

ಭಾರತೀಯ ಪರಂಪರೆಯಲ್ಲಿ ‘ಸ್ತ್ರೀ’ಗೆ ಇರುವಷ್ಟು ಮಹತ್ವ ಮತ್ತೆಲ್ಲೂ ಕಾಣಸಿಗದು. ಇದನ್ನು ತಿಳಿಯಲು ವೇದಗಳನ್ನೇ ಹೊಕ್ಕಬೇಕು. ನಮ್ಮೆಲ್ಲ ಆಚಾರ-ವಿಚಾರಗಳಿಗೂ ವೇದಗಳೇ ಮೂಲ. ಅವೇ ಆಧಾರ; ಅವೇ ಶೃತಿ. ಸ್ಮೃತಿ- ಮನುಸ್ಮೃತಿ ಇತ್ಯಾದಿ- ಎಂದಿಗೂ ನಮಗೆ ಆಧಾರವಲ್ಲ. ಆಧುನಿಕ ವಿದ್ವಾಂಸರು ಮೂಲಭೂತವಾಗಿ ಮತ್ತು ಸಾರ್ವತ್ರಿಕವಾಗಿ ಎಡವುತ್ತಿರುವುದು ಇಲ್ಲಿ. ಯಾವುದೇ ಸ್ಮ ೃಯ ಪ್ರಸ್ತುತತೆ ಕಾಲದ ಮಿತಿಯುಳ್ಳದ್ದು. ಆದ್ದರಿಂದಲೇ ನೂರಾರು ಸ್ಮ ೃಗಳು ಬಂದಿವೆ. ಆದರೆ ವೇದ ಒಂದೇ. ಏಕೆಂದರೆ ಅದು ಕಾಲಾತೀತ; ದೇಶಾತೀತ. ವೇದಗಳ ಮೊದಲ ನಾಲ್ಕುನೂರು ಋಷಿಗಳಲ್ಲಿ ಇಪ್ಪತ್ತು ಜನ ಸ್ತ್ರೀಯರು. ಅವರೆಲ್ಲ ತಪಸ್ವಿಗಳು, ಮಂತ್ರದೃಷ್ಟಾರರು, ಅವರ ಚಿಂತನೆ, ಸಂಶೋಧನೆಗಳು, ಮಂತ್ರಗಳು ಪ್ರಶ್ನಾತೀತ! ಏಕೆಂದರೆ ಸಾವಿರಸಲ- ಸಾವಿರ ರೀತಿಯಲ್ಲಿ ಪ್ರಶ್ನಿಸಲ್ಪಟ್ಟು ಸತ್ಯವೆಂದು ಸಾಬೀತಾಗಿರುವಂಥದ್ದು, ಈಗಲೂ ಯಾರೂ ಪ್ರಶ್ನಿಸಬಹುದು, ಪರೀಕ್ಷಿಸಬಹುದು, ಈ ಸ್ತ್ರೀಯರು ನಾರೀಕುಲದ ಶಿರೋಮಣಿಗಳು. ಚರಮಸತ್ಯವನ್ನು ಅನುಭವಿಸಿದವರು, ಮಂತ್ರಗಳನ್ನು ಕಂಡುಹಿಡಿದು ಮುಂದಿನ ತಲೆಮಾರುಗಳಿಗೆ ಬಳುವಳಿಯಾಗಿತ್ತವರು. ವೇದಕಾಲದಲ್ಲಿ ಸ್ತ್ರೀಯೊಬ್ಬಳಿಗೆ ಉಪನಯನವೂ ಇತ್ತು, ವೇದಾಧ್ಯಯನವೂ ಇತ್ತು. ಗುರುಕುಲಗಳಲ್ಲಿ ಬಾಲಕರೊಡನೆಯೋ, ಪ್ರತ್ಯೇಕವಾಗಿಯೋ ಶಿಕ್ಷಣವನ್ನು ಪಡೆಯುತ್ತಿದ್ದರು ಮತ್ತು ಶಿಕ್ಷಕಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಇವರಿಗೆ ‘ಉಪಾಧ್ಯಾಯಾ’ ಎಂಬ ಹೆಸರಿರುತ್ತಿತ್ತು. ಕಠಿಣ ಸುಲಭಗ್ರಾಹ್ಯವಲ್ಲದ ವಿಷಯಗಳಲ್ಲೂ ಪಾಂಡಿತ್ಯವನ್ನು ಸಾಧಿಸುತ್ತಿದ್ದುದಲ್ಲದೆ ಗುರುಕುಲಗಳ ಆಡಳಿತಯಂತ್ರವನ್ನೂ ಅವರೇ ನಿಭಾಯಿಸುತ್ತಿದ್ದರು. ಲೋಪಾಮುದ್ರಾ, ವಿಶ್ವಾವರಾ, ಘೊಷಾ, ನಿವಾವರಿ, ಸಿಕತಾ ಇತ್ಯಾದಿಗಳು ಮೊದಲ ವರ್ಗಕ್ಕೆ ಸೇರಿದ್ದರೆ ಸುಪ್ರಸಿದ್ಧ ವಸಿಷ್ಠ ಮಹರ್ಷಿಯ ಪತ್ನಿ ಅರುಂಧತಿ ಎರಡನೇ ವರ್ಗದವಳು.
ಸೀತೆಯ ವಿವಾಹದ ಕಾಲದಲ್ಲಿ ಜನಕರಾಜ ಮಗಳನ್ನು ಧಾರೆಯೆರೆಯುವಾಗ ‘ಅಯಂ ಸೀತಾ ಮಮ ಸುತಾ ಸಹಧರ್ಮಚಾರಿಣೀ ತವ. ಅರ್ಥಾತ್ ಈ ನನ್ನ ಮಗಳು ಸೀತೆ ನಿನ್ನ ಸಕಲ ಕಾರ್ಯಗಳಲ್ಲೂ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸುತ್ತಾಳೆ’ ಎನ್ನುವ ಸುಪ್ರಸಿದ್ಧ ಮಾತು ಅಂದಿನ ಗೃಹಸ್ಥಧರ್ಮ ಅಥವಾ ವೈವಾಹಿಕ ವ್ಯವಸ್ಥೆಯ ಮೂಲತತ್ವವಾಗಿತ್ತು. ಸೀತೆಗೆ ಉಪನಯನವಾಗಿತ್ತು. ಕೌಸಲ್ಯೆಗೆ ವೇದಾಧ್ಯಯನವಾಗಿ ಪ್ರತಿನಿತ್ಯವೂ ಮಂತ್ರಗಳನ್ನು ತಾನೆ ಉಚ್ಚರಿಸಿ ಯಜ್ಞ ಮಾಡುತ್ತಿದ್ದಳು. ಅರಮನೆಯಲ್ಲಿ ಯಾಗಶಾಲೆ ಮತ್ತು ವೇದ ಪಾಠಶಾಲೆ ಇತ್ತು. ಪತಿಯ ಎಲ್ಲ ಕಾರ್ಯಗಳಲ್ಲೂ ಅವಳು ಸಹಭಾಗಿನಿ. ಕೈಕೇಯಿ ದಶರಥನೊಂದಿಗೆ ಯುದ್ಧಗಳಲ್ಲಿ ಭಾಗವಹಿಸುತ್ತಿದ್ದಳು.
ಪತಿ ಗೃಹವರ್ಮನನ್ನು ಕಳೆದುಕೊಂಡ ರಾಜ್ಯಶ್ರೀ ತನ್ನ ಅಣ್ಣ ಹರ್ಷವರ್ಧನನ ಸಲಹೆಯಂತೆ ನಳಂದ ವಿಶ್ವವಿದ್ಯಾಲಯದ ಕುಲಪತಿಯಾಗಿ ದಕ್ಷತೆಯಿಂದ ಕಾರ್ಯನಿರ್ವಹಿಸಿದಳು. ಅಷ್ಟೇಕೆ ಇಂದೋರಿನ ಅಹಲ್ಯಾಬಾಯಿ ಹೋಳ್ಕರ್, ಮಹಾರಾಷ್ಟ್ರದ ಅನೂಬಾಯಿ ಘೊರ್ಪಡೆ, ಕೊಲ್ಹಾಪುರದ ತಾರಾದೇವಿ, ಝಾನ್ಸಿಯ ಲಕ್ಷ್ಮೀಬಾಯಿ ಇವರೆಲ್ಲ ಯಾವ ರಾಜಪುರುಷನಿಗೂ ಕಡಿಮೆಯಿಲ್ಲದಂತೆ ರಾಜ್ಯಾಡಳಿತದಲ್ಲಿ ದಕ್ಷತೆಯನ್ನು ಮೆರೆದವರು. ಇವರ ಆಡಳಿತವೈಖರಿ ಗಮನಿಸಿದ ಬ್ರಿಟಿಷ್ ಗವರ್ನರೊಬ್ಬರು ಇಂಗ್ಲೆಂಡಿನ ಸುಪ್ರಸಿದ್ಧ ಚಿಂತಕ ಜಾನ್ ಸ್ಟುವರ್ಟ್ ಮಿಲ್ಗೆ ಬರೆದ ಪತ್ರದಲ್ಲಿ ರಾಣಿಯರ ಆಡಳಿತದಲ್ಲಿನ ರಾಜ್ಯಗಳು ದಕ್ಷತೆ, ಆರ್ಥಿಕ ಶಿಸ್ತು, ಸಮೃದ್ಧಿಗಳಿಗೆ ಹೆಸರಾಗಿವೆ ಎಂದು ಪ್ರಶಂಸಿಸಿದ್ದರೆ, ರಾಣಾಸಿಂಗನ ಸತಿ ಕರ್ಣಾವತಿ ಮತ್ತು ನಮ್ಮದೇ ಕಿತ್ತೂರಿನ ಚೆನ್ನಮ್ಮ ಧೈರ್ಯ-ಶೌರ್ಯಗಳಿಗೆ ಹೆಸರಾಗಿರುವುದು ಸ್ಪಷ್ಟ ಮತ್ತು ಪ್ರಶ್ನಾತೀತ.
ಮುಂದುವರಿದಂತೆ ಮಹಾಭಾರತದಲ್ಲಿನ ದ್ರೌಪದಿ ನಮ್ಮ ಕಣ್ಮುಂದೆ ನಿಲ್ಲುತ್ತಾಳೆ. ಅವಳ ಕ್ಷಾತ್ರತೇಜಸ್ಸು ಆಗಾಗ್ಗೆ ಪಾಂಡವರಲ್ಲಿ ಮೂಡಿಬರುತ್ತಿದ್ದ ಅಭಾವವೈರಾಗ್ಯವನ್ನು ತನ್ನ ಚೂಪಾದ ಮಾತುಗಳಿಂದ ಹೇಗೆ ತಿವಿಯುತ್ತಿತ್ತು ಎನ್ನುವುದು ಆಧುನಿಕ ನಾರಿ ಎಲ್ಲಿ ಎಡವುತ್ತಿದ್ದಾಳೆ ಎಂಬುದನ್ನು ತಿಳಿಸುತ್ತದೆ. ವಿವಾಹಿತಪುರುಷನೊಬ್ಬ ವಿಪತ್ತಿಗೆ ಸಿಕ್ಕಿಕೊಂಡಾಗ, ದಿಕ್ಕುತೋಚದಿದ್ದಾಗ ಅವನಿಗೆ ಭರವಸೆ, ಧೈರ್ಯ ಪೋ›ತ್ಸಾಹಗಳನ್ನು ನೀಡಬೇಕಾದ್ದೇ ಅವನ ‘ಸಹಧರ್ಮಚಾರಿಣಿ’ಯಾದ ಪತ್ನಿ, ಹಾಗೆಯೇ ಅವನು ಧರ್ಮಮಾರ್ಗದಿಂದ ವಿಚಲಿತನಾಗುವಂತೆ ಕಂಡುಬಂದರೆ ಅವನನ್ನು ಸರಿದಾರಿಗೆ ಎಳೆದು ತರಬೇಕಾದವಳೂ ಅವಳೇ. ಬಾಲ್ಯಾವಸ್ಥೆಯಲ್ಲಿ ಈ ಜವಾಬ್ದಾರಿ ‘ತಾಯಿ’ಯದ್ದು. ಮಹಾಭಾರತದಲ್ಲಿ ಬರುವ ವಿದುಲಾ ತನ್ನ ಮಗನಲ್ಲಿ ಆ ಪೌರುಷದ ಬೆಂಕಿಯನ್ನು ಪ್ರಜ್ವಲಿಸಿದ ಪರಿಯೇ ಅದ್ಭುತ. ‘ಇಲಿಯ ಬೊಗಸೆಯಂತಾಗಬಾರದು ನಿನ್ನ ಆಸೆಗಳು. ನೂರು ವರ್ಷ ಹೊಗೆಬಿಟ್ಟುಕೊಂಡು ಬದುಕುವುದಕ್ಕಿಂತ ಕೆಲವೇ ಕ್ಷಣಗಳು ಪ್ರಜ್ವಲಿಸಿ ಉರಿಯುವುದು ಶ್ರೇಯಸ್ಕರ’ ಎಂದು ಹೇಳುತ್ತಾಳೆ.
9-10ನೇ ಶತಮಾನದ ಕವಿ ರಾಜಶೇಖರ ತನ್ನ ಸುಪ್ರಸಿದ್ಧ ಕಾವ್ಯಮೀಮಾಂಸೆಯಲ್ಲಿ ಶ್ರೇಷ್ಠ ಸಾಹಿತ್ಯವೊಂದರ ಲಕ್ಷಣಗಳನ್ನು ಕುರಿತು ವಿಶ್ಲೇಷಿಸುವಾಗ ಅದಕ್ಕೆ ಉದಾಹರಣೆಯಾಗಿ ನಿಲ್ಲುವುದು ಹಲವು ಕವಿಯತ್ರಿಯರ ಕೃತಿಗಳು ಸಹ. ಅವರಲ್ಲಿ ಖ್ಯಾತನಾಮರೆಂದರೆ ಶೀಲಭಟ್ಟಾರಿಕಾ, ಅಭಿನವ ಸರಸ್ವತಿಯಂತಿದ್ದ ವಿಜಯಾಂಕಾ ಇತ್ಯಾದಿ. ಇದೇ ಕಾಲದಲ್ಲಿ ಪ್ರಜ್ವಲಿಸಿದ ಮತ್ತೊಂದು ತಾರೆ ಉಭಯಭಾರತಿದೇವಿ. ಶಂಕರಭಗವತ್ಪಾದಾಚಾರ್ಯರು ನಾಡಿನಾದ್ಯಂತ ವೇದಾಂತಧರ್ಮವನ್ನು ಪ್ರತಿಷ್ಠಾಪಿಸಿಕೊಂಡು ಮುಂದುವರಿಯುತ್ತಿದ್ದ ಕಾಲದಲ್ಲಿ ಅವರ ಪ್ರಬಲ ಸ್ಪರ್ಧಿಯಾಗಿ ನಿಂತವನು ಅಂದಿನ ಆರ್ಯಾವರ್ತದ ಅಜೇಯ ವಿದ್ವಾಂಸ, ಪರಮ ಕರ್ಮಠ ಮತ್ತು ಪೂರ್ವಮೀಮಾಂಸೆಯ ಪ್ರಶ್ನಾತೀತ ಪಂಡಿತ ಮಂಡನ ಮಿಶ್ರ. ಮಾಹೀಷ್ಮತಿಯಲ್ಲಿ ನೆಲೆಸಿದ್ದ ಇವನ ಮನೆಯ ಗಿಳಿಗಳು ಕೂಡ ವೇದಗಳ ಚರ್ಚೆಯಲ್ಲಿ ತೊಡಗುತ್ತಿದ್ದವು, ಹಾಗಿತ್ತು ಅವನ ವಿದ್ವತ್ಪ್ರಭೆ. ವೇದಗಳ ಕರ್ಮಕಾಂಡವೇ ಪ್ರಧಾನ; ಜ್ಞಾನಕಾಂಡವಲ್ಲ ಎಂಬ ನಿಲುವು ಅವನದ್ದು. ಇದಕ್ಕೆ ವಿರುದ್ಧವಾದದ್ದು ಶಂಕರರದ್ದು. ವಾದಸರಣಿ ಪ್ರಾರಂಭವಾಯ್ತು. ಇಲ್ಲಿ ತೀರ್ಪಗಾರಳಾಗಿ ನಿಂತಿದ್ದು ಸ್ವತಃ ಮಂಡನ ಮಿಶ್ರನ ಪತ್ನಿ ಉಭಯಭಾರತೀ ದೇವಿ. ಅಷ್ಟರಮಟ್ಟಿಗೆ ಅವಳ ಪ್ರತಿಭೆಯ ಔನ್ನತ್ಯ. ಕೊನೆಗೆ ಅವಳು ತೀರ್ಪಿತ್ತಿದ್ದು ಶ್ರೀ ಶಂಕರರ ಪರವಾಗಿಯೇ ಎನ್ನುವುದು ಬೇರೆಮಾತು.
ವಿದ್ವನ್ನಭೋಮಂಡಲದ ಧೃವವತಾರೆ ಬೃಹದಾರಣ್ಯಕ ಉಪನಿಷತ್ತಿನಲ್ಲಿ ಬರುವ ಗಾರ್ಗಿ. ಅವಳ ಮತ್ತು ಯಾಜ್ಞವಲ್ಕ್ಯರ ನಡುವಿನ ಸಂವಾದ ಆಧುನಿಕಯುಗದ Cosmology, Big bang theory, Genesis ಮತ್ತು science of consciousnessesಗಳಿಗೆ ಬುನಾದಿಯೂ ಆಗಬಲ್ಲದು, ಬೆಳಕನ್ನೂ ನೀಡಬಲ್ಲದು.
ಮುಖ್ಯ ವಿಷಯವೆಂದರೆ ವೇದ ಪರಂಪರೆಯಲ್ಲಿ ಎಲ್ಲೂ ಘೊಷಾ ಪದ್ಧತಿ ಇಲ್ಲ. ಮನು ಮತ್ತು ಯಾಜ್ಞವಲ್ಕ್ಯ ಸ್ಮ ೃಯಲ್ಲೂ ಇದರ ಪ್ರಸ್ತಾಪವೇ ಇಲ್ಲ. ಸ್ತ್ರೀಯರಿಗೆ ಪುರುಷರಷ್ಟೇ ಸ್ವಾತಂತ್ರ್ಯವಿತ್ತು, ವೇದಾಧ್ಯಯನದ ಅಧಿಕಾರವೂ ಇತ್ತು, ರಾಜ್ಯಾಡಳಿತದ ಅಧಿಕಾರವೂ ಇತ್ತು. ‘ಬ್ರಹ್ಮವಾದಿನಿ’ಯಾಗಿ ಬ್ರಹ್ಮಚರ್ಯ ಜೀವನ ನಡೆಸುತ್ತ ತತ್ವಜ್ಞಳಾಗಿಯೋ ಅಥವಾ ವಿವಾಹಿತಳಾಗಿ ಗೃಹಿಣಿಯಾಗಿಯೋ ಜೀವಿಸಬಹುದಿತ್ತು. ಇನ್ನು ಸಹಗಮನ ಪದ್ಧತಿಯ ಸುಳಿವೇ ವೇದಗಳಲ್ಲಿಲ್ಲ. ಪತಿಯನ್ನು ಚಿತೆಗೇರಿಸಿ ಬರುವ ವಿಧವೆಯನ್ನು ಮಕ್ಕಳು ಮತ್ತು ಆಸ್ತಿಯೊಂದಿಗೆ ಸುಖವಾಗಿರು ಎಂದು ಅಥರ್ವಣವೇದ ಹರಸುತ್ತದೆ. ಮಹಾಕಾವ್ಯಗಳ ಕಾಲದಲ್ಲಾಗಲೀ ಬೌದ್ಧ, ಜೈನರ ಕಾಲಗಳಲ್ಲಾಗಲಿ ಸತೀ ಪದ್ಧತಿಯ ಪ್ರಸ್ತಾಪವೇ ಇಲ್ಲ. ಇದು ಬೆಳಕಿಗೆ ಬಂದದ್ದೇ ಮಹಮ್ಮದೀಯರ ಪ್ರಾಬಲ್ಯದ ನಂತರ. ರಾಜಸ್ಥಾನದಲ್ಲಿ ಪ್ರಾರಂಭವಾಗಿ ಕೇವಲ ಕ್ಷತ್ರಿಯ ಕುಲಕ್ಕೆ ಮೀಸಲಾಗಿದ್ದ ಪದ್ಧತಿ ಸ್ವಾರ್ಥಲೋಲುಪ ವ್ಯಕ್ತಿಗಳ ಹೃದಯಹೀನ ಪ್ರವೃತ್ತಿಗೆ ಒಂದು ಅಸ್ತ್ರವಾಯಿತು.
ನಾಗರಿಕತೆಯ ಪ್ರಾರಂಭಿಕ ಹೊಳಹುಗಳು ಮೂಡಿದ ಕಾಲದಿಂದಲೂ ಮಾನವವೋತ್ಕರ್ಷದ ಎಲ್ಲ ಆಯಾಮಗಳಲ್ಲೂ ಪುರುಷನೊಂದಿಗೆ ಸಮಾನವಾಗಿಯೇ ವಿಜೃಂಭಿಸಿ ಮುಂದೆ ಸಾಗುತ್ತಿದ್ದ ಈ ನಾರೀಶಕ್ತಿಗೆ ಕುಠಾರಪ್ರಾಯವಾಗಿದ್ದು ಭಾರತಕ್ಕೆ ‘ಇಸ್ಲಾಂ’ನ ಪ್ರವೇಶ. ಸ್ಥಳೀಯ ರಾಜರ ಸ್ವಾರ್ಥ, ಅಪ್ರಬುದ್ಧತೆ, ದೂರದೃಷ್ಟಿಯ ಕೊರತೆಗಳು ಸಿಂಹಾಸನವನ್ನಷ್ಟೇ ಮುರಿದಿದ್ದರೆ ಸಹಿಸಬಹುದಿತ್ತು. ಆದರೆ ಅದು ಮೃತ್ಯುಘಾತವನ್ನಿತ್ತಿದ್ದು ಸಮಕಾಲೀನ ಜಾಗತಿಕ ಧಾರ್ವಿುಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಭವ್ಯಸೌಧಕ್ಕೆ. ಯಾವುದೇ ರಾಷ್ಟ್ರ, ನಾಗರಿಕತೆ ಸ್ವಾಯತ್ತತೆ ಕಳೆದುಕೊಂಡಾಗ ಅದರ ಮೊದಲ ಬಲಿಯೇ ನಾರೀಶಕ್ತಿ. ಭಾರತದ ಸಾಂಸ್ಕೃತಿಕ ಸಾರವೇ ಮೂರ್ತಿವೆತ್ತಂತಿದ್ದ ಭಾರತೀಯ ನಾರಿಯ ಕುಸಿತ ಈಗ ಸಮಾಧಾನ ಕಂಡುಕೊಂಡಿದ್ದು ವಿಧಾತನ ಕಾರ್ಯವಿಧಾನಕ್ಕೆ ಶರಣಾಗತಿ ಹೊಂದುವುದರಲ್ಲಿ. ಇದರ ಶ್ರೇಷ್ಠ ಪ್ರತಿನಿಧಿಗಳೇ ರಾಜಸ್ಥಾನದ ಮೀರಾ, ಕರ್ನಾಟಕದ ಅಕ್ಕಮಹಾದೇವಿ, ತಮಿಳುನಾಡಿನ ಅವ್ವಯ್, ಆಂಡಾಳ್, ಮಹಾರಾಷ್ಟ್ರದ ಮುಕ್ತಾಬಾಯಿ ಮತ್ತು ಸಕ್ಕೂಬಾಯಿ ಇತ್ಯಾದಿ. ಈ ಕಾಲದಲ್ಲೇ ಭಾರತೀಯನಾರಿ ಹೆಚ್ಚು ಕ್ಲೇಶಕ್ಕೊಳಗಾಗಿದ್ದು. ಆಗ ಅವಳ ಮುಂದಿದ್ದುದು ಒಂದೇ ಗುರಿ! ಅದೇ ಅಸ್ತಿತ್ವವನ್ನು ಉಳಿಸಿಕೊಳ್ಳುವುದು. ತನ್ನ ಪತಿ ವಿಧುರನಾಗದಂತೆ, ತನ್ನ ಮಕ್ಕಳು ತಬ್ಬಲಿಗಳಾಗದಂತೆ ನೋಡಿಕೊಂಡರೆ ಸಾಕು! ಸಮಾನತೆ, ಸ್ವಾತಂತ್ರ್ಯಗಳೆಲ್ಲ ಆಮೇಲೆ!
ಬ್ರಿಟಿಷರ ಆಗಮನದ ನಂತರ ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೂ ಈ ವೇಳೆಗಾಗಲೇ ಹಾಸುಹೊಕ್ಕಾಗಿದ್ದ ಬಾಲ್ಯವಿವಾಹ ಮತ್ತಿತರ ಸಂಕೋಲೆಗಳಿಂದಾಗಿ ಗತಕಾಲದ ವೈಭವ ಮರುಕಳಿಸದಂತಾಯ್ತು. ಈ ಸಂಧಿಕಾಲದಲ್ಲಿ ಬಹುಜನರ ಗಮನಕ್ಕೆ ಇಂದಿಗೂ ಬಾರದ ರೀತಿಯಲ್ಲಿ ಸ್ತ್ರೀಶಕ್ತಿಯ ‘ಪುನರುತ್ಥಾನ’ ನಡೆಯಿತು- ಅದೇ ಭಗವಾನ್ ಶ್ರೀರಾಮಕೃಷ್ಣರ ಆಗಮನ.
ಈ ಘಟನೆಯ ಮಹತ್ವವನ್ನು ಭಾರತೀಯ ಪರಂಪರೆಯ ಸರ್ವಶ್ರೇಷ್ಠ ವ್ಯಾಖ್ಯಾನಕಾರ ಸ್ವಾಮಿ ವಿವೇಕಾನಂದರ ಬಾಯಿಯಿಂದಲೇ ಕೇಳೋಣ.
‘ಭವಿಷ್ಯದ ನಾಗರಿಕತೆಗಳನ್ನು (ವಿಶೇಷವಾಗಿ ಭಾರತೀಯ) ಕಟ್ಟುವುದು ಸ್ತ್ರೀಶಕ್ತಿಯೇ, ಈ ಕಾರಣಕ್ಕಾಗಿಯೇ ರಾಮಕೃಷ್ಣರು ಸ್ತ್ರೀದೇವತೆಯನ್ನು ಆರಾಧಿಸಿದರು. ಅದೂ ಮಾತೃಭಾವದಲ್ಲಿ! ಅವರ ಲೀಲಾಕ್ಷೇತ್ರವಾದ ದಕ್ಷಿಣೇಶ್ವರದ ಭವತಾರಿಣೀ ದೇವಾಲಯದ ನಿರ್ವಣವು ಒಬ್ಬ ಸ್ತ್ರೀಯಿಂದಲೇ ಆಗಿದ್ದು. ಅವರ ಪ್ರಪ್ರಥಮ ಶಿಷ್ಯೆ ಕೂಡ ಸ್ತ್ರೀ; (ಶಾರದಾದೇವಿಯವರು)’ ಎಂದು ಹೇಳಿದ್ದಲ್ಲದೆ ಮುಂದುವರಿದು ಹೇಳುತ್ತಾರೆ- ‘ನನ್ನ ಅಮೆರಿಕನ್ ಮತ್ತು ಇಂಗ್ಲೆಂಡಿನ ಕೆಲಸಗಳಿಗೆ ಪ್ರಧಾನವಾಗಿ ಸಹಾಯವೆಸಗಿದವರೂ ಅಲ್ಲಿನ ಸ್ತ್ರೀಯರೇ’ ಎಂದು. ಅಷ್ಟೇ ಅಲ್ಲ ಸ್ವಾಮಿ ವಿವೇಕಾನಂದರ ಪ್ರಧಾನಶಿಷ್ಯೆ ಕೂಡ ಒಬ್ಬಳು ಸ್ತ್ರೀ.
ಆಧುನಿಕ ಭಾರತೀಯ ಸ್ತ್ರೀ ಸ್ಪಷ್ಟವಾಗಿ ಒಂದು ವಿಷಯ ತಿಳಿಯಬೇಕು. ಮನುಕುಲದಲ್ಲಿ ಅತ್ಯಂತ ಶ್ರೇಷ್ಠ, ವೈಜ್ಞಾನಿಕ ಸಂಸ್ಕೃತಿಯನ್ನು ನಿರ್ವಿುಸಿದ್ದು ನಮ್ಮೆಲ್ಲರ ಹೆಮ್ಮೆಯ ಭಾರತ. ಇದು ಸಮನ್ವಯ ಯುಗ! ಪಾಶ್ಚಾತ್ಯ ಸ್ತ್ರೀಯರ ಸ್ವಾತಂತ್ರ್ಯ, ಕಾರ್ಯದಕ್ಷತೆ, ಪ್ರಯೋಗಶೀಲತೆ ಮತ್ತು ಭಾರತೀಯ ನಾರಿಯ ಪಾವಿತ್ರ್ಯ, ವಿವೇಕ, ತ್ಯಾಗಗಳು ಸಮನ್ವಯಗೊಂಡಾಗ ಮೂಡಿಬರುವ ವ್ಯಕ್ತಿತ್ವವೇ ಆಧುನಿಕ ಯುಗದ ಆದರ್ಶವೆಂದು ಸ್ವಾಮಿ ವಿವೇಕಾನಂದರು ಒತ್ತಿ ಹೇಳಿದ್ದಾರೆ. ಈ ನಿಟ್ಟಿನಲ್ಲಿ ಶಾರದಾಮಾತೆ ಮತ್ತು ಸೋದರಿ ನಿವೇದಿತಾ ಮಹಾನ್ ದಿಕ್ಸೂಚಿಗಳಂತೆ ನಮ್ಮ ಮುಂದೆ ನಿಲ್ಲುತ್ತಾರೆ. ಸಮಾಜದ ಸ್ವಾಸ್ಥ್ಯ ಪರಿಪೂರ್ಣಳಾದ ಸ್ತ್ರೀಯ ಮೇಲೆ ಬಹಳಷ್ಟು ಅವಲಂಬಿತವಾಗಿದೆ. ಆದರ್ಶಪತ್ನಿ, ಆದರ್ಶಮಾತೆ, ಆದರ್ಶಗುರುವಾಗಿ ಸಾಟಿಯಿಲ್ಲದಂತೆ ಅವಳು ಕಾರ್ಯನಿರ್ವಹಿಸಬಲ್ಲಳು. ಇಲ್ಲಿ ಬೇಕಾಗಿರುವುದು ಪೂರ್ವಗ್ರಹವಿಲ್ಲದ ವೈಜ್ಞಾನಿಕ ಮತ್ತು ವಿಮರ್ಶಾತ್ಮಕ ವಿಶ್ಲೇಷಣೆ ಮತ್ತು ಅಧ್ಯಯನ; ಅಂಧಾನುಕರಣೆಯಲ್ಲ. ಪಾಶ್ಚಾತ್ಯ ಚಿಂತಕನೊಬ್ಬ ಗಟಞಚ್ಞ ಎನ್ನುವ ಶಬ್ದವನ್ನು ವಿಶ್ಲೇಷಿಸಿದ್ದು ಹೀಗೆ, Double you; Oh! Man ಎಂದು. ಅರ್ಥಾತ್… w-o- Man.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)