ಹಲವು ಘಟನೆಗಳಿಗೆ ಸಾಕ್ಷಿಯಾದ ಪವಿತ್ರ ತಿಂಗಳು

Moharam
Published on

| ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ

ಮುಸ್ಲಿಂ ಸಮುದಾಯದ ಕ್ಯಾಲೆಂಡರ್​ನ 12 ತಿಂಗಳಲ್ಲಿ ಮುಹರ್ರಮ್ (ಮೊಹರಂ) ಪ್ರಥಮ ತಿಂಗಳಾಗಿದ್ದು, ಇಸ್ಲಾಮಿನ ಇತಿಹಾಸದಲ್ಲಿ ಹಲವು ಪ್ರಮುಖ ಘಟನೆಗಳು ಸಂಭವಿಸಿದ ಪವಿತ್ರ ತಿಂಗಳಾಗಿದೆ. ಮುಹರ್ರಮ್ ಎಂಬ ಪದದ ಮೂಲವು ‘ಹುರುಮ್ ಎಂಬುದಾಗಿದ್ದು ಅದರ ಅರ್ಥ ‘ಪಾವಿತ್ರ್ಯ’ ಎಂಬುದಾಗಿದೆ. ಮೊಹರಂ ಎಂದಾಕ್ಷಣ ಥಟ್ಟನೆ ನೆನಪಾಗುವುದು ಮುಹಮ್ಮದ್ ಪೈಗಂಬರರ ಮೊಮ್ಮಗ ಇಮಾಮ್ ಹುಸೈನರ ಬಲಿದಾನ ಹಾಗೂ ಆ ನಿಮಿತ್ತದ ಹಲವು ಆಚರಣೆಗಳು.

ಐಚ್ಛಿಕ ಉಪವಾಸದ ತಿಂಗಳು: ಮೊಹರಂ ತಿಂಗಳ 9 ಹಾಗೂ 10ನೇ ದಿವಸದಂದು ಮುಸ್ಲಿಂರು ಐಚ್ಛಿಕ ಉಪವಾಸವನ್ನು ಆಚರಿಸುತ್ತಾರೆ. ಈ ಉಪವಾಸಕ್ಕೂ ಹಿನ್ನೆಲೆ ಇದೆ. ಪ್ರವಾದಿ ಮುಹಮ್ಮದರು ಮಕ್ಕಾ ಪಟ್ಟಣದಿಂದ ಮದೀನಾಕ್ಕೆ ಹಿಜಿರಾ(ವಲಸೆ) ಬಂದಾಗ ಮದೀನಾ ನಗರದ ಯಹೂದಿಗಳು ‘ಅಶೂರ’ ದಿನ (ಮೊಹರಂ ತಿಂಗಳ 10ನೇ ದಿನ) ಉಪವಾಸ ಆಚರಿಸುತ್ತಿದ್ದರು. ಯಾವ ಕಾರಣಕ್ಕಾಗಿ ಅವರು ಉಪವಾಸ ಆಚರಿಸುತ್ತಿದ್ದಾರೆ ಎಂದು ಮುಹಮ್ಮದ್ ಪೈಗಂಬರರು ಕೇಳಿದಾಗ ಆ ದಿನದಂದು ಪ್ರವಾದಿ ಮೂಸ (ಮೋಶೆ) ಹಾಗೂ ಅವರ ಅನುಯಾಯಿಗಳನ್ನು ಸರ್ವಾಧಿಕಾರಿ, ಕ್ರೂರ ಆಡಳಿತಗಾರನಾಗಿದ್ದ ಫರೋವಾನ ಕಿರುಕುಳದಿಂದ ದೇವನು ವಿಮೋಚನೆಗೊಳಿಸಿದ. ಈ ಕಾರಣಕ್ಕೆ ದೇವನಿಗೆ ಕೃತಜ್ಞತೆ ಸಲ್ಲಿಸಲು ಪ್ರವಾದಿ ಮೋಶೆ ಉಪವಾಸ ಆಚರಿಸಿದರು ಎಂದು ತಿಳಿಸಿದಾಗ ಪ್ರವಾದಿ ಮುಹಮ್ಮದರು ಸ್ವಯಂ ತಾವು ಉಪವಾಸವಿದ್ದುದಲ್ಲದೆ ತಮ್ಮ ಸಮುದಾಯಕ್ಕೆ ಅದನ್ನು ಆಚರಿಸಲು ತಿಳಿಸಿದರು. ಮಾತ್ರವಲ್ಲ, ಮೊಹರಂ ತಿಂಗಳ 9 ಮತ್ತು 10ನೇ ದಿವಸದ ಉಪವಾಸ ಗತವರ್ಷದ ಪಾಪಗಳಿಗೆ ಪ್ರಾಯಶ್ಚಿತವಾಗಿದೆ ಎಂದು ತಿಳಿಸಿದ್ದಾರೆ.

ಇಸ್ಲಾಂ ಇತಿಹಾಸದಲ್ಲಿ ಹಲವಾರು ಘಟನೆಗಳು ಈ ತಿಂಗಳಲ್ಲಿ ಆಗಿವೆ. ಅಲ್ಲಾಹನು ಆದಿಪಿತ ಆದಮರನ್ನು ಸೃಷ್ಟಿಸಿ ಅವರನ್ನು ಸ್ವರ್ಗಲೋಕಕ್ಕೆ ಕಳುಹಿಸಿದ್ದು ಮೊಹರಂ ತಿಂಗಳಲ್ಲಿ. ಅದೇ ರೀತಿ ಪೂರ್ವ ಪ್ರವಾದಿಯಾದ ಇಬ್ರಾಹಿಮ್​ಅಬ್ರಾಹಂ)ರ ಜನನ ಇದೇ ತಿಂಗಳಲ್ಲಾಗಿತ್ತು. ವೈರಿಗಳು ಪ್ರವಾದಿ ಅಬ್ರಾಹಂರನ್ನು ಕೊಲ್ಲಲು ಅಗ್ನಿಕುಂಡಕ್ಕೆ ಹಾಕಿದಾಗ ದೇವನ ಕೃಪೆಯಿಂದ ಅವರು ಅಗ್ನಿಕುಂಡದಿಂದ ಹೊರಬಂದಂಥ ಘಟನೆ ಸಂಭವಿಸಿದ್ದು ಮೊಹರಂ ತಿಂಗಳಲ್ಲಿ. ಪ್ರವಾದಿ ಮೂಸಾ(ಮೋಶೆ)ರವರ ಅನುಯಾಯಿಗಳ ಘಟನೆ ಹಾಗೂ ಪ್ರವಾದಿ ಈಸಾ(ಜೀಸಸ್)ರನ್ನು ದೇವನು ವೈರಿಗಳಿಂದ ತನ್ನೆಡೆಗೆ ಕರೆಸಿಕೊಂಡ ಘಟನೆ ಇದೇ ತಿಂಗಳಲ್ಲಿ ನಡೆದಿತ್ತು.

ವಂಶಾಡಳಿತ ವಿರೋಧಿಸಿ ಹುತಾತ್ಮರಾದ ಇಮಾಮ್ ಹುಸೈನ್: ಮುಹಮ್ಮದ್ ಪೈಗಂಬರರ ನಂತರ ಖಲೀಫಗಳು ಆಡಳಿತ ನಡೆಸಿದರು. ಖಲೀಫ ಅಂದರೆ ಜನರ ಪರಸ್ಪರ ಸಮಾಲೋಚನೆ ನಂತರ ಚುನಾಯಿಸಲ್ಪಟ್ಟ ಆಡಳಿತಗಾರ. ಹಿಜರಿ ಶಕೆ 40ರಲ್ಲಿ ಮುಆವಿಯಾ ಎಂಬುವರು ಖಲೀಫಾ ಆದರು. ತಮ್ಮ ನಂತರ ಮುಆವಿಯಾರವರು ಮಗ ಯಝೀದರನ್ನು ಉತ್ತರಾಧಿಕಾರಿಯನ್ನಾಗಿಸಲು ಬಯಸಿದರು. ವಂಶಾಡಳಿತವನ್ನು ಹೇರಲು ಪ್ರಯತ್ನಿಸುತ್ತಿರುವ ಕಾರಣಕ್ಕಾಗಿ ಇಮಾಮ್ ಹುಸೈನ್ ಆದಿಯಾಗಿ ಹಲವರು ಇದನ್ನು ವಿರೋಧಿಸಿದರು. ಆದರೆ ಮುಆವಿಯಾ ನಿಧನರಾದ ಬಳಿಕ ಯಝೀದ್ ಪಟ್ಟವನ್ನೇರಿದರು. ಖಿಲಾಫತ್ ಆಶಯಗಳಿಗೆ ವಿರುದ್ಧವಾಗಿ ಅಧಿಕಾರಕ್ಕೇರಿದ ಯಝೀದರ ನಿರಂಕುಶ ಆಡಳಿತದಿಂದ ಬೇಸತ್ತ ಕೂಫಾ ಪ್ರದೇಶದ ಜನರು ಇಮಾಮ್ ಹುಸೈನರನ್ನು ಆಡಳಿತಗಾರನನ್ನಾಗಿ ನೇಮಿಸಲು ತೀರ್ವನಿಸಿ ಅವರಿಗೆ ಆಹ್ವಾನವಿತ್ತರು. ಅಲ್ಲಿ ನಡೆಯುತ್ತಿದ್ದ ಅನ್ಯಾಯ, ಸ್ವಜನ ಪಕ್ಷಪಾತದ ಅರಿವಿದ್ದ ಇಮಾಮ್ ಹುಸೈನರು ಧರ್ಮದ ಆದರ್ಶಗಳ ಅನ್ವಯ ಉತ್ತಮ ಆಡಳಿತ ನೀಡುವ ಸದವಕಾಶ ಗುರುತಿಸಿದರು. ಅವರ ಆಹ್ವಾನವನ್ನು ಮನ್ನಿಸಿ ಇಮಾಮ್ ಹುಸೈನರು ಕೂಫಾದೆಡೆಗೆ ಪರಿವಾರ ಸಮೇತ ಹೊರಟರು. ಇದರ ಸುಳಿವು ಯಝೀದರಿಗೆ ದೊರಕಿತು. ಹಿಜರಿ ಶಕೆ 61ನೆಯ ವರ್ಷದಲ್ಲಿ ಇರಾಕ್ ದೇಶದ ಕರ್ಬಲಾ ಪ್ರದೇಶದಲ್ಲಿ ಇಮಾಮ್ ಹುಸೈನ್ ಮತ್ತು ಅವರ ಪರಿವಾರವನ್ನು ಮುತ್ತಿಗೆ ಹಾಕಿದ ಯಝೀದ್​ರ ಭಾರೀ ಸೈನ್ಯ ಅವರ ಅನ್ನಾಹಾರಗಳನ್ನು ತಡೆಯಿತು. ಅತೀವ ಕಷ್ಟನಷ್ಟ ಅನುಭವಿಸಿದ ಇಮಾಮ್ ಹುಸೈನ್ ಮತ್ತು ಅವರ ಪರಿವಾರದ ಸ್ತ್ರೀ-ಪುರುಷರೆಲ್ಲರೂ ವೀರಾವೇಶದಿಂದ ಹೋರಾಡಿ ವೀರಮರಣ ಹೊಂದಿದರು. ಈ ಘಟನೆ ಸಂಭವಿಸಿದ್ದು ಮೊಹರಂ ತಿಂಗಳ 10ನೇ ದಿನದಲ್ಲಿ.

ಇಮಾಮ್ ಹುಸೈನರ ಜೀವನದಲ್ಲಿ ನಮಗೆ ಬಲುದೊಡ್ಡ ಪಾಠವಿದೆ. ಮೇಲ್ನೋಟಕ್ಕೆ ಅವರ ಬಲಿದಾನ ಕ್ರೂರ ಆಡಳಿತಗಾರನ ವಿರುದ್ಧದ ಬಂಡಾಯವೆಂದೆನಿಸುತ್ತದೆ. ಆದರೆ ಹುಸೈನರು ಇದರ ದೂರಗಾಮಿ ಪರಿಣಾಮಗಳನ್ನು ಅರಿತಿದ್ದರು. ಖಿಲಾಫತ್ ಆಡಳಿತದ ಮೂಲಭೂತ ತತ್ತ್ವಗಳಿಗುಂಟಾದ ಧಕ್ಕೆಯನ್ನು ಗ್ರಹಿಸಿದ್ದರು. ಯಾವುದೇ ವ್ಯಕ್ತಿ ಸ್ವಇಚ್ಛೆಯಿಂದ ಅಧಿಕಾರ ಗಳಿಸಲು ಪ್ರಯತ್ನಿಸಬಾರದು. ಜನರು ಸಮಾಲೋಚನೆ ಮೂಲಕ ಉತ್ತಮ ವ್ಯಕ್ತಿಯನ್ನು ಆರಿಸಿ ಅವನಿಗೆ ಅಧಿಕಾರವನ್ನು ನೀಡಬೇಕಿತ್ತು. ಆದರೆ ಇಲ್ಲಿ ವಂಶಾಡಳಿತವನ್ನು ಹೇರಿ ಅಯೋಗ್ಯ ವ್ಯಕ್ತಿಯಾದ ಯಝೀದಗೆ ಪಟ್ಟಾಭಿಷೇಕ ಮಾಡಲಾಗಿತ್ತು. ಇದರಿಂದಾಗಿ ಖಲೀಫಾ ಆಡಳಿತದ ಮುಖ್ಯ ಸ್ತಂಭವಾದ ‘ಮಜ್ಲಿಸೆ ಶೂರಾ’ ಅಂದರೆ ಸಮಾಲೋಚನಾ ವ್ಯವಸ್ಥೆ ಕುಸಿದು ಅಭಿವ್ಯಕ್ತಿ ಸ್ವಾತಂತ್ರ್ಯದ ದಮನವಾಯಿತು. ಆಡಳಿತಗಾರರಲ್ಲಿ ಹೊಣೆಗಾರಿಕೆಯ ಪ್ರಜ್ಞೆ ಕುಂಠಿತವಾಗಿ ‘ಬೈತುಲ್ ಮಾಲ್’ ಅಂದರೆ ಸಾರ್ವಜನಿಕ ಬೊಕ್ಕಸದ ಪಾರದರ್ಶಕತೆ ಹೊರಟು ಹೋಯಿತು.

ತಾನು ನಂಬಿದ ಆದರ್ಶ, ತತ್ತ್ವಗಳಿಗೆ ಕುಂದುಂಟಾದುದನ್ನು ಗ್ರಹಿಸಿದ ಇಮಾಮ್ ಹುಸೈನರು ಒಳಿತಿನ ಸಂಸ್ಥಾಪನೆ ಮತ್ತು ಕೆಡುಕಿನ ನಿಮೂಲನೆಯ ಕರ್ತವ್ಯದಿಂದ ವಿಮುಖರಾಗದೆ ಅದಕ್ಕಾಗಿ ಹೋರಾಡಿ ಹುತಾತ್ಮರಾದರು. ಸಮಾಜದ ಅನ್ಯಾಯ, ಅಕ್ರಮಗಳನ್ನು ನೋಡುತ್ತ ಮೂಕಸಾಕ್ಷಿಗಳಾಗಿರುವ ಜನರಿಗೆ ಆ ಮಹಾನ್ ವ್ಯಕ್ತಿಯ ಜೀವನದಲ್ಲಿ ಬಹುದೊಡ್ಡ ಪಾಠವಿದೆ.

(ಲೇಖಕರು ಮಲ್ಪೆಯ ಸಯ್ಯದಿನಾ ಅಬೂಬಕರ್ ಸಿದ್ದೀಕ್ ಜಾಮಿಯಾ ಮಸೀದಿಯ ಧರ್ಮಗುರುಗಳು)

ಮೊಹರಂನ ಕೆಲವು ಆಚರಣೆಗಳು

ಶಿಯಾ ಪಂಗಡದವರು ಈ ತಿಂಗಳನ್ನು ಭಾರತ ಸೇರಿ ಕೆಲವು ದೇಶಗಳಲ್ಲಿ ಭಿನ್ನವಾಗಿ ಆಚರಿಸುತ್ತಾರೆ. ಹುತಾತ್ಮರಾದ ಹುಸೈನರ ಮರಣದ ಶೋಕಸಂಕೇತವಾಗಿ ಕರ್ಬಲಾದಲ್ಲಿ ಕೆಲವರು ಈ ತಿಂಗಳ ಆರಂಭದಿಂದ ಕಪು್ಪಬಟ್ಟೆ ಧರಿಸುತ್ತಾರೆ. ಮೊಹರಂ 10ನೇ ದಿನ ಬೃಹತ್ ಮೆರವಣಿಗೆ ಸಂಘಟಿಸಿ ಇಮಾಮ್ ಹುಸೈನರ ಸಮಾಧಿಯ ರೂಪಕಗಳನ್ನು ಪ್ರದರ್ಶಿಸುತ್ತಾರೆ. ಕೆಲವರು ಹರಿತವಾದ ಬ್ಲೇಡ್, ಕತ್ತಿ ಇತ್ಯಾದಿ ಸಾಧನಗಳಿಂದ ಬೆನ್ನು ಹಾಗೂ ಎದೆಗಳ ಮೇಲೆ ರಕ್ತ ಹರಿಯುವಂತೆ ಗಾಯ ಮಾಡಿಕೊಳ್ಳುತ್ತಾರೆ. ದುಃಖ ಹಾಗೂ ಶೋಕದ ಸೂಚಕವಾಗಿ ಈ ರೀತಿ ಮಾಡುತ್ತಾರೆ ಎಂದವರು ಹೇಳುತ್ತಾರೆ. ಇಂತಹ ಅನೇಕ ಆಚರಣೆಗಳು ಚಾಲ್ತಿಯಲ್ಲಿವೆ. ಆದರೆ ಕುರಾನ್ ಹಾಗೂ ಪ್ರವಾದಿ ಮುಹಮ್ಮದರ ಶಿಕ್ಷಣದಲ್ಲಿ ಇಂತಹ ಆಚರಣೆಗಳಿಗೆ ಆಸ್ಪದವಿಲ್ಲ. ಈ ಆಚರಣೆಗಳು ಸ್ಥಳೀಯ ಸಂಸ್ಕೃತಿಗಳಿಂದ ಪ್ರಭಾವಿತವಾಗಿವೆ. ಈ ಎಲ್ಲ ಆಚರಣೆಗಳನ್ನೂ ಮೀರಿ ಇಸ್ಲಾಂ ಧರ್ಮದಲ್ಲಿ ಮೊಹರಂ ತಿಂಗಳಿಗೆ ವಿಶಿಷ್ಟ ಪಾವಿತ್ರ್ಯ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net