

ಫಾಲ್ಗುಣ ಮಾಸದ ಶುಕ್ಲ ಪಕ್ಷದ ಪೂರ್ಣಿಮೆಯಂದು ಆಚರಿಸುವ ಹಬ್ಬ ಹೋಳಿ. ಕೆಡುಕಿನ ವಿರುದ್ಧ ಒಳಿತಿನ ಗೆಲುವಿನ ಸಂಕೇತ ಈ ಹಬ್ಬ. ಸಾಮಾಜಿಕ ಸಂಬಂಧದ ಸೇತುವೆ ಮತ್ತು ಹೊಸ ಸಂಬಂಧಗಳನ್ನು ಅರಳಿಸುವ ಹಬ್ಬವೂ ಆಗಿದೆ. ಜನರು ಮೇಲುಕೀಳು, ವಯಸ್ಸಿನ ಅಂತರ, ಜಾತಿಮತ ಮರೆತು ಹೋಳಿ ಆಡುತ್ತಾರೆ. ಉತ್ತರ ಭಾರತದಲ್ಲಿ ಈ ಹಬ್ಬಕ್ಕೆ ಹೆಚ್ಚು ಮಹತ್ವವಿದೆ.
ಪುರಾಣ ಕಾರಣ: ಪುರಾಣದಲ್ಲಿ ಉಲ್ಲೇಖವಿರುವ ಕಾಮದಹನದಲ್ಲಿ- ತಾರಕಾಸುರನೆಂಬ ರಾಕ್ಷಸ ರಾಜ ಬ್ರಹ್ಮನ ವರಬಲದ ಸೊಕ್ಕಿನಿಂದ ಲೋಕದಲ್ಲಿ ಮೆರೆಯತೊಡಗಿದಾಗ, ಆತನ ಉಪಟಳ ತಾಳಲಾರದೆ, ಅವನ ಸಂಹಾರಕ್ಕೆ ದೇವತೆಗಳು ಉಪಾಯ ಹೂಡಿದರು. ಶಿವನಿಗೆ ಜನಿಸಿದ ಏಳು ದಿನದ ಮಗುವಿನಿಂದ ಮಾತ್ರವೇ ತನಗೆ ಸಾವು ಎಂಬ ವರಬಲವೇ ಆತನ ಮದಕ್ಕೆ ಕಾರಣವಾಗಿತ್ತು. ಆದರೆ ಆ ಸಂದರ್ಭದಲ್ಲಿ ಶಿವನು ದಕ್ಷ ಯಜ್ಞದಲ್ಲಿ ದಾಕ್ಷಾಯಿಣಿಯನ್ನು ಕಳೆದುಕೊಂಡು ಭೋಗಸಮಾಧಿಯಲ್ಲಿದ್ದ ಕಾರಣ, ಮತ್ತೊಂದೆಡೆ ಶಿವೆಯೂ ಶಿವನಿಗಾಗಿ ತಪಸ್ಸು ಮಾಡುತ್ತಿದ್ದ ಕಾರಣ, ಅವರಿಬ್ಬರೂ ಒಂದುಗೂಡುವಂತಿರಲಿಲ್ಲ. ದೇವತೆಗಳು ಕಾಮ (ಮನ್ಮಥ)ನ ಮೊರೆ ಹೋದರು. ತತ್ಪಲವಾಗಿ ತನ್ನ ನಿರ್ನಾಮದ ಅರಿವಿದ್ದೂ, ಲೋಕಕಲ್ಯಾಣವೆಂಬ ಅತಿಶಯವಾದ ಪರೋಪಕಾರಾರ್ಥವಾಗಿ ಕಾಮನು ತನ್ನ ಹೂಬಾಣಗಳಿಂದ ಶಿವನನ್ನು ಬಡಿದೆಬ್ಬಿಸಿ, ತಪೋಭಂಗ ಮಾಡಿದ. ಕೆರಳಿ ಮೂರನೇ ಚಕ್ಷುವನ್ನು ತೆರೆದ ಈಶ್ವರನ ಕ್ರೋಧಾಗ್ನಿಗೆ ಕಾಮನು ಸುಟ್ಟು ಭಸ್ಮವಾದ. ಕಾಮನರಸಿ ರತಿದೇವಿಯು ಪರಿಪರಿಯಾಗಿ ಶಿವನಲ್ಲಿ ಪತಿಭಿಕ್ಷೆ ಯಾಚಿಸಲು, ಕಾಮನು ಅನಂಗನಾಗಿಯೇ ಇರುತ್ತಾನೆ. ಆದರೆ ಪತ್ನಿಗೆ ಮಾತ್ರ ಶರೀರಿಯಾಗಿ ಕಾಣಿಸುತ್ತಾನೆ ಎಂದು ಶಿವನು ಅಭಯ ನೀಡಿದನೆಂಬುದು ಪುರಾಣ ಕಥನ.
ನಾರದ ಪುರಾಣದಲ್ಲಿ ಮತ್ತೊಂದು ಕಥೆ ಬರುತ್ತದೆ. ತಾನೇ ದೇವರು ಎಂದು ಒಪ್ಪಿಕೊಳ್ಳದೆ ಶ್ರೀಹರಿಯನ್ನೇ ಜಗನ್ನಿಯಾಮಕನೆಂದು ಪರಿಭಾವಿಸುವ ತನ್ನದೇ ಕರುಳಕುಡಿ ಪ್ರಹ್ಲಾದನನ್ನು ಕೊಲ್ಲಲು, ದೈತ್ಯರಾಜ ಹಿರಣ್ಯಕಶ್ಯಪು ನಾನಾ ವಿಧದ ಪ್ರಯತ್ನಗಳನ್ನು ಮಾಡಿಯೂ ವಿಫಲನಾಗಿ, ಕೊನೆಗೆ, ಬೆಂಕಿಯಿಂದ ರಕ್ಷಣೆ ನೀಡುವ ವಸ್ತ್ರ ಹೊಂದಿರುವ ತಂಗಿ ಹೋಳಿಕಾ (ಹೋಲಿಕಾ)ಳ ಮೊರೆ ಹೋದ. ಅಣ್ಣನ ಅನುಜ್ಞೆಯಂತೆ ಬಾಲ ಪ್ರಹ್ಲಾದನನ್ನು ಹೊತ್ತುಕೊಂಡ ಹೋಳಿಕಾ, ಅಗ್ನಿಕುಂಡ ಪ್ರವೇಶಿಸಿದಳು. ಆಗ ವಸ್ತ್ರವು ಹಾರಿಹೋಗಿ, ಹೋಳಿಕಾಳ ದಹನ ಆಗುತ್ತದೆ. ವಿಷ್ಣು ಭಕ್ತಾಗ್ರೇಸರ ಪ್ರಹ್ಲಾದ ಬದುಕುಳಿಯುತ್ತಾನೆ.
ಮೇಲೆ ಹೇಳಿದ ಎರಡೂ ಪುರಾಣ ಕಥನಗಳ ಸಂದೇಶ ಒಂದೇ. ಕೆಟ್ಟದ್ದನ್ನು ಸುಟ್ಟು ಬಿಡುವುದು; ಕಾಮಕ್ರೋಧಾದಿ ಅರಿಷಡ್ವರ್ಗಗಳನ್ನು ಅಗ್ನಿಕುಂಡದಲ್ಲಿ ಸುಟ್ಟು, ಸದಾಚಾರವನ್ನು ರೂಢಿಸಿ ಕೊಳ್ಳುವುದು. ಆಸುರೀ ಶಕ್ತಿಗಳ ನಿರ್ನಾಮದ ದ್ಯೋತಕವಾಗಿ ಹೋಳಿ ಅಂದರೆ ಉತ್ಸವಾಗ್ನಿ ಹಾಕುವ ಪದ್ಧತಿ ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಣೆಯಲ್ಲಿದೆ. ಗ್ರಾಮೀಣ ಪ್ರದೇಶಗಳಲ್ಲಿ ಆ ದಿನ ಊರಿನವರ ಮನೆಯಲ್ಲಿ ಸಿಗುವ ಬೇಡದ ವಸ್ತುಗಳನ್ನೆಲ್ಲ ತಂದು ಒಂದೆಡೆ ಗುಡ್ಡೆ ಮಾಡಿ, ರಾತ್ರಿ ಹುಡುಗನೊಬ್ಬನಿಗೆ ಶಿಖಂಡಿಯ ವೇಷ ಹಾಕಿಸಿ, ಅವನಿಂದ ಊರಿನ ಐದು ಮನೆಗಳಲ್ಲಿ ಭಿಕ್ಷೆ ಬೇಡಿಸಿ ಕರೆತಂದು ಅವನಿಂದ ಆ ಬೇಡದ ವಸ್ತುಗಳ ಗುಡ್ಡೆಗೆ ಬೆಂಕಿ ಇಡಿಸುತ್ತಾರೆ. ಅದೇ ಅವರ ಕಾಮದಹನದ ಹಬ್ಬ. ಹತ್ತು ತಲೆಯ ರಾವಣನ ಮೂರ್ತಿಯನ್ನು ಬಿದಿರಿನಿಂದ ತಯಾರಿಸಿ, ಅದಕ್ಕೆ ಹಳೇ ಬಟ್ಟೆಗಳನ್ನೆಲ್ಲ ಸುತ್ತಿ ಗಣ್ಯರನ್ನೇಲ್ಲ ಕರೆದು, ಅವರ ಸಮ್ಮುಖದಲ್ಲಿ ಸುಡುವುದು ವಾಡಿಕೆ.
ಈ ದಿನದಂದು ಅಕ್ಕಿಹಿಟ್ಟು ಮತ್ತು ಅರಿಶಿನ ಬೆರೆಸಿದ ಗುಲಾಲು ತಯಾರಿಸಿ, ಬಿದಿರಿನಿಂದ ಪಿಚಕಾರಿ ತಯಾರಿಸಿ ಬಣ್ಣದಾಟ ಆಡುವರು. ರಂಗಿನಾಟದ ನಂತರ ಅಭ್ಯಂಜನ ಸ್ನಾನ ಮಾಡಿ ದೇವರಲ್ಲಿ ಪ್ರಾರ್ಥಿಸಿ ಮನೆಗಳಲ್ಲಿ ವಿಶೇಷ ಅಡಿಗೆಗಳನ್ನು ತಯಾರಿಸುವರು. ಇಂಥ ಅಮೂಲ್ಯ ಸಂದೇಶ ಸಾರುವ ಮತ್ತು ಕೆಡುಕಿಗೆ ಯಾವತ್ತೂ ಸೋಲು ಎಂಬ ಸಂದೇಶ ಸಾರುವ ಸದುದ್ದೇಶ ಹೋಳಿ ಹಬ್ಬದ ಆಚರಣೆಯಲ್ಲಿದೆ.
ಮುಕುಂದ್ ಪಡುಬಿದ್ರಿ, (ಲೇಖಕರು ಹವ್ಯಾಸಿ ಬರಹಗಾರರು)