

ಶಾಲಾ ಮಕ್ಕಳ ಪಠ್ಯಪುಸ್ತಕಗಳಲ್ಲಿ ಕೆಲವೆಡೆ ಪರಿಷ್ಕರಣೆ ನಡೆದಿದೆ. ಯಾವುದೇ ವ್ಯವಸ್ಥೆಯಲ್ಲಿ ಕಾಲಕಾಲಕ್ಕೆ ಪರಿಷ್ಕರಣೆ ಅತ್ಯವಶ್ಯಕ. ಸಮಾಜ ನಿಂತ ನೀರಾಗಬಾರದು. ಸಮಾಜದಲ್ಲಿ ತಲೆಯೆತ್ತುವ ಸವಾಲುಗಳು ಬೇರೆ-ಬೇರೆ ಕಾಲಕ್ಕೆ ಬೇರೆಬೇರೆಯಾಗಬೇಕಾದ್ದೇ ಅನಿವಾರ್ಯ. ಜೊತೆಗೇ ಸಾರ್ವಕಾಲಿಕ ಸವಾಲುಗಳು ಇದ್ದೇ ಇರುತ್ತವೆ. ಅವು ಮನುಷ್ಯನ ಸ್ವಭಾವಕ್ಕೇ ಅಂಟಿಕೊಂಡಿದ್ದು ; ಮಾನವ ಜಾತಿಗೇ ಸಂಬಂಧಿಸಿದ್ದು. ಉದಾಹರಣೆಗೆ ಅರಿಷಡ್ವರ್ಗಗಳೆಂಬ ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯ ಮತ್ತು ದಂಬ, ದರ್ಪ, ಅಹಂಕಾರ, ಮಮಕಾರ ಇತ್ಯಾದಿ. ಇವು ಎಲ್ಲ ಕಾಲಕ್ಕೂ ಎಲ್ಲ ದೇಶಕ್ಕೂ ಎಲ್ಲ ಜನಾಂಗಗಳಿಗೂ ಸರಿ ಸಮಾನವಾಗಿಯೇ ಇರುವ ಸವಾಲುಗಳು. ಈ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ಯಾವ ಸಂದರ್ಭದಲ್ಲೂ ಪರಿಸ್ಥಿತಿಯ ಕೈಗೊಂಬೆಯಾಗದೆ, ಅಸಹಾಯಕನಾಗದೆ, ವಿಜೃಂಭಿಸುವುದೇ ಮಾನವನ ಗುರಿ. ಇದಕ್ಕೆ ಬೇಕಾದ ಎಲ್ಲ ಶಕ್ತಿ, ಸಾಮರ್ಥ್ಯ ಅವನ ಸ್ವಭಾವದಲ್ಲೇ, ಅವನ ಶರೀರ, ಬುದ್ಧಿಗಳ ರಚನೆಯಲ್ಲೇ ಹುದುಗಿದೆ. ಆದರೆ ಅದು ಬೀಜ ರೂಪದಲ್ಲಿದೆ. ಆ ಮೈಕ್ರೋ ಶಕ್ತಿಯನ್ನು ಮ್ಯಾಕ್ರೋ ಶಕ್ತಿಯನ್ನಾಗಿಸಿ ಮನುಷ್ಯನನ್ನು ಕೇವಲ ತನ್ನ ಸುಖವನ್ನು ಸಾಧಿಸಬಲ್ಲ ಅಲ್ಪನನ್ನಾಗಿಸದೆ ನೂರಾರು, ಸಾವಿರಾರು ವ್ಯಕ್ತಿಗಳ ಸುಖವನ್ನು ನಿರ್ವಿುಸಬಲ್ಲ ಮಹಾಶಕ್ತಿಯನ್ನಾಗಿಸುವುದಕ್ಕೆ ಒಂದು ತರಬೇತಿ ಬೇಕು. ಆ ತರಬೇತಿಯನ್ನೇ ಶಿಕ್ಷಣ ಎನ್ನುವುದು.
‘ಸಾ ವಿದ್ಯಾ ಯಾ ವಿಮುಕ್ತಯೆ’ ಯಾವುದು ಬಿಡುಗಡೆ ಮಾಡುತ್ತೋ ಅದೇ ವಿದ್ಯೆ. ಯಾವುದು ಎಲ್ಲ ಅಸಹಾಯತೆ, ಇತಿಮಿತಿಗಳಿಂದ ಮುಕ್ತಗೊಳಿಸುತ್ತೋ ಅದೇ ವಿದ್ಯೆ. 5 ವರ್ಷದ ಮಾಂಸದ ಮುದ್ದೆಯಂತಿರುವ ಮಗುವನ್ನು ಭರವಸೆಗಳ ಬ್ರಹ್ಮನನ್ನಾಗಿಸುವ ಮಹಾನ್ ಪ್ರಕ್ರಿಯೆ ಅದು. ವಿದ್ಯೆ ಎನ್ನುವ ಪ್ರಕ್ರಿಯೆ ಮೂರು ಹಂತಗಳಲ್ಲಿ ಹಾದುಹೋಗುತ್ತದೆ. ಬ್ರಿಟಿಷ್ ಚಿಂತಕ ಬರ್ಟ್ರಂಡ್ ರಸೆಲ್ ಹೇಳಿದಂತೆ "Information, Knowledge and Wisdom'. ಅವನು ಹಾಗೆ ಕರೆದರೆ ಪ್ರಾಚೀನ ಭಾರತ ‘ಶ್ರವಣಂ, ಮನನಂ, ನಿಧಿದ್ಯಾಸನಂ’ ಎನ್ನುವ ಮೂಲಕ ಅದೇ ಭಾವ ವ್ಯಕ್ತಪಡಿಸುತ್ತದೆ. ಅರ್ಥಾತ್ ಮಕ್ಕಳು ವಿಷಯಗಳನ್ನು ಕೇಳಬೇಕು ಅದನ್ನು ಚೆನ್ನಾಗಿ ಮಂಥಿಸಿ ರಕ್ತಗತ ಮಾಡಿಕೊಳ್ಳಬೇಕು. ಅದನ್ನೇ ಜೀವನದಲ್ಲಿ ಅಳವಡಿಸಿಕೊಂಡು ಕಾಡುಕಲ್ಲಾಗಿದ್ದ ತಮ್ಮನ್ನು ಸುಂದರ ಮೂರ್ತಿಯನ್ನಾಗಿಸಿಕೊಂಡು ಲೋಕ ಆಶ್ಚರ್ಯ ಪಡುವಂಥ ವ್ಯಕ್ತಿಯಾಗಬೇಕು. ಇಷ್ಟೂ ಈ ಭಿನ್ನ ಭಿನ್ನ ಪ್ರಕ್ರಿಯೆಗಳ ಹಿಂದಿರುವ ಉದ್ದೇಶ. ಕೇಳಬೇಕಾದ ವಿಷಯಗಳನ್ನು ಸಂಗ್ರಹಿಸಿ, ಅವುಗಳನ್ನು ವಿಭಾಗಿಸಿ ಪ್ರತಿ ತರಗತಿಗೂ ಅಲ್ಲಿಯ ಮಕ್ಕಳ ಬೌದ್ಧಿಕ ಸಾಮರ್ಥ್ಯವನ್ನವಲಂಬಿಸಿ ಬೇರೆಬೇರೆ ರೀತಿಯಲ್ಲಿ ಹಂಚುತ್ತಾರೆ. ಈ ಸಂಗ್ರಹ ರೂಪವನ್ನೇ ‘ಪಠ್ಯಪುಸ್ತಕ’ ಎನ್ನುತ್ತೇವೆ. ಈ ಪಠ್ಯಗಳು ಹೇಗಿರಬೇಕು?
ಅವು ಹೇಗಾದರೂ ಇರಲಿ. ಅವುಗಳ ಉದ್ದೇಶ ಮಾತ್ರ ‘ಬುದ್ಧಿ ಮತ್ತು ಹೃದಯಗಳ ವಿಕಸನ’ ಎಂಬುದನ್ನು ಮಾತ್ರ ಯಾವ ರಚನಾ ಸಮಿತಿಯವರೂ ಮರೆಯಬಾರದು. ಇವುಗಳಿಗೆ ಪೂರಕವಾದ ವಿಷಯಗಳನ್ನೇ ಪಠ್ಯಗಳಲ್ಲಿ ಹಾಕಬೇಕು. ಭಾಷಾ ವಿಭಾಗಕ್ಕೆ ಬಂದರೆ ಅಲ್ಲಿರುವ ಕನ್ನಡ, ಹಿಂದಿ, ಆಂಗ್ಲಭಾಷೆಗಳಲ್ಲಿ ಅದ್ಭುತ ಸಂದೇಶಗಳನ್ನು ನೀಡುವ, ಮಕ್ಕಳನ್ನು ಸ್ಪೂರ್ತಿಗೊಳಿಸುವ ವಿಚಾರಗಳಿಗೆ ಸ್ಥಾನವಿರಬೇಕು. ಸ್ಪೂರ್ತಿ ತುಂಬದ ವಿಚಾರ, ಸ್ಪೂರ್ತಿಗೊಳಿಸದ ಶಿಕ್ಷಕ ಇವರಿಂದ ಯಾವ ಪ್ರಯೋಜನವೂ ಇಲ್ಲ. ಮಕ್ಕಳಿಗೆ ಕಲಿಯುವುದರಲ್ಲಿ ಆಸಕ್ತಿ ಹೋಗಿ ಬಿಡುವುದಕ್ಕೆ ಕಾರಣವಾಗುವ ಅಂಶಗಳಲ್ಲಿ ಈ ಎರಡಕ್ಕೇ ಅಗ್ರಸ್ಥಾನ. ಬರೆದಿದ್ದೆಲ್ಲ ಸಾಹಿತ್ಯವೂ ಅಲ್ಲ, ಬರೆದವರೆಲ್ಲ ಸಾಹಿತಿಗಳೂ ಅಲ್ಲ. ‘ಸಾಹಿತ್ಯ’ ಪದ ‘ಸಹಿತ’ ಎನ್ನುವ ಪದದ ನಾಮವಾಚಕ. ಯಾವುದು ಹಿತವನ್ನು ಒಳಗೊಂಡಿದೆಯೋ ಅದು ‘ಸಹಿತ’. ಅದೇ ‘ಸಾಹಿತ್ಯ’ . ಈ ಸೂಕ್ಷ್ಮವನ್ನು ಗಮನಿಸಬೇಕು ‘ಹಿತ’ ಬೇರೆ ‘ಸುಖ’ ಬೇರೆ ; ಕಠೋಪನಿಷತ್ ಇದನ್ನು ಕ್ರಮವಾಗಿ ‘ಶ್ರೇಯಸ್ಕರ’ ಮತ್ತು ‘ಪ್ರಿಯಕರ’ ಎಂದು ವಿಂಗಡಿಸುತ್ತದೆ. ಹಿತವಾದದ್ದು ನಮ್ಮನ್ನು ಆದರ್ಶದೆಡೆಗೆ ಕರೆದೊಯ್ಯುತ್ತದೆ. ಸುಖವಾದದ್ದು ಸದ್ಯದ ಸ್ಥಿತಿಗೇ ಕಟ್ಟಿಹಾಕುತ್ತದೆ. ಹಿತವನ್ನೊಳಗೊಂಡ ಚಿಂತನೆಗೆ ರಸವನ್ನು ತುಂಬುವುದೇ ಇದಕ್ಕೆ ಉಪಾಯ. ಅದನ್ನು ಮಾಡಬಲ್ಲ ಸಾಮರ್ಥ್ಯವುಳ್ಳವನೇ ಸಾಹಿತಿ. ಇದನ್ನೇ ಶಿಕ್ಷಕ ತರಗತಿಯಲ್ಲಿ ಸ್ಪೂರ್ತಿಯುತವಾಗಿ ವರ್ಣಿಸಿ, ರ್ಚಚಿಸಿ, ವಿದ್ಯಾರ್ಥಿಗಳಿಗೆ ಸ್ವೀಕೃತವಾಗುವಂತೆ ಮಾಡಬೇಕು. ಅದು ಅವರ ಕರ್ತವ್ಯ.
ರಾಮಾಯಣ, ಮಹಾಭಾರತಗಳು ಅಲ್ಲಿಯೇ ಬರುವ ನೂರಾರು ಉಲ್ಲೇಖಗಳು ಇಲ್ಲಿ ಉದಾಹರಣೆಯಾಗಿ ನಿಲ್ಲುತ್ತವೆ. ‘ಚಂದ್ರಮತಿಯ ಪ್ರಲಾಪ’, ‘ಪುಣ್ಯಕೋಟಿ’ ಇತ್ಯಾದಿ ಪದ್ಯಗಳು ಮಕ್ಕಳ ಹೃದಯವನ್ನು ಕಲಕಿ ಉಳುಮೆ ಮಾಡಿ ಅಲ್ಲಿ ಆದರ್ಶಗಳ ಬೀಜ ಬಿತ್ತುತ್ತವೆ. ಅಡ್ಡಹಾದಿಯಲ್ಲಿ ಬಹುದೂರ ಸಾಗಿದ್ದ ‘ಮೋಹನದಾಸ’ನನ್ನು ‘ಮಹಾತ್ಮ’ನನ್ನಾಗಿಸಿದ್ದು ‘ಹರಿಶ್ಚಂದ್ರ’ ನಾಟಕ. ಯಾವ ಹುಡುಗನೂ ಪರಿವರ್ತನೆಯಾಗಬಲ್ಲ ಶ್ರವಣ ಮತ್ತು ದೃಶ್ಯಮಾಧ್ಯಮಗಳು ತಾವಿರಬೇಕಾದ ರೀತಿಯಲ್ಲಿದ್ದರೆ. ಈ ಪರಿವರ್ತನೆಗೆ ಕಾರಣವಾಗುವುದೇ Knowledge, Wisdom ಆಗಿ ಮಾಗಿದಾಗ. ಪಠ್ಯ ಮತ್ತು ಶಿಕ್ಷಕ ಇಬ್ಬರೂ ಪ್ರಸ್ತುತವಾಗುವುದೇ ಇಲ್ಲಿ.
ಆದರೆ ‘ಸಾಹಿತಿ’ ಹೇಗ್ಹೇಗೋ ಬದುಕಿದ್ದರೆ ಅವನ ‘ಕೃತಿ’ ಎಂದಿಗೂ ಸಾಹಿತ್ಯವಾಗಲಾರದು. ಆದರ್ಶಗಳನ್ನು ಬದುಕದ ವ್ಯಕ್ತಿ ಆದರ್ಶಗಳನ್ನು ಹೇಳಿದರೆ ಅದೊಂದು ವ್ಯರ್ಥಾಲಾಪ. ಯಾರ ವಿಚಾರಗಳನ್ನು ಮಕ್ಕಳು ಓದಬೇಕು ಎನ್ನುವುದಕ್ಕೆ ಇದೇ ಉತ್ತರ. ಬದುಕು ಬೇರೆ, ಬರಹ ಬೇರೆ ಎನ್ನುವುದು ಇತ್ತೀಚಿನ ಗಾಂಭೀರ್ಯವಿಲ್ಲದ convenient Philosophy. ‘ವಾಸ್ತವವನ್ನು ಮಕ್ಕಳಿಗೆ ತಿಳಿಸೋಣ’ ಎನ್ನುವ ಅರ್ಥಹೀನ ದೃಷ್ಟಿಕೋನ ಸಲ್ಲದು. ವಾಸ್ತವ ತಿಳಿಸಬೇಕಾದ ಅವಶ್ಯಕತೆಯೇ ಇಲ್ಲ. ಇರುವ ಸ್ಥಿತಿಯೇ ವಾಸ್ತವ; ಇರಬೇಕಾಗಿದ್ದ ಸ್ಥಿತಿ ಆದರ್ಶ. ಕಾಯಿಲೆ ಬಿದ್ದ ಮಗನ ಔಷಧಕ್ಕಾಗಿ ತಾಯಿ ಶೀಲವನ್ನು ಮಾರಿಕೊಂಡಳು ಎನ್ನುವುದು ಎಂದಿಗೂ ಸಾಹಿತ್ಯವಲ್ಲ ; ಆದರ್ಶವೂ ಅಲ್ಲ. ‘ಆದರ್ಶವಿರುವ ವ್ಯಕ್ತಿ ಒಂದು ತಪ್ಪು ಮಾಡಿದರೆ ಆದರ್ಶವಿಲ್ಲದ ವ್ಯಕ್ತಿ ಐವತ್ತು ಸಾವಿರ ತಪ್ಪು ಮಾಡುತ್ತಾನೆ’ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು. ಆದರ್ಶ ಕಷ್ಟ. ಹಾಗೆಂದು, ಅದಕ್ಕೆ ತಿಲಾಂಜಲಿ ಕೊಡಲಾಗುವುದಿಲ್ಲ, ಅದನ್ನು ಮುಟ್ಟಲು ನಿರಂತರ ಸ್ಪೂರ್ತಿ, ಪ್ರೇರಣೆ, ಪ್ರಚೋದನೆಗಳು ಸಿಗುತ್ತಿರಬೇಕು ಮಗುವಿಗೆ. ಅವನು ವಿದ್ಯಾರ್ಥಿಯಾಗಿದ್ದಾಗಲೇ ಸಿಗಬೇಕು. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ?! ಈ ಪ್ರೇರಣೆ ವಯಸ್ಸಾದಂತೆಲ್ಲ ‘ಬದ್ಧತೆ’ಗಳಾಗಿ ಪರಿವರ್ತನೆಯಾಗಬೇಕು. ಇದೊಂದು ಹೋರಾಟ. ಈ ಹೋರಾಟವೇ ಜೀವನ. ಎಲ್ಲಿ ‘ಆದರ್ಶ’ವನ್ನು ಮುಟ್ಟಲು ‘ಹೋರಾಟ’ ಇಲ್ಲವೋ ಅಲ್ಲಿ ‘ಜೀವನ’ ಇಲ್ಲ. ಅದು ‘ಜೀವ’ ‘ನ’! ಇಲ್ಲವೇ ‘ಜೀ’ ‘ವನ’!. ವಿವೇಕಾನಂದರು ಜೀವನವನ್ನು ವ್ಯಾಖ್ಯಾನಿಸಿದ್ದೇ ‘ಹೋರಾಟ’ ಎಂದು. ಕನ್ನಡ ಪಠ್ಯ ಮಾಡಬೇಕಾದ್ದು ಮೇಲಿನ ಕೆಲಸವನ್ನೇ. ಇಲ್ಲಿ ಯಾರ ಪಾಠ ಇರಬೇಕು, ಯಾರ ಪಾಠ ಇರಬಾರದು ಎನ್ನುವುದು ಪ್ರಮುಖ ಅಂಶ ಅಲ್ಲ.
ಇನ್ನು ವಿವಾದಕ್ಕೆ ಒಳಗಾಗುತ್ತಿರುವ ಮತ್ತೊಂದು ವಿಷಯ ಇತಿಹಾಸಕ್ಕೆ ಸಂಬಂಧಿಸಿದ್ದು. ಇಂತಹ ವಿಷಯಗಳ ಬಗ್ಗೆ ಅಧಿಕಾರವಾಣಿಯಿಂದ ಮಾತನಾಡಬಲ್ಲ ಸ್ವಾಮಿ ವಿವೇಕಾನಂದರು ಈ ಕುರಿತು ಏನು ಹೇಳುತ್ತಾರೆ ಎಂಬುದನ್ನು ನೋಡೋಣ- ‘ಈಗಿರುವ ಭಾರತದ ಇತಿಹಾಸವೆಲ್ಲ ಅವ್ಯವಸ್ಥಿತ. ಪಾಶ್ಚಾತ್ಯರು ಬರೆದ ಈ ಚರಿತ್ರೆ ನಮ್ಮ ಮನಸ್ಸನ್ನು ದುರ್ಬಲಗೊಳಿಸುತ್ತದೆಯಷ್ಟೇ! ಏಕೆಂದರೆ ಅದು ಮೊದಲಿನಿಂದ ಕೊನೆಯವರೆಗೂ ನಮ್ಮ ಅವನತಿಯನ್ನೇ ಹೇಳುತ್ತದೆ. ನಮ್ಮ ಧರ್ಮ-ಸಂಸ್ಕೃತಿ- ತತ್ತ್ವಗಳನ್ನು, ಆಚಾರ-ವಿಚಾರ- ಸಂಪ್ರದಾಯಗಳನ್ನು ಅರ್ಥಮಾಡಿಕೊಳ್ಳಲಾಗದ ಆ ವಿದೇಶೀಯರು ಪೂರ್ವಗ್ರಹಪೀಡಿತವಲ್ಲದ, ಪ್ರಾಮಾಣಿಕ, ನಿಷ್ಪಕ್ಷಪಾತ ಚರಿತ್ರೆಯನ್ನು ಬರೆಯಲು ಹೇಗೆ ಸಾಧ್ಯ! ಸ್ವಾಭಾವಿಕವಾಗಿಯೇ ಎಷ್ಟೋ ತಪ್ಪು ತಿಳಿವಳಿಕೆಗಳು, ತಪ್ಪು ತೀರ್ವನಗಳು ಅವುಗಳಲ್ಲಿ ನುಸುಳಿವೆ. ವೇದಗಳನ್ನು, ಪುರಾಣಗಳನ್ನು ಹಾಗೂ ಪ್ರಾಚೀನ ಐತಿಹಾಸಿಕ ದಾಖಲೆಗಳನ್ನು ಅಧ್ಯಯನ ಮಾಡಿ ಅದರ ಸಹಾಯದಿಂದ ನಿಷ್ಕೃಷ್ಟ, ಸಹಾನುಭೂತಿಪರವಾದ, ಸ್ಪೂರ್ತಿಯುತವಾದ ನಮ್ಮ ನಾಡಿನ ಇತಿಹಾಸವನ್ನು ಬರೆಯಬೇಕು. ಭಾರತದ ಇತಿಹಾಸವನ್ನು ಬರೆಯಬೇಕಾದವರು ಭಾರತೀಯರು. ಅದರಂತೆಯೇ ಪ್ರಾಚೀನ ಭಾರತದ ವೈಭವವನ್ನು ಜನಮಾನಸದಲ್ಲಿ ಪುನಃಸ್ಥಾಪಿಸುವವರೆಗೂ ನಿಮ್ಮ ಕಾರ್ಯವನ್ನು ನಿಲ್ಲಿಸಬೇಡಿ. ನಿಜವಾದ ರಾಷ್ಟ್ರೀಯ ಶಿಕ್ಷಣವೆಂದರೆ ಅದು, ಇಂತಹ ರಾಷ್ಟ್ರೀಯ ಶಿಕ್ಷಣದ ಪ್ರಗತಿಯೊಂದಿಗೆ ರಾಷ್ಟ್ರಪ್ರಜ್ಞೆಯೂ ಜಾಗೃತವಾಗುತ್ತದೆ’.
ನೋಡಿ ಹೇಗಿತ್ತು ಇಲ್ಲಿಯವರೆಗೂ ನಮ್ಮ ಇತಿಹಾಸದ ಪುಸ್ತಕಗಳು! ಇವುಗಳ ಪರಿಷ್ಕರಣೆ ಯಾಗಬಾರದೇ? ಇಂತಹ ಇತಿಹಾಸವನ್ನು ಓದಿದವರಿಂದ ಯಾವ ರಾಷ್ಟ್ರಪ್ರೇಮ ನಿರೀಕ್ಷಿಸಲಾದೀತು! ಅವ್ಯವಸ್ಥಿತ, ಅವನತಿ ಸೂಚಕ, ದೌರ್ಬಲ್ಯಕಾರಕ, ಅಜ್ಞಾನ ಜನ್ಯ, ಪೂರ್ವಗ್ರಹಪೀಡಿತ, ಅಪ್ರಾಮಾಣಿಕ ಇತಿಹಾಸವನ್ನು ಎಂದೋ ಬದಲಾಯಿಸಬೇಕಿತ್ತು ; Better late than never ಎಂದು ಸಮಾಧಾನ ಪಟ್ಟುಕೊಳ್ಳಬೇಕು ಅಷ್ಟೇ. ಪಠ್ಯಗಳನ್ನು ಇತ್ತೀಚೆಗಾದರೂ ಬರೆದವರು ಭಾರತೀಯರೇ ಅಲ್ಲವೇ ಎಂದರೆ, ಸ್ವಾಮೀಜಿ ಹೇಳಿದಂತೆ ಇವರೇನು ವೇದ-ಪುರಾಣ, ಪ್ರಾಚೀನ ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಸ್ವತಃ ತಾವೇ ರಚಿಸಿದ್ದೇನಲ್ಲವಲ್ಲ, ಯುರೋಪಿಯನ್ ಪಂಡಿತರ ಭಾಷಾಂತರ ಕೃತಿಗಳೇನೋ ಎನ್ನುವಷ್ಟರಮಟ್ಟಿಗೆ ಕೇವಲ ಹುಟ್ಟಿನಿಂದ ಭಾರತೀಯರಾದ ಬೇರೆಲ್ಲದರಲ್ಲೂ ಯುರೋಪಿಯನ್ನರಂತೆಯೇ ಇರುವ ರೋಮಿಲಾ ಥಾಪರ್, ಇರ್ಫಾನ್ ಹಬೀಬ್, ಮುಂತಾದ ಘ.ಇ.ಏ. ಪ್ರಭೃತಿಗಳ ಪುಸ್ತಕಗಳನ್ನೇ ನಕಲು ಮಾಡಿದವರು ಇವರು. ಇದಕ್ಕೆ ವಿರುದ್ಧವಾಗಿ ಹಿಂದೆಯೇ ವಿರೋಧಿಸಿದ್ದ ಡಾ.ರಮೇಶ್ಚಂದ್ರ ಮಜುಂದಾರ್ ಮುಂತಾದವರನ್ನು ನಗಣ್ಯವಾಗಿಸಿದ್ದು ಘ.ಇ.ಏ. ನ ಕುಟಿಲತೆ ಹಾಗೂ ತಂತ್ರಗಾರಿಕೆ. ವಿವೇಕಾನಂದರ ಭಾವನೆಗಳಿಗೆ ಗಮನವನ್ನೇ ಕೊಡದ ಉದ್ಧಟತನಕ್ಕಾದರೂ ಏನೆನ್ನಬೇಕು! ದೇಶ-ದೇಶಗಳ ಭವಿಷ್ಯವನ್ನೇ ಮೊದಲೇ ಕಂಡಿದ್ದರೇನೋ ಎನ್ನುವಷ್ಟು ಕರಾರುವಾಕ್ಕಾಗಿ ದಶಕಗಳ ಹಿಂದೆಯೇ ನುಡಿದಿದ್ದವರು ಅವರು. ಇದನ್ನೇನೂ ಅವರು ಯೋಗಶಕ್ತಿಯಿಂದ ಮಾಡಿದ್ದಲ್ಲ, ಅವರ ಐತಿಹಾಸಿಕ ಪ್ರಜ್ಞೆಯೇ ಅಷ್ಟು ಆಳ ಮತ್ತು ಪರಿಪೂರ್ಣ. ನಡೆದುಹೋದ ಘಟನೆಗಳನ್ನೇ ಸರಿಯಾಗಿ ದಾಖಲಿಸಲಾರದ ಸಾಮರ್ಥ್ಯಹೀನ ಇತಿಹಾಸಕಾರರು, ಭೂತಕಾಲವಿರಲಿ ಭವಿಷ್ಯತ್ತನ್ನೇ ಇಣುಕಿ ನೋಡಬಲ್ಲ ವಿವೇಕಾನಂದರನ್ನು ಜೀರ್ಣಿಸಿಕೊಳ್ಳುವುದಾದರೂ ಹೇಗೆ?
ಭಾರತದ ಚರಿತ್ರೆ ಮೊದಲನೇ ವರ್ಗದಿಂದ ಸ್ನಾತಕೋತ್ತರದವರೆಗೆ ಆಮೂಲಾಗ್ರವಾಗಿ ಬದಲಾವಣೆಯಾಗಬೇಕು! ವಿಜ್ಞಾನ ವೈಜ್ಞಾನಿಕತೆಗಳ ಬಗ್ಗೆ ಬೊಬ್ಬೆ ಹೊಡೆಯುವ ವರ್ಗ ‘ಹಾಗೆಂದರೇನು’ ಎನ್ನುವುದನ್ನು ಅರಿತೇ ಮಾತನಾಡಬೇಕು. ಭಾರತೀಯ ವಿಚಾರಧಾರೆಯ ವಿರುದ್ಧವಾದದ್ದೇ ವಿಜ್ಞಾನ ಅಥವಾ ಪಶ್ಚಿಮದಿಂದ ಹರಿದು ಬಂದಿದ್ದೇ ವಿಜ್ಞಾನ ಎನ್ನುವ ಮೌಢ್ಯತೆಯ ಗಟ್ಟಿ ಪದರದಿಂದ ಆಚೆ ಬರಬೇಕು. ಮತ್ತೊಮ್ಮೆ ಸ್ವಾಮಿ ವಿವೇಕಾನಂದರ ಮಾತು ಇಲ್ಲಿ ಪ್ರಸ್ತುತ- ‘ಎಲ್ಲ ವಿಜ್ಞಾನಗಳೂ ಹುಟ್ಟಿದ್ದು ಭಾರತದಲ್ಲಿ ಬೇರೆಯವರು ಅದನ್ನು ಬೆಳೆಸಿದರಷ್ಟೇ’. ಇದಕ್ಕೆ ಪುರಾವೆಯಾಗಿ ವೇದ ಹಾಗೂ ಇನ್ನಿತರ ದರ್ಶನ ಶಾಸ್ತ್ರಗಳಿಂದ ಎಷ್ಟು ಉದಾಹರಣೆಗಳನ್ನಾದರೂ ಕೊಡಬಹುದು.
(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)