ಸ್ತ್ರೀ ಬೆಳೆದಿದ್ದೇ ಸನಾತನ ಸಂಸ್ಕೃತಿಯಲ್ಲಿ!

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ |
ಯತ್ರೖೆತಾಸ್ತು ನ ಪೂಜ್ಯಂತೇ ಸರ್ವಾಸ್ತತ್ರಾಫಲಾಃ ಕ್ರಿಯಾಃ ||
ಶೋಚಂತಿ ಜಾಮಯೋ ಯತ್ರ ವಿನಶ್ಯತ್ಯಾಶು ತತ್ಕುಲಮ್ |
ನ ಶೋಚಂತಿ ತು ಯತ್ರೖೆತಾ ವರ್ಧತೇ ತದ್ಧಿ ಸರ್ವದಾ ||
- ಮನುಸ್ಮೃತಿ 3-56, 57
ಎಲ್ಲಿ ನಾರಿಯನ್ನು ಪೂಜ್ಯ ದೃಷ್ಟಿಯಿಂದ ಕಾಣುವರೋ ಅಲ್ಲಿ ದೇವತೆಗಳು ಸುಪ್ರೀತರಾಗುವರು. ಎಲ್ಲಿ ಅಗೌರವದಿಂದ ಕಾಣುವರೋ ಅಲ್ಲಿ ಪುರುಷರು ಮಾಡುವ ಕರ್ಮವೆಲ್ಲ ನಿಷ್ಪಲ. ಎಲ್ಲಿ ನಾರಿಯರು ಕಂಬನಿಗರೆಯುವರೋ ಆ ಕುಲವೇ ನಾಶವಾದಂತೆ. ಎಲ್ಲಿ ಅವರು ಆನಂದದಿಂದ ಇರುವರೋ ಆ ಕುಲ ವೃದ್ಧಿಯಾಗುವುದು ಎಂದು ಮನು ಸ್ಪಷ್ಟ ಮಾತುಗಳಲ್ಲಿ ಹೇಳಿದ್ದಾನೆ.
ವೇದಗಳ ಕಾಲದಲ್ಲಿ ಸ್ತ್ರೀಯರು ಉತ್ತಮ ಸ್ಥಿತಿಯಲ್ಲಿದ್ದರು. ಪಂಡಿತಳಾದ ಮಗಳು ಜನಿಸಲಿ ಎಂದು ಯಜ್ಞ ಮಾಡುತ್ತಿದ್ದರೆಂದು ಬೃಹದಾರಣ್ಯಕೋಪನಿಷತ್ತಿನಲ್ಲಿದೆ. ಕೌಶೀತಕೀ ಬ್ರಾಹ್ಮಣದಲ್ಲಿ ಪತ್ಯಾವಸೀ ಎಂಬ ಸ್ತ್ರೀ ತನ್ನ ವಿದ್ಯೆ ಪೂರೈಸಿದ ಮೇಲೆ ವಾಕ್ ಎಂಬ ಹೆಸರನ್ನು ಗಳಿಸುತ್ತಾಳೆ. ಐತರೇಯ ಬ್ರಾಹ್ಮಣದಲ್ಲಿ ಗಂಧರ್ವಗೃಹೀತಾ ಎಂಬಾಕೆ ಒಂದು ವಿಶಿಷ್ಟ ಕ್ಷೇತ್ರದಲ್ಲಿ, ಪೂರ್ಣ ಜ್ಞಾನ, ಪಾಂಡಿತ್ಯ ಪಡೆದಿದ್ದಳಂತೆ. ಗುರುಗಳೆಡೆಯಲ್ಲಿ ವೇದ ಓದಲು, ಉಪನಯನ ಮಾಡಿಸಿಕೊಳ್ಳಲು ಸ್ತ್ರೀಯರಿಗೂ ಅವಕಾಶವಿತ್ತು. ವಿದ್ಯಾರ್ಥಿನಿಯರಲ್ಲಿ ಬ್ರಹ್ಮವಾದಿನಿ, ಸದ್ಯೋದ್ವಾಹವೆಂದು ಎರಡು ವಿಧ. 
ಮೊದಲನೆಯವರು ಆಜನ್ಮ ಬ್ರಹ್ಮಚಾರಿಣಿಯರಾಗಿ ಜಿಜ್ಞಾಸೆ, ತತ್ವಬೋಧನೆಯಲ್ಲಿ ಕಾಲಕಳೆಯುತ್ತಿದ್ದರು. ರಾಜರ ಆಸ್ಥಾನಗಳಲ್ಲಿ ತತ್ವಜ್ಞರೊಂದಿಗೆ ವಾದಿಸುತ್ತಿದ್ದರು. ಜನಕರಾಜನ ಆಸ್ಥಾನದ ಗಾರ್ಗಿ, ಹೆಸರಾಂತ ಯಾಜ್ಞವಲ್ಕ್ಯರನ್ನು ತನ್ನ ವಾದದಿಂದ ಎದುರಿಸುವವಳು. ಋಗ್ವೇದದ ಹಲವು ಸೂಕ್ತಗಳನ್ನು ಸ್ತ್ರೀಯರೇ ಬರೆದಿರುವರು. ಲೋಪಾಮುದ್ರಾ, ವಿಶ್ವಾವರಾ, ಸಿಕತಾ, ನಿವಾವರೀ, ಘೊಷಾ ಇವರಲ್ಲಿ ಪ್ರಮುಖರು.
ಸದ್ಯೋದ್ವಾಹ ಎಂಬ ಎರಡನೇ ಗುಂಪಿನ ಹುಡುಗಿಯರು 16-17 ವರ್ಷಗಳಾದ ಮೇಲೆ ಮದುವೆಯಾಗುತ್ತಿದ್ದರು. ಯುವಕರೊಂದಿಗೆ ಆಟನೋಟಗಳಿಗೆ ಹೋಗುತ್ತಿದ್ದರೆಂದೂ, ಪ್ರೀತಿಯ ಬಹುಮಾನಗಳನ್ನು ಪರಸ್ಪರ ಹಂಚಿಕೊಳ್ಳುತ್ತಿದ್ದರೆಂದೂ, ಆದ ಮದುವೆಗಳಲ್ಲಿ ಕೆಲವು ಪರಸ್ಪರ ಅನುರಾಗದಿಂದ ಆದವು ಎಂದೂ ತಿಳಿಸುವ ಹಲವು ನಿದರ್ಶನಗಳಿವೆ. ಘೊಷಾ ಪದ್ಧತಿ ಇರಲಿಲ್ಲ, ಪತಿ ಸತ್ತರೆ ಅವನೊಂದಿಗೆ ಸಹಗಮನ ಮಾಡುತ್ತಿರಲಿಲ್ಲ. ಅವಳೇ ಇಚ್ಛಿಸಿದರೆ ಪುನಃ ಮದುವೆಯಾಗಬಹುದಿತ್ತು.
ಪೌರಾಣಿಕ ಯುಗದಲ್ಲೂ ಅವಳಿಗೆ ಉತ್ತಮ ಸ್ಥಾನವಿತ್ತು. ರಣವಿದ್ಯೆಯೂ ಹೊಸದಾಗಿರಲಿಲ್ಲ. ದಶರಥನೊಂದಿಗೆ ಕೈಕೇಯಿ ಯುದ್ಧರಂಗಕ್ಕೆ ಹೋಗುತ್ತಿದ್ದಳು. ಸ್ತ್ರೀಯರು ಬಯಲಲ್ಲಿ ಆಟಗಳನ್ನು ಆಡುತ್ತಿದ್ದರು. ಋತುಮತಿಯಾದ ಮೇಲೆ ವಿವಾಹವಾಗುತ್ತಿತ್ತು. ಆಗಲೂ ಅವರಿಗೆ ವೇದಕಾಲದಲ್ಲಿ ಇದ್ದಂತೆ ಉಪನಯನ ಸಂಸ್ಕಾರ, ವೇದಾಧ್ಯಯನ, ಯಾಗ ಯಜ್ಞಗಳನ್ನು ಮಾಡಲು ಅಧಿಕಾರವಿತ್ತು. ರಾಮ ಕಾಡಿಗೆ ಹೋಗುವುದಕ್ಕೆ ಮುಂಚೆ ಕೌಸಲ್ಯೆಯ ಅಪ್ಪಣೆ ಪಡೆಯಲು ಹೋದಾಗ ಅವಳು ಮಂತ್ರಗಳನ್ನು ಉಚ್ಚರಿಸುತ್ತ ಯಜ್ಞಗಳನ್ನು ಮಾಡುತ್ತಿದ್ದಳೆಂದು ಕವಿ ವಾಲ್ಮೀಕಿ ವರ್ಣಿಸುತ್ತಾನೆ. 
ವಾಲಿಯ ಸತಿ ತಾರೆ ಮಂತ್ರವಿದ್ ಎಂದು ಪ್ರಖ್ಯಾತಳಾಗಿದ್ದಳು. ಕಾಳಿದಾಸಾದಿ ಕವಿಗಳ ಕಾವ್ಯಗಳಲ್ಲಿನ ನಾಯಕಿಯರು ವಿದ್ಯಾವತಿಯರಾಗಿದ್ದರು. ರಾಜಶೇಖರನ ಕಾವ್ಯಮೀಮಾಂಸೆಯಲ್ಲೂ ಅನೇಕ ವಿದ್ಯಾವತಿಯರ ಹೆಸರಿವೆ. ಶೀಲಭಟ್ಟಾರಿಕಾ, ವಿಜಯಾಂಕಾ, ವಿಕಟನಿತಂಬಾ, ಅವಂತಿಸುಂದರಿ ಮುಂತಾದ ಕವಯತ್ರಿಯರಿದ್ದರು.
ಬೌದ್ಧಧರ್ಮದ ಪ್ರಾಬಲ್ಯಸ್ಥಿತಿಯಲ್ಲೂ ಋತುಮತಿಯಾದ ಮೇಲೆ ವಿವಾಹ ಮಾಡುತ್ತಿದ್ದರು. ಅನೇಕ ವಿದ್ಯಾವತಿಯರಾದ ಸ್ತ್ರೀಯರು ಬೌದ್ಧಧರ್ಮಕ್ಕೆ ಸೇರಿದ್ದರು. ವಜೀರಾ ಎಂಬ ಭಿಕ್ಷುಣಿ ಒಬ್ಬ ವಿದ್ಯಾವಂತ ಭಿಕ್ಷುವಿನೊಂದಿಗೆ ಸತ್ ಅಸತ್ತಿನ ವಿಚಾರವಾಗಿ ಪ್ರಶ್ನೆ ಮಾಡುವಳು, ಶುಕಾ ಎಂಬುವಳು ಪ್ರಖ್ಯಾತ ಉಪನ್ಯಾಸಕಳು.
ಧಾರ್ವಿುಕ ವಿಚಾರದಲ್ಲಿ ಖೇಮಾ ಪ್ರಖ್ಯಾತಳು. ಪಸೇನದಿ ಎಂಬ ದೊರೆಯನ್ನೂ ಇವಳು ತನ್ನ ಬೋಧೆಯಿಂದ ಮುಗ್ಧನನ್ನಾಗಿ ಮಾಡಿದ್ದಳು. ಇವರಲ್ಲಿ ಕೆಲವರ ಕಾವ್ಯಕೃತಿಗಳು ಬೌದ್ಧಧರ್ಮದ ಭಂಡಾರದಲ್ಲಿವೆ. ಜೈನಧರ್ಮಕ್ಕೂ ಅನೇಕ ವಿದ್ಯಾವತಿಯರು, ಶೀಲವತಿಯರು ಸೇರಿದರು. ಚಂದನಾ ಎಂಬುವಳು ಸ್ತ್ರೀಯರ ಸಂಘಕ್ಕೆ ಅಧ್ಯಕ್ಷಳಾಗಿದ್ದಳು.
ಬೌದ್ಧಧರ್ಮದ ನಂತರ ಪ್ರಾಬಲ್ಯಕ್ಕೆ ಬಂದ ಶಂಕರಾಚಾರ್ಯರ ಕಾಲದಲ್ಲೂ ವಿದ್ಯಾವತಿಯರಾದ ಸ್ತ್ರೀಯರಿದ್ದರು. ಮಂಡನಮಿಶ್ರ ಮತ್ತು ಶಂಕರಾಚಾರ್ಯರು ವಾದ ಮಾಡುವಾಗ ಮಂಡನಮಿಶ್ರನ ಸತಿ ಮಹಾಪಂಡಿತೆ ಉಭಯಭಾರತಿಯನ್ನು ತೀರ್ಪು ಕೊಡಲು ಗೊತ್ತು ಮಾಡುವರು. ಆಕೆ ‘ಒಬ್ಬನು ಪತಿ, ಇನ್ನೊಬ್ಬನು ಯತಿ’ ಎಂಬ ಭೇದಭಾವವನ್ನು ತೋರದೆ ಶಂಕರಾಚಾರ್ಯರ ಪರವಾಗಿ ತೀರ್ಪನ್ನಿತ್ತಳು. ಇದರಿಂದ ಅವಳು ಪತಿಯನ್ನು ಕಳೆದುಕೊಳ್ಳಬೇಕಾಯಿತು. 
ಅವನು ಸನ್ಯಾಸಾಶ್ರಮವನ್ನು ಸ್ವೀಕರಿಸಿ ಶಂಕರಾಚಾರ್ಯರ ಶಿಷ್ಯನಾಗಿ ಹೊರಟುಹೋದನು. ಇಂತಹ ನಾರೀರತ್ನಗಳು ಅಪರೂಪವಾಗಿದ್ದಿರಬಹುದು. ಆದರೂ ಆಗಿನ ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ ಗೌರವದ ಅಂತಸ್ತಿನಲ್ಲಿ ಇದ್ದಿತೆಂದು ಊಹಿಸಬಹುದು. ಸರಿಯಾದ ವರನು ಸಿಕ್ಕದೇ ಇದ್ದರೆ ಎಷ್ಟು ವರುಷಗಳಾದರೂ ಕಾದುಕೊಂಡಿರಬೇಕೆಂದು ಸಾರಿದ ಮನುವನ್ನು ಟೀಕಿಸಬೇಕೋ ಶ್ಲಾಘಿಸಬೇಕೋ ಪ್ರಾಜ್ಞರೇ ನಿರ್ಧರಿಸಬೇಕು.
ಕ್ರಿ.ಪೂ. 400ರಿಂದ ಕ್ರಿ.ಶ. 400ರವರೆಗೆ ಬಂದ ಸೂತ್ರಕಾರರು ವಿಧವಾ ವಿವಾಹವನ್ನು ಅನುಮೋದಿಸುತ್ತಿದ್ದರು. ವಸಿಷ್ಠನು, ಮಕ್ಕಳಿರುವ ಬ್ರಾಹ್ಮಣನ ಸತಿಯಾದರೋ ಪರದೇಶಕ್ಕೆ ಹೋದ ಗಂಡನಿಗಾಗಿ 5 ವರ್ಷ ಕಾದರೆ ಸಾಕೆಂದು, ಅನಂತರ ಬೇರೆ ವಿವಾಹ ಮಾಡಿಕೊಳ್ಳಬಹುದೆಂದು ಹೇಳುವನು. ಕೌಟಿಲ್ಯನು ಹೆಂಗಸು ಗಂಡನಿಗಾಗಿ ಕೆಲವು ತಿಂಗಳು ಕಾದರೆ ಸಾಕೆಂತಲೂ ನಂತರ ಮದುವೆ ಮಾಡಿಕೊಳ್ಳಬಹುದೆಂದೂ ಹೇಳುತ್ತಾನೆ.
ಕ್ರಿ.ಪೂ. 200ರಿಂದ ವಿಧವಾ ವಿವಾಹಕ್ಕೆ ಅನುಮತಿ ಕ್ರಮೇಣ ಕಡಿಮೆಯಾಗುತ್ತ ಬರುವುದು. ಪತಿಯ ಕಾಲಾನಂತರ ಸತಿಯು ಮತ್ತೊಬ್ಬನ ಆಲೋಚನೆಯನ್ನೂ ಮಾಡಬಾರದೆನ್ನುತ್ತಾನೆ ಮನು. ಕ್ರಿ.ಶ. 500ಕ್ಕೆ ಬಂದ ನಾರದನು ವಿಧವಾ ವಿವಾಹವನ್ನು ಸಮ್ಮತಿಸದಿದ್ದರೂ ಗಂಡನು ಕಾಲವಾದರೆ, ಸನ್ಯಾಸಾಶ್ರಮಕ್ಕೆ ಸೇರಿದರೆ ಅಥವಾ ದೂರ ದೇಶಕ್ಕೆ ಹೋದರೆ ಮತ್ತೊಂದು ಮದುವೆಗೆ ಸಮ್ಮತಿ ಕೊಡುವನು. ಬಾಲ್ಯವಿವಾಹ ಜಾರಿಗೆ ಬಂದಮೇಲೆ, ಅನೇಕ ವೇಳೆ ಪತಿ ಕಾಲವಾದರೆ ಅಂತಹ ಸಮಯದಲ್ಲಿ ಬಾಲವಿತಂತು ಮತ್ತೊಮ್ಮೆ ಲಗ್ನವಾಗಬಹುದೆಂದು ಸೂತ್ರಕಾರರು ಮೊದಲು ಸಹಾನುಭೂತಿ ತೋರುತ್ತಾರೆ. 
ಕೇವಲ ಮದುವೆ ಮಾತ್ರವಾಗಿದ್ದು, ಪತಿಯೊಡನೆ ಜೀವಿಸುವುದಕ್ಕೆ ಮುಂಚೆ ಅವನು ಕಾಲವಾದರೆ, ಅಂತಹವಳು ಮತ್ತೊಂದು ಲಗ್ನ ಮಾಡಿಕೊಳ್ಳಬಹುದೆಂದು ವಸಿಷ್ಠ ಮತ್ತು ಬೋಧಾಯನರು ಅಭಿಪ್ರಾಯಪಡುತ್ತಾರೆ. ಲಘುಶಾತಾಪನು ಅಂತಹ ಹುಡುಗಿಯು ಮದುವೆಯಾಗಿಲ್ಲವೆಂತಲೇ ಭಾವಿಸಬೇಕು ಎನ್ನುತ್ತಾನೆ.
ಮಹಮ್ಮದೀಯರು ಭರತಖಂಡದ ಮೇಲೆ ದಾಳಿ ಮಾಡಿದಂದಿನಿಂದ ನಮ್ಮ ಸ್ತ್ರೀಯರ ಗತಿ ಶೋಚನೀಯವಾಗುತ್ತ ಬಂತು. ಹಿಂದೂ ರಾಜರು ಐಕಮತ್ಯ ಇಲ್ಲದೆ ಪರಸ್ಪರ ಕಾದು ಬಲಹೀನರಾದರು. ದಂಡೆತ್ತಿ ಬಂದ ಮಹಮ್ಮದೀಯರ ಬಲೆಗೆ ಬೀಳುತ್ತ ಒಬ್ಬೊಬ್ಬರಾಗಿ ಉತ್ತರಭಾರತದ ಸಾಮ್ರಾಟತ್ವದಿಂದ ಕಣ್ಮರೆಯಾಗುತ್ತ ಬಂದರು. ಯಾವಾಗ ಹಿಂದೂ ರಾಜರ ಬಲ ಕುಂದಿತೋ ಅಂದಿನಿಂದಲೇ ಹಿಂದೂ ಸಮಾಜ ಅನ್ಯಧರ್ಮದೊಂದಿಗೆ ಕಾದಾಡಬೇಕಾಯಿತು. ಮಹಮ್ಮದೀಯರ ಪ್ರಾಬಲ್ಯವಿದ್ದೆಡೆಯಲ್ಲೆಲ್ಲ ಘೊಷಾ ಪದ್ಧತಿ ಜಾರಿಗೆ ಬಂತು. ಸಹಗಮನದ ಉರಿ ದೇಶದ ನಾನಾ ಕಡೆ ಎದ್ದಿತು. ಇದಾವುದೂ ವೈದಿಕ ಕಾಲದಲ್ಲಿರಲಿಲ್ಲ. ಪತಿಯನ್ನು ಚಿತೆಗೇರಿಸಿ ಬರುವ ವಿಧವೆಯನ್ನು, ಮಕ್ಕಳು ಮತ್ತು ಆಸ್ತಿಯೊಂದಿಗೆ ಸುಖವಾಗಿರು ಎಂದು ಹರಸುವ ಹಲವು ಮಂತ್ರಗಳು ಅಥರ್ವಣವೇದದಲ್ಲಿವೆ. 
ರಾಮಾಯಣದಲ್ಲಿ ದಶರಥನ ಕಾಲಾನಂತರ ಅವನ ಸತಿಯರಾರೂ ಚಿತೆಯನ್ನೇರುವುದಿಲ್ಲ. ಮಹಾಭಾರತದಲ್ಲಿ ಮಾದ್ರಿ ಪಾಂಡುವಿನೊಂದಿಗೆ ಚಿತೆಗೇರಿದರೂ ಅಲ್ಲಿರುವ ಋಷಿಗಳೆಲ್ಲ ಬೇಡವೆನ್ನುತ್ತಾರೆ. ಘಟೋತ್ಕಚನ ಸತಿ, ಅಭಿಮನ್ಯುವಿನ ಸತಿ ಇವರೆಲ್ಲ ವಿಧವೆಯರಾಗಿಯೇ ಜೀವಿಸುತ್ತಾರೆ. ಆಪಸ್ತಂಭ ಧರ್ಮಸೂತ್ರದಲ್ಲಿ ಅದರ ಹೆಸರೇ ಇಲ್ಲ. ಬೌದ್ಧಕಾಲದಲ್ಲೂ ಇದು ಇರಲಿಲ್ಲ. ಇದ್ದಿದ್ದರೆ ಒಂದು ಮೂಕ ಕುರಿಗಾಗಿ ತನ್ನ ಪ್ರಾಣ ತೆರಲು ಸಿದ್ಧನಾದ ಬುದ್ಧ ಇದನ್ನು ನಿಲ್ಲಿಸದೆ ಇರುತ್ತಿರಲಿಲ್ಲ. ಮೆಗಾಸ್ತನೀಸ್ ಮತ್ತು ಕೌಟಿಲ್ಯರು ಇದರ ಹೆಸರನ್ನೇ ಹೇಳುವುದಿಲ್ಲ. 
ಕ್ರಿ.ಪೂ. 300ರವರೆಗೆ ಬಂದ ಸ್ಮೃಗಳೆಲ್ಲ ವಿಧವೆ ಏನೇನು ಮಾಡಬೇಕೆಂದು ಹೇಳುತ್ತವೆ, ಆದರೆ ಸತಿಯ ಸುದ್ದಿಯೇ ಇಲ್ಲ. ಅನಂತರವೂ - ಇದು ಬಳಕೆಯಲ್ಲಿದ್ದಾಗಲೂ - ಅನೇಕರು ಇದನ್ನು ವಿರೋಧಿಸುತ್ತಿದ್ದರು. ಮೇಧಾತಿಥಿ ಇದನ್ನು ವಿರೋಧಿಸುತ್ತಾನೆ. ದೇವಣ್ಣ ಭಟ್ಟ (12ನೇ ಶತಮಾನ) ಇದನ್ನು ಬಹಳ ಹೀನ ಆಚಾರವೆನ್ನುತ್ತಾನೆ. ಮೊದಲು ಇದು ಕ್ಷತ್ರಿಯರಲ್ಲಿ ಬಳಕೆಗೆ ಬಂದು ನಂತರ ಉಳಿದ ವರ್ಗಗಳಿಗೂ ಹರಡಿತು.
ಕ್ರಿ.ಶ. 9ನೇ ಶತಮಾನದವರೆಗೆ ಅಪಹೃತಳಾದ, ಅನ್ಯಧರ್ಮಕ್ಕೆ ಸೇರಿದ ಹಿಂದೂ ನಾರಿಯರನ್ನು ಪುನಃ ಸ್ವೀಕರಿಸಬಹುದಾಗಿತ್ತು. ಆಕೆ ಒಂದು ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿತ್ತು ಅಷ್ಟೆ. ವಸಿಷ್ಠನು ಧರ್ಮಸೂತ್ರದಲ್ಲಿ ಸ್ತ್ರೀಯು ವೈರಿಯಿಂದ ಅಪಹೃತಳಾದರೆ, ಬಲಾತ್ಕಾರದಿಂದ ಮಾನಭಂಗಕ್ಕೆ ಒಳಗಾದರೆ ಅವಳನ್ನು ಮನೆಯವರು ತ್ಯಜಿಸಕೂಡದು ಎಂದಿರುವನು. ಅತ್ರಿಯೂ ಇದೇ ಅಭಿಪ್ರಾಯ ವ್ಯಕ್ತಪಡಿಸುತ್ತಾನೆ. ಪರಾಶರನೂ ಇದನ್ನು ಅನುಮೋದಿಸುತ್ತಾನೆ.
ಮುಸುಕು ಹಾಕಿಕೊಳ್ಳುವುದು ವೇದ ಕಾಲದಲ್ಲಿ ಇರಲಿಲ್ಲ. ಮದುವೆಯಾದ ಮೇಲೆ ವಧುವನ್ನು ಎಲ್ಲರಿಗೂ ತೋರಿಸಬೇಕೆಂದು ಋಗ್ವೇದದಲ್ಲಿದೆ. ಮುಸುಕು ಪೌರಾಣಿಕ ಕಾಲದಲ್ಲಿರಲಿಲ್ಲ. ಸೀತೆ ದ್ರೌಪದಿ ಇದನ್ನು ಅನುಸರಿಸುತ್ತಿರಲಿಲ್ಲ. ಭಾಸ, ಶೂದ್ರಕನ ಕಾಲಕ್ಕೆ ರಾಜಸ್ಥಾನದ ಕೆಲವು ನಾರಿಯರು ಅದನ್ನು ಒಂದು ಸ್ಥಾನ ಗೌರವವಾಗಿ ಉಪಯೋಗಿಸುತ್ತಿದ್ದರು. ಕಾಳಿದಾಸನ ಕಾಲಕ್ಕೆ ಅದರ ಸುಳಿವೇ ಇಲ್ಲ. ಅಜಂತಾ ಗುಹೆಗಳಲ್ಲಿರುವ ಚಿತ್ರಗಳಲ್ಲಿ, ಆಗಿನ ಕಾಲದ ಶಿಲ್ಪಗಳಲ್ಲಿ ಅದಕ್ಕೆ ಪ್ರಮಾಣವಿಲ್ಲ. ಎಲ್ಲರಿಗೂ ಕಾಣುವಂತೆ ಸ್ತ್ರೀಯರು ಮಹಡಿ ಮೇಲೆ ನಿಂತು ಆಟಪಾಟಗಳನ್ನು ನೋಡುತ್ತಿದ್ದುದು ಚಿತ್ರಿತವಾಗಿದೆ. 
ಮನು ಅಥವಾ ಯಾಜ್ಞವಲ್ಕ್ಯರ ಸ್ಮೃಗಳಲ್ಲಿ ಅದರ ಮಾತೇ ಇಲ್ಲ. ಮಹಮ್ಮದೀಯರು ದಾಳಿ ಇಟ್ಟಂದಿನಿಂದ ಉತ್ತರ ದೇಶದಲ್ಲಿ ಹಲವು ಹೆಂಗಸರು ಇದನ್ನು ಅನುಸರಿಸಿದರು, ಇದಾದರೂ ತಮ್ಮನ್ನು ಕ್ರೂರ ಕಾಮುಕರ ನೋಟದಿಂದ ತಪ್ಪಿಸಿಕೊಳ್ಳಬಹುದೆಂದು ತಿಳಿದಿದ್ದರು.
ನಾರಿಯರ ಆತ್ಮವಿಕಾಸಕ್ಕೆ ಎಷ್ಟೋ ಅಡಚಣೆಗಳು ಬಂದೊದಗಿದರೂ ನಾರೀರತ್ನಗಳೆಷ್ಟೋ ಭರತಖಂಡದ ಮೂಲೆಮೂಲೆಗಳಲ್ಲಿ ಬೆಳಗಿದವು. ಮೀರಾಬಾಯಿ ರಾಜ್ಯಸುಖಕ್ಕೆ ತರ್ಪಣ ಕೊಟ್ಟು ಶ್ರೀಕೃಷ್ಣನ ಮೇಲೆ ಪ್ರೇಮೋನ್ಮತ್ತಳಾಗಿ ತನ್ನ ಜೀವನವನ್ನೆಲ್ಲ ಆತನ ಗುಣಗಾನದಲ್ಲಿ ಕಳೆದಳು. ಮಹಾರಾಷ್ಟ್ರದಲ್ಲಿ ಸಖೂಬಾಯಿ, ಮುಕ್ತಾಬಾಯಿ, ದಕ್ಷಿಣದಲ್ಲಿ ಆಂಡಾಳ್, ಅಕ್ಕಮಹಾದೇವಿ ಮುಂತಾದವರು.
ರಾಜ್ಯಾಡಳಿತದ ಭಾರವನ್ನು ಸ್ತ್ರೀಯರು ಸುಲಭವಾಗಿ ನಿರ್ವಹಿಸಿದ ಉದಾಹರಣೆಗಳಿವೆ. ರಣರಂಗಕ್ಕೂ ಇವರು ಅಪರಿಚಿತರಲ್ಲ. ಸುಗಂಧಿ, ದಿಡ್ಡ ಮೊದಲಾದ ವಿಧವೆಯರಾದ ರಾಣಿಯರೂ ರಾಜ್ಯಭಾರ ವಹಿಸಿಕೊಂಡರು. ಗುಜರಾತಿನ ಸುಲ್ತಾನ್ ಬಹದ್ದೂರ್ ಷಾ, ಚಿತ್ತೂರಿನ ಮೇಲೆ ದಾಳಿ ಮಾಡಿದಾಗ ಗತಿಸಿದ ರಾಣಾಸಿಂಗನ ಸತಿ, ಕರ್ಣಾವತಿ ಅವನನ್ನು ಎದುರಿಸಿದಳು. ಮಹಾರಾಷ್ಟ್ರದ ಚರಿತ್ರೆಯಲ್ಲಿ ಕೊಲ್ಲಾಪುರದ ತಾರಾದೇವಿ, ಈಚಲಕರಂಜಿಯ ಅನೂಬಾಯಿ ಘೊರ್ಪಡೆ, ಇಂದೂರಿನ ಅಹಲ್ಯಾಬಾಯಿ, ಝಾನ್ಸಿ ಲಕ್ಷ್ಮೀಬಾಯಿ ಮುಂತಾದವರು ತಮ್ಮ ವಿರೋಧಿಗಳಿಂದಲೂ ಹೊಗಳಿಕೆಗೆ ಪಾತ್ರರಾಗಿದ್ದರು.
ಅನೇಕ ಕಟ್ಟುನಿಟ್ಟುಗಳಿಂದ ಬಂಧಿಸಿರುವಾಗಲೇ ಇಂತಹ ನಾರೀರತ್ನಗಳು ಜನಿಸಿದ್ದು ಈ ಮಣ್ಣಿನ ಲಕ್ಷಣವನ್ನು ತೋರಿಸುತ್ತದೆ. ಪ್ರಪಂಚದ ಯಾವುದೇ ದೇಶದಲ್ಲಿ, ಸಂಸ್ಕೃತಿಯಲ್ಲಿ ಇಷ್ಟು ಪ್ರಾಚೀನ ಕಾಲಕ್ಕೇ ಸ್ತ್ರೀಶಕ್ತಿ ಈ ಮಟ್ಟದ ಪ್ರವರ್ಧಮಾನವನ್ನು ತೋರಿಸಿದ್ದು ಕಾಣಸಿಗದು. ಇತಿಹಾಸದ ಗಂಧವೇ ಇಲ್ಲದ ರಾಜಕಾರಣಿಗಳು ಮೌನವಾಗಿದ್ದರೆ ಗೌರವಯುತ. ಆದರೆ ಅವರು ಹಾಗಿರಲಾರರು. ಏಕೆಂದರೆ politics is the last resort of a scoundrel
ಅಲ್ಲವೇ?!
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net