ಮೌಲ್ಯಾನುಷ್ಠಾನವಿಲ್ಲದ ಸಮಾಜ ಕಾಡಿಗಿಂತ ಕಡೆ...

Column F
Published on
ನನ್ನ ಆತ್ಮೀಯರೂ, ಚಿಂತಕರೂ ಆಗಿದ್ದ ದಿವಂಗತ ಪಾಟೀಲ್ ಪುಟ್ಟಪ್ಪನವರು ಹೇಳಿದ್ದ ಘಟನೆ ಮತ್ತೆ ಮತ್ತೆ ಸ್ಮೃಪಟಲದಲ್ಲಿ ಹಾದುಹೋಗುತ್ತಿದೆ. ತಮ್ಮ ಸಂಶೋಧನಾ ಸಂಸ್ಥೆಯಲ್ಲಿ ಕಿರಿಯ ವಿಜ್ಞಾನಿ ಹಾಗೂ ಸಹಾಯಕನಾಗಿ ಕಾರ್ಯನಿರ್ವಹಿಸಲು ಭೌತಶಾಸ್ತ್ರದಲ್ಲಿ ಸ್ನಾತಕೋತ್ತರರಾದ ಕೆಲ ಯುವಕರನ್ನು ಸುಪ್ರಸಿದ್ಧ ವಿಜ್ಞಾನಿ, ನೊಬೆಲ್ ಪುರಸ್ಕೃತ ಸಿ.ವಿ. ರಾಮನ್ ಅವರು ಸಂದರ್ಶನಕ್ಕೆ ಕರೆದಿದ್ದರು. ಆಯ್ಕೆಯಾಗದ ಯುವಕನೊಬ್ಬ ರಾಮನ್ನರಿಗೆ ಕಾಣುವಂತೆಯೇ ಮತ್ತೆ ಮತ್ತೆ ಕಿಟಕಿಯ ಬಳಿ ಸುಳಿದು ಅವರ ಗಮನ ಸೆಳೆಯಲು ಯತ್ನಿಸುತ್ತಿದ್ದ. ರಾಮನ್ನರು ಯುವಕನನ್ನು ಒಳಗರೆದು ‘ಇಲ್ಲೇಕೆ ಸುಳಿದು ನನಗೆ ತೊಂದರೆ ಕೊಡುತ್ತಿರುವೆ, ಮನೆಗೆ ಹೋಗು, ನಿನ್ನನ್ನು ಆಯ್ಕೆ ಮಾಡಿಲ್ಲ ಎಂದು ಹೇಳಿದೆನಲ್ಲ’ ಎಂದು ರೇಗಿದರು. ಯುವಕ ಉತ್ತರಿಸುತ್ತಾನೆ - ‘ಸರ್ ನೀವು ನನಗೆ ಪ್ರಯಾಣದ ಭತ್ಯೆ ಕೊಟ್ಟಿರುವುದು ಐವತ್ತು ರೂಪಾಯಿ. ಆದರೆ ನನ್ನ ಟಿಕೆಟ್ಟಿನ ಖರ್ಚು ಕೇವಲ ಮೂವತ್ತು ರೂಪಾಯಿ. ಮಿಕ್ಕ ಇಪ್ಪತ್ತು ರೂಪಾಯಿ ಯಾರಿಗೆ ಕೊಡುವುದು ಎಂದು ಆಗಿನಿಂದಲೂ ಹುಡುಕುತ್ತಿದ್ದೇನೆ. ಯಾರೂ ಕಾಣುತ್ತಿಲ್ಲ. ತಮಗೇ ಕೊಟ್ಟು ಬಿಡೋಣವೇ ಎಂದು ಯೋಚಿಸುತ್ತಿದ್ದೆ’ ಎಂದಾಗ ರಾಮನ್ನರ ಮುಖದಲ್ಲಿ ಮಂದಹಾಸ ಬೆಳಗಿ, ‘ನಾಳೆಯಿಂದ ಕೆಲಸಕ್ಕೆ ಹಾಜರಾಗು. ನಿನ್ನನ್ನು ಆಯ್ಕೆಮಾಡಿದ್ದೇನೆ’ಎಂದರಲ್ಲದೆ. ‘ನಿನಗೆ ಭೌತಶಾಸ್ತ್ರದ ಜ್ಞಾನ ಕಡಿಮೆ ಇರಬಹುದು. ಅದನ್ನು ನಾನು ಸರಿದೂಗಿಸಬಲ್ಲೆ. ಆದರೆ ಯಾವುದೇ ದೇಶಕ್ಕೆ, ಸಂಸ್ಥೆಗೆ ಪ್ರಾಮಾಣಿಕ ವ್ಯಕ್ತಿಗಳ ಅವಶ್ಯಕತೆ ಭೌತಶಾಸ್ತ್ರಕ್ಕಿಂತಲೂ ಕಡಿಮೆಯದ್ದೇನಲ್ಲ’ಎನ್ನುತ್ತಾರೆ.

ಪರಂಪರೆಯ ಉದ್ದಕ್ಕೂ ಈ ಚಿಂತನೆ ಓತಪೋ›ತವಾಗಿ ಹರಡಿದೆ ನಮ್ಮ ದೇಶದಲ್ಲಿ. ಯುದ್ಧಕಾಲದಲ್ಲಿ ಶಸ್ತ್ರರಹಿತ ಶತ್ರುವನ್ನೂ ಘಾಸಿಗೊಳಿಸಿದವರಲ್ಲ ನಾವು. ಶರಣಾಗತನಾದ ಶತ್ರುವನ್ನು ಕ್ಷಮಿಸಿದ ಉದಾಹರಣೆ ಲೆಕ್ಕವಿಲ್ಲದಷ್ಟು. ಆದರೆ ಉದಾತ್ತತೆ, ಸಂಸ್ಕೃತಿಗಳ ಗಂಧವೇ ಇಲ್ಲದ, ಮೃಗೀಯ ಜನಾಂಗದ ಕೆಲ ಆಕ್ರಮಣಕಾರರಿಂದ, ಅದಕ್ಕಾಗಿ ತೆತ್ತ ಬೆಲೆ ಮಾತ್ರ ಅಷ್ಟಿಷ್ಟಲ್ಲ ಎನ್ನುವುದು ಬೇರೆಯೇ ವಿಷಯ. ಹಾಗಂತ ಹೇಳಿ ಸಂಸ್ಕೃತಿ, ಸಂಸ್ಕಾರಗಳ ವ್ಯಾಖ್ಯೆಯನ್ನೇ ಬದಲಾಯಿಸಿಕೊಂಡು ಬಿಡಲಿಲ್ಲ ನಮ್ಮ ದೇಶ. ವೇದ ಕಾಲಕ್ಕೇ ಮಾನವನ ಉದ್ಧಾರಕ್ಕೆ ಬೇಕಾದ ಸಾರ್ವಕಾಲಿಕ ಮೌಲ್ಯಗಳನ್ನು ಗುರುತಿಸಿದ, ಆ ಸಾಮಗ್ರಿಯಿಂದಲೇ ಸಂಸ್ಕೃತಿಯನ್ನು ಕಟ್ಟಿದವರು ನಾವು. ತೈತ್ತರೀಯ ಉಪನಿಷತ್ತಿನಲ್ಲಿ ಬರುವ ಘಟಿಕೋತ್ಸವ ಭಾಷಣವೇ ಇದಕ್ಕೆ ಸಾಕ್ಷಿ. ಸದೃಢ ಸಮಾಜದ ಮೂಲದ್ರವ್ಯವೇ ತತ್ವಬದ್ಧ, ಮೌಲ್ಯಬದ್ಧ ವ್ಯಕ್ತಿಗಳು. ಸಿ.ವಿ. ರಾಮನ್ನರು ಹೇಳಿದಂತೆ ದೇಶಕ್ಕಾಗಲಿ, ಸಂಸ್ಥೆಗಾಗಲಿ ಗುಣಾತ್ಮಕತೆ ಮುಖ್ಯವೇ ಹೊರತು ಸಂಖ್ಯಾಬಲವಲ್ಲ ಎಂದವರು ನಾವು. ಪ್ರಸ್ತುತ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಮ್ಮ ದೇಶ ಎದುರಿಸುತ್ತಿರುವ ಬಹುದೊಡ್ಡ ಸವಾಲೇ ಇದು. ‘ಮೌಲ್ಯಬದ್ಧ, ತತ್ವಬದ್ಧ ವ್ಯಕ್ತಿಗಳಿಲ್ಲದ ಸಮಾಜದಲ್ಲಿ ಬದುಕುವುದಕ್ಕಿಂತ ಕಾಡಿನಲ್ಲಿ ಬದುಕುವುದು ಲೇಸು’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ‘ಧರ್ಮದಿಂದ ಸಮಾಜಕ್ಕೆ ಏನು ಪ್ರಯೋಜನ?’ ಎಂದು ಪಾಶ್ಚಾತ್ಯನೊಬ್ಬ ಕೇಳಿದ ಪ್ರಶ್ನೆಗೆ ‘ಅದು ಪ್ರಾಚೀನವಿರಲಿ, ಅರ್ವಾಚೀನವಿರಲಿ; ಸಮಾಜ ಸತ್ಯಕ್ಕೆ ತಲೆಬಾಗಬೇಕೇ ಹೊರತು ಸತ್ಯ ಸಮಾಜಕ್ಕಲ್ಲ; ಉನ್ನತ ಸತ್ಯಗಳು ಅನುಷ್ಠಾನಗೊಳ್ಳಲು ಸಾಧ್ಯವಿರುವ ಸಮಾಜವನ್ನು ನಿರ್ವಿುಸಲು ನಿಮ್ಮ ಕೈಲಾಗದಿದ್ದಲ್ಲಿ ಅಂತಹ ಸಮಾಜವನ್ನು ತೊರೆದು ಕಾಡಿನಲ್ಲಿ ವಾಸಿಸಿ’ ಎಂದು ಗುಡುಗಿದವರು ಅವರು. ಸನಾತನ ಸಂಸ್ಕೃತಿ ‘ಮೌಲ್ಯಾನುಷ್ಠಾನವಿಲ್ಲದ ಸಮಾಜ ಕಾಡಿಗಿಂತ ಕಡೆ’ ಎನ್ನುತ್ತದೆ. ಅಷ್ಟೇ ಅಲ್ಲ ರಾಜನಿಂದ ಹಿಡಿದು ಕಟ್ಟಕಡೆಯ ಮನುಷ್ಯನವರೆಗೂ ಇದು ಸ್ವೀಕೃತವಾಗುವಂತೆ, ಅವರೆಲ್ಲ ಇದಕ್ಕೆ ಬದ್ಧವಾಗುವಂತೆ ಮಾಡಿತ್ತು ಕೂಡ. ತಾನಾಗಿಯೇ ನ್ಯಾಯಬದ್ಧವಾಗಿ ಬಂದ ಸಿಂಹಾಸನವನ್ನು ರಾಮ, ಭರತಾದಿಗಳು ತಿರಸ್ಕರಿಸಿದ್ದು, ಕೃಷ್ಣ ಎಂದಿಗೂ ಆಸೆಪಡದಿದ್ದುದು, ಸಿದ್ಧಾರ್ಥ ರಾಜಕುಮಾರನಾಗಿ ಹುಟ್ಟಿದ್ದರೂ ಬುದ್ಧನಾಗಲು ಬಯಸಿದ್ದು ಕಣ್ಣಿಗೆ ರಾಚುವಂತಿದೆ.

ನ್ಯಾಯವಾಗಿ, ತಾನಾಗಿ ಬಂದದ್ದನ್ನು ತ್ಯಾಗ ಮಾಡಿದವರೇ ಈ ದೇಶದ ಆದರ್ಶ. ಇನ್ನು ಅನ್ಯಾಯಕ್ಕೆ ಎಳೆಸಲ್ಪಟ್ಟವರು ಯಾವ ಸ್ಥಾನದಲ್ಲಿ ನಿಲ್ಲಬಹುದು?! ಸ್ವಾತಂತ್ರ್ಯ ಸಿಕ್ಕಿದ ನಂತರ ತಾವು ಅಧ್ಯಕ್ಷರಾಗಬಯಸುವಿರೊ, ಪ್ರಧಾನಿಯಾಗಬಯಸುವಿರೊ ಎಂಬ ಪ್ರಶ್ನೆಗೆ ‘ನಾನು ಎರಡನ್ನೂ ಒಲ್ಲೆ, ನನ್ನ ಕೋಣೆಯಲ್ಲಿ ಕುಳಿತುಕೊಂಡು ’Differential calculus’ ಮಾಡುತ್ತ ಕಾಲ ಕಳೆಯುವೆ’ ಎಂದು ಉತ್ತರಿಸಿದ ಮಹಾತ್ಮ ಬಾಲಗಂಗಾಧರ ತಿಲಕರು. ‘ನಿನ್ನ ಮಗನಿಗೆ ನೌಕರಿ ಸಿಕ್ಕಿರುವ ಇಲಾಖೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಸಂಬಳದ ಅವಶ್ಯಕತೆಯೇ ಇಲ್ಲ’ ಎಂದು ನೆರೆಯವರು ಹೇಳಿದಾಗ ತನ್ನದಲ್ಲದ ಅನ್ಯಾಯದ ಹಣಕ್ಕೆ ಎಂದಿಗೂ ಕೈಯೊಡ್ಡಬಾರದು ಎಂದು ಮಗನಿಂದ ಭಾಷೆ ತೆಗೆದುಕೊಂಡ ಕೂಲಿ ಹೆಂಗಸಿನ ಪರಿಚಯವಿತ್ತು ನನಗೆ. ‘ನಿನಗೆ ಹೆಚ್ಚಿನ ಹಣ ಬೇಕಾದಲ್ಲಿ ಕೇಳು. ಕೂಲಿ ಮಾಡಿ ತಂದು ಕೊಡುತ್ತೇನೆ. ಮೋಸದ ಹಣಕ್ಕೆ ಕೈಯೊಡ್ಡಿದರೆ ನಿನಗೆ ನನ್ನ ಎದೆ ಹಾಲು ಕುಡಿಸಲಿಲ್ಲ ವಿಷ ಕುಡಿಸಿದ್ದೇನೆ ಎಂದು ತಿಳಿಯುತ್ತೇನೆ; ನಾನೂ ವಿಷ ಕುಡಿಯುತ್ತೇನೆ’ ಎಂದು ಘರ್ಜಿಸಿದ ಧೀರ ಮಾತೆ ಅವಳು. ಆದರೆ ಇತ್ತೀಚಿನ ಕೆಲ ಘಟನಾವಳಿಗಳನ್ನು ನೋಡಿದಾಗ- ಭ್ರಷ್ಟತೆಯೇ ಮಾಮೂಲಾಗುತ್ತಿದೆಯೇ? ಕೋಟಿಗಟ್ಟಲೆ ಹಣ ಕೊಟ್ಟು ಪರೀಕ್ಷೆಯಲ್ಲಿ ನಕಲು ಮಾಡಿ ಕೆಲಸಗಿಟ್ಟಿಸಿಕೊಂಡ ವ್ಯಕ್ತಿ ಶುದ್ಧ ಜೀವನ ನಡೆಸಬಲ್ಲನೇ? ಇದಕ್ಕೆಲ್ಲ ಉನ್ನತ ಮಟ್ಟದ ಅಧಿಕಾರಿಗಳೇ ಶಾಮಿಲಾಗಬಹುದೇ? ಪರಿಸ್ಥಿತಿ ವಿಷಮಸ್ಥಿತಿಯನ್ನು ತಲುಪುತ್ತಿದೆಯೆ? ಎಂಬೆಲ್ಲ ಪ್ರಶ್ನೆಗಳು ಕಾಡುತ್ತವೆ.

‘ಮೌಲ್ಯಗಳು ಕಾಲಕಾಲಕ್ಕೂ ಬದಲಾಗುತ್ತವೆ’ ಎಂದ ಒಬ್ಬ ಭೂಪತಿ ಜಿಲ್ಲಾಧಿಕಾರಿಯೇ ಆಗಿದ್ದ ಎಂದರೆ ಆಶ್ಚರ್ಯ ಪಡಬೇಡಿ. ‘ಸಾರ್ವಕಾಲಿಕ ಮೌಲ್ಯಗಳು’ ‘ಬದಲಾಯಿಸುವ ಮೌಲ್ಯಗಳು’ ಎಂದು ಭಾರತ ಬುದ್ಧಪೂರ್ವದಲ್ಲೇ ವಿಂಗಡಿಸಿದೆ ಎನ್ನುವುದನ್ನು ಅವನಿಗೆ ಯಾರು ಹೇಳಬೇಕು? ‘ರಾಷ್ಟ್ರೀಯತೆ ಜಾತೀಯತೆಗಿಂತ ಅಪಾಯಕಾರಿ’ ಎನ್ನುವ ಜಿಲ್ಲಾಧಿಕಾರಿ, ‘ಸ್ವಾತಂತ್ರೊ್ಯೕಸ್ತವ’ ‘ಗಣರಾಜ್ಯೋಸ್ತವ’ ಎಂದು ಉಚ್ಚರಿಸುವ ಕುಲಪತಿಗಳಿರುವ ಕಾಲದಲ್ಲಿ ನಾವು ಜೀವಿಸುತ್ತಿದ್ದೇವೆ. ಒಂದನೇ ತರಗತಿಯಿಂದ ಮೆಟ್ರಿಕ್​ವರೆಗೆ ಮತ್ತು ಸಾಧ್ಯವಾದರೆ ಅದಕ್ಕೂ ಮುಂದೆ ನಕಲು ಮಾಡಿಯೇ ಪರೀಕ್ಷೆಗಳನ್ನು ಪಾಸು ಮಾಡುವ ಶೈಕ್ಷಣಿಕ ಸಂಸ್ಕೃತಿ ರಾಜ್ಯವನ್ನು ವ್ಯಾಪಿಸುವುದಕ್ಕೆ ಪ್ರಾರಂಭಿಸಿ ಬಹಳ ದಿನಗಳೇ ಆಗಿಹೋಯಿತು. ನೈತಿಕತೆ, ನ್ಯಾಯಾನ್ಯಾಯಗಳ ಪರಿಜ್ಞಾನ ಎಂದೋ ನೆಲಕಚ್ಚಿದೆ. ಯಾವ ಮಾರ್ಗದಿಂದಲಾದರೂ ಆಯ್ತು, ಕಾರ್ಯ ಸಾಧಿಸುವುದು ಮುಖ್ಯ ಎನ್ನುವ ತತ್ವ ಇತ್ತೀಚೆಗೆ ‘smartness’ ಎಂಬ ‘ಪ್ರತಿಷ್ಠೆ’ಯನ್ನು ಗಳಿಸಿದೆ. ಕ್ಷಮಿಸಲ್ಪಟ್ಟ ಮಹಮದ್ ಘೊರಿ, ಕ್ಷಮಿಸಿದ ಪೃಥ್ವಿರಾಜನನ್ನು ಬರ್ಬರವಾಗಿ ಕೊಂದರೆ ಘೊರಿ ಠಞಚ್ಟಠಿ ಆಗಿ ಪೃಥ್ವಿರಾಜ politically immature ಆಗುತ್ತಾನೆ.

‘ಸ್ವಾಮೀಜಿ, ಮರ್ಯಾದೆ ಬಿಟ್ಟು ಹಣ ಮಾಡು, ಹಣ ಬಂದ ಮೇಲೆ ಹೋಗಿದ್ದ ಮರ್ಯಾದೆ ತಾನೇ ಬರುತ್ತದೆ ಎನ್ನುವುದೇ ಸದ್ಯದ ಧೋರಣೆ’ ಎಂದು ನಾಡಿನ ಹೆಸರಾಂತ ದಾನಿಗಳೊಬ್ಬರು ನನ್ನ ಮುಂದೆ ಹೇಳಿದ್ದುಂಟು. ಇದಕ್ಕೆಲ್ಲಾ ಮೌಲ್ಯಗಳು ಮತ್ತು ಅವುಗಳ ಸಾರ್ವಕಾಲಿಕ ಪ್ರಸ್ತುತತೆಯ ಬಗೆಗಿನ ಅಜ್ಞಾನ ಒಂದು ಕಾರಣವಾದರೆ ಮನುಷ್ಯನಾದವನು ನ್ಯಾಯಮಾರ್ಗದಲ್ಲೇ ಏನನ್ನೂ ಸಾಧಿಸಬಹುದು ಎಂದು ಗೊತ್ತಿಲ್ಲದಿರುವುದು ಮತ್ತೊಂದು ಕಾರಣ. ಮಾನುಷ ಶಕ್ತಿಗಳು ಎಷ್ಟು ‘ಅಮೋಘ ಮತ್ತು ಅಸಂಖ್ಯ’ ಮತ್ತು ಮನುಷ್ಯನ ಸ್ವಭಾವವೇ ಆಗಿರುವ ‘ದಿವ್ಯತೆ’ ಇವುಗಳ ಕನಿಷ್ಠ ಪ್ರಜ್ಞೆ ಭಾರತೀಯ ವಿದ್ಯಾರ್ಥಿಗೆ ಇಡೀ ಶೈಕ್ಷಣಿಕ ಜೀವನದಲ್ಲಿ ಎಲ್ಲಿಯೂ ತಿಳಿಸುವ ಗೋಜಿಗೇ ಹೋಗುವುದಿಲ್ಲ ನಾವು. ಇನ್ನು ಆತ್ಮವಿಶ್ವಾಸ ಮತ್ತ ಆತ್ಮಗೌರವಗಳು ಅವನಿಗೆ ಎಲ್ಲಿಂದ ಮೂಡಿ ಬರಬೇಕು! ಇವೆರಡೂ ಇಲ್ಲದಿದ್ದಲ್ಲಿ ಮೋಸದ ಮಾರ್ಗಕ್ಕೆ ಮನುಷ್ಯ ಎಳೆಸಲ್ಪಡುವುದು ಸಹಜವೇ ಎನ್ನುವಷ್ಟು ಸಾಮಾನ್ಯವಾಗಿದೆ ಪ್ರಸ್ತುತ ಸಂದರ್ಭ. ವ್ಯಕ್ತಿಯ, ದೇಶದ ಉದ್ಧಾರಕ್ಕೆ ಬುದ್ಧಿವಂತಿಕೆಯಷ್ಟೇ ಹೃದಯವಂತಿಕೆ ಮತ್ತು ಅದರ ಅನುಷ್ಠಾನ ರೂಪವಾದ ನೈತಿಕತೆಯೂ ಮುಖ್ಯ ಎನ್ನುವುದನ್ನು ಸಂಶಯಕ್ಕೆಡೆಯಿಲ್ಲದಂತೆ ಮನಗಾಣಿಸಬೇಕು. ಅಮೆರಿಕಾ, ಜರ್ಮನಿ, ಜಪಾನ್ ಮುಂತಾದ ರಾಷ್ಟ್ರಗಳು ಪ್ರಾಥಮಿಕ ಶಿಕ್ಷಣದಲ್ಲಿ ಬಹಳಷ್ಟು ಒತ್ತು ಕೊಡುವುದೇ ಆತ್ಮಗೌರವ ಮತ್ತು ಅವುಗಳ ಸಮಷ್ಟಿ ರೂಪವಾದ ದೇಶಪ್ರೇಮ, ಸಾಮಾಜಿಕ ಪ್ರಜ್ಞೆ ಮತ್ತು ಸೇವಾಪ್ರವೃತ್ತಿಗಳನ್ನು ಬೆಳೆಸುವುದಕ್ಕೆ. ಇಂತಹ ಭದ್ರ ಬುನಾದಿ ಇಲ್ಲದ ಶಿಕ್ಷಣ ಮುಂದೆ ಭ್ರಷ್ಟ ವ್ಯವಸ್ಥೆಗೆ ದಾರಿ ಮಾಡಿಕೊಟ್ಟು ಅದು ನಮ್ಮ ದೇಶವನ್ನು ಮೌನವಾಗಿ ತಿನ್ನುತ್ತಿದೆ.

ಕೆಲ ವರ್ಷಗಳ ಹಿಂದೆ ನಾನು ಅಮೆರಿಕಾ ಪ್ರವಾಸದಲ್ಲಿದ್ದಾಗ ಹಲವು ಭಾರತೀಯ ಸಂಜಾತ ಯುವಕರು ‘ಸ್ವಾಮೀಜಿ ಇಲ್ಲಿ ನಾವು ಸುಖವಾಗಿದ್ದೇವೆ. ಆದರೆ ‘ವಂದೆಮಾತರಂ’ ಇತ್ಯಾದಿ ಹಾಡುಗಳನ್ನು ಕೇಳುವಾಗ ನಾವು ದೇಶದ್ರೋಹಿಗಳು; ಭಾರತದಲ್ಲೆ ಇದ್ದು ಸೇವೆಗೈಯುವುದನ್ನು ಬಿಟ್ಟು ಸ್ವಾರ್ಥಿಗಳಾಗಿ ಇಲ್ಲಿ ಬಂದು ನಮ್ಮ ಸುಖದಲ್ಲೇ ಮೈ ಮರೆಯುತ್ತಿದ್ದೇವೆ ಎನ್ನುವ ಅಪರಾಧಿ ಪ್ರಜ್ಞೆ ಕಾಡುತ್ತದೆ; ಅಲ್ಲಿಗೇ ಬಂದು ಬಿಡೋಣ ಎನ್ನಿಸುತ್ತದೆ; ನೀವೇನು ಹೇಳುವಿರಿ?’ ಎಂದು ಕೇಳಿದ್ದರು. ‘ವಿಚಾರ ಮಾಡಿ ನಿರ್ಧಾರ ತೆಗೆದುಕೊಳ್ಳಿ; ದುಡುಕುವುದು ಬೇಡ; ವಿವೇಕಾನಂದರಂತೂ ಭಾರತದ ಹೊರಗೆ ಕೊಟ್ಟ ಒಂದು ಪೆಟ್ಟು ಒಳಗಿನ ಐವತ್ತು ಪೆಟ್ಟುಗಳಿಗೆ ಸಮ ಎಂದು ಹೇಳಿದ್ದಾರೆ. ಯೋಚಿಸಿ ನೋಡಿ’ ಎಂದಿದ್ದೆ. ಆದರೆ ಅವರಿಗೆ ಮನವರಿಕೆಯಾಗಲಿಲ್ಲ ಎನಿಸುತ್ತದೆ. ಮೂವರು ಯುವಕರು ಸಂಸಾರ ಸಮೇತರಾಗಿ ಬಂದು ನೆಲೆಸಿಯೇ ಬಿಟ್ಟರು. ಹಾಗೂ ಹೀಗೂ ಎರಡು ಮೂರು ವರ್ಷ ತಳ್ಳಿ ಮತ್ತೆ ಅಲ್ಲಿಗೇ ಹೊರಟರು! ಕಾರಣ ಕೇಳಲಾಗಿ ಅವರು ಹೇಳಿದ್ದು- ‘ಇಲ್ಲಿನ ಭ್ರಷ್ಟವ್ಯವಸ್ಥೆ ನಾವು ಏನನ್ನಾದರೂ ಸಾಧಿಸಬೇಕು ಎನ್ನುವ ಉತ್ಸಾಹವನ್ನೇ ತಿಂದುಬಿಡುತ್ತೆ ಸ್ವಾಮೀಜಿ’ ಎಂದು. ಸಿ.ವಿ. ರಾಮನ್ನರ ಸೋದರ ಸಂಬಂಧಿ, ನೊಬೆಲ್ ವಿಜೇತ ವಿಜ್ಞಾನಿ ಪ್ರೊ.ಎಸ್.ಚಂದ್ರಶೇಖರ ಅವರು ಒಮ್ಮೆ ಹೇಳಿದ್ದುಂಟು-‘ಸಂಬಳ ಎರಡನೇ ವಿಷಯ; ಅದಕ್ಕಿಂತಲೂ ಹೆಚ್ಚಾಗಿ ಭಾರತದಲ್ಲಿ work atmosphere ಬಹಳಷ್ಟು ಸುಧಾರಿಸಬೇಕು’ ಎಂದು.

ಪ್ರಜ್ಞಾವಂತ ಸಮಾಜವೊಂದರಲ್ಲಿ ಮೊದಲ ಆದ್ಯತೆ ಇರಬೇಕಾದದ್ದೇ ಚಾರಿತ್ರ್ಯಶುದ್ಧಿಗಾಗಿ. ಆಗ ಮಾತ್ರವೇ ಸಹಬಾಳ್ವೆ, ಸಹೋದರತೆಗಳು ಗಟ್ಟಿಯಾಗಿ ನೆಲೆಯೂರುವುದು; ಸಾಂಘಿಕ ತತ್ವ ಮತ್ತು ಸಮಷ್ಟಿಪ್ರಜ್ಞೆ ಬಲಗೊಳ್ಳುವುದು. Enterpreneurship ನಿಂತಿರುವುದೇ ಸಾಂಘಿಕ ತತ್ವದ ಮೇಲೆ. ಇದಕ್ಕೆ ವಿರುದ್ಧವಾದ್ದೇ ಪರಸ್ಪರ ಅಪನಂಬಿಕೆ ಮತ್ತು ಅನುಮಾನಗಳು. ಇವು ಹುಳ ಹತ್ತಿದ ಮರದಂತೆ; ಒಂದು ದಿನ ಕುಸಿಯುವುದೇ ದಿಟ! ಸಣ್ಣ ರಾಷ್ಟ್ರಗಳಾದ ಜಪಾನ್, ಇಂಗ್ಲೆಂಡ್ ಇತ್ಯಾದಿಗಳು ಕ್ರಮವಾಗಿ ಚೀನಾ, ರಷ್ಯಾಗಳನ್ನು ಯುದ್ಧದಲ್ಲಿ ಸೋಲಿಸಿದ್ದು, ಇಲ್ಲವೇ ಸಾರ್ವಭೌಮತ್ವಗಳನ್ನು ಸಾಧಿಸಿದ್ದು ಈ ಸಾಂಘಿಕ ಶಕ್ತಿಯಿಂದಲೇ. ಭಾರತ ಒಂದು ಸಹಸ್ರಮಾನದಷ್ಟು ಕಾಲ ಗುಲಾಮಿ ರಾಷ್ಟ್ರವಾಗಿ ತೊಳಲಾಡಿದ್ದು ಇದೇ ಶಕ್ತಿಯ ಕೊರತೆಯಿಂದ. ಇತಿಹಾಸದಿಂದ ಪಾಠಗಳನ್ನು ಕಲಿಯದಿದ್ದರೆ ಇತಿಹಾಸ ಮರುಕಳಿಸುತ್ತದೆ. ‘Eternal vigilance is the price for freedom’ ಎಂಬ ಮಹಾನ್ ಚರಿತ್ರಕಾರ ವಿಲ್ ಡ್ಯೂರಂಟರ ಎಚ್ಚರಿಕೆಯನ್ನು ಮರೆಯದಿರೋಣ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net