

ಪ್ರಜ್ಞಾವಂತ ಸಮಾಜದಲ್ಲಿ ಅಭಿಪ್ರಾಯ ಭೇದ ಸಾಮಾನ್ಯ. ಪ್ರಜಾಪ್ರಭುತ್ವದಲ್ಲಂತೂ ಅದು ಸ್ವಾಗತಾರ್ಹ ಮತ್ತು ಅವಶ್ಯಕ. ಸಾರ್ವಜನಿಕ ಆಸಕ್ತಿ ಮತ್ತು ಸಾರ್ವತ್ರಿಕ ಪ್ರಸ್ತುತತೆಗಳನ್ನು ಹೊಂದಿರುವ ವಿಷಯಗಳ ಬಗ್ಗೆ ಮುಕ್ತ ಚರ್ಚೆ, ರ್ತಾಕ ಚರ್ಚೆ ಆರೋಗ್ಯಕರ ಮತ್ತು ಅನಿವಾರ್ಯ. ಇಂತಹ ಚರ್ಚೆಗಳಿರುವುದೇ ವಿಷಯ ಒಂದರ ಎಲ್ಲಾ ಮಜಲುಗಳನ್ನು ಅರಿಯುವುದಕ್ಕೆ. ಹತ್ತಾರು ದೃಷ್ಟಿಕೋನ ಗಳನ್ನು ಪರಿಚಯಿಸಿಕೊಳ್ಳುವುದಕ್ಕೆ. ಇಲ್ಲೆಲ್ಲಾ ಇರಬೇಕಾದ್ದು, ಅತ್ಯಂತ ಅವಶ್ಯಕವಾಗಿರ ಬೇಕಾದದ್ದು ಸರ್ತಾಕತೆ ಮತ್ತು ಪೂರ್ವಾಗ್ರಹ ರಾಹಿತ್ಯ. ವಿಜ್ಞಾನ ನಿಂತಿರುವುದೇ ಇವೆರಡರ ಮೇಲೆ. ಎಲ್ಲಿ ಇವೆರಡೂ ಇಲ್ಲವೋ ಅದೊಂದು ಹರಟೆ ಮಾತ್ರ. ಅಂಥದ್ದನ್ನು ಸಾರಾಸಗಟು ತಿರಸ್ಕರಿಸಬೇಕು. ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳ ಬೇಕಂತೇನೂ ಇಲ್ಲ. ಆದರೆ, ಅವುಗಳನ್ನು ಕೇಳಿ ಅವುಗಳ ಪ್ರಸ್ತುತತೆಯನ್ನು ಪರಿಶೀಲಿಸುವ ವ್ಯವಧಾನ ಮತ್ತು ತೆರೆದ ಹೃದಯ ಮಾತ್ರ ಇರಲೇಬೇಕು. ಯಾವುದೇ ನಾಗರಿಕ ಸಮಾಜಕ್ಕೆ ಇರಬೇಕಾದ ಮೂಲಭೂತ ಲಕ್ಷಣಗಳಲ್ಲಿ ಇದೂ ಒಂದು.
ಕೆಲವು ದಿನಗಳ ಹಿಂದೆ ದೂರದರ್ಶನದಲ್ಲಿ ಚರ್ಚೆಯೊಂದು ನಡೆಯಿತು. ಶತಶತಮಾನಗಳ ಕಾಲ ರ್ಚಚಿತ ವಸ್ತುವಾಗಿ ಉಳಿದಿದ್ದ ವಿಷಯವೊಂದು ನ್ಯಾಯಾಲಯ ಮತ್ತು ಸಾರ್ವಜನಿಕ ವಿಶ್ಲೇಷಣೆ, ಪರಿಶೀಲನೆಗಳಿಗೆ ವಸ್ತುವಾಗಿ ಪರಿಣಮಿಸಿತು. ಭಿನ್ನ ಗುಂಪುಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದವು. ಸಾಧಾರ ಸಹಿತವಾಗಿಯೇ ನೇರಮಾತಿನ ಮೂಲಕ ದಾಖಲಿತ ಸತ್ಯಗಳ ಮಂಡನೆ ನಡೆದಾಗ ಕೆಲ ವರ್ಗಗಳು ಕೆರಳಿದವು. ಸತ್ಯಗಳನ್ನು ಜೀರ್ಣಿಸಿಕೊಳ್ಳುವ, ಎಷ್ಟೇ ಕಹಿಯಾಗಿದ್ದರೂ ಸ್ವೀಕರಿಸುವ, ಗೌರವಿಸುವ ಬದ್ಧತೆಗಳನ್ನು ಎಲ್ಲಾ ಸಂಸ್ಕೃತಿಗಳು, ಎಲ್ಲಾ ಸಮಾಜಗಳು ಪಾಲಿಸಿಕೊಂಡೇನು ಬಂದಿಲ್ಲ! ಅದು ಅಷ್ಟು ಸುಲಭವೂ ಅಲ್ಲ! ಈ ನಿಟ್ಟಿನಲ್ಲಿ ಸನಾತನ ಸಂಸ್ಕೃತಿ ಅಥವಾ ಭಾರತೀಯ ಸಂಸ್ಕೃತಿಯ ಮುಂದೆ ಅನ್ಯ ಸಂಸ್ಕೃತಿಗಳು ಹೋಲಿಕೆಗೂ ಅರ್ಹವಲ್ಲ. ಸತ್ಯಶೋಧನೆ, ಪ್ರಶ್ನೆ, ವಿಚಾರಣೆ ಈ ಪದಗಳನ್ನು ಕಂಡರೇನೇ ಹೆದರಿ ಮುದುಡಿಕೊಳ್ಳುವ ಸಂಸ್ಕೃತಿಗಳು ಹಲವು ಇವೆ. ಪ್ರಶ್ನಿಸಿದವರನ್ನು ಶಿಕ್ಷೆಗೆ ಒಳಪಡಿಸುವುದಿರಲಿ ಕೊಂದೇ ಹಾಕಬೇಕು, ಕೊಂದು ಹಾಕಿದರೆ ಅದರಂಥ ಪುಣ್ಯಕಾರ್ಯ, ಅದರಂಥ ಮಹತ್ ಸಾಧನೆ ಜೀವನದಲ್ಲಿ ಮತ್ತಾವುದೂ ಇಲ್ಲ ಎಂದು ಘೊಷಿಸಿಕೊಂಡು, ಪೋಷಿಸಿಕೊಂಡು, ಹಾಗೆ ಮಾಡಿದವರನ್ನು, ಕೊಂದವರನ್ನು ದೇವತೆಗಳನ್ನಾಗಿಸಿಕೊಂಡು ಬಂದ ಸಂಸ್ಕೃತಿಗಳೇ ಜಾಸ್ತಿ. ‘ಸತ್ಯವನ್ನು ಪ್ರಶ್ನಿಸಿದಷ್ಟೂ ಬಲಿಯುತ್ತದೆ. ಬೆಂಕಿಯನ್ನು ಗೀಚಿದಷ್ಟೂ ಪ್ರಜ್ವಲಿಸುತ್ತದೆ’ ಎಂಬುದನ್ನು ಕೇಳುವುದಕ್ಕೇ ತಯಾರಿಲ್ಲದ ಸಂಸ್ಕೃತಿಗಳು ಅವು. ಆದ್ದರಿಂದಲೇ ವಿಜ್ಞಾನಕ್ಕೆ ಆ ಸಂಸ್ಕೃತಿಗಳ ಕೊಡುಗೆ ಶೂನ್ಯ. ಅಷ್ಟೇ ಅಲ್ಲ, ಇತಿಹಾಸದುದ್ದಕ್ಕೂ ವಿಜ್ಞಾನಿಗಳನ್ನು ವಿರೋಧಿಸಿ, ಶಿಕ್ಷಿಸಿಕೊಂಡೇ ಬಂದ ಗುಂಪುಗಳು ಇವು.
ದೂರದರ್ಶನದಲ್ಲಿ ನಡೆದ ಚರ್ಚೆಯ ಪರಿಣಾಮಗಳನ್ನು ನಾನು ಈಗ ವಿಶ್ಲೇಷಿಸುವುದಿಲ್ಲ. ಅದೊಂದು ಹಳೇ ಕಥೆ. ಈಗ ಪ್ರಶ್ನೆ ಏನೆಂದರೆ ಚರ್ಚೆಯ ಪರಿಣಾಮವಾಗಿ ನಡೆದ ಹಿಂಸಾಕೃತ್ಯಗಳು. ತರಕಾರಿಯನ್ನು ಕತ್ತರಿಸಿದಂತೆ ಮನುಷ್ಯನ ಶರೀರಗಳನ್ನು ಕತ್ತರಿಸಿದಾಗ ಈ ಘಟನೆಯಲ್ಲಿ ನನಗೆ ಕಂಡಿದ್ದು ಎರಡು ಮುಖ. ಒಂದು ಅಮಾನುಷ ಕ್ರೌರ್ಯ, ಇನ್ನೊಂದು ಹೇಯವೆನಿಸುವಷ್ಟು ಅಸಹಾಯಕತೆ. ಕ್ರೌರ್ಯಕ್ಕೆ ಬಲಿಯಾದ ವ್ಯಕ್ತಿಗಳಲ್ಲಿ ಹೆಪ್ಪುಗಟ್ಟಿದ್ದ ಹೇಡಿತನ. ಪ್ರತಿರೋಧ ಒಡ್ಡಿ ಹೆಡೆಮುರಿ ಕಟ್ಟುವುದೊತ್ತಟ್ಟಿಗಿರಲಿ ಆತ್ಮರಕ್ಷಣೆಗೆ ಬೇಕಾದ ಕ್ಷಾತ್ರವಿರ್ಯವೂ ಇಲ್ಲದಿದ್ದ ಸ್ಥಿತಿ. ದುಷ್ಟನೊಬ್ಬ ಕೆಣಕಿದಾಗ ಅವನಿಗೆ ಪಾಠ ಕಲಿಸಿ, ಇನ್ನೆಂದೂ ನಮ್ಮ ಹತ್ತಿರ ಸುಳಿಯುವ ಧೈರ್ಯವನ್ನೂ ಮಾಡದೆ, ಆಜೀವ ಪರ್ಯಂತ ಶಿಷ್ಟನಂತೆ ಬದುಕಲೇಬೇಕಾದ ಅನಿವಾರ್ಯತೆಯನ್ನು ಮನಗಾಣಿಸಿ, ಅವನನ್ನು ಸರಿದಾರಿಗೆ ತರಿಸುವ ಪರಿಯನ್ನು, ನಮ್ಮ ಸಂಸ್ಕೃತಿ ನಮಗೆ ಹೇಳಿ ಕೊಟ್ಟೇ ಇಲ್ಲವೇ? ನಮಗೆ ಪರಿಚಯಿಸಿಯೇ ಇಲ್ಲವೇ? ಯಾವ ದುಷ್ಟನನ್ನು ಸದೆಬಡಿಯದೆ ಹಾಗೆ ಬಿಟ್ಟಿದೆ ಭಾರತೀಯ ಸಂಸ್ಕೃತಿ? ದುಷ್ಟ ಕ್ಷತ್ರಿಯನೊಬ್ಬ ಋಷಿಯ ಕತ್ತು ಕತ್ತರಿಸಿದಾಗ, ಋಷಿ ಪುತ್ರ ಇಪ್ಪತ್ನಾಲ್ಕು ಸಲ ಭಾರತದ ಪ್ರದಕ್ಷಿಣೆಯನ್ನು ಮಾಡಿ ಒಬ್ಬನೇ ಒಬ್ಬ ಕ್ಷತ್ರಿಯನೂ ಉಳಿಯದಂತೆ ಪಾಠ ಕಲಿಸಿದ ಘಟನೆ ನಮ್ಮ ಮುಂದೆ ಇದೆ. ವಾಲಿ, ರಾವಣರ ವಿಷಯದಲ್ಲಿ ಇತಿಹಾಸ ಮರುಕಳಿಸದಂತೆ ನೋಡಿಕೊಳ್ಳಲಾಯಿತು. ದುರ್ಯೋಧನ, ಕೀಚಕರ ಶರೀರಗಳನ್ನು ಮುರಿದು ಹಾಕಿದರೆ, ದುಶ್ಯಾಸನ, ಜರಾಸಂಧರನ್ನು ಸೀಳಿ ಎರಡು ಪಾಲು ಮಾಡಲಾಯಿತು. ಮೇಲಿನ ಎಲ್ಲ ಘಟನೆಗಳಲ್ಲೂ ಅವರಿಗೆ ತಿದ್ದಿಕೊಳ್ಳುವುದಕ್ಕೆ ಅವಕಾಶ ನೀಡಲಾಗಿತ್ತು. ಒಮ್ಮೆ ಅಲ್ಲ; ಹಲವು ಸಲ. ಅರ್ಧ ರಾಜ್ಯ ಬಿಡಿ ಐದು ಹಳ್ಳಿಗಳನ್ನು ಕೊಡುವುದಕ್ಕೂ ದುರ್ಯೋಧನ ಒಪ್ಪದಿದ್ದಾಗ ಕುರುಡರಾದ ನಮ್ಮನ್ನು ನೋಡಿಕೊಳ್ಳಲು ಒಬ್ಬ ಮಗನನ್ನಾದರೂ ಉಳಿಸಬಾರದಿತ್ತೇ ಭೀಮ ಎಂದು ಮುಂದೆ ಗಾಂಧಾರಿ ಎದೆಯೊಡೆದುಕೊಂಡು ಗೋಳಾಡುವ ಸ್ಥಿತಿಗೆ ಅವರನ್ನು ತಂದವನು ಕೃಷ್ಣ. ನಮಗಾದರೋ ಅವನು ಪರಮಾತ್ಮ ಸ್ವರೂಪ; ಜಗದ್ಗುರು. ಅವನ ಈ ಧೋರಣೆ ನೀತಿಗಳಿಂದ ನಾವು ಯಾವ ಪಾಠವನ್ನೂ ಕಲಿಯಲಿಲ್ಲವಲ್ಲ! ಕಲಿಯುವುದು ಬೇಡವೇ? ಅದರ ಪರಿಣಾಮವನ್ನೇ ಇಂದು ನಾವು ಅನುಭವಿಸುತ್ತಿರುವುದು! ನಾಗರಿಕ ಸಮಾಜವೊಂದರಲ್ಲಿ ದುಷ್ಟರಿಗೆ ಎರಡೇ ದಾರಿಗಳಿರಬೇಕು. ಒಂದೋ ಶಿಷ್ಟನಾಗಿ ಪರಿವರ್ತಿತನಾಗುವುದು; ಆ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು. ಇಲ್ಲವೇ ಯಮಲೋಕದೆಡೆಗೆ ಪ್ರಯಾಣ ಖಾತ್ರಿಯಾಗಿ ಆ ದಿನಕ್ಕೆ ಎದುರು ನೋಡುವುದು. ಹಾಗಿಲ್ಲದಿದ್ದಲ್ಲಿ ಅಲ್ಲಿ ಯಾವುದೇ ರೀತಿಯ ಆಡಳಿತ ವ್ಯವಸ್ಥೆಯೂ ಇಲ್ಲ. ಸದಾಚಾರ ಸದ್ವಿಚಾರಗಳನ್ನು ಪಾಲಿಸುವ ವ್ಯಕ್ತಿಗಳಿಗೆ ಸ್ವರ್ಗದಂತೆಯೂ, ದುರಾಚಾರ ದುರ್ವಿಚಾರಗಳಿಗೆ ಒಲಿದ ವ್ಯಕ್ತಿಗಳಿಗೆ ನರಕದಂತೆಯೂ ಇರಬೇಕಾದ್ದೇ ನಾಗರಿಕ ಸಮಾಜದ ಪ್ರಮುಖ ಲಕ್ಷಣ. ಅಷ್ಟೇಕೆ! ಅಂಥದ್ದು ಮಾತ್ರ ಮಾನುಷ ಸಮಾಜ. ಹಾಗಿಲ್ಲದಿದ್ದರೆ ಅದು ಮೃಗಗಳ ಬೀಡು; ಕಾಡು; ದುಷ್ಟನನ್ನು ನಿಷ್ಕರುಣೆಯಿಂದ ದಂಡಿಸಬೇಕಾದ್ದೇ ರಾಜಧರ್ಮದ ಮೊದಲ ಲಕ್ಷಣ. ಜಗತ್ತಿಗೇ ಮೊಟ್ಟಮೊದಲು ರಾಜಧರ್ಮವನ್ನು ಪರಿಚಯಿಸಿದ ಅತ್ರಿ ಸಂಹಿತೆಯಲ್ಲಿ ಅದರ ಕರ್ತೃ ಮಹರ್ಷಿ ಅತ್ರಿ ರಾಜನ ಕರ್ತವ್ಯಗಳನ್ನು ಕುರಿತು ಹೇಳುವಾಗ ಇದಕ್ಕೇ ಪ್ರಥಮ ಸ್ಥಾನವನ್ನು ಕೊಡುತ್ತಾನೆ ಮತ್ತು ವಿಶ್ವಮಾನ್ಯ ಚಾಣಕ್ಯ ತನ್ನ ಅರ್ಥಶಾಸ್ತ್ರದಲ್ಲಿ ಇದನ್ನೇ ಒತ್ತಿ ಒತ್ತಿ ಹೇಳುತ್ತಾನೆ. ದುಷ್ಟನಿಗೆ ಕೊಡುವ ಶಿಕ್ಷೆಯ ಉದ್ದೇಶದಲ್ಲಿ ಅವನನ್ನು ತಿದ್ದುವುದು ಗೌಣ. ಅಲ್ಲಿ ಪ್ರಧಾನ ಅಂಶ ಎಂದರೆ ದುಷ್ಟ ಪ್ರವೃತ್ತಿಗಳು ಇನ್ನೂ ಮೊಳಕೆಯೊಡೆಯುವ ಸ್ಥಿತಿಯಲ್ಲಿದ್ದು ಮುಂದೆ ಅದನ್ನು ಅನುಕೂಲ ಸಂದರ್ಭದಲ್ಲಿ ಬಳಸಿಕೊಳ್ಳೋಣ ಎಂದು ಯೋಚಿಸುವ (ಆಧುನಿಕ sleeping cellನಂಥ) ಶಕ್ತಿಗಳಿಗೆ ಸರಿಯಾದ ಎಚ್ಚರಿಕೆ ನೀಡುವುದೇ ಅಲ್ಲಿ ಮುಖ್ಯ. ಭಾರತೀಯ ದಂಡ ಸಂಹಿತೆಯಲ್ಲಿ ಇರುವ ಬೃಹತ್ ದೋಷವೆಂದರೆ ಎದುರಿಗೇ ಅಪರಾಧ ನಡೆಯುತ್ತಿದ್ದರೂ, ಸೂರ್ಯನ ಬೆಳಕಿನಷ್ಟು ನಿಚ್ಚಳವಾಗಿ ಅಪರಾಧಿ ಯಾರು ಎಂದು ಗೊತ್ತಿದ್ದರೂ ಶಿಕ್ಷೆ ನಿಗದಿಯಾಗುವುದು ಎಲ್ಲಾ ಔಪಚಾರಿಕ ಪ್ರಕ್ರಿಯೆಗಳನ್ನು ಮುಗಿಸಿದ ನಂತರವೇ. ಇದಕ್ಕೆ ತಗಲುವ ಸಮಯ ಸುಮಾರು ಇಪ್ಪತ್ತು, ಮೂವತ್ತು ವರ್ಷಗಳಷ್ಟು.'Justice delayed is justice denied'- ತಡವಾಗಿ ಸಿಕ್ಕ ನ್ಯಾಯ ಸಿಗಲಿಲ್ಲವೆಂತಲೇ- ಎನ್ನುವುದು ನಮಗೆ ಅನ್ವಯಿಸುವುದೇ ಇಲ್ಲ ಎಂಬಂತಿದೆ ಸಂಬಂಧಿಸಿದ ವರ್ಗಗಳ ಧೋರಣೆ. ಇಂತಹ ಸಂದರ್ಭದಲ್ಲಿ ಇರುವ ಏಕಮೇವ ಉಪಾಯವೇ ಕೆಣಕಲ್ಪಟ್ಟ ವ್ಯಕ್ತಿ ಪ್ರತಿರೋಧ ಒಡ್ಡಿ ದುಷ್ಟನಿಗೆ ಮರೆಯಲಾಗದಂಥ ಪಾಠ ಕಲಿಸುವುದು. ಗೃಹಸ್ಥನ ಧರ್ಮವಿರುವುದೇ ಹೀಗೆ. ಇಂತಹ ವಿಷಯವನ್ನು ಸಂನ್ಯಾಸಿಗಳು ಗೃಹಸ್ಥರಿಗೆ ಹೊಸದಾಗಿ ಕಲಿಸಿಕೊಡಬೇಕೆ ಎನ್ನುವ ಪ್ರಶ್ನೆ ಎದ್ದರೆ ತಲೆತಗ್ಗಿಸಿ ಉತ್ತರ ಕೊಡಬೇಕಾಗುತ್ತದೆ, ಹೌದು ಎಂದು. ಈ ಸ್ಥಿತಿಯನ್ನು ತಲುಪಿದ್ದೇವೆ ನಾವು ಇಂದು. ಇಡೀ ಎರಡನೇ ಸಹಸ್ರಮಾನದುದ್ದಕ್ಕೂ ಇನ್ನಿಲ್ಲದ ರೀತಿಯಲ್ಲಿ ದೇಶ ದುಸ್ಥಿತಿಗೆ ಒಳಗಾಗಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರ ಎರಡೇ! ನಾವು ಶಾರೀರಿಕ ಶಕ್ತಿಯ ಮಹತ್ವವನ್ನು ಕಡೆಗಣಿಸಿದ್ದು ಮತ್ತು ನಾವೊಂದು ಜನಾಂಗವಾಗಿ ಸಮಷ್ಟಿ ಪ್ರಜ್ಞೆ ಬಾಹ್ಯ ಶಕ್ತಿಗಳ ಆಕ್ರಮಣ ಇತ್ಯಾದಿ ಸಂದರ್ಭಗಳಲ್ಲಿ ಎಷ್ಟು ಅನಿವಾರ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಲು ವಿಫಲರಾಗಿದ್ದು. ಈ ಮಣ್ಣಿನ ಜೀವನ ಸಂಹಿತೆ ಶರೀರ ಮಾದ್ಯಂ ಖಲುಧರ್ಮಸಾಧನಂ ಅರ್ಥಾತ್ ಬಲಿಷ್ಠ ಶರೀರವೇ ಧರ್ಮದ ಮೊದಲ ಲಕ್ಷಣ ಎಂದು ಹೇಳುತ್ತೆ. ಮನುಷ್ಯನ ಗುರಿಯೇನು ಎಂದು ಹೇಳುವ ತೈತ್ತಿರೀಯ ಉಪನಿಷತ್ ಆಶಿಷ್ಠೋ ದೃಢಿಷ್ಠೋ ಬಲಿಷ್ಠಃ - ಆಶಾವಾದಿಯೂ, ದೃಢಮನಸ್ಕನೂ, ಬಲಿಷ್ಠನೂ ಆಗುವುದು ಎನ್ನುತ್ತದೆ. ಈ ಎಲ್ಲ ಚಿಂತನೆಗಳ ಪ್ರಧಾನ ಧ್ವನಿಯಾದ ಸ್ವಾಮಿ ವಿವೇಕಾನಂದರು ಶಕ್ತಿಯೇ ಜೀವನ ದೌರ್ಬಲ್ಯವೇ ಮರಣ ಎಂದು ಹೇಳಿದ್ದಷ್ಟೇ ಅಲ್ಲ ಇನ್ನೂ ಮುಂದೆ ಹೋಗಿ ಎಂತಹ ದಪ್ಪ ಚರ್ಮದವರಿಗೂ ಅರ್ಥ ವಾಗುವ ರೀತಿಯಲ್ಲಿ ಬುದ್ಧಿಶಾಲಿಯೂ, ಶಕ್ತಿಶಾಲಿಯೂ ಆದ ದುಷ್ಟನಿಗಾದರೂ ಭವಿಷ್ಯವಿದೆ; ಆದರೆ, ಬುದ್ಧಿಯೂ ಇಲ್ಲದ ಶಕ್ತಿಯೂ ಇಲ್ಲದ ಸಂಭಾವಿತನಿಗಲ್ಲ (ಗುಡಿಗುಡಿ ಮನುಷ್ಯ) ಎಂದು ಹೇಳುತ್ತಾರೆ. ಇದನ್ನು ಅವರು ಹೇಳಿದ್ದು ಕಳ್ಳನೊಬ್ಬ ಅದ್ಭುತ ಸಾಧುವಾಗಿ, ಯಶಸ್ವಿ ಸಂನ್ಯಾಸಿಯಾಗಿ ಪರಿವರ್ತನೆಗೊಂಡದನ್ನು ಕಣ್ಣಾರೇ ಕಂಡು. ಇತಿಹಾಸದುದ್ದಕ್ಕೂ ವಿವೇಕಾನಂದರ ಈ ಮಾತಿಗೆ ಸಂಬಂಧಿಸಿದಂತೆ ನೂರಾರು ಸಮರ್ಥನೆಗಳನ್ನು ನೋಡುತ್ತೇವೆ. ಭಾರತೀಯ ಚರಿತ್ರೆಯಲ್ಲೇ ವಿಶ್ವಾಮಿತ್ರ ಮತ್ತು ವಾಲ್ಮೀಕಿ ಮಹರ್ಷಿಗಳು ಕಂಗೊಳಿಸುತ್ತಾರೆ. ಈ ನಿಟ್ಟಿನಲ್ಲಿ ನಾವು ಗಮನಿಸಬೇಕಾದ್ದು ಬೌದ್ಧ ಧರ್ಮದ ಅವನತಿಯ ಕಾಲದಲ್ಲಿ ನಾಡನ್ನೆಲ್ಲ ವ್ಯಾಪಿಸಿದ ಅವಘಡಗಳು ಹಲವು. ಸಂನ್ಯಾಸಿಗಳಿಗೆ ಅನ್ವಯಿಸುವ ಬಹಳಷ್ಟು ಲಕ್ಷಣಗಳನ್ನು ಗೃಹಸ್ಥರ ಮೇಲೆ ಹೇರಿದ್ದೇ ಇದರಲ್ಲಿ ಪ್ರಧಾನ. ಅತ್ಯುನತ ತತ್ವವಾದ ಆಸೆಯೇ ದುಃಖಕ್ಕೆ ಕಾರಣ ಎನ್ನುವುದು ಇದರಲ್ಲಿ ಒಂದಾದರೆ ‘ಅಹಿಂಸೆ’ ಎಂಬ ತತ್ವವನ್ನು ವಿಪರೀತವಾಗಿಸಿದ್ದು ಇನ್ನೊಂದು. ಇದೇ ಇಂದು ತನ್ನ ದುರ್ಗಂಧವನ್ನು ಎಲ್ಲೆಡೆ ಬೀರಿ ‘ಹೇಡಿತನ’ ಅಥವಾ ‘ನಪುಂಸಕತ್ವ’ಕ್ಕೆ ಪರ್ಯಾಯವಾಗಿ ನಿಂತಿದೆ. ಯಜ್ಞದ ಕಾಲದಲ್ಲಿ ನಡೆಯುವ ಪ್ರಾಣಿ ಹಿಂಸೆಯನ್ನು ತಡೆಯ ಹೊರಟ ವ್ರತ ಆಯುರ್ವೆದದಲ್ಲಿ ಪ್ರಾಣಿಗಳ ಮೇಲೆ ಔಷಧಿಗಳನ್ನು ಪ್ರಯೋಗಿಸುವುದಕ್ಕೂ ಆಗದ ಸ್ಥಿತಿಯನ್ನು ತಲುಪಿ ಆ ವೈದ್ಯ ವ್ಯವಸ್ಥೆಯೇ ಉಸಿರುಗಟ್ಟಿ ಒದ್ದಾಡುವಂತಾಯಿತು. ಈ ಮಟ್ಟಕ್ಕೆ ತಲುಪಿತು ನಮ್ಮ ಅಹಿಂಸಾ ವ್ರತ.
ನಾಗರಿಕ ಸಮಾಜದ ಬುನಾದಿಯೇ ನಿಯಮ ಬದ್ಧತೆ ಅಥವಾ ಕಾನೂನು ಬದ್ಧತೆ. ಇದನ್ನು ಪೋಲಿಸರ ಸಹಾಯದಿಂದ ಸಾಧಿಸುವುದಲ್ಲ. ವ್ಯಕ್ತಿ ವ್ಯಕ್ತಿಯಲ್ಲೂ ಆತ್ಮ ಗೌರವವನ್ನು ಬೆಳೆಸಿ ಸಾಧಿಸಬೇಕಾದ್ದು. ವ್ಯಕ್ತಿಯೊಬ್ಬ ಪ್ರಾಣವನ್ನೇ ಬಲಿಕೊಟ್ಟು ಉಳಿಸಿಕೊಳ್ಳಬೇಕಾದ್ದು ಆತ್ಮಗೌರವ. ರಜಪುತಾನದ ಸ್ತ್ರೀಯರು ಪರಕೀಯರ ದುರಾಕ್ರಮಗಳ ಕಾಲದಲ್ಲಿ ಸಾರ್ವತ್ರಿಕವಾಗಿ ಅಗ್ನಿಗೆ ಆಹುತಿಯಾಗುತ್ತಿದ್ದ ‘ಜೋಹರ್’ ಪದ್ಧತಿಯನ್ನು ನಾವು ಈ ದೃಷ್ಟಿಯಿಂದಲೇ ನೋಡಬೇಕಾದ್ದು. ನಮ್ಮ ಮೇಲೆ ವಿನಾಕಾರಣ ನಡೆಯುವ ಈ ಹಿಂಸೆ ಕ್ರೌರ್ಯಗಳನ್ನು ಅವಮಾನ ದೌರ್ಜನ್ಯಗಳನ್ನು ನಾವು ಸಹಿಸಿಕೊಂಡಲ್ಲಿ ಆತ್ಮಗೌರವ ನುಚ್ಚುನೂರಾದಂತೆಯೇ ಸರಿ. ಕ್ರಿಶ್ಚಿಯನ್ ಪಾದ್ರಿಯೊಬ್ಬ ಹಿಂದೂ ಧರ್ಮವನ್ನು ಅವಮಾನಿಸಿದಾಗ ಅವನ ಕುತ್ತಿಗೆ ಪಟ್ಟಿ ಹಿಡಿದು ಸಮುದ್ರಕ್ಕೆ ಎಸೆಯುತ್ತೇನೆ ಎಂದು ಗುಡುಗಿದ್ದರು ಸ್ವಾಮಿ ವಿವೇಕಾನಂದರು ತಮ್ಮ ಸಮುದ್ರಯಾನದ ಕಾಲದಲ್ಲಿ. ನಮ್ಮ ಮೇಲಿನ ಹಿಂಸೆಗೆ ನಾವು ಅನುವು ಮಾಡಿಕೊಟ್ಟರೆ ನಾವು ಮತ್ತೊಬ್ಬರನ್ನು ಹಿಂಸಿಸುವುದಕ್ಕಿಂತಲೂ ಹೆಚ್ಚು ಹೇಯ ಇದು. ಈ ಕಾರಣಕ್ಕಾಗಿಯೇ ಆತ್ಮಹತ್ಯೆಗೆ ನಿಗದಿಯಾದ ಶಿಕ್ಷೆ ಕೊಲೆ ಮಾಡಿದ್ದಕ್ಕಿಂತ ಜಾಸ್ತಿ.
ಇದೆಲ್ಲಾ ಭಾರತೀಯ ಜೀವನ ಸಂಹಿತೆಯೇ! ವೇದ ಕಾಲದಿಂದಲೂ ನಮ್ಮಲ್ಲಿ ಸಾಮಾನ್ಯ ಮನುಷ್ಯರ ವಲಯದಲ್ಲೂ ಎಲ್ಲರಿಗೂ ಗೊತ್ತಿದ್ದ, ಎಲ್ಲರ ನಡುವಳಿಕೆಯಲ್ಲೂ ರಾರಾಜಿಸುತ್ತಿದ್ದ ಲಕ್ಷಣಗಳೇ!! ಆದರೆ, ಕೆಲ ವಿಚಿತ್ರ ಮನಸ್ಸುಗಳು ಅತ್ಯಂತ ಸೂಕ್ಷ್ಮ ಹಾಗೂ ನಿಗೂಢ ಭಾರತೀಯ ಮೌಲ್ಯಗಳನ್ನು ಸ್ವತಂತ್ರವಾಗಿ, ಪಾರಂಪರಿಕ ಅರ್ಥಗಳನ್ನು ಗಮನಿಸದೆಯೇ ತಮ್ಮ ಮಟ್ಟದಲ್ಲೇ ವಿಶ್ಲೇಷಿಸಿ ಅದಕ್ಕೆ ವಿಕೃತ ಅರ್ಥವನ್ನು ಕೊಟ್ಟು ಇಡೀ ನಾಡು ಹೆಂಗಳೆಯರ ನಾಡಾಗಿ ಪರಿವರ್ತನೆಗೊಂಡಿದ್ದು ಮಾತ್ರ ಶೋಚನೀಯ. ವೈರಾಗ್ಯ ಶ್ರೀಮಂತನ ಲಕ್ಷಣ, ಅಹಿಂಸೆ ಶೂರನ ಲಕ್ಷಣ. ತನ್ನ ಮೈಮೇಲೆ ಕುಳಿತ್ತಿದ್ದ ಸೊಳ್ಳೆಯು ಬಂದು, ‘ನಿನಗೆ ಎರಡು ದಿನಗಳಿಂದ ಬಹಳ ತೊಂದರೆ ಕೊಟ್ಟೆ’ ಎಂದು ಹೇಳಿದಾಗ ಎತ್ತು ಉತ್ತರಿಸಿದ್ದು, ‘ಜೀವಮಾನವೆಲ್ಲ ಕುಳಿತುಕೋ, ನಿನ್ನ ಪರಿವಾರವೆಲ್ಲವನ್ನೂ ಕರೆದುಕೊಂಡು ಬಾ, ನನಗೆನೂ ಬಾಧೆ ಇಲ್ಲ’ ಎಂದು. ಇದು ಅಹಿಂಸೆ. ಏಕೆಂದರೆ ಅದು ಸೊಳ್ಳೆ. ಅದನ್ನು ಯಮ ಲೋಕಕ್ಕೆ ಕಳಿಸುವುದು ಎತ್ತಿಗೆ ಒಂದು ಕ್ಷಣದ ಕೆಲಸ. ಎತ್ತು ಹೇಳಿದರೆ ಅದು ಅಹಿಂಸೆ. ಅದೇ ಇರುವೆ ಹೇಳಿದರೆ ಮಾತ್ರ ಅದು ಹೇಡಿತನ.
ಭಾರತೀಯರು ಇದನ್ನು ಗಮನಿಸಬೇಕು.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)