

ಪ್ರತಿನಿತ್ಯ, ಪ್ರತಿಯೊಬ್ಬರೂ ಮಾಡುವ ಊಟ, ನಿದ್ರೆಗಳಿಗೆ ಸಂಬಂಧಿಸಿದಂತೆ ನಿಗದಿತವೇಳೆ ಇತ್ಯಾದಿ ನಿಯಮಗಳನ್ನು ಅನುಸರಿಸುವುದೇ ಎಷ್ಟೋ ಜನರಿಗೆ ಸಾಧ್ಯವಿಲ್ಲದಿರುವಾಗ ಸರಳತೆ, ಅಹಿಂಸೆ, ನಿಃಸ್ವಾರ್ಥತೆ, ರಾಷ್ಟ್ರಪ್ರೇಮ ಇತ್ಯಾದಿ ತತ್ವಗಳನ್ನು ಅನುಸರಿಸುವುದು ಒಂದು ದೊಡ್ಡ ತಪಸ್ಸೇ ಸರಿ. ಆದರೆ ಇವೆಲ್ಲದರಲ್ಲಿ ಮೇರುಪ್ರಾಯವಾದದ್ದು ಸತ್ಯನಿಷ್ಠೆ, ಪರಿಪೂರ್ಣ ತ್ಯಾಗ. ಈ ಪೂರ್ಣತ್ಯಾಗದಲ್ಲಿ ಅತ್ಯಂತ ಕ್ಲಿಷ್ಟ ಹಾಗೂ ಪ್ರಧಾನವಾದದ್ದೇ ಬ್ರಹ್ಮಚರ್ಯ. ಪೂರ್ಣತ್ಯಾಗವಿಲ್ಲದೇ ಕೊನೆಯಪಕ್ಷ ಬ್ರಹ್ಮಚರ್ಯವಿಲ್ಲದೇ ಪೂರ್ಣಸತ್ಯದ, ಪೂರ್ಣಪರಿಚಯ ಒಂದು ರೀತಿಯಲ್ಲಿ ಅಸಾಧ್ಯವೆಂದೇ ಹೇಳಬೇಕು. ಇಂತಹ ಅದ್ಭುತ ವ್ಯಕ್ತಿಗಳನ್ನು ನೀಡಬಲ್ಲ ಸಾಮರ್ಥ್ಯವೇ ಒಂದು ಸಮಾಜ ಇರಿಸಿಕೊಳ್ಳಬೇಕಾದ ಅರ್ಥಪೂರ್ಣ ಗುರಿ. ಈ ನಿಟ್ಟಿನಲ್ಲಿ ಅದು ಎಷ್ಟು ಯಶಸ್ವಿಯಾಗುತ್ತದೋ ಅಷ್ಟರಮಟ್ಟಿಗೆ ಬಲಿಷ್ಠ ಸಮಾಜ ಅದು.
ಇಂಥ ತತ್ವಬದ್ಧರನ್ನೇ ಸಂಪ್ರದಾಯ ತಪಸ್ವಿಗಳು ಎಂದು ಕರೆದದ್ದು. ತತ್ವಬದ್ಧರಲ್ಲಿದ್ದಂತೆ ತಪಸ್ವಿಗಳಲ್ಲೂ ‘ಶ್ರೇಣಿ’ ಇದೆ. ಅತ್ಯಂತ ಉನ್ನತಮಟ್ಟವನ್ನು ಮುಟ್ಟಿದವರನ್ನು ‘ಅವತಾರ’ ಎಂದು ಕರೆದರೆ, ಎರಡನೇ ಹಂತದವರನ್ನು ‘ಈಶ್ವರಕೋಟಿ’ ಅಥವಾ ‘ನಿತ್ಯಸಿದ್ಧ’ ಎನ್ನುತ್ತಾರೆ ಮತ್ತು ಮೂರನೆಯ ಹಂತದವರು ‘ಮುಕ್ತಾತ್ಮರು’. ಮೊದಲ ಹಂತ ಯಾರಿಗೂ ಸಾಧ್ಯವಿಲ್ಲದ್ದು. ಎರಡನೆಯದ್ದು ಬಹು ಕ್ಲಿಷ್ಟ. ಮೂರನೆಯದ್ದು ಮಾತ್ರ ಭಾರತೀಯ ಸಂಸ್ಕೃತಿಯಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಗುರಿಯಾಗಿಸಿಕೊಳ್ಳಬೇಕಾದ್ದು. ಹೀಗಿದ್ದರೂ ಇದೂ ಪ್ರಯಾಸಕರವೇ. ‘ಪ್ರಯಾಸವಿಲ್ಲದ ಜೀವನ ಕೇವಲ ಅಸ್ತಿತ್ವ ಮಾತ್ರ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ‘ಕಲ್ಲಿಗೂ ಅಸ್ತಿತ್ವವಿರುತ್ತದೆ. ನಾನು ಮೇಲೆ ಹೇಳಿದ ಯಾವುದೂ ಕಲ್ಪನೆಯೋ, ಕಥೆಯೋ ಅಲ್ಲ! ಗುಂಡಿಗೆಯಿದ್ದರೆ ಇವೆಲ್ಲ ಹಾಗಿಲ್ಲ ಎಂದು ಸಾಧಿಸಿ’ ಎಂದು ಮದ್ರಾಸ್ ವಿಶ್ವವಿದ್ಯಾಲಯದಿಂದ ತರುಣರಿಗೆ 1892ರಲ್ಲೇ ಸವಾಲು ಹಾಕಿದ್ದರು ವಿವೇಕಾನಂದರು, ವೇದಗಳ ಬಗ್ಗೆ ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ. ಇವೆಲ್ಲ Verified truths and open for verification any time. ಐನ್ಸ್ಟೀನರ ಸಿದ್ಧಾಂತ ಇದರ ಸಮೀಪಕ್ಕೇನೋ ಬಂತು. ಆದರೆ ಕೊನೇ ಮುಟ್ಟಲಾಗಲಿಲ್ಲ. ಏಕೆಂದರೆ ಅಲ್ಲಿ ಬೇಕಾಗಿದ್ದುದು ಅಂತಮುಖತೆ ಮತ್ತು ಧ್ಯಾನ; ಆಂತರಿಕ ಪ್ರಯೋಗಶೀಲತೆ ಮತ್ತು ನಿಧಿಧ್ಯಾಸನ. ಈ ಚರಮಸತ್ಯವನ್ನೇ, ಪರಮ ತತ್ವವನ್ನೇ ವೇದಗಳು ಬ್ರಹ್ಮ, ಪರಮಾತ್ಮ ಭಗವನ್ ಎಂದು ಕರೆಯುತ್ತವೆ. ಈ ಮೂರು ಬೇರೆ ಬೇರೆ ಮಾರ್ಗಗಳನ್ನು ಅನುಸರಿಸುವಾಗ ಒದಗುವ ಅನುಭವಗಳು ಹೇಗೇ ಇರಲಿ ಆದರೆ ಅದು ಸಿದ್ಧಿಸಬೇಕಾದರೆ ಅತ್ಯಂತ ಅವಶ್ಯಕವಾದದ್ದೇ ತಪಸ್ಸು ಅರ್ಥಾತ್ ಸತ್ಯದೆಡೆಗಿನ ಏಕನಿಷ್ಠೆ ಮತ್ತು ಬೇರೆಲ್ಲದರ ಕಡೆಗಿನ ವಿಮುಖತೆ ಅಥವಾ ಸತ್ಯದೆಡಗಿನ ತೀವ್ರ ಅನುರಾಗ ಮತ್ತು ಬೇರಲ್ಲದರ ಕಡೆ ವಿರಾಗ. ಇಂಥ ವಿಷಯಗಳಲ್ಲಿ ಸಾರ್ವಕಾಲಿಕ ಅಧಿಕಾರವಾಣಿ ಶ್ರೀರಾಮಕೃಷ್ಣರದ್ದು. ಅವರೊಂದು ಕಡೆ ಜಗನ್ಮಾತೆಗೆ ಪ್ರಾರ್ಥಿಸುತ್ತ ಹೇಳುತ್ತಾರೆ- ‘ಅಮ್ಮ ಸತ್ಯಪ್ರಿಯತೆ ಮತ್ತು ಭಕ್ತಿಗಳನ್ನು ಬಿಟ್ಟು ಬೇರೆಲ್ಲ ನೀನೇ ತೆಗೆದುಕೋ ನನಗೇನೂ ಬೇಡ. ಈ ಸ್ಥಿತಿಯನ್ನು ಪಡೆದವರು ಬಿಡಿ, ಈ ಮಾರ್ಗದಲ್ಲಿ ಪ್ರಯಾಣಿಸಿದವರ ನಾಮೋಚ್ಛಾರಣೆ ಕೂಡ ಮನುಷ್ಯನನ್ನು ಪವಿತ್ರರನ್ನಾಗಿಸಬಲ್ಲದು. ಆ ಸಾಲಿಗೆ ಸೇರಿದ, ಮುನಿಕುಲೋತ್ತುಂಗ, ಬ್ರಹ್ಮವಿತ್, ದೇಶಿಕೋತ್ತಮರೇ ರಾಮಕೃಷ್ಣ ಮಿಷನ್ನಲ್ಲಿ 40 ವರ್ಷಗಳ ಕಾಲ ಸೇವೆಗೈದು ಆಚಂದ್ರಾರ್ಕವಾದ ಛಾಪು ಮೂಡಿಸಿದ ಶ್ರೀಮದ್ ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜ್. ನಾಳಿದ್ದು ಹದಿನಾಲ್ಕರಂದು ಈ ಮಹಾತ್ಮರು ಇಳೆಯನ್ನು ಪಾವನಗೊಳಿಸಿದ ಪುಣ್ಯದಿನ. ಅವರ ಸ್ಮರಣೆಯೇ ಇಂದಿನ ಲೇಖನ.
ಪೂಜ್ಯರನ್ನು ನಾನು ಪ್ರಥಮ ಬಾರಿಗೆ ಕಂಡಿದ್ದು 1975ರ ದ್ವಿತೀಯಾರ್ಧದಲ್ಲಿ. ನಾನು ಓದುತ್ತಿದ್ದ ಬೆಂಗಳೂರಿನ ರಾಮಕೃಷ್ಣ ಸ್ಟೂಡೆಂಟ್ಸ್ ಹೋಂನಲ್ಲಿ. ಆ ಹೋಂ ರಾಮಕೃಷ್ಣ ಮಿಷನ್ಗೆ ಸೇರಿದ್ದಲ್ಲ. 1919ರಲ್ಲಿ ಪ್ರಾರಂಭವಾದ ಈ ವಿದ್ಯಾರ್ಥಿನಿಲಯ ಇಂದು ಜಗತ್ತಿನಾದ್ಯಂತ ಅಪೂರ್ವ ಸೇವೆ ಸಲ್ಲಿಸುತ್ತಿರುವ ಸಹಸ್ರಾರು ವ್ಯಕ್ತಿಗಳ ನಿರ್ಮಾಣ ಕೇಂದ್ರ ; ಸಂಸ್ಕಾರದಾಣ. ಅಲ್ಲಿನ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮೊದಲ ಸಲ ಸ್ವಾಮೀಜಿಯನ್ನು ನೋಡಿದಾಗ ನನಗೆ ಅವರೊಬ್ಬರು ಮನುಷ್ಯಮಾತ್ರರಂತೆ ಕಾಣಲೇ ಇಲ್ಲ. ಅತ್ಯಂತ ತೇಜಸ್ವಿ ಮುಖ ಮಂಡಲ, ವಿಶಾಲ ನೇತೃದ್ವಯ, ಕೋಗಿಲೆಯ ಇಂಪನ್ನು ನಾಚಿಸುವ ಧ್ವನಿ, ಸೌಜನ್ಯ ಸಂಸ್ಕೃತಿಗಳೇ ಮೂರ್ತಿವೆತ್ತಂಥ ಪದಪುಂಜಗಳು ; ಕಣ್ಣೆವೆಯಿಕ್ಕದೆ ಅದೆಷ್ಟು ಹೊತ್ತು ಅವರನ್ನು ಹಾಗೆಯೇ ನೋಡುತ್ತಿದ್ದೇನೋ ಆ ದೇವರೇ ಬಲ್ಲ. ಕಾರ್ಯಕ್ರಮ ಮುಗಿಸಿ ದಿ. ಪ್ರೊ. ಜಿ.ವೆಂಕಟಸುಬ್ಬಯ್ಯನವರ ಕಾರು ಹತ್ತಿ ಅವರು ನಿರ್ಗಮಿಸುವವರೆಗೂ ಅವರನ್ನು ನೋಡುತ್ತಲೇ ಅವರ ಪಕ್ಕದಲ್ಲಿಯೇ ನಡೆಯುತ್ತಿದ್ದೆ. ಅವರು ಎಲ್ಲಿರುತ್ತಾರೆ ಎಂದು ತಿಳಿದು ಮಾರನೇ ದಿನವೇ ಶ್ರೀರಾಮಕೃಷ್ಣಾಶ್ರಮಕ್ಕೆ ಭೇಟಿಯಿತ್ತಿದ್ದೆ. ಅವರ ಇನ್ನೊಂದು ಮುಖ ಅನಾವರಣಗೊಂಡಿದ್ದು ಅಲ್ಲಿ. ಏನು ದೇವದುರ್ಲಭ ಕಂಠ ಅವರದ್ದು! ಅಬ್ಬಾ! ಈ ಮನುಷ್ಯನಲ್ಲಿ ಏನೆಲ್ಲ ತುಂಬಿ ಬಿಟ್ಟಿದ್ದಾನೆ ದೇವರು ಎಂದು ಸಖೇದಾಶ್ಚರ್ಯಗಳಿಂದ ಅವರಿಗೆ ಪ್ರಣಾಮಗೈದು ಹಾಸ್ಟೆಲ್ಗೆ ಹಿಂದಿರುಗಿದ್ದೆ. ಈ ಸಮಯದಲ್ಲಿ ಅವರದ್ದು 40ರ ಹರೆಯ. ಸಂನ್ಯಾಸ ದೀಕ್ಷೆಯಾಗಿ 5-6 ವರ್ಷಗಳಷ್ಟೇ ಕಳೆದಿದ್ದವು. ಈಗಾಗಲೇ ಮನಸ್ಸಿನ ತುಂಬ ತುಂಬಿದ್ದ ಇವರನ್ನು ಪರಿಚಯಿಸಿಕೊಳ್ಳಬೇಕಲ್ಲ, ಇವರೊಂದಿಗೆ ಮಾತನಾಡಬೇಕಲ್ಲ ಎಂಬ ಉತ್ಸಾಹದಲ್ಲಿಯೇ ಅದೆಷ್ಟು ದಿನಗಳನ್ನು ಕಳೆದೆನೋ ಆ ದೇವನೇ ಬಲ್ಲ.
ವೈದಿಕ ಸಂಪ್ರದಾಯಸ್ಥ ಮನೆತನದ ಹಿನ್ನೆಲೆಯಿದ್ದು, ಸಂನ್ಯಾಸಿಗಳೆಂದರೆ ಬೇರೆಯೇ ಚಿತ್ರವಿದ್ದ ನನಗೆ ಇವರು ಅದ್ಹೇಗೆ ಇಷ್ಟೊಂದು ಆಕರ್ಷಣೀಯರಾದರು ಎಂಬ ಪ್ರಶ್ನೆ ನನ್ನಂತೆಯೇ ಹಲವು ಯುವಕರನ್ನೂ ಕಾಡಿತ್ತು ಎನ್ನುವುದು ಬೇರೆಯೇ ಪ್ರಶ್ನೆ. ಆದರೆ ಮುಂದಿನ ದಿನಗಳಲ್ಲಿ ನನ್ನ ಅವರ ಆತ್ಮೀಯತೆ ಅದೆಷ್ಟು ಗಾಢವಾಗಿ ಬೆಳೆಯಿತೆಂದರೆ ನನ್ನ ಪೂರ್ವಾಶ್ರಮದ ಇಡೀ ಕುಟುಂಬವೇ ಅವರ ಆಜ್ಞಾಧಾರಿಗಳಾಗಿ ಬೆಳೆದಿದ್ದು ಇದನ್ನೂ ಮೀರಿದ ಆಶ್ಚರ್ಯ.
ಲೇಖನದ ಪೀಠಿಕೆಯಲ್ಲಿ ಹಲವು ರೀತಿಯ ಮಹಾತ್ಮರನ್ನು ಪ್ರಸ್ತಾಪಿಸಿದೆ. ಸ್ವಾಮಿ ಪುರುಷೋತ್ತಮಾನಂದಜಿ ಹುಟ್ಟಾ ಆ ಲಕ್ಷಣಗಳನ್ನು ಹೊಂದಿದ್ದರೆ ಅದನ್ನು ಮೊದಲು ಗುರ್ತಿಸಿದವರೇ ಅವರ ಗುರುವರ್ಯ ಸ್ವಾಮಿ ಯತೀಶ್ವರಾನಂದಜಿ ಮಹಾರಾಜ್. It takes a wise man to recognised another wise man ಎನ್ನುತ್ತಾನೆ ಪಾಶ್ಚಾತ್ಯ ಚಿಂತಕನೊಬ್ಬ. ಸ್ವಯಂ ಯತೀಶ್ವರಾನಂದಜೀನೇ ಅಂಥ ಜ್ಯೋತಿರ್ಮಂಡಲವಾಗಿದ್ದರು. ಬಾಲಕನಾಗಿದ್ದಾಗಲೇ ಅವರನ್ನು ಕಂಡ ಸಂನ್ಯಾಸಿಯೊಬ್ಬರು ಇವನು ಮುಂದೆ ಯತಿಯಾಗುತ್ತಾನೆ ಎಂದು ಹೇಳಿದ್ದರು. ಆಶ್ರಮಕ್ಕೆ ಸೇರ ಬಂದ ಇಪ್ಪತ್ತೆಂಟರ ಯುವಕ ರಾಮಚಂದ್ರ ಬಾಯರಿಯ ವಯಸ್ಸು ನಿಗದಿತ ಮಿತಿಗಿಂತ ಜಾಸ್ತಿಯಾಗಿದ್ದನ್ನು ಕಂಡ ರಾಮಕೃಷ್ಣ ಮಿಷನ್ನ ಕೇಂದ್ರ ಕಚೇರಿ ಅವರನ್ನು ನಿರಾಕರಿಸಿದಾಗ ತ್ರಿಕಾಲ ಜ್ಞಾನಿಗಳಾದ ಯತೀಶ್ವರಾನಂದಜಿ, ‘ರಾಮಚಂದ್ರ ನಮ್ಮ ಸಂಘಕ್ಕೆ ಒಂದು ಆಸ್ತಿಯಾಗಲಿದ್ದಾನೆ. ಆದ್ದರಿಂದ ದಯವಿಟ್ಟು ಅವನನ್ನು ಸೇರಿಸಿಕೊಳ್ಳಿ’ ಎಂದು ಶಿಫಾರಸುಗೈದು ಕರ್ನಾಟಕದ ಭವಿಷ್ಯಕ್ಕೆ ಒಂದು ಹೊಸ ಭಾಗ್ಯರೇಖೆಯನ್ನು ನಿರ್ವಿುಸಿದ್ದು ಭಗವತ್ಕೃಪೆಯಲ್ಲದೇ ಮತ್ತೇನು.
ಋಷಿವಾಣಿ ಸುಳ್ಳಾಗುವುದುಂಟೆ! ಭೌತಿಕ ಪ್ರಪಂಚದಲ್ಲಿ ಉನ್ನತ ಉದ್ಯೋಗಗಳಲ್ಲಿ ನೆಲೆನಿಂತು, ಸಕಲ ಭೋಗ ಭಾಗ್ಯಗಳನ್ನು ಅನುಭವಿಸುವ ಸಾಮರ್ಥ್ಯವಿದ್ದ, ಉನ್ನತ ಪದವಿಗಳನ್ನು, ಹುದ್ದೆಗಳನ್ನು ಪಡೆದಿದ್ದ ನೂರಾರು ಯುವಕರು ಇಂದು ತ್ಯಾಗ, ಸೇವೆಗಳ ಅವಳಿ ಆದರ್ಶಗಳನ್ನು ಸ್ವೀಕರಿಸಿ ಸಂನ್ಯಾಸಿಗಳಂತೆ ನಾಡಿನ, ಹೊರದೇಶಗಳಲ್ಲಿನ ರಾಮಕೃಷ್ಣ ಮಠಗಳಲ್ಲಿ ಆಶ್ರಮಗಳಲ್ಲಿ ಸೇವೆ ಸಲ್ಲಿಸುತ್ತಿದ್ದರೆ ಅದಕ್ಕೆ ಕಾರಣ ಈ ಬೃಹತ್ ಆಯಸ್ಕಾಂತ ಸ್ವಾಮಿ ಪುರುಷೋತ್ತಮಾನಂದಜಿ. ‘ನಮ್ಮ ಕಾಲೇಜ್ ದಿನಗಳಲ್ಲಿ ಅವರು ನಮಗೆ ಪರಿಚಯ’ ಎಂದು ಹೇಳಿಕೊಳ್ಳುವುದೇ ಒಂದು ಪ್ರತಿಷ್ಠೆಯ ವಿಷಯವಾಗಿತ್ತು. ಒಂದು ನೋಟ, ಒಂದು ಮಾತು, ಒಂದು ಮುಗುಳ್ನಗೆ ಯಾರೂ ಎಂದೂ ಮರೆಯಲಾಗದ ಸೌಭಾಗ್ಯವಾಗಿತ್ತು. ಅವರು ಕಾರಿನಿಂದ ಇಳಿದರೆ ರಸ್ತೆ ಬದಿಯ ಜನ ಬಾಯ್ದೆರೆದು, ಎವೆಯಿಕ್ಕದೆ ಎಂದೂ ಮನುಷ್ಯರನ್ನೇ ನೋಡಿಲ್ಲವೇನೋ ಎನ್ನುವಂತೆ ಅವರನ್ನೇ ಕಣ್ಣಗಲಿಸಿ ನೋಡುವುದನ್ನು ಕಂಡು ಸ್ವಾಮಿಗಳೇ ಅದೆಷ್ಟು ಸಲ ಕಸಿವಿಸಿಗೊಂಡಿದ್ದರು ಎನ್ನುವುದಕ್ಕೆ ನಾನೇ ಸಾಕ್ಷಿ. ಅವರಿಗೆ ಕಸಿವಿಸಿಯಾದರೇನು? ನಮಗದೇ ಸಂಭ್ರಮ! ಇಂಥದ್ದನ್ನೆಲ್ಲ ಬರೆಯುವುದೂ ಕಷ್ಟವೇ! ಮಹಾ ವೈರಾಗ್ಯ, ನಿರ್ಲೆಪಗಳು ಉಸಿರಾಗದ ಹೊರತು ಇಂಥ ಭವ್ಯತೆಗಳು ಜೀರ್ಣವಾಗದು. ವಿಶ್ವವಿದ್ಯಾಲಯದ ಭೌತಶಾಸ್ತ್ರ ಪ್ರಾಧ್ಯಾಪಕರೊಬ್ಬರು ನನ್ನ ಮುಂದೆಯೇ ಅವರನ್ನು ಶ್ಲಾಘಿಸಿದ್ದುಂಟು"How many gifts you have Swamiji' ಅಂತ! ನೂರಕ್ಕೂ ಹೆಚ್ಚು ಅತ್ಯಮೂಲ್ಯ ಪುಸ್ತಕಗಳ ಕರ್ತೃ ಅವರು! ಶ್ರೀರಾಮಕೃಷ್ಣರು, ಶ್ರೀಶಾರದಾದೇವಿ, ಸ್ವಾಮಿ ವಿವೇಕಾನಂದರನ್ನು ಕುರಿತ ಅವರ ಕೃತಿಗಳೋ ಸಾಹಿತ್ಯ ಲೋಕದ ರತ್ನಗಳು. ನಿತ್ಯಪಾರಾಯಣಕ್ಕೆ ಯೋಗ್ಯವಾದ ಗ್ರಂಥಗಳು. ಖ್ಯಾತ ಕವಿ ಕೆ.ಎಸ್. ನಿಸಾರ್ ಅಹಮದ್ ಈ ಗ್ರಂಥಗಳ ಈ ಭಾಷಾ ಶ್ರೀಮಂತಿಕೆ ಹಾಗೂ ಭಾವ ಶ್ರೀಮಂತಿಕೆಗಳಿಗೆ ಮಾರು ಹೋಗಿ ಮುಕ್ತಕಂಠದಿಂದ ಒಮ್ಮೆ ಒಕ್ಕಣಿಸಿದ್ದುಂಟು. ಬಡ ವಿದ್ಯಾರ್ಥಿಗಳ, ಬಡ ಸ್ತ್ರೀಯರ, ಕಣ್ಣೀರ ಕಣ್ಣುಗಳ ಹಸಿದ ಹೊಟ್ಟೆಗಳಿಗೆ ಭರವಸೆಗಳ ಭಂಡಾರ ಅವರ ಹೃದಯ. ಸಹಸ್ರಾರು ಜನ ಸೇರಿರಲಿ, ಸಭೆಯಲ್ಲಿ ಎಷ್ಟೇ ಗೌಜು ಗದ್ದಲ ಇರಲಿ, ಸ್ವಾಗತ ಪರಿಚಯಗಳು ಕಿವಿಗೇ ಬೀಳದಂತಿರಲಿ, ತಮ್ಮ ಬತ್ತಳಿಕೆಯ ಬ್ರಹ್ಮಾಸ್ತ್ರವೇ ಆಗಿದ್ದ ಹಾರ್ವೇನಿಯಂ ರೀಡುಗಳ ಮೇಲೆ ಬೆರಳುಗಳು ಹರಿದು ನಿನಾದವೊಂದು ಹೊರಟ ಕ್ಷಣಮಾತ್ರಕ್ಕೆ ಸಂತೆಯಾಗಿದ್ದ ಸಭೆ ಸಂತರ ಮೌನದಾಣವಾಗುತ್ತಿತ್ತು. ಯೋಗಿಯೊಬ್ಬ ಜೀವನವನ್ನು ಎಷ್ಟು ಲೀಲಾಜಾಲವಾಗಿ ನಿಭಾಯಿಸಬಲ್ಲ ಎನ್ನುವುದಕ್ಕೆ ಜೀವಂತ ಸಾಕ್ಷಿಯಂತಿದ್ದರು ಅವರು. ನಾಸ್ತಿಕನಾಗಿದ್ದ ನನ್ನ ಸಹಪಾಠಿ ಒಮ್ಮೆ ಹೇಳಿದ್ದ, ‘ಸಂನ್ಯಾಸಿಗಳಲ್ಲಿ ನನಗೆ ಭಕ್ತಿಯೇ ಇಲ್ಲ, ಆದರೆ ಅವರನ್ನು ನೋಡಿದರೆ ಕಾಲಿಗೆರಗದೇ ಇರಲಾಗುವುದಿಲ್ಲ’ ಎಂದು. ಎಷ್ಟು ಹೇಳಲಿ; ಏನು ಬರೆಯಲಿ! ಅವರನ್ನು ಕುರಿತ ಸಾವಿರಕ್ಕೂ ಹೆಚ್ಚು ಪುಟಗಳ ಪುಸ್ತಕಗಳೇ ಬಂದಿವೆ. ಅವರ ಹಸ್ತವನ್ನೊಮ್ಮೆ ನಾನು ನೋಡಿದ್ದೆ. ಅಲ್ಲಿದ್ದ ರೇಖೆಗಳ ರಚನೆ ಹೇಗಿತ್ತೆಂದರೆ ನಂಬಿ, ಬಿಡಿ! ಇಲ್ಲಿಯವರೆಗೆ ನಾನಂಥ ಹಸ್ತವನ್ನೂ ಅಂಥ ರೇಖಾವಿನ್ಯಾಸಗಳನ್ನೂ ನೋಡಿಯೇ ಇಲ್ಲ, ಕೇಳಿಯೂ ಇಲ್ಲ. ‘ಇದೇನು ಸ್ವಾಮೀಜಿ ಹೀಗಿದೆ’ ಎಂದು ಕೇಳಿದರೆ ಅವರು ಕೊಟ್ಟ ಉತ್ತರ ಹೃತ್ಪೂರ್ವಕವಾದ ಜೋರಾದ ನಗು! ಮಹಾತ್ಮರೇ ಹೀಗಲ್ಲವೇ! ಅವರು ಎಲ್ಲದರಲ್ಲೂ ನಮಗಿಂತ ಭಿನ್ನ ಅವರ ಸ್ಮರಣೆಯೇ ನಮಗೆ ದಾರಿದೀಪ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)