ಕನಸಿನ ಮನೆ ಕಸಿಯದಿರಲಿ ನೆಮ್ಮದಿ

Home 1
Published on

| ಜಗನ್ ರಮೇಶ್

ಕಷ್ಟಪಟ್ಟು ದುಡಿದ ಹಣದಿಂದ ಫ್ಲ್ಯಾಟ್ ಖರೀದಿಸಲು ಮುಂದಾಗಿದ್ದ ವ್ಯಕ್ತಿಯೊಬ್ಬರು, ಅದಕ್ಕಾಗಿ ಬಿಲ್ಡರ್​ಗೆ ಶೇ.60 ಹಣವನ್ನೂ ಪಾವತಿಸಿದ್ದರು. ಇನ್ನೇನು ಕಾಮಗಾರಿ ಪೂರ್ಣಗೊಳ್ಳಬೇಕು ಎನ್ನುವಷ್ಟರಲ್ಲೇ ಅಪಾರ್ಟ್​ವೆುಂಟ್ ನಿರ್ಮಾಣ ಮಾಡಲಾಗಿದ್ದ ಜಮೀನಿನ ವ್ಯಾಜ್ಯ ಕೋರ್ಟ್ ಮೆಟ್ಟಿಲೇರಿತ್ತು. ಕನಸಿನ ಮನೆ ಆ ವ್ಯಕ್ತಿಯ ನೆಮ್ಮದಿಯನ್ನೇ ಕಸಿದಿತ್ತು!.

ನಗರದ ಐಟಿ ಉದ್ಯೋಗಿಯೊಬ್ಬರು ಎಲ್ಲ ದಾಖಲೆಗಳನ್ನೂ ಪರಿಶೀಲಿಸಿ ನಿವೇಶನ ಖರೀದಿಸಿದ್ದರು. ಬ್ಯಾಂಕ್​ನಿಂದ ಸಾಲ ಪಡೆದು ಮನೆ ಕಟ್ಟಲು ಪಾಯ ಹಾಕಿಸುತ್ತಿದ್ದಂತೆ ವ್ಯಕ್ತಿಯೊಬ್ಬ ಪ್ರತ್ಯಕ್ಷನಾಗಿದ್ದ. ಯಾವುದೋ ಹಳೆ ದಾಖಲೆಗಳನ್ನು ತೋರಿಸಿ, ಇದು ನನ್ನ ತಾತನಿಗೆ ಸೇರಿದ ಸ್ವತ್ತು. ನಮಗೆ ತಿಳಿಯದಂತೆ ದೊಡ್ಡಪ್ಪ ಮಾರಾಟ ಮಾಡಿದ್ದಾರೆ. ಇದರಲ್ಲಿ ನಮಗೂ ಪಾಲಿದೆ ಎಂದು ಹಕ್ಕು ಸಾಧಿಸಲು ಮುಂದಾಗಿದ್ದ. ಸಾಲ ಮಾಡಿ ಮನೆ ಕಟ್ಟಲು ಹೊರಟಿದ್ದ ವ್ಯಕ್ತಿಗೆ ಆಕಾಶವೇ ಕಳಚಿ ಬಿದ್ದಂತಾಗಿತ್ತು..

ಈ ರೀತಿ ಪ್ರತಿದಿನ ನಡೆಯುವ ನೂರಾರು ವಂಚನೆಗಳಲ್ಲಿ ಈ ಎರಡು ಪ್ರಕರಣಗಳು ಉದಾಹರಣೆಗಳಷ್ಟೇ. ಬೆಂಗಳೂರಿನಲ್ಲೊಂದು ನಿವೇಶನ ಖರೀದಿಸಿ ಸ್ವಂತ ಮನೆ ಕಟ್ಟಿಕೊಳ್ಳಬೇಕು. ಫ್ಲ್ಯಾಟ್ ಖರೀದಿಸಬೇಕೆನ್ನುವುದು ಲಕ್ಷಾಂತರ ಜನರ ಕನಸು. ಆದರೆ, ಆಸ್ತಿ ಖರೀದಿಸುವ ವೇಳೆ ಕೊಂಚ ಯಾಮಾರಿದರೂ ಜೀವನದುದ್ದಕ್ಕೂ ಪರಿತಪಿಸುವಂತಾಗುತ್ತದೆ. ನಿವೇಶನ ಅಥವಾ ಮನೆ ಖರೀದಿಸುವ ಭರದಲ್ಲಿ ಹಿಂದು ಮುಂದು ನೋಡದೆ ಬಹುತೇಕ ಮಂದಿ ತಮಗರಿವಿಲ್ಲದೆಯೇ ಮೋಸ ಹೋಗುತ್ತಿದ್ದಾರೆ.

ಭೂಮಿಯ ಮೌಲ್ಯ ಹೆಚ್ಚಾದಂತೆ ಜನರನ್ನು ವಂಚಿಸುವ ಹಾಗೂ ಆಸ್ತಿ ಕಬಳಿಸುವ ಭೂಮಾಫಿಯಾಗಳೂ ಹೆಚ್ಚಾಗುತ್ತಿವೆ. ಹೆಚ್ಚು ಹಣಗಳಿಸುವ ಉದ್ದೇಶದಿಂದ ಸ್ವತ್ತಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನೇ ಮರೆಮಾಚಿ ಮಾರಾಟ ಮಾಡಲಾಗುತ್ತಿದೆ. ಇದರಿಂದಲೇ, ಇತ್ತೀಚಿನ ದಿನಗಳಲ್ಲಿ ಸಿವಿಲ್ ಪ್ರಕರಣಗಳ ಸಂಖ್ಯೆಯೂ ಅಧಿಕವಾಗಿದೆ. ಆದ್ದರಿಂದ, ಖರೀದಿದಾರರು ಸ್ವತ್ತಿಗೆ ಸಂಬಂಧಿಸಿದ ಎಲ್ಲ ಪೂರಕ ದಾಖಲೆಗಳನ್ನೂ ಬಹಳ ಎಚ್ಚರಿಕೆಯಿಂದ ಪರಿಶೀಲಿಸಬೇಕು. | ಹರೀಶ್ ಮವ್ವಾರು ಹೈಕೋರ್ಟ್ ವಕೀಲರು

ಸ್ವತ್ತು ಖರೀದಿ ವೇಳೆ ಇರಲಿ ಎಚ್ಚರ

ಯಾವುದೇ ಸ್ಥಿರಾಸ್ತಿ ಖರೀದಿಸುವಾಗ ಮೈಯೆಲ್ಲ ಕಣ್ಣಾಗಿಸಿಕೊಂಡು ವ್ಯವಹರಿಸಬೇಕು. ಕೆರೆ, ರಾಜಕಾಲುವೆ, ಗೋಮಾಳ ಸೇರಿ ಸರ್ಕಾರಿ ಜಮೀನುಗಳನ್ನೇ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡುವ ಭೂಗಳ್ಳರ ಬಗ್ಗೆಯಂತೂ ಎಷ್ಟು ಎಚ್ಚರ ವಹಿಸಿದರೂ ಸಾಲದು. ಆದ್ದರಿಂದ, ನಿವೇಶನ ಅಥವಾ ಮನೆ ಖರೀದಿಸುವ ಮೊದಲು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಬೇಕು.

ನಿಗದಿತ ಸ್ವತ್ತು ಮಾರಾಟಗಾರನ ಹೆಸರಿನಲ್ಲಿ ನೋಂದಣಿ ಆಗಿದೆಯೇ, ಅವನಿಗೆ ಅದನ್ನು ಮಾರಾಟ ಮಾಡುವ ಸಂಪೂರ್ಣ ಹಕ್ಕು ಇದೆಯೇ ಎಂಬುದನ್ನು ವಕೀಲರ ನೆರವು ಪಡೆದು ಖಾತ್ರಿಪಡಿಸಿಕೊಳ್ಳಬೇಕು. ಆಸ್ತಿ ಯಾರಿಂದ ಯಾರಿಗೆ ಬಂದಿದೆ, ಮೂಲಪತ್ರ ಯಾವುದು, ಉಯಿಲು, ಋುಣಭಾರ, ಪೋಡಿ ಆಗಿದೆಯೇ ಎಂಬುದನ್ನು ಗಮನಿಸಬೇಕು. ಜತೆಗೆ ಆ ಆಸ್ತಿಯ ಮೇಲೆ ಬ್ಯಾಂಕ್ ಅಥವಾ ಸೊಸೈಟಿಗಳಲ್ಲಿ ಸಾಲ ಪಡೆಯಲಾಗಿದೆಯೇ, ಅಡಮಾನ ಇಡಲಾಗಿದೆಯೇ ಎಂಬುದನ್ನೂ ಪರಿಶೀಲಿಸಿಕೊಳ್ಳಬೇಕು.

ಆಸ್ತಿಯು ಪಿತ್ರಾರ್ಜಿತವಾದಲ್ಲಿ ಮಾರಾಟಗಾರನಿಂದ ವಂಶವೃಕ್ಷ ಪಡೆದುಕೊಂಡು ಖರೀದಿದಾರರ ಶುದ್ಧ ಕ್ರಯಪತ್ರಕ್ಕೆ ಎಲ್ಲ ವಾರಸುದಾರರ ಒಪ್ಪಿಗೆ ಪಡೆದು ನೋಂದಣಿ ಮಾಡಿಸಿಕೊಳ್ಳುವುದು ಉತ್ತಮ. ಇಲ್ಲವಾದಲ್ಲಿ ಮೇಲಿನ ಉದಾಹರಣೆಯಲ್ಲಿ ಹೇಳಿರುವಂತೆ ಮುಂದೆ ಯಾರಾದರೊಬ್ಬರು ಆಸ್ತಿಯ ಮೇಲೆ ಹಕ್ಕು ಸಾಧಿಸಲು ಬರುವ ಸಾಧ್ಯತೆ ಇರುತ್ತದೆ. ಫ್ಲ್ಯಾಟ್ ಖರೀದಿಸುವ ವೇಳೆ ಯಾವ ಬೆಲೆಗೆ ಸಿಗುತ್ತದೆ, ಅಲ್ಲಿ ಯಾವ ಸೌಲಭ್ಯಗಳಿವೆ ಎನ್ನುವುದಕ್ಕಿಂತ ಮುಖ್ಯವಾಗಿ ಅಪಾರ್ಟ್​ವೆುಂಟ್ ನಿರ್ವಣವಾಗಿರುವ ಮೂಲ ಜಮೀನಿನ ದಾಖಲೆಗಳು ಸರಿ ಇವೆಯೇ?, ಬಿಲ್ಡರ್​ಗಳಿಂದ ನಿಯಮ ಉಲ್ಲಂಘನೆಯಾಗಿದೆಯೇ? ಎಂಬುದನ್ನು ಪರಿಶೀಲಿಸಬೇಕು.

ಖರೀದಿಗೂ ಮುನ್ನ ಪರಿಶೀಲಿಸಬೇಕಾದ ದಾಖಲೆಗಳು ಬಿಡಿಎ ಸ್ವತ್ತಾಗಿದ್ದರೆ ಹಣ ಪಾವತಿ ರಸೀದಿ, ಮಂಜೂರಾತಿ ಪತ್ರ, ಗುತ್ತಿಗೆ ಹಾಗೂ ಮಾರಾಟ ಒಪ್ಪಂದ (3 ವರ್ಷ ಮೇಲ್ಪಟ್ಟಿದ್ದರೆ ಅಗತ್ಯವಿಲ್ಲ), ಸ್ವಾಧೀನ ಪ್ರಮಾಣಪತ್ರ, ಸೇಲ್ ಡೀಡ್, ಖಾತಾ ಪ್ರಮಾಣಪತ್ರ, ಇತ್ತೀಚಿನ ತೆರಿಗೆ ಪಾವತಿ ರಸೀದಿ, ಮಂಜೂರಾತಿ ದಿನದಿಂದ ಇಲ್ಲಿಯವರೆಗಿನ ಇಸಿ, ಕಟ್ಟಡ ನಕ್ಷೆ.

ಬಿಬಿಎಂಪಿ ಮೂಲ ಹಕ್ಕುಪತ್ರ (ಮದರ್ ಡೀಡ್), ಗಣಕೀಕೃತ ಖಾತಾ ಪ್ರಮಾಣಪತ್ರ ಹಾಗೂ ಎಕ್ಸ್​ಟ್ರಾಕ್ಟ್, ಅಭಿವೃದ್ಧಿ ಶುಲ್ಕ ಪಾವತಿ ರಸೀದಿ, 1974ರಿಂದ ಇಸಿ, ತೆರಿಗೆ ಪಾವತಿ ರಸೀದಿ, ಅನುಮೋದಿತ ಲೇಔಟ್ ನಕ್ಷೆ/ಕಟ್ಟಡ ನಕ್ಷೆ ಫ್ಲ್ಯಾಟ್​ಗಳಾಗಿದ್ದರೆ ಮದರ್ ಡೀಡ್, ಅಭಿವೃದ್ಧಿ ಶುಲ್ಕ ಪಾವತಿ ರಸೀದಿ, ಖಾತಾ ಪ್ರಮಾಣಪತ್ರ, ಅನುಮೋದಿತ ನಕ್ಷೆ, ಸಂಬಂಧಿತ ಇಸಿ, ಪರಿವರ್ತಿತ ಭೂಮಿಯಾಗಿದ್ದರೆ ಭೂ ಪರಿವರ್ತನೆ ಆದೇಶ ಹಾಗೂ ಶುಲ್ಕ ಪಾವತಿ ರಸೀದಿ, 1967ರಿಂದ ಪಹಣಿ (ಆರ್​ಟಿಸಿ), ಇತ್ತೀಚಿನ ತೆರಿಗೆ ಪಾವತಿ ದಾಖಲೆಗಳು, ಎತ್ತರದ ಕಟ್ಟಡಗಳಾಗಿದ್ದಲ್ಲಿ ಬಿಎಸ್​ಎನ್​ಎಲ್, ಬೆಸ್ಕಾಂ, ಜಲಮಂಡಳಿ, ಅಗ್ನಿಶಾಮಕ ದಳ, ಭಾರತೀಯ ವಿಮಾನ ಪ್ರಾಧಿಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಗಳಿಂದ ನಿರಾಕ್ಷೇಪಣಾ ಪತ್ರ.

ಕೃಷಿ ಭೂಮಿ

ಮದರ್ ಡೀಡ್, ಜೋನಲ್ ರೆಗ್ಯುಲೇಷನ್ ಮ್ಯಾಪ್, 1967ರಿಂದ ಆರ್​ಟಿಸಿ, ಸಂಬಂಧಿತ ಮ್ಯುಟೇಷನ್ ರಿಜಿಸ್ಟರ್ (ಎಂಆರ್), ಆಕಾರ್​ಬಂದ್, ಬಾಡಿಗೆರಹಿತ ಪತ್ರ, ಕರ್ನಾಟಕ ಭೂಸುಧಾರಣಾ ಕಾಯ್ದೆಯ ಸೆಕ್ಷನ್ 79(ಎ) ಹಾಗೂ (ಬಿ) ಅಡಿ ಯಾವುದೇ ಪ್ರಕರಣಗಳಿಲ್ಲ ಎನ್ನುವುದಕ್ಕೆ ದಾಖಲೆ, ಎಸ್ಸಿ-ಎಸ್ಟಿ ಭೂ ಮಂಜೂರಾತಿ ಪತ್ರ.

ಪರಿವರ್ತಿತ ಭೂಮಿಯಾಗಿದ್ದರೆ ಮದರ್ ಡೀಡ್, ಭೂ ಪರಿವರ್ತನೆ ಆದೇಶ ಹಾಗೂ ಶುಲ್ಕ ಪಾವತಿ ರಸೀದಿ, ಜೋನಲ್ ರೆಗ್ಯುಲೇಷನ್ ಮ್ಯಾಪ್ (2004 ಇಸವಿಗೂ ಮುನ್ನ ಪರಿವರ್ತನೆಯಾಗಿದ್ದರೆ) ಸಂಬಂಧಿತ ಮ್ಯುಟೇಷನ್ ರಿಜಿಸ್ಟರ್ (ಎಂಆರ್), ಆಕಾರ್​ಬಂದ್, ಗ್ರಾಮ ನಕ್ಷೆ, 1974ರಿಂದ ಇಸಿ, ಅನು ಮೋದಿತ ಲೇಔಟ್ ಪ್ಲ್ಯಾನ್, ಖಾತಾ, ಇತ್ತೀಚಿನ ತೆರಿಗೆ ಪಾವತಿ ರಸೀದಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net