ಹಿಂದೂ… ಜ್ಞಾನಸಿಂಧು ಜಗದಬಂಧು..

Hindu
Published on
ಮತ್ತಾವುದೋ ದೇಶದ ಇತಿಹಾಸವನ್ನು ಬರೆದಂತೆ ಇಲ್ಲಿಯೂ ಕೊಡಹೊರಟಿದ್ದೇ ಆಧುನಿಕ ಪಾಶ್ಚಾತ್ಯ ಮತ್ತು ಸ್ಥಳೀಯ ಚರಿತ್ರಕಾರರು ಮಾಡಿದ ಅಕ್ಷಮ್ಯ ಅಪರಾಧ. ಇವರಲ್ಲಿ ಬಹಳಷ್ಟು ಜನ ತಿಳಿದಿರುವಂತೆ ಅದು ಬುದ್ಧನೊಂದಿಗೋ ಬೌದ್ಧ ಸಂಸ್ಕೃತಿಯೊಂದಿಗೋ ಪ್ರಾರಂಭವಾಗುವುದಿಲ್ಲ. ಬುದ್ಧ ಬರುವ ವೇಳೆಗೆ ಭಾರತ ಮತ್ತು ಅದರ ಧರ್ಮ ಪರಿಪೂರ್ಣತೆಯ ಹಂತ ತಲುಪಿಯಾಗಿತ್ತು.

‘ಹಿಂದೂ’, ಈ ಪದ ಇಂದು ಸುತ್ತಲಿನ ತಾಪಮಾನವನ್ನು ಹೆಚ್ಚಿಸಿದೆ. ಅದರ ಹಿನ್ನೆಲೆಯಲ್ಲಿ ಬೇರೆ ಬೇರೆ ಮೂಲಗಳಿಂದ, ದೃಷ್ಟಿಕೋನಗಳಿಂದ ಅದರ ವಿಶ್ಲೇಷಣೆಯೂ ನಡೆಯುತ್ತಿದೆ. ಯಾರು ಈ ಹಿಂದು? ಇಲ್ಲಿಯವನೋ? ಹೊರಗಿನವನೋ? ಗೌರವಾರ್ಹನೋ? ಗೌರವಹೀನನೋ? ಈ ಪ್ರಶ್ನೆಗಳೆಲ್ಲಾ ಸುದ್ದಿಯಲ್ಲಂತೂ ಇವೆ. ಬುದ್ಧಿಗಳು ರ್ತಸುತ್ತಿವೆ.

ಭಾರತಕ್ಕೆ ಸಂಬಂಧಿಸಿದ ಯಾವ ವಿಷಯವನ್ನೇ ಕುರಿತು ರ್ಚಚಿಸುವಾಗ ಅಂತಿಮ ನಿರ್ಣಯ ಕೊಡಬೇಕಾದವರು ಸ್ವಾಮಿ ವಿವೇಕಾನಂದರು ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕಾದ್ದು ಸತ್ಯವನ್ನೇ ತಿಳಿಯಬೇಕೆಂಬ ಹಂಬಲ ಮತ್ತು ಬದ್ಧತೆ ಇರುವ ಜಿಜ್ಞಾಸುಗಳಿಗೆ ಇರಬೇಕಾದ ಮೊದಲ ಅರ್ಹತೆ. ಈ ಪದದ ಬಗ್ಗೆ ಅವರ ನಿಲುವು ಏನಿತ್ತು ಎಂಬುದನ್ನು ತಿಳಿಯೋಣ. ‘ನಾನು ಹಿಂದೂ ಜನಾಂಗದ ಕನಿಷ್ಠ ವ್ಯಕ್ತಿಗಳಲ್ಲಿ ಒಬ್ಬನಾಗಿದ್ದೇನೆ. ಆದರೆ, ನನ್ನ ಮತ್ತು ಪೂರ್ವಜರ ಬಗ್ಗೆ ನನ್ನ ಜನಾಂಗದ ಬಗ್ಗೆ ನನಗೆ ಹೆಮ್ಮೆ ಇದೆ. ನನ್ನನ್ನು ಹಿಂದೂ ಎಂದು ಕರೆದುಕೊಳ್ಳಲು ಹೆಮ್ಮೆಪಡುತ್ತೇನೆ. ನಿಮ್ಮ ಅಯೋಗ್ಯ ಸೇವಕರಲ್ಲಿ ನಾನೂ ಒಬ್ಬ ಎಂದು ಹೆಮ್ಮೆಪಡುತ್ತೇನೆ. ನಾನೂ ನಿಮ್ಮ ದೇಶಬಾಂಧವ ಎಂದು ಹೆಮ್ಮೆಪಡುತ್ತೇನೆ. ನೀವು ಋಷಿಗಳ ವಂಶಸ್ಥರು! ನೀವು ಜಗತ್ತು ಕಂಡ ಅತ್ಯಂತ ಅದ್ಭುತವಾದ ಋಷಿಗಳ ವಂಶಸ್ಥರು!’

ಯಾವ ವ್ಯಕ್ತಿಯೂ ತನ್ನ ಜನಾಂಗದ ಬಗ್ಗೆ ಇದಕ್ಕಿಂತಲೂ ಭಾವತೀವ್ರತೆಯಿಂದ, ಹೃದಯಾಂತರಾಳದಿಂದ, ಪ್ರಾಮಾಣಿಕತೆ, ನಿರ್ವ್ಯಾಜಪ್ರೇಮ, ಮಮತೆ, ಹಮ್ಮುಬಿಮ್ಮುಗಳೆಡೆಗೆ ಮುಖಮಾಡಿದ ಹೆಮ್ಮೆಯಿಂದ ಮಾತಾಡಿರಲಾರ. ತಮ್ಮ ಜನಾಂಗ, ದೇಶ, ಸಂಸ್ಕೃತಿ ಇವುಗಳ ಬಗ್ಗೆ ಎಂದಿಗೂ ರಾಜಿ ಮಾಡಿಕೊಳ್ಳದ ಪೌರುಷಯುತ ನಿಲುವು ವಿವೇಕಾನಂದರದ್ದು. ದೇಶ, ಧರ್ಮಗಳ ಬಗ್ಗೆ ಅಪಮಾನ ಬಿಡಿ ಅಪಸ್ವರ ತೆಗೆದರೂ ಮುಟ್ಟಿ ನೋಡಿಕೊಳ್ಳುವಂತೆ ಪ್ರತಿಕ್ರಿಯಿಸುತ್ತಿದ್ದರು ಅವರು. ಷಿಕಾಗೋದಲ್ಲಿ ಅವರೊಂದಿಗೆ ಸ್ವಲ್ಪ ಕಾಲ ಕಳೆದಿದ್ದ ಆನ್ನಿಬೆಸೆಂಟ್ ಅವರು ವಿವೇಕಾನಂದರ ಪ್ರಖರ ವಾಗ್ಮಿತೆ, ಧೀರ ವ್ಯಕ್ತಿತ್ವಗಳ ಜತೆಗೆ ಅವರ ರಾಷ್ಟ್ರಪ್ರೇಮವನ್ನೂ ಕಂಡೇ ಬೆರಗಾಗಿದ್ದುದು. ಕಾರಣ ಇಷ್ಟೇ. ವಿವೇಕಾನಂದರಿಗೆ ಮಾತ್ರವೇ ಭಾರತ ಗೊತ್ತಿದ್ದುದು ಅಥವಾ ಇಂದಿನ ಸಂದರ್ಭಕ್ಕೆ ಅನ್ವಯಿಸುವಂತೆ ಹಿಂದೂವಿನ ನಿಜಚರಿತ್ರೆ ಗೊತ್ತಿದ್ದುದು. ಬೇರೆಯವರಿಗೆಲ್ಲ ಭಾರತ ಎಂದರೆ ಪರಕೀಯರಿಂದ ಆಳಲ್ಪಡುವುದಕ್ಕೇ ಹುಟ್ಟಿದ ರಾಷ್ಟ್ರ; ಇಲ್ಲಿಯ ಸಮಾಜವೆಂದರೆ ಅಸ್ಪೃ್ಯತೆ ಮತ್ತು ಸ್ತ್ರೀ ಅಸಮಾನತೆ; ಹಿಂದೂ ಸಂಸ್ಕೃತಿ ಎಂದರೆ ವಿಧವೆಯರ ಕಣ್ಣೀರು ಮತ್ತು ಬಾಲ್ಯವಿವಾಹ; ವೇದಗಳೆಂದರೆ ಪೌರೋಹಿತ್ಯಮತ್ತು ಮಡಿವಂತಿಕೆ; ಸಂನ್ಯಾಸವೆಂದರೆ ಅದೊಂದು ಜೀವನೋಪಾಯ...ಇಷ್ಟಕ್ಕೆ ಈ ಜ್ಞಾನ ಸೀಮಿತವಾಗಿತ್ತು. ಆದರೆ, ಮೇಲೆ ಹೇಳಿದ ಯಾವ ಸಮಸ್ಯೆಯೂ ವಿವೇಕಾನಂದರಿಗೆ ಕಾಣಲಿಲ್ಲವೆಂತೇನೂ ಅಲ್ಲ. ಈ ಸಮಸ್ಯೆಗಳು ಇದ್ದೇ ಇರಲಿಲ್ಲ ಅಂತಲೂ ಅಲ್ಲ. ಆದರೆ, ಅದು ನಿಜವಾದ ಭಾರತವೂ ಅಲ್ಲ; ನಿಜವಾದ ಹಿಂದೂ ಸಂಸ್ಕೃತಿಯೂ ಅಲ್ಲ ಎಂದು ವಿಶ್ಲೇಷಿಸುವ ಸಾಮರ್ಥ್ಯವಿತ್ತು ಅವರಿಗೆ. ನಮ್ಮೂರನ್ನು ನೋಡ ಬಂದ ಪ್ರವಾಸಿಗನಿಗೆ ನಾವು ತೋರಿಸಬೇಕಾದದ್ದು ಚರಂಡಿ, ಮೋರಿ, ಕೊಳಚೆ ಪ್ರದೇಶಗಳನ್ನಲ್ಲ; ವೈಶಿಷ್ಟ್ಯತೆ, ಆಶ್ಚರ್ಯಗಳನ್ನು ಜಾಗೃತಗೊಳಿಸುವ ಜಾಗಗಳನ್ನು ಎಂದು ತಿಳಿಯುವ ಪ್ರಬುದ್ಧತೆ, ಪ್ರಜ್ಞಾವಂತಿಕೆ ಅವರಲ್ಲಿತ್ತು. ಆದ್ದರಿಂದ ಸಿಂಹದಂತೆ ಘರ್ಜಿಸಿದ ಅವರು, ‘ನನ್ನನ್ನು ಹಿಂದೂ ಎಂದು ಕರೆಸಿಕೊಳ್ಳಲು ಹೆಮ್ಮೆಪಡುತ್ತೇನೆ. ನನ್ನ ಪೂರ್ವಜರ ಬಗ್ಗೆ ಹೆಮ್ಮೆ ಇದೆ. ಏಕೆಂದರೆ ಅವರಂಥ ಮಹಿಮಾವಂತರೇ ಯಾರೂ ಇಲ್ಲ’ ಎಂದು ಹೇಳಿದರು.

ಹಿಂದುವಿನ ಇತಿಹಾಸ ಪ್ರಜ್ಞಾವಂತಿಕೆಯ, ಪ್ರಬುದ್ಧತೆಯ ಇತಿಹಾಸ; ಸತ್ಯಾನ್ವೇಷಣೆ ಮತ್ತು ಅದರ ಸಹಜ ಫಲಗಳಾದ ಸೌಂದರ್ಯ, ವೈಶಾಲ್ಯ, ಏಕತೆ, ಶಾಂತಿ ಇವುಗಳನ್ನೊಳಗೊಂಡ ಜೀವನೋತ್ಸಾಹ ಮತ್ತು ಶಾಂತಿ ಸಮೃದ್ಧಿಗಳ ಇತಿಹಾಸ. ಮನುಷ್ಯ ಜನ್ಮದ ಭವ್ಯತೆ ಪೂರ್ಣತೆಗಳಿಗೆ ಯಾವುದರ ಕೊರತೆಯೂ ಆಗದಂತೆ ಗಮನಕೊಟ್ಟ ಮತ್ತು ತನ್ನ ತೆಕ್ಕೆಯೊಳಗೆ ಇಡೀ ವಿಶ್ವವನ್ನೇ ತಬ್ಬಿದ ಭ್ರಾತೃತ್ವದ ಇತಿಹಾಸ. ಇದನ್ನು ಕಾಣುವುದಕ್ಕೆ ಬೇಕಾಗಿರುವುದು ಪೂರ್ವಾಗ್ರಹರಹಿತ ಮನಸ್ಸು ಮತ್ತು ಸತ್ಯವನ್ನು ತಿಳಿಯಬೇಕು ಎಂಬ ಧೀರಯುತ ಧೋರಣೆ.

ಮತ್ತಾವುದೋ ದೇಶದ ಇತಿಹಾಸವನ್ನು ಬರೆದಂತೆ, ತೀರ್ಪಗಳನ್ನು ಕೊಟ್ಟಂತೆ ಇಲ್ಲಿಯೂ ಕೊಡಹೊರಟಿದ್ದೇ ಆಧುನಿಕ ಪಾಶ್ಚಾತ್ಯ ಮತ್ತು ಸ್ಥಳೀಯ ಚರಿತ್ರಕಾರರು ಮಾಡಿದ ಅಕ್ಷಮ್ಯ ಅಪರಾಧ ಮತ್ತು ಪ್ರಮಾದ. ಇವರಲ್ಲಿ ಬಹಳಷ್ಟು ಜನ ತಿಳಿದಿರುವಂತೆ ಅದು ಬುದ್ಧನೊಂದಿಗೋ ಬೌದ್ಧ ಸಂಸ್ಕೃತಿಯಂದಿಗೋ ಪ್ರಾರಂಭವಾಗುವುದಿಲ್ಲ. ಬುದ್ಧ ಬರುವ ವೇಳೆಗೆ ಭಾರತ ಮತ್ತು ಅದರ ಧರ್ಮ ಪರಿಪೂರ್ಣತೆಯ ಹಂತ ತಲುಪಿ ಎಷ್ಟೋ ಸಹಸ್ರಮಾನಗಳಾಗಿದ್ದವು. ಮಹಾಭಾರತ ಯುದ್ಧದಲ್ಲಿ ಬಳಸಿದ ಅಸ್ತ್ರಗಳು ಮತ್ತು ಅಲ್ಲೇ ಬರುವ ಉನ್ನತ ಜೀವನ ಮತ್ತು ಈ ಔನ್ನತ್ಯವನ್ನು ಸಾಧಿಸಿದ ವ್ಯಕ್ತಿಗಳ ಕುರಿತ ವಿಶ್ಲೇಷಣೆಗಳು ಸಂಭಾಷಣೆಗಳು ಇದಕ್ಕೆ ಇಂಬು ಕೊಡುತ್ತವೆ. ಯಾವ ಜನಾಂಗವೂ ಆರ್ಥಿಕ ಸಮೃದ್ಧಿ, ರಾಜಕೀಯ ಸ್ಥಿರತೆ (Economic affluance Political stability) ಸಾಧಿಸದೆ ಬೌದ್ಧಿಕ, ಸಾಂಸ್ಕೃತಿಕ, ಹಾಗೂ ಆಧ್ಯಾತ್ಮಿಕತೆಗಳ ಬಗ್ಗೆ ತಲೆಕೆಡಿಸಿಕೊಳ್ಳಲಾರದು. ಮನುಷ್ಯನ ಆದ್ಯತೆಗಳ ಪಟ್ಟಿಯಲ್ಲಿ ಕೊನೆಯಲ್ಲಿ ಬರುವುದೇ ಆಧ್ಯಾತ್ಮಿಕತೆ. ಈ ಆಧ್ಯಾತ್ಮಿಕತೆಗಳ ಮೂಲಸ್ರೋತವಾದ ಉಪನಿಷತ್ ದರ್ಶನ ಬುದ್ಧನ ಆವಿರ್ಭಾವದ ವೇಳೆಗೆ ಪೂರ್ತಿಯಾಗಿ ಮೈದಳೆದಿತ್ತು ಎಂದರೆ ಭಾರತ ಈಗಾಗಲೇ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಾಕಷ್ಟೇ ಅಭಿವೃದ್ಧಿ ಸಾಧಿಸಿತ್ತು ಎಂದರ್ಥ. ಭಾರತೀಯ ಜೀವನ ಪದ್ಧತಿ ಅಥವಾ ಹಿಂದೂ ಸಂಸ್ಕೃತಿ ಎಷ್ಟು ಹಳೆಯದ್ದೋ ಅಷ್ಟೇ ಶ್ರೇಷ್ಠತೆಯನ್ನೂ ಹೊಂದಿದೆ. ಜರ್ಮನಿಯ ಶೆಲೆಗಲ್ ಸಹೋದರರು (ಜರ್ಮನ್ ರೋಮ್ಯಾಂಟಿಸಿಸಂನ ಸ್ಥಾಪಕರು) ಜಿದ್ದಿಗೆ ಬಿದ್ದವರಂತೆ ಭಾರತವನ್ನು ಶ್ಲಾಘಿಸಿದ್ದಾರೆ. ತಮ್ಮಚರಿತ್ರಾರ್ಹ ಬರಹಗಳಲ್ಲಿ ಅವರು, ‘ಪ್ರತಿಯೊಂದಕ್ಕೂ ಮೂಲ ಭಾರತವೇ ಆಗಿದೆ. ಅಷ್ಟೇ ಅಲ್ಲ ಪ್ರತಿಯೊಂದರಲ್ಲೂ ಔನ್ನತ್ಯ ಅದರದ್ದೇ. ಸಂಸ್ಕೃತ ಭಾಷೆಯಿಂದ ಹಿಡಿದು ಯಾವುದನ್ನೇ ಪರಿಗಣಿಸಿದರೂ ನಮ್ಮ (ಗ್ರೀಕ್) ಪರಂಪರೆ ಅವರ ಮುಂದೆ ಹೋಲಿಕೆಗೂ ಅರ್ಹವಲ್ಲ’ ಎಂದಿದ್ದಾರೆ. ಭಾರತ ಕೇವಲ ಒಂದು ಭೌಗೋಳಿಕ ಪ್ರದೇಶವೆಂದು ಯಾರೂ ತಿಳಿಯಬಾರದು. ಜೀವಿ ಮಾನುಷಸ್ಥಿತಿಯನ್ನು ತಲುಪಿದಾಗ ಅದರ ಅತ್ಯಂತ ಶ್ರೇಷ್ಠ ಹಾಗೂ ಉತ್ಸಾಹಯುತ ಅಭಿವ್ಯಕ್ತಿಗೆ ಪೂರಕವಾದ ಪ್ರತಿಯೊಂದನ್ನೂ ನಿರ್ವಿುಸಿಕೊಂಡ ಎಲ್ಲವೂ ತಾನೇ ಆಗಿರುವ ಲೀಲಾಕ್ಷೇತ್ರ ಅದು ಎಂದು ಮತ್ತೊಬ್ಬ ಚಿಂತಕ ಹೇಳುತ್ತಾನೆ. ಸಂಸ್ಕೃತ ಭಾಷೆಯ ವೈವಿಧ್ಯತೆ ಮತ್ತು ವಿಸ್ತಾರಗಳು ಸಾಕಾರಗೊಂಡಿರುವ ‘ಅಭಿಜ್ಞಾನ ಶಾಕುಂತಲಂ’ ಮತ್ತು ರಾಮಾಯಣಗಳನ್ನು ಕುರಿತು ಪಾಶ್ಚಾತ್ಯರು ಆಡಿರುವ ಮಾತುಗಳು ಭಾಷಾಂತರಿಸುವುದಕ್ಕೇ ಕಷ್ಟವಾಗುತ್ತದೆ. ವೇದಗಳ ಒಂದು ವಾಕ್ಯವೇ ಪಾಶ್ಚಾತ್ಯ ಜಗತ್ತಿನ ಹಲವು ವಿಶ್ವವಿದ್ಯಾಲಯಗಳಿಗೆ ಸಮವಾಗುತ್ತದೆ. ಅಲ್ಲಿ ಸಂಕುಚಿತತೆ, ವೈಯಕ್ತಿಕ ನಿಲುವುಗಳು, ಆಕ್ಷೇಪಾರ್ಹ ಸಂಗತಿಗಳು, ಅಸಂಬದ್ಧತೆಗಳ ಸುಳಿವೇ ಇಲ್ಲದೆ ಚರಮಸತ್ಯತನ್ನ ಶುದ್ಧ ರೂಪವನ್ನು ಪೂರ್ಣಪ್ರಮಾಣದಲ್ಲಿ ಕಂಡುಕೊಂಡಿದೆ ಎಂದು ಒಬ್ಬರು ಹೇಳಿದರೆ, ‘ಇವುಗಳನ್ನು ಓದಿದ ದಿನದಿಂದಲೂ ಭಾರತವೇ ನನ್ನ ತಾಯ್ನಾಡು ಆಗಿಬಿಟ್ಟಿದೆ. ನಾನು ಪ್ರತಿ ಸಲ ಬರುವುದೂ ಇಲ್ಲಿ ಅದರ ಇನ್ನಷ್ಟು ಆಳವಾದ ಅಧ್ಯಯನದಲ್ಲಿ ತೊಡಗಲು’ ಎಂದು ಬಿಬಿಸಿ ಕಲಾವಿದರೊಬ್ಬರು ಹೇಳಿದ್ದಾರೆ. ಕೇವಲ ಭಾಷೆ, ಸಾಹಿತ್ಯ, ಕಲೆಗಳಿಗಷ್ಟೇ ಹಿಂದೂ ತನ್ನ ಸಾಧನೆಯನ್ನು ಸೀಮಿತಗೊಳಿಸಿಕೊಳ್ಳಲಿಲ್ಲ. ಆಧುನಿಕ ವಿಜ್ಞಾನ ಮತ್ತು ಅದರ ಅಧ್ಯಯನಗಳು ಉಪನಿಷತ್ತುಗಳನ್ನು ಶ್ಲಾಘಿಸಿದಾಗ ತಲೆಬಾಗಿ ಗೌರವಿಸಿದಾಗ ನಮ್ಮ ಬಗ್ಗೆ, ಪರಂಪರೆಯ ಬಗ್ಗೆ ಜಿಗುಪ್ಸೆಯಾಗಬೇಕೋ ಇಲ್ಲವೇ ಹೆಮ್ಮೆಯೆನಿಸಬೇಕೋ? ಇವೆಲ್ಲವನ್ನೂ ಸಾಧಿಸಿದ್ದು, ಪಾಶ್ಚಾತ್ಯರಿನ್ನೂ ನಾಗರಿಕತೆಯ ಹೊಸ್ತಿಲನ್ನು ಮುಟ್ಟದಿದ್ದ ಕಾಲದಷ್ಟು ಹಿಂದೆ. ಪೊ›. ಮ್ಯಾಕ್ಸ್ ಮುಲ್ಲರ್ ಐಸಿಎಸ್ ಪರೀಕ್ಷಾರ್ಥಿಗಳಿಗೆ ಭಾರತವನ್ನು ಕುರಿತು ಪಾಠ ಮಾಡುವಾಗ ಏನು ಹೇಳಿದ್ದರೆಂಬುದು ಪ್ರಸ್ತುತ. ಯಾವ ನಭದ ಕೆಳಗೆ ಮನುಷ್ಯನ ಮನಸ್ಸು ತನ್ನ ಅತ್ಯುನ್ನತ ಆವಿಷ್ಕಾರಗಳನ್ನು ಮಾಡಿದೆ; ಜೀವನದ ಅತಿ ಗಹನ ಸಮಸ್ಯೆಗಳ ಬಗ್ಗೆ ಅತ್ಯಂತ ಆಳವಾಗಿ ಚಿಂತನೆಯನ್ನು ಮಾಡಿದೆ ಮತ್ತು ಅವುಗಳೆಡೆಗೆ ಪ್ಲೇಟೋ, ಕ್ಯಾಂಟ್ ಇತ್ಯಾದಿ ಪಾಶ್ಚಾತ್ಯ ಚಿಂತಕರ ಸಾಕಷ್ಟು ಅಧ್ಯಯನಗೈದ ನಮ್ಮಂಥವರು ಕೂಡ ಗಂಭೀರವಾಗಿ ಪರಿಗಣಿಸಬಹುದಾದ ಪರಿಹಾರಗಳನ್ನು ಕಂಡುಕೊಂಡಿದೆ ಎಂದು ಯಾರಾದರೂ ನನ್ನನ್ನು ಪ್ರಶ್ನಿಸಿದರೆ ನಾನು ಭಾರತದೆಡೆಗೆ ಬೆಟ್ಟುಮಾಡುತ್ತೇನೆ ಮತ್ತು ಗ್ರೀಕ್, ರೋಮನ್, ಯಹೂದಿ ಚಿಂತನೆಗಳಲ್ಲಿ ಬೆಳೆದ ನಾವೆಲ್ಲ ನಮ್ಮ ಪ್ರಸ್ತುತ ಕೊರತೆಗಳನ್ನು ತುಂಬಿಕೊಳ್ಳಲು, ನಮ್ಮ ಜೀವನಗಳಲ್ಲಿ ಮತ್ತಷ್ಟು ಅರ್ಥ, ಮಹತ್ವ ಮತ್ತು ಪೂರ್ಣತೆಗಳು ನೆಲೆಗೊಳ್ಳುವಂತೆ ಮಾಡಲು ಅವಶ್ಯವಿರುವ ತಿದ್ದುಪಡಿಯನ್ನು ಯಾವ ಸಾಹಿತ್ಯದಿಂದ ಪಡೆಯಬೇಕು ಎಂದು ಕೇಳಿದರೆ ನಾನು ಬೆಟ್ಟು ಮಾಡುವುದು ಭಾರತದೆಡೆಗೆ. ತಮ್ಮ ಸಂಸ್ಕೃತಿಯ ಕೊರತೆಗಳನ್ನೆಲ್ಲ ನೀಗಿಸುವ Eternal Compensation ವೇದಗಳಲ್ಲಿ ಸಿಗುತ್ತದೆ ಎನ್ನುವ ಒಂದು ವಾಕ್ಯ ನಾನು ಇನ್ನೂ ಹೇಳಬೇಕಾಗಿದ್ದ ಆದರೆ ಹೇಳದೆ ಬಿಟ್ಟ ಎಲ್ಲವನ್ನೂ ತಿಳಿಸುತ್ತದೆ. ಮತ್ತೊಮ್ಮೆ ಹೇಳುತ್ತೇನೆ. ಯಾವ ಪಾಶ್ಚಾತ್ಯ ಸಂಸ್ಕೃತಿ, ಅಲ್ಲಿನ ಬರಹಗಳು, ಚಿಂತನೆಗಳು, ದೃಷ್ಟಿಕೋನಗಳು ಇಂದು ನಮಗೆ ದಾರಿದೀಪಗಳು ಎಂಬ ಭ್ರಾಂತಿಯಲ್ಲಿ ಕೆಲ ವರ್ಗಗಳಿವೆಯೋ ಆ ಸಂಸ್ಕೃತಿಯಲ್ಲಿನ ಕುಂದು ಕೊರತೆಗಳನ್ನು ನೀಗಿಸುವ ಶಾಶ್ವತ ಪರಿಹಾರ ಮನುಕುಲದ ಅತ್ಯಂತ ಹಳೆಯದಾದ ಭಾರತಜನ್ಯ ವೇದಗಳು.’ ಇದನ್ನು ಹೇಳಿದ್ದು ತನ್ನ ಇಡೀ ಜೀವಮಾನವನ್ನು (ಸುಮಾರು 40 ವರ್ಷಗಳಿಗೂ ಹೆಚ್ಚಾಗಿ) ವೇದಗಳ ಅಧ್ಯಯನದಲ್ಲಿ ಕಳೆದ ಮ್ಯಾಕ್ಸ್​ಮುಲ್ಲರ್. ಆಧುನಿಕ ಅಮೆರಿಕನ್ ಚಿಂತನ ವಲಯದ ಅತ್ಯಂತ ಪ್ರಭಾವಿ ಎಮರ್ಸನ್, ‘ನಾನು ವೈದಿಕನಾಗಿಬಿಟ್ಟಿದ್ದೇನೆ’ ಎಂದು ನಿರ್ಭಿಡೆಯಿಂದ ಬರೆದುಕೊಂಡ. ಗ್ರೀಸಿನ ರಾಣಿ ತನ್ನ ಶರೀರಕ್ಕೆ ಜನ್ಮ ಕೊಟ್ಟ ಗ್ರೀಸ್ ದೇಶಕ್ಕಿಂತ ಆತ್ಮನನ್ನು ಸೆಳೆಯುತ್ತಿರುವ ಭಾರತವೇ ತನ್ನ ನಿಜವಾದ ತವರುಮನೆ ಎಂದು ಘೊಷಿಸಿದ್ದಳು. ಇವೆಲ್ಲಕ್ಕೂ ಕಾರಣವಾದ್ದು ‘ಹಿಂದೂ ಜನಾಂಗ’, ಹಿಂದೂ ಧರ್ಮ ಮತ್ತು ಹಿಂದೂ ಸಂಸ್ಕೃತಿ. ಇದೆಲ್ಲಾ ಗೊತ್ತಿದ್ದುದರಿಂದಲೇ ಸ್ವಾಮಿ ವಿವೇಕಾನಂದರು ಹಿಂದೂ ಬಾಂಧವರನ್ನು ಕುರಿತು ‘ನಿಮ್ಮಲ್ಲೇ ಒಬ್ಬ ನಾನು ಎಂದು ಹೆಮ್ಮೆಪಡುತ್ತೇನೆ’ ಎಂದಿದ್ದರು.

ಇತ್ತೀಚಿನ ಕೆಲ ವ್ಯಕ್ತಿಗಳ ನಡವಳಿಕೆಗಳನ್ನು ಕಂಡರೆ ಅಸಹ್ಯವೆನಿಸುತ್ತದೆ. ರಾಜಕಾರಣದಲ್ಲಿ ಇರುವವರು, ಅಧಿಕಾರವನ್ನು ಹೊಂದಿರುವವರು ತಾವು ಸರ್ವಜ್ಞರಾಗಿಬಿಟ್ಟಿದ್ದೇವೆ ಎಂಬ ಭ್ರಮೆಯಿಂದ ಆಚೆಗೆ ಬರಬೇಕು. ಭಾರತೀಯ ಪ್ರಜಾಪ್ರಭುತ್ವವನ್ನು ಅಪ್ರಬುದ್ಧತೆಯ ತಂಗುದಾಣವಾಗಿಸುವಲ್ಲಿ ಇಂಥವರ ಕೊಡುಗೆ ಅಪಾರ. ಇಂಥ ವ್ಯವಸ್ಥೆಯನ್ನು ಪ್ರಜಾಪ್ರಭುತ್ವದ ಅಧ್ವರ್ಯು ಎಂದೇ ಪರಿಗಣಿಸಿಸಲ್ಪಟ್ಟ ಪ್ಲೇಟೋ ತನ್ನ The Republic ಪುಸ್ತಕದಲ್ಲಿ ಅನುಮೋದಿಸಲಿಲ್ಲ. ಅಮೆರಿಕಾದ ರಾಯಭಾರಿಯೊಬ್ಬಈ ಅವ್ಯವಸ್ಥೆಯನ್ನು ಕಂಡು I never found any democracy here; What I found was functional anarchy ಎಂದಿದ್ದ. ಗೌರವಾನ್ವಿತ ಸಂನ್ಯಾಸಿಗಳೊಬ್ಬರು ಹೇಳುತ್ತಿದ್ದರು, ‘ಮದ್ಯ ಕುಡಿಸಿ, ಮತ್ತು ಬರಿಸಿ, ಮತಿ ಕೆಡಿಸಿ ಮತವನ್ನು ಪಡೆದವನು ಮತಿವಂತನಾಗಿ ಆಳಬಲ್ಲನೇ?’ ಎಂದು. ಮತಿವಂತನಾಗಿ ಆಳಲು ಬಾರದಿದ್ದಲ್ಲಿ ಆ ದಿನಕ್ಕಾಗಿ ಕಾಯೋಣ. ಆದರೆ, ಮತಿವಂತನಾಗಿ ಮಾತನಾಡುವುದನ್ನೂ ಕಲಿಯಲಿಲ್ಲ ಎಂದರೆ ಹೇಗೆ?

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net