ಸದಾಚಾರ ಸದ್ವಿಚಾರಗಳಿಲ್ಲದ ಸಮಾಜ ಸತ್ತಂತೆ!

Column 1
Published on
ಭಾರತದ ಉದ್ಧಾರಕ್ಕೆ ಸ್ವಾಮಿ ವಿವೇಕಾನಂದರು ಸೂಚಿಸಿದ ಪರಿಹಾರವೇ ತ್ಯಾಗ ಮತ್ತು ಸೇವೆ ಎಂಬ ಅವಳಿ ಆದರ್ಶಗಳು. ಪ್ರತಿಯೊಬ್ಬರ ಜೀವನದಲ್ಲೂ ಅಳವಡಿಸಲ್ಪಡಲಿ ಎಂದು. ಇದಕ್ಕೆ ದೇಶ ಓಗೊಟ್ಟಾಗಲೇ ಸ್ವಾತಂತ್ರ್ಯ ಚಳವಳಿ ಬೃಹದ್ರೂಪವನ್ನು ತಳೆದಿದ್ದು. ಪ್ರತಿಯೊಬ್ಬನೂ ಕೌಟುಂಬಿಕ, ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗಮಾಡಿಯೇ ಹೋರಾಟಗಾರನಾಗಿದ್ದು.

ಪರಿಹಾರ ಬಹಳ ಸುಲಭವಿದೆ. ಅಷ್ಟೇಕೆ ಪರಿಹಾರವಿಲ್ಲದ ಸಮಸ್ಯೆಯಾದರೂ ಯಾವುದಿದೆ? ನನ್ನ ಮಟ್ಟಿಗೆ ಹೇಳುವುದಾದರೆ ಭಗವಂತ ಮೊದಲು ಪರಿಹಾರಗಳನ್ನೇ ಸೃಷ್ಟಿಸಿದ. ಆಮೇಲೆಯೇ ಅವನು ತತ್ಸಂಬಂಧೀ ಸಮಸ್ಯೆಗಳನ್ನು ಸೃಷ್ಟಿಸಿದ. ಹಾಗಿದ್ದರೆ ವ್ಯಕ್ತಿಯಾಗಲಿ, ದೇಶವಾಗಲಿ ಒದ್ದಾಡುವುದೇಕೆ? ಉತ್ತರ ಸರಳ! ಪರಿಹಾರ ಗೊತ್ತಿಲ್ಲ! ಏಕೆಂದರೆ ಸಮಸ್ಯೆಯ ನಿಜಸ್ವರೂಪವೇ ಗೊತ್ತಿಲ್ಲ! ಸಮಸ್ಯೆಯ ಮೂಲವಂತೂ ಗೊತ್ತೇ ಇಲ್ಲ. ಒಂದೆಡೆ ಕುಳಿತು ಸಮಾಧಾನದಿಂದ ಸಮಸ್ಯೆಯ ಮೂಲವನ್ನು ಹುಡುಕುವ ವ್ಯವಧಾನವಾದರೂ ಎಷ್ಟು ಜನರಿಗಿದೆ? ಎಷ್ಟೋ ಜನ ವಿದ್ಯಾರ್ಥಿಗಳು ನನ್ನ ಹತ್ತಿರ ಬಂದು ಹೇಳುವುದುಂಟು, ‘ಸ್ವಾಮೀಜಿ ಓದಿದ್ದು ನೆನಪೇ ಇರುವುದಿಲ್ಲ, ನೆನಪಿನ ಶಕ್ತಿ ಜಾಸ್ತಿ ಮಾಡಿಕೊಳ್ಳುವುದಕ್ಕೆ ಏನು ಮಾಡಬೇಕು?’ ಯಾರೋ ಒಬ್ಬರು ಹೇಳಿದರು, ‘ಕ್ಯಾಂಡಲ್ ಒಂದನ್ನು ಹಚ್ಚಿ ಬೆಳಕಿನ ಕುಡಿಯನ್ನೇ ನೋಡುತ್ತಿರು. ಕ್ರಮೇಣ ಏಕಾಗ್ರತೆ ಜಾಸ್ತಿಯಾಗುತ್ತೆ’ ಅಂತ. ‘ಆದರೆ ಹಾಗೆ ನೋಡಹೊರಟಾಗ ಕಣ್ಣಿನಲ್ಲಿ ನೀರು ಬರುತ್ತದೆ. ದೀಪವೂ ಸ್ಪಷ್ಟವಾಗಿ ಕಾಣುವುದಿಲ್ಲ. ಏನು ಮಾಡಬೇಕೋ ತೋಚುತ್ತಿಲ್ಲ’ ಎಂದು ಹೇಳಿದ. ನಾನು ನನ್ನ ಜೀವನದಲ್ಲಿ ಅನುಸರಿಸಿದ ಮಾರ್ಗವನ್ನೇ ಹೇಳಬೇಕಲ್ಲ. ಈ ಸಮಸ್ಯೆ ನನ್ನನ್ನು ಬಹುವಾಗೇನೂ ಕಾಡಲಿಲ್ಲವಾದರೂ ಭಗವತ್ಕೃಪೆಯಿಂದ ಇದರ ಪರಿಹಾರ ನನಗೆ ಎಂದೋ ಹೊಳೆದಿತ್ತು. ವಿದ್ಯಾರ್ಥಿಗೆ ಕೇಳಿದೆ- ‘ಇತ್ತೀಚೆಗೆ ನೀನು ನೋಡಿದ ಸಿನಿಮಾ ಯಾವುದು?’ ‘ಬಾಹುಬಲಿ’ ಉತ್ತರಿಸಿದ ಅವನು. ‘ಅದರದ್ದು ಯಾವುದಾದರೂ ಒಂದು ಹಾಡು ಹೇಳು’ ಎಂದಾಗ ಒಂದು ಹಾಡು ಹೇಳಿದ ಕೂಡ. ‘ಎಷ್ಟು ಸಲ ಸಿನಿಮಾ ನೋಡಿದೆ?’ ನಾನು ಕೇಳಿದೆ . ‘ಒಂದೇ ಸಲ’ ಇದು ಅವನ ಉತ್ತರ. ‘ಒಂದು ಸಲ ಕೇಳಿದ್ದಕ್ಕೆ ಇಡೀ ಹಾಡು ನೆನಪಿಟ್ಟುಕೊಂಡಿದ್ದೀಯಾ, ನಿನಗೆ ನೆನಪಿನ ಶಕ್ತಿ ಇಲ್ಲ ಅಂತ ಹೇಳ್ತೀಯಲ್ಲ’ ಎಂದಾಗ ಅವನದ್ದು ನಿರುತ್ತರ! ನೋಡಿ, ಸಮಸ್ಯೆ ಇರುವುದೆಲ್ಲಿ? ನೆನಪಿನ ಶಕ್ತಿ ಇದೆ ಅವನಿಗೆ, ಇಲ್ಲ ಅಂತಲ್ಲ ; ಆದರೆ ಓದಿದ್ದು ನೆನಪಿರುವುದಿಲ್ಲ ಅಷ್ಟೇ.

ಕೇವಲ ಇದೊಂದು ಉದಾಹರಣೆ. ಹೀಗೆ ನಮ್ಮ ಸುತ್ತ ಇರುವ ಸಮಸ್ಯೆಗಳೇ ಬೇರೆ, ನಾವು ತಿಳಿದಿರುವುದೇ ಬೇರೆ. ಇಂದು ಜಗತ್ತು ಒದ್ದಾಡುತ್ತಿರುವುದು ಮನುಷ್ಯನ ಸೌಲಭ್ಯಗಳನ್ನು ಸೃಷ್ಟಿಸುವ ವ್ಯವಸ್ಥೆಗಳಲ್ಲಿ ಲೋಪವಿರುವುದರಲ್ಲಿ. ಅದು ಶಿಕ್ಷಣ, ಆಡಳಿತಯಂತ್ರ, ಆರೋಗ್ಯ, ಅಂತಾರಾಷ್ಟ್ರೀಯ ಸಂಬಂಧಗಳು ಯಾವುದೇ ಇರಲಿ, ಅದಕ್ಕೆ ಕಾರಣ Right man in the Right Place ಇಲ್ಲದಿರುವುದು. ಪ್ರಜ್ಞಾವಂತ ಮನುಷ್ಯ, ಪ್ರಬುದ್ಧ ಮನುಷ್ಯ, ಸದಾಚಾರ, ಸದ್ವಿಚಾರಗಳಿಂದ ಕೂಡಿದ ಮನುಷ್ಯ ಇವನೇ Right Man, ಇದೇ ಏಕಮೇವ ಪರಿಹಾರ. ಬುದ್ಧನ ಇಡೀ ಉಪದೇಶಗಳ ಸಾರವೇ ಸಮ್ಯಕ್ ಜೀವನ. ಸಮ್ಯಕ್ ಜೀವನ ಪದ್ಧತಿ. ಇದೇ ಸಕಲ ರೋಗಗಳಿಗೂ ಇರುವ ದಿವ್ಯೌಷಧ ; ರಾಮಬಾಣ! ಇಲ್ಲಿ ಅತಿಮುಖ್ಯವಾದದ್ದೇ ‘ನಾನು’ ಎಂಬಲ್ಲಿ ‘ನಾವು’ ಬರಬೇಕು, ನನ್ನದು ಎಂಬಲ್ಲಿ ‘ನಮ್ಮದು’ ಬರಬೇಕು. ‘ಅಹಂಕಾರ’, ‘ಮಮಕಾರ’ಗಳು ಮನುಷ್ಯನ ಶತ್ರು ಎಂದರೆ ಇದೇ ಅರ್ಥ. ಇಡೀ ಜಗತ್ತು ಒದ್ದಾಡುವುದು ಈ ಎರಡು ಶಬ್ದಗಳು ವಿಕೃತಗೊಂಡಾಗ ಮತ್ತು ಭೂಲೋಕ ಸ್ವರ್ಗವಾಗುವುದು ಈ ಶಬ್ದಗಳು ಉದಾತ್ತಗೊಂಡಾಗ ಇಲ್ಲವೇ ಸುಸಂಸ್ಕೃತಗೊಂಡಾಗ. ಸರಳವಾಗಿ ಕಾಣುವ ಈ ಶಬ್ದಗಳು ಮಾನವಕೋಟಿಯ ಮುಂದಿರುವ ಬೃಹತ್ ಸವಾಲುಗಳೇ ಸರಿ! ಆದರೆ ಈಗಾಗಿರುವುದೇನು? ‘ನಾನು’, ‘ನಾವು’ ಎನ್ನುವುದನ್ನು ಮತ್ತು ‘ನನ್ನದು’, ‘ನಮ್ಮದು’ ಎನ್ನುವುದನ್ನು ತಿಂದುಹಾಕಿದೆ. ಮಹಾಭಾರತ ‘ಧರ್ಮ’ ಎನ್ನುವ ಪದಕ್ಕೆ ಕೊಟ್ಟಿರುವ ಸಾವಿರ ವಿಶ್ಲೇಷಣೆಗಳಲ್ಲಿ ಸರಳವಾದದ್ದೇ ‘ಆತ್ಮನಃ ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್’ ಎಂದು. ಅರ್ಥವೇನೆಂದರೆ ‘ನೀನು ಪರರಿಂದ ಏನನ್ನು ಬಯಸುವುದಿಲ್ಲವೋ (ಅವಮಾನ ಇತ್ಯಾದಿ) ಅದನ್ನು ಯಾರಿಗೂ ಮಾಡಬೇಡ’. ಯಾರಿಗೂ ಅರ್ಥವಾಗಬಹುದಾದ ವಿಷಯವಿದು. ಬಸವಣ್ಣನವರ ‘ಕಳಬೇಡ ಕೊಲಬೇಡ...’ ಎನ್ನುವ ವಚನದ ಸೂಕ್ಷ್ಮರೂಪವೇ ಇದು.

ಭಾರತದ ಉದ್ಧಾರಕ್ಕೆ ಸ್ವಾಮಿ ವಿವೇಕಾನಂದರು ಸೂಚಿಸಿದ ಪರಿಹಾರವೇ ತ್ಯಾಗ ಮತ್ತು ಸೇವೆ ಎಂಬ ಅವಳಿ ಆದರ್ಶಗಳು. ಪ್ರತಿಯೊಬ್ಬರ ಜೀವನದಲ್ಲೂ ಅಳವಡಿಸಲ್ಪಡಲಿ ಎಂದು. ಇದಕ್ಕೆ ದೇಶ ಓಗೊಟ್ಟಾಗಲೇ ಸ್ವಾತಂತ್ರ್ಯ ಚಳವಳಿ ಬೃಹದ್ರೂಪವನ್ನು ತಳೆದಿದ್ದು. ಪ್ರತಿಯೊಬ್ಬನೂ ಕೌಟುಂಬಿಕ, ವೈಯಕ್ತಿಕ ಹಿತಾಸಕ್ತಿಗಳನ್ನು ತ್ಯಾಗಮಾಡಿಯೇ ಹೋರಾಟಗಾರನಾಗಿದ್ದು. ಆ ತ್ಯಾಗದ ರೂಪ ಬೇರೆ ಬೇರೆಯಾಗಿತ್ತಷ್ಟೇ. ‘ನಾನು’ ಮತ್ತು ‘ನನ್ನದು’ ಉದಾತ್ತಗೊಂಡು ‘ನಾವು’, ‘ನಮ್ಮದು’ ಆಗಿ ಪರಿವರ್ತನೆಗೊಂಡಿತ್ತು. ಬೇಕಿರುವುದೂ ಇಷ್ಟೆ, ಇದೇ ಪ್ರಜ್ಞಾವಂತಿಕೆ, ಪ್ರಬುದ್ಧತೆ, ತ್ಯಾಗ ಮತ್ತು ಸೇವೆ.

ಈ ತತ್ತ್ವವನ್ನು ಪಾಲಿಸದ ಯಾವ ದೇಶವೂ ಇಲ್ಲಿಯವರೆಗೆ ಉದ್ಧಾರವಾಗಿಲ್ಲ ಮತ್ತು ಈ ತತ್ತ್ವವನ್ನು ಅನುಸರಿಸಿದ ಯಾವ ಸಮಾಜವೂ ಹಿಂದೆಬಿದ್ದಿಲ್ಲ. ಸರ್ ಥಾಮಸ್ ರೋನ ಯಾವುದೋ ಕಾರ್ಯಕ್ಕೆ ಸಂತುಷ್ಟಗೊಂಡ ಬಾದಷಾ ಜಹಂಗೀರ್ ಅವನಿಗೆ ‘ನಿನಗೇನು ಪುರಸ್ಕಾರ ಕೊಡಲಿ?’ ಎಂದು ಕೇಳಿದಾಗ, ಅವನು ಕೇಳಿದ್ದು, ‘ಭಾರತದೊಡನೆ ವಾಣಿಜ್ಯ ಸಂಬಂಧಕ್ಕೆ ಇಂಗ್ಲೆಂಡಿಗೆ ಪರವಾನಗಿ ಕೊಡಿ’ ಎಂದು. ಇವನ ಜಾಗದಲ್ಲಿ ತನ್ನ ಮಗಳು ವಿಧವೆಯಾದರೂ ಚಿಂತೆಯಿಲ್ಲ, ಶತ್ರುನಾಶವಾಗಬೇಕು ಎಂದು ಯೋಚಿಸಿ ಘೊರಿ ಮಹಮ್ಮದನಿಗೆ ಸಹಾಯವೆಸಗಿ ಪೃಥ್ವಿರಾಜನ ಸೋಲಿಗೆ ಕಾರಣನಾದ ಜಯಚಂದ್ರನನ್ನು ಕಲ್ಪಿಸಿಕೊಳ್ಳಿ, ಹಾಗೆಯೇ ಅಲೆಕ್ಸಾಂಡರನಿಗೆ ಸಹಾಯವೆಸಗಿದ ಅಂಭಿಯನ್ನು ಕಲ್ಪಿಸಿಕೊಳ್ಳಿ! ಅಂಗೈ ಅಗಲದ ಇಂಗ್ಲೆಂಡಿನ ಶಕ್ತಿಯ ಮೂಲ ತಿಳಿಯಿತಲ್ಲ!

ಅಮೆರಿಕನ್ ವಿದ್ಯಾರ್ಥಿಗಳು ಭಾರತೀಯ ವಿದ್ಯಾರ್ಥಿಗಳ ಮುಂದೆ ಲೆಕ್ಕಕ್ಕೇ ಇಲ್ಲದಂತಾಗುತ್ತಿದ್ದಾರೆ, ಆ ದೇಶದ ಯಾವುದೇ ಶಾಲೆಯಲ್ಲಿನ ಮೊದಲ ಹತ್ತು ಸ್ಥಾನಗಳಲ್ಲಿ ಅಗ್ರಪಾಲು ಭಾರತೀಯರದ್ದು. ಅಷ್ಟೇ ಅಲ್ಲ ದೇಶದ ಪ್ರತಿ ಕುಟುಂಬದ ತಲಾ ಆದಾಯದ ಸೂಚ್ಯಂಕದಲ್ಲಿ ಭಾರತೀಯ ಕುಟುಂಬದ ಸರಾಸರಿ ಆದಾಯ ಅಮೆರಿಕನ್ ಕುಟುಂಬದ ಎರಡು ಪಟ್ಟು ಇದೆ. ಯಾರು ಬೇಕಾದರೂ ಈ ಅಂಕಿ-ಅಂಶಗಳನ್ನು ಪರಿಶೀಲಿಸಬಹುದು. ಆದರೆ ಭಾರತೀಯರೇ ತುಂಬಿರುವ ಈ ದೇಶದಲ್ಲೇಕೆ ಇನ್ನೂ ಕತ್ತಲೆಯಲ್ಲಿ ತಡಕಾಡುತ್ತಿದ್ದೇವೆ. ಆಡಳಿತದ ಚುಕ್ಕಾಣಿ ಹಿಡಿದಿರುವ ಜನ ಇದನ್ನೆಂದಾದರೂ ಪರಿಗಣಿಸಿಯಾರೆ? ಬುದ್ಧಿಮತ್ತೆಯಿಂದಾಗಿ ಅಮೆರಿಕನ್ ಪ್ರಜೆ ತನ್ನ ದೇಶವನ್ನು ಬಲಿಷ್ಠವನ್ನಾಗಿಸಿಲ್ಲ. ಹಾಗಾದರೆ ಮತ್ತೇನು ಕಾರಣ? ಈ ಪ್ರಶ್ನೆ ಏಳುವುದು ಸಹಜವೇ. ಇದಕ್ಕೆ ಉತ್ತರ ಅಬ್ರಹಾಂ ಲಿಂಕನ್ ತನ್ನ ಮಗ ಓದುತಿದ್ದ ಶಾಲೆಯ ಮುಖ್ಯೋಪಾಧ್ಯಾಯರಿಗೆ ಬರೆದ ಪತ್ರದ ಒಕ್ಕಣಿಕೆಯಲ್ಲಿ ಸಿಗುತ್ತದೆ. ಆತ ಬರೆಯುತ್ತಾನೆ- ‘ನನ್ನ ಮಗನನ್ನು ಜೀವನದಲ್ಲಿ ಯಶಸ್ವಿವ್ಯಕ್ತಿಯಾಗುವಂತೆ ತರಬೇತುಗೊಳಿಸಿ. ಆದರೆ ಅವನಿಗೆ ಚೆನ್ನಾಗಿ ಮನದಟ್ಟು ಮಾಡಿಕೊಡಿ, ಅನ್ಯಾಯದ ಮಾರ್ಗದಲ್ಲಿ ಹೋಗಿ ಗುರಿ ಸಾಧಿಸುವುದಕ್ಕಿಂತ ನ್ಯಾಯಮಾರ್ಗದಲ್ಲಿ ಕ್ರಮಿಸಿ ಗುರಿ ಮುಟ್ಟದಿದ್ದರೂ ಅದೇ ಹೆಚ್ಚಿನ ಯಶಸ್ಸು’ ಎಂದು. ಇದರರ್ಥ ‘ಗುರಿ ಮುಖ್ಯವಲ್ಲ ಮಾರ್ಗ ಮುಖ್ಯ’ ಎಂತಲೇ. ಸ್ವಾಮಿ ವಿವೇಕಾನಂದರು ಅದೆಷ್ಟು ಸಲ ಇದಕ್ಕೆ ಒತ್ತು ಕೊಟ್ಟು ಹೇಳಿದ್ದಾರೋ!

‘ನ್ಯಾಯಮಾರ್ಗದಲ್ಲಿ ಕ್ರಮಿಸಿದರೆ ಎಂದೂ ಉದ್ಧಾರವಾಗಲಾರೆವು’ ಎಂಬುದನ್ನು ಹೃತ್ಪೂರ್ವಕವಾಗಿ ಒಪ್ಪಿಕೊಂಡು ಬಿಟ್ಟಂತಿದೆ ನಮ್ಮ ಜನ ; ಅಷ್ಟೇ ಏಕೆ ‘ಗುರಿ ಮುಟ್ಟಿದರಾಯಿತು ಬೇರೆಲ್ಲ ಗೌಣ’ ಎಂಬುದನ್ನು ವಿದ್ಯಾರ್ಥಿದೆಸೆಯಿಂದಲೇ ಹಿರಿಯರೇ ಕಿರಿಯರಿಗೆ ಸ್ಪಷ್ಟವಾಗಿ ಹೇಳಿಕೊಡುತ್ತಿದ್ದಾರೆ, ಇಲ್ಲದಿದ್ದಲ್ಲಿ ವಿದ್ಯಾರ್ಥಿಗಳ ಪರೀಕ್ಷಾ ಸಮಯದಲ್ಲಿ ಕಾಪಿ (ನಕಲು) ಮಾಡಿಸಲು ಅವನ ಸಂಬಂಧಿಕರು ಎತ್ತಿನ ಗಾಡಿಗಳಲ್ಲಿ ಪರೀಕ್ಷಾಕೇಂದ್ರಕ್ಕೆ ಏಕೆ ಧಾವಿಸುತ್ತಾರೆ! ಈ ವಿಷಯದಲ್ಲಿ ಶಿಕ್ಷಕರೇನೂ ಹಿಂದೆ ಬಿದ್ದಿಲ್ಲ. ‘ಹೀಗೇಕೆ?’ ಎಂದು ಕೇಳಿದರೆ, ‘ಇಲ್ಲದಿದ್ದಲ್ಲಿ ನಮ್ಮ ಶಾಲೆ ಫಲಿತಾಂಶದಲ್ಲಿ ಹಿಂದೆ ಬೀಳುತ್ತದೆ, ಅಧಿಕಾರಿಗಳು ತರಾಟೆಗೆ ತೆಗೆದುಕೊಳ್ಳುತ್ತಾರೆ’ ಎಂದು ಹೇಳಿಬಿಡುತ್ತಾರೆ. ‘ತರಗತಿಗಳಲ್ಲಿ ಚೆನ್ನಾಗಿ ಪಾಠಮಾಡಿದ್ದರೆ ಮಕ್ಕಳು ಕಲಿಯುತ್ತಿದ್ದರಲ್ಲ ; ಸ್ವಂತ ತಾವೇ ಉತ್ತರಗಳನ್ನು ಬರೆಯುತ್ತಿದ್ದರಲ್ಲ?’ ಎನ್ನುವ ಪ್ರಶ್ನೆಗೆ ಸಿದ್ಧಉತ್ತರ ನಿಮಗೆ ಸಿಗುತ್ತದೆ. ‘ಹೈಸ್ಕೂಲಿಗೆ ಬರುವಾಗ ಅವರಿಗೆ ವರ್ಣಮಾಲೆ ಬರುತ್ತಿರುವುದಿಲ್ಲ. ಗುಣಾಕಾರ ಲೆಕ್ಕ ಬರುತ್ತಿರುವುದಿಲ್ಲ. ಎಲ್ಲಿಂದ ಪ್ರಾರಂಭ ಮಾಡಬೇಕು ಸ್ವಾಮೀಜಿ ನಾವು!?’ ಇದೊಂದು ದೊಡ್ಡಪ್ರಶ್ನೆ. ವಿಷಯಾಂತರವಾದೀತು ಎಂದು ಇಲ್ಲೇ ನಿಲ್ಲಿಸುತ್ತೇನೆ. ಕರ್ನಾಟಕದ ಹೆಮ್ಮೆಯ ಪುತ್ರಿ ಸುಧಾಮೂರ್ತಿಯವರು ನನ್ನೊಡನೆ ಮಾತನಾಡುತ್ತಿದ್ದಾಗ ಒಮ್ಮೆ ಹೇಳಿದ್ದುಂಟು, ‘ಸ್ವಾಮೀಜಿ, ಇಂದು ನಮ್ಮ ಜನತೆಯ ಧೋರಣೆ ಹೇಗಿದೆ ಎಂದರೆ ಮರ್ಯಾದೆ ಬಿಟ್ಟು ಹಣಮಾಡೋಣ. ಹಣ ಬಂದಮೇಲೆ ಹೋದ ಮರ್ಯಾದೆ ತಾನೇ ಬರುತ್ತೆ’ ಎಂಬಂತೆ. ಅಕ್ಷರಶಃ ನಿಜ ಇದು. ಲಿಂಕನ್​ರಿಂದ ನಾವು ಪಾಠ ಕಲಿಯೋಣ ತೊಂದರೆ ಇಲ್ಲ. ಆದರೆ ಸನಾತನ ಸಂಸ್ಕೃತಿ ಬುದ್ಧಪೂರ್ವ ದಿನಗಳಲ್ಲೇ ಹೇಳಿದೆ.

ನ ಜಾತು ಕಾಮಾತ್ ನ ಭಯಾತ್ ನ ಲೋಭಾತ್

ಧರ್ಮಮ್ ತ್ಯಜೇತ್, ಜೀವಿತಸ್ಯಾಪಿ ಹೇತೋಃ |

ಧರ್ವೇ ನಿತ್ಯಃ ಸುಖ ದುಃಖೇತ್ವನಿತ್ಯೇ

ಜೀವೋ ನಿತ್ಯಃ ಹೇತುರಸ್ಯೇತ್ವನಿತ್ಯಃ ||

ಅರ್ಥ ಸ್ಪಷ್ಟವಾಗಿಯೇ ಇದೆ. ‘ಕಾಮದಿಂದಾಗಲಿ, ಭಯದಿಂದಾಗಲಿ, ದುರಾಸೆಯಿಂದಾಗಲಿ ಧರ್ಮವನ್ನು ಬಿಟ್ಟು ಸುಖದ ಸಂಪಾದನೆಗಾಗಿ ಯತ್ನಿಸಬಾರದು. ಏಕೆಂದರೆ ಸುಖ-ದುಃಖಗಳು ಭ್ರಾಂತಿ ಜನ್ಯ ; ಅಜ್ಞಾನ ಜನ್ಯ. ಆದ್ದರಿಂದ ಅನಿತ್ಯ ಧರ್ಮವಾದರೋ ಸತ್ಯದ ವ್ಯಕ್ತರೂಪ. ಸತ್ಯ ಮನುಷ್ಯನ ಆಚರಣೆಯಲ್ಲಿ ನೆಲೆನಿಂತಾಗ ಧರ್ಮ ಎಂದು ಕರೆಸಿಕೊಳ್ಳುತ್ತದೆ. ಆದ್ದರಿಂದ ಪ್ರಬುದ್ಧ ವ್ಯಕ್ತಿ, ಪ್ರಬುದ್ಧ ಸಮಾಜ ಸತ್ಯ, ಧರ್ಮಗಳನ್ನು ಎಂದಿಗೂ ಪಕ್ಕಕ್ಕಿಡಲಾರದು’. ಅರ್ಥಾತ್ ಅನ್ಯಾಯದ ಮಾರ್ಗದಿಂದ ಏನನ್ನೂ ಪಡೆಯಲೆತ್ನಿಸಬಾರದು. ಅನಾದಿಕಾಲದಿಂದ ಭರತವರ್ಷ ಅನುಸರಿಸಿಕೊಂಡುಬಂದ ಸಾಮಾಜಿಕ ನ್ಯಾಯವೇ ಇದು. ಮಾನುಷ ಶಕ್ತಿಗಳು ಎಷ್ಟು ಅಪಾರ ಎಂಬುದನ್ನು ಸ್ಪಷ್ಟ ಮಾತುಗಳಲ್ಲಿ ಜಗತ್ತಿಗೆ ತಿಳಿಸಿದ ಭಾರತ ನ್ಯಾಯಮಾರ್ಗದಲ್ಲೇ ಏನನ್ನೂ ಪಡೆಯುವ ಸಾಮರ್ಥ್ಯವುಳ್ಳ ಮಾನವ ಅನ್ಯಾಯದ ಮಾರ್ಗಕ್ಕೆ ಎಂದೂ ಇಳಿಯಬಾರದು ಎಂಬುದನ್ನು ಹೇಳಲೂ ಮರೆಯಲಿಲ್ಲ.

ಭಾರತೀಯ ಜೀವನ ಸಂಹಿತೆಯಲ್ಲಿ ‘ಧೀರ’ ಕತ್ತಿ ಹಿಡಿದು ರಕ್ತ ಹರಿಸಿದವನಲ್ಲ. ಸಂತ ಎಂದರೆ ಸಾವಿನ ಭಯವೊಡ್ಡಿ ಸಾವಿರಾರು ಜನರನ್ನು ಮತಾಂತರಗೊಳಿಸಿದವನಲ್ಲ. ಪಾಶ್ಚಾತ್ಯರ ಮಾನದಂಡದಲ್ಲೇ ಜೀವನ ಸಾರ್ಥಕತೆ ಕಂಡುಕೊಂಡ ಇತಿಹಾಸಜ್ಞರು ಈ ಕನಿಷ್ಠ ಜ್ಞಾನದಿಂದ ವಂಚಿತರಾಗಿ ದೇಶವನ್ನು ತನ್ನ ಪರಂಪರೆಯ ಬಗ್ಗೆ ಕತ್ತಲೆಗೆ ದೂಡಿಸುವುದು ಆಧುನಿಕ ಯುಗದ ವಿಪರ್ಯಾಸವೇ ಹೌದು. ಮಹಾನ್ ಕವಿ ಭರ್ತೃಹರಿ ‘ಧೀರ’ ಯಾರು ಎಂದು ವ್ಯಾಖ್ಯಾನಿಸುತ್ತಾನೆ ತನ್ನ ಸುಪ್ರಸಿದ್ಧ ‘ನೀತಿಶತಕ’ದಲ್ಲಿ. ‘ಜನ ನಿಂದಿಸಲಿ, ಸ್ತುತಿಸಲಿ, ಸಂಪತ್ತು ಉಳಿಯಲಿ ಇಲ್ಲವೇ ಹೊರಟು ಹೋಗಲಿ, ಮರಣ ಇಂದೇ ಸಂಭವಿಸಲಿ ಇಲ್ಲವೇ ಒಂದು ಯುಗದ ನಂತರ ಬರಲಿ, ಯಾರು ನ್ಯಾಯಮಾರ್ಗವನ್ನು ತ್ಯಜಿಸುವುದಿಲ್ಲವೋ ಅವನೇ ಧೀರ’.

ಯಶಸ್ಸು ನಿಯಮಗಳನ್ನು ಅವಲಂಬಿಸಿದೆ. ಇದನ್ನು ತಿಳಿಯಬೇಕಾದ್ದೇ ಪ್ರತಿಯೊಬ್ಬನ ಮೊದಲ ಕರ್ತವ್ಯ. ಸಮಷ್ಟಿ ಪ್ರಜ್ಞೆ ಅರ್ಥಾತ್ ಎಲ್ಲಿ ‘ನಾವು’ ಗೌಣವೋ ಅಲ್ಲಿ ‘ನಾನು’ ಉಳಿಯಲಾರದು ಎಂಬ ಪ್ರಜ್ಞೆಯೇ ನಿಜಾರ್ಥದಲ್ಲಿ ಸದಾಚಾರ. ನಮ್ಮೆಲ್ಲರ ಸದಾಶಯವೂ ಇದೇ ಆಗಿರಬೇಕು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net