ವಿಜ್ಞಾನವೂ ಬೆರಗಾಗುವಂಥ ತಾರ್ಕಿಕ, ಬೌದ್ಧಿಕ ನೆಲೆಗಟ್ಟು

ವಿಶೇಷ ಅಂಕಣ
ವಿಶೇಷ ಅಂಕಣ
Published on

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ಶಂಕರರ ಮುಂದಿದ್ದ ಕೆಲಸ ಬುದ್ಧಪೂರ್ವ ಭಾರತಕ್ಕಿಂತ ಕಡಿಮೆ ಸವಾಲಿನದ್ದೇನೂ ಆಗಿರಲಿಲ್ಲ. ಬೌದ್ಧ ತತ್ತ್ವಗಳು, ಮಧ್ಯ ಏಷ್ಯಾದಿಂದ ಬಂದ ಜನ ತಂದಿದ್ದ ತಂತ್ರಪ್ರಧಾನ ಆಚರಣೆಗಳು ಇವುಗಳನ್ನೆಲ್ಲ ಒಂದು ಸಾಮಾನ್ಯ ತತ್ತ್ವದಡಿಯಲ್ಲಿ ಪ್ರತಿಪಾದಿಸಬೇಕಾಯಿತು. ಅದಕ್ಕಾಗಿಯೇ ಯಾವುದನ್ನೂ ನಿರಾಕರಿಸದೇ ಆರು ಪ್ರಧಾನ ಪಂಥಗಳನ್ನು ನಿರ್ವಿುಸಿ ‘ಷಣ್ಮತ ಸ್ಥಾಪನಾಚಾರ್ಯ’ ಎನಿಸಿದರು. ಅವೇ ಇಂದು ಪ್ರಚಲಿತದಲ್ಲಿರುವ ಶಿವ, ದೇವಿ, ವಿಷ್ಣು, ಸೂರ್ಯ, ಗಣಪತಿ, ಸುಬ್ರಹ್ಮಣ್ಯರ ಆರಾಧನಾ ಪದ್ಧತಿಗಳು. 
ಇದೆಲ್ಲಕ್ಕೂ ಏಕಸೂತ್ರವನ್ನು ಒದಗಿಸದಿದ್ದರೆ ಅಸ್ತಿತ್ವವೇ ಸಾಧ್ಯವಿಲ್ಲವೆಂದು ಅರಿತಿದ್ದ ಅವರು ವೇದಮಾರ್ಗವನ್ನೇ ಅವಲಂಬಿಸಿ ಅದೈತವನ್ನು ಬುನಾದಿಯಾಗಿಸಿದರು. ಋಗ್ವೇದ ಈಗಾಗಲೇ ‘ಒಂದರ ಹಿನ್ನೆಲೆಯಲ್ಲಿ ಹಲವನ್ನು’ (ಏಕಂ ಸತ್ ವಿಪ್ರಾಃ ಬಹುಧಾ ವದಂತಿ) ಪ್ರೋತ್ಸಾಹಿಸಿದಂತೆ.

1. ಬುದ್ಧನ ಸಂನ್ಯಾಸ ಹಾಗೂ ಸಂಘಶಕ್ತಿಯನ್ನು ಉಳಿಸಿಕೊಂಡು ಸಂನ್ಯಾಸದ ಪರಿಮಾಣಕ್ಕೆ ಕಡಿವಾಣ ಮತ್ತು ಅಂತಃಸತ್ವಕ್ಕೆ ಒತ್ತು ನೀಡಿದವರು ಶಂಕರಾಚಾರ್ಯರು.

2. ಬುದ್ಧ ಉಪನಿಷತ್ತುಗಳ ನೈತಿಕತೆಗೆ ಮಹತ್ತ್ವ ಕೊಟ್ಟು ನೈತಿಕ ಸದೃಢತೆಯ ಅನಿವಾರ್ಯ ಪರಿಣಾಮವೇ ನಿರ್ಮಾಣ ಎಂದಾಗ ಶಂಕರರು ಜೀವನದ ಗುರಿ ಮೋಕ್ಷವಾದಾಗ ಎಲ್ಲ ನಡವಳಿಕೆಗಳಲ್ಲಿ ನೈತಿಕತೆ ಸ್ವತಃ ಸಿದ್ಧ ಎಂದರು.

3. ನೈತಿಕ ಬದ್ಧತೆಯನ್ನು ಉಳಿಸಲು ಬುದ್ಧ ಕರ್ಮ ಸಿದ್ಧಾಂತಕ್ಕೆ ಬಹಳಷ್ಟು ಒತ್ತು ಕೊಟ್ಟರೆ, (ಅಧ್ಯಯನ ಹೀನರಿಗೆ ಇವೆಲ್ಲ ಅರ್ಥವಾಗುವುದಿಲ್ಲ) ಆತ್ಮಸಾಕ್ಷಾತ್ಕಾರ ಗುರಿಯಾಗದಿದ್ದಲ್ಲಿ ಕರ್ಮಗಳು ಯಾವ ದಿಕ್ಕನ್ನೂ ಹಿಡಿಯಬಹುದು ಎಂದರು ಶಂಕರರು.

4. ‘ಆತ್ಮ’ ಎಂಬ ವಸ್ತುವೇ ಇಲ್ಲ ಎಂಬ ಬೌದ್ಧರ ವಾದವೇ ಅವರಿಗೆ ಮುಳುವಾಯಿತು. ‘ಬದಲಾವಣೆ ತಿಳಿಯುವುದೇ ಕಡಿಮೆ ಬದಲಾಯಿಸುವ ವಸ್ತುವಿನ ಹಿನ್ನೆಲೆಯಲ್ಲಿ ನಾವು ನೋಡಿದಾಗ’ ಎಂಬ ತರ್ಕವನ್ನು ಮುಂದುವರೆಸಿದಾಗ ‘ಬದಲಾಯಿಸದ ವಸ್ತುವೊಂದರ ಅಸ್ತಿತ್ವವನ್ನು ಒಪ್ಪಲೇಬೇಕು’ ಎಂದು ಪ್ರತಿಪಾದಿಸಿ ಬೌದ್ಧರ ತತ್ತ್ವಗಳ ಆಧಾರದಲ್ಲೇ ಅವರನ್ನು ಸಿಲುಕಿಸಿದ್ದು ಶಂಕರರ ತರ್ಕಸಾಮರ್ಥ್ಯ.


ಬುದ್ಧ ಮಾನುಷ ಶಕ್ತಿಗಳ ಪ್ರಧಾನ ಹರಿವುಗಳಾದ ಧರ್ಮ ಮತ್ತು ಸಮಾಜ ಎರಡರಲ್ಲೂ ಸಡಿಲತೆ ಇರಬಾರದೆಂದು ಸಮಾಜಕ್ಕೆ ಸ್ವಾತಂತ್ರ್ಯ ಕೊಟ್ಟು ಧರ್ಮದಲ್ಲಿ ಬಿಗಿಯನ್ನು ಉಳಿಸಿಕೊಂಡೇ ಬಂದಿದ್ದ. ಅವನ ಶಿಷ್ಯರು ಈ ಬಿಗಿಯನ್ನು ತೆಗೆದು ಅಲ್ಲೂ ಸ್ವಾತಂತ್ರ್ಯವನ್ನು ಪೋ›ತ್ಸಾಹಿಸಿದ್ದೇ ಅವುಗಳು ಪಂಥಗಳಾಗಿ ಒಡೆದು ಕುಸಿದೇ ಹೋಗಲು ಕಾರಣವಾಯಿತು. ಇದನ್ನರಿತ ಶಂಕರರು ಅಧ್ಯಾತ್ಮ ಮಾರ್ಗಕ್ಕೆ ಸ್ವಾತಂತ್ರ್ಯ ಕೊಟ್ಟು ಸಮಾಜವನ್ನು ಬಿಗಿಯಾಗಿಸಿದರು. ಮುಕ್ತಿ ಮಾರ್ಗ ಎಲ್ಲರಿಗೂ ತೆರೆಯಲ್ಪಟ್ಟರೂ ಗ್ರಂಥ ವಿಶ್ಲೇಷಣೆಗೆ ಮಾತ್ರ ಕೆಲವು ನಿರ್ದಿಷ್ಟ ಅರ್ಹತೆಗಳು ಅನಿವಾರ್ಯವಾದವು.

ಒಟ್ಟಿನಲ್ಲಿ ಶಂಕರರು ಭಾರತೀಯ ಧರ್ಮಕ್ಕೆ ಯಾವ ವಿಜ್ಞಾನವೂ ಬೆರಗಾಗುವ ತಾರ್ಕತೆ, ಬೌದ್ಧಿಕ ನೆಲೆಗಟ್ಟು ಕೊಟ್ಟರು- ತಮ್ಮ ಪ್ರಖರ ಬುದ್ಧಿಶಕ್ತಿಯಿಂದ. 


ಬುದ್ಧ ಉಪನಿಷತ್ತಿನ ನೈತಿಕತೆಯನ್ನು ಬಲಪಡಿಸಿದ. ಬೌದ್ಧರ ಉಚ್ಛಾ›ಯಸ್ಥಿತಿಯಲ್ಲಿ ಮಧ್ಯ ಏಷ್ಯಾದ ಕಂಡ ಕಂಡ ಜನರೆಲ್ಲ ಭಿಕ್ಷುಗಳಾದದ್ದು ಮತ್ತು ಆಧ್ಯಾತ್ಮಿಕತೆ ಮಿತಿಗಿಂತ ಹೆಚ್ಚಾಗಿ ಸಾಮಾಜೀಕರಣಗೊಂಡದ್ದು ಧರ್ಮದ ಕಲುಷಿತತೆಗೆ ಕಾರಣವಾಯಿತು ಎಂದು ಭಾವಿಸಿದ ಆಚಾರ್ಯ ಪರಂಪರೆ ಎಲ್ಲರೂ ವೇದಗಳಿಗೆ ಕೈಹಾಕುವುದನ್ನು ತಪ್ಪಿಸಿದರು. ಧರ್ಮದ ಅಧ್ವರ್ಯುಗಳು ಸಾಮಾಜಿಕ ಸಂಪರ್ಕದ ಮಿತಿಯಲ್ಲಿರಬೇಕಾಯಿತು. ಅರ್ಥಾತ್ ಉಪನಿಷತ್ ಸಂದೇಶ ಊರೊಳಗೆ ಪ್ರವೇಶಿಸಿದರೂ ಮಠಗಳಿಗೆ ಸೀಮಿತವಾಯಿತು. ನೈತಿಕತೆಗೆ ಸಂಬಂಧಪಟ್ಟ ಕನಿಷ್ಠ ಕೊರತೆಯೂ ಬಹಿಷ್ಕಾರದ ಶಿಕ್ಷೆಯನ್ನು ಅನುಭವಿಸಬೇಕಾಯಿತು. ಸಾಮಾಜಿಕ ವ್ಯವಹಾರಗಳು, ಸಂಬಂಧಗಳು ಕಟ್ಟುನಿಟ್ಟಾದವು. ಆಚಾರ್ಯರಲ್ಲೇ ಶೈವ ಪ್ರಧಾನರು ಮತ್ತು ವೈಷ್ಣವ ಪ್ರಧಾನರು ಎಂಬ ಸೀಳು ಏರ್ಪಟ್ಟು ಇದು ಮುಸುಕಿನ ಗುದ್ದಾಟಕ್ಕೆ ಕಾರಣವಾಗಿ ಕೆಲವೊಮ್ಮೆ ರಾಜಕೀಯ ಧ್ರುವೀಕರಣಕ್ಕೂ ಕಾರಣವಾಗಿದ್ದುಂಟು. ಆಕ್ರಮಣಕಾರಿ ಮತಗಳು ಭಾರತದ ಮೇಲೆ ದಾಳಿ ಮಾಡಿ ಸಾಮಾಜಿಕವಾಗಿ ಕೆಳಗಿದ್ದವರನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡದ್ದರಿಂದ ಹಿಂದೂಗಳಿಗೂ ಇವರಿಗೂ ತಿಕ್ಕಾಟ ಸಾಮಾನ್ಯವೆಂಬಂತೆ ಆಗಿಬಿಟ್ಟಿತು. 


ಸುತ್ತಲೂ ಇದ್ದ ಬೌದ್ಧ ರಾಷ್ಟ್ರಗಳ ಸಂಪರ್ಕ ಕನಿಷ್ಠ ಪ್ರಮಾಣದಲ್ಲೂ ಆಗದಂತೆ ‘ಮ್ಲೇಚ್ಛ’ ಎಂಬ ವ್ಯವಸ್ಥೆಯನ್ನು ರೂಪಿಸಲಾಯಿತು. ಪರರಾಷ್ಟ್ರಗಳಿಂದ ದೂರವಿದ್ದ ಭಾರತ ಬೇರೆಡೆ ಯಾವ ಬೆಳವಣಿಗೆಗಳು ನಡೆಯುತ್ತಿವೆ ಎಂಬುದನ್ನೇ ಅರಿಯದೆ ಕೂಪಮಂಡೂಕವಾಗಿ ಹೊರ ರಾಷ್ಟ್ರಗಳ ಆಕ್ರಮಣಗಳಿಗೆ ಸುಲಭದ ಬಲಿಪಶುವಾಯಿತು. ಹಿಂದೂಗಳ, ಬೌದ್ಧರ ತಿಕ್ಕಾಟ ಇಸ್ಲಾಂನ ಪ್ರವೇಶಕ್ಕೆ ನಾಂದಿಯಾದಂತೆ ಮುಸ್ಲಿಮರ ಮತ್ತು ಹಿಂದೂಗಳ ತಿಕ್ಕಾಟ ಯುರೋಪಿಯನ್ನರ ಪ್ರವೇಶಕ್ಕೆ ದಾರಿ ಮಾಡಿಕೊಟ್ಟಿತು. ವಿವೇಕಾನಂದರು ಇಂಥ ಭಾರತದಲ್ಲಿ ಅವತರಣಗೊಂಡದ್ದು. 

ವಿವೇಕಾನಂದರ ತತ್ತ್ವಗಳಿಗೆ ಆದರ್ಶ ಶಂಕರರು. ಅವರ ವ್ಯಕ್ತಿತ್ವಕ್ಕೆ ಆದರ್ಶ ಬುದ್ಧ. ‘ಬುದ್ಧನ ಹೃದಯ, ಶಂಕರರ ಬುದ್ಧಿ’ ಅವರು ಮತ್ತೆ ಮತ್ತೆ ಪ್ರತಿಪಾದಿಸುತ್ತಿದ್ದ ತತ್ತ್ವ. ಮಧ್ಯಯುಗಕ್ಕಿಂತ ಭಿನ್ನವಾಗಿ ‘ಪ್ರಜಾಸತ್ತೆ’, ‘ಸಮಾನತೆ’ಗಳು ಸರ್ವಜನ ಆಕರ್ಷಣೆಗಳಿಗೆ ಒಳಗಾಗಿದ್ದ ಕಾಲದಲ್ಲಿ ಬಂದ ವಿವೇಕಾನಂದರು ಉಪನಿಷತ್ತಿನ ಆಧಾರದಲ್ಲಿ ಏಕತೆಯ ನೆಲೆಗಟ್ಟಿನಲ್ಲಿ ಸಾಮಾನ್ಯ ಸೂತ್ರವನ್ನು ಎತ್ತಿ ಹಿಡಿದರು. 


ವಿವೇಕಾನಂದರ ವ್ಯಕ್ತಿತ್ವದಲ್ಲಿಯೇ ಶಂಕರರ ಬುದ್ಧಿ, ಬುದ್ಧನ ಹೃದಯವನ್ನು ಕಾಣುತ್ತೇವೆ. ಸಹಜವಾಗಿಯೇ ವಿವೇಕಾನಂದರ ರ್ತಾಕ ನೆಲೆ ಶಂಕರರ ಉಪನಿಷತ್​ಗಳು. 

ಶಂಕರರ ಅದ್ವೈತವೇ (ಸ್ವಲ್ಪ ವ್ಯತ್ಯಾಸದೊಡನೆ) ಸ್ವಾಮೀಜಿಯವರ ಉಪದೇಶಗಳ ಪ್ರಧಾನ ಪಲ್ಲವಿ. ಬೌದ್ಧಧರ್ಮದಂತೆಯೇ ವೇದಾಂತ ಪ್ರತಿಯೊಂದು ರಾಷ್ಟ್ರದ ಮೆದುಳು ಮತ್ತು ಮನಸ್ಸನ್ನು ಪ್ರವೇಶಿಸಬೇಕೆಂಬುದು ವಿವೇಕಾನಂದರ ಕಾರ್ಯಯೋಜನೆಗಳಲ್ಲೊಂದು. ಅವರ ದೃಷ್ಟಿಯಲ್ಲಿ ಯೋಗ್ಯ ಶಿಕ್ಷಣದ ಮೂಲಕ ವ್ಯಕ್ತಿ ಜಾಗೃತನಾದಾಗ ಸಾಮಾಜಿಕ ತತ್ವಗಳು, ದೃಷ್ಟಿಕೋನಗಳು ತಾವೇ ಬದಲಾಯಿಸುತ್ತವೆ. ಅವರಿಗೆ ಬೆಳವಣಿಗೆ ಮುಖ್ಯವೇ ಹೊರತು ಸುಧಾರಣೆ ಅಲ್ಲ. ಅಧ್ಯಾತ್ಮಸತ್ಯಗಳ ಪರಿಚಯ ಮತ್ತು ಸಂಸ್ಕೃತ ಭಾಷಾಜ್ಞಾನ ಭಾರತದಲ್ಲಿ ಸಾಮಾಜಿಕ ಸ್ತರವನ್ನು ಎತ್ತರಿಸುತ್ತವೆ.


ಬುದ್ಧ ಕೆಳವರ್ಗಗಳಿಗೆ ಸಂಸ್ಕೃತ ಬೋಧಿಸದಿದ್ದುದೇ ಅವರನ್ನು ಮೇಲ್ವರ್ಗಗಳು ಸ್ವೀಕರಿಸದೆ ಹೋದವು ಎನ್ನುವುದು ಅವರ ಅಭಿಮತ. ಮೇಲ್ವರ್ಗಗಳೇ ತಮ್ಮ ಪತಿತ ಸೋದರರ ಉದ್ಧಾರಕ್ಕೂ ಕಾರಣವಾಗಬೇಕು ಎಂದು ಭಾವಿಸಿ ‘ದೀನರಲ್ಲಿ, ದರಿದ್ರರಲ್ಲಿ ಶಿವನನ್ನು ಕಂಡು ಆರಾಧಿಸಿ’ ಎಂಬ ನೂತನ ವೇದವನ್ನೇ ಕೊಟ್ಟಿದ್ದಾರೆ. ಸ್ಮೃಗಳು, ಪುರಾಣಗಳು, ದೇಶಾಚಾರಗಳು, ತಂತ್ರದ ನವೀನ ಆವಿಷ್ಕಾರಗಳನ್ನೇ ಪರಿಪೂರ್ಣ ಧರ್ಮವನ್ನಾಗಿಸಿಕೊಂಡಿದ್ದ ಭಾರತಕ್ಕೆ ‘ಪ್ರತಿಯೊಬ್ಬರಲ್ಲೂ ಅಡಗಿರುವ ದಿವ್ಯತೆಯನ್ನು ವ್ಯಕ್ತಪಡಿಸುವುದೇ ಧರ್ಮ. ಬೇರೆಲ್ಲ ಅಷ್ಟೇನೂ ಪ್ರಮುಖವಲ್ಲ’ ಎಂದು ಘೊಷಿಸಿ ಧರ್ಮವನ್ನು ಸಾರ್ವತ್ರಿಕರಣಗೊಳಿಸಿದರು. ಮತ್ತು ಅದಕ್ಕೆ ವೈಶ್ವವಿಕ ಸ್ವೀಕಾರಾರ್ಹತೆಯನ್ನು ಮತ್ತು ವೈಜ್ಞಾನಿಕ ವ್ಯಾಖ್ಯೆಯನ್ನು ಒದಗಿಸಿದರು.


ತಮ್ಮ ಗುರುಗಳಾಗಿದ್ದ ಶ್ರೀರಾಮಕೃಷ್ಣರ ಅನುಭವಗಳ ಮಹಾನ್ ಬೆಳಕಿನಲ್ಲಿ ಇಡೀ ಜೀವನವೇ ಒಂದು ಏಕಸೂತ್ರದಲ್ಲಿ ಧರಿಸಲ್ಪಟ್ಟಿದೆ ಎಂಬುದನ್ನು ಸಂದೇಹಕ್ಕೆಡೆಯಿಲ್ಲದಂತೆ ಅರಿತಿದ್ದ ಸ್ವಾಮೀಜಿ ಅಂತಃಶಕ್ತಿಯನ್ನು ಜಾಗೃತಗೊಳಿಸಿ ವಸ್ತು ಪ್ರಪಂಚದೆಡೆಗೆ ಹರಿಯಿಸಿದರೆ ಲೌಕಿಕ ಭವ್ಯತೆ, ವೈಭವಗಳು, ಚಿಂತನ ಜಗತ್ತಿಗೆ ಹರಿಯಿಸಿದರೆ ಅಪಾರ ಬೌದ್ಧಿಕ ಸಾಧ್ಯತೆಗಳು, ಅಂತಮುಖಿಯಾಗಿಸಿದರೆ ಸಂತತ್ವವೂ ಲಭಿಸುತ್ತದೆ ಎನ್ನುವುದರ ಮೂಲಕ ‘ಮಹತ್ವ’ವೇ ಆಧ್ಯಾತ್ಮಿಕತೆಯ ಲಕ್ಷಣವೇ ಹೊರತು ಯಾವುದೇ ನಿರ್ದಿಷ್ಟ ವಲಯದಲ್ಲಿ ಮಾಡುವ ಸಾಧನೆ ಮಾತ್ರವೇ ಆಧ್ಯಾತ್ಮಿಕ ಸಾಧನೆಯಲ್ಲ ಎಂದು ಹೇಳಿ ಗೀತೆಯ ವಿಭೂತಿತತ್ತ್ವವನ್ನು ಪುನರುಚ್ಚರಿಸಿದರು.


ದೀನರು, ದರಿದ್ರರು, ಪಾಪಿಗಳಲ್ಲೂ ದೇವನಿರುವ ಎಂದು ಉಚ್ಚಕಂಠದಿಂದ ಮೊಳಗಿ ಸಮಾಜಮುಖಿಯಾದ ಸೇವೆ ಮತ್ತು ಯೋಗಮುಖಿಯಾದ ಧ್ಯಾನ ಒಟ್ಟಿಗೆ ನಿಲ್ಲುವಂತೆ ಮಾಡಿದರು. ಪಾವಿತ್ರ್ಯ, ನಿಃಸ್ವಾರ್ಥತೆ, ಧೈರ್ಯಗಳೇ ಯಾವುದೇ ಸಾಧಕನ ಪ್ರಮುಖ ಲಕ್ಷಣಗಳು ಎಂದು ಹೇಳಿ ‘ಸಾಮರ್ಥ್ಯದಿಂದೊಡಗೂಡಿದ ಹೊಸ ಮನುಷ್ಯನಾಗುವುದೇ ಸಮಸ್ಯೆಗಳಿಗೆ ನಿಜವಾದ ಪರಿಹಾರ’ ಎಂದರು. ಹಿಂದೂಗಳ ‘ಧರ್ಮವೈಶಾಲ್ಯ’, ಇಸ್ಲಾಮಿನ ‘ಸಾಮಾಜಿಕ ಐಕ್ಯತೆ’, ಬೌದ್ಧರ ‘ಸಂಘಶಕ್ತಿ’, ಕ್ರೖೆಸ್ತರ ‘ಪ್ರಾಯೋಗಿಕತೆ’ ಇವುಗಳನ್ನೊಳಗೊಂಡ ಸಮನ್ವಯ ಸಂಯೋಗವೇ ಇಂದಿನ ಆದರ್ಶ ಎಂದು ಉಚ್ಚರಿಸಿ ಪ್ರತ್ಯೇಕತೆಯನ್ನು ತಿರಸ್ಕರಿಸಿ ಪರಸ್ಪರತೆ ಸೂತ್ರವನ್ನು ಎತ್ತಿ ಹಿಡಿದಿದ್ದು ಸ್ವಾಮೀಜಿಯವರ ಕೊಡುಗೆಗಳಲ್ಲಿ ಮಹತ್ತ್ವಪೂರ್ಣವಾದದ್ದು. ಜ್ಞಾನದ ಸಕಲ ವಿಭಾಗಗಳೂ ವೇದಾಂತ ತತ್ತ್ವದ ಪ್ರತಿಫಲನಗಳು. ಸತ್ಯದ ಗ್ರಹಿಕೆ ಇಂದ್ರಿಯ ವಲಯದಲ್ಲಿ ವಿಜ್ಞಾನವಾದರೆ ಇಂದ್ರಿಯಗಳ ಮಿತಿಗೊಳಪಟ್ಟು ಆಂಶಿಕ ಸತ್ಯವಾಗಿ ವಸ್ತುಗಳ ಗುಣಗಳನ್ನು ತಿಳಿಸುವಲ್ಲಿ ಮಾತ್ರ ಸಮರ್ಥವಾದರೆ, ಇಂದ್ರಿಯಾತೀತ ವಲಯದಲ್ಲಿ ವಸ್ತು, ಗ್ರಹಿಕೆ, ಗ್ರಹಿಸುವವನು, ಎಲ್ಲರನ್ನೂ ಒಳಗೊಂಡ ಏಕಮಾತ್ರ ಅನುಭವವಾಗುತ್ತದೆ. 


ಈ ಅನುಭವವೇ ವೇದಾಂತದ ವಸ್ತು ಮತ್ತು ಗುರಿ ಎನ್ನುವುದರ ಮೂಲಕ ವಿಜ್ಞಾನ, ಆಧ್ಯಾತ್ಮಿಕತೆಗಳು ಒಂದೇ ಸತ್ಯದ ಎರಡು ಮಜಲುಗಳು ಎಂದು ಸಾರಿದರು. ಭಾರತೀಯ ತತ್ತ್ವಗಳ ಸಾರ್ವಕಾಲಿಕತೆ, ಸಾರ್ವತ್ರಿಕತೆ, ವೈಜ್ಞಾನಿಕತೆ ಮತ್ತು ಪರಿಪೂರ್ಣತೆಗಳನ್ನು ಎತ್ತಿಹಿಡಿದು, ವಿಜ್ಞಾನ ಮತ್ತು ಧರ್ಮಗಳ ಹಾಗೂ ಧರ್ಮ-ಧರ್ಮಗಳ ನಡುವೆಯೇ ಇರುವ ತಿಕ್ಕಾಟಕ್ಕೆ ವೇದಾಂತವೇ ಮದ್ದು ಎಂದರು. ನಮ್ಮ ಪರಂಪರೆ, ಜ್ಞಾನ ಮತ್ತು ವೈಚಾರಿಕ ಸಾಮರ್ಥ್ಯಗಳನ್ನು ಕಂಡು ಪ್ರಪಂಚವೇ ತಲೆದೂಗುವಂತೆ ಮತ್ತು ಭಾರತವನ್ನು ಅತ್ಯಂತ ಗೌರವದಿಂದ ಕಾಣುವಂತೆ ಮಾಡಿದರು.

ವಿವೇಕಾನಂದರಿಂದ ಸಂದ ಅತ್ಯಂತ ದೊಡ್ಡ ಉಪಕಾರವೆಂದರೆ ಯಾವುದನ್ನು ಇಲ್ಲಿಯವರೆಗಿನ ಸುಧಾರಕರು ನಮ್ಮ ‘ಧರ್ಮದ ದೋಷ’ಗಳು ಎಂದು ಪರಿಗಣಿಸಿದ್ದರೋ ಅವೆಲ್ಲವೂ ನಮ್ಮ ‘ಸಾಮಾಜಿಕ ದೋಷ’ಗಳೇ ಹೊರತು ಧರ್ಮದ್ದಲ್ಲ ಎಂದು ಸಂಶಯಕ್ಕೆಡೆಯಿಲ್ಲದಂತೆ ಸಾಬೀತು ಮಾಡಿದರು. ಧರ್ಮವು ಎಂದೆಂದಿಗೂ ಅದೇ ತೇಜಸ್ಸಿನಿಂದ ಕೂಡಿದೆ, ಎಲ್ಲೂ ಕಳೆಗುಂದಿಲ್ಲ ಮತ್ತೆ ಮೈ ಕೊಡವಿ ಎದ್ದು ನಿಲ್ಲುತ್ತದೆ ಮತ್ತು ಇಡೀ ವಿಶ್ವವನ್ನೇ ತಬ್ಬುವ ಪ್ರಯತ್ನವನ್ನು ಮಾಡುತ್ತದೆ ಎಂದು ತೋರಿಸಿದರು.


ಒಟ್ಟಿನಲ್ಲಿ ಬುದ್ಧ, ಶಂಕರ, ಬಸವೇಶ್ವರ ಮತ್ತು ವಿವೇಕಾನಂದರು ಇಡೀ ಮನುಕುಲದ ಭವಿಷ್ಯದ ಆಧಾರಸ್ತಂಭಗಳು ಹಾಗೂ ಪೂರಕ ಶಕ್ತಿಗಳೇ ಹೊರತು ವೈರುಧ್ಯಗಳಲ್ಲ. ಪ್ರತಿಯೊಬ್ಬರೂ ಮತ್ತೊಬ್ಬರ ಕಾರ್ಯಕ್ಕೆ ರ್ತಾಕ ಪರಿಪೂರ್ಣತೆಯನ್ನು ತಂದರು. ಇವರಿಗೆ ಮತ್ತು ಇಂಥ ಎಲ್ಲ ಮಹಾತ್ಮರಿಗೆ ಇಡೀ ಮನುಕುಲವೇ ನಿರಂತರ ಕೃತಜ್ಞತೆಯನ್ನು ಸಲ್ಲಿಸಬೇಕು.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net