

ಲೇಖನಿ ಕತ್ತಿಗಿಂತಲೂ ಹರಿತ- ಇದೊಂದು ಇಂಗ್ಲಿಷ್ ಗಾದೆ. ಇದರ ಸಂಪೂರ್ಣ ಪ್ರತಿಪಾದನೆ ಅರಿಯಬೇಕೆಂದರೆ ಬ್ರಿಟಿಷರು ನಮ್ಮನ್ನಾಳಲು ಉಪಯೋಗಿಸಿದ ಶಸ್ತ್ರಗಳ ಪರಿಯನ್ನು ಅರಿಯಬೇಕು. ಒಂದು ಕಡೆ ಕ್ರೌರ್ಯ, ದೌರ್ಜನ್ಯಗಳ ಪ್ರವಾಹವನ್ನೇ ಹರಿಯಬಿಟ್ಟರಾದರೂ ಇನ್ನೊಂದು ಕಡೆ ಇಲ್ಲಿಯ ರೂಢಮೂಲ ಮೌಲ್ಯಗಳನ್ನೆಲ್ಲ ಅಪವ್ಯಾಖ್ಯಾನದ ದುರ್ದೆಶೆಗೊಳಗಾಗಿಸಿದ್ದು; ಅವುಗಳ ನಿಜಾರ್ಥಗಳನ್ನೆಲ್ಲ ತಲೆಕೆಳಗಾಗಿಸಿದ್ದು. ನಾವೂ ಸಾಂಪ್ರದಾಯಿಕ ಅರ್ಥವನ್ನು ಪಕ್ಕಕ್ಕಿಟ್ಟು ಅವರಂತೆಯೇ ಯೋಚಿಸಲುಪಕ್ರಮಿಸುವಂತೆ ಮಾಡಲು ಮೆಕಾಲೆ ಶಿಕ್ಷಣ ಪದ್ಧತಿ ಮುಂತಾದ ನೂರಾರು ಉಪಾಯಗಳನ್ನು ಹುಟ್ಟುಹಾಕಿದ್ದು ಎದ್ದುಕಾಣುತ್ತದೆ. ಮೌಲ್ಯಗಳ ಅಪವ್ಯಾಖ್ಯಾನಗಳಲ್ಲಿ ಬರುವ ಕೆಲವು ಉದಾಹರಣೆಗಳೆಂದರೆ ಆರ್ಯ, ಧರ್ಮ, ವರ್ಣಾಶ್ರಮ, ವ್ಯಕ್ತಿತ್ವ ಇತ್ಯಾದಿಗಳಿದ್ದರೂ ಅಹಿಂಸೆಯಷ್ಟು ಹಿಂಸೆಗೊಳಗಾಗಿದ್ದು ಮಾತ್ರ ಯಾವುದೂ ಅಲ್ಲ.
ಯಾರು ಏನು ಮಾಡಿದರೂ ಸಹಿಸಿಕೊಳ್ಳುವುದು, ಕ್ಷಮಿಸಿ ಬಿಡುವುದು ಅಹಿಂಸೆಯಲ್ಲ. ಅದು ಶುದ್ಧ ಹೇಡಿತನ, ನಪುಂಸಕತ್ವ. ಶ್ರೀಕೃಷ್ಣ ಗೀತೆಯಲ್ಲಿ ಅರ್ಜುನನನ್ನು ಮೊದಲು ನಿಂದಿಸಿದ್ದೇ ‘ನೀನೊಬ್ಬ ನಪುಂಸಕನಾಗಬೇಡ’ ಎಂದು. ವಿವೇಕಾನಂದರ ಪ್ರಕಾರ ಗೀತೆಯ ಸಾರವೇ ಈ ಒಂದು ಶ್ಲೋಕದಲ್ಲಿ ಅಡಗಿದೆ. ಯಾವುದೇ ದೌರ್ಬಲ್ಯ ನಪುಂಸಕತ್ವದ ಫಲ; ಕ್ಷುದ್ರ. ಆದ್ದರಿಂದಲೇ ಅವರು ಒಬ್ಬ ದುಷ್ಟನಿಗಾದರೂ ಭವಿಷ್ಯವಿದೆ, ದುರ್ಬಲಿನಗಲ್ಲ ಎಂದು ಸಾರಿ ಹೇಳಿದ್ದು. ಇತಿಹಾಸದುದ್ದಕ್ಕೂ ನಾವು ನೋಡುವುದು ಹೇಡಿಗೆ ಇಹವೂ ಇಲ್ಲ ಪರವೂ ಇಲ್ಲ ಎಂಬುದನ್ನು. ಅದರ ಬದಲು ಪರಮದುಷ್ಟರಾಗಿದ್ದು ಸಮಾಜಕ್ಕೆ ಬೇನೆಯೂ ಆಗಿದ್ದವರು ವಿಶ್ವಾಮಿತ್ರ, ವಾಲ್ಮೀಕಿಗಳಾಗಿ ರೂಪಗೊಂಡಿದ್ದನ್ನು. ಇದರರ್ಥ ದುಷ್ಟರಾಗಿ ಎಂದಲ್ಲ. ಹೇಡಿತನ, ಅಸಹಾಯಕತೆ ಅದಕ್ಕಿಂತಲೂ ಹೀನ; ಹೇಡಿ ಮತ್ತು ದುಷ್ಟರ ನಡುವೆ ಹೇಡಿಯೇ ಹೇಯ ಎಂದು.
ಭಾರತೀಯ ಸಂಸ್ಕೃತಿಯುದ್ದಕ್ಕೂ ದುಷ್ಟರನ್ನು, ಸಮಾಜದಲ್ಲಿ ದೌರ್ಜನ್ಯವೆಸಗುವವರನ್ನು, ಕುಲೀನ, ಸಾತ್ವಿಕ ಸ್ತ್ರೀವರ್ಗಗಳನ್ನು ಪೀಡಿಸುವವರನ್ನು ಹೇಳಹೆಸರಿಲ್ಲದಂತೆ ಮಾಡಿರುವುದನ್ನು ನೋಡುತ್ತೇವೆ. ಅಷ್ಟೇ ಅಲ್ಲ, ಅವರ ದೌರ್ಜನ್ಯಗಳಿಗೆ ಮೂಕಪ್ರೇಕ್ಷಕರಾಗಿರುವವರನ್ನೂ ಬಲಿ ಹಾಕಿರುವುದನ್ನು ನೋಡುತ್ತೇವೆ. ಇಲ್ಲದಿದ್ದಲ್ಲಿ ಭೀಷ್ಮ, ದ್ರೋಣಾದಿಗಳ ವಧೆಗೆ ಕಾರಣವೇನು? ಅಥವಾ ‘ದುರ್ಯೋಧನನ ಎಲ್ಲ ಸೋದರರೂ ದುಷ್ಟರೇನೂ ಆಗಿರಲಿಲ್ಲ. ಕೊನೆಗೆ ಒಬ್ಬನನ್ನಾದರೂ ಉಳಿಸಬಹುದಿತ್ತಲ್ಲ ಭೀಮ’ ಎಂದು ಗಾಂಧಾರಿ ಹಲುಬುವುದು ಮಹಾಭಾರತದಲ್ಲಿ ಬರುತ್ತದೆ. ಕೊಂದವನು ಭೀಮನಾದರೂ ಸಿದ್ಧಾಂತ ಕೃಷ್ಣನದ್ದೇ. ಹಾಗಿಲ್ಲದಿದ್ದಲ್ಲಿ ಸಾತ್ವಿಕರು, ಶಾಂತಜೀವನ ನಡೆಸುವವರು ಬದುಕುವುದು ಹೇಗೆ? ಅಪರಾಧವನ್ನು ನೋಡಿಕೊಂಡು ಸುಮ್ಮನಿರುವುದು ಅಪರಾಧ ಮಾಡಿದಷ್ಟೇ ಕ್ರೌರ್ಯ ಎನ್ನುವುದು ಸನಾತನ ಚಿಂತನೆ. ಪ್ರಸ್ತುತ ಸಂವಿಧಾನ ಇದನ್ನು ಚಚಿಛಿಠಿಞಛ್ಞಿಠಿ ಟ್ಛ cಜಿಞಛಿ ಎನ್ನುತ್ತದೆ ಮತ್ತು cಜಿಞಛಿಗಿಂತಲೂ ಹೇಯ ಎನ್ನುತ್ತದೆ. ದೌರ್ಜನ್ಯವನ್ನು ಮಟ್ಟಹಾಕಬೇಕಾದದ್ದು ಪ್ರತಿಯೊಬ್ಬ ಗೃಹಸ್ಥನ ಆದ್ಯ ಕರ್ತವ್ಯಗಳಲ್ಲೊಂದು ಎಂದು ಮನುಸ್ಮ ೃ ಹೇಳುತ್ತದೆ. ಗೃಹಸ್ಥ ಅಹಿಂಸೆಯ ಭಜನೆಯಲ್ಲಿ ತೊಡಗಿದರೆ ದೇಶ ನರಕವಾದೀತು ಎನ್ನುವುದಕ್ಕೆ ಪ್ರಸ್ತುತ ಕೆಲವರ್ಷಗಳ ಹಿಂದಿನ ನಮ್ಮಲ್ಲೇ ನಡೆದ ಘಟನೆಗಳಿಗಿಂತ ಬೇರೆ ಉದಾಹರಣೆ ಬೇಕೇ?
ತನ್ನ ತಪ್ಪಿಗೆ ಪಶ್ಚಾತ್ತಾಪ ಪಡದ ಯಾವ ವ್ಯಕ್ತಿಯೂ ಕ್ಷಮೆಗೆ ಅರ್ಹನಲ್ಲ. ವಾಲ್ಮೀಕಿ-ವಿಶ್ವಾಮಿತ್ರರು ಹೀಗೆಯೇ ಪರಿವರ್ತಿತರಾದವರು. ಅಪರಾಧಿಗೆ ಕೊಡುವ ಶಿಕ್ಷೆ ಅವನ ತಪ್ಪಿಗಾಗಿ ಮಾತ್ರ ಅಲ್ಲ. ಮುಂದೆ ಯಾರೂ ಇಂಥ ತಪ್ಪು ಮಾಡುವ ಗೋಜಿಗೇ ಹೋಗಬಾರದು ಎನ್ನುವ ಎಚ್ಚರಿಕೆ. ರಾಮ ವಾಲಿಯನ್ನು ಏಕೆ ಕ್ಷಮಿಸಲಿಲ್ಲ? ರಾವಣನನ್ನಾದರೂ ಏಕೆ ಕ್ಷಮಿಸಲಿಲ್ಲ? ಹ್ಯೂಯನ್ ತ್ಸಾಂಗ್ ಸ್ಪಷ್ಟವಾಗಿ ಬರೆಯುತ್ತಾನೆ: ಎರಡನೇ ಪುಲಕೇಶಿಯ ಆಡಳಿತದಲ್ಲಿ ಯಾರೂ ಮಲಗುವಾಗ ಮನೆಯ ಬಾಗಿಲುಗಳನ್ನು ಹಾಕುತ್ತಿರಲಿಲ್ಲ ಎಂದು. ಏಕೆ? ಕಳ್ಳನಿಗೆ ಇದ್ದ ಶಿಕ್ಷೆ ಅವನ ಕೈಗಳನ್ನು ಕಡಿಯುವುದೇ ಆಗಿತ್ತು. ಬಡತನದಿಂದಾಗಿ ಕದಿಯುತ್ತಾರೆ ಎನ್ನುವ ತತ್ವ ನಿರುದ್ಯೋಗಿ ಯುವಕ ಭಯೋತ್ಪಾದಕನಾಗಬಹುದು ಎನ್ನುವುದರ ಇತ್ತೀಚಿನ ವಿವೇಕಹೀನ ಸಿದ್ಧಾಂತದ ಮತ್ತೊಂದು ರೂಪ. ಭಾರತೀಯ ಸಂಸ್ಕೃತಿಯಲ್ಲಿ ಯೋಗ್ಯ ರೀತಿಯಲ್ಲಿ ಬದುಕುವವರಿಗೆ ಎಂದಿಗೂ ಸಹಾಯಹಸ್ತ ಇದ್ದೇ ಇದೆ. ಭಿಕ್ಷುಕನೊಬ್ಬನಿಗೆ ಊಟ ಕೊಡುವ ಉದ್ದೇಶದಿಂದ ಇಡೀ ಬ್ರಾಹ್ಮಣ ಕುಟುಂಬವೊಂದು ಹಸಿವೆಗೀಡಾಗಿ ಸಾಯುವುದನ್ನು ಸ್ವಾಮಿ ವಿವೇಕಾನಂದರು ತಮ್ಮ ಕರ್ಮಯೋಗದಲ್ಲಿ ಉಲ್ಲೇಖಿಸುತ್ತಾರೆ. ಬಡವನಿಗಾಗಿಯೇ ಇಲ್ಲಿ ಅನ್ನ ಸತ್ರಗಳ ಸರಮಾಲೆಗಳೇ ನಿರ್ವಣವಾಗಿದ್ದು. ಯಾವುದೇ ಯಜ್ಞದ ಪ್ರಧಾನ ಅಂಶವೇ ದಾನ. ತೈತ್ತರೀಯ ಉಪನಿಷತ್ ಹಾಗೂ ಗೀತೆಯಲ್ಲಿ ದಾನದ ಮಹತ್ವ ಮತ್ತು ಅವಶ್ಯಕತೆಗಳನ್ನು ನೂರು ರೀತಿಯಲ್ಲಿ ವರ್ಣಿಸಲಾಗಿದೆ. ದುಷ್ಟತನ, ದೌರ್ಜನ್ಯಗಳಿಗೆ ಸಮರ್ಥನೆಯಿಲ್ಲದಂತೆ ನೋಡಿಕೊಂಡಿತ್ತು ಈ ದೇಶ. ದುಷ್ಟ ಮತ್ತು ದುಷ್ಟಕೂಟಗಳು ಬೆಳೆಯದಂತೆ ಎಚ್ಚರವಹಿಸಿ ಸಮಾಜದಲ್ಲಿ ನಿಕೃಷ್ಟ ಸ್ಥಾನಕ್ಕೆ ಇಳಿಸಲಾಗಿತ್ತು ಅವರನ್ನು. ರಾವಣನ ದುರ್ನೀತಿಯನ್ನು ಕಂಡು ಅವನ ಗೋತ್ರಕ್ಕೆ ಸೇರಿದ್ದ ಬ್ರಾಹ್ಮಣರೆಲ್ಲ ಆ ಗೋತ್ರವನ್ನೇ ತ್ಯಜಿಸಿದ್ದರು. ಈ ಎಲ್ಲ ವ್ಯವಸ್ಥೆಗೂ ಭದ್ರತೆ ಒದಗಿಸಲೆಂದೇ ರಾಜ, ಆಡಳಿತಗಾರ ಹುಟ್ಟಿಕೊಂಡದ್ದು. ‘ನಿನಗೆ ಏನಾಗಬಾರದೋ ಅದನ್ನು ಮತ್ತೊಬ್ಬರಿಗೆ ಮಾಡಬೇಡ’ ಎನ್ನುವ ಒಂದು ವಾಕ್ಯದಲ್ಲಿ ಮಹಾಭಾರತವು ಧರ್ಮದ ಸಂಪೂರ್ಣ ವ್ಯಾಖ್ಯಾನವನ್ನೇ ಕೊಡುತ್ತದೆ. ಹೀಗೆ ಬದುಕಿದವರಿಗೆ ಮಾತ್ರ ಜಯ ಸಿಗುವಂತೆ, ಬದುಕದವರಿಗೆ ಅದು ಸಿಗದಂತೆ ಮಾಡುವುದೂ ರಾಜಧರ್ಮ.
ಈಗಿನ ಪದವಿಗಳಲ್ಲಿ, ಪಠ್ಯಗಳಲ್ಲಿ ಯಾವ ಪ್ರಜ್ಞಾವಂತಿಕೆಯೂ ಇರಬಾರದು ಎನ್ನುವ ಪ್ರತಿಜ್ಞೆಯನ್ನು ಮಾಡಿದಂತಿದೆ ಪ್ರಸ್ತುತ ಪರಿಸ್ಥಿತಿ. ಭೀಷ್ಮ ಯುಧಿಷ್ಠಿರನಿಗೆ, ‘ಯಾವಾಗ ತುಂಬು ಯೌವ್ವನಸ್ಥೆಯಾದ ಸ್ತ್ರೀಯೊಬ್ಬಳು ಮಧ್ಯರಾತ್ರಿಯಲ್ಲಿ ಮೈತುಂಬ ಆಭರಣಗಳನ್ನು ಧರಿಸಿ ಯಾರ ಭಯವೂ ಇಲ್ಲದೆ ಏಕಾಂಗಿಯಾಗಿ ನಿನ್ನ ರಾಜಬೀದಿಗಳಲ್ಲಿ ಸಂಚರಿಸಬಲ್ಲಳೋ ಆಗ ತಿಳಿದುಕೋ ನಿನ್ನ ರಾಜ್ಯಭಾರ ಸರಿಯಾಗಿದೆ’ ಎಂದು ಹೇಳಿದ್ದು ಪ್ರಸ್ತುತ ಆಡಳಿತ ವರ್ಗದ ಗಮನದಲ್ಲಿದೆಯೇ?
ಆದರೆ ಸದ್ಯದ ಪರಿಸ್ಥಿತಿ ಹೀಗಿದೆಯೇ? ಇದೇನು ್ಠಟಟಜಿಚ್ಞ ಚಿಂತನೆಯೇ? ಆಧುನಿಕ ಬುದ್ಧಿಜೀವಿಗಳ ದಿಕ್ಸೂಚಿ, ಮಾರ್ಗದರ್ಶಕ ಲಾರ್ಡ್ ಮೆಕಾಲೆ 1830ರ ದಶಕದಲ್ಲಿ ಭಾರತದ ತನ್ನ ಚಿತ್ರವನ್ನು ಹೀಗೆ ಕೊಟ್ಟಿದ್ದ: ‘ಈ ದೇಶದ ಉದ್ದಗಲಕ್ಕೂ ನಾನು ಓಡಾಡಿದ್ದೇನೆ. ಒಬ್ಬನೇ ಒಬ್ಬ ಕಳ್ಳ ಅಥವಾ ಭಿಕ್ಷುಕನನ್ನು ಕಾಣಲಿಲ್ಲ. ಅಂತಹ ಸಮೃದ್ಧಿ ಮತ್ತು ನೈತಿಕತೆ ಆ ದೇಶದಲ್ಲಿದೆ’. ಭೀಷ್ಮನ ಕಾಲದಿಂದ ಮೆಕಾಲೆಯ ಕಾಲದವರೆಗೂ ಸಾಧ್ಯವಾಗಿದ್ದು ಸ್ವತಂತ್ರ ಭಾರತದಲ್ಲಿ ಸಾಧ್ಯವಿಲ್ಲ ಎಂದರೆ ವಿನ್ಸ್ಟನ್ ರ್ಚಚಿಲ್ಲರನ್ನು ಪ್ರವಾದಿಯಾಗಿಸಿದಂತೆ! ಅಧಿಕಾರ ವರ್ಗಾವಣೆಯ ಕಾಲದಲ್ಲಿ ಅವರು ಹೇಳಿದ್ದನ್ನು ಮರೆಯದಿರೋಣ.
ಪರಂಪರೆಯ ಉದ್ದಕ್ಕೂ ಭಾರತೀಯ ಮೌಲ್ಯಗಳನ್ನು, ನಾವು ನಡೆದು ಬಂದ ದಾರಿಯನ್ನು ಪಕ್ಕಕ್ಕಿರಿಸಿ ಇತಿಹಾಸಗಳನ್ನೇ ತಿರುಚಿ, ಅಪವ್ಯಾಖ್ಯಾನಗಳನ್ನೇ ನಿಜವಾದ ವ್ಯಾಖ್ಯಾನಗಳನ್ನಾಗಿಸಿಕೊಂಡು ಜೀವನ, ಜೀವನ ಸಾರ್ಥಕತೆ ಇತ್ಯಾದಿ ಪದಗಳ ವಿಕೃತ ಚಿತ್ರಗಳಲ್ಲಿ ಭಾರತೀಯರ ಜೀವನವನ್ನು ಬಂಧಿಸಲು ಕಳೆದ ನೂರು ವರ್ಷಗಳಿಂದ ನಡೆಯುತ್ತಿರುವ ಮೌನ ಕುಯುಕ್ತಿಯ ಪರಿಣಾಮವಾಗಿ ಭಾರತೀಯ ಅಸಹಾಯಕ, ನಿರಾಶೆ ತುಂಬಿ ನೋಡಬೇಕಾದ ಸನ್ನಿವೇಶ ಭಾರತವನ್ನು ಆಕ್ರಮಿಸಿಕೊಳ್ಳುತ್ತಿದೆಯೇ? ಎನ್ನುವ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ‘ಸಾತ್ವಿಕರು ಗೌರವದಿಂದ ಬದುಕುವ ಕಾಲ ಹೊರಟೇ ಹೋಯಿತೇ, ಸ್ವಾಮೀಜಿ?’ ಹಲವರ ಬಾಯಿಂದ ಹೊರಡುತ್ತಿರುವ ಶಬ್ದಗಳು ಇವು. ಇದಕ್ಕೇನು ಉತ್ತರ ?
ಇದೇ ಉತ್ತರ. ಭಾರತೀಯರಂತೆ ಬದುಕಿ! ಭಾರತೀಯ ಮೌಲ್ಯಗಳಿಗೆ ಆಶ್ರಯ ಕೊಡಿ ಎನ್ನುವುದು. ಸ್ವಾಮಿ ವಿವೇಕಾನಂದರ ಮಾತುಗಳನ್ನು ಕೇಳಿ! ಸ್ಪಂದಿಸಿ! ಕಾರ್ಯಶೀಲರಾಗಿ!. ಭಾರತ ವಿವೇಕಾನಂದರ ಚಿಂತನೆಗಳನ್ನು ಪುರಸ್ಕರಿಸದಿದ್ದಲ್ಲಿ ಅದರ ಸರ್ವನಾಶ ಅಸಂಭವವೇನಲ್ಲ ಎಂದ ಪಾಶ್ಚಾತ್ಯ ಚಿಂತಕನನ್ನು ಅರ್ಥಮಾಡಿಕೊಳ್ಳಿ. ಸ್ವಾಮೀಜಿ ಹೇಳಿದ- ‘ಸಾಕಷ್ಟು ಅತ್ತಿದ್ದೇವೆ, ಇನ್ನೆಂದೂ ಅಳುವುದು ಬೇಡ. ನಿಮ್ಮ ಕಾಲಮೇಲೆ ನೀವು ನಿಂತುಕೊಳ್ಳಿ. ಪೌರುಷವಂತರಾಗಿ’ ಎನ್ನುವ ಮಾತನ್ನು ಮನನ ಮಾಡಿ ಎನ್ನುವುದು.
ಇಂತಹ ಸಿಂಹಗರ್ಜನೆಗಳಿಗೆ ಕಿವಿಗೊಡದಿದ್ದುದೇ ನಮ್ಮ ದುರ್ದೆಶೆಗಳಿಗೆ ಕಾರಣ. ‘ಕಬ್ಬಿಣದ ಮಾಂಸಖಂಡಗಳು, ಉಕ್ಕಿನ ನರಮಂಡಲ, ವಿದ್ಯುಚ್ಛಕ್ತಿಯಂತಹ ಇಚ್ಛಾಶಕ್ತಿಯುಳ್ಳ, ಅಂಜದ, ಅಳುಕದ, ನಿಸ್ವಾರ್ಥ ಪ್ರಾಮಾಣಿಕರು ಯಾವ ಸಮಸ್ಯೆಯನ್ನೂ ಪರಿಹರಿಸಬಲ್ಲರು’ ಎಂಬ ವಾಣಿ ಒಂದು ಸಲವಾದರೂ ನಮ್ಮ ಕಿವಿಯನ್ನು ಪ್ರವೇಶಿಸಿತೆ?
ಭಾರತೀಯ ಸಮಾಜ ಪುನರ್ಜನ್ಮವನ್ನೇ ಪಡೆಯಬೇಕು. ಆತ್ಮಗೌರವಕ್ಕೆ ಚ್ಯುತಿ ಬರುವಂಥ ಯಾವ ಅಹಿಂಸೆಯೂ ಬೇಕಾಗಿಲ್ಲ. ಅಹಿಂಸೆ ಎನ್ನುವುದು ಶೂರನೊಬ್ಬ ದುರ್ಬಲನೆಡೆಗೆ ಹೊಂದಬೇಕಾದ ಧೋರಣೆ ಮಾತ್ರ. ಅಶಕ್ತತೆ ಮತ್ತು ಅಹಿಂಸೆ ವಿರುದ್ಧ ಪದಗಳು. ಈ ವಿಕೃತ ಅಹಿಂಸಾವ್ರತ ಈ ದೇಶವನ್ನು ಶಿಖಂಡಿಗಳ ದೇಶವನ್ನಾಗಿಸಿದೆ. ಅಹಿಂಸೆಯ ಪ್ರವಾದಿ ಗಾಂಧೀಜಿ ಒಮ್ಮೆ ಹೇಳಿದ್ದರು- ‘ಹೇಡಿತನಕ್ಕಿಂತ ಹಿಂಸೆಯನ್ನೇ ಇಷ್ಟಪಡುತ್ತೇನೆ ನಾನು’ ಎಂದು.
ಕೊಲೆಗಿಂತ ಹೆಚ್ಚಿನ ಅಪರಾಧ ಆತ್ಮಹತ್ಯೆ ಎನ್ನುವುದನ್ನು ಪ್ರಪಂಚದ ಎಲ್ಲ ಸಂವಿಧಾನಗಳು ಒಪ್ಪಿಕೊಂಡಿರುವುದರ ತಾತ್ವಿಕ ಆಧಾರವೇ ಅದು. ಆತ್ಮಗೌರವಕ್ಕೆ ಚ್ಯುತಿ ಬರದಂತೆ ಬದುಕುವುದೇ ಸಂಭಾವಿತರ ಪ್ರಧಾನ ಲಕ್ಷಣ ಎನ್ನುತ್ತದೆ ಗೀತೆ. ಹಾಗೆ ಚ್ಯುತಿ ತಂದವರನ್ನು ಎಂದಿಗೂ ಕ್ಷಮಿಸಬಾರದು ಎಂತಲೂ ಹೇಳುತ್ತದೆ. ಈ ಆತ್ಮಗೌರವದ ಪ್ರಧಾನ ಆಶ್ರಯ ಸ್ಥಾನವೇ ಮನೆತನದ ಹೆಣ್ಣು. ಅವಳೇ ಕುಲಗೌರವದ ಪ್ರತೀಕ. ಸೀತಾಪಹರಣ, ದ್ರೌಪದಿ ವಸ್ತ್ರಾಪಹರಣಗಳೇ ಯುದ್ಧಗಳಿಗೆ ನಾಂದಿ. ಭೀಷ್ಮಾಚಾರ್ಯನ ಉಪದೇಶದಲ್ಲಿ ಅವನು ಬಳಸಿದ ಮಾನದಂಡವನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ. ಯಾವ ದೇಶವೂ ಇದೇ ತತ್ವವನ್ನು ಅನುಸರಿಸುತ್ತಿರುವುದು. ಶೀತಲ ಯುದ್ಧಕಾಲದಲ್ಲಿ ಕ್ಯೂಬಾ ವಿಷಯಕ್ಕೆ ಸಂಬಂಧಿಸಿದಂತೆ ನಿಮ್ಮ ನಡೆಗಳಿಂದ ಶಾಂತಿಗೆ ಧಕ್ಕೆಯಾಗುವುದಿಲ್ಲವೇ? ಎನ್ನುವ ಪ್ರಶ್ನೆಗೆ ಜಾನ್ ಕೆನಡಿ ಉತ್ತರಿಸಿದ್ದು ಹೀಗೆ : ‘ಶಾಂತಿ ಬೇಕು. ಆದರೆ ಆತ್ಮಗೌರವವನ್ನು ಬಲಿಕೊಟ್ಟು ಅಲ್ಲ’ ಎಂದು. ಇದರರ್ಥವೇನು? ಮೌಲ್ಯಶಿಕ್ಷಣದ ಸಾರವೇ ಇದು.
ಮೌಲ್ಯಗಳ ಗಂಧವಿಲ್ಲದ ಯಾವುದೇ ವರ್ಗ ಸಾಮಾಜಿಕ ದುರ್ಗಂಧವೇ ಸರಿ. ಧೈರ್ಯ ಬೇರೆ, ಕ್ರೌರ್ಯ ಬೇರೆ. ದಧೀಚಿ, ಶಿಬಿ ಇತ್ಯಾದಿ ತ್ಯಾಗಿಗಳು ಧೈರ್ಯವಂತರೇ ಹೊರತು ಮುಗ್ಧರ ಬಲಿ ತೆಗೆದುಕೊಳ್ಳುವವರಲ್ಲ.
ಶ್ರೀಮಾತೆ ಶಾರದಾದೇವಿಯವರು ಸ್ವಭಾವತಃ ಪ್ರೇಮವೇ ಮೂರ್ತಿವೆತ್ತಂತ್ತಿದ್ದವರು. ಪಕ್ಕದ ಹಳ್ಳಿಯ ಸಿಂಧುಬಾಲಾ ಎಂಬ ಗರ್ಭಿಣಿಯನ್ನು ಪೊಲೀಸರು ವಿನಾಕಾರಣ ಬಂಧಿಸಿ ಅಪಮಾನಗೊಳಿಸಿ ಬೀದಿಯಲ್ಲಿ ಎಳೆದೊಯ್ದರು ಎಂಬ ಸುದ್ದಿ ಬಂದಾಗ ಅವರು ಆಕ್ರೋಶಗೊಂಡು ಉದ್ಗರಿಸಿದ್ದು ‘ಆ ಊರಿನಲ್ಲಿ ಗಂಡಸರು ಸತ್ತಿದ್ದರೇ?’ ಎಂದು. ‘ನನ್ನ ಧರ್ಮದ ಬಗ್ಗೆ ಇನ್ನೊಂದೇ ನಿಂದನೆ ಬಂದರೂ ನಿಮ್ಮನ್ನು ಸಮುದ್ರಕ್ಕೆ ಎಸೆದು ಬಿಡುತ್ತೇನೆ’ - ಕ್ರಿಶ್ಚಿಯನ್ ಪಾದ್ರಿಯೊಬ್ಬನ ಕೊರಳುಪಟ್ಟಿ ಹಿಡಿದು ವಿವೇಕಾನಂದರು ಹೀಗೆ ಗುಡುಗಿದ್ದು ಸಮುದ್ರ ಪ್ರಯಾಣದ ಕಾಲದಲ್ಲಿ.
ಮೇಲಿನಂತೆ ನಿಜಾರ್ಥದಲ್ಲಿ ಭಾರತೀಯರಾಗಬೇಕಾದ್ದೇ ನಮ್ಮೆಲ್ಲ ಸಮಸ್ಯೆಗಳಿಗೆ ಪರಿಹಾರ.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)