ನಿಸ್ವಾರ್ಥ, ತ್ಯಾಗವೇ ಸದ್ಗುಣಗಳ ಪರಾಕಾಷ್ಠೆ

ಸ್ವಾಮಿ ವಿವೇಕಾನಂದರು ಬೋಧಿಸುವ ಕರ್ಮಯೋಗದ ಪಲ್ಲವಿಯೇ, ‘ಸ್ವಾರ್ಥವನ್ನು ಬೇರುಸಹಿತ ಕಿತ್ತೊಗೆಯಿರಿ. ನಿಮ್ಮ ಜೀವನದಲ್ಲಿ ಮಾಡಬೇಕಾದ ಕೆಲಸವನ್ನು ಮಾಡಿ ಮುಕ್ತರಾಗಿ.’ ಈ ಆದರ್ಶದ ಆಳವನ್ನು ನಮಗೆ ಮನದಟ್ಟಾಗಿಸುವ ಒಂದು ಹೃದಯರ್ಶಿ ಕಥೆಯತ್ತ ಈಗ ಗಮನಹರಿಸೋಣ.
Representative image
ಸಾಂದರ್ಭಿಕ ಚಿತ್ರ
Published on
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ಸ್ವಾಮಿ ವಿವೇಕಾನಂದರು ಬೋಧಿಸುವ ಕರ್ಮಯೋಗದ ಪಲ್ಲವಿಯೇ, ‘ಸ್ವಾರ್ಥವನ್ನು ಬೇರುಸಹಿತ ಕಿತ್ತೊಗೆಯಿರಿ. ನಿಮ್ಮ ಜೀವನದಲ್ಲಿ ಮಾಡಬೇಕಾದ ಕೆಲಸವನ್ನು ಮಾಡಿ ಮುಕ್ತರಾಗಿ.’ ಈ ಆದರ್ಶದ ಆಳವನ್ನು ನಮಗೆ ಮನದಟ್ಟಾಗಿಸುವ ಒಂದು ಹೃದಯರ್ಶಿ ಕಥೆಯತ್ತ ಈಗ ಗಮನಹರಿಸೋಣ.

ಒಬ್ಬ ಕಳ್ಳನಿದ್ದ. ಅವನು ಕದಿಯುವುದು, ಇತರರನ್ನು ಪೀಡಿಸುವುದು, ಇದರಲ್ಲೇ ಕಾಲ ಕಳೆಯುತ್ತಿದ್ದ. ಅತ್ಯಂತ ಪಾಪಕರ ಕೆಲಸ ಮಾಡುವುದಕ್ಕೂ ಹಿಂಜರಿಯುತ್ತಿರಲಿಲ್ಲ. ಅವನಲ್ಲಿ ಪಶ್ಚಾತ್ತಾಪವೇ ಇರಲಿಲ್ಲ. ಆದರೆ ಆ ಮನುಷ್ಯ ತನ್ನ ಹೆಂಡತಿ ಮಕ್ಕಳನ್ನು ತುಂಬ ಪ್ರೀತಿಸುತ್ತಿದ್ದ. ಒಮ್ಮೆ ವಿಪತ್ತಿನಲ್ಲಿ ಅವನು ತನ್ನ ಹೆಂಡತಿ ಮಕ್ಕಳನ್ನೆಲ್ಲ ಕಳೆದುಕೊಂಡು ಏಕಾಂಗಿಯಾದ. ಹಿಂದೆ ಮಾಡಿದ ಪಾಪಕೃತ್ಯಗಳ ನೆನಪೊಂದೇ ಈಗ ಅವನ ಸ್ನೇಹಿತರಾಗಿದ್ದವು. ಅಕಸ್ಮಾತ್ ಆದ ವಿಪತ್ತಿನಿಂದ ಒಂದು ಘಟನೆ ಜರುಗಿತು. ಅವನನ್ನು ಅದು ಅಂತಮುಖಿಯನ್ನಾಗಿ ಮಾಡಿತು. ಆದರೆ ಅಲ್ಲಿ ಅಂಧಕಾರದಿಂದ ಆವೃತವಾದ ಅಂಧಕಾರವಲ್ಲದೆ ಬೇರೇನೂ ಇರಲಿಲ್ಲ. ಆಗ ಅವನಿಗೆ ತಾನು ಮಾಡಿದ್ದು ಪಾಪ ಎಂದು ಪಶ್ಚಾತ್ತಾಪವಾಯಿತು.

ಅವನಿಗೆ ತಾನು ಮಾಡಿದ ಐವತ್ತೆರಡು ಕೊಲೆಗಳ ನೆನಪಾಯಿತು. ಇಂತಹ ಮಹಾಪಾಪದಿಂದ ಪಾರಾಗುವುದು ಹೇಗೆ ಎಂದು ಆಲೋಚಿಸಿದ. ಯಾರಾದರೂ ಸಾಧುಗಳ ಹತ್ತಿರ ಹೋಗಿ ಎಲ್ಲವನ್ನೂ ಹೇಳಿಕೊಳ್ಳೋಣ ಎಂದು ಭಾವಿಸಿ, ಒಬ್ಬ ಸಾಧುವಿನ ಆಶ್ರಮಕ್ಕೆ ಬಂದ. ಮನಸ್ಸಿನಲ್ಲಿದ್ದುದನ್ನೆಲ್ಲ ಹೇಳಿದ. ಸಾಧು ಅವನಿಗೆ ತನ್ನ ಆಶ್ರಮದಲ್ಲಿಯೇ ಇರುವಂತೆ ಹೇಳಿದ. ಅಲ್ಲೇ ಇರುವ ಇತರ ಸಾಧುಗಳಿಗೆ ಸೇವೆ ಮಾಡುವಂತೆ ಹೇಳಿದ. ಸಾಧುಸಂಗದಿಂದ ಆತ ಕ್ರಮೇಣ ಉತ್ತಮನಾದ. ಆದರೆ ತನ್ನ ಪಾಪವೆಲ್ಲ ಬಿಟ್ಟುಹೋಗಿದೆ ಎಂದು ನಂಬಲಾಗಲಿಲ್ಲ. ಸಾಧುವಿನ ಮೇಲೆ ಅವನಿಗೆ ಬಹಳ ಗೌರವ ಇತ್ತು. ಅವನು ಸಾಧುವಿನ ಪ್ರೇಮವನ್ನು ಅನುಮಾನಿಸಲಿಲ್ಲ, ಆದರೆ ತನ್ನ ಪಾಪದಿಂದ ಪಾರಾಗಬೇಕೆಂದು ಆಲೋಚಿಸಿದ. ಇದಕ್ಕಾಗಿ ಅವನು ಸಾಧುವನ್ನು ಕುರಿತು ತಾನು ತೀರ್ಥಯಾತ್ರೆ ಮಾಡಿ, ಪವಿತ್ರ ನದಿಯಲ್ಲಿ ಮಿಂದು ತನ್ನ ಪಾಪವನ್ನು ಕಳೆದುಕೊಳ್ಳುತ್ತೇನೆ ಎಂದು ಕೇಳಿದ.

ಸಾಧು ತಕ್ಷಣವೇ ಒಪ್ಪಿಕೊಂಡ. ಒಂದು ಕಪ್ಪು ಬಾವುಟ ಕೊಟ್ಟು, ‘ಮಗು, ಇದನ್ನು ತೆಗೆದುಕೊಂಡು ಹೋಗು. ಇದರಲ್ಲಿ ನಿನ್ನ ಪಾಪಗಳೆಲ್ಲ ಇವೆ. ಇದು ಬಿಳಿಯಾದಾಗ, ನೀನು ಎಲ್ಲ ಪಾಪಗಳಿಂದಲೂ ಮುಕ್ತನಾದೆ ಎಂದರ್ಥ. ನೀನು ಹಿಮದಂತೆ ಪರಿಶುದ್ಧನಾಗಿ ಬಾ’ ಎಂದ. ಕಳ್ಳ, ಎಲ್ಲ ತೀರ್ಥಸ್ಥಳಗಳಿಗೆ ಹೋಗಿ ಪೂಜೆ ಮಾಡಿದ. ಎಲ್ಲ ಪವಿತ್ರ ನದಿಗಳಲ್ಲಿಯೂ ಸ್ನಾನ ಮಾಡಿದ. ಪ್ರತಿ ಬಾರಿಯೂ ತನ್ನ ಗಂಟಿನಲ್ಲಿದ್ದ ಕಪ್ಪು ಬಾವುಟ ತೆಗೆದು ನೋಡುತ್ತಿದ್ದ. ಆದರೆ ಅದು ಎಂದಿನಂತೆಯೇ ಕಪ್ಪಾಗಿಯೇ ಇರುತ್ತಿತ್ತು.

ಇನ್ನು ಯಾವ ತೀರ್ಥಸ್ಥಳವೂ ಇಲ್ಲ, ಪ್ರಾಯಶ್ಚಿತ್ತ ಕರ್ಮವೂ ಇಲ್ಲ ಎಂದು ಗೊತ್ತಾದ ಮೇಲೆ, ಕೊರಗುತ್ತ ಸಾಧುವಿಗೆ ಕೊನೆಗಾಲದವರೆಗೆ ಸೇವೆ ಮಾಡಿಕೊಂಡಿರೋಣ ಎಂದು ಗುರುವಿನ ಪರ್ಣಶಾಲೆಗೆ ಹಿಂತಿರುಗಲು ತೀರ್ವನಿಸಿದ. ಆಶ್ರಮ ಸನಿಹವಾಗುತ್ತಿದ್ದಂತೆಯೇ ರಾತ್ರಿಯಾದ್ದರಿಂದ ಅಲ್ಲಿ ಹೋಗಿ ಅವರಿಗೆ ತೊಂದರೆ ಕೊಡಲು ಇಚ್ಛಿಸಲಿಲ್ಲ. ಸುತ್ತಲೂ ಪ್ರಶಾಂತ ವಾತಾವರಣವಿತ್ತು. ಗಂಭೀರವಾದ ರಾತ್ರಿಯಲ್ಲಿ ಎಲ್ಲ ಕಡೆಯೂ ಸೌಂದರ್ಯವಿತ್ತು. ತನ್ನ ಪಾಪದ ಹೃದಯಾಂತರಾಳದಲ್ಲಿ ಮಾತ್ರ ಆ ಶಾಂತಿ ಇರಲಿಲ್ಲ. ಅದನ್ನು ನೆನಸಿಕೊಂಡು ಕಣ್ಣೀರು ಸುರಿಸಿದ.

ಇದ್ದಕ್ಕಿದ್ದಂತೆಯೇ ಮೌನಭಂಗವಾಯಿತು. ಕಷ್ಟದಲ್ಲಿ ಸಿಕ್ಕಿದ ಹೆಂಗಸಿನ ಆರ್ತನಾದ ಕೇಳಿಸಿತು. ಶಬ್ದ ಬಂದ ಕಡೆ ಓಡಿದ. ಆ ಬಯಲಿನಲ್ಲಿ ಕಂಡ ದೃಶ್ಯದಿಂದ ಅವನ ರಕ್ತವೆಲ್ಲ ಹೆಪ್ಪುಗಟ್ಟಿತು. ಮೂವರು ಪುಂಡರು ಒಬ್ಬ ಹೆಂಗಸನ್ನು ಹಿಂಸಿಸುತ್ತಿದ್ದರು. ಅದನ್ನು ನೋಡಿ ಇವನು ಆಲೋಚನೆ ಮಾಡಿದ. ‘ನಾನು ಈ ಮೂವರನ್ನು ಒಬ್ಬನೇ ಎದುರಿಸಲು ಸಾಧ್ಯವೇ? ಇವರಲ್ಲಿ ಯಾರಾದರೂ ಒಬ್ಬನಿಗೆ ಪೆಟ್ಟು ಬಿದ್ದು ಸತ್ತರೂ ಉಳಿದ ಇಬ್ಬರು ಓಡಿ ಹೋಗಬಹುದು. ಒಂದು ವೇಳೆ ಓಡಿಹೋಗದೆ ನನ್ನ ಮೇಲೆ ಬಿದ್ದರೆ, ನನ್ನ ಹಿಂದಿನ ಅಭ್ಯಾಸಬಲದಿಂದ ಹೋರಾಡುವುದಕ್ಕೆ ಆಗುವುದಿಲ್ಲವೆ?’

ಆದರೆ ಮತ್ತೊಂದು ಆಲೋಚನೆ ಬಂತು. ‘ಒಬ್ಬನೊ, ಇಬ್ಬರೊ, ಮೂವರನ್ನೊ ಕೊಂದು ಈ ಹೆಂಗಸನ್ನು ಬಿಡಿಸಿದರೆ ಇವಳೇನೊ ಕಷ್ಟದಿಂದ ಪಾರಾಗುತ್ತಾಳೆ, ಆದರೆ ನನ್ನ ಪಾಡೇನು? ನಾನಾಗಲೇ ಐವತ್ತೆರಡು ಕೊಲೆ ಮಾಡಿದ್ದೇನೆ. ಇನ್ನು ಮೂರು ಕೊಲೆಗಳ ಭಾರ...’ ಆಲೋಚನೆ ಮಾಡುವುದಕ್ಕೆ ಹೆಚ್ಚು ಕಾಲವಿರಲಿಲ್ಲ. ‘ನಾನು ನರಕಕ್ಕೆ ಹೋದರೂ ಚಿಂತೆಯಿಲ್ಲ. ಇವಳನ್ನು ಬಿಡುಗಡೆ ಮಾಡುತ್ತೇನೆ’ ಎಂದ. ಯಾವಾಗ ತನ್ನ ಸ್ವಾರ್ಥ ಕಿತ್ತು ಆಚೆಗೆಸೆದನೊ ಅವನಿಗೆ ಇಪ್ಪತ್ತು ಸಿಂಹಗಳ ಶಕ್ತಿ ಬಂದಂತಾಯಿತು. ಒಬ್ಬನ ಮೇಲೆ ಬಿದ್ದು ಪ್ರಾಣ ಹೋಗುವಂತೆ ಹೊಡೆದ. ಉಳಿದಿಬ್ಬರು ಓಡಿ ಹೋದರು. ಆ ಹೆಂಗಸು ಇವನ ಕೈಗಳಲ್ಲಿ ಪ್ರಜ್ಞೆ ತಪ್ಪಿ ಬಿದ್ದಳು.

ಮಾರನೆ ದಿನ ಬೆಳಗ್ಗೆ ನಡುಗುತ್ತಿದ್ದ ಹೆಂಗಸನ್ನು ಆಶ್ರಮಕ್ಕೆ ಕರೆದುಕೊಂಡು ಹೋದ. ಸಾಧು ಸಹೋದರರು ಇವನನ್ನು ಸ್ವಾಗತಿಸಿದರು. ಅವರಿಗೆ ಆಶ್ಚರ್ಯವಾದರೂ ಯಾವುದೇ ಪ್ರಶ್ನೆ ಕೇಳಲಿಲ್ಲ. ಹೆಂಗಸಿಗೆ ವಿಶ್ರಾಮಕ್ಕೆ ಅನುಕೂಲ ಮಾಡಿಕೊಟ್ಟರು. ಕಳ್ಳನೂ ಕೆಲಕಾಲ ವಿಶ್ರಮಿಸಿ, ಅನಂತರ ಸಾಧುವಿನ ಪದತಳದಲ್ಲಿ ಕುಳಿತು ಹಿಂದಿನ ರಾತ್ರಿ ನಡೆದ ಘಟನೆ ವಿವರಿಸಿದ. ಎಲ್ಲರಿಗೂ ಇವನು ಶುದ್ಧನಾಗಿ ಸ್ವತಂತ್ರನಾಗಿ ಇರುವುದು ಕಂಡುಬಂತು. ಅವನ ಯಾತ್ರೆ ಮತ್ತು ಕಪ್ಪು ಬಾವುಟದ ವಿಷಯ ಕೇಳಿದಾಗ ‘ಆ ಕೆಲಸಕ್ಕೆ ಬಾರದ ವಿಷಯ ಕುರಿತು ಚಿಂತಿಸುತ್ತಿಲ್ಲ’ ಎಂದ. ಅನಂತರ ಅವನು ಗುರುಗಳಿಗೆ, ‘ತೆಗೆದುಕೊಳ್ಳಿ ಗುರುಗಳೇ, ನಿಮ್ಮ ಕಪ್ಪು ಬಾವುಟ. ಅದು ಇನ್ನೂ ಕಪ್ಪಾಗಿಯೇ ಇದೆ. ಅದನ್ನು ನಾನು ಗಮನಿಸುವುದೇ ಇಲ್ಲ. ಇಲ್ಲಿ ನಾನು ಸಾಯುವ ಪರ್ಯಂತ ಇರುತ್ತೇನೆ’ ಎಂದ. ಬಾವುಟ ತೆಗೆಯುವುದಕ್ಕೆ ತನ್ನ ಗಂಟಿಗೆ ಕೈಹಾಕಿದ. ಕಪ್ಪು ಬಾವುಟ ಈಗ ಹಿಮದಂತೆ ಬೆಳ್ಳಗಾಗಿತ್ತು. ಅದನ್ನು ನೋಡಿದಾಗ ಅವನಿಗೇನೂ ಅನ್ನಿಸಲಿಲ್ಲ. ‘ಕಪ್ಪೋ ಬಿಳಿಯೋ ಅದನ್ನು ನಿಮ್ಮ ಅಡಿದಾವರೆಗೆ ಸಮರ್ಪಿಸುವೆ. ನಾನು ನನ್ನನ್ನೇ ಮರೆತಿರುವೆ. ನನಗೆ ಮುಂದೆ ಏನಾಗುವುದೋ ಅದನ್ನು ಕುರಿತು ಚಿಂತಿಸುವುದಿಲ್ಲ. ಬದುಕಿರುವತನಕ ನಿಮ್ಮ ಸೇವೆ ಮಾಡುವೆ’ ಎಂದ.

ಆಗ ಸಾಧು ಹೀಗೆಂದ- ‘ಎಲ್ಲಿಯವರೆಗೆ ಒಬ್ಬ ತನ್ನ ಪುಣ್ಯಕ್ಕಾಗಿ ಆಸೆ ಪಡುವನೊ, ಅಲ್ಲಿಯವರೆಗೆ ಅವನು ಪಾಪದಿಂದ ಹೇಗೆ ಪಾರಾದಾನು? ಅವರೆಡೂ ಒಂದೇ ನಾಣ್ಯದ ಎರಡು ಮುಖಗಳಂತೆ, ಒಂದನ್ನು ಸ್ವೀಕರಿಸಿದರೆ ಮತ್ತೊಂದನ್ನೂ ಸ್ವೀಕರಿಸಬೇಕಾಗುವುದು. ಎಲ್ಲಿಯವರೆಗೆ ನೀನು ಪುಣ್ಯಕರ್ಮಫಲಕ್ಕೆ ಆಸಕ್ತನಾಗಿದ್ದೆಯೋ, ಅಲ್ಲಿಯವರೆಗೆ ಕಪ್ಪು ಬಾವುಟ ಬಿಳಿ ಆಗಲಿಲ್ಲ. ಎಷ್ಟು ನದಿಗಳಲ್ಲಿ ಮಿಂದರೂ, ಪೂಜೆ ಮಾಡಿದರೂ, ಕಪ್ಪು ಬಾವುಟ ಬಿಳಿ ಆಗಲಿಲ್ಲ. ನೀನು ಸ್ವಲ್ಪ ಉತ್ತಮ ಸಂಸ್ಕಾರವನ್ನೇನೋ ಸಂಗ್ರಹಿಸಿರಬಹುದು. ಯಾವಾಗ ನೀನು ದೇವರ ದಯೆಯಿಂದ ಪುಣ್ಯಕರ್ಮದ ವಶದಿಂದಲೂ ಪಾರಾದೆಯೊ, ಆಗ ಕರ್ಮದಿಂದ ಪಾರಾಗಿ ಮುಕ್ತನಾದೆ.’ ಮುಂದುವರೆದು ‘ವತ್ಸ, ಪಾವಿತ್ರ್ಯ ಮತ್ತು ಸ್ವಾತಂತ್ರ್ಯಗಳು ನಿಃಸ್ವಾರ್ಥವಲ್ಲದೆ ಬೇರೇನೂ ಅಲ್ಲ. ಸ್ವಾರ್ಥತ್ಯಾಗವೇ ನಿರ್ಭಯ. ನಿರ್ಭಯವೇ ಪುಣ್ಯ’ ಎಂದು ಬೋಧಿಸಿದ.

ನಿಸ್ವಾರ್ಥ ಎಂಬ ಮೌಲ್ಯವನ್ನು ಎತ್ತಿ ಹಿಡಿಯುವ ಭರ್ತೃಹರಿಯ ನೀತಿ ಶತಕದ ಶ್ಲೋಕವನ್ನು ಈ ಸಂದರ್ಭದಲ್ಲಿ ಉದ್ಧರಿಸುವುದು ಸೂಕ್ತವೆನಿಸುತ್ತದೆ.

ಏತೇ ಸತ್ಪುರುಷಾಃ ಪರಾರ್ಥಘಟಕಾಃ ಸ್ವಾರ್ಥಾನ್ ಪರಿತ್ಯಜ್ಯ ಯೇ |

ಸಾಮಾನ್ಯಾಸ್ತು ಪರಾರ್ಥಮುದ್ಯಮಭೃತಃ ಸ್ವಾರ್ಥಾನವಿರೋಧೇನ ಯೇ |

ತೇಮೀ ಮಾನುಷರಾಕ್ಷಸಾಃ ಪರಹಿತಂ ಸ್ವಾರ್ಥಾಯ ನಿಘ್ನಂತಿ ಯೇ |

ಯೇ ತು ಘ್ನಂತಿ ನಿರರ್ಥಕಂ ಪರಹಿತಂ ತೇ ಕೇ ನ ಜಾನೀಮಹೇ |

ಭರ್ತೃಹರಿಯು ಮನುಷ್ಯರನ್ನು ಅವರ ಪರಾರ್ಥಭಾವನೆಯ ಆಧಾರದ ಮೇಲೆ ನಾಲ್ಕು ರೀತಿಯಲ್ಲಿ ವಿಂಗಡಿಸುತ್ತಾನೆ. ಮೊದಲನೆಯವರು ಸತ್ಪುರುಷರು. ತಮ್ಮ ಸ್ವಾರ್ಥವನ್ನೇ ಬದಿಗೊತ್ತಿ, ಇತರರ ಹಿತಕ್ಕಾಗಿ ಬದುಕುವವರು. ಎರಡನೆಯವರು ಸಾಮಾನ್ಯರು. ತಮ್ಮ ಸ್ವಾರ್ಥಕ್ಕೆ ತೊಂದರೆಯಾಗದಿದ್ದರೆ ಇತರರ ಹಿತಕ್ಕಾಗಿ ಕೆಲಸ ಮಾಡುವವರು. ಮೂರನೆಯವರು ಮಾನುಷರಾಕ್ಷಸರು. ತಮ್ಮ ಸ್ವಾರ್ಥವನ್ನು ಸಾಧಿಸುವುದಕ್ಕಾಗಿ ಇತರರಿಗೆ ಹಾನಿ ಮಾಡುವವರು. ನಾಲ್ಕನೆಯವರು ಯಾವುದೇ ಸ್ವಾರ್ಥವೂ ಇಲ್ಲದೆ, ಕಾರಣವೂ ಇಲ್ಲದೆ, ಕೇವಲ ಇತರರ ಹಿತಕ್ಕೆ ಅಡ್ಡಿಪಡಿಸುವವರು. ಇವರನ್ನು ಯಾವ ವರ್ಗಕ್ಕೆ ಸೇರಿಸಬೇಕು ಎಂಬುದೇ ತಿಳಿಯದು ಎಂದು ಭರ್ತೃಹರಿ ವ್ಯಂಗ್ಯವಾಗಿ ಹೇಳುತ್ತಾರೆ.

ನಿಸ್ವಾರ್ಥವೆಂಬ ಮೌಲ್ಯವು ನಮ್ಮ ಸಂಸ್ಕೃತಿಯಲ್ಲಿಯೇ ಹಾಸುಹೊಕ್ಕಾಗಿ ಬೆರೆತುಹೋಗಿದೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿ ನಿಲ್ಲುವುದು ಮಹಾಭಾರತದ ಈ ಎರಡು ಕಥನಗಳು. ಮಹರ್ಷಿ ದಧೀಚಿಯ ಕಥೆ ಹಾಗೂ ರಾಜಾ ರಂತಿದೇವನ ಕಥೆ. ವೃತ್ರಾಸುರನೆಂಬ ರಾಕ್ಷಸನನ್ನು ಕೊಲ್ಲಲು ದೇವತೆಗಳಿಗೆ ದಧೀಚಿ ಮಹರ್ಷಿ ತನ್ನ ಬೆನ್ನುಮೂಳೆಗಳಿಂದ ವಜ್ರಾಯುಧ ನಿರ್ವಿುಸುವ ಪ್ರಸಂಗ ಒದಗಿಬಂದಾಗ ಲೋಕ ಕಲ್ಯಾಣಕ್ಕಾಗಿ ತನ್ನ ದೇಹವನ್ನೇ ಅರ್ಪಿಸಲು ಸಿದ್ಧನಾದ.

ರಾಜಾರಂತಿದೇವನು ದಾನಶೀಲತೆ ಮತ್ತು ಕರುಣೆಗೆ ಪ್ರಸಿದ್ಧನಾಗಿದ್ದ. ಒಮ್ಮೆ ಅವನು 48 ದಿನ ಆಹಾರವಿಲ್ಲದೆ ಉಪವಾಸದಲ್ಲಿದ್ದ. ಕೊನೆಗೆ ಸ್ವಲ್ಪ ಆಹಾರ, ನೀರು ದೊರಕಿತು. ಅವನು ಆಹಾರ ಸೇವಿಸಲು ಕುಳಿತಾಗ ಒಬ್ಬ ಹಸಿದ ಬ್ರಾಹ್ಮಣ ಬಂದ. ರಂತಿದೇವ ತನ್ನ ಪಾಲಿನ ಆಹಾರದಲ್ಲಿ ಒಂದು ಭಾಗವನ್ನು ಅವನಿಗೆ ಕೊಟ್ಟ. ನಂತರ ಮತ್ತೊಬ್ಬ ಹಸಿದ ವ್ಯಕ್ತಿ ಬಂದಾಗ, ಅವನಿಗೂ ತನ್ನಲ್ಲಿದ್ದ ಆಹಾರವನ್ನು ಹಂಚಿದ. ಕೊನೆಗೆ, ತೀವ್ರ ದಾಹದಿಂದ ಬಳಲುತ್ತಿದ್ದ ವ್ಯಕ್ತಿ ನೀರಿಗಾಗಿ ಬಂದ. ಆಗ ರಂತಿದೇವನ ಬಳಿ ಉಳಿದಿದ್ದು ಸ್ವಲ್ಪ ನೀರು ಮಾತ್ರ. ತಾನೇ 48 ದಿನಗಳಿಂದ ಉಪವಾಸದಲ್ಲಿದ್ದರೂ, ಆ ನೀರನ್ನೂ ಆ ವ್ಯಕ್ತಿಗೆ ನೀಡಿದ. ಈ ಎರಡು ಘಟನೆಗಳು ನಿಸ್ವಾರ್ಥದ ಅತ್ಯಂತ ಸುಂದರ ಆದರ್ಶ. ತನ್ನಲ್ಲಿರುವುದನ್ನು ಕೊಡುವುದು ಮಾತ್ರವಲ್ಲ; ತನ್ನ ಅಗತ್ಯವನ್ನೂ ಮರೆತು ಮತ್ತೊಬ್ಬರ ಅಗತ್ಯಕ್ಕೆ ಆದ್ಯತೆ ನೀಡುವುದು ನಿಸ್ವಾರ್ಥ ಸೇವೆಯ ಪರಾಕಾಷ್ಠೆ.

ದಧೀಚಿಯಂತೆ ತನ್ನ ದೇಹವನ್ನೇ ಅರ್ಪಿಸುವ ತ್ಯಾಗವಾಗಲಿ, ರಂತಿದೇವನಂತೆ ತನ್ನ ಹಸಿವು-ದಾಹವನ್ನೂ ಮರೆತು ಪರರ ದುಃಖವನ್ನು ನೀಗಿಸುವ ಕರುಣೆಯಾಗಲಿ ಸ್ವಾಮಿ ವಿವೇಕಾನಂದರು ಮೊಳಗಿಸಿದ ದುಂದುಭಿಯ ನಾದದಲ್ಲಿ ಪ್ರತಿಧ್ವನಿಸಿದ ತ್ಯಾಗ ಮತ್ತು ಸೇವೆ ಎಂಬ ಅವಳಿ ಆದರ್ಶಗಳಾಗಲಿ, ಈ ಎಲ್ಲ ಮೌಲ್ಯಗಳೂ ನಿಃಸ್ವಾರ್ಥದ ಪಾವನ ತಳಹದಿಯ ಮೇಲೆ ಮಾನವ ಜೀವನವನ್ನು ಕಟ್ಟುವ ಮಹಾಮಂತ್ರವಾಗಿವೆ. ಅದನ್ನೇ ಅವರು ನಮ್ಮ ಮೈಸೂರು ಮಹಾರಾಜರಿಗೆ ಬರೆದ ಪತ್ರದಲ್ಲಿ ‘ಪರರ ಹಿತಕ್ಕಾಗಿ ಬದುಕುವವರ ಬದುಕೇ ಸಾರ್ಥಕ ಬದುಕು; ಸ್ವಾರ್ಥಕ್ಕಾಗಿ ಬದುಕುವವರು ಬದುಕಿಯೂ ಸತ್ತಂತೆ’ ಎಂದು ಅದ್ಭುತವಾಗಿ ಉದ್ಘೋಷಿಸಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಸಾಕಷ್ಟು ಪ್ರಚುರದಲ್ಲಿದ್ದ, ಅನುಷ್ಠಾನದಲ್ಲಿದ್ದ ಇಂಥ ಮೌಲ್ಯಗಳು ಸ್ವಾತಂತ್ರೊ್ಯೕತ್ತರ ಭಾರತದಲ್ಲಿ, ವಿಶೇಷವಾಗಿ ಅಧಿಕಾರದಲ್ಲಿರುವವರಲ್ಲಿ ಅಪರೂಪವಾಗುತ್ತಿರುವುದು ಖೇದಕರ. ಇಂಥ ಮೌಲ್ಯಗಳು ಶೋಷಣೆಗೆ ಕಾರಣವಾಗುತ್ತವೆ ಎಂದು ಆರ್ತನಾದ ಮಾಡುವ ಭೂಪತಿಗಳಿಗೂ ಕೊರತೆ ಇಲ್ಲದಿರುವ ದಿನಗಳಲ್ಲಿ ನಾವು ಬದುಕುತ್ತಿದ್ದೇವೆ. ಇದೇನೂ ಒಳಿತಿನ ಲಕ್ಷಣವಲ್ಲ. ನಾಯಕ ವರ್ಗ ಈ ನಿಟ್ಟಿನಲ್ಲಿ ಬಹಳಷ್ಟು ಯೋಚಿಸಬೇಕಾಗಿದೆ; ಕಾರ್ಯಶೀಲವಾಗಬೇಕಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net