

ಭಾರತೀಯ ಹೆಮ್ಮೆಯ ವೈದ್ಯಕೀಯ ಶಾಸ್ತ್ರವಾದ ಆಯುರ್ವೇದದಲ್ಲಿ ಸ್ನಾನ, ಪರಿಷೇಕ, ಪ್ರಕ್ಷಾಲನ, ಇತ್ಯಾದಿಗಳನ್ನು ದಿನಚರ್ಯದಲ್ಲಿಯೂ, ರೋಗ ಪರಿಚರ್ಯುಯಲ್ಲಿ ಉಲ್ಲೇಖಿಸಿದ್ದು ಅದು ಪ್ರಚಲಿತವಾಗಿದೆ. ಬ್ಯಾಕ್ಟೀರಿಯಾ, ಫಂಗಸ್, ವೈರಸ್ಗಳ ಸೋಂಕು ತಡೆಗಟ್ಟಲು ಸ್ಯಾನಿಟೈಸರ್ಗಳನ್ನು ಔಷಧ ಸಸ್ಯಮೂಲಗಳಿಂದ ಉತ್ಪಾದಿಸಬಹುದೇ ಎಂಬ ಜಿಜ್ಞಾಸೆ ಒದಗಿಬಂದಿದೆ. ಈ ನಿಟ್ಟಿನಲ್ಲಿ ಕೆಲವೊಂದು ಉಪಯುಕ್ತವಾದ ಮಾಹಿತಿಗಳು.
ಸರಳ ವಿಧಾನ: 100 ಗ್ರಾಂ ಬೇವಿನ ಎಲೆಗಳನ್ನು ಸ್ವಚ್ಛವಾಗಿ ತೊಳೆದುಕೊಂಡು, ಅವುಗಳನ್ನು ಒಂದು ಲೀಟರ್ ನೀರಿನಲ್ಲಿ ಹಾಕಿ ಕುದಿಸಬೇಕು. ಕುದಿಸಿದ ನೀರಿನಲ್ಲಿ 200 ಗ್ರಾಂ (ಒಂದು ಹಿಡಿಯಷ್ಟು) ತುಳಸಿ ಎಲೆಗಳನ್ನು ಹಾಕಿ ಪುನಃ ಕುದಿಸಿ ತಣ್ಣಗಾಗಲು ಬಿಟ್ಟು, ನಂತರ ಆ ನೀರಿಗೆ ಪಟಕ (Alum) ಮತ್ತು ಕರ್ಪೂರವನ್ನು (Camphor) ಪುಡಿ ಮಾಡಿ ಹಾಕಬೇಕು. ಅರ್ಧಗಂಟೆಯ ನಂತರ ಈ ಮಿಶ್ರಣವನ್ನು ಸೋಸಿ ಬಾಟಲಿಯಲ್ಲಿ ತುಂಬಿಟ್ಟುಕೊಂಡು ತಾಸಿಗೊಮ್ಮೆ ಇದರಿಂದ ಕೈ ತೊಳೆಯಬೇಕು.
ಕುಮಾರಿರಸ (Alovera) ಘೃತ (Ghee) ಹಾಗೂ ದುಷ್ಪರಿಣಾಮವಿಲ್ಲದಂಥ ಆಲ್ಕೋಹಾಲ್ ಒಂದು ಲೀಟರ್ ಹಾಗೂ ಸುಗಂಧ ಪರಿಮಳ ಬರಲು ಅವಶ್ಯಕವಾದಂಥ ಯಾವುದಾದರೂ ಸುಗಂಧಭರಿತ ಎಣ್ಣೆ, ಲೆವೆಂಡರ್ಎಣ್ಣೆ, ಕೊಬ್ಬರಿಎಣ್ಣೆ, ಬದಾಮಿಎಣ್ಣೆ, ಸಾಸಿವೆಎಣ್ಣೆ ಇವುಗಳಲ್ಲಿ ಯಾವುದಾದರೂ ಒಂದನ್ನು ಮಿಶ್ರಣ ಮಾಡಿ, ಸೀಸೆಯಲ್ಲಿ ತುಂಬಿಟ್ಟುಕೊಂಡು ಕೈ ತೊಳೆಯಲು ಉಪಯೋಗಿಸಬಹುದು.
ಅರಿಷ್ಟಕ (ಅಂಟವಾಳಕಾಯಿ- ರೀಟಾಫಲ- ಸೋಪ್ನಟ್): ಹೆಸರೇ ಹೇಳುವಂತೆ ಇದು ‘ಸಾಬೂನು ಬೀಜ’. ಹಳ್ಳಿಗಳಲ್ಲಿ ಇಂದಿಗೂ ಅಂಟವಾಳಕಾಯಿ (ಸೋಪ್ನಟ್) ಯನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಅದರಿಂದ ಬರುವ ನೊರೆ-ದ್ರಾವಣದಿಂದ ವಸ್ತ್ರಗಳ ಮಲಿನವನ್ನು ತೆಗೆದುಹಾಕುತ್ತಾರೆ. ಈ ಸೋಪ್ನಟ್ ಅದ್ಭುತ ಕ್ರಿಮಿನಾಶಕ, ಕೊಳೆನಾಶಕ. ಇದರಲ್ಲಿರುವ ಕ್ಷಾರೀಯ ಗುಣದಿಂದ ಸೂಕ್ಷಾ್ಮಣು (ಜೀವಾಣು) ನಾಶವಾಗುತ್ತದೆ. ಅಂಟವಾಳಕಾಯಿಯ ಸಿಪ್ಪೆಯನ್ನು ಜಜ್ಜಿ ನೀರಿನಲ್ಲಿ ಕುದಿಸಿದಾಗ ಲೀಟರ್ಗಟ್ಟಲೇ ದ್ರಾವಣ ತಯಾರಾಗುತ್ತದೆ-ಒಂದು ಅದ್ಭುತ ಸ್ಯಾನಿಟೈಸರ್.
ಶಿರೀಷ(ಬಾಗೆ): ಭಾರತೀಯ ಚಿಕಿತ್ಸಾ ಪದ್ಧತಿಯಲ್ಲಿ ಸ್ನಾನಯೋಗ, ಧೂಪನ ಯೋಗಗಳಲ್ಲಿ ಶಿರೀಷ ಫಲ ಬೀಜಗಳನ್ನು ಬಳಸಲಾಗುತ್ತದೆ. ಶಿರೀಷ (ಅಲ್ ಬೆಜಿಯಾ ಲಬ್ಬೇಕ್) ಒಂದು ಅತ್ಯತ್ತಮ ವಿಷಹರ ದ್ರವ್ಯ(ಆಂಟಿ ಟಾಕ್ಸಿಕ್). ಹಲವಾರು ವಿಧದ ಚರ್ಮರೋಗ, ವಿಷರೋಗ, ಶ್ವಾಸ-ಕಾಸ ರೋಗಗಳ ಚಿಕಿತ್ಸೆಯಲ್ಲಿ ಶಿರೀಷ ಫಲ ಕಲ್ಪಗಳು ಬಳಕೆಯಲ್ಲಿವೆ. ಶಿರೀಷ ಫಲ ಬೀಜಗಳನ್ನು ಕುಟ್ಟಿ ಪುಡಿ ಮಾಡಿ ಬಿಸಿನೀರಿನ ಜೊತೆಗೆ ಮಿಶ್ರಣಮಾಡಿ ಉಜ್ಜುವುದರಿಂದ ನೊರೆ ಬಂದು ಸಾಬೂನುಗಳ ತರಹ ಕೆಲಸ ಮಾಡುತ್ತದೆ. ಶಿರೀಷ ಫಲ ಬೀಜಗಳನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ, ಸೋಸಿ ಉಪಯೋಗಿಸಿದರೆ- ಈಗ ಪ್ರಚಲಿತದಲ್ಲಿರುವ ಯಾವುದೇ ಸ್ಯಾನಿಟೈಸರ್ಗಳಿಗೆ ಪರ್ಯಾಯವಾಗಬಲ್ಲದು.
ಧಾನ್ಯಕ (ಕೊತ್ತಂಬರಿ-ಹವೀಜ): ಧಾನ್ಯಕವನ್ನು(ಬೀಜ) ಚೆನ್ನಾಗಿ ಕುಟ್ಟಿ ನೀರಿನಲ್ಲಿ ಕುದಿಸಿ-ಸೋಸಿದರೆ ಸಾಕು, ಒಳ್ಳೆಯ ಸ್ಯಾನಿಟೈಸರ್ ದ್ರಾವಣವಾಗಿ ಬಳಸಬಹುದಾಗಿದೆ. ಕ್ರಿಮಿನಾಶಕ ಗುಣವನ್ನು ಹೊಂದಿರುವುದರಿಂದ ಇದರ ಬೀಜ ಹಾಗೂ ಎಲೆಯಿಂದ ತಯಾರಿಸಿದ ತೈಲವನ್ನೂ ಸ್ಯಾನಿಟೈಸರ್ ಆಗಿ ಬಳಸಬಹುದಾಗಿದೆ.
ಕರ್ಪರ-ಪಚ್ಚ ಕರ್ಪರ: ಕರ್ಪರ ವೃಕ್ಷದ ನಿರ್ಯಾಸ (Gum Resin) ಒಂದು ಉತ್ತಮ ವಿಷಹರ(ಆಂಟಿ ಟಾಕ್ಸಿಕ್) ಕ್ರಿಮಿಘ್ನ, ಜಂತುಹರ ದ್ರವ್ಯ. ಇದರಲ್ಲಿ ವೊಲಟೈಲ್ ಆಯಿಲ್ ಗಳು ಸೂಕ್ಷ್ಮ ರೂಪದ ತೈಲಗಳು ಇರುವುದರಿಂದ ಸುಗಂದಭರಿತವಾಗಿದೆ. ಕರ್ಪರ ಅಥವಾ ಪಚ್ಚ ಕರ್ಪರವನ್ನು ಪುಡಿ ಮಾಡಿ ಬಿಸಿನೀರಿನಲ್ಲಿ ಬೆರೆಸಿದರೆ-ಸ್ಯಾನಿಟೈಸರ್ ತಯಾರಾದಂತೆ. ಇದರಿಂದ ಹಸ್ತ, ಪಾದ, ಮುಖ, ಶರೀರ ಪ್ರಕ್ಷಾಲನ ಕೂಡ ಮಾಡಲಾಗುತ್ತದೆ. ಕರ್ಪರ ತೈಲ ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದರಲ್ಲಿ Antifungal, Inflammatory, Antihelmentic, Antibactirial ಗುಣಗಳಿದ್ದು ಇದರಿಂದ ತೈಲವನ್ನು ಶೇಖರಿಸಿ, ಸ್ಯಾನಿಟೈಸರ್ ಆಗಿ ಬಳಸಬಹುದು. ಕರ್ಪರ ಮತ್ತು ತುಪ್ಪದ ಮಿಶ್ರಣವನ್ನು ಲೇಪನವಾಗಿ ಹಚ್ಚುವುದರಿಂದ ಗಾಯಗಳನ್ನು ಒಣಗಿಸಬಹುದು.
ಹರಿದ್ರಾ-ಅರಿಶಿಣ: ಹರಿದ್ರಾ ದಿನನಿತ್ಯ ಬಳಕೆಯಲ್ಲಿ ಇರುವ ಸಾಂಬರ್ ಪದಾರ್ಥ. ಅತ್ಯುತ್ತಮ ವಿಷಹರ(ಆಂಟಿ ಟಾಕ್ಸಿಕ್), ಅದ್ಭುತ ಆಂಟಿಬಯೋಟಿಕ್ ಗುಣಧರ್ಮವುಳ್ಳದ್ದು. ಅರಿಶಿಣವನ್ನು ಕುಟ್ಟಿ-ನೀರಿನಲ್ಲಿ ಚೆನ್ನಾಗಿ ಕುದಿಸಿ ತಯಾರಿಸಿದ ‘ಹರಿದ್ರಾಜಲ’-ಟರ್ಮರಿಕ್ ವಾಟರ್ ಸ್ನಾನ, ಪ್ರಕ್ಷಾಲನ, ಗಾಯಗಳನ್ನು ಒಣಗಿಸಲು ಬಳಸಲ್ಪಡುತ್ತದೆ. ಉತ್ತಮ ಸ್ಯಾನಿಟೈಸರ್ ಆಗಿದೆ. ಅದ್ಭುತ ವಿಷನಾಶಕ (Anti Toxic) ಆಗಿದೆ. ಹರಿದ್ರಾ ಸಿದ್ಧ ಸಾಬೂನುಗಳು, ಸೌಂದರ್ಯವರ್ಧಕಗಳು ಲಭ್ಯ ಇವೆ. ತುರಿಕೆ ಮತ್ತು ಇನ್ನಿತರ ಚರ್ಮ ರೋಗಗಳಲ್ಲೂ ಉಪಯುಕ್ತ. ಸ್ವಲ್ಪ ನೀರಿನಲ್ಲಿ ಅರಿಶಿಣವನ್ನು ಕುದಿಸಿ ಬಾಯಿಯನ್ನು ಮುಕ್ಕಳಿಸುವುದರಿಂದ (ಗಂಡೂಷ) ವೈರಸ್ನಿಂದ ಉಂಟಾಗುವ, ಸೂಕ್ಷ್ಮ ಜೀವಾಣುಗಳಿಂದ ಉಂಟಾಗುವ ಸೋಂಕನ್ನು ತಡೆಯುತ್ತದೆ ಮತ್ತು ನಿವಾರಿಸುತ್ತದೆ.
ಕರ್ಪೂರವಲ್ಲಿ: ಈ ಗಿಡದ ಎಲೆಗಳನ್ನು ಚೆನ್ನಾಗಿ ಕಿವಚುವುದರಿಂದ ಅದನ್ನೇ ಸ್ಯಾನಿಟೈಸರ್ ಆಗಿ ಬಳಸಬಹುದು. ಅಥವಾ ಕರ್ಪರವಲ್ಲಿ ಎಲೆಗಳನ್ನು ನೀರಿನಲ್ಲಿ ಕುದಿಸಿ ಆ ನೀರನ್ನು ಸ್ಯಾನಿಟೈಸರ್ ಆಗಿ ಬಳಸಬಹುದು. ಇದರಲ್ಲಿ Antifungal, Antibactirialಗುಣಗಳಿದ್ದು, ಇದರ ಸ್ವರಸ ಹಾಗೂ ಪೇಸ್ಟ್ ಅನ್ನು ಮಾಡಿ ತಲೆಗೆ ಲೇಪವಾಗಿ ನೇವರಿಸಬಹುದು.
ಏಲಾ (ಏಲಕ್ಕಿ): ಏಲಕ್ಕಿ ಬೀಜಗಳನ್ನು ಕುಟ್ಟಿ ತೆಂಗಿನ ಎಣ್ಣೆಯಲ್ಲಿ ಬೆರೆಸಿ ಹಚ್ಚುವುದರಿಂದ ಸ್ಯಾನಿಟೈಸರ್ನಂತೆ ಉಪಯುಕ್ತ. ಏಲಾದಿ ಚೂರ್ಣ ಉತ್ತಮ ಚರ್ಮರೋಗನಾಶಕ ಕಲ್ಪ. ಏಲಾದಿಮಲಹರ (ಮುಲಾಮು), ಏಲಾದಿ ತೈಲ ಮತ್ತು ಏಲಕ್ಕಿಯಿಂದ ಸಿದ್ಧವಾದ ಸಾಬೂನುಗಳು ಲಭ್ಯ ಇವೆ. ಏಲಕ್ಕಿ ಪುಡಿಯನ್ನು ನೀರಿನಲ್ಲಿ ಕುದಿಸುವುದರಿಂದ ತುರಿಕೆ ನಾಶಕವಾಗಿಯೂ ಬಳಸಬಹುದು. ಇದೇ ನೀರನ್ನು ಬಾಯಿ ಮುಕ್ಕಳಿಸುವುದಕ್ಕೆ ಬಳಸುವುದರಿಂದ ಬಾಯಿಯ ಸ್ವಾಸ್ಥ್ಯವನ್ನು ಕಾಪಾಡಬಹುದು.
ಲವಂಗ-ಕ್ಲೋವ್: ಸುಗಂಧಭರಿತ ದ್ರವ್ಯಗಳಲ್ಲಿ ಹೆಸರುವಾಸಿ-ಆಂಟಿಬಯಾಟಿಕ್, ಆಂಟಿವೈರಲ್. ಲವಂಗದ ಎಣ್ಣೆ-ನೋವು ನಿವಾರಕ ಕೂಡ ಹೌದು. ಲವಂಗವನ್ನು ತೆಂಗಿನ ಎಣ್ಣೆಯಲ್ಲಿ ಕುದಿಸಿ ತಯಾರಿಸಿದ ತೈಲ ಉತ್ತಮ ಸ್ಯಾನಿಟೈಸರ್. ಲವಂಗ ಚೂರ್ಣವನ್ನು ನೀರಿನಲ್ಲಿ ಕುದಿಸಿ ಅದನ್ನು ಸ್ಯಾನಿಟೈಸರ್ ಆಗಿ ಬಳಸಬಹುದು ಹಾಗೂ ಇದರಲ್ಲಿ Antifungal, Antibactirial, Antiviral ಗುಣಗಳಿವೆ.
ನಿಂಬೆಹಣ್ಣು: ನಿಂಬೆಹಣ್ಣಿನ ರಸವನ್ನು ಬಿಸಿನೀರಿನೊಂದಿಗೆ ಮಿಶ್ರಣ ಮಾಡಿ ಉಪಯೋಗಿಸುವುದರಿಂದ ಅದು ಉತ್ತಮ ಸ್ಯಾನಿಟೈಸರ್ ಆಗುತ್ತದೆ. ಆಮ್ಲರಸ ಇರುವುದರಿಂದ ಅತ್ಯುತ್ತಮ ಕೊಳೆನಾಶಕ, ಕಡಿಮೆ ವೆಚ್ಚದಲ್ಲಿ ಫೇಸ್ವಾಶ್, ಬಾಡಿವಾಶ್ ಲೋಶನ್ಗಳನ್ನು ತಯಾರಿಸಬಹುದು. ಅಲ್ಲದೆ ಪುದಿನಾ, ಅಜವಾನ ಕೂಡ ಅದ್ಭುತ ಸ್ಯಾನಿಟೈಸರ್ಗಳು. ಬಿಸಿನೀರಿನ ಸೇವನೆ, ಬಿಸಿನೀರಿನ ಸ್ನಾನ, ಮುಖಪ್ರಕ್ಷಾಲನ, ಬಾಯಿಯನ್ನು ಬಿಸಿನೀರಿನಿಂದ ಸ್ವಚ್ಛಗೊಳಿಸುವುದು, ಬಿಸಿನೀರಿನಿಂದ ಕೈ-ಕಾಲುಗಳನ್ನು ತೊಳೆದುಕೊಳ್ಳುವುದು ಕೂಡ ಒಂದು ತರಹದ ಸ್ಯಾನಿಟೈಸೇಶನ್ ಆಗಿದೆ. ಆಯುರ್ವೇದ ಶಾಸ್ತ್ರದಲ್ಲಿ ಬಳಕೆಯಲ್ಲಿ ಇರುವ ಷಡಂಗ ಪಾನೀಯ (ಉಶೀರ) (ಲಾವಂಚ, ಪರ್ಪಟ (ಕಲ್ಲುಸಬ್ಬಸಿಗೆ), ಉದೀಚ್ಚ(ಸುಗಂಧಬೇರು), ಮುಸ್ತಾ (ಜೇರೆನ ಗಡ್ಡೆ), ನಾಗರ-ಶುಂಠಿ ಮತ್ತು ಚಂದನಗಳಿಂದ ಸಾಧಿತವಾದ ಈ ಪಾನೀಯ ಯೋಗ(ಕಷಾಯ) ಬಾಯಾರಿಕೆ ನಿವಾರಿಸುತ್ತದೆ, ಜ್ವರ ನಿವಾರಿಸಿ, ಬಾಯಿ, ಗಂಟಲನ್ನು ಸ್ವಚ್ಛವಾಗಿ ಇಡುತ್ತದೆ.
(ಲೇಖಕರು ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ಪ್ರಾಚಾರ್ಯರು)