

ಶ್ರೀ ರಾಮಾನುಜಾಚಾರ್ಯರು ಹೇಳುತ್ತಾರೆ, ‘ಭಗವಂತ ಅಸಂಖ್ಯ ಗುಣಸಾಗರ. ಆದರೆ, ಆ ಗುಣಗಳಲ್ಲೆಲ್ಲಾ ಕರುಣೆಯೇ ಪ್ರಧಾನವಾದದ್ದು’ ಎಂದು. ಕಾರಣವಿಲ್ಲದೆಯೇ ಕರುಣೆಯನ್ನು ಹರಿಸುವವನು ಅವನು. ಆದ್ದರಿಂದಲೇ ಅವನಿಗೆ ‘ಆಹೇತುಕದಯಾಸಿಂಧು’ ಎಂಬ ಹೆಸರು ಸ್ಪಷ್ಟವಾಗಿಯೇ ಇದೆ. ಇನ್ನು ಕಾರಣ ಸಿಕ್ಕಿದರೆ ಬಿಡುವನೇ?! ಮಲಗಿ ಪಾಡಿದರೆ ಕುಳಿತು ಕೇಳುವ, ಕುಳಿತರೆ ನಿಲುವ, ನಿಂತರೆ ನಲಿವ, ನಲಿದರೆ ಒಲಿವ, ಸುಲಭನೋ ಹರಿ... ಈ ಮಾತುಗಳೆಲ್ಲಾ ಕವಿಯ ಕಲ್ಪನೆಯಲ್ಲ. ನೂರಾರು ಸಾಧಕರ ಮಹಾಮಹಿಮರ ಸಂಶಯಕ್ಕೆಡೆಯಿಲ್ಲದ ಸ್ಪಷ್ಟ ಅನುಭವ; ಸತ್ಯಸ್ಯ ಸತ್ಯ! ಅದೊಂದು ಬೇರೆಯೇ ಪ್ರಪಂಚ. ಕಬೀರ ಹೇಳಿದಂತೆ ಅದೊಂದು ಬೆಳಕಿನ ಲೋಕ! ಹಸಿವು ನೀರಡಿಕೆಗಳಿಲ್ಲದ, ದುಃಖ ದುಮ್ಮಾನಗಳಿಲ್ಲದ, ಆನಂದ ಉನ್ಮತ್ತತೆಗಳ ಲೋಕ!
ಅಂಥದ್ದೊಂದರ ಚಿತ್ರವನ್ನು ನಿಮ್ಮ ಮುಂದಿಡುತ್ತೇನೆ. ಅಂದು 1886 ಜನವರಿ 1. ಅದು ಇಂಗ್ಲಿಷರ ಕಾಲವಾದ್ದರಿಂದ ಸರ್ಕಾರಿ ರಜೆ. ಶ್ರೀ ರಾಮಕೃಷ್ಣರಿಗೆ ಗಂಟಲಿನ ಕ್ಯಾನ್ಸರ್ ಬಂದು ಹಲವು ತಿಂಗಳುಗಳ ಹಿಂದೆಯೇ ಅವರನ್ನು ರಕ್ಷಿಣೇಶ್ವರದಿಂದ ಕಲ್ಕತ್ತೆಯ ಕಾಶೀಪುರದ ಬೃಹತ್ ತೋಟದ ಮನೆಗೆ ಸ್ಥಳಾಂತರಿಸಲಾಗಿತ್ತು. ಅಂದಿನ ಇಂಡಿಯನ್ ಹೋಮಿಯೋಪಥಿಕ್ ಅಸೋಸಿಯೇಷನ್ನ ಅಧ್ಯಕ್ಷ ಡಾ. ಮಹೇಂದ್ರಲಾಲ್ ಸರ್ಕಾರ್ನ ಉಪಚಾರದಲ್ಲಿ ಸ್ವಲ್ಪಮಟ್ಟಿಗಿನ ಸುಧಾರಣೆಯ ಲಕ್ಷಣಗಳೂ ಕಾಣಿಸುತ್ತಿದ್ದುದುಂಟು.
ಅದು ಶುಕ್ರವಾರ, ಭಕ್ತರೆಲ್ಲಾ ಶ್ರೀರಾಮಕೃಷ್ಣರ ಯೋಗಕ್ಷೇಮ ವಿಚಾರಿಸಲೋಸುಗ ಒಬ್ಬೊಬ್ಬರಾಗಿ ಈ ತೋಟದ ಮನೆಯ ಕಡೆ ಬಂದಿದ್ದಾರೆ. ಶ್ರೀರಾಮಕೃಷ್ಣರು ಕೂಡ ಅಂದು ಎಂದಿಗಿಂತ ಹೆಚ್ಚು ಲವಲವಿಕೆಯಿಂದ ಇದ್ದಾರೆ ಮತ್ತು ಬಹುದಿನಗಳ ಮೇಲೆ ತೋಟದಲ್ಲಿ ಹವಾಸೇವನೆ ಮಾಡುವ ಇಚ್ಛೆಯಾದ್ದರಿಂದ ಒಂದಿಬ್ಬರು ಭಕ್ತರ ಸಹಾಯದಿಂದ ಮಹಡಿ ಇಳಿದು ಕೆಳಗಿಳಿದು ಬಂದಿದ್ದಾರೆ. ಆಗ ಮಧ್ಯಾಹ್ನ 3. ಶ್ರೀ ರಾಮಕೃಷ್ಣರ ವಾಸದ ಮನೆಯ ಒಳಗೂ ಹೊರಗೂ ಭಕ್ತರು ಗುಂಪುಗುಂಪಾಗಿ ಸೇರಿ ಮಾತುಕತೆಯಲ್ಲಿ ತೊಡಗಿದ್ದರು, ಮುಂದೆ ಸಂನ್ಯಾಸಿ ಶಿಷ್ಯರಾದ ತರುಣರೆಲ್ಲಾ ಹಿಂದಿನ ರಾತ್ರಿ ಶ್ರೀರಾಮಕೃಷ್ಣರ ಸೇವೆಯಲ್ಲೂ, ಜಪತಪಾದಿಗಳಲ್ಲೂ ತೊಡಗಿ ಹೆಚ್ಚಿನ ಸಮಯ ಎಚ್ಚರವಾಗಿಯೇ ಇದ್ದು ಬಳಲಿದ್ದರಿಂದ ಒಬ್ಬಿಬ್ಬರ ಹೊರತುಪಡಿಸಿ ಉಳಿದವರೆಲ್ಲಾ ಮಲಗಿ ವಿಶ್ರಮಿಸುತ್ತಿದ್ದರು. ಶ್ರೀರಾಮಕೃಷ್ಣರು ಕೆಳಗೆ ಬಯಲಿಗೆ ಬಂದಿರುವುದನ್ನು ಕಂಡು ಭಕ್ತರೆಲ್ಲಾ ಎದ್ದುನಿಂತು ಬಾಗಿ ನಮಿಸಿದರು.
ಸ್ವಲ್ಪ ದೂರ ಕ್ರಮಿಸಿದ ಶ್ರೀ ರಾಮಕೃಷ್ಣರು ಬಲಕ್ಕೆ ಅನತಿ ದೂರದಲ್ಲಿ ನಿಂತು ಭಕ್ತಿಯಿಂದ ಪ್ರಣಾಮಗೈಯ್ಯುತ್ತಿದ್ದ ಗಿರೀಶ, ರಾಮಚಂದ್ರದತ್ತ, ಅತುಲ ಇತ್ಯಾದಿಗಳನ್ನು ಕಂಡರು. ‘ಗಿರೀಶ ನೀನು ಇದರ ಬಗ್ಗೆ (ತಮ್ಮ ಶರೀರವನ್ನು ತೋರಿಸುತ್ತಾ) ಎಲ್ಲರ ಮುಂದೆಯೂ ಎಷ್ಟೋ ವಿಷಯಗಳನ್ನು (ಶ್ರೀರಾಮಕೃಷ್ಣರು ಸ್ವಯಂ ಭಗವಂತನ ಅವತಾರವೇ ಎಂದು) ಹೇಳುತ್ತಾ ತಿರುಗಾಡುತ್ತಿದ್ದೀಯಲ್ಲ. ನೀನು ಇದರಲ್ಲಿ ಅಂಥದ್ದೇನನ್ನು ಕಂಡೆ’ ಎಂದು ಕೇಳಿಬಿಟ್ಟರು.
ಶ್ರದ್ಧೆಯೇ ಮೂರ್ತಿವೆತ್ತಂತಿದ್ದ, ಭಾವುಕ, ಪರಮಭಕ್ತ ಗಿರೀಶ ಮಂಡಿಯೂರಿ ಕೈಜೋಡಿಸಿ ಗದ್ಗದ ಸ್ವರದಿಂದ ಉದ್ಗರಿಸಿದ. ‘ಯಾರ ಮಹಿಮೆಯನ್ನು ಬಣ್ಣಿಸಿ ಮುಗಿಸಲು ವ್ಯಾಸ ವಾಲ್ಮೀಕಿ ಮುನಿಗಳಿಗೂ ಸಾಧ್ಯವಾಗಲಿಲ್ಲವೋ ಅಂಥವರ ಬಗ್ಗೆ ಅಲ್ಪನಾದ ನಾನು ಏನು ತಾನೆ ಹೇಳಬಲ್ಲೆ?’
ಅವನ ಅಂತರಾಳದಿಂದ ಬಂದ ಉತ್ತರವನ್ನು ಕಂಡು ಶ್ರೀರಾಮಕೃಷ್ಣರು ಕ್ಷಣಕಾಲ ಮೌನವಾಗಿಬಿಟ್ಟರು. ಗಿರೀಶ ಸರಳ ಶ್ರದ್ಧೆಯ ಭಕ್ತಲೋಕವನ್ನೇ ಪ್ರತಿನಿಧಿಸಿದ್ದ. ಪರಮಾತ್ಮ ಸೋಲುವುದೇ ಇಂತಹ ಶುದ್ಧಭಾವಪೂರ್ಣ ಭಕ್ತಿಗೆ! ಆ ಎಲ್ಲಾ ಭಕ್ತರನ್ನುದ್ದೇಶಿಸಿ ಶ್ರೀರಾಮಕೃಷ್ಣರು ಮಂದಸ್ಮಿತರಾಗಿ, ‘ನಿಮಗೆ ನಾನಿನ್ನೇನು ತಾನೆ ಹೇಳಲಿ; ನಿಮಗೆಲ್ಲಾ ಆಧ್ಯಾತ್ಮಿಕ ಜಾಗೃತಿಯುಂಟಾಗಲಿ’ ಎಂದುದ್ಗರಿಸಿದರು. ಹೀಗೆಂದವರೇ ಭಕ್ತರ ಮೇಲಿನ ವಾತ್ಸಲ್ಯ ಕರುಣೆಗಳಿಂದ ಮೈಮರೆತು ಭಾವಾವಿಷ್ಟರಾಗಿ ನಿಂತುಬಿಟ್ಟರು.
ಶ್ರೀ ರಾಮಕೃಷ್ಣರು ಉನ್ನತಭಾವಾವಸ್ಥೆಯಲ್ಲಿ ಆಡಿದ ಆ ಮಾತಿನ ಪರಿಣಾಮ ಕಣ್ಣುರಪ್ಪೆ ಬಡಿಯುವಷ್ಟರಲ್ಲೇ ಎಂತಹ ಪ್ರಚಂಡವಾತಾವರಣವನ್ನು ನಿರ್ಮಾಣ ಮಾಡಿತು, ಆನಂದದ ಕೋಲಾಹಲವನ್ನೇ ನಿರ್ವಿುಸಿತು ಎಂಬುದನ್ನು ಅಲ್ಲಿದ್ದವರು ಮಾತ್ರವೇ ಬಲ್ಲರು! ಶ್ರೀರಾಮಕೃಷ್ಣರ ಆ ಅಭಯನುಡಿ ನೇರವಾಗಿ ಭಕ್ತರ ಹೃದಯಾಂತರಾಳಗಳನ್ನು ಹೊಕ್ಕು ಆನಂದ ಸಾಗರದ ಬೃಹತ್ ತರಂಗಗಳನ್ನೇ ಎಬ್ಬಿಸಿತು. ಶ್ರೀ ರಾಮಕೃಷ್ಣರು ಆರೋಗ್ಯವಂತರಾಗುವವರೆಗೆ ಅವರ ಪಾದಸ್ಪರ್ಶ ಮಾಡಬಾರದು ಎಂದು ತಾವೇ ಮಾಡಿಕೊಂಡಿದ್ದ ನಿರ್ಧಾರದ ನೆನಪೂ ಭಕ್ತರ ಮನಸ್ಸಿನಿಂದ ಅಳಿಸಿ ಹೋಯಿತು. ‘ನಿಮಗೆಲ್ಲಾ ಆಧ್ಯಾತ್ಮಿಕ ಜಾಗೃತಿಯುಂಟಾಗಲಿ’ ಎಂಬ ಆಶೀರ್ವಚನವನ್ನು ಕೇಳಿದೊಡನೆ ಗಿರೀಶ ಜೈ ರಾಮಕೃಷ್ಣ! ಜೈ ರಾಮಕೃಷ್ಣ! ಎಂದು ಉದ್ಘೋಷಿಸುತ್ತಾ ಅವರ ಪಾದಕ್ಕೆರಗಿದ. ಮರುಕ್ಷಣವೇ ಆ ಧ್ವನಿ ಅಲ್ಲಿದ್ದ ಎಲ್ಲ ಕಂಠಗಳಿಂದಲೂ ಪ್ರತಿಧ್ವನಿಗೊಂಡು ಎಲ್ಲರೂ ಧಾವಿಸಿ ಸಾಷ್ಟಾಂಗ ಪ್ರಣಾಮಗೈದರು. ಆಹೇತುಕ ಕೃಪಾಸಿಂಧುವಾದ ಶ್ರೀರಾಮಕೃಷ್ಣರ ಭಕ್ತವಾತ್ಸಲ್ಯ ಮೇರೆ ಮೀರಿ ಬಳಿ ಬಂದ ಪ್ರತಿಯೊಬ್ಬ ಭಕ್ತನನ್ನು ರ್ಸ³ಸಿ ಮಂತ್ರವನ್ನುಚ್ಚರಿಸಿ ಆಶೀರ್ವದಿಸುವಂತೆ ಮಾಡಿತು. ಹೀಗೆ ಕೃಪೆಗೊಳಗಾದ ಪ್ರತಿಯೊಬ್ಬನಲ್ಲೂ ತಾನು ಉನ್ನತಸ್ತರಕ್ಕೇರಿಸಲ್ಪಟ್ಟ ಅನುಭವವಾಯಿತು. ಹಿಂದೆ ದಕ್ಷಿಣೇಶ್ವರದಲ್ಲಿ ಒಬ್ಬೊಬ್ಬರಿಗೆ ಈ ರೀತಿ ಕೃಪೆ ಮಾಡಿದ್ದರು ಕೂಡ. ಅದು ಈಗಾಗಲೇ ಸಾಕಷ್ಟು ಸಾಧನೆಗಳಲ್ಲಿ ತೊಡಗಿದ್ದ ತಪೋಮಯ ವ್ಯಕ್ತಿಗಳಿಗೆ ಮಾತ್ರ. ಆದರೆ, ಇಲ್ಲಿ ಅವರು ಯಾವುದೇ ಭೇದಭಾವವಿಲ್ಲದೆ ಬಂದ ಬಂದವರ ಮೇಲೆಲ್ಲಾ ಕೃಪಾದೃಷ್ಟಿ ಬೀರುತ್ತಿದ್ದಾರೆ. ಮಲಯಮಾರುತ ಬೀಸಿದರೆ ಎಲ್ಲ ಮರಗಳೂ ಶ್ರೀಗಂಧವಾಗಿಬಿಡುತ್ತವೆ ಎಂದು ಶ್ರೀರಾಮಕೃಷ್ಣರೇ ಭಗವತ್ಕೃಪೆಯನ್ನು ಕುರಿತು ಹೇಳುತ್ತಿದ್ದುದುಂಟು. ಆದರೆ, ಅವರೇ ಇಂದು ಅದು ಹೇಗೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತಿದ್ದಾರೆ.
ಶ್ರೀರಾಮಕೃಷ್ಣರ ಈ ದಿವ್ಯಸ್ಪರ್ಶದಿಂದ ಕೆಲವರು ಭಾವೋದ್ವೇಗಗೊಂಡು ಅತ್ತರೆ ಇನ್ನೂ ಕೆಲವರು ಆ ಸ್ಪರ್ಶದಿಂದ ಗಟ್ಟಿಯಾಗಿ ನಗುತ್ತಾ ಕುಣಿದಾಡಿದರು! ಕೆಲವರು ಮನೆಯೊಳಗೇ ಉಳಿದುಕೊಂಡಿರುವವರನ್ನು ‘ಬನ್ನಿ! ಎಲ್ಲರೂ ಬನ್ನಿ! ಶ್ರೀರಾಮಕೃಷ್ಣರು ಇಂದು ಕಲ್ಪತರುವಾಗಿದ್ದಾರೆ’ ಎಂದು ಕೂಗಿ ಕರೆದರು. ಇನ್ನು ಕೆಲವರು ಗಿಡಗಳಿಂದ ಪುಷ್ಪಗಳನ್ನು ಕಿತ್ತು ತಂದು ಸ್ತೋತ್ರ ಮಂತ್ರಸಮೇತವಾಗಿ ಶ್ರೀರಾಮಕೃಷ್ಣರ ಪೂಜೆಗೈದರು. ಈ ಅನುಭವವನ್ನು ಕುರಿತು ಶ್ರೀರಾಮಕೃಷ್ಣರ ಅಣ್ಣನ ಮಗ ರಾಮಲಾಲ ಹೇಳುತ್ತಾನೆ- ‘ಹಿಂದೆ ಧ್ಯಾನಕ್ಕೆ ಕುಳಿತಾಗ ನನ್ನ ಇಷ್ಟದೇವತೆಯ ಭಾಗಶಃ ಒಂದು ರೂಪ ಮಾತ್ರ ಮನಸ್ಸಿನಲ್ಲಿ ಮೂಡುತ್ತಿತ್ತು. ಕೆಲವೊಮ್ಮೆ ಆತನ ಪಾದಪದ್ಮಗಳು ಮಾತ್ರ ಗೋಚರಿಸುತ್ತಿದ್ದವು. ಇನ್ನು ಕೆಲವೊಮ್ಮೆ ಅವನ ಶರೀರದ ಮೇಲ್ಭಾಗ. ಅಲ್ಲದೆ ಆ ಮೂರ್ತಿ ಜೀವಂತವಾಗಿರುವಂತೆ ತೋರುತ್ತಿರಲಿಲ್ಲ. ಅಂದು ಶ್ರೀ ರಾಮಕೃಷ್ಣರು ನನ್ನನ್ನು ಮುಟ್ಟಿದ ಕೂಡಲೇ ನನ್ನ ಇಷ್ಟದೇವತೆ ಹೃತ್ಕಮಲದಲ್ಲಿ ಸರ್ವಾಂಗ ಸಂಪೂರ್ಣವಾಗಿ ಆವಿರ್ಭವಗೊಂಡು, ಸ್ಪಂದಿಸುತ್ತಾ ನನ್ನನ್ನು ಸೆಳೆಯುತ್ತಿರುವಂತಹ ಅನುಭವವಾಯ್ತು’ ಎಂದು.
ತರುಣ ವೈಕುಂಠನಾಥ ಸನ್ಯಾಲನಿಗಾದ ಅನುಭವವಂತೂ ಅದ್ಭುತ. ತನ್ನ ಇಷ್ಟದೇವತೆಯ ದರ್ಶನ ಪಡೆಯಬೇಕೆಂದು ಸಾಧನೆಗಳಲ್ಲಿ ನಿರತನಾಗಿದ್ದವನೀತ. ಶ್ರೀರಾಮಕೃಷ್ಣರ ಕೃಪೆ ಇಲ್ಲದ ಹೊರತು ಅದು ಬಹು ಕಷ್ಟಸಾಧ್ಯವೆಂದು ಅರಿತವನು ಕೂಡ. ಶ್ರೀ ರಾಮಕೃಷ್ಣರಿಗೆ ವ್ಯಾಕುಲನಾಗಿ ಪ್ರಾರ್ಥಿಸಿಕೊಂಡಿದ್ದೂ ಇತ್ತು. ಇಂದು ಆ ಶುಭ ಮುಹೂರ್ತ ಕೂಡಿಬಂದಿತ್ತು. ಶ್ರೀರಾಮಕೃಷ್ಣರು ಮಂತ್ರೋಚ್ಚಾರಣೆ ಮಾಡುತ್ತಾ ರ್ಸ³ಸಿದ್ದೇ ತಡ ಅವನಲ್ಲಿ ಅಪೂರ್ವವಾದ ಭಾವಾಂತರವೊಂದುಂಟಾಯಿತು. ಆಕಾಶ, ಮನೆ, ಗಿಡ, ಮರಗಳು ಅಲ್ಲಿರುವ ಇತರ ವ್ಯಕ್ತಿಗಳು ಹೀಗೆ ಎತ್ತನೋಡಿದತ್ತ ಶ್ರೀ ರಾಮಕೃಷ್ಣರ ಮಂದಹಾಸಯುತ ಮೂರ್ತಿಯೇ ಕಾಣತೊಡಗಿತು. ಆತ್ಮಾನಂದದಿಂದ ಉದ್ದೀಪನಗೊಂಡ ಆತನಿಗೆ ಇತರ ಶಿಷ್ಯರ ನೆನಪಾಗಿ, ‘ಏನು ಮಾಡುತ್ತಿದ್ದೀರಿ ನೀವೆಲ್ಲಾ; ಓಡಿ ಬನ್ನಿ ಇಲ್ಲಿಗೆ’ ಎಂದು ಗಟ್ಟಿಯಾಗಿ ಕೂಗಿ ಕರೆದ.
ಅವನ ಈ ಅದ್ಭುತಭಾವ ಸಮ್ಮೋಹಿನಿಯ ಪ್ರಭಾವದಿಂದ ಉಂಟಾದಂತೆ ಎಲ್ಲೋ ಸ್ವಲ್ಪ ಹೊತ್ತು ಇದ್ದು ಹೊರಟುಹೋಗಲಿಲ್ಲ. ಎಷ್ಟೋ ದಿನಗಳವರೆಗೂ ಅಷ್ಟೇ ಗಾಢವಾಗಿ ಉಳಿದುಕೊಂಡಿತ್ತು. ಅವನು ಎಲ್ಲಿಗೇ ಹೋಗಲಿ ಏನೇ ಮಾಡುತ್ತಿರಲಿ ದೃಷ್ಟಿ ಹರಿದಲ್ಲೆಲ್ಲಾ ಶ್ರೀರಾಮಕೃಷ್ಣರ ಮುಖಾರವಿಂದವೇ ಗೋಚರವಾಗುತ್ತಿತ್ತು. ಕಚೇರಿಯ ಕೆಲಸಕ್ಕೆ ಹೋದರೆ ಅಲ್ಲೂ ಅದೇ ದರ್ಶನ! ಅದೇ ಅನುಭವ! ಯಾವ ಕೆಲಸವನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ಆಗ ಸಾಕಪ್ಪ ಈ ದರ್ಶನ; ಬೇಕಾದಷ್ಟು ಕಂಡೆ ಎನ್ನಿಸತೊಡಗಿತು. ಮನಸ್ಸನ್ನು ಬಲವಂತವಾಗಿ ಕೆಲಸದ ಕಡೆಗೆ ಹರಿಯಿಸುವ ಪ್ರಯತ್ನ ಮಾಡಿದ. ಊಹು! ಆಗುತ್ತಿಲ್ಲ. ನನಗೇನಾದರೂ ಹುಚ್ಚುಗಿಚ್ಚು ಹಿಡಿಯುತ್ತಿದೆಯೋ ಹೇಗೆ? ಎಂಬ ಭಯ ಹತ್ತಿಕೊಂಡಿತು ಅವನಿಗೆ. ಕಡೆಗೆ ಶ್ರೀರಾಮಕೃಷ್ಣರಲ್ಲೇ ಶರಣಾಗಿ, ‘ಪ್ರಭು! ಈ ಭಾವವನ್ನು ಧರಿಸಲು ನಾನು ಸಮರ್ಥನಲ್ಲ! ದಯಮಾಡಿ ಇದನ್ನು ಶಾಂತಗೊಳಿಸಿಬಿಡಿ!’ ಎಂದು ಮನದಲ್ಲೇ ಮೊರೆಯಿಟ್ಟ. ಕೆಲಕಾಲದ ಮೇಲೆ ಆ ಭಾವ ಇದ್ದಕ್ಕಿದ್ದಂತೇ ನಿಂತುಹೋಯಿತು. ಅವನು ಹಿಂದಿನಂತಾದ. ಯಾರಿಂದ ಅದು ತನಗೆ ಲಭ್ಯವಾಗಿತ್ತೋ ಅವರಲ್ಲೇ ಅದು ಲಯಗೊಂಡಿತು ಎಂದು ಅವನು ಅರಿತುಕೊಂಡ.
ಆದರೆ, ಅವನಿಗೆ ನಿಜವಾಗಿಯೂ ಅಂತಹ ದುರ್ಲಭವಾದ ಆನಂದ ಸ್ಥಿತಿಯನ್ನು ದೂರಮಾಡಿಕೊಳ್ಳುವ ಇಚ್ಛೆಯೇನೂ ಇರಲಿಲ್ಲ. ಹಠಾತ್ತಾಗಿ ಸಾಮಾನ್ಯಸ್ಥಿತಿಗೆ ಇಳಿದುಬಂದ ಮೇಲೆ ಅವನು ಪಶ್ಚಾತ್ತಾಪದಿಂದ ಆಲೋಚಿಸತೊಡಗಿದ ‘ಅಯ್ಯೋ! ನಾನೆಷ್ಟು ದುರ್ಬಲ, ಎಷ್ಟು ಬುದ್ಧಿಗೇಡಿ! ನಾನೇಕೆ ಆ ಉನ್ನತಸ್ಥಿತಿಯನ್ನು ಸಾಕುಮಾಡುವಂತೆ ಪ್ರಾರ್ಥಿಸಿಕೊಂಡೆ. ಶ್ರೀರಾಮಕೃಷ್ಣರ ಮೇಲಿನ ಆ ಉತ್ಕಟ ಭಾವಾವಸ್ಥೆಯನ್ನು ಅನುಭವಿಸುವ ಧೈರ್ಯ ನನಗೇಕೆ ಬಾರದೇ ಹೋಯಿತು. ಹೆಚ್ಚೆಂದರೆ ನನಗೆ ಹುಚ್ಚು ಹಿಡಿಯಬಹುದಾಗಿತ್ತು, ಇಲ್ಲವೇ ಈ ಶರೀರ ಬಿದ್ದು ಹೋಗುತ್ತಿತ್ತು! ಅಷ್ಟೇ ತಾನೇ’-ಹೀಗೆ ಭಾವಿಸುತ್ತಾ ಅವನು ಇನ್ನೊಮ್ಮೆ ಆ ದಿವ್ಯಾನುಭವವನ್ನು ಸವಿಯುವ ಕನಸು ಕಾಣತೊಡಗಿದ. ಪರಮ ಕರುಣಾಮೂರ್ತಿಯಾದ ಶ್ರೀ ರಾಮಕೃಷ್ಣರ ಕೃಪಾದೃಷ್ಟಿ ಮತ್ತೆ ಅವನ ಮೇಲೆ ಬಿದ್ದಿತು. ಪ್ರತಿದಿನವೂ ಆಗಾಗ್ಗೆ ಅವರ ಭಾವೋದ್ದೀಪ್ತವಾದ, ಪ್ರಸನ್ನ ಮಂದಹಾಸಯುಕ್ತ ರೂಪವನ್ನು ಮತ್ತೊಮ್ಮೆ ಅವನು ಕಾಣತೊಡಗಿದ. ಅದು ಅನೇಕ ದಿನಗಳವರೆಗೆ ಮುಂದುವರಿಯಿತು. ಹೀಗೆ ನಿರ್ವಣವಾಗಿತ್ತು ಆನಂದ ಉನ್ಮತ್ತತೆಗಳ ಲೋಕವೊಂದು.
ಅಂದಿನಿಂದ ಜನವರಿ 1 ‘ಕಲ್ಪತರು ದಿನ’ ಎಂಬ ಹೆಸರು ಹೊತ್ತು ಶ್ರೀರಾಮಕೃಷ್ಣ ಭಕ್ತವಲಯದಲ್ಲಿ ಬೃಹತ್ ಹಬ್ಬವಾಗಿ ಆಚರಿಸಲ್ಪಡುತ್ತಿದೆ. ರಾತ್ರಿ 12 ರಿಂದ ಮುಂದಿನ ರಾತ್ರಿ 12 ರವರೆಗೆ ಲಕ್ಷೋಪಲಕ್ಷ ಜನ ಅಲ್ಲಿಗೆ ಧಾವಿಸಿ ಶ್ರೀ ರಾಮಕೃಷ್ಣರ ಭಾವಚಿತ್ರಕ್ಕೆ ಪ್ರಣಾಮಗೈದು ಹರಕೆ ಸಲ್ಲಿಸುತ್ತಾರೆ. ವಿಶ್ವದಾದ್ಯಂತ ಹರಡಿರುವ ಶ್ರೀ ರಾಮಕೃಷ್ಣ ಆಶ್ರಮಗಳಲ್ಲೂ ಇದು ಮುಂದುವರಿದಿದೆ. ಭಕ್ತನ ಆನಂದಕ್ಕೆ ಭಗವಂತನೇ ನೂರು ದಾರಿ ಕಲ್ಪಿಸಿಕೊಟ್ಟಿದ್ದಾನೆ. ಶ್ರದ್ಧೆ ಇರಬೇಕಷ್ಟೇ!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)