

ಅತಿತೂಕವು ಮುಖ್ಯ ಕಾರಣಗಳಲ್ಲೊಂದು. ಇದನ್ನು ತಡೆಯಲು, ಮೊದಲನೆಯದಾಗಿ ನಮ್ಮ ಆಹಾರದಲ್ಲಿ ಸಂಧಿಗಳ ಆರೋಗ್ಯವನ್ನು ಕಾಪಾಡುವಂತಹ ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ವಿಶೇಷವಾಗಿ ಒಳ್ಳೆಯ ಕೊಬ್ಬು ಅಂದರೆ ಮನೆಯಲ್ಲೇ ತಯಾರಿಸಿದ ತುಪ್ಪ, ಗಾಣದಲ್ಲಿ ತೆಗೆದ ಕೊಬ್ಬರಿ ಎಣ್ಣೆ, ಶೇಂಗಾ ಎಣ್ಣೆ, ಎಳ್ಳೆಣ್ಣೆಯಂಥವುಗಳನ್ನು ಆಹಾರದಲ್ಲಿ ಹೆಚ್ಚಾಗಿ ಬಳಸಬೇಕು. ಕ್ಯಾಲ್ಸಿಯಂ ಹೆಚ್ಚಿರುವ ಆಹಾರಗಳಾದ ಹಾಲು, ಎಳ್ಳು, ಹಸಿರು ಸೊಪ್ಪು ತರಕಾರಿಗಳು, ನಟ್ಗಳು, ಕೊಬ್ಬರಿಗಳನ್ನು ಪ್ರತಿನಿತ್ಯ ಬಳಸಬೇಕು. ಮಂಡಿನೋವು ಬರದಂತೆ ತಡೆಯಲು ಮತ್ತು ಇರುವ ನೋವು ಹೆಚ್ಚಾಗದಂತೆ ನೋಡಿಕೊಳ್ಳಲು ನಿತ್ಯವೂ ಎಣ್ಣೆಯ ಮಸಾಜ್ ಮಾಡಲೇಬೇಕು. ಆಯುರ್ವೆದದಲ್ಲಿ ನಿತ್ಯವೂ ಎಣ್ಣೆಯ ಮಸಾಜ್ ಮಾಡುವುದರಿಂದ ವಾತರೋಗಗಳು ಬರುವುದಿಲ್ಲ ಎಂದಿದ್ದಾರೆ. ಮೂಳೆ ಸವಕಳಿಯೂ ವಾತರೋಗವೇ. ಹಾಗಾಗಿ ಶುದ್ಧವಾದ ಎಣ್ಣೆಯಿಂದ ಮಸಾಜ್ ಮಾಡಿಕೊಂಡು ಶಾಖ ತೆಗೆದುಕೊಳ್ಳಬೇಕು. ಪ್ರಾರಂಭಿಕ ಹಂತದ ಮಂಡಿನೋವಿಗೆ ಅದಕ್ಕೆಂದೇ ಇರುವ ಕೆಲವು ವ್ಯಾಯಾಮಗಳು ತುಂಬಾ ಸಹಕಾರಿ.
ಮಂಡಿಯ ಸವಕಳಿ ಜಾಸ್ತಿಯಾದ ನಂತರ ವಾಕಿಂಗ್ ಮಾಡುವುದು ಅಥವಾ ವೈದ್ಯರ ಸಲಹೆ ಇಲ್ಲದೇ ವ್ಯಾಯಾಮ ಮಾಡುವುದರಿಂದ ಸಮಸ್ಯೆ ಇನ್ನೂ ಉಲ್ಬಣಗೊಳ್ಳುತ್ತದೆ. ಕೆಲವು ಸುಲಭ ಮನೆಮದ್ದುಗಳ ಮೂಲಕವೂ ಪ್ರಾರಂಭಿಕ ಹಂತದ ಮಂಡಿನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಒಂದು ಟೀ ಚಮಚ ಲಕ್ಕಿ ಸೊಪ್ಪು ಮತ್ತು ಅರ್ಧ ಟೀ ಚಮಚ ಶುಂಠಿಯ ಮಿಶ್ರಣಕ್ಕೆ ನಾಲ್ಕು ಲೋಟ ನೀರು ಹಾಕಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ದಿನಕ್ಕೊಮ್ಮೆ ಆಹಾರದ ಮೊದಲು ಸೇವಿಸುವುದರಿಂದ ಬಾವು ಸಹಿತ ಮಂಡಿ ನೋವು ಕಡಿಮೆಯಾಗಲು ಸಹಾಯವಾಗುತ್ತದೆ. ಔಡಲ ಗಿಡದ ಬೇರನ್ನು ಸುಮಾರು ಐದು ಗ್ರಾಂನಷ್ಟು ತೆಗೆದುಕೊಂಡು (ಗ್ರಂಧಿಗೆ ಅಂಗಡಿಗಳಲ್ಲಿ ಅಥವಾ ಆಯುರ್ವೆದ ಔಷಧ ಅಂಗಡಿಗಳಲ್ಲಿ ಏರಂಡಮೂಲ ಎಂಬ ಹೆಸರಿನಲ್ಲಿ ಇದು ದೊರೆಯುತ್ತದೆ.) ಇದನ್ನು ಕೂಡ ಮೇಲೆ ಹೇಳಿದಂತೆಯೇ ಕಷಾಯ ಮಾಡಿ ಸೇವಿಸುವುದರಿಂದ ಆಮವಾತದ ಮಂಡಿ ನೋವು ಕಡಿಮೆಯಾಗಲು ಸಹಾಯವಾಗುತ್ತದೆ. ಮಾಂಸಖಂಡದ ದೌರ್ಬಲ್ಯ ಮತ್ತು ಮೂಳೆ ಸವಕಳಿಯ ಕಾರಣದಿಂದ ಆದ ಮಂಡಿ ನೋವಿಗೆ ಗ್ರಂಧಿಗೆ ಅಂಗಡಿಗಳಲ್ಲಿ ಸಿಗುವ ಬಲಮೂಲ ಕ್ವಾಥಚೂರ್ಣವನ್ನು ತಂದು ಸುಮಾರು 5 ಗ್ರಾಮಷ್ಟು ಚೂರ್ಣಕ್ಕೆ ಒಂದು ಲೋಟ ಹಾಲು ಮತ್ತು ಮೂರು ಲೋಟ ನೀರು ಹಾಕಿ ಸಣ್ಣ ಬೆಂಕಿಯಲ್ಲಿ ಕುದಿಸಿ ಒಂದು ಲೋಟಕ್ಕೆ ಬತ್ತಿಸಿ ಸೋಸಿ ದಿನಕ್ಕೊಮ್ಮೆಯಂತೆ ಆಹಾರ ಸೇವಿಸುವ ಒಂದು ತಾಸು ಮೊದಲು ತೆಗೆದುಕೊಳ್ಳುವುದರಿಂದ ದೇಹದ, ಮಾಂಸ ಮತ್ತು ಮೂಳೆಗಳ ಶಕ್ತಿ ಹೆಚ್ಚಿ ತುಂಬಾ ಅನುಕೂಲವಾಗುತ್ತದೆ. ಈ ಕಷಾಯಗಳನ್ನು ಸುಮಾರು ಒಂದರಿಂದ ಒಂದೂವರೆ ತಿಂಗಳುಗಳ ಕಾಲ ತೆಗೆದುಕೊಳ್ಳಬೇಕಗುತ್ತದೆ.
ಲಕ್ಕಿಸೊಪ್ಪನ್ನು ತಂದು ಉಗಿಯಲ್ಲಿ ಬೇಯಿಸಿ ಪೇಸ್ಟ್ ಮಾಡಿ ಅದನ್ನು ಬಿಸಿ ಮಾಡಿ ಮಸಾಜ್ ಮಾಡಿದ ಮಂಡಿಗೆ ಹಚ್ಚುವುದರಿಂದ ಮೊಣಕಾಲಿನ ಶಕ್ತಿ ಹೆಚ್ಚುತ್ತದೆ. ನೋವು ಹೆಚ್ಚಿದ್ದಾಗ ಎಣ್ಣೆ ಹಚ್ಚಿದ ನಂತರ ಎಕ್ಕೆ ಎಲೆಯನ್ನು ಬಿಸಿ ಮಾಡಿ ಅದನ್ನು ಮಂಡಿಯ ಮೇಲೆ ಇಟ್ಟು ಶಾಖ ಕೊಡುವುದರಿಂದ ನೋವು ಬೇಗ ಕಡಿಮೆಯಾಗಲು ಸಹಾಯವಾಗುತ್ತದೆ. ಆದರೂ ಒಂದು ಹಂತ ದಾಟಿದ ನಂತರ ಮನೆಮದ್ದುಗಳು, ವ್ಯಾಯಾಮಗಳಿಂದ ಮಂಡಿನೋವು ಕಡಿಮೆಯಾಗಲು ಸಾಧ್ಯವಿಲ್ಲ. ಜಾನುಬಸ್ತಿ, ಪ್ರಕೃತಿ ಚಿಕಿತ್ಸೆ, ಫಿಸಿಯೋಥೆರಪಿ, ಪಂಚಕರ್ಮ ಚಿಕಿತ್ಸೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಹೀಗೆ ಮಂಡಿನೋವಿಗೆ ನೋವಿನ ಮಾತ್ರೆಗಳ ಮೂಲಕ ನೋವನ್ನು ತಾತ್ಕಾಲಿಕ ಶಮನ ಮಾಡಿಕೊಳ್ಳದೇ ಆಹಾರ, ವ್ಯಾಯಾಮ, ಚಿಕಿತ್ಸೆಗಳ ಮೂಲಕ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬೇಕು.