

ಸ್ವಾಮಿ ವಿವೇಕಾನಂದರು ತಮ್ಮ ಪ್ರಿಯ ಶಿಷ್ಯ ಅಳಸಿಂಗ ಪೆರುಮಾಳ್ ಅವರಿಗೆ 1895, ಮೇ 6ರಂದು ಬರೆದ ಪತ್ರದಲ್ಲಿ ಹೀಗೆ ಉಲ್ಲೇಖಿಸುತ್ತಾರೆ.
ನಾನು ಹೊಸದಾಗಿ ಕಂಡುಹಿಡಿದಿರುವುದನ್ನು ನಿನಗೆ ಹೇಳುತ್ತೇನೆ. ವೇದಾಂತದಲ್ಲಿ ಧರ್ಮದ ತಿರುಳೆಲ್ಲ ಅಡಕವಾಗಿದೆ. ಅಂದರೆ, ಅವೆಲ್ಲಾ ದ್ವೈತ, ವಿಶಿಷ್ಟಾದ್ವೈತ, ಅದ್ವೈತ ಈ ಮೂರು ಸ್ಥಿತಿಗಳಲ್ಲಿರುವುದು. ಇವು ಒಂದಾದ ಮೇಲೊಂದು ಬರುವವು. ಮಾನವನ ಆತ್ಮವಿಕಾಸದ ಬೆಳವಣಿಗೆಯ ಮೂರು ಸ್ಥಿತಿಗಳಿವು. ಪ್ರತಿಯೊಂದು ಸಿದ್ಧಾಂತವೂ ಅತ್ಯಾವಶ್ಯಕ. ವೇದಾಂತವನ್ನು ಭರತಖಂಡದ ನಾನಾ ಜಾತಿ ಮತ್ತು ಆಚರಣೆಗಳೊಡನೆ ಪ್ರಯೋಗಿಸಿದಾಗ ಅದು ಹಿಂದೂ ಧರ್ಮವಾಗುತ್ತದೆ. ಮೊದಲನೇ ಮೆಟ್ಟಿಲಾದ ದ್ವೈತವನ್ನೇ ಯುರೋಪಿನ ಜನಾಂಗಗಳಿಗೆ ಅನ್ವಯಿಸಿದರೆ ಅದು ಕ್ರೖೆಸ್ತಧರ್ಮವಾಗುವುದು. ಅದನ್ನೇ ಸೆಮೆಟಿಕ್ ಜನಾಂಗಕ್ಕೆ ಅನ್ವಯಿಸಿದಾಗ ಇಸ್ಲಾಂ ಆಗುತ್ತದೆ. ಅದ್ವೈತವನ್ನು ಯೋಗದ ಗ್ರಹಣ ಶಕ್ತಿಯೊಂದಿಗೆ ಬೆರೆಸಿದಾಗ ಅದು ಬೌದ್ಧ ಧರ್ಮವಾಗುವುದು, ಇತ್ಯಾದಿ. ಇಲ್ಲಿ ಧರ್ಮವೆಂದರೆ ವೇದಾಂತ ಎಂದು ಅರ್ಥ. ಬೇರೆ ಬೇರೆ ಅವಶ್ಯಕತೆಗಳು ಮತ್ತು ಪರಿಸ್ಥಿತಿಗಳಿಗನುಸಾರವಾಗಿ ಅದರ ಪ್ರಯೋಗ ಬೇರೆಬೇರೆ ರೂಪ ತಾಳುವುದು. ತತ್ವವೆಲ್ಲ ಒಂದೇ ಆದರೂ ಶಾಕ್ತರು, ಶೈವರು ಮತ್ತು ಇನ್ನುಳಿದವರು ತಮ್ಮ ಮತ ತತ್ವ ಮತ್ತು ಆಚರಣೆಗಳಿಗೆ ಸರಿಯಾಗುವಂತೆ ಉಪಯೋಗಿಸುವರು. ಈ ನಿಮ್ಮ ಪತ್ರಿಕೆಯಲ್ಲಿ ಈ ಮೂರು ತತ್ವ ಸಂಪ್ರದಾಯಗಳ ಮೇಲೆ ಲೇಖನಗಳನ್ನು ಬರೆದು, ಅವು ಹೇಗೆ ಒಂದಾದ ಮೇಲೊಂದು ಬರುತ್ತವೆ ಎಂಬುದನ್ನೂ, ಅವುಗಳ ಸಾಮರಸ್ಯವನ್ನೂ ತೋರಿಸಬೇಕು. ಬಾಹ್ಯ ಆಚಾರಗಳಾವುದನ್ನೂ ಗಮನಕ್ಕೆ ತೆಗೆದುಕೊಳ್ಳಕೂಡದು. ಅಂದರೆ ತತ್ತ್ವವನ್ನು, ಆಧ್ಯಾತ್ಮಿಕ ಭಾಗವನ್ನು ಮಾತ್ರ ಬೋಧಿಸಿ. ಜನರು ತಮ್ಮ ತಮ್ಮ ಆಚಾರ ವ್ಯವಹಾರಗಳಿಗೆ ತಾವೇ ಅದನ್ನು ಹೊಂದಿಸಿಕೊಳ್ಳಲಿ. ನಾನು ಈ ವಿಷಯದ ಮೇಲೆ ಒಂದು ಪುಸ್ತಕವನ್ನು ಬರೆಯಬೇಕೆಂದಿದ್ದೆ. ಅದಕ್ಕಾಗಿ ನನಗೆ ಮೂರು ಭಾಷ್ಯಗಳೂ ಬೇಕಾಗಿತ್ತು. ಆದರೆ, ರಾಮಾನುಜ ಭಾಷ್ಯದ ಒಂದು ಭಾಗ ಮಾತ್ರ ಈವರೆಗೆ ದೊರೆತಿದೆ.
ಅದ್ಭುತ ವಿಶ್ಲೇಷಣೆಯೊಂದನ್ನು ನೋಡುತ್ತೇವೆ ನಾವು ಇಲ್ಲಿ! ಇಡೀ ಜಾಗತಿಕ ಧರ್ಮದ ತುಲನಾತ್ಮಕ ಅಧ್ಯಯನದ ನೋಟವೊಂದು ಇದೆ ಇಲ್ಲಿ. ಎಷ್ಟೇ ಆಗಲಿ ಅವರು ಸ್ವಾಮಿ ವಿವೇಕಾನಂದರು! ಹಾರ್ವರ್ಡ್ ವಿಶ್ವವಿದ್ಯಾಲಯ ಅವರ ಒಂದು ಉಪನ್ಯಾಸಕ್ಕೆ ತಲೆದೂಗಿ, ಮನಸೋತು ಏಕಕಾಲಕ್ಕೆ ಎರಡು ಹುದ್ದೆಗಳನ್ನು ನೀಡಲು ಮುಂದಾದರು. ಅದೇ 'Professor of eastern religions' ಮತ್ತು 'Professor of Sanskrit studies'. ಆದರೆ, ಒಂದು ಹಾರ್ವರ್ಡ್ ವಿಶ್ವವಿದ್ಯಾಲಯ ವಿವೇಕಾನಂದರನ್ನು ಹಿಡಿದಿಡಬಲ್ಲದೆ? ಇದೇ ವಿಶ್ವವಿದ್ಯಾಲಯದ ಗ್ರೀಕ್ ಭಾಷಾ ವಿಭಾಗದ ಅಧ್ಯಕ್ಷರಾಗಿದ್ದ ಪೊ› ಜಾನ್ ಹೆನ್ರಿ ರೈಟ್ ಅವರೇ ವಿವೇಕಾನಂದರನ್ನು ಕುರಿತು ಅಮೆರಿಕದ ಎಲ್ಲ ವಿಶ್ವವಿದ್ಯಾಲಯಗಳ ಎಲ್ಲಾ ಪ್ರಾಧ್ಯಾಪಕರ ಒಟ್ಟು ಜ್ಞಾನಕ್ಕಿಂತ ಮಿಗಿಲಾದದ್ದು ಈ ಭಾರತೀಯ ಸಂನ್ಯಾಸಿಯ ಜ್ಞಾನ ಎಂದು ಹೇಳಿರಬೇಕಾದರೆ ಮತ್ತಾವ ಪುರಾವೆ ಬೇಕು ಬೃಹತ್ ಹಡಗೊಂದನ್ನು ಸಣ್ಣ ಕಾಲುವೆಯೊಂದು ಹಿಡಿದಿಡಲಾರದು ಎನ್ನುವುದಕ್ಕೆ.
ವಿವೇಕಾನಂದರ ಈ ಮೇಲಿನ ವಿಶ್ಲೇಷಣೆಯಿಂದ ತಿಳಿದು ಬರುವ ಪ್ರಮುಖ ಅಂಶಗಳೆಂದರೆ ಧರ್ಮ ಎಂದರೆ ವೇದಾಂತ. ಅರ್ಥಾತ್ ವೇದಗಳ ಸಾರ. ಇದನ್ನೇ ಉಪನಿಷತ್ ಎಂದೂ ಕರೆಯುವುದು ಮತ್ತು ಈ ವೇದಾಂತವೇ ಮಾನವನ ವಿಕಾಸದ ವಿವಿಧ ಹಂತಗಳನ್ನು ಸ್ಪಷ್ಟವಾಗಿ, ವಿವರವಾಗಿ ತಿಳಿಸುವ ಶಾಸ್ತ್ರ. ವಿಕಾಸ, ವಿಕಾಸವಾದ ಎಂದರೆ ನಮ್ಮ ಕಣ್ಮುಂದೆ ಸುಳಿಯುವುದು ಕೇವಲ ಡಾರ್ವಿನ್ನ ವಿಕಾಸವಾದ. ಸ್ವಯಂಘೊಷಿತ ಚಿಂತಕರ ಸಮಸ್ಯೆ ಇರುವುದೇ ಇಲ್ಲಿ. ಡಾರ್ವಿನ್ ವಿಕಾಸವಾದ ಜೈವಿಕಸ್ತರಕ್ಕೆ ಸಂಬಂಧಿಸಿದಂತೆ ಏಕಕೋಶ ಜೀವಿಯಾದ ಅಮೀಬಾದಿಂದ ಹಿಡಿದು ಮನುಷ್ಯನವರೆಗಿನ ವಿಕಾಸವನ್ನು ಮಾತ್ರ ಹೇಳುತ್ತದೆ. ಮನುಷ್ಯ ಮನುಷ್ಯನ ನಡುವಿನ ವ್ಯತ್ಯಾಸವಾಗಲಿ, ಅಲ್ಪ ಮಾನವ ಮಹಾಮಾನವನಾಗಿ ಬೆಳೆಯಲು ಅರ್ಥಾತ್ ವಿಕಾಸಗೊಳ್ಳಲು ಬೇಕಾಗುವ ಪರಿಕರಗಳು, ಅವಶ್ಯಕತೆಗಳು ಇವುಗಳ ವಿಷಯದಲ್ಲಿ, ಅದು ಸಮರ್ಪಕವಾಗೇನೂ ಹೇಳುವುದಿಲ್ಲ. Survival of the fittestನಲ್ಲಿ ಪ್ರಸ್ತಾಪ ಮಾಡಲಾದ ಊಜಿಠಿ ಎನ್ನುವ ಪದಕ್ಕೆ ಅದರ ವ್ಯಾಖ್ಯೆ ಪ್ರಶ್ನಾತೀತವಾಗೇನೂ ಉಳಿದಿಲ್ಲ. ಇದನ್ನು ಕುರಿತು ಹೇಳಿದ ಅತ್ಯಂತ ಪ್ರಾಚೀನ ಹಾಗೂ ಅತ್ಯಂತ ರ್ತಾಕ ವಿವರಣೆಯೇ ವೇದಾಂತ ಮತ್ತು ಅದರದೇ ಶಾಖೆಯಾದ ರಾಜಯೋಗ. ಸುಪ್ರಸಿದ್ಧ ಪಾಶ್ಚಾತ್ಯ ಮನಃಶಾಸ್ತ್ರಜ್ಞ ಕಾರ್ಲ್ ಯೂಂಗ್ ಇದನ್ನು ಸಂಪೂರ್ಣವಾಗಿ ಅನುಮೋದಿಸುತ್ತಾನೆ. ಅಷ್ಟೇ ಅಲ್ಲ, ಈ ವಿಷಯದಲ್ಲಿ ಬಾಲಿಶ, ಅಪೂರ್ಣ ಚಿಂತನೆಗಳನ್ನು ಕೊಟ್ಟ ಪಾಶ್ಚಾತ್ಯರು ಸರ್ವಜ್ಞರಂತೆ ವರ್ತಿಸುವುದನ್ನು ಕಂಡು ಸಾಕಷ್ಟು ಛೀಮಾರಿ ಹಾಕಿದ್ದಾನೆ. ಮತ್ತು ಈ ವೇದಾಂತ ದ್ವೈತ, ವಿಶಿಷ್ಟಾದ್ವೈತ ಮತ್ತು ಅದ್ವೈತ ಎಂಬ ಮೂರು ಹಂತಗಳಲ್ಲಿರುವವು. ಈ ಮೂರು ಸ್ಥಿತಿಗಳು ಏಕೆ ಎಂದರೆ ಸಾಂತ (Limited or finite)ವಾದ ಜೀವಿಯು ಅನಂತ (Infinite)ವಾದ ಬ್ರಹ್ಮ(ಮತ್ತಾವುದಾದರೂ ಪದ ಉಪಯೋಗಿಸಿಕೊಳ್ಳುವುದಿದ್ದರೆ ಅಭ್ಯಂತರವೇನೂ ಇಲ್ಲ) ವಾಗಲು ಮೂರು ಹಂತಗಳು ಬೇಕು ಮತ್ತು ಮೂರೇ ಸ್ಥಿತಿಗಳು ಬೇಕು. ಉದಾಹರಣೆಗೆ ಗಂಗೆ ಸಮುದ್ರವನ್ನು ಸೇರುವ ಪ್ರಕ್ರಿಯೆಯಲ್ಲಿ ಮೂರು ಹಂತಗಳಿರುವಂತೆ. ವಾರಾಣಸಿಯಲ್ಲಿ ಅದು ಸಮುದ್ರಕ್ಕಿಂತ ಸಂಪೂರ್ಣವಾಗಿ ಬೇರೆಯೇ (ದ್ವೈತ). ಸಮುದ್ರದಲ್ಲಿ ಲೀನವಾಗುತ್ತಿರುವ ಸಂದರ್ಭದಲ್ಲಿ ಅದು ಪ್ರತ್ಯೇಕವಾಗಿ ಅದು ಗಂಗೆಯೂ ಅಲ್ಲ ನದಿಯೂ ಅಲ್ಲ ಇಲ್ಲವೇ ಪೂರ್ತಿ ಸಮುದ್ರವೂ ಅಲ್ಲ (ವಿಶಿಷ್ಟಾದ್ವೈತ). ಸಂಪೂರ್ಣವಾಗಿ ಬಂಗಾಳ ಕೊಲ್ಲಿಯಲ್ಲಿ ಸೇರಿ ಹೋದಾಗ ಅಲ್ಲಿ ಗಂಗೆಯೇ ಇಲ್ಲ. ಇರುವುದೆಲ್ಲ ಸಮುದ್ರವೇ (ಅದ್ವೈತ). ಪ್ರಪಂಚದ ಯಾವುದೇ ಧರ್ಮದ, ಯಾವುದೇ ಆಧ್ಯಾತ್ಮಿಕ ಸಾಧಕ, ಅವನು ಆಸ್ತಿಕನೇ ಇರಲಿ ನಾಸ್ತಿಕನೇ ಇರಲಿ ಪರಿಪೂರ್ಣನಾಗುವ ಪ್ರಕ್ರಿಯೆ ಈ ಮೂರು ಹಂತಗಳ ಮೂಲಕವೇ ಹೋಗಬೇಕು. ಅದೇ ದೇಹಭಾವ, ಜೀವಭಾವ ಮತ್ತು ಆತ್ಮಭಾವ ಅರ್ಥಾತ್ ದ್ವೈತಸ್ಥಿತಿ, ವಿಶಿಷ್ಟಾದ್ವೈತ ಸ್ಥಿತಿ ಮತ್ತು ಅದ್ವೈತ ಸ್ಥಿತಿ. ಒಂದೇಒಂದು ವಿನಾಯಿತಿಯೂ ಇಲ್ಲ ಈ ನಿಯಮಕ್ಕೆ. ಈ ಮೂರು ಭಾವಗಳಲ್ಲಿ ಸಾಂತ (finite) ಮತ್ತು ಅನಂತ (infinite)ಗಳ ನಡುವಿನ ಸಂಬಂಧ ಹೇಗಿರುತ್ತೆ ಎಂಬುದರ ಸಂಪೂರ್ಣ (exhaustive study) ವಿವರಗಳನ್ನು ಒಳಗೊಂಡಿರುವ ಏಕಮೇವ ಸಿದ್ಧಾಂತ ವೇದಾಂತ. ಈ ಭಾವಗಳಲ್ಲಿ ಯಾವುದೋ ಒಂದನ್ನು ಮಾತ್ರ ಅಳವಡಿಸಿಕೊಂಡು ಬೇರೆಬೇರೆ ಜಾಗತಿಕ ಧರ್ಮಗಳು ಮೂಡಿಬಂದಿವೆ. ಅದು ಕ್ರೖೆಸ್ತ, ಇಸ್ಲಾಂ, ಬೌದ್ಧ ಅಥವಾ ಇನ್ನಾವುದೇ ಆಗಿರಲಿ. ಆದರೆ ಚೌಕಟ್ಟು (Frame work) ಅಥವಾ ಅಸ್ತಿಪಂಜರ (Skeleton) ಮಾತ್ರ ವೇದಾಂತದ್ದೇ; ವೇದಾಂತವೇ.
ಈ ಚೌಕಟ್ಟಿನಲ್ಲೇ ಬರುವುವು ನಾಲ್ಕು ಯೋಗಗಳು ಮತ್ತು ಅವುಗಳ ವಿವಿಧ ಭಾವಗಳು ಕೂಡ. ಅದು ಕ್ರಿಯಾ ಯೋಗವೇ ಆಗಿರಲಿ; ಮಧುರ ಇಲ್ಲವೇ ದಾಸ್ಯ ಭಾವಗಳೇ ಆಗಿರಲಿ, ಆದ್ದರಿಂದ ಧಾರ್ವಿುಕ ಸಾಮರಸ್ಯ ವೇದಾಂತವನ್ನು ಬುನಾದಿ ಯಾಗಿ ಉಳ್ಳ ಮತ ಪಂಥಗಳಲ್ಲಿ ಸ್ವಭಾವತಃ (innate) ಇದ್ದದ್ದೇ. ಹೊಸದಾಗಿ ಶಾಸನವೊಂದರ ಮೂಲಕ ಸಾಧಿಸಬೇಕಾದ್ದೇನೂ ಇಲ್ಲ. ಪ್ರಾಚೀನ ಭಾರತ;
‘ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ|
ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೆತಿ ನೈಯ್ಯಾಯಿಕಾಃ|
ಅರ್ಹನ್ ನಿತ್ಯಥ ಜೈನ ಶಾಸನರತಾಃ ಕಮೇತಿ ಮೀಮಾಂಸಕಾಃ|
ಸೋಯಮ್ ನೋ ವಿದಧಾತಿ ವಾಂಛಿತ ಫಲಂ ತ್ರೖೆಲೋಕ್ಯ ನಾಥೋ ವಿಭುಃ||
ಮತ್ತು ಭಗವದ್ಗೀತೆಯಲ್ಲಿ ಯೇ ಯಥಾ ಮಾಂ ಪ್ರಪದ್ಯಂತೇ ಇತ್ಯಾದಿ ಶ್ಲೋಕಗಳ ಮೂಲಕ ಸ್ಪಷ್ಟವಾಗಿ ಇದನ್ನು ಸಾರಿದೆ . ಅಷ್ಟೇ ಅಲ್ಲ ಹೊಸಧರ್ಮ ಎನ್ನುವ ಪದವೇ ಅಸಮರ್ಪಕ, ಹೊಸ ಧರ್ಮವೊಂದು ಉದಯಿಸಿತು, ವೇದೋಪನಿಷತ್ತುಗಳನ್ನು ತಿರಸ್ಕರಿಸಿತು ಎನ್ನುವುದೂ ಒಂದೇ; ಬಂಗಾರದ ಒಡವೆಯೊಂದು ಹೊಸ ಒಡವೆಯಾಗಲು ಬಂಗಾರವನ್ನೇ ತಿರಸ್ಕರಿಸಿತು ಎನ್ನುವುದೂ ಒಂದೇ. ಇಲ್ಲವೇ ಮರದ ಕುರ್ಚಿ ಮೇಜು ಆಗಲೆಂದು ಮರವನ್ನೇ ತಿರಸ್ಕರಿಸಿತು ಎನ್ನುವುದೂ ಒಂದೇ. ಈ ಕಾರಣಕ್ಕಾಗಿಯೇ ವೇದಾಂತಿಯೊಬ್ಬ ಅನ್ಯ ಧರ್ಮವನ್ನು ಕೂಡ ಆ ಧರ್ವಿುಯನಿಗಿಂತಲೂ ಸ್ಪಷ್ಟವಾಗಿ, ಪ್ರಬುದ್ಧವಾಗಿ ಪ್ರತಿಪಾದಿಸಬಲ್ಲ. ಸ್ವಾಮಿ ವಿವೇಕಾನಂದರು ಕ್ಯಾಲಿಫೋರ್ನಿಯಾದಲ್ಲಿ ಕ್ರಿಸ್ಮಸ್ ಹಬ್ಬದಂದು ಕ್ರಿಸ್ತನ ಬಗ್ಗೆ ಮಾಡಿದ ಭಾಷಣ ಕುರಿತು ಅಲ್ಲಿಯ ಪತ್ರಿಕೆ ಬರೆದಿದ್ದು ಹೀಗೆ... ಯಾವುದೇ ಚರ್ಚ್ ಪಾದ್ರಿ ಇಲ್ಲವೇ ಇಡೀ ಜೀವನವನ್ನೇ ಬೈಬಲ್ ಅಧ್ಯಯನಕ್ಕೆ ಮೀಸಲಿಟ್ಟ, ಸಾಕಷ್ಟು ಸಂಶೋಧನೆಗಳನ್ನು ಮಾಡಿದ ಒಬ್ಬ ಪೊ›ಫೆಸರ್ ಇಷ್ಟು ಅದ್ಭುತವಾಗಿ, ಕ್ರಿಸ್ತನ ಬಗ್ಗೆ ಇಲ್ಲಿಯವರೆಗೆ ಮಾತನಾಡಿಲ್ಲ. ಹಾಗೆಯೇ ಕರಾಚಿ ರಾಮಕೃಷ್ಣ ಆಶ್ರಮದಲ್ಲಿ ಬ್ರಹ್ಮಲೀನ ಶ್ರೀ ಸ್ವಾಮಿ ರಂಗನಾಥಾನಂದಜಿ ಮಹಾರಾಜರು ಪ್ರವಾದಿ ಮೊಹಮ್ಮದರನ್ನು ಕುರಿತು ನೀಡಿದ ಪ್ರವಚನವನ್ನು ಆಲಿಸಿದ, ಅದೇ ಸಭೆಯಲ್ಲಿ ಉಪಸ್ಥಿತರಿದ್ದ ಎಂ.ಎ.ಜಿನ್ನಾ ಅವರು ಸ್ವಾಮಿಗಳನ್ನು ಸಮೀಪಿಸಿ ಹೇಳಿದ್ದು ಹೀಗೆ... ‘ನನ್ನ ಧರ್ಮದ ಬಗ್ಗೆ ನನಗಿದ್ದ ಸಾಕಷ್ಟು ತಪ್ಪು ತಿಳಿವಳಿಕೆಗಳನ್ನು ದೂರ ಮಾಡಿದಿರಿ, ಇನ್ನು ಮುಂದೆ ಬಿಡದೆ ನಾನು ನಮಾಜಿಗೆ ಹಾಜರಾಗುತ್ತೇನೆ’ ಎಂದು. ಇದಕ್ಕೆಲ್ಲ ಕಾರಣವಿಷ್ಟೇ, ವೇದಾಂತವೇ ಯಾವುದೇ ಧರ್ಮದ ಮೂಲಭೂತ ತತ್ವ; ಮೂಲ ವಸ್ತು. ಧರ್ಮವೊಂದು ಶ್ರೀ ವಿವೇಕಾನಂದರು ಹೇಳಿದಂತೆ ಅದರ ಅನ್ವಯ ರೂಪ (Application). ಇನ್ನು ಅನ್ಯ ಧರ್ಮಗಳಲ್ಲಿ ಬಹಳಷ್ಟು ಪ್ರತಿಕ್ರಿಯಾತ್ಮಕ ಧರ್ಮಗಳು ಅವು ಕೇವಲ ಜೈನ ಮತ್ತು ಬೌದ್ಧ ಧರ್ಮಕ್ಕೆ ಸೀಮಿತವಾಗಿಲ್ಲ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಕೂಡ! ಭಯಾನಕವಾದ ರೋಮನ್ನರ ರಾಜಕೀಯ ಕ್ರೌರ್ಯಕ್ಕೆ ಪ್ರತಿಕ್ರಿಯೆಯಾಗಿ ಬಂದದ್ದೇ ಕ್ರಿಸ್ತನ ಅಹಿಂಸಾವಾದ. ಹಾಗೆಯೇ ಚಾರ್ವಾಕರ ಭೋಗವಾದಕ್ಕೆ ಪ್ರತಿಕ್ರಿಯೆಯಾಗಿ ಬಂದಿದ್ದು ದಿಗಂಬರ ಜೈನರ ತೀವ್ರ ವೈರಾಗ್ಯ, ಕರ್ಮಠರ ಯಜ್ಞಯಾಗಾದಿಗಳ ಕಾಲದಲ್ಲಿ ವಿಪರೀತವಾಗಿ ನೆಡೆಯುತ್ತಿದ್ದ ಪ್ರಾಣಿ ಬಲಿಗೆ ಬುದ್ಧನ ಪ್ರೇಮ ಪೂರ್ಣ ಸಂಸ್ಕೃತಿ. ಇದು ಎಷ್ಟರಮಟ್ಟಿಗೆ ಎಂದರೆ ಅಹಿಂಸಾವಾದದ ತೀವ್ರತೆಯಲ್ಲಿ ಆಯುರ್ವೆದ ಶಾಸ್ತ್ರ ಪ್ರಾಣಿಗಳ ಮೇಲಿನ ಪ್ರಯೋಗಗಳನ್ನೇ ನಿಲ್ಲಿಸಬೇಕಾಯಿತು. ಆದರೆ, ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳು ಮೂಲ ಧರ್ಮಗಳಾದ ಯಹೂದ್ಯ ಮತ್ತು ಪಾರ್ಸಿ ಧರ್ಮಗಳನ್ನು ನುಂಗಿ ನೊಣೆದು ಹಾಕಿದರೆ ಸನಾತನ ಧರ್ಮದ ಬಂಡುಕೋರ ಶಿಶುವಾದ ಬೌದ್ಧ ಧರ್ಮ ತಾನೇ ಮಂದವದನೆಯಾಯಿತು (ಸಂಖ್ಯಾತ್ಮಕ ದೃಷ್ಟಿಯಿಂದ). ಇದಕ್ಕೆ ಕಾರಣ ಹಿಂದೂ ಸಮಾಜಿಕ ದೋಷಗಳನ್ನು ಹಿಂದೂ ಧಾರ್ವಿುಕ ದೋಷಗಳೆಂದು ಅರ್ಥೈಸಿದ್ದು. ಅದು ಜಾತಿ ಪದ್ಧತಿಯೇ ಇರಲಿ ಅಸ್ಪ್ಶಶ್ಯತೆಯೇ ಇರಲಿ, ಹಾಗೆಯೇ ವೈವಿಧ್ಯತೆಯನ್ನು ಅಳಿಸಿ ಏಕರೂಪತೆ (uniformity)ಯನ್ನು ಎತ್ತಿ ಹಿಡಿದಿದ್ದು, ವೈವಿಧ್ಯತೆ ಮತ್ತು ವಿಕಾಸ ಒಟ್ಟೊಟ್ಟಿಗೆಯೇ ಹೋಗುವಂಥಾದ್ದು. ವೈವಿಧ್ಯತೆ ಇಲ್ಲದಿದ್ದಲ್ಲಿ ಅನುಯಾಯಿಗಳನ್ನು ಬಲವಂತವಾಗಿ ಹಿಡಿದಿಡಬೇಕಾಗುತ್ತದೆ. ಭಯ ಮತ್ತು ಪ್ರಲೋಭನೆಗಳ ಮೂಲಕ. ಆದ್ದರಿಂದಲೇ ಏಕರೂಪತೆಯನ್ನು (Uniformity) ಎತ್ತಿಹಿಡಿಯುವ ಧರ್ಮಗಳಲ್ಲಿ ಸ್ವರ್ಗದ ಪ್ರಲೋಭನೆಯೇ ಪ್ರಮುಖ! ಮೋಕ್ಷ ಗೌಣ; ಮತ್ತು ನಮ್ಮದೇ ಏಕಮೇವ ಮಾರ್ಗ ಎಂಬ ಧೋರಣೆ ಸರ್ವೆಸಾಮಾನ್ಯ. ಇದನ್ನು ಮನಗಂಡ ಭಾರತೀಯ ಪ್ರತಿಕ್ರಿಯಾತ್ಮಕ ಧರ್ಮಗಳಾದ ಜೈನ ಮತ್ತು ಬೌದ್ಧ ಮತಗಳು ಪೂಜೆ, ಉಪಾಸನೆ, ಇಂದ್ರ, ಗಂಧರ್ವರನ್ನು ಅಳವಡಿಸಿಕೊಳ್ಳಬೇಕಾದ್ದು ಅನಿವಾರ್ಯವಾಯಿತು; ಕ್ರಮೇಣ ದೇವಾಲಯವೂ ಬಂತು, ಮೂರ್ತಿ ಪೂಜೆಯೂ ಬಂತು. ಬೃಹತ್ ಬುದ್ಧನ ಮೂರ್ತಿಗಳನ್ನು ಮತ್ತು ತೀರ್ಥಂಕರರ ದೇವಾಲಯಗಳನ್ನು ಈ ಹಿನ್ನೆಲೆಯಲ್ಲಿಯೇ ಗಮನಿಸಬೇಕು. ಈ ಹಂತದಲ್ಲಿ ಅದರ ಅನುಯಾಯಿಗಳು ಯೋಚಿಸಲಾರಂಭಿಸಿದರು. ನಮ್ಮ ಮೂಲ ಧರ್ಮವಾದ ಸನಾತನ ಸಂಸ್ಕೃತಿಯಲ್ಲಿ ಇವೆಲ್ಲ ಹೇರಳವಾಗಿ ಇನ್ನೂ ವೈವಿಧ್ಯಮಯವಾಗಿಯೇ ಇತ್ತಲ್ಲ! ಎಂದು. ಫಲಿತಾಂಶ ಮರಳಿ ಮಾತೃಧರ್ಮಕ್ಕೆ ಹಿಂದಿರುಗಿದ್ದು. ‘ಹೊಸ ಪಂಥಗಳ ಉದಯ’ ಎನ್ನುವಲ್ಲಿ ಈ ಅಂಶಗಳೆಲ್ಲಾ ಸೇರಲ್ಪಟ್ಟರೆ ಮಾತ್ರ ಅದೊಂದು ಸಮರ್ಪಕ ವಸ್ತುನಿಷ್ಠ ಅಧ್ಯಯನ ಇಲ್ಲವಾದ್ದಲ್ಲಿ ಅದೊಂದು ಆಂಶಿಕ ಸತ್ಯ. ವಿದ್ಯಾರ್ಥಿಗಳು ಯಾವುದೇ ವಿಷಯದ ಬಗ್ಗೆ ತಲರ್ಸ³ ಜ್ಞಾನ ಪಡೆಯುವಂತೆ ನೋಡಿಕೊಳ್ಳಬೇಕಾದ್ದು ನಮ್ಮ ಕರ್ತವ್ಯವಲ್ಲವೇ?!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)