ಭಾರತೀಯ ಸಂಸ್ಕೃತಿ ಔನ್ನತ್ಯಕ್ಕೆ ತರಬೇತಿ

Column F
Published on
ಒಂದು ಜನಾಂಗ ಯಾವ ಜೀವನಪದ್ಧತಿಯನ್ನು ಆದರ್ಶ ಎಂದು ಒಪ್ಪಿಕೊಂಡಿದೆಯೋ, ಅದನ್ನು ಅನುಸರಿಸುವುದನ್ನೇ ತನ್ನ ಕರ್ತವ್ಯ ಹಾಗೂ ಉದ್ಧಾರಕ್ಕಿರುವ ‘ರಾಜಮಾರ್ಗ’ ಎಂದು ಭಾವಿಸಿದೆಯೋ, ಯಾರಾದರೂ ಅದನ್ನು ತ್ಯಜಿಸಿದಲ್ಲಿ ಇಲ್ಲವೇ ಅಗೌರವದಿಂದ ಕಂಡಲ್ಲಿ ಅವರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲು ಹಿಂದೆಮುಂದೆ ನೋಡುವುದಿಲ್ಲವೋ ಅದನ್ನು ಆ ಜನಾಂಗ ತನ್ನ ‘ಸಂಸ್ಕೃತಿ’ ಯೆಂದು ಒಪ್ಪಿಕೊಂಡಿದೆ ಎಂದು ಹೇಳಬಹುದು. ಈ ಸಂಸ್ಕೃತಿ ಎಂಬ ಜೀವನ ಪದ್ಧತಿ ಆ ಜನಾಂಗ ಯಾವುದನ್ನು, ಯಾರನ್ನು ‘ಶ್ರೇಷ್ಠ’ ಎಂದು ಪರಿಗಣಿಸಿದೆ ಎಂಬುದನ್ನವಲಂಬಿಸಿರುತ್ತದೆ.

ಎರಡು ಪ್ರಧಾನ ಸಂಸ್ಕೃತಿಗಳು ಅನಾದಿಕಾಲದಿಂದಲೂ ಮಾನವ ಜನಾಂಗವನ್ನು ಮುಷ್ಟಿಯಲ್ಲಿ ಇಟ್ಟುಕೊಂಡಿವೆ. ‘ಇಂದ್ರಿಯಸುಖ’ ಇಲ್ಲವೇ ‘ಭೋಗಜೀವನ’ವನ್ನು ಸಾಧ್ಯವಿರುವ ಎಲ್ಲಾ ರೀತಿಯಲ್ಲೂ ಅನುಭವಿಸಿ ತೃಪ್ತನಾಗಿ ಜೀವನದ ಸಾರ್ಥಕ್ಯ ಭಾವದಲ್ಲಿ ನೆಲೆ ನಿಲ್ಲುವುದು ಮತ್ತು ಅದು ಸಾಧ್ಯವಾಗಲು ಅಧಿಕಾರ ಸಂಪತ್ತುಗಳಲ್ಲದೆ ಪಟುತ್ವದಿಂದ ಕೂಡಿದ ಇಂದ್ರಿಯ ಸಮೂಹ, ಆರೋಗ್ಯವಂತ, ಯೌವ್ವನ ಭರಿತ ಶರೀರ ಅತ್ಯವಶ್ಯಕವಾದ್ದರಿಂದ ಇವೆಲ್ಲವನ್ನೂ ಸಾಧಿಸಿಕೊಡಬಲ್ಲ ಶೌರ್ಯ ಪರಾಕ್ರಮಗಳನ್ನೇ ಉಸಿರಾಗಿಸಿಕೊಂಡ ಕ್ಷಾತ್ರ ಸಂಸ್ಕೃತಿ ಮೊದಲನೆಯದ್ದು. ಈ ಮಾರ್ಗದಲ್ಲಿ ಆದರ್ಶವಾಗುವವನೇ ‘ರಾಜ’; ಅದರ ಉತ್ತುಂಗವೇ ‘ಚಕ್ರವರ್ತಿ’ ಅಥವಾ Emperor.

ಈ ಸಂಸ್ಕೃತಿಯ ಮೂಲ ವೇದಗಳ ಕರ್ಮಕಾಂಡವೇ ಆದರೂ ಉಪನಿಷತ್ತುಗಳ ಕಾಲಕ್ಕೆ ಅದು ಎರಡನೇ ಸ್ಥಾನಕ್ಕೆ ಇಳಿಯಲ್ಪಟ್ಟು ನಂತರದ ಆರಾಧನೆ, ಆಶ್ರಯಗಳನ್ನು ಪ್ರಧಾನವಾಗಿ ಪಡೆದಿದ್ದು ಗ್ರೀಕ್ ಹಾಗೂ ರೋಮನ್ನರಿಂದ. ಆದ್ದರಿಂದ ಇದನ್ನು ಗ್ರೀಕೋ ರೋಮನ್ ಸಂಸ್ಕೃತಿ ಎನ್ನುವುದೇ ಹೆಚ್ಚು ಸೂಕ್ತ. ಸಹಜವಾಗಿಯೇ ಗ್ರೀಕ್ ಮತ್ತು ರೋಮನ್ನರಿಂದ ಪ್ರತಿ ಕ್ಷೇತ್ರದಲ್ಲೂ ಪ್ರಭಾವಕ್ಕೊಳಗಾದ ಪಾಶ್ಚಾತ್ಯ ಜನಾಂಗ ತನ್ನ ಶಿಲ್ಪಕಲೆ, ಚಿತ್ರಕಲೆ, ದೇವ - ದೇವತೆಯರು ಅಷ್ಟೇಕೆ ಸಂತರಲ್ಲೂ ಕಟ್ಟುಮಸ್ತಾದ ಶರೀರ, ವೀರಭಾವಗಳನ್ನು ಬಿಂಬಿಸುತ್ತದೆ; ಸಾಹಿತ್ಯ, ಮಹಾಕಾವ್ಯಗಳಲ್ಲೂ ಭೋಗ ಮತ್ತು ವೀರಭಾವವೇ ಪ್ರಧಾನ ಧ್ವನಿ. ಅಥೆನ್ಸ್​ನ ಶಿಲಾಮೂರ್ತಿಗಳು, ಹೋಮರ್​ನ ಕೃತಿಗಳು, ಷೇಕ್ಸ್​ಪಿಯರ್​ನ ಸಾಹಿತ್ಯರಾಶಿ ಇವುಗಳನ್ನು ಸ್ಪಷ್ಟಪಡಿಸುತ್ತವೆ. ಅಷ್ಟೇಕೆ ಧಾರ್ವಿುಕ ಕ್ಷೇತ್ರದ ಮಹಾನಾಯಕರು ಕೂಡ ಹಲವಾರು ಶತಮಾನಗಳ ಕಾಲ Holy Roman Empire ನ ಚಕ್ರವರ್ತಿಗಳಾಗಿ ಯುರೋಪಿನ ಹಲವಾರು ರಾಜ ಮಹಾರಾಜರಿಗಿಂತಲೂ ಅಧಿಕವಾದ ದರ್ಪ, ದೌಲತ್ತುಗಳಿಂದ ಮೆರೆದರು ಮತ್ತು ಇಂದಿಗೂ ಎಷ್ಟೇ ನಗಣ್ಯವಾಗಿದ್ದರೂ ರಾಜಪದವಿಯನ್ನು ಮಾತ್ರ ಉಳಿಸಿಕೊಂಡಿರುವರು. ಯುರೋಪಿನ ಕೆಲ ಚಿಂತಕರು ಇದನ್ನು ಕಂಡು ‘ರೋಮನ್ ಚಕ್ರವರ್ತಿ ಕಾನ್ಸ್ಂಟೈನ್ ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದಾಗ ರೋಮನ್ನರು ಕ್ರಿಶ್ಚಿಯನ್ನರಾದರೋ ಇಲ್ಲವೇ ಕ್ರಿಶ್ಚಿಯನ್ನರೇ ರೋಮನ್ನರಾದರೋ’ ಎಂದು ಕುಹಕವಾಡಿದ್ದೂ ಉಂಟು.

ಈ ಕುಹಕದಲ್ಲಿ ಅರ್ಥವಿಲ್ಲ ಎಂದೇನಲ್ಲ. ನೆನ್ನೆ ಮೊನ್ನೆಯತನಕ ಯುರೋಪಿನ ಧಾರ್ವಿುಕ ಮುಂದಾಳುಗಳು ಹಣ ವ್ಯಯಿಸುತ್ತಿದ್ದುದು ತಾವು ಇಂಥವರ ವಂಶಕ್ಕೆ ಸೇರಿದವರು ಎಂದು ಸಾಬೀತು ಪಡಿಸಲು ಮತ್ತು ಆ ವಂಶದವರಾದರೂ ಎಂಥವರು! ಪರ್ವತದ ಪ್ರದೇಶದಲ್ಲಿ ಅಡಗಿದ್ದು ದಾರಿಹೋಕರನ್ನು ಸುಲಿಯುತ್ತಿದ್ದ, ಮುಂದೆ Knighthood ಪಡೆದುಕೊಂಡ ಅದ್ಭುತ ವ್ಯಕ್ತಿಗಳದ್ದು!

ಗ್ರೀಕ್ ಸಂಸ್ಕೃತಿಯ ಅವನತಿಯ ನಂತರ ಯುರೋಪಿನಲ್ಲಿ ಚಿಂತನ ಸಾಮರ್ಥ್ಯ ಹಳ್ಳ ಹಿಡಿಯಿತೆಂದೇ ಹೇಳಬೇಕು. ಸಾಕ್ರಟೀಸನಿಗಿಂತಲೂ ಮುಂಚೆಯೇ ಪ್ರಾರಂಭವಾಗಿ ನಿರಾಯಾಸವಾಗಿ ಹರಿಯುತ್ತಿದ್ದ ರ್ತಾಕ ವಿಶ್ಲೇಷಣೆ, ಪ್ರಶ್ನೋತ್ತರ, ಸಂವಾದ ಸಂಸ್ಕೃತಿ ಹಾಗೂ Dialogues ಇತ್ಯಾದಿಗಳೆಲ್ಲ ರಾಹುಗ್ರಸ್ಥವಾಗಿ ರೋಮನ್ನರ ಕತ್ತಿಯ ಝುಳಪಿನ ಮುಂದೆ ಮೂಲೆಗುಂಪಾದವು. ಕಾನ್ಸೆ್ಟಂಟೈನ್ ಕ್ರಿ.ಶ. 4ನೇ ಶತಮಾನದಲ್ಲಿ ಕ್ರೖೆಸ್ತ ಧರ್ಮವನ್ನು ಅಪ್ಪಿಕೊಂಡು ಮತಾಂತರಿಯೊಬ್ಬನಿಗೆ ಸಹಜವಾದ ಅತ್ಯುತ್ಸಾಹ, ಉಗ್ರ ಅಭಿಮಾನಗಳಿಂದ Roman Imperialism, ಕ್ರಿಶ್ಚಿಯನ್ ಇಂಪಿರಿಯಲಿಸಮ್ ಆದ ಮೇಲೆ ಮತಾಂಧತೆಯ ಬೆಂಕಿ ಎಷ್ಟೋ ಅತ್ಯಮೂಲ್ಯ ಚಿಂತನೆಗಳನ್ನು ಸುಟ್ಟು ಹಾಕಿತು ಎಂದು ಇತಿಹಾಸಕಾರ ವಿಲ್ ಡ್ಯೂರೆಂಟ್ ಅಭಿಪ್ರಾಯಪಡುತ್ತಾರೆ. ಹೌದು! ಆರ್ಕ್ ಬಿಷಪ್ ಥಿಯೋಫಿಲಸ್ ಅಲೆಕ್ಸಾಂಡ್ರಿಯಾದ ಗ್ರಂಥಾಲಯವನ್ನೇ ನುಂಗಲಿಲ್ಲವೇ?! ಇಲ್ಲಿಂದ ಸುಮಾರು ಸಾವಿರ ವರ್ಷ ಯುರೋಪಿಯನ್ ಚಿಂತನೆ ಕುಟುಕು ಜೀವ ಉಳಿಸಿಕೊಂಡಿದ್ದು ಕಾನ್ಸಾ್ಟಂಟಿನೋಪಲಿನ ನಗಣ್ಯ ಆಶ್ರಯಗಳಲ್ಲಿ. ನಿಜಕ್ಕೂ ಇದು ಯುರೋಪಿಗೆ ಕಗ್ಗತ್ತಲೆಯ ಯುಗ. ಯೋಚಿಸಿ ನೋಡಿ. ಯುರೋಪಿನ ಪ್ರಪ್ರಥಮ ವಿಶ್ವವಿದ್ಯಾಲಯ ಬಂದದ್ದೇ ಕ್ರಿ.ಶ. 13ನೇ ಶತಮಾನದಲ್ಲಿ; ಸ್ಪೇನ್​ನಲ್ಲಿ. ಅದೂ ಆಫ್ರಿಕನ್ ಮುಸಲ್ಮಾನರಾದ ‘ಮೂರ್’ ಜನಾಂಗದಿಂದ. ಯುರೋಪಿಗೆ ಗಣಿತ ಶಾಸ್ತ್ರದ ಹೊಳಹುಗಳು ಸಿಕ್ಕಿದ್ದೇ ಅರಬ್​ರಿಂದ. ಆದ್ದರಿಂದಲೇ ಅವರು 1,2,3, ಇತ್ಯಾದಿ ಭಾರತೀಯ ಮೂಲದ ಅಂಕಿಗಳನ್ನು ಅರೇಬಿಕ್ ನ್ಯೂಮರಲ್ಸ್ ಎನ್ನುತ್ತಿದ್ದರು. ಅದರ ಮೂಲ ಭಾರತ ಎಂದು ಗೊತ್ತಾದ ಮೇಲೆಯೇ ‘ಹಿಂದು ಅರೇಬಿಕ್ ನ್ಯೂಮರಲ್ಸ್’ ಎಂದು ತಿದ್ದಿಕೊಂಡರು. ಇಂಥಾ ವಿದ್ಯಾವಿಹೀನ, ಚಿಂತನರಹಿತ ವಾತಾವರಣದಲ್ಲಿ ಸಿಕ್ಕಿಕೊಂಡಿದ್ದ ಯುರೋಪಿನಲ್ಲಿ ಯಾವ ತತ್ವಶಾಸ್ತ್ರ, ಸತ್ಯಾನ್ವೇಷಣೆಗಳನ್ನು ನಿರೀಕ್ಷಿಸಲು ಸಾಧ್ಯವಿತ್ತು! ಯಾವ ಗಹನ ಸಂಸ್ಕೃತಿಯೊಂದನ್ನು ನಿರ್ವಿುಸಲು ಸಾಧ್ಯವಿತ್ತು! ಹೀಗಾಗಿ ರಾಜಪೋಷಾಕಿನಲ್ಲಿ ವಿಜೃಂಭಿಸಿದ ಪೋಪರ ಧರ್ಮ ತಪೋನಿರತವಾಗುವುದು ಹೇಗೆ? ಪರಿಣಾಮ, ಸೇಂಟ್ ಫ್ರಾನ್ಸಿಸ್ ಆಫ್ ಅಸ್ಸಿಸಿ, ಸೇಂಟ್ ಥರೇಸಾ, (Mother Theresa ಅಲ್ಲ) ಇಗ್ನೇಷಿಯಸ್ ಲಯೋಲಾ ಮುಂತಾದ ಸಂತರನ್ನು ಪಡೆಯಲು ಯೂರೋಪಿನ ಧರ್ಮ 15 ಶತಮಾನದಷ್ಟು ದೀರ್ಘಕಾಲ ಕಾಯಬೇಕಾಯಿತು. ಆ ಸಂಸ್ಕೃತಿಯ ಆದರ್ಶವ್ಯಕ್ತಿಯಾಗಿ ‘ರಾಜಾ’ ಅಥವಾ ಚಕ್ರವರ್ತಿ ಆಸೀನನಾಗಿ ಆಳವಾದ ಬೇರುಗಳನ್ನು ಬಿಟ್ಟುಬಿಟ್ಟಿದ್ದ. ಇದಕ್ಕೆ ಜ್ವಲಂತ ಉದಾಹರಣೆಯೆಂದರೆ ಇಂಗ್ಲೆಂಡಿನ ರಾಜ ಆ ದೇಶದ ಧಾರ್ವಿುಕ ಮುಂದಾಳು ತಾನೆ ಏಕೆ ಆಗಿರಬಾರದು ಎಂದು ಯೋಚಿಸಿ ವ್ಯಾಟಿಕನ್​ಗೆ ಸೆಡ್ಡು ಹೊಡೆದು ಅದರಲ್ಲಿ ಸಾಕಷ್ಟು ಯಶಸ್ಸು ಗಳಿಸಿದ್ದು. ಅದರ ಪರಿಣಾಮವೇ ಆಂಗ್ಲಿಕನ್ ಚರ್ಚ್.

ಇನ್ನು ಕ್ಯಾಸ್ಪಿಯನ್ ಸಮುದ್ರದಿಂದ ಜಪಾನಿನವರೆಗೆ ವ್ಯಾಪಿಸಿದ್ದು ಭಾರತೀಯ ಸಂಸ್ಕೃತಿ ಇಲ್ಲವೆ ಆರ್ಯ ಸಂಸ್ಕೃತಿ. ಇಷ್ಟು ಹೇಳಿದರೆ ಅದು ಅರ್ಧಸತ್ಯ. ನಿಜಕ್ಕೂ, ಹೇಳಬೇಕೆಂದರೆ ಅದರ ವ್ಯಾಪ್ತಿ ಇಡೀ ಏಷ್ಯಾ, ಮಧ್ಯ ಅಮೆರಿಕ, ದಕ್ಷಿಣ ಅಮೆರಿಕ, ರಷ್ಯಾ, ಹಾಲೆಂಡ್, ಉತ್ತರ ಅಮೆರಿಕದ ಪೆಸಿಫಿಕ್ ತೀರ. ಆಫ್ರಿಕಾ ಮತ್ತು ಕೆನಡಾಗಳಲ್ಲಿ ಮಾತ್ರ ಭಾರತೀಯ ಸಂಸ್ಕೃತಿಯ ಸ್ಪಷ್ಟ ಕುರುಹುಗಳು ಇನ್ನೂ ಸಿಕ್ಕಿಲ್ಲ. ಬೇರೆಲ್ಲೆಡೆ ಸಿಕ್ಕಿವೆ. ಏಷ್ಯಾದಲ್ಲಂತೂ ಕ್ರಿಶ್ಚಿಯನ್ ಮತ್ತು ಇಸ್ಲಾಂ ಧರ್ಮಗಳು ಹುಟ್ಟುವುದಕ್ಕೆ ಮುಂಚೆ ಇದ್ದದ್ದು ಸನಾತನ ಧರ್ಮ ಇಲ್ಲವೆ ಅದರ ರೂಪಾಂತರಗಳು ಮಾತ್ರ. ಅದು ಬೌದ್ಧ, ಜೈನ, ಪಾರ್ಸಿ, ಶ್ಯಾಮಾ, ಷಿಂಟೊ ಯಾವುದೇ ಇರಲಿ, ಏಕೆಂದರೆ ಪ್ರಾರಂಭದಲ್ಲಿ ನಿರ್ವಿುತಗೊಂಡ ಈಜಿಪ್ಶಿಯನ್, ಸುಮೇರಿಯನ್, ಅಸ್ಸೀರಿಯನ್ ನಾಗರಿಕತೆಗಳ ನಿರ್ವತೃಗಳು ದಕ್ಷಿಣ ಭಾರತೀಯರು. ಆದರೆ, ಇದಕ್ಕೂ ಮುಂಚೆ ವೇದಕಾಲದ ಪ್ರಾರಂಭದಲ್ಲಿ ಸರಸ್ವತಿ ತೀರದಿಂದ ಹೊರದಬ್ಬಲ್ಪಟ್ಟ ಕೆಲ ದುಷ್ಟ ರಾಜರು ಇಲ್ಲಿ ನೆಲೆಗಳನ್ನು ಕಂಡುಕೊಂಡಿದ್ದಕ್ಕೆ ಇತಿಹಾಸಕಾರರು ಆಧಾರಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ದಕ್ಷಿಣ ಹಾಗೂ ಮಧ್ಯ ಅಮೆರಿಕದ ಮಾಯನ್ ಮತ್ತು ಇಂಕಾ ನಾಗರಿಕತೆಗಳಿಗೂ ಮತ್ತು ಭಾರತೀಯ ನಾಗರಿಕತೆಗೂ ಆಶ್ಚರ್ಯಗೊಳ್ಳುವಷ್ಟು ಹೋಲಿಕೆ ಇದೆ. ಆರ್ಯ ಸಂಸ್ಕೃತಿಯ ವ್ಯಾಪ್ತಿ ಸಾಧಿಸಲ್ಪಟ್ಟಿದ್ದು ಕತ್ತಿ ಅಥವಾ ಕೋವಿಯ ಸಹಾಯವಿಲ್ಲದೆ ಮತ್ತು ಇದು ‘ಕತ್ತಲೆಯ ಯುಗ’ಕ್ಕೂ ಮುಂಚೆಯೇ. ಈ ಬೆಳಕುಗಳು ಧ್ವಂಸವಾದ ಮೇಲೆಯೇ ಕತ್ತಲೆ ಆವರಿಸಿದ್ದು.

ಆರ್ಯ ಸಂಸ್ಕೃತಿ ಅಂದು ಹಾಗೂ ಇಂದು ಸ್ವಯಂಪ್ರೇರಣೆಯಿಂದಲೇ ಎಲ್ಲೆಲ್ಲೂ ಅಪ್ಪಿಕೊಳ್ಳಲ್ಪಡಲು ಕಾರಣವೇ ಓತಪೋ›ತವಾಗಿ ವ್ಯಾಪಿಸಿರುವ ಉದಾತ್ತತೆ ಮತ್ತು ಹಿತಾನುಭವ ಎಂದು ಅಮೆರಿಕದ ಪ್ರಸಿದ್ಧ ಕಾದಂಬರಿಗಾರ್ತಿ ಎಲ್ಲಾ ವೀಲರ್ ವಿಲ್​ಕಾಕ್ಸ್ ಹೇಳುತ್ತಾರೆ. ಇದರ ಜೊತೆಗೆ ಅದರಲ್ಲಿ ಪ್ರಧಾನವಾಗಿ ಕಾಣುವ ಸಹಜತೆ (Naturality), ವೈಯಕ್ತಿಕ ಸ್ವಾತಂತ್ರ್ಯ (Individual freedom or choice) ಮತ್ತು ವೈಶಾಲ್ಯ (Universality) ಎಂದು ವರ್ತಮಾನ ಅಮೆರಿಕದ ಕಾದಂಬರಿಗಾರ್ತಿ ಹಾಗೂ ಯೇಲ್ ವಿಶ್ವವಿದ್ಯಾಲಯದ ಪೊ›ಫೆಸರ್ ಲೀಸಾ ಮಿಲ್ಲರ್ ಹೇಳುತ್ತಾರೆ. ಇಲ್ಲಿ ಕಂಡುಬರುವಷ್ಟು ವೈಯಕ್ತಿಕ ಸ್ವಾತಂತ್ರ್ಯ, ವೈವಿಧ್ಯತೆ, ವೈಶಾಲ್ಯ ಒತ್ತಟ್ಟಿಗಿರಲಿ ಇದರ ಒಂದಂಶವೂ ಬೇರೆಡೆ ಕಾಣುವುದು ಅಪರೂಪ. Freedom is the first condition for growth ಎನ್ನುವ ಸ್ವಾಮಿ ವಿವೇಕಾನಂದರ ಮಾತಿಗೆ ಸ್ಪಷ್ಟ ಉದಾಹರಣೆಯೇ ಭಾರತೀಯ ಸಂಸ್ಕೃತಿ.

ಭಾರತೀಯ ಸಂಸ್ಕೃತಿಯ ಮತ್ತೊಂದು ಹೆಗ್ಗಳಿಕೆ ಅದರ ಪರಿಪೂರ್ಣ ಹಾಗೂ ಸಮಗ್ರ ದೃಷ್ಟಿಕೋನ. ವೈಯಕ್ತಿಕ ನೆಲೆ ಮತ್ತು ಸಾರ್ವತ್ರಿಕ ನೆಲೆ, ಬಾಹ್ಯ ಪ್ರಕೃತಿ ಮತ್ತು ಆಂತರಿಕ ಪ್ರಕೃತಿ, ವಿಜ್ಞಾನ ಮತ್ತು ಆಧ್ಯಾತ್ಮ, ಜೀವನ ಮತ್ತು ತಪಸ್ಸು ಇವೆಲ್ಲದರ ನಡುವೆ ಏಕಸೂತ್ರತೆ ಕಂಡುಕೊಂಡ ಏಕಮೇವ ಸಂಸ್ಕೃತಿ. ಪ್ರಶ್ನೆ ಮತ್ತು ಪರೀಕ್ಷೆಗಳಿಗೆ ಒಡ್ಡಿಕೊಂಡು ಅಂತಃಸತ್ವವನ್ನು ನೂರ್ಮಡಿಗೊಳಿಸಿಕೊಂಡೇ ಸಾಗಿದ ಸಂಸ್ಕೃತಿ ಇದು. ನಾಸ್ತಿಕನನ್ನು ಎಂದೂ ಅಪರಾಧಿಯ ಸ್ಥಾನದಲ್ಲಿ ನಿಲ್ಲಿಸಲಿಲ್ಲ ಭಾರತ. ಭಾರತೀಯ ಸಂಸ್ಕೃತಿ ಇಲ್ಲವೇ ಭಾರತೀಯ ಧರ್ಮದ ಕೇಂದ್ರಬಿಂದುವೇ ‘ನಾನು’ ಎನ್ನುವುದರ ವಿಶ್ಲೇಷಣೆ ಮತ್ತು ಅದರೆಡೆಗಿನ ಪೂರ್ಣಜ್ಞಾನ; ಅರ್ಥಾತ್ ಆತ್ಮಜ್ಞಾನ. ಯಾರಾದರೂ ತಮ್ಮನ್ನೇ ತಾವು ನಿರಾಕರಿಸಬಲ್ಲರೆ! ಹೀಗಾಗಿ ನಾಸ್ತಿಕತೆಗೆ ನೆಲೆಯೇ ಇಲ್ಲ.

ಇನ್ನೊಂದು ಆಶ್ಚರ್ಯಕರ ಮೈಲಿಗಲ್ಲು ಭಾರತೀಯ ಸಂಸ್ಕೃತಿಯಲ್ಲಿ ‘ಮನುಷ್ಯನ ಆಂತರ್ಯ’ (ಆತ್ಮ) ಮತ್ತು ಇಡೀ ‘ವಿಶ್ವದ ಆಂತರ್ಯ’ಗಳು ಒಂದೇ ಆಗಿವೆ ಎಂಬುದರ ತತ್ವಾನುಷ್ಠಾನ. ಇದರಿಂದಾಗಿ ಆತ್ಮನನ್ನು ಅರಿಯ ಹೊರಟ ಋಷಿಗಳಿಗೆ ಯಾವ ಪ್ರಯತ್ನವೂ ಇಲ್ಲದೆ ಎಲ್ಲ ವಿಜ್ಞಾನಗಳು ಕರಗತವಾಗಿದ್ದರಲ್ಲಿ ಆಶ್ಚರ್ಯವೇನಿದೆ ಎನ್ನುವ ಭಾವನೆಯನ್ನು ಪಾಲ್ ಡ್ಯೂಸನ್ ಮುಂತಾದ ಪಾಶ್ಚಾತ್ಯ ಚಿಂತಕರು ಹೇಳಿದ್ದಾರೆ. ಆದ್ದರಿಂದ ಆತ್ಮಜ್ಞಾನಕ್ಕೆ ಅವಶ್ಯವಾದ ಮನಸ್ಸನ್ನು ನಿಗ್ರಹಿಸುವುದು ಭಾರತೀಯ ಸಂಸ್ಕೃತಿಯ ಧ್ಯೇಯವಾಕ್ಯವಾಯಿತೇ ಹೊರತು ಪಕ್ಕದ ದೇಶವನ್ನೋ, ಅನ್ಯ ಧರ್ಮವನ್ನೋ ನಿಯಂತ್ರಿಸುವುದಲ್ಲ. ದೇಶ, ಧರ್ಮ, ಸಮಾಜ, ರಾಜಕೀಯಗಳೆಲ್ಲ ಈ ದಿಕ್ಕಿನಲ್ಲಿ ಸಲಕರಣೆಗಳೇ ಹೊರತು ಅವೇ ಅಂತಿಮವಲ್ಲ ಎಂಬುದನ್ನು ಸಂಶಯಕ್ಕೆಡೆಯಿಲ್ಲದಂತೆ ಸ್ಪಷ್ಟಪಡಿಸಿ ಈ ಮಹಾನ್ ಗುರಿಯನ್ನು ಸಾಧಿಸಿದ ಋಷಿಯನ್ನು ರಾಜನಿಗಿಂತ ಎತ್ತರದಲ್ಲಿಟ್ಟಿತು ಭಾರತೀಯ ಸಂಸ್ಕೃತಿ ಮತ್ತು ಅವನನ್ನೇ ಸಮಾಜದ ಆದರ್ಶವನ್ನಾಗಿಸಿತು. ದೇಶ ದೇಶಗಳನ್ನೇ ಗೆದ್ದಿದ್ದ ರಾಜರು ಮನೋನಿಗ್ರಹದಲ್ಲಿ ಸೋಲುಂಡು ಕೊನೆಗೆ ಅವರೇ ಘೊಷಿಸಿದರು- ‘ಕ್ಷಾತ್ರಶಕ್ತಿ ಆತ್ಮಜ್ಞಾನದ ಮುಂದೆ ಕಳಪೆ’ ಎಂದು; ಬ್ರಹ್ಮತೇಜಸ್ಸೇ ಮಹತ್ವದ್ದೆಂದು. ಇದೇ ಮನುಷ್ಯನೊಬ್ಬ ಸಾಧಿಸಬಹುದಾದ ಪರಮ ಔನ್ನತ್ಯ. ಭಾರತೀಯ ಸಂಸ್ಕೃತಿಯೇ ಇದಕ್ಕೆ ತರಬೇತಿ.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net