ಇದರ ಅರ್ಥ, ತಾತ್ಪರ್ಯಗಳು ಮನಮುಟ್ಟುವಂತಿವೆ. ಯಾರಿಗೂ, ಯಾವ ಕಾಲದಲ್ಲೂ ಪ್ರತಿನಿತ್ಯದ ಮನನಕ್ಕೆ ಯೋಗ್ಯವಾದ ಶ್ಲೋಕವಿದು. ಕೊನೆಯ ಸಾಲಿನಲ್ಲಿ ಆಚಾರ್ಯರು ಕೊಡುವ ಎಚ್ಚರಿಕೆ ಗಮನೀಯ! ‘ಕೇವಲ ಒಂದು ಇಂದ್ರಿಯದ ದೌರ್ಬಲ್ಯದಿಂದ ಜಿಂಕೆ, ಆನೆ, ಪತಂಗ, ಮೀನು, ಭೃಂಗ ಇವು ದುರಂತಕ್ಕೆ ಸಿಲುಕಿ ಸಾವನ್ನಪ್ಪಿದವು. ಅಂಥ ಐದು ಇಂದ್ರಿಯಗಳು ನಿನ್ನಲ್ಲಿವೆ, ನಿನ್ನ ಪಾಡೇನು ನರ ಮನುಷ್ಯನೇ?’ ಎನ್ನುತ್ತಾರವರು. ಎಷ್ಟೇ ಮಾರ್ಮಿಕವಾಗಿದ್ದರೂ ಈ ಶ್ಲೋಕದ ಕೇವಲ ಅರ್ಥವನ್ನು ಗ್ರಹಿಸಿದರೆ ಸಾಲದು. ಅದಕ್ಕೆ ವಿವರಣೆ ಅಗತ್ಯ. ಕುರಂಗ ಎಂದರೆ ಜಿಂಕೆ. ಬೇಟೆಗಾರನ ಬಿಲ್ಲಿಗೆ ಕಟ್ಟಿರುವ ದಾರದಿಂದ ಅವನು ಒಂದು ರೀತಿಯ ಶಬ್ದವನ್ನು ಮಾಡುತ್ತಾನೆ. ಅದು ಜಿಂಕೆಯ ಕಿವಿಗೆ ಬಹಳ ಆಪ್ಯಾಯಮಾನ. ಅದನ್ನು ಕೇಳುವುದಕ್ಕೆಂದೇ, ಕೇಳಿ ಆನಂದಿಸಲೆಂದೇ ಅದು ಒಂದು ಕಡೆಗೆ ನಿಂತು ಆಲಿಸಲಾರಂಭಿಸುತ್ತದೆ. ಆಲಿಸುತ್ತಾ ಮೈಮರೆಯುತ್ತದೆ. ಈ ಕ್ಷಣಕ್ಕಾಗಿಯೇ ಕಾಯುತ್ತಿದ್ದ ಬೇಟೆಗಾರ ಬಾಣ ಹೂಡಿ ಜಿಂಕೆಯನ್ನು ಕೊಲ್ಲುತ್ತಾನೆ. ಬಿಲ್ಲಿನ ಹೆದೆಯ ಶಬ್ದವೇ ಅದಕ್ಕೆ ಮೃತ್ಯುವನ್ನು ತಂದಿತು. ಮಾತಂಗ ಎಂದರೆ ಆನೆ. ಹೆಣ್ಣು ಆನೆಯ ಸ್ಪರ್ಶಕ್ಕಾಗಿ ಹಾತೊರೆಯುವ ಗಂಡು ಆನೆಯ ದೌರ್ಬಲ್ಯವನ್ನೇ ಉಪಯೋಗಿಸಿಕೊಂಡು ಅದನ್ನು ಹಳ್ಳಕ್ಕೆ ತಳ್ಳಿ ಪಳಗಿಸುತ್ತಾರೆ. ಒಲೆ ಉರಿಯುತ್ತಿರುವಾಗ ಅದರ ಜ್ವಾಲೆಗಳು ಕುಣಿಯುತ್ತಿರುವಂತೆ ಭಾಸವಾಗುತ್ತವೆ. ಪತಂಗಕ್ಕೆ ಕುಣಿಯುವ ಜ್ವಾಲೆಯೊಂದಿಗೆ ಸೇರಿ ತಾನೂ ಕುಣಿಯಬೇಕೆಂಬ ತೀವ್ರ ಹಂಬಲ. ಆದ್ದರಿಂದ ಎಲ್ಲೋ ಇದ್ದ ಪತಂಗ ಒಮ್ಮೆಲೆ ಒಲೆಯ ಕಡೆಗೆ ಹಾರಿ ಜ್ವಾಲೆಗಳ ಒಳಗೆ ನುಗ್ಗುತ್ತದೆ. ಅಲ್ಲಿಯೇ ಸುಟ್ಟು ಭಸ್ಮವಾಗುತ್ತದೆ. ಎರೆಹುಳುಗಳು ಮೀನಿಗೆ ಬಹಳ ರುಚಿ! ಈ ದೌರ್ಬಲ್ಯವನ್ನು ಅರಿತ ಬೆಸ್ತನು ಗಾಳದ ತುದಿಗೆ ಅದನ್ನು ಕಟ್ಟಿ ಮೀನನ್ನು ಸುಲಭವಾಗಿ ನೀರಿನಿಂದೆತ್ತಿ ಮುಂದೆ ಜಠರಕ್ಕೆ ಇಳಿಸುತ್ತಾನೆ. ಇನ್ನು ಭೃಂಗದ ಕಥೆ. ಕಮಲದ ಹೂವಿನೆಡೆಗೆ ಇನ್ನಿಲ್ಲದ ಆಕರ್ಷಣೆ ಭೃಂಗಕ್ಕೆ. ಅದೇ ರೀತಿ ಮೂಡಣದಲ್ಲಿ ರವಿ ಮೂಡಿದರೆ ಹಿಗ್ಗಿದ ಕಮಲ ಇನ್ನು ಮೊಗ್ಗಾಗಿಯೇ ಉಳಿಯಲಾರದು. ಅರಳಿ ನಿಲ್ಲುವುದೇ ಅದರ ಕೆಲಸ. ಅರಳಿದ ಕಮಲದ ಮಡಿಲಲ್ಲಿ ವಿರಮಿಸಿ ಆನಂದಿಸುವ ತವಕ ಭೃಂಗಕ್ಕೆ. ಅಲ್ಲಿ ಕುಳಿತ ಸಂಭ್ರಮದಲ್ಲಿ ಕಾಲದ ಪರಿವೆಯೇ ಇಲ್ಲ ಅದಕ್ಕೆ. ಸಂಜೆಯಾಯಿತು. ಸೂರ್ಯ ಮುಳುಗಿದ. ಕಮಲ ತನ್ನ ದಳಗಳನ್ನು ಮುದುರಿಕೊಂಡುಬಿಟ್ಟಿತು. ಭೃಂಗ ಅಲ್ಲಿಯೇ ಸೆರೆಯಾಗಿಬಿಟ್ಟಿತು. ಹೊರಕ್ಕೆ ಇನ್ನು ಬರಲಾರದು ಅದು. ಚಿಂತೆಯಿಲ್ಲ! ನಾಳೆ ಮತ್ತೆ ಸೂರ್ಯ ಬರುವನು. ಅರವಿಂದ ಮತ್ತೊಮ್ಮೆ ಅರಳುತ್ತದೆ. ಹೊರಕ್ಕೆ ಹೋದರಾಯಿತು ಎಂದು ಯೋಚಿಸಿದ ಭೃಂಗ ನಿಶ್ಚಿಂತೆಯಿಂದ ಅಲ್ಲೇ ಉಳಿಯಿತು, ಆದರೆ ರಾತ್ರಿ ಆನೆಯ ಹಿಂಡೊಂದು ಸರೋವರವನ್ನು ಪ್ರವೇಶಿಸಿ ಜಲಕ್ರೀಡೆಯಾಡುವ ಸಂಭ್ರಮದಲ್ಲಿ ಈ ಕಮಲದ ದಂಟುಗಳನ್ನು ಕಿತ್ತು ಬಿಸಾಡಿತು. ಮುದುಡಿದ ಹೂವು ಅರಳಲೇ ಇಲ್ಲ. ಏಕೆಂದರೆ ಈಗ ಅದು ನಿರ್ಜೀವ. ಒಳಗೆ ಬಂದಿಯಾದ ಭೃಂಗವೂ ನಿರ್ಜೀವ. ಮೃತ್ಯುವಿನ ದವಡೆಯಲ್ಲಿ ಬಂಧನ. ಅರಳಿದ ಕಮಲದಲ್ಲಿ ಮೃತ್ಯು ಅಡಗಿದ್ದಾನೆ ಎನ್ನುವುದು ತಿಳಿಯಲೇ ಇಲ್ಲ ಭೃಂಗಕ್ಕೆ. ಕಿವಿಗೆ ಇಂಪಾದ ಧ್ವನಿ ಜಿಂಕೆಗೆ, ಹೆಣ್ಣಾನೆಯ ಸ್ಪರ್ಶ ಸುಖ ಆನೆಗೆ, ಕುಣಿಯುವ ಜ್ವಾಲೆ ಪತಂಗಕ್ಕೆ, ರುಚಿಯಾದ ಎರೆಹುಳು ಮೀನಿಗೆ, ಅರಳಿದ ಕಮಲ ಭೃಂಗಕ್ಕೆ ಮೃತ್ಯುವಿತ್ತ ಆಹ್ವಾನವೇ ಆಗಿತ್ತು.