_1784137940619.webp?w=480&auto=format%2Ccompress&fit=max)
_1784137940619.webp?w=480&auto=format%2Ccompress&fit=max)
‘ಈ ದೇಶದಲ್ಲಿ (ಅಮೆರಿಕ) ನಿಮ್ಮೊಬ್ಬೊಬ್ಬರಲ್ಲೂ ರಾಜನು ಪ್ರವೇಶಿಸಿದ್ದಾನೆ. ನೀವೆಲ್ಲರು ಈ ದೇಶದ ರಾಜರುಗಳು. ವೇದಾಂತದ ಧರ್ಮವೂ ಹಾಗೆಯೇ, ನೀವೆಲ್ಲರೂ ದೇವರುಗಳು. ಒಬ್ಬನೇ ದೇವರು ಸಾಕಾಗದು. ನೀವು ಈ ದೇಶದಲ್ಲಿ ಪ್ರಜಾಪ್ರಭುತ್ವವಿರಬೇಕೆಂದು ಅಪೇಕ್ಷಿಸುತ್ತಿದ್ದೀರಿ. ವೇದಾಂತ ಬೋಧಿಸುವುದೂ ಪ್ರಜಾಪ್ರಭುತ್ವದ ದೇವರನ್ನೇ. ಈ ಪ್ರಜಾಪ್ರಭುತ್ವದಿಂದಾಗಿ ವೇದಾಂತವೇ ನಿಮ್ಮ ದೇಶದ ಧರ್ಮವಾಗುವ ಸಾಧ್ಯತೆಯಿದೆ.
ಮರುಗದಿರಿ! ಅನುತಾಪಪಡದಿರಿ! ಆತ್ಮಮರುಕದಿಂದ ಕುಗ್ಗದಿರಿ! ನಿಮ್ಮನ್ನು ಪಾಪಿಗಳೆನ್ನುವವನೇ ಪಾಷಂಡಿ, ದೈವದೂಷಕ. ಈ ಪ್ರಪಂಚವೇ ಒಂದು ಮೂಢನಂಬಿಕೆ. ಅದನ್ನು ನಾವು ನಿಜವೆಂದುಕೊಳ್ಳುವಂತೆ ಸಮ್ಮೋಹನೆಗೆ ಒಳಗಾಗಿದ್ದೇವೆ. ಈ ಸಮ್ಮೋಹಿನಿಯಿಂದ ಬಿಡಿಸಿಕೊಳ್ಳುವುದೇ ಮುಕ್ತನಾಗುವ ವಿಧಾನ. ಈ ವಿಶ್ವವೊಂದು ದೇವರ ಲೀಲೆ ಅಷ್ಟೆ. ಎಲ್ಲವೂ ಕೇವಲ ತಮಾಷೆಗಾಗಿ.
ಎದ್ದುನಿಂತು ಹೋರಾಡಿ! ಆಕಾಶದಿಂದ ನಕ್ಷತ್ರಗಳೆಲ್ಲ ಉದುರಲಿ! ಇಡೀ ಪ್ರಪಂಚವೇ ನಮ್ಮ ಮೇಲೆ ಕತ್ತಿ ಕಟ್ಟಿ ನಿಲ್ಲಲಿ! ಸಾವೆಂದರೆ ಅಂಗಿ ಬದಲಾಯಿಸಿದಂತೆ ಅಷ್ಟೆ! ಅದರಿಂದೇನು? ಲೋಕದಲ್ಲಿರುವ ಎಲ್ಲ ದೇವರುಗಳ ಎದುರೂ ಅತ್ತಿದ್ದೀರಿ. ದುಃಖ ಪರಿಹಾರವಾಯಿತೆ? ಈ ಮೂಢನಂಬಿಕೆಗಳೆದುರು ಮೊಣಕಾಲೂರುವುದು, ನಿಮ್ಮ ಮನಸ್ಸಿಗೆ ನಿಮ್ಮನ್ನು ನೀವು ಮಾರಿಕೊಳ್ಳುವುದು, ನಿಮಗೆ ಯೋಗ್ಯವಲ್ಲ. ನೀವು ಅನಂತಾತ್ಮರು, ಅಮರರು, ಜನ್ಮರಹಿತರು. ಏಳಿ! ಎದ್ದೇಳಿ! ಎದ್ದು ನಿಂತು ಹೋರಾಡಿ!
ಯಾವುದೇ ಧಾರ್ವಿುಕ ವ್ಯವಸ್ಥೆಯ ಬಾಗಿಲನ್ನು ತಟ್ಟದಿರಿ. ಧರ್ಮವೆಂದರೆ ಕೇವಲ ನಿಮ್ಮ ಹಾಗೂ ನಿಮ್ಮ ದೇವರ ನಡುವಣ ಸಂಗತಿ; ನಿಮ್ಮಿಬ್ಬರ ನಡುವೆ ಮೂರನೆಯವರು ಖಂಡಿತ ಬರಕೂಡದು. ನಾನು ನೀವು ಸೇರಿ ವ್ಯವಸ್ಥೆಯೊಂದನ್ನು ರೂಪಿಸಿದರೆ ನಾವು ಪ್ರತಿಯೊಬ್ಬರನ್ನೂ ದ್ವೇಷಿಸತೊಡಗುತ್ತೇವೆ. ಪ್ರೀತಿಸುವುದೆಂದರೆ ದ್ವೇಷಿಸುವುದೇ ಎಂದಾದರೆ ಪ್ರೀತಿಸದಿರುವುದೇ ಒಳ್ಳೆಯದು. ಅದು ಪ್ರೀತಿಯಲ್ಲ ನರಕ.’
ಸ್ವಾಮಿ ವಿವೇಕಾನಂದರು ಮೇಲಿನ ಮಾತುಗಳನ್ನು ಮೊಳಗಿಸಿದ್ದಷ್ಟೇ ಅಲ್ಲ ತಮ್ಮ ಜೀವನದುದ್ದಕ್ಕೂ ಹಾಗೆಯೇ ಬದುಕಿದವರು. ಅದ್ವೈತ ವೇದಾಂತದ ತಿರುಳನ್ನೇ ಮೇಲಿನ ವಾಕ್ಯಗಳಲ್ಲಿ ಪ್ರತಿಧ್ವನಿಸಿದ್ದಾರೆ. ಯಾವುದೇ ರೀತಿಯ ಭಯವನ್ನೂ ಒಂದು ಕ್ಷಣದಲ್ಲೇ ಮೂಲೋತ್ಪಾಟನೆ ಮಾಡುವ ತತ್ವವೊಂದಿದ್ದರೆ ಅದು ಅದ್ವೈತ. ಮಹರ್ಷಿ ಯಾಜ್ಞವಲ್ಕ್ಯರು ಬೋಧಿಸಿದ್ದೇ ಇದನ್ನು. ಫ್ರೆಂಚ್ ಕ್ರಾಂತಿಯ ಪಲ್ಲವಿಯೇ ಆಗಿದ್ದ ಸ್ವಾತಂತ್ರ್ಯ, ಸಮಾನತೆ, ಸಹೋದರತೆ ಇವೆಲ್ಲ ಪ್ರಾಯೋಗಿಕ ಅದ್ವೈತದ ಸ್ವಾಭಾವಿಕ ಪರಿಣಾಮಗಳೇ. ರಾಜಕೀಯ ಸ್ತರದಲ್ಲಿ ಪ್ರಜಾಪ್ರಭುತ್ವ ಈ ಎಲ್ಲ ಸವಲತ್ತುಗಳನ್ನು ನೀಡುವುದರ ಹಿಂದೆ ಕೆಲಸ ಮಾಡುತ್ತಿರುವ ಆಧಾರಭೂತ ಸಿದ್ಧಾಂತವಾದರೂ ಯಾವುದು? ಅದೇ ಅದ್ವೈತ!
ವ್ಯತ್ಯಾಸಗಳು, ತರತಮಗಳು ಇವೆಲ್ಲ ಮನೋಭೂಮಿಕೆಗೆ ಮತ್ತು ಶರೀರಕ್ಕೆ ಸಂಬಂಧಿಸಿದ್ದು. ದುರ್ಯೋಧನ ತನ್ನ ಅಸಹಾಯಕತೆಯನ್ನು ಆಗಲೇ ವ್ಯಕ್ತಪಡಿಸಿದ್ದಾನೆ. ಗೊತ್ತಿದ್ದೂ ತಪ್ಪು ಮಾಡುತ್ತಿರುವ ಅವನ ಈ ದುರಂತಕ್ಕೆ ಮನಸ್ಸಿನ ಕೈಗೆ ತನ್ನ ಜುಟ್ಟನ್ನು ಕೊಟ್ಟಿರುವುದೇ ಆಗಿದೆ. ಸತ್ಯಾರ್ಥಿ, ಬುದ್ಧಿವಂತ ಯಾವ ಪೂರ್ವಗ್ರಹಕ್ಕೂ, ಗ್ರಂಥಕ್ಕೂ ಕಟ್ಟುಬೀಳದೆ ತಿಳಿಮನಸ್ಸಿನಿಂದ ಅನ್ವೇಷಣೆಯಲ್ಲಿ ತೊಡಗಿದ್ದೇ ಆದರೆ ನಿರ್ಗಣ ನಿರಾಕಾರ ವಸ್ತುವನ್ನು ಬಿಟ್ಟು ಮತ್ತಾವುದಕ್ಕೂ ಅಸ್ತಿತ್ವವೇ ಇರುವುದಿಲ್ಲ. ವೇದಗಳು ಮತ್ತು ಉಪನಿಷತ್ತುಗಳು ಸಾರಿದ್ದು ಈ ಏಕಮೇವ ವಸ್ತುವನ್ನೇ. ಐನ್ಸ್ಟೀನ್ ಸಾಪೇಕ್ಷ ಸಿದ್ಧಾಂತದಲ್ಲಿ ‘ಕಾಲ ದೇಶಗಳೂ ಸಾಪೇಕ್ಷವೇ; ಅದರ ಹಿಂದಿರುವ ಅನಂತತೆ ಅವರ್ಣನೀಯ ಅಷ್ಟೇ ಅಲ್ಲ ಅದೊಂದೇ ಸತ್ಯ’ ಎಂದು ಸಾರಿ ಸಾರಿ ಹೇಳಿದ್ದಾರೆ.
ಒಂದು ರೀತಿಯಲ್ಲಿ ಅದ್ವೈತ ತತ್ವಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಹೇಳಿದ್ದಾರೆ. ವಿಷ್ಣು ಸಹಸ್ರನಾಮದ ‘ಅಗ್ರಾಹ್ಯ’ ಶಬ್ದದ ಅರ್ಥವೂ ಇದೇ. ಯಾವ ಮನುಷ್ಯನೂ ತನ್ನ ಆಂತರ್ಯದಲ್ಲಿರುವ ಆತ್ಮ ಈ ಗುಣಗಳನ್ನೇ ಹೊಂದಿದೆ ಎಂದು ತಿಳಿಯಬೇಕು. ಈ ಆತ್ಮ ಅವಿನಾಶಿ ಬ್ರಹ್ಮವೇ. ಅದು ಅನಂತ. ದೇಶ, ಕಾಲಗಳ ಆಚೆ ಇರುವ ಸರ್ವಶಕ್ತ, ಸರ್ವವ್ಯಾಪಿ, ಅವಿಭಕ್ತವಾದ ಏಕತ್ವ! ಎಲ್ಲ ಶರೀರಗಳಲ್ಲಿ ವಿಭಾಗಿಸಲ್ಪಟ್ಟಂತೆ ಕಾಣುತ್ತಿದೆ ಎಂದು ಶ್ರೀಕೃಷ್ಣ ಗೀತೆಯಲ್ಲಿ ಸ್ಪಷ್ಟವಾಗಿ ಹೇಳುತ್ತಾನೆ. ಅನಂತವನ್ನು ಎಷ್ಟು ವಿಭಾಗಿಸಿದರೂ ಒಂದೊಂದು ತುಣುಕೂ ಅನಂತವೇ ಆಗಿರುತ್ತದೆ. ಆದ್ದರಿಂದ ಒಂದೊಂದು ಶರೀರದಲ್ಲಿರುವ ಆತ್ಮವೂ ಪೂರ್ಣ ಪ್ರಮಾಣದಲ್ಲಿ ಬ್ರಹ್ಮವೇ.
‘ಹಲವು ಆತ್ಮಗಳಿವೆ ಮತ್ತು ಅವುಗಳಲ್ಲಿ ಪ್ರತಿಯೊಂದೂ ಸ್ವತಂತ್ರ’ ಎಂಬ ಕಪಿಲರ ಸಾಂಖ್ಯಯೋಗವನ್ನು ಅದ್ವೈತಿಗಳು ನಿರಾಕರಿಸಿದ್ದು ಈ ತರ್ಕದ ಆಧಾರದ ಮೇಲೆಯೇ. ಅನಂತವಾದ ಆದ್ದರಿಂದ ಪರಿಪೂರ್ಣವಾದ ಆತ್ಮ ಅಥವಾ ಬ್ರಹ್ಕ್ರಿಯಾಶೀಲನಾಗುತ್ತಾನೆ ಎನ್ನುವುದು ಅರ್ತಾಕ, ಅವೈಜ್ಞಾನಿಕ. ಹಾಗಾದರೆ ಒಳಗಿರುವ ಆತ್ಮ ನಮ್ಮಗಳ ಮೂಲಕ ವ್ಯವಹಾರಗಳನ್ನು ಮಾಡುತ್ತಿಲ್ಲವೇ? ಇಲ್ಲವೇ ಇಲ್ಲ! ಕ್ರಿಯಾಶೀಲನಾಗಿರುವುದು ಮನಸ್ಸು ಮತ್ತು ಶರೀರಗಳು ಮಾತ್ರ. ಅವುಗಳಿಗೆ ಚೈತನ್ಯವನ್ನು ಕೊಡುವುದು ಮಾತ್ರ ಆತ್ಮನ ಕೆಲಸ.
‘ಆತ್ಮನಾ ವಿಂದತೇ ವೀರ್ಯಮ್ ಎಂದು ಕೇನೋಪನಿಷತ್ ಅಂದೇ ಸಾರಿದೆ. ಆದ್ದರಿಂದ ಆತ್ಮ ಕೇವಲ ಸಾಕ್ಷಿ ಮಾತ್ರ ಕರ್ತೃ ಅಲ್ಲ. ಸಾಕ್ಷಿಗೆ ಪಾಪ ಪುಣ್ಯಗಳ ಗೊಡವೆಯುಂಟೆ, ಆದ್ದರಿಂದ ವಿವೇಕಾನಂದರು ಹೇಳುತ್ತಿದ್ದಾರೆ- ಪಾಪದ ಹೊರೆ ನಿಮ್ಮ ಮೇಲಿದೆ ಎಂದು ನೀವು ಭಾವಿಸಿದ್ದೇ ಆದರೆ ನೀವು ಇಂದು, ಎಂದೂ, ಮುಕ್ತರೇ ಆಗಿದ್ದೀರಿ. ಶುದ್ಧರೇ ಆಗಿದ್ದೀರಿ ಎಂಬ ಈ ಮಹಾಸತ್ಯವನ್ನು -ಏಕಮೇವ ವೈಜ್ಞಾನಿಕ ಸತ್ಯವನ್ನು ನಿಮ್ಮ ಮನಸ್ಸಿನ ಮೇಲೆ ಮತ್ತೆ ಮತ್ತೆ ಮುದ್ರಿಸಿ ಆ ಮೂಢನಂಬಿಕೆಯಿಂದ ಪಾರಾಗಿ ಎಂದು ವಿವೇಕಾನಂದರು ಕರೆ ಕೊಡುತ್ತಾರೆ. ಆತ್ಮ ಅನಂತ, ನಿರಪೇಕ್ಷ ಆಗಿದ್ದೇ ಆದರೆ ಅದು ಯಾರ ಪ್ರಭಾವಕ್ಕೂ ಒಳಗಾಗಿರುವುದಿಲ್ಲ. ಆದ್ದರಿಂದ ಸಹಜವಾಗಿಯೇ ಅದು ಸ್ವತಂತ್ರ.
ಇಲ್ಲಿ ವಿವೇಕಾನಂದರ ಪ್ರತಿ ಮಾತಿಗೂ ತರ್ಕದ ಆಧಾರವಿದೆ. ಅವರ ಮತ್ತು ಅವರ ಗುರುಗಳ ಪ್ರತಿನಿತ್ಯವೆಂಬಂತಿದ್ದ ಅನುಭವದ ಆಧಾರವಿದೆ. ತರ್ಕ ಮತ್ತು ವೈಚಾರಿಕತೆಯನ್ನು ಮಾತ್ರವೇ ಆಧಾರವಾಗಿಸಿ ವೈಜ್ಞಾನಿಕ ಧರ್ಮವೊಂದನ್ನು ಅವರು ಅಮೆರಿಕನ್ನರ ಮುಂದಿಡುತ್ತಿದ್ದಾರೆ. ನಮ್ಮಾಚೆಗೆ, ನಮ್ಮ ಲೋಕದಾಚೆಗೆ ಇರುವ ದೇವನೊಬ್ಬ ತನ್ನ ಇಚ್ಛೆ ಬಂದಂತೆ ಕೆಲವರನ್ನು ಉದ್ಧರಿಸುವ, ಕೆಲವರನ್ನು ಶಿಕ್ಷಿಸುವ, ಕೆಲವರನ್ನು ಪ್ರೀತಿಸುವ ಕೆಲವರನ್ನು ದ್ವೇಷಿಸುವ ಅಪ್ರಬುದ್ಧ ಮನುಷ್ಯನಿಗೆ ಮಾತ್ರ ಒಪ್ಪಿಗೆಯಾಗುವ ಧರ್ಮಕ್ಕೂ ಹಿಂದೂ ಚಿಂತನೆಯಲ್ಲಿ ಸ್ಥಾನವಿದೆಯಾದರೂ ಅದು ಅತ್ಯಂತ ಕೆಳಗಿನ ಹಂತ. ಪ್ರಜಾಪ್ರಭುತ್ವದಲ್ಲಿ ರಾಜ ಪ್ರಜೆಯ ಒಳಹೊಕ್ಕು ಕಾರ್ಯ ನಿರ್ವಹಿಸುವಂತೆ ಪರಬ್ರಹ್ಮ ಎಂದೋ ಆತ್ಮನ ರೂಪದಲ್ಲಿ ಮನುಷ್ಯನ ಒಳಗೆ ಪ್ರವೇಶಿಸಿದ್ದಾನೆ.
ಪ್ರಬುದ್ಧ ಸಮಾಜಗಳು ಪ್ರಜಾಪ್ರಭುತ್ವವನ್ನೇ ಆಶಿಸುವಂತೆ, ಧಾರ್ವಿುಕ ಕ್ಷೇತ್ರದಲ್ಲೂ ‘ಆಯಮಾತ್ಮಾ ಬ್ರಹ್ಮ, ಅಹಂ ಬ್ರಹ್ಮಾಸ್ಮಿ’ ಎಂಬ ತತ್ವಗಳೇ ಪ್ರಜ್ಞಾವಂತ, ಪ್ರಬುದ್ಧರ ಧರ್ಮವಾಗುವುದು ಸಹಜವಾಗಿಯೇ ಇದೆ. ಮೇಲ್ನೋಟಕ್ಕೆ ಇವೆಲ್ಲ ಬೌದ್ಧ ತತ್ವಗಳೆಂದೇ ಯಾರಾದರೂ ಭಾವಿಸಿದರೆ ಅದರಲ್ಲಿ ಆಶ್ಚರ್ಯವೇನೂ ಇಲ್ಲ. ಬುದ್ಧ, ನಾಗಾರ್ಜುನ ಇವರೆಲ್ಲ ಇದೇ ಧಾಟಿಯಲ್ಲಿ ಮಾತಾಡಿದವರು. ಆದರೆ ಬೌದ್ಧರು ಇಲ್ಲೆಲ್ಲೂ ‘ಆತ್ಮ’ ಎಂಬ ಪದವನ್ನು ಬಳಸಲಿಲ್ಲ. ಅವರದ್ದು ಅನಾತ್ಮವಾದ, ಆದರೆ ಅಲ್ಲೂ ನಾವು ಸ್ಪಷ್ಟವಾಗಿ ಕಾಣುವುದು ಸಂಪೂರ್ಣ ಸ್ವಾವಲಂಬನೆಯನ್ನು. ಪ್ರಜ್ಞಾಹೀನನೊಬ್ಬ ಯಾವುದೋ ಒಂದು ಬಾಹ್ಯಶಕ್ತಿಯನ್ನು ಊಹಿಸಿಕೊಂಡು ಅದನ್ನೇ ಅವಲಂಬಿಸಿಕೊಂಡು ಅದು ತನ್ನ ಎಲ್ಲ ಪಾಪಗಳನ್ನೂ, ಅವಿವೇಕಗಳನ್ನೂ ಕ್ಷಮಿಸಿ ತನ್ನನ್ನು ಎಲ್ಲ ಪರಿಣಾಮಗಳಿಂದಲೂ ಪಾರುಮಾಡಿಬಿಡುತ್ತೆ ಎಂಬ ಭಾವನೆಗಳ ಬುಡಕ್ಕೆ ಘೊರವಾದ ಕೊಡಲಿ ಪೆಟ್ಟು ಕೊಟ್ಟಿದ್ದು ಬೌದ್ಧಧರ್ಮ.
‘ಜಗತ್ತಿನ ನಿರ್ವಹಣೆಗೆ ಶಾಶ್ವತವಸ್ತುವೊಂದರ ಅವಶ್ಯಕತೆಯೇ ಇಲ್ಲ. ಸುಮ್ಮಸುಮ್ಮನೆ ಒಂದು ದೇವರನ್ನು ಏಕೆ ತರುತ್ತೀರಿ’ ಎಂಬ ಅವರ ವಾದ ಸಗುಣ, ಸಾಕಾರ ದೇವರನ್ನು ಈ ದೇಶದ ಬಹುಭಾಗದಿಂದ ಹೊರಗೆಡುಹಿತು. ಅಷ್ಟಾಂಗಮಾರ್ಗ, ಮಧ್ಯಮ ಮಾರ್ಗಗಳ ಮೂಲಕ ಭ್ರಮೆಗಳಿಂದ ಪಾರಾಗಿ ಬೋಧಿಸತ್ವ ಸ್ಥಿತಿ, ಬುದ್ಧ ಸ್ಥಿತಿಗಳನ್ನು ಹೊಂದುವುದೇ ಅದರ ಪ್ರಧಾನ ಪಲ್ಲವಿ. ಶಂಕರಾಚಾರ್ಯರ ಪರಮಗುರು ಗೌಡಪಾದರ ‘ಆಜಾತವಾದ’ವೂ ಮೇಲಿನಂತೆಯೇ. ಬೌದ್ಧತತ್ವಗಳಂತೆಯೇ ಕಾಣುತ್ತವೆ ಅವೂ ಕೂಡ. ಆದರೆ ಇಲ್ಲಿ ಮತ್ತು ಹಿಂದೂಧರ್ಮದ ‘ಎಲ್ಲೆಲ್ಲೂ ಆತ್ಮ’ಎನ್ನುವುದು ಯಾವ ಧಕ್ಕೆಗೂ ಒಳಗಾಗದ ಚರಮಸತ್ಯವೇ. ಬೌದ್ಧರ ನಾಗಾರ್ಜುನ ಮತ್ತು ಗೌಡಪಾದರ ತತ್ವಗಳು ಒಂದೇ ಸತ್ಯದ ಎರಡು ಪ್ರತಿಧ್ವನಿಗಳೋ ಎಂಬಂತೆ ಕಾಣುತ್ತವೆ. ಆದರೆ ಶಂಕರರಾಗಲಿ, ಉಪನಿಷತ್ತುಗಳಾಗಲಿ ಮತ್ತು ಗೀತೆಯಾಗಲಿ ಅನಾತ್ಮವಾದವನ್ನು ಅನುಮೋದಿಸಿವುದಿಲ್ಲವಾದರೂ ಅದರ ಪರಿಣಾಮವಾದ ನಿರ್ವಾಣ ಮತ್ತು ಸನಾತನಿಗಳ ಬ್ರಹ್ಮಜ್ಞ ಸ್ಥಿತಿ ಅಥವಾ ಸ್ಥಿತಪ್ರಜ್ಞತ್ವ ಆಶ್ಚರ್ಯಕರವಾಗಿ ಒಂದೇ ಎಂಬಂತೆ ಕಾಣುವುದು ಚರಮಸತ್ಯದ ಅಸೀಮ ವೈಭವವೇ ಸರಿ.
ಇವೆರಡನ್ನೂ ಹಾಗೂ ಇಂಥ ಅನೇಕ ತತ್ವಭೂಮಿಕೆಗಳನ್ನು ಸಮನ್ವಯಗೊಳಿಸಿ, ಅದ್ಭುತ ಸಾಮರಸ್ಯವನ್ನು ತೋರಿ, ತೋರಿಕೆಯ ಜಗತ್ತು ಮತ್ತು ನೈಜ ಜಗತ್ತುಗಳ ನಡುವೆ ಸಮನ್ವಯವನ್ನು ತಂದು ಅನುಭವಸತ್ಯ ಮತ್ತು ಅನುಭಾವಸತ್ಯಗಳನ್ನೂ ಸಮ್ಮಿಳಿತಗೊಳಿಸಿ ಸಮಗ್ರ ಭೂಮಿಕೆಯನ್ನು ನಿರ್ವಿುಸಿದ ದೈತ್ಯಪ್ರತಿಭೆ ಆದಿಜಗದ್ಗುರು ಶ್ರೀ ಶಂಕರಾಚಾರ್ಯರದ್ದು. ಒಂದು ರೀತಿಯಲ್ಲಿ ಅವರ ಕಾಲದವರೆಗೆ ಭಾರತ ಭೂಮಿಯಲ್ಲಿ ಜನ್ಮತಾಳಿದ ಎಲ್ಲ ತಾತ್ವಿಕ ಸಿದ್ಧಾಂತಗಳಿಗೂ ಅಂಗೀಕಾರ ಸಿಗುವಂತೆ, ಭದ್ರವಾದ ತಾರ್ಕಿಕ ನೆಲೆಗಟ್ಟು ಸಿಗುವಂತೆ ಅವುಗಳಿಗೆ ಪುನರ್ಜನ್ಮವನ್ನೇ ನೀಡಿದ್ದು ಆದಿಶಂಕರರು. ಅವರ ವಿವರ್ತ ವಾದವನ್ನು ಆಧುನಿಕ ವಿಜ್ಞಾನವೂ ವಿರೋಧಿಸಲಾರದು. ಅಷ್ಟೇ ಅಲ್ಲ ಅದು ಪ್ರಚಲಿತಗೊಳಿಸುತ್ತಿರುವ ಸತ್ಯಗಳೂ ವಿವರ್ತವಾದವೇ, ಮಾಯಾ ಸಿದ್ಧಾಂತವೇ!
ಕಪಿಲರ ಸಾಂಖ್ಯಯೋಗದಿಂದ ಹಿಡಿದು ಆಧುನಿಕ ಕ್ವಾಂಟಂ ಸಿದ್ಧಾಂತದವರೆಗಿನ ಎಲ್ಲದರ ಭದ್ರ ಭೂಮಿಕೆ ಇದೇ ಆಗಿದೆ. ಸಾಂಖ್ಯರು ಬೌದ್ಧರು ಇನ್ನೊಂದೇ ಹೆಜ್ಜೆ ಮುಂದಿಟ್ಟಿದ್ದರೆ ಅವರು ಶಂಕರರನ್ನೇ ಮುಟ್ಟುತ್ತಿದ್ದರು. ಸ್ವಾಮಿ ವಿವೇಕಾನಂದರು ಆ ಕಾರಣಕ್ಕಾಗಿಯೇ ಅದ್ವೆ ೖತದ ಸಾರವೇ ಆದ ಮೇಲಿನ ಸಂದೇಶಗಳನ್ನು ಧಾರಾಳವಾಗಿ ಅಮೆರಿಕದ ಪಶ್ಚಿಮತೀರದ ಉದ್ದಕ್ಕೂ ಹರಡಿದರು. ಏಕೆಂದರೆ ಯಾವ ಸಿದ್ಧಾಂತವನ್ನೂ ಅಲ್ಲಗಳೆಯದೆ ಅವನ್ನೆಲ್ಲ ಒಳಗೊಂಡು, ನಾಸ್ತಿಕನಿಗೂ ಬೆಳಕನ್ನು ನೀಡಿ ಎಲ್ಲರಲ್ಲೂ, ಎಲ್ಲದರಲ್ಲೂ ತನ್ನ ಆತ್ಮವನ್ನೇ ಕಂಡು ಹರಡಿ ತನ್ಮೂಲಕ ಸ್ವಾತಂತ್ರ್ಯ, ಸಮಾನತೆಗಳಿಗೆ ಪ್ರಶ್ನಾತೀತವಾದ ನೆಲೆಗಟ್ಟನ್ನು ನಿರ್ವಿುಸಿ, ತನ್ನನ್ನು ಪಾಪಿ, ನಿಷ್ಪ್ರಯೋಜಕ ಎಂದು ಅಳುತ್ತಿದ್ದ ಜನರಿಗೆ ನೀನು ದೇವ, ನೀನು ಶಿವ ಎಂಬ ಭರವಸೆಯನ್ನಿತ್ತ ವಾತ್ಸಲ್ಯಮಯಿ, ದುಃಖ ನಿವಾರಿಣಿ ಮಾತೆ ಅದ್ವೈತ ವೇದಾಂತ.
ಅದ್ವೈತವನ್ನು ಕುರಿತು, ‘ಮೊದಲಿಂದಲೂ ನಾವು ಇದೇ ಸಿದ್ಧಾಂತವನ್ನು ಮತ್ತಷ್ಟು ರಭಸವಾಗಿ, ವಿಸõತವಾಗಿ ಬೋಧಿಸಿದ್ದರೆ ಈ ಪ್ರಪಂಚ ಇನ್ನೂ ಎಷ್ಟೋ ಉತ್ತಮವಾಗಿರುತ್ತಿತ್ತು’ ಎಂದು ಹೇಳಿದ್ದಾರೆ ಸ್ವಾಮಿ ವಿವೇಕಾನಂದರು. ಆದರೆ ಇದನ್ನೂ ಇಂಥ ತತ್ವದರ್ಶಿಗಳನ್ನು ವಿರೋಧಿಸುವವರಿಲ್ಲ ಎಂದಿರೇನು? ಮತಾಂಧತೆ, ಆಧ್ಯಾತ್ಮಿಕತೆಗಳ ನಡುವಣ ವ್ಯತ್ಯಾಸವನ್ನೇ ತಿಳಿಯದ, ವ್ಯಕ್ತಿಪ್ರಧಾನ ಗ್ರಂಥಪ್ರಧಾನ ದೃಷ್ಟಿಯನ್ನೇ ಜ್ಞಾನಚಕ್ಷುಗಳನ್ನಾಗಿಸಿಕೊಂಡ ಪಂಡಿತರೂ ಸಾಕಷ್ಟಿದ್ದಾರೆ. ಮಿದುಳು ನಿಷ್ಕ್ರಿಯವಾದರೆ ಇವೆಲ್ಲ ಸಹಜ.