ಆ ಕ್ಷಣ: ಕೊಲೆಗೆ ಪ್ರೇರಣೆಯಾದ ಸಲಿಂಗಕಾಮ

edit 3
Published on

2018ರ ಮಾರ್ಚ್ 9ರಂದು 16 ವರ್ಷದ ಸೋನಿ ಎಂದಿನಂತೆ ಸಂಜೆಯ ಟ್ಯೂಷನ್ ಮುಗಿಸಿ ತನ್ನ ಮನೆಯ ಕರೆಗಂಟೆ ಒತ್ತಿದಾಗ ಪ್ರತಿಕ್ರಿಯೆ ಬರಲಿಲ್ಲ. ಆ ಸಮಯದಲ್ಲಿ ಮನೆಯಲ್ಲಿರಬೇಕಾಗಿದ್ದ ಅಮ್ಮ ಪುಷ್ಪಾ ಹಾಗೂ ಅಕ್ಕ ರಶ್ಮಿ ಎಲ್ಲಿಗೆ ಹೋಗಿರಬಹುದೆಂದು ಯೋಚಿಸುತ್ತಾ ಮನೆಯ ಮುಂಬಾಗಿಲನ್ನು ನೂಕಿದಳು. ಅದು ಸುಲಭವಾಗಿ ತೆರೆದುಕೊಂಡಿತು. ಸೋನಿ ಮನೆಯ ಒಳಗೆ ಹೋದಾಗ ಪುಷ್ಪಾ ಅಡುಗೆ ಮನೆಯ ಬಾಗಿಲ ಮುಂದೆ ಬಿದ್ದಿದ್ದು ಆಕೆಯ ತಲೆಯಿಂದ ರಕ್ತ ಹರಿಯುತ್ತಿತ್ತು. ಆಕೆ ಮೂರ್ಚೆ ಹೋಗಿದ್ದು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಸೋನಿ ಕೂಡಲೇ ಅಮ್ಮನ ತಲೆಗೆ ಬಟ್ಟೆ ಕಟ್ಟಿ ಹತ್ತಿರದ ಆಸ್ಪತ್ರೆಗೆ ಫೋನ್ ಮಾಡಿ ಆಂಬುಲೆನ್ಸ್ ಕಳಿಸಲು ಕೋರಿದಳು. ರಶ್ಮಿ ಮನೆಯೊಳಗೆ ಕಾಣಲಿಲ್ಲ. ಅದೇ ಊರಿನಲ್ಲಿ ಟ್ರಾನ್ಸ್​ಪೋರ್ಟ್ ವ್ಯವಹಾರ ಮಾಡುತ್ತಿದ್ದ ತಂದೆ ಸತೀಶ್​ಕುಮಾರ್​ಗೆ ಫೋನ್ ಮಾಡಿದಳು. ಅಪ್ಪನ ಸೂಚನೆಯಂತೆ ಆಕೆ ಪೊಲೀಸ್ ಕಂಟ್ರೋಲ್ ರೂಮಿಗೂ ಫೋನ್ ಮಾಡಿದಳು. ಅರ್ಧ ಗಂಟೆಯೊಳಗೆ ಆಂಬುಲೆನ್ಸ್ ಬಂದಿತು. ಪೊಲೀಸರೂ ಬಂದರು.

ಪೊಲೀಸರು ಸ್ಥಳದ ಮಹಜರನ್ನು ಮಾಡಿದಾಗ ಪುಷ್ಪಾ ಬಿದ್ದಿದ್ದ ಜಾಗದಲ್ಲಿ ರಕ್ತಸಿಕ್ತ ಕಬ್ಬಿಣದ ಹಾರೆ ಕಂಡಿತು. ಮನೆಯೊಳಗಿದ್ದ ಯಾವುದೇ ಬೆಲೆಬಾಳುವ ವಸ್ತುಗಳು ಕಳುವಾಗಿಲ್ಲ ಎಂದು ಸತೀಶ್ ಹೇಳಿದ. ಅಡುಗೆಮನೆ ಮತ್ತಿತರ ಜಾಗಗಳಲ್ಲಿ ಬೆರಳಚ್ಚು ಗುರುತುಗಳನ್ನು ಸಂಗ್ರಹಿಸಲಾಯಿತು. ಪುಷ್ಪಾಳಿಗೆ ಯಾರು ಏಕೆ ಹಲ್ಲೆ ಮಾಡಿದರು ಎಂದು ತಿಳಿಯಬೇಕಾದರೆ ಪುಷ್ಪಾ ಇಲ್ಲವೇ ರಶ್ಮಿ ಹೇಳಿಕೆ ನೀಡಬೇಕಾಗಿತ್ತು. ಪುಷ್ಪಾ ಇನ್ನೂ ಪ್ರಜ್ಞಾಹೀನಳಾಗಿದ್ದಳು ಮತ್ತು ರಶ್ಮಿ ನಾಪತ್ತೆಯಾದ್ದಳು. ಆಕೆಯ ಬಳಿ ಸೆಲ್ ಫೋನ್ ಇರದ್ದರಿಂದ ಅವಳು ಎಲ್ಲಿದ್ದಾಳೆ ಎನ್ನುವುದು ತಿಳಿಯಲಿಲ್ಲ.

ಕಳ್ಳತನ ಮಾಡಲು ಬಂದ ದುರುಳರು ತಮ್ಮ ಯತ್ನವು ವಿಫಲಗೊಂಡಾಗ ಪುಷ್ಪಾಳ ಮೇಲೆ ಹಲ್ಲೆಮಾಡಿ ಪರಾರಿಯಾಗಿದ್ದಾರೆ ಎಂದು ಅನುಮಾನಗೊಂಡ ಪೊಲೀಸರು ಮನೆ ಕಳ್ಳತನದ ಪ್ರಯತ್ನ ಮತ್ತು ಹಲ್ಲೆಯ ಪ್ರಕರಣ ದಾಖಲಿಸಿದರು.

ಪುಷ್ಪಾ ಎರಡು ದಿನ ಆಸ್ಪತ್ರೆಯಲ್ಲಿದ್ದರೂ ಪ್ರಜ್ಞೆ ಬರಲಿಲ್ಲ. ಮಾರ್ಚ್ 11 ರಂದು ಆಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಳು. ದಾಖಲಾಗಿದ್ದ ಪ್ರಕರಣಕ್ಕೆ ಕೊಲೆ ಆರೋಪವೂ ಸೇರಿತು. ಪೊಲೀಸರು ‘ಈ ಪ್ರಕರಣದಲ್ಲಿ ಮುಖ್ಯ ಸಾಕ್ಷಿಯೇ ನಿನ್ನ ಮೊದಲ ಮಗಳು ರಶ್ಮಿ. ಅವಳೆಲ್ಲಿದ್ದಾಳೆ’ ಎಂದು ಸತೀಶನನ್ನು ಪ್ರಶ್ನಿಸಿದಾಗ ‘ಅವಳು ಇನ್ನೂ ಮನೆಗೆ ವಾಪಸಾಗಿಲ್ಲ, ಅವಳೆಲ್ಲಿದ್ದಾಳೆ ಎನ್ನುವುದು ತಿಳಿದಿಲ್ಲ’ ಎಂದ. ‘ಬೆಳೆದ ಮಗಳು ಮನೆಯಿಂದ ಕಾಣೆಯಾಗಿರುವ ಬಗ್ಗೆ ನಿನ್ನ ಮುಖದಲ್ಲಿ ಗಾಬರಿಯೇ ಕಾಣುತ್ತಿಲ್ಲ ಮತ್ತು ಅವಳನ್ನು ಹುಡುಕಲು ನೀನೇಕೆ ಪ್ರಯತ್ನಿಸುತ್ತಿಲ್ಲ, ಠಾಣೆಯಲ್ಲಿ ದೂರನ್ನು ಏಕೆ ನೀಡಿಲ್ಲ? ಎಂದು ತನಿಖಾಧಿಕಾರಿ ಪ್ರಶ್ನಿಸಿದಾಗ, ಸತೀಶ್ ಹೀಗೆ ಹೇಳಿದ:

‘ನನಗೆ ಪುಷ್ಪಾ ಜತೆಗೆ ಮದುವೆಯಾಗಿ 20 ವರ್ಷಗಳಾಗಿವೆ. ನಮ್ಮ ಇಬ್ಬರೂ ಹೆಣ್ಣು ಮಕ್ಕಳು ಹೈಸ್ಕೂಲಿಗೆ ಬರುವವರೆಗೆ ಚೆನ್ನಾಗಿಯೇ ಕಲಿಯುತ್ತಿದ್ದರು. ರಶ್ಮಿ ಒಂಬತ್ತನೆಯ ತರಗತಿಗೆ ಬಂದಾಗ, ಅವಳ ನಡೆನುಡಿಯಲ್ಲಿ ಹಲವಾರು ಬದಲಾವಣೆಗಳನ್ನು ಗಮನಿಸಿದೆವು. ಹೆಣ್ಣುಮಕ್ಕಳು ಹದಿಹರೆಯಕ್ಕೆ ಬಂದಾಗ ಹೀಗಾಗುವುದು ಸಹಜ ಎಂದು ಸುಮ್ಮನಿದ್ದೆವು. ಆಕೆ ಹತ್ತನೆಯ ತರಗತಿಗೆ ಬಂದಾಗ ಅವಳಿಗೆ ಆಟಪಾಠಗಳಲ್ಲಿ ಯಾವುದೇ ಆಸಕ್ತಿಯಿರದಿದುದ್ದನ್ನು ಕಂಡೆವು. ರಶ್ಮಿ ಸದಾಕಾಲವೂ ತನ್ನ ಮೊಬೈಲ್ ಫೋನ್​ನಲ್ಲಿ ಅಶ್ಲೀಲ ಚಿತ್ರಗಳನ್ನು ನೋಡುತ್ತಿದ್ದದ್ದನ್ನು ಪುಷ್ಪಾ ಗಮನಿಸಿ ಫೋನನ್ನು ಕಸಿದುಕೊಂಡಳು. ಒಂದು ದಿನ ರಶ್ಮಿಯ ಶಾಲೆಯ ಪ್ರಿನ್ಸಿಪಾಲರು ನಮ್ಮನ್ನು ಕರೆಸಿ ‘ಆಕೆಯ ನಡತೆ ಸರಿಯಾಗಿಲ್ಲ, ಇತರ ವಿದ್ಯಾರ್ಥಿನಿಯರ ಜತೆ ಅಶ್ಲೀಲವಾಗಿ ಮಾತನಾಡುತ್ತಾಳೆ, ತರಗತಿಗಳನ್ನು ತಪ್ಪಿಸುತ್ತಾಳೆ’ ಎಂದು ದೂರಿದರು.

ನಾವು ರಶ್ಮಿಗೆ ಬುದ್ಧಿ ಹೇಳಿದೆವು. ಅದೇ ಶಾಲೆಗೆ ಹೋಗುತ್ತಿದ್ದ ಸೋನಿ, ‘ಅಕ್ಕ ಸದಾಕಾಲವೂ ತನ್ನ ಕ್ಲಾಸ್ ಟೀಚರ್ ನಿಶಾ ಜತೆಗೆ ಇರುತ್ತಾಳೆ, ಶಾಲೆ ಮುಗಿದ ನಂತರ ಆಕೆ ಟೀಚರ್ ಜೊತೆಗೆ ಎಲ್ಲಿಗೋ ಹೋಗಿ ಆನಂತರ ಒಬ್ಬಳೇ ಮನೆಗೆ ಬರುತ್ತಾಳೆ’ ಎಂದುಹೇಳಿದಳು. ಪುಷ್ಪಾ ಒಂದು ದಿನ ಶಾಲೆಯಿಂದ ರಶ್ಮಿಯನ್ನು ಹಿಂಬಾಲಿಸಿದಳು. ನಿಶಾ ರಶ್ಮಿಯನ್ನು ತನ್ನ ಮನೆಯ ಒಳಗೆ ಕರೆದುಕೊಂಡು ಹೋದ ನಂತರ ಪುಷ್ಪಾ ಕಿಟಕಿಯಿಂದ ಇಣುಕಿ ನೋಡಿದಳು. ಅವರಿಬ್ಬರೂ ಸೋಫಾದ ಮೇಲೆ ಕುಳಿತು ಒಬ್ಬರನ್ನೊಬ್ಬರು ಚುಂಬಿಸುತ್ತಿದ್ದುದನ್ನು ಕಂಡು ಕೋಪ ತಾಳಲಾರದೆ ನಿಶಾಳ ಮನೆಯ ಬಾಗಿಲನ್ನು ಬಡಿದಳು. ನಿಶಾ ಬಾಗಿಲು ತೆಗೆದಾಗ ಒಳನುಗ್ಗಿದ ಪುಷ್ಪಾ ಇಬ್ಬರನ್ನೂ ತರಾಟೆಗೆ ತೆಗೆದುಕೊಂಡಳು. ರಶ್ಮಿ ಎಳ್ಳಷ್ಟೂ ಹೆದರದೆ ತಾನು ನಿಶಾಳನ್ನು ಪ್ರೀತಿಸುತ್ತಿದ್ದು ಅವಳನ್ನು ಮದುವೆಯಾಗುವುದಾಗಿಯೂ ಹೇಳಿದಾಗ ಮಗಳ ಕೆನ್ನೆಗೆ ಒಂದೇಟು ಬಾರಿಸಿದ ಪುಷ್ಪಾ ನಿಶಾಳಿಗೆ ಎಚ್ಚರಿಕೆ ನೀಡಿ ರಶ್ಮಿಯನ್ನು ಮನೆಗೆ ಕರೆದುಕೊಂಡು ಬಂದಳು.

‘ಇಂತಹ ಸಂಬಂಧಕ್ಕೆ ನಮ್ಮ ಸಮಾಜ ಒಪ್ಪುವುದಿಲ್ಲ’ ಎಂದು ರಶ್ಮಿಗೆ ತಿಳಿಹೇಳಿದಾಗ ತಾನು ಸಮಾಜಕ್ಕೆ ಹೆದರುವುದಿಲ್ಲ ಎಂದು ಆಕೆ ಉತ್ತರಿಸಿ ಮಾರನೆಯ ದಿನವೇ ಮನೆಬಿಟ್ಟು ಓಡಿಹೋದಳು. ನಾವು ದೂರು ನೀಡಿದಾಗ ಪೊಲೀಸರು ಅವಳನ್ನು ನಿಶಾಳ ಮನೆಯಲ್ಲಿ ಪತ್ತೆ ಮಾಡಿ ಇಬ್ಬರನ್ನೂ ಠಾಣೆಗೆ ಕರೆದುಕೊಂಡು ಬಂದರು. ನಿಶಾಗೆ ಮಧುಕರ್ ಎನ್ನುವವನ ಜೊತೆಗೆ ಹತ್ತು ವರ್ಷಗಳ ಹಿಂದೆಯೇ ಲಗ್ನವಾಗಿತ್ತು. ಆದರೆ ಆಕೆ ಸಲಿಂಗಕಾಮಿಯಾಗಿದ್ದ ಕಾರಣ ಮಧುಕರ್ ಅವಳಿಗೆ ವಿಚ್ಛೇದನ ನೀಡಿದ್ದ. ನಂತರ ಆಕೆ ರಶ್ಮಿಯ ಶಾಲೆಗೆ ಶಿಕ್ಷಕಿಯಾಗಿ ಸೇರಿ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದಳು. ಆಕೆ ರಶ್ಮಿಯನ್ನು ತನ್ನ ಲೈಂಗಿಕ ಜೋಡಿಯಾಗಿ ಮಾಡಿಕೊಂಡಿದ್ದಳು.

ಆಗ ರಶ್ಮಿಗೆ ಕೇವಲ 16 ವರ್ಷಗಳಾಗಿದ್ದ ಕಾರಣ ಪೋಕ್ಸೋ ಕಾಯಿದೆಯ ಅಡಿಯಲ್ಲಿ ನಿಶಾಳ ಮೇಲೆ ಪ್ರಕರಣ ದಾಖಲಿಸೋಣವೆಂದು ಪೊಲೀಸರು ಸೂಚಿಸಿದರು. ನಾವೇ ಕುಟುಂಬದ ಮರ್ಯಾದೆಗೆ ಹೆದರಿ ಬೇಡವೆಂದೆವು. ನಿಶಾ ಇನ್ನು ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟ ನಂತರ ಪೊಲೀಸರು ಪ್ರಕರಣವನ್ನು ಅಲ್ಲಿಗೇ ಮುಕ್ತಾಯ ಮಾಡಿದರು. ನಂತರ ರಶ್ಮಿಯನ್ನು ಆ ಶಾಲೆಯಿಂದ ಬಿಡಿಸಿ ಬೇರೆ ಬಡಾವಣೆಯಲ್ಲಿ ವಾಸಿಸತೊಡಗಿದೆವು.

ಈ ಕಾರಣಕ್ಕಾಗಿ ರಶ್ಮಿ ಪುಷ್ಪಾಳ ಮೇಲೆ ಸಿಟ್ಟಿಗೆದ್ದು ಮನೆಯಲ್ಲಿ ಪ್ರತಿದಿನವೂ ಅವಳೊಡನೆ ಜಗಳವಾಡುತ್ತಿದ್ದಳು. ಅವಳನ್ನು ಬೇರೊಂದು ಶಾಲೆಗೆ ಸೇರಿಸಲು ನಾವು ಧೈರ್ಯ ಮಾಡಲಿಲ್ಲ. ಅವಳಿಗೆ 18 ವರ್ಷ ವಯಸ್ಸಾದ ಕೂಡಲೇ ಮದುವೆ ಮಾಡಿ ಮನೆಯಿಂದ ಸಾಗಹಾಕಬೇಕೆಂದು ತೀರ್ವನಿಸಿ ಸೂಕ್ತ ವರನನ್ನು ಹುಡುಕುತ್ತಿದ್ದೆವು. ಅಷ್ಟರಲ್ಲಿ ಹೀಗಾಯಿತು. ಪುಷ್ಪಾಳ ಮೇಲೆ ಯಾರು ಹಲ್ಲೆ ಮಾಡಿ ಕೊಂದರೆಂದು ನನಗೆ ತಿಳಿದಿಲ್ಲ. ಆದರೆ ಹಲ್ಲೆ ನಡೆದ ದಿನದಿಂದ ರಶ್ಮಿ ಮನೆ ಬಿಟ್ಟು ಓಡಿಹೋಗಿರುವ ಕಾರಣ ಅವಳ ಬಗ್ಗೆ ಸಂಶಯಪಡಲೇಬೇಕಾಗಿದೆ. ರಶ್ಮಿ ಮತ್ತು ನಿಶಾಳನ್ನು ಹುಡುಕಿದರೆ ಈ ಪ್ರಕರಣ ಪತ್ತೆಯಾಗಬಹುದೇನೋ.’

ಪೊಲೀಸರು ನಿಶಾಳ ಮನೆಗೆೆ ಹೋದಾಗ ಬೀಗ ಹಾಕಿತ್ತು. ಆಕೆ ಮನೆ ಖಾಲಿ ಮಾಡಿ ಬೇರೆ ಊರಿಗೆ ಹೋಗಿರುವುದಾಗಿ ತಿಳಿಯಿತು. ನಿಶಾ ತನ್ನ ಮೊಬೈಲ್ ಫೋನನ್ನು ಬದಲಾಯಿಸಿದ್ದಳು. ರಶ್ಮಿ ಬಳಿ ಫೋನ್ ಇರಲಿಲ್ಲ. ಹೀಗಾಗಿ ಪೊಲೀಸ್ ತಂಡಗಳನ್ನು ನಿಶಾ ಹೋಗಿರಬಹುದಾಗಿದ್ದ ಊರುಗಳಿಗೆ ರವಾನಿಸಲಾಯಿತು. ಅವರ ಚಿತ್ರಗಳನ್ನು ಇತರ ಠಾಣೆಗಳಿಗೆ ಕಳಿಸಲಾಯಿತು. ಒಂದೂವರೆ ತಿಂಗಳ ಕಾಲ ಅವರಿಬ್ಬರೂ ಪತ್ತೆಯಾಗಲಿಲ್ಲ. ಒಂದು ದಿನ ರೈಲ್ವೆ ನಿಲ್ದಾಣವೊಂದರಲ್ಲಿ ಅವರನ್ನು ಕಂಡ ಒಬ್ಬ ರೈಲ್ವೆ ಪೊಲೀಸ್ ಕಾನ್​ಸ್ಟೆಬಲ್ ಅವರಿಬ್ಬರನ್ನೂ ಹಿಡಿದ. ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ವಿಚಾರಿಸಿದಾಗ, ರಶ್ಮಿ ಈ ರೀತಿ ಹೇಳಿದಳು: ‘ನಾನು ನನ್ನ ಟೀಚರ್ ನಿಶಾಳೊಂದಿಗೆ ಸಲಿಂಗಕಾಮದ ಸಂಬಂಧ ಹೊಂದಿದ್ದು ನಿಜ. ನಾವಿಬ್ಬರೂ ಮದುವೆಯಾಗಿ ಬೇರೊಂದು ಊರಿಗೆ ಹೋಗಿ ಜೀವಿಸಬೇಕು ಎಂದು ತೀರ್ವನಿಸಿದ್ದೆವು. ನಮ್ಮ ಮನೆಯಲ್ಲಿ ಈ ಸಂಬಂಧಕ್ಕೆ ತೀವ್ರ ವಿರೋಧವಿತ್ತು. ನನ್ನ ತಾಯಿಯಂತೂ ಪ್ರತಿನಿತ್ಯ ಕಿರುಕುಳ ಕೊಡುತ್ತಿದ್ದಳು. ನನ್ನ ಮದುವೆಗಾಗಿ ಆಕೆ ಪ್ರಯತ್ನ ನಡೆಸಿದ್ದಳು. ಘಟನೆಯಾದ ದಿನ ಯಾವುದೋ ಕಾರಣದಿಂದ ನಿಶಾ ನನ್ನನ್ನು ಹುಡುಕಿಕೊಂಡು ನಮ್ಮ ಮನೆಗೆ ಬಂದಳು. ನಾನು ಅವಳನ್ನು ಮನೆಯೊಳಗೆ ಕರೆದು ಮಾತನಾಡುತ್ತಿರುವಾಗ ಅಲ್ಲಿಗೆ ಬಂದ ನನ್ನ ತಾಯಿ ಇದ್ದಕ್ಕಿದ್ದಂತೆ ಕೋಪಗೊಂಡು ನಿಶಾಳಿಗೆ ಬೈಯ್ದು ‘ನೀನು ಕೆಟ್ಟದಾರಿ ಹಿಡಿದಿದ್ದಲ್ಲದೇ ನನ್ನ ಮಗಳನ್ನೂ ಹಾಳು ಮಾಡುತ್ತಿರುವೆ. ಪೊಲೀಸ್ ಠಾಣೆಯಲ್ಲಿ ಮುಚ್ಚಳಿಕೆ ಬರೆದುಕೊಟ್ಟರೂ ನಮ್ಮ ಮನೆಗೇಕೆ ಬಂದೆ? ಕೂಡಲೇ ಇಲ್ಲಿಂದ ಹೋಗದಿದ್ದರೆ ಪೊಲೀಸರಿಗೆ ತಿಳಿಸುತ್ತೇನೆ’ ಎಂದಳು. ಇದರಿಂದ ವಿಪರೀತ ಕೋಪಗೊಂಡ ನಾನು ಅಡುಗೆ ಮನೆಯಲ್ಲಿದ್ದ ಹಾರೆಯನ್ನು ತಂದು ತಾಯಿಯ ತಲೆಗೆ ಹೊಡೆದೆ. ಆಕೆ ಮೂರ್ಚೆ ಹೋದಳು. ನನ್ನ ಬಟ್ಟೆಬರೆಗಳನ್ನು ಪ್ಯಾಕ್ ಮಾಡಿಕೊಂಡು ನಿಶಾಳ ಜತೆ ಪರಾರಿಯಾದೆ. ತಾಯಿಯನ್ನು ಕೊಲೆ ಮಾಡಬೇಕೆಂಬ ಉದ್ದೇಶ ನನಗಿರಲಿಲ್ಲ.’

ರಶ್ಮಿಯ ಮೇಲೆ ಕೊಲೆಯ ಆರೋಪವನ್ನೂ ನಿಶಾಳ ಮೇಲೆ ಕೊಲೆಗೆ ಕುಮ್ಮಕ್ಕು ನೀಡಿದ ಆರೋಪವನ್ನೂ ಹೊರಿಸಲಾಯಿತು. ರಶ್ಮಿಗೆ ಮೂರು ವರ್ಷಗಳ ಜೈಲುವಾಸವನ್ನು ನೀಡಿ ನಿಶಾಳನ್ನು ಬಿಡುಗಡೆಗೊಳಿಸಲಾಯಿತು.

‘ಬಹುಮಾನವನ್ನು ಪಡೆಯಲು ಅಪರಾಧವು ಮುಗ್ಧತೆಯನ್ನು ಕೊಚ್ಚಿಹಾಕುತ್ತದೆ’ ಎಂದ ಫ್ರೆಂಚ್ ಕ್ರಾಂತಿಕಾರ ರಾಬಸ್​ಪಿಯರೆನ ಮಾತುಗಳನ್ನು ರಶ್ಮಿ ಪುಷ್ಟೀಕರಿಸಿದಳು.

(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net