ, ಜೇನುನೊಣ ಕಚ್ಚದ ರೀತಿಯಲ್ಲಿ ಸರಿಯಾದ ಉಡುಪು ಧರಿಸುವುದು ಅತಿಮುಖ್ಯ. ಅಂದರೆ ದಪ್ಪನೇ ಬಟ್ಟೆ, ಕೈಗಳಿಗೆ ಕೈಕವಚ, ಹೆಲ್ಮೆಟ್, ಮುಖದ ರಕ್ಷಣೆಗೆ ಬಟ್ಟೆ ಇವೆಲ್ಲವೂ ಇರಲಿ.
ಧೂಪ ಇಲ್ಲ ಎಂದಾದಲ್ಲಿ ಹೊಗೆಯನ್ನೂ ಹಾಕುವ ಮೂಲಕ ಜೇನುಗಳನ್ನು ಓಡಿಸಬಹುದು. ಹೀಗೆ ಏನೇ ಉಪಾಯ ಮಾಡುವುದಿದ್ದರೂ ನಿಮಗೆ ಜೇನಿನ ಸವಿ ನೀಡುವ ಆ ಜೀವಿಯ ಪ್ರಾಣಕ್ಕೆ ಹಾನಿಯಾಗದಂತೆ ನೋಡಿಕೊಳ್ಳಿ. ಹೆಚ್ಚಾಗಿ ಜೇನುನೋಣಗಳು ಬೆಳಗ್ಗೆ ಹಾಗೂ ಸಂಜೆ ಗೂಡಿನಲ್ಲಿಯೇ ಇರುತ್ತವೆ. ಆ ಸಮಯದಲ್ಲಿ ಈ ಉಪಾಯ ಮಾಡಿ ಅವುಗಳನ್ನು ಓಡಿಸಬಹುದು.
ಆದರೆ ಸುತ್ತಲೂ ಜನರು ಇಲ್ಲ ಎಂಬುದನ್ನು ಮೊದಲು ಖಾತ್ರಿ ಪಡಿಸಿಕೊಳ್ಳಿ. ಓಡಿಹೋಗುವ ಭರದಲ್ಲಿ ಜೇನುಗಳು ಜನರನ್ನು ಕಚ್ಚುವ ಸಾಧ್ಯತೆ ಇರುತ್ತದೆ. ಆದ್ದರಿಂದ ರಾತ್ರಿಯ ವೇಳೆ ಈ ಕೆಲಸ ಮಾಡಿದರೆ ಒಳ್ಳೆಯದು. ಕೆಲವರು ಗೂಡಿಗೆ ಸೋಪಿನ ನೀರು ಚಿಮುಕಿಸಿ ಕೂಡ ನೊಣಗಳನ್ನು ಓಡಿಸುತ್ತಾರೆ.
ಆದರೆ ಇದರಿಂದ ಸಂಪೂರ್ಣ ಜೇನುನೊಣಗಳು ಓಡಿಹೋಗುತ್ತವೆ ಎಂದು ಹೇಳಲಾಗದು. ಇವುಗಳನ್ನೆಲ್ಲಾ ಮಾಡುವುದು ನಿಮಗೆ ಕಷ್ಟ ಎನ್ನಿಸಿದ್ದೇ ಆದಲ್ಲಿ ಊರಿನಲ್ಲಿ ಯಾವುದಾದರೂ ಜೇನುಸಾಕಾಣಿಕಾ ಕೇಂದ್ರ ಇದ್ದರೆ ಅಥವಾ ವೃತ್ತಿಪರರು ಇದ್ದರೆ ಸಂರ್ಪಸಿ. ಅವರು ಜೇನುಗೂಡನ್ನು ಸ್ಥಳಾಂತರ ಮಾಡಲು ಸಹಾಯ ಮಾಡುವರು.