ಉದ್ಧಾರವಾಗಲೇಬಾರದು ಎಂಬ ನಿರ್ಧಾರ ಸರಿಯೇ?!

Column F
Published on
ಯಾವ ವಸ್ತುಗಳನ್ನು ಜೀವಮಾನದಲ್ಲಿ ಒಮ್ಮೆಯೂ ನೋಡುವ ಅಥವಾ ಇನ್ನಾವುದೇ ರೀತಿಯಲ್ಲಿ ವ್ಯವಹರಿಸುವ ಸಂದರ್ಭವೇ ಶೇಕಡ 99 ವಿದ್ಯಾರ್ಥಿಗಳಿಗೆ ಬರುವುದಿಲ್ಲವೋ ಅಂಥ ರಾಸಾಯನಿಕ ವಸ್ತುಗಳ ರಾಶಿಯನ್ನೇ ಸುದೀರ್ಘವಾಗಿ ಅಧ್ಯಯನ ಮಾಡುತ್ತಾರೆ ಅವರು. ಈ ಬಗ್ಗೆ ಅನೇಕ ಯುವ ಇಂಜಿನಿಯರ್​ಗಳು ಕಳವಳ ಪಡುತ್ತಾರೆ.

ಸ್ವಾಮಿ ವಿವೇಕಾನಂದರು 125 ವರ್ಷಗಳ ಹಿಂದೆ ಪಾಶ್ಚಾತ್ಯ ರಾಷ್ಟ್ರಗಳ ದಿಗ್ವಿಜಯವನ್ನು ಮುಗಿಸಿಕೊಂಡು ಭಾರತಕ್ಕೆ ಮರಳಿದಾಗ ಮೊದಲು ಪದಾರ್ಪಣೆ ಮಾಡಿದ್ದು ರಾಮೇಶ್ವರದಲ್ಲಿ ಜನವರಿ 26ರಂದು. ಅಲ್ಲಿಂದ ಸುಮಾರು 20 ದಿನಗಳ ಕಾಲ ಇಡೀ ಭಾರತವರ್ಷವನ್ನು ಉದ್ದೇಶಿಸಿ ಅವರು ಮೊಳಗಿದ ಪಾಂಚಜನ್ಯದಲ್ಲಿ ಭವಿಷ್ಯ ಭಾರತದ ಪುರೋಭಿವೃದ್ಧಿಯ ರೂಪರೇಷೆಗಳೆಲ್ಲ ಅನುರಣಿತವಾದವು ಎಂದು ಫ್ರೆಂಚ್ ನೊಬೆಲ್ ವಿಜೇತ ರೋಮೈರೋಲಾ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾರೆ. ಆ ಸಂದರ್ಭದಲ್ಲಿ ಸ್ವಾಮೀಜಿ ಒಂದು ಅದ್ಭುತ ವಿಷಯವನ್ನು ಹೊರಗೆಡಹುತ್ತಾರೆ. ಅದೇನೆಂದರೆ- ‘ಪ್ರಸ್ತುತ ಭಾರತದಲ್ಲಿ ಎರಡು ರೀತಿಯ ಗುಂಪುಗಳಿವೆ, ಒಂದು ಗುಂಪು ಭಾರತ ಜನ್ಯ. ಯಾವ ವಿಷಯವೂ ಸರಿ ಇಲ್ಲ, ಎಲ್ಲವೂ ದೋಷಗಳಿಂದಲೇ ಕೂಡಿದೆ. ಆಮೂಲಾಗ್ರವಾಗಿ ಇದನ್ನೆಲ್ಲ ಬದಲಾಯಿಸಿ ಮತ್ತಾವುದಾದರೂ (ವಿಶೇಷತಃ ಪಾಶ್ಚಾತ್ಯ) ಸಂಸ್ಕೃತಿಯನ್ನು ಅಳವಡಿಸಿಕೊಳ್ಳದಿದ್ದಲ್ಲಿ ಭಾರತಕ್ಕೆ ಭವಿಷ್ಯವೇ ಇಲ್ಲ ಎಂದು ಯೋಚಿಸುತ್ತಿದ್ದರೆ ಮತ್ತೊಂದು ಗುಂಪು ಭಾರತೀಯ ಜನ್ಯವಾದ ಯಾವ ಕ್ಷೇತ್ರದಲ್ಲಿಯೂ ಯಾವ ದೋಷವೂ ಇಲ್ಲ. ಸಾಂಪ್ರದಾಯಿಕ ಆಚರಣೆ, ನಂಬಿಕೆಗಳನ್ನೇ ಮುಂದುವರಿಸಿಕೊಂಡು ಹೋಗುವುದರಲ್ಲೇ ನಮ್ಮ ಭವಿಷ್ಯ ಇದೆ ಎಂದು ಯೋಚಿಸುತ್ತಿದೆ ಎಂದು. ಇಬ್ಬರೂ ತಪ್ಪನ್ನೇ ಎಸಗುತ್ತಿದ್ದರೂ ಇವೆರಡರಲ್ಲಿ ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ? ಎಂದು ನನ್ನನ್ನು ಯಾರಾದರೂ ಕೇಳಿದರೆ ನನ್ನ ಉತ್ತರ ಎರಡನೆಯದ್ದು ಎಂದು. ಏಕೆಂದರೆ ಅದರಲ್ಲಿ ಜೀವ ಇದೆ, ಮೊದಲ ಗುಂಪಿನಲ್ಲಿ ಯಾವ ಜೀವಚಿಹ್ನೆಯೂ ಇಲ್ಲ’.

ಹೌದು! ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿ ಏನೂ ಸತ್ವವಿಲ್ಲ, ಅದನ್ನು ಸುಧಾರಿಸಲೇ ಬೇಕು ಎಂದು ಹೊರಟ ಬ್ರಹ್ಮಸಮಾಜ ಇಂದು ಸಣ್ಣ ಕಟ್ಟಡ, ನಾಲ್ಕು ಅಡಿ ಉದ್ದದ ನಾಮಫಲಕಕ್ಕೆ ಸೀಮಿತವಾಗಿದ್ದರೆ ತಂತ್ರಶಾಸ್ತ್ರ ಮತ್ತು ಸಾಂಪ್ರದಾಯಿಕ ಹಿಂದೂ ಧರ್ಮದ ಆಚರಣೆ, ಸಾಧನಾ ಮಾರ್ಗಗಳನ್ನು ಅನುಸರಿಸಿದ ಶ್ರೀರಾಮಕೃಷ್ಣರ ಪ್ರಭಾವವಾದರೋ ವಿಶ್ವವ್ಯಾಪಿಯಾಗಿ ಆವರಿಸಿಕೊಳ್ಳುತ್ತಿರುವುದನ್ನು ಇದಕ್ಕೆ ಸಮರ್ಥನೆಯನ್ನಾಗಿ ಕೊಡಬಹುದು. ಏಕೆಂದರೆ ಅವುಗಳಲ್ಲಿ ಜೀವ ಇದೆ, ಅಷ್ಟೇ ಅಲ್ಲ ಇಂಥ ಸೂಕ್ಷ ್ಮಳನ್ನು ಗಮನಿಸಿ ನಮ್ಮ ಮುಂದೆ ಇಟ್ಟಿರುವುದೇ ವಿವೇಕಾನಂದರ ಹತ್ತು ಹೆಗ್ಗಳಿಕೆಗಳಲ್ಲೊಂದು.

ಇದನ್ನು ಹೇಳಹೊರಟಿದ್ದೇಕೆಂದರೆ ಹಲವಾರು ಚಿಂತಕರು ಮತ್ತು ಸಾಹಿತಿಗಳು ಭಗವದ್ಗೀತೆಯನ್ನು ಪಠ್ಯದಲ್ಲಿ ಅಳವಡಿಸಿಕೊಳ್ಳುವುದು ಬೇಡ ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ ಎಂಬ ಸುದ್ದಿ ನನ್ನನ್ನು ಕ್ಷಣಕಾಲ ಅವಾಕ್ಕಾಗಿಸಿತು. ಗೀತೆಯಲ್ಲಿ ಆಕ್ಷೇಪಣಾರ್ಹವಾದದ್ದಾದರೂ ಏನಿದೆ? (ಅಷ್ಟೇ ಅಲ್ಲ ಮಕ್ಕಳಿಗೆ ಪಠ್ಯ ಇರಬೇಕಾದ್ದೇ ಇಂಥ ಪುಸ್ತಕಗಳು). ಬ್ರಹ್ಮಲೀನ ಶ್ರೀಮತ್ ಸ್ವಾಮಿ ರಂಗನಾಥಾನಂದಜೀಯವರ ಪ್ರಕಾರ ವೇದಾಂತ ಎನ್ನುವುದು ಸಾಮಾನ್ಯನನ್ನು ಅಸಾಮಾನ್ಯನನ್ನಾಗಿಸಬಲ್ಲ ಅದ್ಭುತ ಮಾನವ ನಿರ್ಮಾಣ ವಿಜ್ಞಾನ (Science of Human development)ವಾದರೆ ಅದನ್ನು ಪ್ರಾಯೋಗಿಕವಾಗಿ ಸಾಧಿಸುವುದು ಹೇಗೆ ಎಂಬುದರ ಮಾರ್ಗದರ್ಶಿ ಭಗವದ್ಗೀತೆ. ಒಂದು Descriptive theory ಆದರೆ ಇನ್ನೊಂದು Technical guide. ಇಲ್ಲಿ ಪಂಥೀಯ, ಮತೀಯ, ಪ್ರಾದೇಶಿಕ ಇತ್ಯಾದಿ ಯಾವ ಇತಿಮಿತಿಗಳೂ ಇಲ್ಲ. ಪ್ರತಿ ಮಾನವನಿಗೂ ಅನ್ವಯಿಸುವ ತತ್ತ್ವಗಳೇ ಇರುವುದು.

ಅದು ಒತ್ತಟ್ಟಿಗಿರಲಿ, ತನ್ನ ಸ್ನೇಹಿತ ಚಾರ್ಲ್ಸ್ ವಿಲ್ಕಿನ್ಸ್ ಲ್ಯಾಟಿನ್ ಭಾಷೆಯಲ್ಲಿದ್ದ ಭಗವದ್ಗೀತೆಯನ್ನು ಇಂಗ್ಲಿಷ್​ಗೆ ಅನುವಾದಿಸಿದಾಗ ಅದಕ್ಕೆ ಮುನ್ನುಡಿ ಬರೆಯುತ್ತ ಭಾರತದ ಪ್ರಪ್ರಥಮ ಬ್ರಿಟಿಷ್ ಗವರ್ನರ್ ಜನರಲ್ ವಾರ್ನ್ ಹೇಸ್ಟಿಂಗ್ಸ್ ಹೀಗೆ ಬರೆಯುತ್ತಾನೆ- ‘ಬ್ರಿಟಿಷ್ ಸಾಮ್ರಾಜ್ಯವೆನ್ನುವುದೊಂದಿತ್ತು ಎನ್ನುವುದು ಜನರ ಸ್ಮೃತಿಯಿಂದ ಅಳಿಸಿಹೋದ ಎಷ್ಟೋ ಯುಗಗಳ ನಂತರವೂ ಭಾರತೀಯ ತತ್ತ್ವಜ್ಞರು ನಮ್ಮ ನೆನಪಿನಲ್ಲಿ ಉಳಿಯುತ್ತಾರೆ’. ಪ್ರಪಂಚದ ಯಾವುದಾದರೂ ಪುಸ್ತಕವೊಂದಕ್ಕೆ (ಉಪನಿಷತ್​ಗಳನ್ನು ಹೊರತುಪಡಿಸಿ) ಅನ್ಯ ಸಂಸ್ಕೃತಿಯ, ಅನ್ಯಧರ್ವಿುಯ, ಅನ್ಯಭಾಷಿಕನೊಬ್ಬ ಇಂಥದೊಂದು ಮೆಚ್ಚುಗೆ ವ್ಯಕ್ತಪಡಿಸಿದ ಉದಾಹರಣೆ ಕಣ್ಣಿಟ್ಟು ಹುಡುಕಿದರೂ ಸಿಗಲಾರದು ಎನ್ನುವುದನ್ನು ಮನಗಂಡರೆ ಇಲ್ಲಿ ಪಾಂಥಿಕ, ಮತೀಯ ಭಾವನೆ ಎಲ್ಲಿ ಬರುತ್ತದೆ. ಆಳುಗನೊಬ್ಬ ಗುಲಾಮಿ ರಾಷ್ಟ್ರದ ಕೃತಿಯ ಬಗ್ಗೆ ಹೇಳಲುಂಟೆ!. ಗೀತೆಯನ್ನು ಪ್ರಶಂಸಿದವರಲ್ಲಿ ಅಮೆರಿಕನ್, ಇಂಗ್ಲಿಷ್, ಜರ್ಮನ್, ರೊಮೇನಿಯನ್ ಚಿಂತಕರ, ವಿಜ್ಞಾನಿಗಳ ದಂಡೇ ಸಿಗುತ್ತದೆ.

ಇವರೆಲ್ಲರ ಮೆಚ್ಚುಗೆಗೆ ಭಗವದ್ಗೀತೆ ಇನ್ನಿಲ್ಲದ ರೀತಿಯಲ್ಲಿ ಪಾತ್ರವಾಗಿರುವುದುಕ್ಕೆ ಕಾರಣ ಅದರ ಸಾರ್ವತ್ರಿಕತೆ. ಏಕೆಂದರೆ ಗೀತೆಯ ರ್ಚಚಿತ ವಸ್ತು ‘ಮನುಷ್ಯ’, ಕೇವಲ ‘ಮನುಷ್ಯ’; ಅದು ಹಿಂದೂವೂ ಅಲ್ಲ, ಬ್ರಾಹ್ಮಣನೂ, ವೈದಿಕನೂ ಅಲ್ಲ ; ಯುದ್ಧವೋ, ಹಿಂಸೆಯೋ ಅಲ್ಲ! ಇನ್ನು ವಿದ್ಯಾರ್ಥಿಗಳು ಸದ್ಯದ ಪಠ್ಯಗಳಲ್ಲಿ ಕಲಿಯುತ್ತಿರುವುದಾದರೂ ಏನು? ಈ ಸಹಸ್ರಮಾನದ ಮಹಾನ್ ಸುಳ್ಳಾದ ಆರ್ಯರು ಹೊರಗಡೆಯವರು; ಸ್ಥಳೀಯರನ್ನು ಅವರು ಸ್ಥಳಾಂತರಿಸಿ ಅವರ ಜಾಗವನ್ನು ಆಕ್ರಮಿಸಿದರು ಎಂಬ ಚಂದಮಾಮ ಕಥೆ ಇತ್ಯಾದಿಗಳು ತಾನೇ? ಹಾಗೆಯೇ ಅಲೆಗ್ಸಾಂಡರ್ ಆಕ್ರಮಣದ ಬಗ್ಗೆ ಗ್ರೀಸ್ ದೇಶದ ಪಠ್ಯಗಳಲ್ಲಿ ಭಾರತೀಯರು ಹೆಮ್ಮೆ ಪಡುವಂತಿದ್ದರೆ ನಮ್ಮ ಪುಸ್ತಕಗಳಲ್ಲಿ ನೋವು ಪಡುವಂತಿದೆ. ಶತಮಾನಗಳಿಂದ ಆಗುತ್ತಿರುವ ನಿಜವಾದ ಶೋಷಣೆ ಇದು. ಭಾರತೀಯ ವಿದ್ಯಾರ್ಥಿ ಎಂದಿಗೂ ತನ್ನ ಪರಂಪರೆ ಬಗ್ಗೆ ಹೆಮ್ಮೆಪಟ್ಟುಕೊಳ್ಳಬಾರದು; ಅವಮಾನವನ್ನೇ ಪಟ್ಟುಕೊಳ್ಳಬೇಕು ಎಂದು ಪ್ರತಿಜ್ಞೆಯನ್ನೇ ಮಾಡಿದಂತಿದೆ ನಮ್ಮ ಲಜ್ಜೆಗೆಟ್ಟ ಘಇಏ.

ಭಾರತೀಯ ಸಮಾಜ ಇಂದು ಬಳಲುತ್ತಿರುವ ನೂರು ಸಮಸ್ಯೆಗಳಿಗೆ ಗೀತೆಯಲ್ಲಿ ಪರಿಹಾರವಿದೆ. ವೈಯಕ್ತಿಕ ಹಿತ ಮತ್ತು ಸಾರ್ವತ್ರಿಕ ಹಿತಗಳಿಗೆ ಘರ್ಷಣೆ ಉಂಟಾದಾಗ ಸಾರ್ವತ್ರಿಕ ಹಿತವನ್ನೇ ಎತ್ತಿಹಿಡಿಯಬೇಕು. ಬಂಧುಗಳಿಗೆ ಒಂದು ನ್ಯಾಯ ಪರರಿಗೆ ಇನ್ನೊಂದು ಎನ್ನುವ ವ್ಯಾಧಿ ಇಂದು ಆಡಳಿತ ವರ್ಗಗಳಲ್ಲಿ ತಾಂಡವವಾಡುತ್ತಿದೆ. ಸಂವಿಧಾನದಲ್ಲಿ ಇನ್ನಿಲ್ಲದ ಆದರ್ಶಗಳನ್ನು ಅಳವಡಿಸಿ ಆಚರಣೆಯಲ್ಲಿ ತಿಲೋದಕ ಕೊಟ್ಟರೆ ಸಂವಿಧಾನವನ್ನು ಗೌರವಿಸಿದಂತಲ್ಲ. ಸಾಮಾಜಿಕ ಸಮಾನತೆ, ಸಾಮಾಜಿಕನ್ಯಾಯ, ಎಲ್ಲರೂ ನಮ್ಮವರೇ; ಯಾರೂ ಹೊರಗಿನವರಲ್ಲ ಎಂಬ ಮಾತುಗಳು ನಮಗೆ ಅನುಕೂಲವಾಗುವಲ್ಲಿ ಮಾತ್ರ ಪ್ರಸ್ತುತ. ಇಲ್ಲದಿದ್ದಲ್ಲಿ ಅವು ವಿರುದ್ಧಾರ್ಥಗಳನ್ನು ಹೊಂದುತ್ತದೆ ಎನ್ನುವುದು ಯಾರಿಗೆ ಗೊತ್ತಿಲ್ಲ? ಇಂಥ ಮಹತ್ವಪೂರ್ಣ ವಿಷಯಗಳು ಮಕ್ಕಳಿಗೆ ಗೊತ್ತಾಗುವುದು ಬೇಡವೇ.

ಯಾವುದೇ ವಸ್ತುವನ್ನು ತೊಳೆಯಬೇಕಾದರೆ ಮೇಲಿಂದ ಪ್ರಾರಂಭಿಸಬೇಕು. ಹಾಗೆಯೇ ಸಮಾಜವನ್ನು ತೊಳೆಯುವಾಗಲೂ ಸಹ. ಮೇರುಸ್ಥಾನದಲ್ಲಿ ಕುಳಿತವರು ನೂರಕ್ಕೆ ನೂರು ಆದರ್ಶಗಳನ್ನು ಪಾಲಿಸಿದರೆ ಅನುಯಾಯಿಗಳು ಆಂಶಿಕವಾಗಿಯಾದರೂ ಪಾಲಿಸುತ್ತಾರೆ. ನಾಯಕನು ನೂರು ಹೆಜ್ಜೆ ಮುಂದೆ ಇಟ್ಟರೆ ಅನುಯಾಯಿಗಳು ಒಂದು ಹೆಜ್ಜೆಯನ್ನಾದರೂ ಮುಂದೆ ಇಡುತ್ತಾರೆ. ನಾಯಕ ಒಂದು ಹೆಜ್ಜೆ ಹಿಂದೆ ಇಟ್ಟರೆ ಅನುಯಾಯಿಗಳು ನೂರು ಹೆಜ್ಜೆ ಹಿಂದೆ ಇಡುತ್ತಾರೆ.

ಎಷ್ಟು ಕ್ರಿಯಾಶೀಲನಾದರೂ ಕಾರ್ಯೋತ್ಸಾಹ ಕಡಿಮೆಯಾಗದಂತೆ ನೋಡಿಕೊಳ್ಳುವುದು ಹೇಗೆ? ಆಯಾಸಗೊಳ್ಳದಿರುವುದು ಹೇಗೆ? ಎಂಬ ವಿಷಯದ ಬಗ್ಗೆ ಗೀತೆ ಬೆಳಕು ಚೆಲ್ಲಿದ್ದರ ಆಧಾರದ ಮೇಲೆಯೇ ಆಧುನಿಕ ಯುಗದ Natural Inclination Theory ಹುಟ್ಟಿಕೊಂಡಿರುವುದು. ಪ್ರಸ್ತುತ ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ಇದೊಂದು ಪ್ರಮುಖ ಅಂಶ. ಇದನ್ನು ಕುರಿತು ಪಾಶ್ಚಾತ್ಯ ಚಿಂತಕನೊಬ್ಬ The duty that is desired will ultimately become a delight ಎಂದು ಹೇಳುತ್ತಾನೆ. ಅರ್ಥಾತ್ ನಾವು ಇಷ್ಟಪಟ್ಟ ಕ್ಷೇತ್ರದಲ್ಲಿ ದುಡಿಯುವುದು ಆಟ ಆಡಿದಂತೆ. ದೀರ್ಘಕಾಲ ಆಟ ಆಡಿದರೂ ಯಾರೂ ಆಯಾಸಗೊಳ್ಳುವುದಿಲ್ಲ. ಏಕೆಂದರೆ ಅದೊಂದು ಮೋಜು. ಕರ್ಮದಲ್ಲಿ ಅಕರ್ಮವನ್ನು ನೋಡು ಎನ್ನುವ ಗೀತೆಯ ಅರ್ಥ ಇದೇ. ಶ್ರೀರಂಗನಾಥಾನಂದಜೀಯವರ ಇದರ ಕುರಿತ ವ್ಯಾಖ್ಯಾನವನ್ನು ಕಂಡ ಗುಜರಾತಿನ ಮಾಜಿ ರಾಜ್ಯಪಾಲ ಆರ್.ಕೆ.ತ್ರಿವೇದಿ, ‘ನಾನೇನಾದರೂ ಕೇಂದ್ರದಲ್ಲಿ ಶಿಕ್ಷಣ ಸಚಿವನಾಗಿದ್ದಲ್ಲಿ ಗೀತೆಯನ್ನು ಪಠ್ಯವನ್ನಾಗಿ ಮಾಡುತ್ತಿದ್ದೆ’ ಎಂದು ಹೇಳಿದ್ದಾರೆ. ಪೂರ್ವಾಗ್ರಹರಹಿತ ಮನಸ್ಸುಗಳಿಗೆ ಹಾಗೆನ್ನಿಸುವುದು ಸಹಜ.

ಪರಸ್ಪರತೆ, ಅನ್ಯೋನ್ಯತೆ ಮತ್ತು ಸಾಂಘಿಕ ಪ್ರವೃತ್ತಿಯಿಂದಲೇ ಶ್ರೇಯಸ್ಸು ಎಂಬುದನ್ನು ಒತ್ತಿ ಒತ್ತಿ ಹೇಳುತ್ತ ಶ್ರೀಕೃಷ್ಣ ಇದನ್ನು ಸಾಧಿಸಲು ಎರಡು ಮಾರ್ಗಗಳನ್ನು ಸೂಚಿಸುತ್ತಾನೆ. ಒಂದು ಯಜ್ಞ ಇನ್ನೊಂದು ದಾನ. ಒಂದು ವಸ್ತುವಿಗೆ ಸಂಬಂಧಿಸಿದ್ದರೆ ಇನ್ನೊಂದು ವಸ್ತುವನ್ನು ಪಡೆಯುವ ಸಾಮರ್ಥ್ಯಕ್ಕೆ ಸಂಬಂಧಿಸಿದ್ದು. ಕ್ಷೇತ್ರ ಮತ್ತು ಕ್ಷೇತ್ರಜ್ಞ ಇವೆರಡರ ಮೇಲಿನ ಒಟ್ಟು ಜ್ಞಾನವೇ ಪರಿಪೂರ್ಣ ಜ್ಞಾನ. ಅದರಲ್ಲೂ ಕ್ಷೇತ್ರಜ್ಞ ಅರ್ಥಾತ್ ಅಧ್ಯಯನದಲ್ಲಿ ನಿರತನಾದ ವ್ಯಕ್ತಿಯ ಪ್ರಜ್ಞಾಸ್ಥಿತಿ ಅಧ್ಯಯನಕ್ಕೊಳಪಟ್ಟ ವಸ್ತುವಿನ ಜ್ಞಾನವನ್ನು ಪ್ರಭಾವಿಸುತ್ತದೆ ಎಂಬ ಗೀತೆಯ ಹದಿಮೂರನೇ ಅಧ್ಯಾಯದ ಸಾರವಸ್ತುವೇ ಇಂದಿನ ಕ್ವಾಂಟಮ್ ವಿಜ್ಞಾನದ ಪ್ರಮುಖ ಅಂಶ.

ವಿದ್ಯಾರ್ಥಿಜೀವನ ಇರುವುದೇ ಮಾಂಸದ ಮುದ್ದೆಯಾದ ಮಗುವನ್ನು ನಾಡಿನ ಸಂಪತ್ತನ್ನಾಗಿ ಪರಿವರ್ತಿಸುವುದಕ್ಕೆ. ಇಂದಿನಂತೆ ಕೇವಲ ಪುಸ್ತಕಗಳನ್ನು ಓದುವುದರಿಂದ ಅದು ಸಿದ್ಧಿಸುವುದಿಲ್ಲ ಎಂದು ಬ್ರಿಟಿಷ್ ಚಿಂತಕ ಹಾಗೂ ನೊಬೆಲ್ ವಿಜೇತ ಬಟರ್Åಂಡ್ ರಸಲ್ ಸ್ಪಷ್ಟ ಮಾತುಗಳಲ್ಲಿ ಹೇಳುತ್ತಾನೆ. ಈ ಪರಿವರ್ತನಾ ಪ್ರಕ್ರಿಯೆಯಲ್ಲಿ ಮೂರು ಅಂಶಗಳನ್ನು ಗಮನಿಸುತ್ತಾನೆ ಅವನು. ಅದೇ Information, Knowledge ಮತ್ತು Wisdom. ಅರ್ಥಾತ್ ವಿಷಯ, ಜ್ಞಾನ ಮತ್ತು ಪ್ರಜ್ಞಾವಂತಿಕೆ. ಈಗಿನ ಶೈಕ್ಷಣಿಕ ಪದ್ಧತಿ ‘ವಿಷಯ’ವನ್ನು ಮಾತ್ರ ಮುಟ್ಟಿ ಕೈ ತೊಳೆದುಕೊಂಡುಬಿಟ್ಟಿದೆ. ವಿಷಯದ ಹಂತದಿಂದ ಪ್ರಜ್ಞಾವಂತಿಕೆಯ ಹಂತವನ್ನು ತಲುಪಲು ಬೇಕಾದ್ದೇ ‘ಮನನಂ ಮತ್ತು ನಿಧಿಧ್ಯಾಸನಂ’ ಅರ್ಥಾತ್ ವಿಷಯ ರಕ್ತಗತವಾಗಬೇಕು; ಅಂದರೆ ಸುಪ್ತಪ್ರಜ್ಞೆಗೆ ಇಳಿದು ವ್ಯಕ್ತಿತ್ವದಲ್ಲಿ ಒಂದಾಗಿಬಿಡಬೇಕು. ವ್ಯಕ್ತಿ ಪರಿವರ್ತನೆಯೇ ಆಗಿಬಿಡಬೇಕು. ಇದನ್ನೇ ಪ್ರಾಚೀನ ಶಿಕ್ಷಣ ಪದ್ಧತಿ ‘ದ್ವಿಜತ್ವಂ’ ಎಂದಿದ್ದು. ಈ ದ್ವಿಜತ್ವಂನ ಅಂತಿಮ ಸ್ಥಿತಿಯೇ ಸ್ಥಿತಃಪ್ರಜ್ಞತ್ವ. ವಿಷಮ ಸಂದರ್ಭಗಳಲ್ಲಿ ಅಂಥವರ ಮಾರ್ಗದರ್ಶನ ಅನುಸರಿಸಬೇಕೇ ಹೊರತು ಭಾವಾವೇಶಕ್ಕೆ ಒಳಗಾಗಿ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎನ್ನುವುದು ಕೃಷ್ಣನ ಎಚ್ಚರಿಕೆ. ಇದನ್ನು ಗಮನಿಸಿಯೇ ಭಾರತೀಯ ಸಂಸ್ಕೃತಿ ವಸಿಷ್ಠ, ವಿದ್ಯಾರಣ್ಯರು, ಚಾಣಕ್ಯ, ಸಮರ್ಥ ರಾಮದಾಸರು ಇಂಥ ರಾಜಗುರುಗಳ ಪರಂಪರೆಯನ್ನು ನಿರ್ವಿುಸಿದ್ದು.

ಇಂಥ ಅನೇಕ ಮಹತ್ವಪೂರ್ಣ ವಿಷಯಗಳು ಗೀತೆಯಲ್ಲಿ ರ್ಚಚಿಸಲ್ಪಟ್ಟಿವೆ. ಇದಕ್ಕೆ ಹೋಲಿಸಿದರೆ ಪ್ರಸ್ತುತ ಪಠ್ಯಪುಸ್ತಕಗಳು ಹುಲಿಯಾಗಿ ಹುಟ್ಟಿದ ಭಾರತೀಯ ಮಗುವನ್ನು ಇಲಿಯಾಗಿ ಪರಿವರ್ತಿಸುವ ಅದ್ಭುತ ಕಾರ್ಯಕ್ರಮ ಎನ್ನದೆ ವಿಧಿಯಿಲ್ಲ. ಬಹುಶಃ ನಮ್ಮ ‘ಚಿಂತಕ’ರಿಗೆ ಬೇಕಿರುವುದೂ ಅದೇನೇ. ಅವರ ದೃಷ್ಟಿಯಲ್ಲಿ ಅದೇ ಸಾಮಾಜಿಕನ್ಯಾಯವೂ ಇರಬಹುದು. ಆದರೆ ಸ್ವಾಮಿ ವಿವೇಕಾನಂದರ ಎಚ್ಚರಿಕೆಯನ್ನು ಮರೆಯಬಾರದು: ‘ಅಶಿಕ್ಷಿತರಿಗೆ ಬೆಳಕು ಕೊಡಿ ಆದರೆ ಶಿಕ್ಷಿತರಿಗೆ ಹೆಚ್ಚು ಬೆಳಕು ಕೊಡಿ. ಏಕೆಂದರೆ ಆಧುನಿಕ ಶಿಕ್ಷಣದ ದುಷ್ಪರಿಣಾಮಗಳು ಅವರಲ್ಲೇ ಹೆಚ್ಚು ಇವೆ’ ಎಂದು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net