

ಸುಮ್ಮನೆ ಕುಳಿತುಕೊಂಡು ಆಲೋಚಿಸುವಾಗ ಮನಸ್ಸು ಹಲವು ಕಡೆಗೆ ಹರಿಯುತ್ತದೆ. ಹಲವು ವಿಷಯಗಳ ಕುರಿತು ಚಿಂತಿಸುತ್ತದೆ. ಏನೇನೋ ಅದ್ಭುತಗಳು ಕೆಲವೊಮ್ಮೆ ಸಾಮಾನ್ಯ ಘಟನೆಗಳಲ್ಲಿ ಕಾಣುತ್ತವೆ. ಒಂದು ಸಣ್ಣ ವಿಷಯದಲ್ಲೂ ಕಲಿಯಬೇಕಾದ್ದು ಎಷ್ಟು ಇದೆ ಅನ್ನಿಸುತ್ತದೆ. ಒಟ್ಟಿನಲ್ಲಿ ಈ ಸೃಷ್ಟಿಯೇ ಒಂದು ಅದ್ಭುತ. ಭಗವಂತ ಸುಮ್ಮನೆ ಸೃಷ್ಟಿ ಮಾಡಲಿಲ್ಲ. ಗ್ರಹಿಸುವ ಮನಸ್ಸಿಗೆ ಸಾವಿರಾರು ವಿಷಯಗಳನ್ನು ಇಟ್ಟಿದ್ದಾನೆ. ಕಾಣಬಲ್ಲ ಕಣ್ಣಿಗೆ ಎಷ್ಟೊಂದು ಅದ್ಭುತಗಳನ್ನು ಇಲ್ಲಿ ಸೃಷ್ಟಿಸಿದ್ದಾನೆ. ‘ಅಬ್ಬಾ! ಆದ್ದರಿಂದಲೇ ಅವನು ಭಗವಂತ’ ಅಂತ ಭಾವಿಸಿ ಮನಸ್ಸು ಅರಿವಿಲ್ಲದೆಯೇ ಅವ್ಯಕ್ತ ಗೌರವ, ಭಕ್ತಿಯನ್ನು ಅವನೆಡೆಗೆ ತಾಳುತ್ತದೆ. ಅರಿವಿಲ್ಲದೆಯೇ ಕಣ್ಣುಗಳು ಮುಚ್ಚುತ್ತವೆ. ಆಶ್ಚರ್ಯ, ವಿಸ್ಮಯ, ವಿನಮ್ರತೆಗಳು ಒಳ ಅರಿವನ್ನು ಆವರಿಸುತ್ತವೆ. ಈ ಭಾವನಾಲಹರಿಯಲ್ಲಿ ಆಗಾಗ್ಗೆ ಸುಳಿಯುವ ಒಂದು ಉದ್ಗಾರ ‘ಮಹಾತ್ಮರು ಕೂಡ ತಮ್ಮ ಜೀವನದಲ್ಲಿ ಎಷ್ಟು ಕಷ್ಟಪಡಬೇಕಾಯಿತು’ ಎನ್ನುವುದು! ಕಷ್ಟಪಟ್ಟರು! ಅಷ್ಟೇ ಅಲ್ಲ, ನಗುನಗುತ್ತಲೇ ಅದನ್ನು ಸಹಿಸಿದರು. ಅಷ್ಟೇ ಅಲ್ಲ, ಕಷ್ಟಗಳಿಂದ ಪಾರಾದರು, ಇಲ್ಲವೇ ಅವುಗಳನ್ನು ಮೆಟ್ಟಿನಿಂತು ಸಹಜವಾಗಿಯೇ ಬದುಕುತ್ತ ಆ ಕಷ್ಟಗಳನ್ನು ತಾವು ಗಮನಿಸಲೇ ಇಲ್ಲವೇನೋ ಎನ್ನುವಂತೆ ತಮ್ಮ ಆದರ್ಶಗಳು, ಗುರಿ, ರೀತಿ, ನೀತಿಗಳಿಗೆ ಒಂದಿನಿತೂ ಧಕ್ಕೆಯಾಗದಂತೆ ನಡೆದುಬಿಟ್ಟರು. ಕೊನೆಯವರೆಗೂ ಹಾಗೆಯೇ ಸಾಧಿಸಿಯೂ ಬಿಟ್ಟರು.
ಒಮ್ಮೆ ನೆಪೋಲಿಯನ್ನನ್ನು ರಾಜ ಸೆರೆಮನೆಯಲ್ಲಿ ಇಟ್ಟಿದ್ದ. ಮರಣದಂಡನೆ ವಿಧಿಸಿದ್ದ. ಮಂತ್ರಿ ನೆಪೋಲಿಯನ್ ಪರವಾಗಿ ವಾದಿಸಿ ರಾಜನಿಂದ ಅವನಿಗಾಗಿ ಕ್ಷಮಾಪಣೆಯನ್ನು ಪಡೆದ. ತಕ್ಷಣವೇ ಅವನ ಬಿಡುಗಡೆಯನ್ನು ಪಡೆಯಲೋಸುಗ ರಾತ್ರಿಯಲ್ಲಿ ಸೆರೆಮನೆಗೆ ಓಡಿದ. ಏಕೆಂದರೆ ಮಾರನೇ ದಿನ ಬೆಳಗ್ಗೆಯೇ ಅವನನ್ನು ಗಲ್ಲಿಗೇರಿಸುವುದಿತ್ತು. ಮತ್ತು ಗಲ್ಲುಶಿಕ್ಷೆ ಪಡೆದ ಕೈದಿಗಳು ಹೆದರಿಕೆಯಿಂದ ಒಂದೆರಡು ದಿನ ಮೊದಲೇ ಸಾಯುವುದು ಸಾಮಾನ್ಯವಾಗಿತ್ತು. ಆದರೆ ಆಶ್ಚರ್ಯ! ಸೆರೆಮನೆಯ ಕತ್ತಲುಕೋಣೆಯಲ್ಲಿ ದೀಪವೊಂದನ್ನು ಹಿಡಿದು ನೆಪೋಲಿಯನ್ ಯುರೋಪಿನ ಭೂಪಟವನ್ನು ಎವೆಯಿಕ್ಕದೆ ನೋಡುತ್ತಿದ್ದ. ಏಕೆಂದು ಕೇಳಲಾಗಿ ಹೇಳಿದ- ‘ಮುಂದೆ ನಾನು ಯುರೋಪಿನ ಚಕ್ರವರ್ತಿಯಾದರೆ ಯಾವ ನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಳ್ಳಬೇಕು ಎಂದು ನಿಶ್ಚಯಿಸುತ್ತಿದ್ದೇನೆ’. ಅವಕ್ಕಾದ ಮಂತ್ರಿ ‘ನಾಳೆ ಬೆಳಗ್ಗೆಯೇ ನಿನಗೆ ಮರಣದಂಡನೆ! ನೆನಪಿದೆ ತಾನೇ?’ ಎಂದು ಪ್ರಶ್ನಿಸಿದ. ಸಹಜ ದನಿಯಲ್ಲಿ ಭೂಪಟದಿಂದ ತಲೆಯನ್ನು ಮೇಲಕ್ಕೂ ಎತ್ತದೆ ನೆಪೋಲಿಯನ್ ಉತ್ತರಿಸಿದ. ‘ಅದಕ್ಕಿನ್ನೂ ಹಲವು ಗಂಟೆಗಳೇ ಇವೆ. ಯೋಚನೆಯೇನೂ ಇಲ್ಲ’. ನೆಪೋಲಿಯನ್ ಬಗ್ಗೆ ಮತ್ತಷ್ಟು ಅಭಿಮಾನ ಮೂಡಿಬಂತು ಮಂತ್ರಿಯ ಮನದಲ್ಲಿ ಮತ್ತು ಅದೇ ಭಾವದಲ್ಲಿ ರಾಜ ಅವನನ್ನು ಕ್ಷಮಿಸಿರುವ ವಿಷಯವನ್ನು ಅರುಹಿದ.
ಆತ್ಮವಿಶ್ವಾಸ! ಇದೊಂದು ಅದ್ಭುತ ವಿಷಯ. ಎಲ್ಲ ಸಮಸ್ಯೆಗಳ ಪರಿಹಾರ, ಸಮಸ್ಯೆಗಳನ್ನೇ ಹೆದರಿಸಿ ಓಡಿಸುವ ಮಹಾಚೇತನ. ಸೃಷ್ಟಿಯಲ್ಲಿ ಇರುವ ವಿಷಯಗಳು ಮೂರೇ. ಅವು ಯಾವುವೆಂದರೆ ಜೀವ, ಜಗತ್ತು, ಈಶ್ವರ. ಸ್ಥಾನಮಹಿಮೆಯ ದೃಷ್ಟಿಯಿಂದ ಹೇಳಬೇಕೆಂದರೆ ಈಶ್ವರ, ಜೀವ, ಜಗತ್ತು ಈ ವಿಶ್ಲೇಷಣೆಯಲ್ಲಿ ಜೀವ ಅಂದರೆ ಮನುಷ್ಯ ಈಶ್ವರಿನಿಗಿಂತ ಕೆಳಗಿನವನು. ಆದರೆ ಜಗತ್ತಿಗಿಂತ ಮೇಲಿನವನು. ಇಡೀ ಜಗತ್ತೇ ಮನುಷ್ಯನ ಕೆಳಗೆ ಇದೆ. ಏಕೆಂದರೆ ಎಷ್ಟಾದರೂ ಅದು ಜಡವಸ್ತುಗಳಿಂದ ಕೂಡಿದೆ. ಜಡ ವಸ್ತುಗಳ ರಾಶಿಯೇ ಆದ ಜಗತ್ತು ಮನುಷ್ಯನನ್ನು ಏನು ಮಾಡಬಲ್ಲದು? ಜಡ ವಸ್ತುಗಳಿಂದ ನಮಗೇನೂ ತೊಂದರೆ ಇಲ್ಲ. ನಮಗೆ ತೊಂದರೆ ಇರುವುದು ಮನುಷ್ಯರಿಂದಲೇ ಎನ್ನುವುದಾದರೆ; ನೀವು ಮನುಷ್ಯನನ್ನೋ ಇಲ್ಲವೇ ಮನುಷ್ಯ ಸಮೂಹವನ್ನೋ ಗೆಲ್ಲಬೇಕು. ಅದಕ್ಕೆ ಮನುಷ್ಯನಿಗಿಂತಲೂ ಸಮರ್ಥನಾದ ಈಶ್ವರನ ಸಹಾಯವನ್ನು ಪಡೆಯಬೇಕು. ಇದರರ್ಥವೇನೆಂದರೆ ಮಾನುಷ ಲಕ್ಷಣಗಳನ್ನು ಮೀರಿ ದೈವೀಗುಣಗಳನ್ನು ಬೆಳೆಸಿಕೊಳ್ಳಬೇಕು. ದೈವೀಗುಣಗಳು ಅಪಾರವಾದರೂ (ಶ್ರೀಕೃಷ್ಣ ಗೀತೆಯಲ್ಲಿ ಇವುಗಳ ಪಟ್ಟಿಯನ್ನೇ ಮಾಡುತ್ತಾನೆ) ಅವುಗಳನ್ನೆಲ್ಲ ಸತ್ಯನಿಷ್ಠೆ, ನಿಸ್ವಾರ್ಥತೆ, ಪರಿಶುದ್ಧಪ್ರೇಮ, ಪಾವಿತ್ರ್ಯ ಇವುಗಳನ್ನು ಅನುಸರಿಸುವುದರಿಂದಲೇ ಸಾಧಿಸಿಬಿಡಬಹುದು. ಆದರೆ ಇವುಗಳೆಲ್ಲದರ ಆಧಾರವಾಗಿ ‘ಅಭಯಂ’ (ಭಯರಾಹಿತ್ಯ) ಇರಲೇಬೇಕು. ಅವಶ್ಯಕವಾಗಿ ಬೇಕಾದದ್ದು ನಿಶ್ಚಲ, ಸದೃಢ ನಂಬಿಕೆ. ಅದೇನೆಂದರೆ ಜಡ ಜಗತ್ತನ್ನು ಗೆಲ್ಲುವುದಕ್ಕೆ ಮಾನುಷ ಶಕ್ತಿಗಳೇ ಸಾಕು ಮತ್ತು ಮಾನುಷ ಶಕ್ತಿಗಳನ್ನು ದೇವತ್ವ ಎಂದೆಂದಿಗೂ ತನ್ನ ಹಿಡಿತದಲ್ಲಿಟ್ಟಿರಬಲ್ಲದು ಎಂದು. ಈ ದಿವ್ಯ ಲಕ್ಷಣಗಳನ್ನು ವ್ಯಕ್ತಗೊಳಿಸುವ ಅವಶ್ಯಕತೆ, ಕಷ್ಟಗಳು ಬಂದಾಗ ಮಾತ್ರ ಅಲ್ಲ. ಮನುಷ್ಯ ಸಮೂಹದ ಮೇಲೆ ಹಿಡಿತ ಅಥವಾ ಮಾನವ ಜನಾಂಗದಿಂದ ಅಪಾರ ಗೌರವಕ್ಕೆ ಪಾತ್ರರಾಗಬಯಸುವ ಇಲ್ಲವೇ ಮನುಷ್ಯರನ್ನು ತನ್ನ ಹಾದಿಯಲ್ಲಿ ನಡೆಸಲೆತ್ನಿಸುತ್ತಿರುವ ಯಾವ ವ್ಯಕ್ತಿಗೂ ಈ ದಿವ್ಯಲಕ್ಷಣಗಳು ಬೇಕೇಬೇಕು. ಆದ್ದರಿಂದಲೇ ಮಹಾಮಾನವರಾಗಬೇಕೆಂದು ಬಯಸಿದ ಪ್ರತಿಯೊಬ್ಬರೂ ಮೊದಲು ತಪಸ್ಸನ್ನು ಆಚರಿಸಬೇಕಾಯಿತು ಮತ್ತು ತಪಸ್ಸಿನ ಮೂಲಕ ದೈವತ್ವವನ್ನು ಪಡೆದು ಮುಂದುವರಿಯಬೇಕಾಯಿತು. ಆದರೆ ತಪಸ್ಸೇನು ಸುಲಭವೇ? ಅದೂ ಒಂದು ಕಷ್ಟವೇ ತಾನೇ? ಮತ್ತೇನು ಪರಿಹಾರ ಸಿಕ್ಕಂತಾಯಿತು? ಈ ಪ್ರಶ್ನೆಗಳಿಗೆ ಉತ್ತರ ಇಷ್ಟೇ. ಇರಬಹುದು! ಆದರೇನಂತೆ?!
ತಪಸ್ಸಿನ ಪ್ರಧಾನ ಲಕ್ಷಣವೇ ನಮ್ಮೊಳಗೆ ನಾವು ನೋಡಿಕೊಳ್ಳುವುದು. ‘ನಾನು ಯಾರು, ನನ್ನ ಗುರಿ ಏನು?’ ಇವುಗಳ ಬಗ್ಗೆ ಯೋಚಿಸುವುದು. ಈ ಚಿಂತನೆಯಿಂದ ಮಾತ್ರ ಜ್ಞಾನ ಸಾಧ್ಯ. ಮನಸ್ಸು ಅಂತಮುಖವಾಗದೇ ಯಾವ ವ್ಯಕ್ತಿಯು ನಿಜಾರ್ಥದಲ್ಲಿ ವಿದ್ಯಾವಂತನಾಗಲಾರ. ಪದವೀಧರನಾಗಬಹುದು, ಆದರೆ ಕೇವಲ ಪದವಿಗಳು ಮನುಷ್ಯನ ಬಹಳಷ್ಟು ಕಷ್ಟಗಳನ್ನು ಪರಿಹರಿಸಲಾರವು. ಇನ್ನೊಂದೆರಡು ಕಷ್ಟಗಳನ್ನು ಸೇರಿಸಬಹುದಷ್ಟೇ. ಆದ್ದರಿಂದಲೇ ಶ್ರೀರಾಮಕೃಷ್ಣರು ಭಕ್ತರಿಗೆ ಮತ್ತೆ ಮತ್ತೆ ಹೇಳುತ್ತಿದ್ದರು, ಆಗಾಗ ನಿರ್ಜನ ಪ್ರದೇಶಕ್ಕೆ ಹೋಗಿ, ಸಾಧು ಸಂಗ ಮಾಡಿ. ನಿರ್ಜನ ಪ್ರದೇಶದಲ್ಲಿ ಅಂತಮುಖತೆ ಬಹಳ ಸುಲಭ. ಹಾಗೆಯೇ ಸಾಧುಸಂಗದಲ್ಲಿ ಕೂಡ. ಆದರೆ ಅಂತಮುಖತೆ ಸುಲಭವಾಗಿ ಹಾಗೂ ಸಹಜವಾಗಿ ಸಾಧ್ಯವಾಗುವುದು ಜೀವನದಲ್ಲಿ ಸರಿಯಾಗಿ ಒಂದೆರಡು ಪೆಟ್ಟು ಬಿದ್ದಾಗ. ಸೂಕ್ಷ್ಮಮತಿಗಳಿಗೆ ಒಂದೆರಡು ಪೆಟ್ಟೇ ಸಾಕು. ದಪ್ಪ ಚರ್ಮದವರಿಗೆ ನಿರಂತರ ಬೀಳುತ್ತಲೇ ಇರಬೇಕು. ಆದರೆ ಸಾಕಷ್ಟು ಏಟು ಬಿದ್ದಾಗ ಅಂತಮುಖರಾಗದವರೇ ಇಲ್ಲ! ಇನ್ನೆಂದೂ ಜೀವನದಲ್ಲಿ ದುಡುಕದಂತೆ ಮಾಡಬಲ್ಲದು ಅಂತಮುಖತೆ. ಆದರೆ ಅದಕ್ಕೆ ತೆತ್ತ ಬೆಲೆ ಎಷ್ಟು? ಹೌದು! ಆದ್ದರಿಂದಲೇ ವಿವೇಕಾನಂದರು ಹೇಳುತ್ತಾರೆ- ಎಷ್ಟೇ ಬೆಲೆ ತೆತ್ತಾದರೂ ಜ್ಞಾನವನ್ನು ಪಡೆಯಲೇಬೇಕು. ಜ್ಞಾನವನ್ನು ಪಡೆಯದೇ ಕಷ್ಟಗಳ ಪರಂಪರೆಯಿಂದ ಪೂರ್ತಿ ಬಿಡುಗಡೆ ಎಂದೆಂದಿಗೂ ಇಲ್ಲ.
ಬಹುಶಃ ಈ ಕಾರಣಕ್ಕಾಗಿಯೇ ಶ್ರೀಕೃಷ್ಣ ಮಹಾಭಾರತದಲ್ಲಿ ಕುಂತಿಯನ್ನು ಏನಾದರೂ ವರ ಕೇಳು ಅಂದಾಗ ಅವಳು ಹೇಳುತ್ತಾಳೆ-‘ಕೃಷ್ಣ ನನಗೆ ಹೆಜ್ಜೆಹೆಜ್ಜೆಗೂ ಕಷ್ಟಗಳು ಬರುತ್ತಿರಲಿ. ಏಕೆಂದರೆ ಆಗ ಮಾತ್ರ ನಾನು ನಿನ್ನನ್ನು ಮರೆಯುವುದಿಲ್ಲ’ ಎಂದು. ಆದ್ದರಿಂದ ಕಷ್ಟಗಳು ಎಂದರೇನು?
ಒಳ ಅರಿವಿಗೆ ದಾರಿಮಾಡಿಕೊಡುವ ಬಂಧು
ಜ್ಞಾನ ಕೊಡುವ ದೀಪ
ನಿರಂತರ ಎಚ್ಚರಿಸುತ್ತಿರುವ ಗುರು
ಕೈಹಿಡಿದು ನಡೆಸುತ್ತಿರುವ ಮಾರ್ಗದರ್ಶಿ
ಆದ್ದರಿಂದ ಕಷ್ಟಗಳೇಕೆ ಬೇಡ?!
ಜಗತ್ತಿನ ಯಾವ ಮೂಲೆಯಲ್ಲಿ ಜನಿಸಿದರೂ, ಯಾವ ಕಾಲದಲ್ಲಿ ಜನಿಸಿದರೂ, ಯಾರಿಗೂ ಕಷ್ಟಗಳು ತಪ್ಪುವುದಿಲ್ಲ. ಕಷ್ಟಗಳ ರೂಪ ಮಾತ್ರ ಬೇರೆ ಬೇರೆ ಅಷ್ಟೇ. ಕಷ್ಟಗಳು ನಮ್ಮನ್ನು ದುರುಗುಟ್ಟಿಕೊಂಡು ನೋಡಿದಾಗ ನಮಗಿರುವ ಹಾದಿ ಎರಡೇ.
1. ಧೈರ್ಯದಿಂದ ಎದುರಿಸಿ ಅದರಿಂದ ಆಗುವ ಪರಿಣಾಮಗಳನ್ನು ಸಹಿಸಿ ‘ಮೌಲ್ಯ’ಗಳಿಗೆ ಅಂಟಿಕೊಂಡೇ ಬದುಕುವುದು.
2. ಅವಕ್ಕೆ ಶರಣಾಗಿ ‘ಮೌಲ್ಯ’ಗಳಿಗೆ ತಿಲಾಂಜಲಿಕೊಟ್ಟು ನಮ್ಮ ಸುಖಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದು.
ಈ ಎರಡೂ ಸಂದರ್ಭಗಳಲ್ಲಿ ‘ಮೌಲ್ಯ’ ಎಂಬ ಪದವನ್ನು ಉಪಯೋಗಿಸಿದ್ದೇನೆ. ಏಕೆಂದರೆ ಮೌಲ್ಯದ ಪ್ರಶ್ನೆ ಬಂದಾಗಲೇ ಏಳು-ಬೀಳುಗಳ ಪ್ರಶ್ನೆ ಏಳುವುದು. ‘ಮೌಲ್ಯ’ವಿಲ್ಲದ ಜೀವನದಲ್ಲಿ ಕಷ್ಟದ ಪ್ರಶ್ನೆಯೇ ಬರುವುದಿಲ್ಲ. ಒಂದು ವೇಳೆ ಅಲ್ಲೂ ಕಷ್ಟಗಳು ಇದ್ದರೆ ಅದಕ್ಕೆ ಕಾರಣ ಅಜ್ಞಾನ, ಆಲಸ್ಯ.
ಏಟುಗಳನ್ನು ಸಹಿಸಿಕೊಂಡ ಕಲ್ಲು ಮಾತ್ರ ಪೂಜಾರ್ಹವಾಯಿತು. ಏಕೆ? ಕಾರಣ ಇಷ್ಟೇ. ಶಿಲ್ಪಿ ಆರಿಸಿಕೊಂಡ ಕಚ್ಚಾ ಕಲ್ಲಿನ ಒಳಗೆ ದೇವ ಮೂರ್ತಿಗೆ ಅವಶ್ಯವಿದ್ದ ಸಾಮಗ್ರಿ ಇತ್ತು. ಆದರೆ ಅದರ ಮೇಲೆ ಹೊದಿಕೆಯಂತೆ ಅನಾವಶ್ಯಕ ಭಾಗವು ಇತ್ತು. ಅನಾವಶ್ಯಕ ಭಾಗವನ್ನು ತೆಗೆದು, ಹೊದಿಕೆಯನ್ನು ಸರಿಸಿತು. ಕಲ್ಲು ‘ಅನಾವಶ್ಯಕತೆ’ಗಳನ್ನು ಕಳೆದುಕೊಂಡು ‘ಅವಶ್ಯಕ ಸೌಂದರ್ಯ, ಅತ್ಯವಶ್ಯಕ ದಿವ್ಯತೆ’ಗಳನ್ನು ಪಡೆದುಕೊಂಡಿತು. ಇದಕ್ಕೆ ಅದು ತೆತ್ತ ಬೆಲೆ ಏಟುಗಳು. ಕೆಲವು ದಿನಗಳ ಯಾತನೆ. ಪ್ರಯೋಜನವಾದರೋ ನೂರಾರು ವರ್ಷಗಳ ಪೂಜ್ಯತೆ, ಗೌರವ. ಏಟು ಬೇಡವೆಂದ ಕಲ್ಲುಗಳಿಗೆ, ಕಷ್ಟಕ್ಕೆ ಸೋತು ಮುರಿದ ಕಲ್ಲುಗಳಿಗೆ ಇನ್ನು ಮುಂದೆ ಕಾಲ್ತುಳಿತ, ಅಸಡ್ಡೆ, ತಿರಸ್ಕಾರ. ಏಟು ಬೇಡವೆಂದ ಕಲ್ಲು ಎಂದಿಗೂ ಮೂರ್ತಿ ಆಗುವುದಿಲ್ಲ. ಪ್ರತಿ ಮನುಷ್ಯನಲ್ಲೂ ದೇವತ್ವ, ಮಾನವತ್ವ, ದಾನವತ್ವ ಅಡಗಿದೆ. ಪ್ರಕೃತಿಯ ನಿಯಮವೇ ನಾವು ದಾನವತ್ವದಿಂದ ಮಾನವತ್ವದ ಮೂಲಕ ದೇವತ್ವಕ್ಕೆ ಏರುವುದು. ದಾನವತ್ವವನ್ನು ಕಳೆಯದೇ ಮಾನವತ್ವ ಸಿಗುವಂತಿಲ್ಲ. ಹಾಗೆಯೇ ಮಾನವತ್ವವನ್ನು ಸರಿಸದೇ ದೇವತ್ವವಿಲ್ಲ. ನಾವು ಇದನ್ನು ಪ್ರಜ್ಞಾಪೂರ್ವಕವಾಗಿ ಸ್ವಇಚ್ಛೆಯಿಂದ ಮಾಡಲೇಬೇಕೆಂದು ಪ್ರಕೃತಿ ಬಯಸುತ್ತಾಳೆ. ಯಾರು ಈ ನಿಯಮವನ್ನು ಪಾಲಿಸುವುದಿಲ್ಲವೋ ಅವರಿಗೆ ಏಟು ಕಟ್ಟಿಟ್ಟ ಬುತ್ತಿ.
ಪ್ರಜ್ಞಾಪೂರ್ವಕವಾಗಿ ಪ್ರಗತಿಯ ದಾರಿಯಲ್ಲಿ ದೇವತ್ವವನ್ನು ಸಾಧಿಸುವ ದಾರಿಯಲ್ಲಿ ನಡೆಯುವುದೇ ಕಷ್ಟ. ಏಕೆಂದರೆ ದಾರಿಯಲ್ಲಿ ‘ಸುಖ’ ಇಲ್ಲ. ‘ಬೆಳವಣಿಗೆ’ ಇದೆ. ‘ಮಹತ್ವ’ವಿದೆ. ಸುಖ ತಕ್ಷಣಕ್ಕೇ ನಮಗೆ ಹಿತಾನುಭವ ಕೊಡಬಲ್ಲದು. ಆದರೆ ಬೆಳವಣಿಗೆ ಮತ್ತು ಮಹತ್ವಗಳು ನಮಗೆ ಹಿತವನ್ನು ಕೊಡಬೇಕಾದರೆ ಕಾಯಬೇಕು. ಬೆಳವಣಿಗೆ ಪೂರ್ತಿಯಾಗುವವರೆಗೆ, ಮಹತ್ವ ಗುರುತಿಸಲ್ಪಡುವವರೆಗೆ ಕಾಯಬೇಕು. ಆದ್ದರಿಂದ ಜನಸಾಮಾನ್ಯರು ಸಂದೇಹಕ್ಕೆ ಎಡೆ ಇಲ್ಲದಂತೆ ತಕ್ಷಣಕ್ಕೇ ಸುಖವನ್ನು ಬಯಸುತ್ತಾರೆ. ಸತ್ಯಪೂರ್ಣರು ಶಾಶ್ವತ ಬುನಾದಿ ಮೇಲೆ ತಮ್ಮನ್ನು ನಿರ್ವಿುಸಿಕೊಳ್ಳ ಬಯಸಿ, ಬೆಳೆಯುವುದರ ಕಡೆಗೆ ಎಳೆಯಲ್ಪಡುತ್ತಾರೆ. ಆ ನಿಟ್ಟಿನಲ್ಲೇ ಕೆಲಸ ಮಾಡುತ್ತಾರೆ. ಈ ಆರೋಗ್ಯಕರ ಬೆಳವಣಿಗೆಗಾಗಿ ಸಾಮಾನ್ಯರು ಹಂಬಲಿಸುವ ‘ಸುಖ’ವನ್ನು ತ್ಯಾಗ ಮಾಡಲು ಸಿದ್ಧರಿರುತ್ತಾರೆ. ಈ ಪ್ರಯಾಣದಲ್ಲಿ ಅವರ ನೆರವಿಗೆ ಬರುವ ಮಹಾಮಿತ್ರ ‘ಶ್ರದ್ಧೆ’. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುತ್ತಾನೆ, ‘ಅಜ್ಞಶ್ಚ ಅಶ್ರದ್ಧದಾನಶ್ಚ ಸಂಶಯಾತ್ಮಾ ವಿನಶ್ಯತಿ’. ‘ಶ್ರದ್ಧೆಯಿಲ್ಲದವನು ನಾಶವಾಗುತ್ತಾನೆ’. ಹಾಗೆಯೇ ಮುಂದುವರಿದು ಹೇಳುತ್ತಾನೆ- ‘ಯಾರ್ಯರ ಶ್ರದ್ಧೆ ಯಾವ ಯಾವ ಮಟ್ಟದ್ದೋ ಅವರ ಬೆಳವಣಿಗೆಯೂ ಅದೇ ಮಟ್ಟದ್ದು’ ಎಂದು.
ಹೀಗಾಗಿ ಬೆಳವಣಿಗೆಗೆ ಬೇಕಾದುದು ಮೌಲ್ಯಗಳಲ್ಲಿನ ಶ್ರದ್ಧೆ. ಈ ಬೆಳವಣಿಗೆಯಿಂದಲೇ ಶಕ್ತಿ. ಆದ್ದರಿಂದ ಬರುವ ಕಷ್ಟಗಳನ್ನು ಮೌಲ್ಯಬದ್ಧತೆಗಾಗಿ, ಬೆಳವಣಿಗೆಗಾಗಿ, ಅಂಕುಡೊಂಕುಗಳನ್ನು ತಿದ್ದುವ ಅವಕಾಶಕ್ಕಾಗಿ ಉಪಯೋಗಿಸುವವನೇ ಜಾಣ. ಆದ್ದರಿಂದಲೇ ಕುಂತಿ ‘ಕಷ್ಟಗಳನ್ನು ಕೊಡು’ ಎಂದು ಕೃಷ್ಣನಿಗೆ ಪ್ರಾರ್ಥಿಸಿದ್ದಾಳೆ. ಹೀಗೊಂದು ಮಾತಿದೆ- ‘ಶಕ್ತಿಗಾಗಿ ಬೇಡಿದೆ ನಾನು, ಎದುರಿಸಲು ಕೊಟ್ಟನು ಕಷ್ಟಗಳನ್ನು ಎಂದು’. ಎಷ್ಟು ನಿಜ!
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)