ಗುರು-ಶಿಷ್ಯರು ಮತ್ತು ಭ್ರಮರ ಕೀಟ ನ್ಯಾಯ...

Guru Purnime
Published on
ಒಂದು ಕೋಣೆಯಲ್ಲಿ ನೂರು ವರ್ಷಗಳಿಂದ ಕತ್ತಲಿದ್ದರೂ, ಬೆಳಕು ಬಂದ ಒಂದು ಕ್ಷಣಕ್ಕೆ ಕತ್ತಲೆ ಹೊರಟುಹೋಗುತ್ತದೆ. ಹಾಗೆಯೇ ಮನುಷ್ಯ ಸಾವಿರಾರು ಜನ್ಮಗಳಿಂದ ಅಜ್ಞಾನದಲ್ಲಿ ಮುಳುಗಿದ್ದರೂ ಗುರುಕೃಪೆ, ಭಗವತ್ಕೃಪೆ ಆದ ಕ್ಷಣಕ್ಕೆ ಮುಕ್ತಿ ಪಡೆಯುತ್ತಾನೆ ಎನ್ನುತ್ತಾರೆ ಶ್ರೀ ರಾಮಕೃಷ್ಣ ಪರಮಹಂಸರು.

‘ಗು’ ಶಬ್ದಸ್ತ್ವಂಧಕಾರಸ್ಯಾತ್ | ‘ರು’ ಶಬ್ದಸ್ತನ್ನಿರೋಧಕಃ |

ಅಂಧಕಾರ ನಿರೋಧಿತ್ವಾತ್ | ಗುರುಃ ಇತ್ಯಭಿಧೀಯತೇ||

‘ಗು’ ಎಂದರೆ ಅಂಧಕಾರ, ತಮೋಗುಣ, ಕತ್ತಲು ಅಥವಾ ದಡ್ಡತನ, ಅಜ್ಞಾನ. ‘ರು’ ಎಂದರೆ ಅದನ್ನು ನಾಶಮಾಡುವವನು. ಅಂಧಕಾರವನ್ನು ನಾಶಮಾಡುವವನನ್ನೇ ‘ಗುರು’ ಎಂದು ಕರೆಯುತ್ತೇವೆ. ಸತ್ಯದ ಪರಿಚಯ ಆಗದೇ ಇರುವಂಥಾದ್ದೇ ಅಂಧಕಾರ; ಸ್ಪಷ್ಟವಾಗಿ ನೋಡುವುದಕ್ಕೆ ಆಗದಿರುವ ಸಾಮರ್ಥ್ಯಹೀನತೆ; ವಸ್ತುವನ್ನು ಸರಿಯಾಗಿ ತಿಳಿಯಲಾಗದ ಬೌದ್ಧಿಕ ಅಪಕ್ವತೆ. ಗುರು ಈ ಅಂಧಕಾರವನ್ನು ಸರಿಸುತ್ತಾನೆ. ಅಲೆಕ್ಸಾಂಡರ್​ನ ಅಂಧಕಾರವನ್ನು ಅರಿಸ್ಟಾಟಲ್ ಒಂದು ರೀತಿಯಲ್ಲಿ ನಾಶಮಾಡಿದರೆ, ಅರ್ಜುನನ ಅಂಧಕಾರವನ್ನು ಭಗವದ್ಗೀತೆಯನ್ನೇ ಬೋಧಿಸಿ ನಾಶಮಾಡಿದ್ದು ಶ್ರೀಕೃಷ್ಣ. ನರೇಂದ್ರನ ನಾಸ್ತಿಕತೆ ಅಥವಾ ‘ದೇವರಿರುವನೇ?’ ಎಂಬ ಸಂಶಯವನ್ನು ಹೋಗಿಸಿದ್ದು ಶ್ರೀರಾಮಕೃಷ್ಣರು.

ಶ್ರೀಮಾತೆ ಶಾರದಾದೇವಿಯವರ ಬಗ್ಗೆ ಸೋದರಿ ನಿವೇದಿತಾ ಒಂದು ಕವನದಲ್ಲಿ ಬರೆಯುತ್ತಾಳೆ: ‘ಅಮ್ಮ ನೀವೆಷ್ಟು ಸರಳರು! ವಿನೀತರು! ಎಷ್ಟು ಸಂತತ್ವ ನಿಮ್ಮದು. ಎಷ್ಟು ಮೌನ. ನಿಮ್ಮ ಬಗ್ಗೆ ಒಂದು ವಾಕ್ಯ ಮಾತನಾಡಿದರೂ ಅದು ಗದ್ದಲವೇ!! ಮುಂಜಾವಿನ ಸೂರ್ಯನ ಬೆಳಕು, ಆಗ ತಾನೇ ಅರಳಿದ ಗುಲಾಬಿ, ತಂಪಾಗಿ ಹಿತವಾಗಿ ಬೀಸುವ ಮಂದಾನಿಲ, ಎಲ್ಲವೂ ಎಷ್ಟು ಮೌನ; ಹಾಗೆಯೇ ನೀವು ಅಮ್ಮ’ ಎಂದು. ಗುರುವೂ ಹೀಗೆಯೇ! ಎಲ್ಲಿಯೂ ಸದ್ದಿರುವುದಿಲ್ಲ. ವೇದೋಪನಿಷತ್ತುಗಳಲ್ಲಿ ಬರುವ ಮಹಾನ್ ಗುರು ಪರಂಪರೆಯ ಬಗ್ಗೆ ನಮಗೆ ತಿಳಿದೇ ಇಲ್ಲ. ಅಷ್ಟೇಕೆ ಸ್ವಯಂ ಸ್ವಾಮಿ ವಿವೇಕಾನಂದರೇ ಒಂದೆಡೆ ಸ್ಪಷ್ಟವಾಗಿ ಹೇಳುತ್ತಾರೆ- ‘ಈ ಜಗತ್ತಿನ ಅತ್ಯುನ್ನತ ಸ್ತರದಲ್ಲಿ ರಾರಾಜಿಸುವ, ಎಲ್ಲದಕ್ಕೂ ಮೇಲ್ಪಂಕ್ತಿಯನ್ನು ನಿರ್ವಿುಸಿದ ಬಹಳಷ್ಟು ಜನರು ನಮಗೆ ಗೊತ್ತೇ ಇಲ್ಲ. ಇತಿಹಾಸ ಗುರುತಿಸಿರುವುದು ಎರಡನೇ ಹಾಗೂ ಅದರ ಕೆಳಗಿನ ಸ್ತರಗಳನ್ನು ಮಾತ್ರ.’ ಆದರೆ, ಅವರ ಆದರ್ಶ ಎಷ್ಟು ಉನ್ನತಮಟ್ಟದ್ದು ಎಂದರೆ ಅವರೇ ಪರಮಾತ್ಮ ಸ್ವರೂಪರು, ಅವರೇ ಜ್ಞಾನದೀಪ್ತಿ.

ಗುರುವಿನ ಮೇಲಿನ ಅಪಾರ ಶ್ರದ್ಧೆಯಿಂದ ಯಾವ ಪರಿಶ್ರಮವೂ ಇಲ್ಲದೆ ಸ್ವಾಮಿ ಸುಬೋಧಾನಂದ ಎಂಬ ಸಾಕ್ಷಾತ್ ಶಿಷ್ಯರೊಬ್ಬರು ಶ್ರೀರಾಮಕೃಷ್ಣರಿಂದ ಆಧ್ಯಾತ್ಮಿಕ ಸಂಪತ್ತನ್ನು ಪಡೆದುಕೊಂಡರು. ಗುರುಗಳಾದ ಶ್ರೀ ಶಂಕರಾಚಾರ್ಯರ ಸೇವೆಯನ್ನು ಅಪಾರ ಶ್ರದ್ಧೆ- ನಿಷ್ಠೆಗಳಿಂದ ಮಾಡಿದ ತೋಟಕಾಚಾರ್ಯರು ಕೇವಲ ಅವರ ಕೃಪಾಕಟಾಕ್ಷದಿಂದ ಚರಮಜ್ಞಾನವನ್ನೇ ಪಡೆದುಕೊಂಡರು. ಶ್ರೀರಾಮಕೃಷ್ಣರು ಹೇಳುತ್ತಾರೆ, ‘ಒಂದು ಕೋಣೆಯಲ್ಲಿ ನೂರು ವರ್ಷಗಳಿಂದ ಕತ್ತಲಿದ್ದರೂ, ಬೆಳಕು ಬಂದ ಒಂದು ಕ್ಷಣಕ್ಕೆ ಕತ್ತಲೆ ಹೊರಟುಹೋಗುತ್ತದೆ. ಹಾಗೆಯೇ ಮನುಷ್ಯ ಸಾವಿರಾರು ಜನ್ಮಗಳಿಂದ ಅಜ್ಞಾನದಲ್ಲಿ ಮುಳುಗಿದ್ದರೂ ಗುರುಕೃಪೆ, ಭಗವತ್ಕೃಪೆ ಆದ ಕ್ಷಣಕ್ಕೆ ಆತ ಮುಕ್ತಿಯನ್ನು ಪಡೆಯುತ್ತಾನೆ’ ಎಂದು.

ಶಿಷ್ಯನ ಪಾಲಿಗೆ ಇಂಥ ಒಂದು ಸಂದರ್ಭ ಸೃಷ್ಟಿಯಾಗಬೇಕು ಎಂದರೆ ಸಾಧನೆ-ಭಜನೆ ಮಾಡಬೇಕು. ಸ್ವಯಂ ಪರಮಾತ್ಮ ನಾರದನಿಗೆ ಹೇಳುತ್ತಾನೆ, ‘ನಾನು ವೈಕುಂಠದಲ್ಲಿಯೋ ಮತ್ತೆಲ್ಲಿಯೋ ಇಲ್ಲ. ಎಲ್ಲಿ ನನ್ನ ಭಕ್ತರು ಭಕ್ತಿ, ಶ್ರದ್ಧೆಯಿಂದ ಹೃತ್ಪೂರ್ವಕವಾಗಿ ನನ್ನ ಮಹಿಮೆ ಹಾಡುತ್ತಿರುವರೋ ಅಲ್ಲಿ ನಾನು ಎಂದೆಂದಿಗೂ ಇದ್ದೇನೆ’. ಆದರೆ, ಆತನ ಮಹಿಮೆಯನ್ನು ತಿಳಿಯದೇ ಹಾಡಿ ಹೊಗಳುವುದು ಹೇಗೆ? ಅದಕ್ಕಾಗಿಯೇ ಭಗವಂತ ಅವತಾರವೆತ್ತಿ ಬಂದು, ಲೀಲೆಯಾಡಿ ತನ್ನ ಮಹಿಮೆಯನ್ನು ತಾನೇ ಪರಿಚಯ ಮಾಡಿಕೊಡುತ್ತಾನೆ. ರಾಮಾವತಾರವಾಗಿದ್ದು ಹನುಮಂತನ ಧ್ಯಾನಕ್ಕಾಗಿ ಒಂದು ವಸ್ತು ಬೇಕೆಂದು. ಕೃಷ್ಣಾವತಾರವಾಗಿದ್ದು ಗೋಪಿಯರು ಭಕ್ತಿ, ಪ್ರೇಮಗಳನ್ನು ಹರಿಸಲು ಒಂದು ವಸ್ತು ಬೇಕೆಂದು. ಹೀಗೆ ಭಗವಂತನ ಮಹಿಮೆಯನ್ನು ಹಾಡುತ್ತಾ ಆತನ ಕೃಪೆಯಾಗುತ್ತದೆ. ಭಗವಂತ ಹತ್ತಿರ ಬಂದ ತಕ್ಷಣವೇ ಕತ್ತಲು ಪೂರ್ಣವಾಗಿ ಹೊರಟುಹೋಗುತ್ತದೆ.

ಗುರು ಒಲಿದನೆಂದರೆ ತನಗೆ ತಿಳಿದಿರುವುದನ್ನೆಲ್ಲ ಶಿಷ್ಯನಿಗೆ ಕೊಟ್ಟುಬಿಡುತ್ತಾನೆ. ಗುರುವು ಯೋಗ್ಯ ಶಿಷ್ಯನಿಗೆ ಕಾಯುತ್ತಿರುತ್ತಾನೆ. ಯೋಗ್ಯ ಶಿಷ್ಯ ಯಾರು? ಯಾವ ಶಿಷ್ಯ ನಿರಂತರ, ಪ್ರಾಮಾಣಿಕವಾಗಿ ಗುರುವನ್ನು ಸೇವಿಸುತ್ತಾನೆಯೋ, ವಿಷಯಗಳನ್ನು ತಿಳಿಯಬೇಕೆಂದು ಉತ್ಸುಕನಾಗಿ, ಕಾತುರನಾಗಿ ಗುರುವನ್ನು ಪ್ರಶ್ನಿಸುತ್ತಾನೆಯೋ, ವಿನಯವಂತನೋ ಆತನ ಮೇಲೆ ಗುರುಕೃಪೆಯಾಗುತ್ತದೆ.

ಯಾವಾಗ ಗುರುವಿನ ಮೇಲೆ ವಿಶೇಷವಾದ ಭಕ್ತಿ ಶ್ರದ್ಧೆ ಉಂಟಾಗುತ್ತದೆಯೋ ಅಲ್ಲಿ ಮತ್ತೊಂದು ನಿಯಮ ಕೆಲಸ ಮಾಡುತ್ತದೆ. ಅದೇ ‘ಭ್ರಮರ ಕೀಟ ನ್ಯಾಯ’. ಅರ್ಥಾತ್ ಕೀಟವೊಂದು ಭ್ರಮರವನ್ನೇ ಕುರಿತು ಚಿಂತಿಸಿ ಚಿಂತಿಸಿ ತಾನೇ ಭ್ರಮರವಾಗಿಬಿಡುತ್ತದೆ. ವಿಜ್ಞಾನದ ಒಂದು ಉದಾಹರಣೆ ಕೊಡುವುದಾದರೆ, ಅಯಸ್ಕಾಂತದ ಸಂಪರ್ಕದಲ್ಲಿ ನಿರಂತರ ಇದ್ದ ಕಬ್ಬಿಣ ತಾನೂ ಅಯಸ್ಕಾಂತವಾಗಿ ಬಿಡುತ್ತದೆ. ಹಾಗೆಯೇ ಗುರುವಿನ ಭಾವ, ಮಹಿಮೆ, ಶಕ್ತಿಯನ್ನು ಮನಸ್ಸಿನಲ್ಲಿ ತುಂಬಿಕೊಂಡವನು ಆ ಗುರುಶಕ್ತಿಯನ್ನು ಸ್ವಯಂ ತಾನೇ ಪಡೆದುಕೊಂಡು ಗುರುವಿನ ಸ್ಥಾನಕ್ಕೆ ಏರುತ್ತಾನೆ.

ಪ್ರಕೃತಿಯೇ ನಿರಂತರ ನೂರಾರು ಪ್ರಯೋಗಗಳಲ್ಲಿ ತೊಡಗಿರುತ್ತಾಳೆ ಮತ್ತು ಆ ಪ್ರಯೋಗಗಳ ಮೂಲಕ ನಮ್ಮನ್ನು ಪ್ರಚೋದಿಸುತ್ತಿರುತ್ತಾಳೆ ಕೂಡ. ಅವಳೂ ಒಂದು ಮಹಾನ್ ಗುರುವೇ. ನ್ಯೂಟನ್ನನಿಗೆ ಗುರುತ್ವಾಕರ್ಷಣ ಸಿದ್ಧಾಂತವನ್ನು ಬೋಧಿಸಿದ್ದು ಪ್ರಕೃತಿಯ ಶಿಶು; ಸೇಬಿನ ಮರ. ಹಾಗೆಯೇ ಸಿ.ವಿ. ರಾಮನ್ನರ ಸುಪ್ರಸಿದ್ಧ ‘ರಾಮನ್ ಎಫೆಕ್ಟ್’ ಜನ್ಮತಾಳಿದ್ದು ಅವರು ಹಡಗಿನಲ್ಲಿ ಸಂಚರಿಸುತ್ತಿದ್ದ ಕಾಲದಲ್ಲಿ ಆಕಾಶವನ್ನು ಕುತೂಹಲದಿಂದ ನೋಡಿ ಮತ್ತು ಅಧ್ಯಯಿನಿಸಿ. ಬೌದ್ಧ ಧರ್ಮ ಜನಿಸಿದ್ದೇ ಸಿದ್ಧಾರ್ಥ ಪ್ರಕೃತಿಯಲ್ಲಿ ಪ್ರತಿನಿತ್ಯ ಸಂಭವಿಸುವ ಮೃತ್ಯು, ಕಾಯಿಲೆ, ಮುಪ್ಪುಗಳನ್ನು ಕಂಡು ತಳಮಳಗೊಂಡಾಗ. ‘ಈ ಶಿಸ್ತನ್ನು ನೀವು ಎಲ್ಲಿಂದ ಕಲಿತದ್ದು?’ ಎಂದು ಶಿಸ್ತಿನ ಸಿಪಾಯಿ, ಜರ್ಮನ್ ಏಕೀಕರಣದ ರೂವಾರಿ ಒಟ್ಟೊಮನ್ ಬಿಸ್ಮಾರ್ಕ್ ಅವರನ್ನು ಯಾರೋ ಒಬ್ಬರು ಪ್ರಶ್ನಿಸಿದಾಗ ಅವರು ಹೇಳಿದು, ‘ಇರುವೆಗಳಿಂದ’ ಎಂದು. ಗಮನಿಸುವ ಸಾಮರ್ಥ್ಯವಿದ್ದರೆ ಅದೆಷ್ಟೋ ಪಾಠಗಳನ್ನು ಪ್ರಕೃತಿ ಪ್ರತಿನಿತ್ಯ ನಮಗೆ ಕಲಿಸಬಲ್ಲದು. ಆದ್ದರಿಂದಲೇ ಉಪನಿಷತ್ ತನ್ನ ಶಿಷ್ಯಪರಂಪರೆಗೆ ಬೋಧಿಸುತ್ತದೆ, ‘ನಮ್ಮ ಕಿವಿಗಳು ಪಟುತ್ವದಿಂದಿರಲಿ, ಚುರುಕಾಗಿರಲಿ; ನಮ್ಮ ಕಣ್ಣುಗಳು ಮತ್ತು ಇನ್ನಿತರ ಅಂಗಗಳೂ ಕೂಡ ಹೀಗೆ ಪ್ರತಿನಿತ್ಯವೂ ಪ್ರಾರ್ಥಿಸಬೇಕು’ ಎಂದು. ನಮ್ಮ ಮನಸ್ಸು ನಮ್ಮ ಗುರುವಾಗುವುದಕ್ಕೆ ಸಿದ್ಧವಿಲ್ಲದಿದ್ದಲ್ಲಿ ಬೇರೆ ಅಥವಾ ಬಾಹ್ಯ ಗುರುಗಳಿಂದ ಅಷ್ಟೇನೂ ಪ್ರಯೋಜನವಾಗುವುದಿಲ್ಲ.

ಭಾಗವತದಲ್ಲಿ ಬರುವ ಬ್ರಹ್ಮಜ್ಞಾನಿ ಅವಧೂತನಿಗೆ ಪ್ರಕೃತಿಯ ಇಪ್ಪತ್ನಾಲ್ಕು ಅಂಶಗಳೇ ಇಪ್ಪತ್ನಾಲ್ಕು ಗುರುಗಳಾಗಿ ಪ್ರಚೋದನೆಗಳನ್ನು ನೀಡಿದ್ದು ಲೋಕವಿದಿತ. ಆದರೆ, ಇಂತಹ ಗ್ರಹಿಕಾ ಸಾಮರ್ಥ್ಯ ಸುಮ್ಮಸುಮ್ಮನೆ ಜಾಗೃತವಾಗುವುದಿಲ್ಲ. ಮನಸ್ಸಿನ ನಿಗ್ರಹ, ಇಂದ್ರಿಯ ನಿಗ್ರಹ ಗಳಿಂದ ಕೂಡಿದ ಶಿಸ್ತುಬದ್ಧ ತತ್ವಬದ್ಧ ಜೀವನ ಮತ್ತು ಸಂಸ್ಕೃತಿಗಳು ಮಾತ್ರ ಇದನ್ನು ನಮಗೆ ನೀಡಬಲ್ಲವು. ಆದ್ದರಿಂದ ಸನಾತನ ಸಂಸ್ಕೃತಿ ನಾಲ್ಕು ರೀತಿಯ ಗುರುಗಳನ್ನು ನಮ್ಮ ಮುಂದೆ ಇಡುತ್ತದೆ- ಆಚಾರ್ಯ, ಸ್ವಯಂ ನಮ್ಮ ಮನಸ್ಸು, ನಮ್ಮ ಮೇಲಾಗುವ ಪ್ರಭಾವಗಳು ಹಾಗೂ ಪ್ರಕೃತಿ.

ಜೊತೆಜೊತೆಗೆ ನಾವು ತಿಳಿಯಬೇಕಾದ್ದು ಅನುಭವವನ್ನು ಮೀರಿಸಿದ ಗುರುವೇ ಇಲ್ಲ. ಯಾವ ಗುರುವಿನ ಉಪದೇಶವೂ ನಮಗೆ ನಾಟದಿರಬಹುದು. ಆದರೆ, ಅನುಭವ ಅದರಲ್ಲೂ ‘ಕಹಿ ಅನುಭವ’ ಎಂಬ ಗುರು ಕಲಿಸಿದ ಪಾಠವನ್ನಂತೂ ನಾವು ಎಂದಿಗೂ ಮರೆಯಲಾರೆವು. ಈ ‘ಕಹಿ ಅನುಭವ’ ಬಂದಿದ್ದು ಸೂಕ್ಷ್ಮಗ್ರಹಿಕೆಯ ಅಭಾವದಿಂದ. ವಸ್ತು ಅಥವಾ ವ್ಯಕ್ತಿಯನ್ನು ಹೇಗಿದ್ದಾನೋ ಹಾಗೆ ತಿಳಿಯದೆ ಬೇರೊಂದು ರೀತಿಯಲ್ಲಿ ತಿಳಿದಿದ್ದರಿಂದ. ಈ ಅನ್ಯಥಾಗ್ರಹಿಕೆಯ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡಿದ್ದರಿಂದ. ಇನ್ನೂ ಹೇಳಬೇಕೆಂದರೆ ವ್ಯಕ್ತಿ ಇಲ್ಲವೇ ಘಟನೆಯ ಬಗ್ಗೆ ಪೂರ್ಣಸತ್ಯವನ್ನು ತಿಳಿಯಲಶಕ್ತರಾದ್ದರಿಂದ. ಈ ಹಿನ್ನೆಲೆಯಲ್ಲೇ ನಾವು ಗಮನಿಸಬೇಕು ಕೃಷ್ಣ ಯುದ್ಧ ಮಾಡಬೇಕೆಂದು ಅರ್ಜುನನಿಗೆ ಏಕೆ ಹೇಳಿದ ಎಂದು. ಹೊರನೋಟಕ್ಕೆ ಅದು ‘ಹಿಂಸಾಪ್ರಚೋದಕ’ ಎನ್ನಬಹುದು. ಆದರೆ, ಅರ್ಜುನನ ಅಹಿಂಸಾತತ್ವ ಭಾವಜನ್ಯ; ಬುದ್ಧಿಯ ಪಕ್ವತೆಯಲ್ಲಿ ಹುಟ್ಟಿದ ದಯಾಭಾವ ಅಲ್ಲ. ಪ್ರಜ್ಞಾಜನ್ಯ, ವಿವೇಕಜನ್ಯ ಅಲ್ಲ ಎಂಬುದು ಕೃಷ್ಣನಿಗಷ್ಟೆ ಗೊತ್ತು. ಏಕೆಂದರೆ ಈ ಹಿಂದೆ ನೂರಾರು ಸಂದರ್ಭದಲ್ಲಿ ಯುದ್ಧ ಮಾಡಿದ ಅರ್ಜುನನಿಗೆ ಈಗ ಮಾತ್ರ ಏಕೆ ಕರುಣೆ ಉಕ್ಕಿ ಬರುತ್ತದೆ? ಬಂಧುಗಳ ವಿರುದ್ಧ ಹೋರಾಡಬೇಕೆನ್ನುವ ಕಾರಣದಿಂದ. ಆದ್ದರಿಂದಲೇ ‘ಗುರು’ ಮಾತ್ರ ನಮ್ಮನ್ನು ಸನ್ಮಾರ್ಗದಲ್ಲಿ ಇರಿಸಬಲ್ಲ; ನಮ್ಮ ಪೂರ್ವಾಪರ ಮತ್ತು ಸುಪ್ತದೌರ್ಬಲ್ಯಗಳನ್ನು ತಿಳಿಸಿಕೊಟ್ಟು.

ಗುರು ತಪಸ್ವಿಯಾಗಿರದಿದ್ದರೆ ಈ ಸಾಮರ್ಥ್ಯ ಬರುವುದಿಲ್ಲ. ಸ್ವಯಂ ತಾವೇ ಮಹಾಗುರುವಾಗಿದ್ದ ಶ್ರೀ ಶಂಕರಾಚಾರ್ಯರು ಗುರುವಿನ ಲಕ್ಷಣಗಳನ್ನು ನಿರೂಪಿಸಿದಾಗ ಅಲ್ಲಿ ಎದ್ದು ಕಾಣುವುದೇ ಅವನು ‘ಬ್ರಹ್ಮವಿತ್ತಮಃ’ ಎಂಬುದು. ಅಷ್ಟೇ ಸಾಲದು, ಅವನು ವೇದಸಾರವನ್ನು ಬಲ್ಲವನಾಗಿರಬೇಕು, ಪಾಪರಹಿತನಾಗಿರಬೇಕು, ಆಸೆಗಳನ್ನು ಗೆದ್ದಿರಬೇಕು, ಬ್ರಹ್ಮದಲ್ಲೇ ನೆಲಸಿ (ಅನಂತತೆಯಲ್ಲಿ) ನಿರಂತರ ಶಾಂತಿ ಅನುಭವಿಸುವ ಸ್ಥಿತಿಯಲ್ಲಿರಬೇಕು. ಯಾವ ಕಾರಣವೂ ಇಲ್ಲದೆ ಶಿಷ್ಯನನ್ನು ಆಳವಾಗಿ ಪ್ರೀತಿಸುವ ‘ದಯಾಸಿಂಧು’ ಆಗಿರಬೇಕು. ಹತ್ತಿರ ಬಂದವರಿಗೆ ಜ್ಞಾನ ಕೊಡುವ ವಿಶಾಲ ಮನಸ್ಸಿರಬೇಕು (ಏನನ್ನೂ ಬಯಸದೆ). ಆಧುನಿಕ ಯುಗದಲ್ಲಿ ಇದಕ್ಕೆ ಹೇಳಿಮಾಡಿಸಿದ ಉದಾಹರಣೆ ಎಂದರೆ ಭಗವಾನ್ ಶ್ರೀ ರಾಮಕೃಷ್ಣರು.

ಗುರು-ಶಿಷ್ಯ ಸಂಬಂಧವೆನ್ನುವುದು ಪತಿವ್ರತೆ-ಪತಿಯ ಸಂಬಂಧ ಇದ್ದಹಾಗೆ. ಆ ಪರಿಯ ಏಕನಿಷ್ಠೆ ಅಲ್ಲಿರಬೇಕು. ‘ನನ್ನ ಗುರು ಹೆಂಡ ಕುಡುಕನಾಗಿದ್ದರೂ ನನ್ನ ಪಾಲಿಗಂತೂ ನಿತ್ಯಾನಂದರಾಯನೇ’ ಎನ್ನುತ್ತಿದ್ದರು ಶ್ರೀ ರಾಮಕೃಷ್ಣರು. ಯಾವುದೇ ಗುರು (ಆಧ್ಯಾತ್ಮಿಕ ಜೀವನಕ್ಕೆ ಸಂಬಂಧಿಸಿದಂತೆ) ತನ್ನ ವಲಯಕ್ಕೆ ಸೇರಿದವರನ್ನು ಮಾತ್ರ ಶಿಷ್ಯರನ್ನಾಗಿ ಸ್ವೀಕರಿಸುತ್ತಾನೆ. ಬ್ರಹ್ಮಚೈತನ್ಯ ಮಹಾರಾಜರು ಶ್ರೀರಾಮಕೃಷ್ಣರನ್ನು ಗುರುವಾಗಿ ಪಡೆಯಲು ಬಳಿ ಸಾರಿದಾಗ ಅವರು, ‘ನಾನು ನಿನ್ನ ಗುರುವಲ್ಲ; ಬೇರೆ ಇದ್ದಾರೆ’ ಎಂದು ಹೇಳಿ ಮಹಾತ್ಮ ತುಕಾಮಾಯರೆಡೆಗೆ ಅವರನ್ನು ಕಳಿಸಿದ್ದರು. ಹಾಗೆಯೇ ವಿವೇಕಾನಂದರೂ ಅಮೆರಿಕದಲ್ಲಿ ಹಲವು ಭಕ್ತರಿಗೆ ಹೇಳಬೇಕಾಯಿತು. ಹಾಗೆಂದು ಗುರು ಮಾಡಿದ್ದೆಲ್ಲಾ ಸರಿ, ಗುರು ಹೇಳಿದ್ದೆಲ್ಲಾ ಸರಿ, ಎರಡನೇ ಮಾತಿಲ್ಲದೆ ಒಪ್ಪಿಕೋ ಎಂದೇನೂ ಸನಾತನ ಸಂಸ್ಕೃತಿ ಹೇಳುವುದಿಲ್ಲ. ಗುರುವಿನ ವ್ಯಕ್ತಿತ್ವ ಮತ್ತು ಗುರೂಪದೇಶ ಎರಡನ್ನೂ ಪರೀಕ್ಷಿಸಬೇಕು. ಪರೀಕ್ಷಿಸಿಯೇ ಒಪ್ಪಿಕೊಳ್ಳಬೇಕು ಎಂತಲೇ ಅದು ಹೇಳುವುದು. ಆದರೆ, ಒಮ್ಮೆ ಒಪ್ಪಿಕೊಂಡ ಮೇಲೆ ಪತಿವ್ರತೆಯಂತೆ ಇನ್ನು ಬದಲಿಸುವಂತಿಲ್ಲ.

ಗುರುಭಕ್ತಿಯ ಶಕ್ತಿ ಅಪಾರ ಅಸದಳ. ಕರ್ಣ, ಅರ್ಜುನನಿಗಿಂತಲೂ ಹಲವು ಪಟ್ಟು ಪರಾಕ್ರಮಿ. ಇದರಲ್ಲಿ ಸಂಶಯವೇ ಇಲ್ಲ (ಇಲ್ಲದಿದ್ದಲ್ಲಿ ಅರ್ಜುನನ ಕೈಮೇಲಾಗುವಂತೆ ಮಾಡಲು ಕೃಷ್ಣ ನೂರೆಂಟು ಉಪಾಯಗಳನ್ನು ಹೂಡಬೇಕಾದ ಅವಶ್ಯಕತೆ ಇರಲಿಲ್ಲ). ಆದರೂ ಕೊನೆಗೆ ಅರ್ಜುನನೇ ಗೆದ್ದ. ಇದಕ್ಕೆ ಒಂದೇ ಕಾರಣ ಅವನಿಗೆ ‘ಗುರುಕೃಪೆ’ ಇತ್ತು ಮತ್ತು ಕರ್ಣನಿಗೆ ‘ಗುರುಶಾಪ’ ಇತ್ತು. ಇಂತಹ ಮಹಾಮಹಿಮ ಮಹಾಗುರುವಿನ ಕೃಪೆ ನಮ್ಮನಿಮ್ಮೆಲ್ಲರಿಗೂ ನಿರಂತರ ಇರಲಿ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net