ಶಂಕರರು ಅವತರಿಸಿದ್ದು ಇಂತಹ ವಿಷಮ ಸಂದರ್ಭದಲ್ಲಿಯೇ

 It was at such a critical juncture that Shankara incarnated.
It was at such a critical juncture that Shankara incarnated.
Published on
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ಮಹಾನ್ ಚಿಂತಕ ಮ್ಯಾಕ್ಸ್ ಮುಲ್ಲರರನ್ನು ದಂಗುಬಡಿಸಿದ ಬುದ್ಧಪೂರ್ವ ಭಾರತದ ಅಧ್ಯಯನ, ಅನ್ವೇಷಣೆಗಳ ಸಾರವನ್ನು ಹೀಗೆ ಸಂಕ್ಷೇಪಿಸಬಹುದು
1. ಪ್ರತಿ ವಸ್ತುವೂ ಹುಟ್ಟು ಸಾವುಗಳಿಲ್ಲದ ಅನಂತ ಜ್ಞಾನವುಳ್ಳ, ಅಮಿತಾನಂದವುಳ್ಳ ‘ಆತ್ಮ’ ಅಥವಾ ಬ್ರಹ್ಮ ಎನ್ನುವ ಅತ್ಯಂತ ಮೂಲಸಾಮಗ್ರಿಯಿಂದ ಮಾಡಲ್ಪಟ್ಟಿದೆ ಅಥವಾ ಆ ಮೂಲಸಾಮಗ್ರಿಯೇ ಈ ವಿವಿಧ ವಸ್ತುಗಳನ್ನೊಳಗೊಂಡ ಪ್ರಪಂಚವಾಗಿ ವ್ಯಕ್ತವಾಗಿದೆ. ವ್ಯಕ್ತತೆಗೆ ಮುಂಚೆ ಅದು ಅನಂತವಾಗಿತ್ತು. ಆದ್ದರಿಂದ ಒಂದೇ ಆಗಿತ್ತು.
2. ಆ ಒಂದೇ ಆಗಿದ್ದ ಅನಂತವಸ್ತು ಇಂದು ಅನೇಕವಾಗಿದೆ. ಇದು ತಾರ್ಕಿಕವಾಗಿ ಸಾಧ್ಯವಿಲ್ಲದಿದ್ದರೂ (logical impossibility) ವಸ್ತುಸ್ಥಿತಿ ಹಾಗೆಯೇ (actual reality), ತಾರ್ಕಿಕವಾಗಿ ಸಾಧ್ಯವೋ ಅಸಾಧ್ಯವೋ, ವೈವಿಧ್ಯತೆಗಳಿಂದೊಡಗೂಡಿದ ಅನೇಕವಾಗಿ ಅದು ಮೂಡಿ ಬರದಿದ್ದರೆ ಸೃಷ್ಟಿಯೂ ಇರುವುದಿಲ್ಲ, ಪ್ರಪಂಚವೂ ಇರುವುದಿಲ್ಲ.
3. ತನ್ನಲ್ಲಿಯೇ ಇದ್ದ ಶಕ್ತಿಯೊಂದನ್ನು ಜಾಗೃತಗೊಳಿಸಿಕೊಂಡು ಅದರ ಪ್ರಭಾವದಿಂದ ತಾನೇ ಒಂದು ಸ್ವ-ಸಮ್ಮೋಹಿನಿಗೆ ಒಳಗಾಗಿ (self-hypnotization) ತನ್ನ ನಿಜಲಕ್ಷಣ ಮರೆತಿರುವಂತೆ, ತನ್ನ ಅನಂತತೆಯ, ಏಕತ್ವದ ಪರಿಚಯವೇ ಇಲ್ಲವೇನೋ ಎಂಬಂತೆ, ಎಲ್ಲ ಇತಿಮಿತಿಗಳಿಂದ ಕೂಡಿದ ಸಾಂತವಸ್ತುವೇ ತಾನಾಗಿಬಿಟ್ಟಿದ್ದೇನೆ ಎಂಬಂತೆ ವರ್ತಿಸುತ್ತಾ ಅನೇಕ ವಸ್ತುಗಳಾಗಿ ವಿಭಾಗಗೊಂಡಿದೆ (ಇದೇ ಸೃಷ್ಟಿಯ ವಿವರ). ಆರು ದರ್ಶನಗಳು ಇದನ್ನು ವರ್ಣಿಸಲು ನಿರ್ಮಿತವಾಗಿವೆ. ಅವುಗಳಲ್ಲಿ ಪ್ರಮುಖವಾದುದು ‘ಉತ್ತರ ಮೀಮಾಂಸ’ ಅಥವಾ (ವೇದಾಂತ). ಈ ಸ್ವಸಮ್ಮೋಹನದಿಂದ ಅನಂತವಸ್ತುವಿಗೇನೂ ತೊಂದರೆಯಿಲ್ಲ, ಆದರೆ ಯಾವ ಪ್ರಪಂಚವಾಗಿ ಅದು ಸೃಷ್ಟಿಗೊಂಡಿದೆಯೋ ಅದಕ್ಕೆ ತೊಂದರೆಯಿದೆ. ಶ್ರೀರಾಮಕೃಷ್ಣರು ಇದನ್ನು ತನ್ನ ಬಾಯಲ್ಲಿರುವ ವಿಷದಿಂದ ಹಾವಿಗೇನೂ ತೊಂದರೆಯಿಲ್ಲ, ಅದು ಯಾರಿಗೆ ಕಚ್ಚುತ್ತದೆಯೋ ಅವರಿಗೆ ತೊಂದರೆ ಎಂದು ಹೇಳುತ್ತಾರೆ.
4. ಅದು ಈ ರೀತಿ ಸೃಷ್ಟಿಯಾಗಿದ್ದರಿಂದ ಮೋಜು, ವಿಹಾರ, ಚಟುವಟಿಕೆ, ಏಳುಬೀಳು, ಸಾಹಿತ್ಯ, ಸಂಗೀತ, ವಿಜ್ಞಾನ, ಸ್ವರ್ಗ ಇವೆಲ್ಲ ಸಾಧ್ಯವಾಗಿದ್ದೇನೋ ನಿಜ. ಆದರೆ ಮಹಾನ್ ಶಕ್ತಿ, ಅದ್ಭುತ ಶಕ್ತಿ, ಮಿತಿಯಿಲ್ಲದ ಶಕ್ತಿ ಪಡೆಯಬೇಕೆಂದಿದ್ದರೆ ಮೂಲರೂಪದ ಏಕತ್ವಕ್ಕೇ ಹೋಗಬೇಕು.
5. ಈ ಅನೇಕವನ್ನು ಆಧಾರವಾಗಿ ಉಳ್ಳ ಪ್ರಪಂಚದಲ್ಲಿ ಮೋಜು, ಏಳುಬೀಳುಗಳು, ಬಣ್ಣಗಳು, ನಗು-ಕೇಕೆಗಳು, ಆಹಾರ-ವಿಹಾರಗಳು ಇದ್ದರೆ ಸೌಮ್ಯ, ಘನ, ಆಳ, ಅದ್ಭುತ ಮೌನ, ಆನಂದ ಸಾಗರವೇ ಏಕದಲ್ಲಿ ಇದೆ. ಏಕದಲ್ಲಿರುವ ಅದ್ಭುತ ಎಲ್ಲರಿಗೂ ಪರಿಚಯವಾಗುವುದು ಕಷ್ಟವೇ ಆದರೂ ಪ್ರತಿಯೊಬ್ಬರೂ ಈ ಏಕತೆಯ ಕಡೆಗೇ ಮುಂದುವರೆಯಬೇಕಾದದ್ದು ಅನಿವಾರ್ಯ. ವಸ್ತು-ವಸ್ತುಗಳು ಮತ್ತು ವ್ಯಕ್ತಿ-ವ್ಯಕ್ತಿಗಳು ಪರಸ್ಪರ ಆಕರ್ಷಿಸುವುದು, ಹಾಗೆಯೇ ಅಂತಿಮ ಹಂತದಲ್ಲಿ ವಸ್ತು, ವ್ಯಕ್ತಿ, ಶಕ್ತಿ, ಇಡೀ ವಿಶ್ವ ಒಂದೇ ಆಗುವುದು ಈ ಕಾರಣಕ್ಕಾಗಿಯೇ (John Earman ಅವರ Bangs Crunches Whimpers and Shricks ಮತ್ತು E. Einstein ಪುಸ್ತಕದ ಮುನ್ನುಡಿಯನ್ನು ನೋಡಿ). ಈ ಅನೇಕದ ಆಕರ್ಷಣೆ ಹಾಗೂ ಏಕತೆಯ ಅಗಾಧತೆ ಎಲ್ಲ ಕಾಲಕ್ಕೂ ಮನುಷ್ಯರನ್ನು ಎರಡು ಗುಂಪುಗಳನ್ನಾಗಿಸಿದೆ. ಈ ಅನೇಕತೆಯ ಉಚ್ಚತಮ ಆದರ್ಶ ಸ್ವರ್ಗ. ಏಕತೆಯ ಪರಮೋಚ್ಚ ಆದರ್ಶ ಮುಕ್ತಿ, ಮೋಕ್ಷ ಅಥವಾ ನಿರ್ವಾಣ.
ಇಹದಲ್ಲಿ ಸುಖ-ಭೋಗಗಳನ್ನು ಪರದಲ್ಲಿ ಸ್ವರ್ಗವನ್ನು ಕೊಡುವ ಪುಣ್ಯಕಾರ್ಯಗಳೇ, ಸಕಾಮ ಕರ್ಮಗಳೇ ಮನುಷ್ಯ ಜೀವನದ ಗುರಿ. ಇವೇ ಅವನ ಭವಿಷ್ಯದ ಬುನಾದಿ ಎಂದು ಭಗವದ್ಗೀತೆಯ ಕಾಲದಲ್ಲಿ ಪ್ರತಿಪಾದಿಸಿ ತಮ್ಮ ಪ್ರಾಧಾನ್ಯತೆಯನ್ನು ಮೆರೆಯಲು ಯತ್ನಿಸುತ್ತಿದ್ದ ಪೂರ್ವ ಮೀಮಾಂಸಕರಿಗೆ ಭಗವಾನ್ ಶ್ರೀಕೃಷ್ಣ ಗೀತೆಯಲ್ಲಿ ಚುರುಕು ಮುಟ್ಟಿಸುತ್ತ ‘ಇವರ ದೃಷ್ಟಿಕೋನ ಕಿರಿದು, ಇವರು ಅಲ್ಪತೃಪ್ತರು, ಕೃಪಣರು’ ಎಂದು ಅಸಮಾಧಾನಗೊಳ್ಳುತ್ತಾನೆ. ಇದು ಒಂದು ರೀತಿಯ ಭೋಗವಾದ. ಇಂದಿಗೂ, ಎಂದೆಂದಿಗೂ ಶೇ. 99ರಷ್ಟು ಜನ ಈ ಗುಂಪಿನವರೇ. ಇದನ್ನು ಮನುಷ್ಯನ ಮನಸ್ಸಿನಿಂದ ಹೋಗಲಾಡಿಸುವುದು ಕಷ್ಟಸಾಧ್ಯ ಎಂದರಿತ ಹಿಂದೂಧರ್ಮ ಇದಕ್ಕೆ ಧರ್ಮದ ಚೌಕಟ್ಟನ್ನು ನೀಡಿ ‘ಧರ್ಮಕ್ಕೆ ಚ್ಯುತಿಯಾಗದಂತೆ ಭೋಗಾಭಿಲಾಷಿಗಳಾಗಿ’ ಎನ್ನುತ್ತದೆ ಮತ್ತು ಈ ಭೋಗಕ್ಕೆ ಕರ್ಮವೇ ಆಧಾರವಾದ್ದರಿಂದ ಈ ಎಲ್ಲ ವಿಚಾರ ಆಚಾರಗಳನ್ನು ಒಳಗೊಂಡ ವೇದಭಾಗವನ್ನು ‘ಕರ್ಮಕಾಂಡ’ ಎನ್ನುತ್ತದೆ. ಇದೇ ಪೂರ್ವಮೀಮಾಂಸವೂ ಹೌದು. ಆದರೆ ಈ ಧಾರ್ಮಿಕ ಇಲ್ಲವೇ ನೈತಿಕ ಬದ್ಧತೆಯುಳ್ಳ ಜನರಿಗೆ ಪ್ರಾರಂಭದಲ್ಲಿ ಸಾಕಷ್ಟು ಕಷ್ಟಗಳೇ ಎದುರಾಗಿ ಕೊನೆಯಲ್ಲಿಯೇ ಸುಖದ ಭರವಸೆ ಕಾಣುವುದರಿಂದ ಅಷ್ಟೇನು ತತ್ತ್ವಬದ್ಧತೆಯಿರದ ಜನರಿಗೆ ಈ ನೈತಿಕ ನೆಲೆಗಟ್ಟಿನಲ್ಲಿ ನಂಬಿಕೆಯೇ ಮಾಯವಾಗಿ ತಮ್ಮ ಸ್ವಾರ್ಥ ಸಾಧನೆಗೆ ಎಲ್ಲ ನಿಯಮಗಳನ್ನು ಗಾಳಿಗೆ ತೂರುವುದು, ಇಂಥವರ ಸಂಖ್ಯೆ ಸಾಕಷ್ಟು ಏರುತ್ತಲೇ ಹೋಗುವುದು, ಇವರು ನೀತಿ ನಿಪುಣರಿಂದ ಛೀಮಾರಿಗೆ ಒಳಗಾಗುವುದು, ಕೆಲವೊಮ್ಮೆ ಬಹಿಷ್ಕರಿಸಲ್ಪಡುವುದು ಮತ್ತು ಇವರೆಲ್ಲರೂ ಒಟ್ಟಿಗೆ ಸೇರಿ ತಮ್ಮದೇ ಒಂದು ಸಿದ್ಧಾಂತವನ್ನು ರಚಿಸಿ ನೀತಿ ನಿಪುಣರನ್ನೇ ಹೀಗಳೆಯುತ್ತ ನಿಮ್ಮ ದೃಷ್ಟಿಯೇ ಅತ್ಯಂತ ಅಪ್ರಾಮಾಣಿಕ, ಅವ್ಯಾವಹಾರಿಕ, ಎಂದಿಗೂ ಆಚರಣೆಗೆ ತರಲು ಸಾಧ್ಯವಿಲ್ಲದ್ದು, ಅದೊಂದು ಕಲ್ಪನಾವಿಲಾಸ, ಭ್ರಮಾಲೋಕ, ನಾವೇ ಬುದ್ಧಿವಂತರು, ನೀವು impractical, ನಮ್ಮ ಪ್ರಗತಿಯನ್ನು ನೋಡಿ ನಿಮಗೆ ಅಸೂಯೆ, ನಾವು ಪ್ರಗತಿಪರರು, ನೀವು ಪುರೋಗಾಮಿಗಳು, ಗೊಡ್ಡು ಸಂಪ್ರದಾಯದವರು ಎನ್ನುತ್ತ ಅಪರಾಧಿಪ್ರಜ್ಞೆಯಿಂದ ಪಾರಾಗಲು ಯತ್ನಿಸುವುದು, ತಮ್ಮ ಭಾವನೆಗಳಿಗೆ ಒಂದು ಸೈದ್ಧಾಂತಿಕ ನೆಲೆಗಟ್ಟನ್ನೇ ಸೃಷ್ಟಿಸಿಕೊಳ್ಳುವುದು ಎಲ್ಲ ಕಾಲದಲ್ಲೂ ಇದ್ದದ್ದೇ. ಸಂಯಮವೇ ಅಪ್ರಾಯೋಗಿಕ ಎನ್ನುವ ಸಿಗ್ಮಂಡ್ ಫ್ರಾಯ್ಡ್‌ನ ಮನಃಶಾಸ್ತ್ರ ಮತ್ತು ಕಾರ್ಲ್ ಮಾರ್ಕ್ಸ್‌ನ Dialectical Materialism ಸ್ವಲ್ಪ ಮಟ್ಟಿಗೆ ಈ ವರ್ಗಕ್ಕೆ ಸೇರಿದ್ದೇ.
ಈ ರೀತಿಯ ಅನುಕೂಲ ಸಿದ್ಧಾಂತ ‘ಚಾರ್ವಾಕವಾದ’ ಎನ್ನುವ ಹೆಸರಿನಿಂದ ಬುದ್ಧಪೂರ್ವ ಭಾರತವನ್ನು ಸಾಕಷ್ಟು ಪ್ರಭಾವಿಸಿದ್ದಂತೂ ನಿಜ. ಈ ಚಾರ್ವಾಕರು ಸಮಾಜದ ಒಂದು ಬದಿಯಲ್ಲಿದ್ದರೆ, ಉಪನಿಷತ್ತುಗಳ ಶುದ್ಧ ಮೋಕ್ಷಮಾರ್ಗವನ್ನು ಗಾಳಿಗೆ ತೂರಿ ಇಂದ್ರಿಯಾತೀತ ಶಕ್ತಿ ಪಡೆಯುವುದು ಹೇಗೆ? ಸಿದ್ಧಿಗಳ ಸ್ವಾಧೀನ ಹೇಗೆ? ಎಂಬುದನ್ನೇ ಗುರಿಯಾಗಿಟ್ಟುಕೊಂಡ ಅಂದಿನ ಬಹಳಷ್ಟು ಅಧ್ಯಾತ್ಮವಾದಿಗಳು ಸಮಾಜದ ಇನ್ನೊಂದು ಬದಿಯಲ್ಲಿ. ಒಟ್ಟಿನಲ್ಲಿ ಸ್ವಾಮಿ ವಿವೇಕಾನಂದರ ಮಾತಿನಲ್ಲಿ ಹೇಳಬೇಕೆಂದರೆ ಇಪ್ಪತ್ತು ಸಾವಿರ ಕುರುಡರು ಇನ್ನೂರು ಮಿಲಿಯನ್ ಕುರುಡರಿಗೆ ಮಾರ್ಗದರ್ಶಕರಾಗಿದ್ದ ದಿನಗಳವು. ಹಲವಾರು ವಿದ್ವಾಂಸರು ಬುದ್ಧನ ಪ್ರತಿಕ್ರಿಯೆಗೆ ಪ್ರಚೋದನೆ ಹಿಂದೂಧರ್ಮ ಎಂದು ವ್ಯಾಖ್ಯಾನಿಸುವುದುಂಟು. ಅದು ಹಾಗಲ್ಲ, ಪ್ರಚೋದನೆ ಬಂದಿದ್ದು ಚಾರ್ವಾಕ ಸಿದ್ಧಾಂತದಿಂದಲೇ ಹೆಚ್ಚಾಗಿ. ಅವನ ‘ಆಸೆಯೇ ದುಃಖಕ್ಕೆ ಕಾರಣ’ ಮತ್ತು ‘ಸಮ್ಯಕ್ ಜೀವನದ ಸಿದ್ಧಾಂತ’ ಅವರೆಡೆಗೆ ಬಿಟ್ಟ ಬಾಣಗಳೇ.
ಈ ಚಾರ್ವಾಕ ಸಿದ್ಧಾಂತವನ್ನು ಬಗ್ಗುಬಡಿಯಲು ಈಗಾಗಲೇ ಜೈನರು ದಿಗಂಬರ ತತ್ತ್ವವನ್ನು ಪ್ರತಿಪಾದಿಸಿ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ, ಒಂದು ಅತಿರೇಕವನ್ನು ಇನ್ನೊಂದು ಅತಿರೇಕದಿಂದಲೇ ಬಗ್ಗುಬಡಿಯುವ ಪ್ರಯತ್ನ ಮಾಡಿದ್ದರು. ಬುದ್ಧ ಉದ್ಭವಿಸಿದ್ದು ಇಂಥ ಅತಿರೇಕಗಳು, ಕ್ರಿಯೆ-ಪ್ರತಿಕ್ರಿಯೆಗಳ ತುಮುಲಗಳಿಂದೊಡಗೂಡಿದ ಭಾರತದಲ್ಲಿ. ತತ್ತ್ವ ವ್ಯಾಖ್ಯಾನ, ಚರ್ಚೆಗಳನ್ನು ಅನುಮೋದಿಸದಿದ್ದುದು, ಹೋಮಕುಂಡದ ಬಳಿ ಪ್ರಾಣಿವಧೆಯನ್ನು ನಿಲ್ಲಿಸಿದ್ದು, ಪ್ರಾರಂಭದಲ್ಲಿ ಜೈನರಂತೆ ದೇಹದಂಡನೆಗೆ ಶರಣಾದರೂ ಕೊನೆಗೆ ಚಾರ್ವಾಕ ಹಾಗೂ ದಿಗಂಬರ ಜೈನರ ನಡುವಿನ ಸ್ಥಾನ ಹುಡುಕಿ ಮಧ್ಯಮ ಮಾರ್ಗವನ್ನು ಸ್ಥಾಪಿಸಿದ್ದು, ಚಾರ್ವಾಕರು ‘ಯಾವ ನೈತಿಕ ಚೌಕಟ್ಟೂ ಇಲ್ಲ, ಸಾಲ ಮಾಡಿಯಾದರೂ ತುಪ್ಪ ತಿನ್ನಿ’ ಎಂದು ಘೋಷಿಸಿದಾಗ ಇದಕ್ಕೆ ಉತ್ತರವಾಗಿ ಕೇವಲ ನೈತಿಕತೆಯನ್ನೇ ಉಸಿರಾಗಿ ಉಳ್ಳ ‘ಅಷ್ಟಾಂಗ ಮಾರ್ಗ’ ಬೋಧಿಸಿದ್ದು ಬುದ್ಧ ಪಥದ ಕೆಲವು ಮೈಲಿಗಲ್ಲುಗಳು. ಹಿಂದೂಗಳ ಕರ್ಮಕಾಂಡಿಗಳು ಶಾಸ್ತ್ರ, ವೇದ ಅಥವಾ ಕರ್ಮಕಾಂಡಕ್ಕನುಸಾರ ಸ್ವರ್ಗವನ್ನು ಪಡೆಯುವುದು, ಇಲ್ಲವೇ ದೇವತೆಗಳನ್ನು ಆರಾಧಿಸಿ ಈ ಲೋಕದಲ್ಲೇ ಸ್ವರ್ಗ ನಿರ್ಮಿಸುವುದೇ ಪ್ರಧಾನ ದೃಷ್ಟಿಯಾಗಲಿ ಎನ್ನುತ್ತಿದ್ದಾಗ ‘ಈ ಲೋಕ ಚಲನಶೀಲ; ಬದಲಾವಣೆ ಇಲ್ಲಿರುವ ಶಾಶ್ವತ ಸತ್ಯ, ಈ ಅಶಾಶ್ವತ ಲೋಕದಲ್ಲಿ ಇರುವುದು ದುಃಖ ಮಾತ್ರ’ (ನಾನು ಕಂಡ ಮುದುಕ, ಹೆಣ, ರೋಗಿಗಳೇ ಇದಕ್ಕೆ ನಿದರ್ಶನ) ಎಂದು ಬುದ್ಧ ನಾಲ್ಕು ಆರ್ಯಸತ್ಯಗಳನ್ನು ಪ್ರತಿಪಾದಿಸಿದ.
ಸ್ವರ್ಗವನ್ನು ಕುರಿತು ವೇದಗಳ ಕರ್ಮಕಾಂಡವೇ ಹೇಳುತ್ತದೆಯಲ್ಲ ಎಂದಾಗ ನಿಮ್ಮ ಅನುಭವವನ್ನು ಮಾತ್ರ ನೆಚ್ಚಿಕೊಳ್ಳಿ ಮತ್ತಾವುದನ್ನೂ ನೆಚ್ಚಬೇಡಿ ಎಂದದ್ದು ಅಂದಿನ ಚರ್ಚೆ, ವ್ಯಾಖ್ಯಾನ, ಸ್ವರ್ಗಾಕಾಂಕ್ಷೆ ಇವನ್ನೇ ಪ್ರಧಾನವಾಗಿಸಿಕೊಂಡವರಿಗೆ ಬುದ್ಧ ಕೊಟ್ಟ ಪ್ರತಿಕ್ರಿಯೆ. ‘ನಿಮ್ಮ ಮಾರ್ಗ ನಿಮ್ಮ ಅನುಭವವನ್ನು ಮಾತ್ರ ಆಧರಿಸಿರಲಿ. ವೇದಗಳೋ ಮತ್ತಾವುದೋ ಪುಸ್ತಕವೋ ಏಕೆ ಆಧಾರವಾಗಬೇಕು?’ ಎಂದವನು ಬುದ್ಧ. ಇದು ಬುದ್ಧನ ಸಮರ ನೀತಿ (strategy)ಯೇ ಹೊರತು ನಿಜಕ್ಕೂ ಅವನ ಸಿದ್ಧಾಂತಕ್ಕೆ ಆಧಾರ ಉಪನಿಷತ್ ಸತ್ಯಗಳೇ ಎಂದು ಖ್ಯಾತ ಪಾಶ್ಚಾತ್ಯ ಚಿಂತಕ ಬ್ಲೂಮ್‌ಫೀಲ್ಡ್ ಹೇಳುತ್ತಾರೆ.
ಬೌದ್ಧಧರ್ಮ ಪ್ರತಿಪಾದಿಸಿದ ನಾಲ್ಕು ಆರ್ಯಸತ್ಯಗಳ ಪ್ರಭಾವದಿಂದ ಸಾವಿರಾರು ಭಿಕ್ಷುಗಳು, ನೂರಾರು ವಿಹಾರಗಳನ್ನೊಳಗೊಂಡ ಸಂಘ ನಿರ್ಮಾಣವಾಯಿತು.
1. ಅಷ್ಟಾಂಗ ಮಾರ್ಗದ ಪ್ರಭಾವದಿಂದ ನೈತಿಕ ಮಟ್ಟ, ಸಂಸ್ಕೃತಿ, ಜೀವನ ಮಟ್ಟ ಅತ್ಯಂತ ಉನ್ನತ ಹಂತ ತಲುಪಿ ಪರರಾಷ್ಟ್ರಗಳಲ್ಲೂ ಬೌದ್ಧಧರ್ಮ ಆಕರ್ಷಿತವಾಯಿತು.
2. ವೇದಗಳ ಆಧಾರ ತಿರಸ್ಕರಿಸಿದ್ದರಿಂದ ಮತ್ತು ಕೇವಲ ಸ್ವಂತ ಯುಕ್ತಿಯನ್ನೇ ಆಧರಿಸಿದ್ದರಿಂದ ಪ್ರಖರ ಬುದ್ಧಿಮತ್ತೆ, ತೀಕ್ಷ್ಣ ತಾರ್ಕಿಕ ಮಜಲುಗಳು, ಕೂದಲು ಸೀಳುವ ಚರ್ಚೆ ಸಾಮಾನ್ಯವಾಯಿತು.
3. ಯಜ್ಞ, ಪಶುಬಲಿಯನ್ನು ನಿಲ್ಲಿಸಿ ಇಡೀ ದೇಶವೇ ಸಸ್ಯಾಹಾರ ಸ್ವೀಕರಿಸುವಂತಾಯಿತು. ಪಶು ಆಸ್ಪತ್ರೆಗಳು ತೆರೆಯಲ್ಪಟ್ಟವು.
4. ಎಲ್ಲ ಹಿಂಸೆಯನ್ನೂ ತ್ಯಜಿಸಿದ್ದರಿಂದ ಸಮಷ್ಟಿ ಮಟ್ಟದಲ್ಲಿ ಯುದ್ಧಗಳಿಗೆ ಪೂರ್ಣವಿರಾಮ ಸಿಕ್ಕಿ ಜನರಿಗೆ ಚಿಂತನೆ, ಕಲೆ, ಸಂಗೀತ, ಸಾಹಿತ್ಯ, ನೃತ್ಯ, ಕೃಷಿ ಇವುಗಳಿಗೆ ಸಮಯ ಹಾಗೂ ಪ್ರೋತ್ಸಾಹ ದೊರೆತು ಭಾರತ ಮತ್ತೊಮ್ಮೆ ಸಂಸ್ಕೃತಿಯ ತವರುಮನೆಯಾಯಿತು.
ಸಂಸ್ಕೃತ ಭಾಷೆಯ ಅಧಿಪತ್ಯದ ಮೇಲಿನ ಪ್ರತಿಕ್ರಿಯೆಯೇ ಪಾಳಿ ಭಾಷೆಯಲ್ಲಿ ತತ್ತ್ವಗಳು ಪ್ರಚಾರವಾಗಿದ್ದು. ಆದರೆ ಇದು ತೆಗೆದುಕೊಂಡ ವಿಕೃತ ರೂಪ ಅಸಹನೀಯ.
1. ಬುದ್ಧ, ‘ಆತ್ಮ’ ಚರ್ಚೆಯ ವಸ್ತುವಲ್ಲವೆಂದು ಅದರ ವಿಷಯದಲ್ಲಿ ಮೌನವಾಗಿದ್ದ. ಇದರಿಂದ ಅವನ ಅನುಯಾಯಿಗಳು ಬುದ್ಧ ಆತ್ಮನ ಅಸ್ತಿತ್ವವನ್ನು ಒಪ್ಪಲೇ ಇಲ್ಲ ಎಂದು ಭಾವಿಸಿ ಒಂದು ಕಡೆ ಬೌದ್ಧಧರ್ಮವನ್ನು ನಾಸ್ತಿಕಮತವನ್ನಾಗಿ ಮಾಡಿ ಇನ್ನೊಂದು ಕಡೆ ತಮಗೆ ಬೇಕಾದ ರೀತಿಯಲ್ಲಿ ಅದನ್ನು ಪ್ರತಿಪಾದಿಸಿದ್ದರಿಂದ ಬುದ್ಧನ ನಂತರ ನೂರೇ ವರ್ಷಗಳಲ್ಲಿ ಸುಮಾರು ಅಷ್ಟೇ ಸಂಖ್ಯೆಯ ಕವಲುಗಳಾಗಿ ಬೌದ್ಧಧರ್ಮ ಒಡೆದದ್ದು ಐತಿಹಾಸಿಕ ದುರಂತ.
2. ಪ್ರಪಂಚ ದುಃಖಮಯ ಎಂದು ಎಲ್ಲರೂ ಭಿಕ್ಷುಗಳಾಗಿ ಮಾರ್ಪಟ್ಟರೆ ಶುದ್ಧ ಸಂನ್ಯಾಸ ಸಾಧ್ಯವಾದೀತೆ?
3. ಜನಸಾಮಾನ್ಯರಿಗೆ ಒಂದು ಮಹತ್ತ್ವವನ್ನು ಆರಾಧಿಸಿ ಗೌರವಿಸುವ ಒಲವು ಅವರ ಮೂಲಭೂತ ಲಕ್ಷಣವಾಗಿಯೇ ಇರುತ್ತದೆ. ಆದ್ದರಿಂದಲೇ ಹಿಂದೂಗಳಲ್ಲಿ ಸಗುಣ ದೇವತೆಯ ಆರಾಧನೆ ಇದೆ. ಸಾಕಾರದೇವತೆಯನ್ನು ನಿರಾಕರಿಸಿದ್ದರಿಂದ ತನ್ನ ಶಿಷ್ಯರಿಂದ ಬುದ್ಧನೇ ದೇವರ ಸ್ಥಾನದಲ್ಲಿ ಪ್ರತಿಷ್ಠಾಪಿಸಲ್ಪಟ್ಟ. ಇದೇ ಮಹಾಯಾನ. ಬುದ್ಧಗಯೆಯಲ್ಲೇ ನಿರ್ಮಿತಗೊಂಡ ಅವನ ದೇವಾಲಯ ಹಳೆಯ ವಿಹಾರಗಳ ಆಧುನಿಕ ರೂಪ ಅಷ್ಟೇ.
‘ಮಹಾಯಾನ’ದವರು ಮೂಲಬೌದ್ಧಧರ್ಮದವರನ್ನು ‘ಹೀನಯಾನ’ ಎಂದು ಹೀಗಳೆದಾಗ ಅದು ‘ಥೇರವಾದ’ವಾಗಿ ಮಾರ್ಪಟ್ಟು ಅವರವರಲ್ಲೇ ಅಂತಃಕಲಹವಾಗಿ, ಸ್ಪರ್ಧೆಯುಂಟಾಗಿ ಜತೆಗೆ ಹಿಂದೂಗಳೊಡನೆಯೂ ಸ್ಪರ್ಧೆ ಏರ್ಪಟ್ಟು ತಮ್ಮ ಮತವಿಸ್ತರಣೆಗೆ ಕುಸಂಸ್ಕೃತಿಯ ವಿಧಾನಗಳನ್ನು (ವಿಹಾರಗಳಲ್ಲಿ ನಗ್ನಮೂರ್ತಿಗಳು, ತಂತ್ರ, ಇತ್ಯಾದಿ) ಅನುಸರಿಸಿದರು.
ಅಹಿಂಸೆಯೇ ಉಸಿರಾದಾಗ ಇಡೀ ದೇಶ ಹೊರಗಿನವರ ಆಕ್ರಮಣವನ್ನು ಎದುರಿಸಲೂ ಸಾಧ್ಯವಾಗದಿರುವ ಮಟ್ಟಿಗೆ ಕ್ಷಾತ್ರತೇಜವನ್ನು ಕಳೆದುಕೊಂಡು ಆಕ್ರಮಣಕಾರರಿಗೆ ಸುಲಭವಾಗಿ ಬಲಿಯಾಯಿತು.
ಮಧ್ಯ ಏಷ್ಯಾದ ಹಲವು ಬರ್ಬರ (barbarians) ಪಂಗಡಗಳು ಬೌದ್ಧರಾಗಿ ಸೇರಿ ಗಿಡಮರಗಳ, ಕಲ್ಲು ನಾಗರಗಳ, ರೆಂಬೆಕೊಂಬೆಗಳ ವಿಚಿತ್ರ ಪೂಜಾ ಪದ್ಧತಿಗಳನ್ನು ತಂದು ಬೌದ್ಧಧರ್ಮದೊಡನೆ ಬೆರೆಸಿ ಕೆಲವೇ ಶತಮಾನಗಳಲ್ಲಿ ಬೌದ್ಧಧರ್ಮದ ಉದ್ಭವಕ್ಕೆ ಮುಂಚೆ ಇದ್ದ ಅಸಹನೀಯ ಸ್ಥಿತಿಯನ್ನೂ ಮೀರಿಸುವಂತೆ ಇಡೀ ದೇಶದ ವಾತಾವರಣವನ್ನು ಕಲುಷಿತಗೊಳಿಸಿದರು. ಇಂದು ಹಿಂದೂ ಧರ್ಮದಲ್ಲಿ ಕಾಣುವ ಈ ಪದ್ಧತಿಗಳೆಲ್ಲ ಬೌದ್ಧ ಧರ್ಮದ ಬಳುವಳಿಯೇ. ಟಿಬೆಟ್, ಮಂಗೋಲಿಯಾ, ಟರ್ಕಿ ಮುಂತಾದವು ಬರ್ಬರ ಜನಾಂಗದ ಬಳುವಳಿಯೇ. ಇಂತಹ ವಿಷಮ ಸಂದರ್ಭದಲ್ಲಿಯೇ ಶಂಕರರು ಅವತರಿಸಿದ್ದು.

(ಮುಂದುವರಿಯುವುದು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net